ಶ್ರೀಮಂತರ ತೆರಿಗೆ ಕಡಿಮೆ ಮಾಡಿ, ಬಡವರನ್ನು ಸುಲಿಯೋದು ಯಾರ ಆದರ್ಶ ?
ರಾಮ ಎಂದೂ ಮೆಚ್ಚಲಾರದ ಮೋದಿ ಸರ್ಕಾರದ ನೀತಿ ► ಕಾರ್ಪೊರೇಟ್ ಗಳಿಗೆ ಕೋಟಿಗಟ್ಟಲೆ ವಿನಾಯ್ತಿ, ಬಡವರ ಮೇಲೆ ಹೊರೆ !
ರಾಮರಾಜ್ಯ ಸ್ಥಾಪಿಸುವ ಮಾತಾಡುವವರು ಇವತ್ತು ಈ ದೇಶವನ್ನು ಆಳುತ್ತಿದ್ದಾರೆ. ನಾವು ರಾಮನ ಮಂದಿರವನ್ನು ಸ್ಥಾಪಿಸಿದೆವು ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಹಾಗಾದರೆ, ಇಲ್ಲಿಗೆ ಶ್ರೀ ರಾಮ ಬಂದು ಹೇಗಿದೆ ಭಾರತ ದೇಶ ? ಹೇಗಿದ್ದಾರೆ ನನ್ನ ದೇಶದ ಜನರು ?
ವಿಶೇಷವಾಗಿ ಈ ದೇಶದ ಜನಸಾಮಾನ್ಯರು, ಬಡವರು ಹೇಗೆ ಬದುಕುತ್ತಿದ್ದಾರೆ ಎಂದು ಕೇಳಿದರೆ, ಪ್ರಧಾನಿ ಮೋದಿ ಹಾಗು ಅವರ ಸರಕಾರ ಏನೆಂದು ಉತ್ತರ ಕೊಡಬಹುದು ?
ಇಂತಹದೊಂದು ಪ್ರಶ್ನೆ ಕೇಳಿದ್ದಾರೆ ಕಾಂಗ್ರೆಸ್ ಮುಖಂಡ, ಅದರ ಡೇಟಾ ಅನಾಲಿಟಿಕ್ಸ್ ವಿಭಾಗದ ಅಧ್ಯಕ್ಷ ಪ್ರವೀಣ್ ಚಕ್ರವರ್ತಿ. ರಾಮ ರಾಜ್ಯ ಎಂದರೆ ಬಹಳ ಸರಳವಾಗಿ ಹೇಳಬೇಕೆಂದರೆ, ಎಲ್ಲರೂ ಸುಖ, ಸಂತೋಷದಿಂದ ಬದುಕುವ, ಎಲ್ಲೂ ಯಾವುದೇ ಅನ್ಯಾಯ, ಅಕ್ರಮ ಆಗಲು ಆಸ್ಪದವಿಲ್ಲದ ರಾಜ್ಯ.
ಇವತ್ತಿನ ಕಾಲದಲ್ಲಿ ಸರಕಾರ ನಡೆಸುವವರು, ಆಡಳಿತ ನಿಯಂತ್ರಿಸುತ್ತಿರುವವರು ಹೇಗೆ ಇಲ್ಲಿ ಜನರನ್ನು ನಡೆಸಿಕೊಳ್ಳುತ್ತಿದ್ದಾರೆ ?. ಇವತ್ತು ಆಡಳಿತ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಇರುವ ಒಂದು ಮಾಪಕ - ಆರ್ಥಿಕವಾಗಿ ಈ ಸರಕಾರದ ನೀತಿ ಏನು ಎಂಬುದು. ಸರಕಾರ ಹೇಗೆ, ಯಾರಿಂದ, ಎಷ್ಟು ತೆರಿಗೆ ಸಂಗ್ರಹಿಸುತ್ತದೆ, ಅದನ್ನು ಹೇಗೆ ಖರ್ಚು ಮಾಡುತ್ತದೆ ಎಂಬುದು ಸರಕಾರದ ನೀತಿ ಏನು ಎಂಬುದನ್ನು ತೋರಿಸುತ್ತದೆ.
ಮೋದಿ ಸರ್ಕಾರ ಯಾರ ಪರ?. ಧರ್ಮವನ್ನೇ ಬಳಸಿ ರಾಜಕೀಯ ಮಾಡುವ ಮೋದಿ ಸರ್ಕಾರ ಧಾರ್ಮಿಕವಾಗಿ ಆರೆಸ್ಸೆಸ್ ನ ಹಿಂದುತ್ವದ ಪರ.
ಸಾಮಾಜಿಕವಾಗಿ ನೋಡಿದರೆ ಸಹಜವಾಗಿಯೇ ಅದು ಮೇಲ್ವರ್ಗದವರ ಪರ.ಇನ್ನು ಆರ್ಥಿಕ ವಿಚಾರದಲ್ಲಿ ಅದರದ್ದೇನಿದ್ದರೂ ಅತ್ಯಂತ ಶ್ರೀಮಂತರ ಪರ ನಿಲುವು. ಉದ್ದಕ್ಕೂ ಈ ಸರಕಾರ ಮಾಡಿಕೊಂಡು ಬಂದಿರುವುದು ಬಡವರ ಶೋಷಣೆ.ಮಾತಿನಲ್ಲಿ ಮಾತ್ರ ಅದು ಬಡವರ ಪರ, ದಲಿತರು-ದಮನಿತರ ಪರ ಮತ್ತು ಮೋದಿಯ ಕೋಮು ತಾರತಮ್ಯ ರಹಿತ ನಿಲುವೇನಿದ್ದರೂ ಶ್ವೇತಭವನದ ಭಾಷಣಕ್ಕೆ ಮಾತ್ರವೇ ಸೀಮಿತ.
ಈ ದೇಶದ ಬಡವರ ವಿಚಾರವನ್ನೇ ತೆಗೆದುಕೊಂಡರೆ, ಅತಿ ಹೆಚ್ಚು ತೆರಿಗೆಯನ್ನು ಅವರಿಂದ ವಸೂಲು ಮಾಡುವ ಮೋದಿ ಸರ್ಕಾರ, ಅವರ ಮೇಲೆ ಮಾಡುವ ಖರ್ಚು ಮಾತ್ರ ಅತ್ಯಲ್ಪ. ಸರಕಾರದ್ದೇ ಅಂಕಿ ಅಂಶಗಳು ಇದನ್ನು ಸಾರಿ ಹೇಳುತ್ತಿವೆ. ಬಡವರಿಗೆ ಸಾಲ ಕೊಟ್ಟರೆ ಬಿಡಿಗಾಸು ಬಿಡದೆ ಕಿರುಕುಳ ನೀಡಿಯಾದರೂ ವಸೂಲು ಮಾಡುವ ಸರ್ಕಾರ, ಅದೇ ವೇಳೆ ಈ ದೇಶದ ಭಾರೀ ಶ್ರೀಮಂತರಿಂದ ಕೋಟಿ ಕೋಟಿ ಲೆಕ್ಕಕ್ಕೆ ಪಂಗನಾಮ ಹಾಕಿಸಿಕೊಂಡಿದೆ.
ಬಡವರಿಗೆ ಉಚಿತವಾಗಿ ಕೊಡುವ ಮೂಲಕ ಸಾಮಾಜಿಕ ಬದ್ಧತೆ ತೋರಿದರೆ ಅದನ್ನು "ರೇವಡಿ" ಎಂದು ಲೇವಡಿ ಮಾಡುವ ಮೋದಿ ಟೀಂ, ಶ್ರೀಮಂತರಿಗೆ ಮಾತ್ರ ಈ ದೇಶವನ್ನೇ ಪರೋಕ್ಷವಾಗಿ ಮಾರುತ್ತಾ ನಿಂತಿದೆ ಎಂಬುದು ಕೂಡ ಅಷ್ಟೇ ಕಠೋರ ಸತ್ಯ. ಒಂದೆಡೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ , 81 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳ ಯೋಜನೆಯನ್ನು ಇನ್ನೂ ಐದು ವರ್ಷ ವಿಸ್ತರಿಸುವ ಮೋದಿ ಸರಕಾರ, ಮತ್ತೊಂದೆಡೆ, ಜಾಗತಿಕ ಹಸಿವು ಸೂಚ್ಯಂಕ ವರದಿ ಮಾತ್ರ ಸುಳ್ಳು ಎನ್ನುತ್ತದೆ.
ಅಷ್ಟೇ ಅಲ್ಲ, ದೇಶದ 25 ಕೋಟಿ ಜನರು ನಮ್ಮ ಆಡಳಿತ ಕಾಲದಲ್ಲಿ ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಚಾರ ಮಾಡುತ್ತದೆ.
80 ಕೋಟಿ ಜನರಿಗೆ ಉಚಿತ ಪಡಿತರ ಕೊಡಬೇಕಾದ ಸ್ಥಿತಿ ಇದೆ ಎಂಬುದನ್ನೂ ಅದೇ ಸರಕಾರ ಹೇಳುತ್ತದೆ. ಹಸಿವು ಸೂಚ್ಯಂಕದ ವರದಿ ಸುಳ್ಳು ಎಂದೂ ಅದೇ ಸರಕಾರ ಹೇಳುತ್ತದೆ.
ಈ ಪ್ರಶ್ನೆಗಳನ್ನು ಪದೇ ಪದೇ ಯಾಕೆ ಎತ್ತಬೇಕಾಗುತ್ತದೆ ಎಂದರೆ ಮೋದಿ ಆಡಳಿತದಲ್ಲಿ ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತ, ಬಡವರು ಇನ್ನೂ ಬಡವರಾಗುತ್ತ ಹೋಗುತ್ತಿರುವುದೇ ವಾಸ್ತವ. ಆದರೆ ಮೋದಿ ಸರ್ಕಾರ ಮಾತ್ರ ಈ ಎಲ್ಲ ಸತ್ಯಗಳನ್ನೂ ಮುಚ್ಚಿಹಾಕುತ್ತ ಸುಳ್ಳುಗಳ ಅಲಂಕಾರ ಮಾಡಿ ಕಾಲ ತಳ್ಳಿಕೊಂಡು ಬಂದಿದೆ.
ಜಿ20 ಶೃಂಗದ ವೇಳೆ ದೆಹಲಿಯ ಕೊಳೆಗೇರಿಗಳನ್ನು ಹಸಿರು ಹೊದಿಕೆಯಿಂದ ಮುಚ್ಚಿತ್ತಲ್ಲ, ಹಾಗೆ. ಹೇಗೆ ಮೋದಿ ಸರ್ಕಾರ ಆರಂಭದಿಂದಲೇ ಕಾರ್ಪೋರೇಟ್ ವಲಯವನ್ನು ಸಾಕುತ್ತ, ಬಡವರ ಶೋಷಣೆಗೆ ನಿಂತುಬಿಟ್ಟಿತ್ತು ಎಂಬುದಕ್ಕೆ ಅದು ಜಾರಿಗೆ ತಂದ ತೆರಿಗೆ ನೀತಿಯೆ ಸಾಕ್ಷಿ.
ಇಡೀ ತೆರಿಗೆ ವ್ಯವಸ್ಥೆಯನ್ನೇ ತಲೆಕೆಳಗು ಮಾಡಿ, ಶ್ರೀಮಂತರಿಗೆ ಇನ್ನಷ್ಟು ಲಾಭ ಮಾಡಿಕೊಳ್ಳಲು, ಇನ್ನಷ್ಟು ದೋಚಿಕೊಳ್ಳಲು ಬಾಗಿಲನ್ನೇ ತೆರೆದು ನಿಂತುಬಿಟ್ಟಿತು ಈ ಸರ್ಕಾರ. ಯಾವುದೇ ರಾಜ್ಯ ಅಥವಾ ದೇಶದಲ್ಲಿ ಹೇಗೆ ಅದು ಆದಾಯವನ್ನು ತರುತ್ತದೆ ಮತ್ತು ಹೇಗೆ ಅದನ್ನು ಖರ್ಚು ಮಾಡುತ್ತದೆ ಎಂಬುದೇ ಮುಖ್ಯವಾಗುತ್ತದೆ ಮತ್ತದು ಅದರ ಅಭಿವೃದ್ಧಿಯ ಸ್ವರೂಪವನ್ನು ನಿರ್ಧರಿಸುತ್ತದೆ. ಹಣ ಸಂಗ್ರಹಣೆಗೆ ಮುಖ್ಯ ಮೂಲವೇ ತೆರಿಗೆ.
ಶ್ರೀಮಂತರು, ಮಧ್ಯಮ ವರ್ಗದವರು ಮತ್ತು ಬಡವರಿಂದ ಸರ್ಕಾರ ತೆರಿಗೆಗಳನ್ನು ಸಂಗ್ರಹಿಸುತ್ತದೆ. ಸಾಮಾನ್ಯವಾಗಿ ಶ್ರೀಮಂತರಿಂದ ಹೆಚ್ಚು ಮತ್ತು ಬಡವರಿಂದ ಕಡಿಮೆ ತೆರಿಗೆ ಸಂಗ್ರಹಿಸುವುದು ಆರ್ಥಿಕ ಶ್ರೇಣೀಕೃತ ವ್ಯವಸ್ಥೆಯಲ್ಲಿ ಒಂದು ನ್ಯಾಯಯುತ ನೀತಿ.
ಆದರೆ ಮೋದಿ ಸರ್ಕಾರ ಮಾಡಿದ್ದೇನು, ಮಾಡುತ್ತಿರುವುದೇನು?
ಅದು ಇಂಥದೊಂದು ಸಹಜ ನೀತಿಗೆ ವ್ಯತಿರಿಕ್ತವಾಗಿ, ಕಳೆದೊಂದು ದಶಕದಿಂದಲೂ ಬಡವರನ್ನೇ ತೆರಿಗೆ ಹೆಸರಿನಲ್ಲಿ ಹಿಂಡಿ ಹಿಂಡಿ ಹಾಕುತ್ತಿದೆ.
ಈ ಬಗ್ಗೆ ಸರಕಾರದ ಅಂಕಿ ಅಂಶಗಳನ್ನೇ ಈಗ ಕಾಂಗ್ರೆಸ್ ನ ಪ್ರವೀಣ್ ಚಕ್ರವರ್ತಿ ದೇಶದ ಮುಂದಿಟ್ಟಿದ್ದಾರೆ.
ಮೋದಿ ಸರಕಾರ ಸಂಗ್ರಹಿಸುವ 100 ರೂ.ತೆರಿಗೆಯಲ್ಲಿ ಬಡವರಿಂದ ವಸೂಲು ಮಾಡುವ ಪಾಲೇ ದೊಡ್ಡದು. ಅದು ಸುಮಾರು 42 ರೂ. ಇನ್ನು ಮಧ್ಯಮ ವರ್ಗ ಮತ್ತು ಶ್ರೀಮಂತರಿಂದ ತಲಾ 26 ರೂ. ಸಂಗ್ರಹಿಸುತ್ತದೆ. ಹಿಂದಿನ ಮನಮೋಹನ್ ಸಿಂಗ್ ಸರ್ಕಾರ ಪ್ರತಿ 100 ರೂ. ತೆರಿಗೆಯಲ್ಲಿ,
ಬಡವರಿಂದ 28 ರೂ. ಮತ್ತು ಶ್ರೀಮಂತರಿಂದ 38 ರೂ. ಪಡೆಯುತ್ತಿತ್ತು.
ಮೋದಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗಲೂ ಇದೇ ವ್ಯವಸ್ಥೆಯಿತ್ತು. ಶ್ರೀಮಂತರಿಂದ ಹೆಚ್ಚು ಮತ್ತು ಬಡವರಿಂದ ಕಡಿಮೆ ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಆದರೆ ಯಾವಾಗ ಮೋದಿ ನಿಲುವು ಕಾರ್ಪೋರೇಟ್ಗಳ ಪರವಾಯಿತೋ, ತೆರಿಗೆ ವ್ಯವಸ್ಥೆಯೂ ಉಲ್ಟಾ ಆಗಿಹೋಯಿತು.
ಜನಸಾಮಾನ್ಯರು ಹೆಚ್ಚು ತೆರಿಗೆ ಕಟ್ಟಬೇಕಾಯಿತು. ಶ್ರೀಮಂತ ಕಾರ್ಪೊರೇಟ್ಗಳಿಗೆ ದೊಡ್ಡ ಮಟ್ಟದಲ್ಲಿ ತೆರಿಗೆ ವಿನಾಯ್ತಿ ಸಿಗುವಂತಾಯಿತು.
ಕಾರ್ಪೊರೇಟ್ ತೆರಿಗೆಗಳನ್ನು ಕಡಿಮೆ ಮಾಡಿದ್ದರಿಂದಾದ ನಷ್ಟವನ್ನು ಜನಸಾಮಾನ್ಯರು ಪಾವತಿಸುವ ಹೆಚ್ಚಿನ ಪರೋಕ್ಷ ತೆರಿಗೆಗಳ ಮೂಲಕ ಸರಿದೂಗಿಸುವ ಕಸರತ್ತನ್ನು ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದೆ ಎನ್ನುತ್ತಾರೆ ಪರಿಣಿತರು.
ಕಡಿಮೆ ಕಾರ್ಪೊರೇಟ್ ತೆರಿಗೆಗಳು ದೊಡ್ಡ ಆರ್ಥಿಕತೆಗೆ ಸಹಾಯ ಮಾಡುತ್ತದೆ ಎಂಬೊಂದು ಹುಸಿ ವಾದವನ್ನು ಮುಂದೆ ಮಾಡಲಾಗಿದೆ ಎಂದೇ ಪರಿಣಿತರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಎಲ್ಲರಿಗೂ ಪ್ರಯೋಜನವಾಗುತ್ತದೆ ಎಂಬ ಭ್ರಮೆಯನ್ನು ಹಬ್ಬಿಸಲಾಗಿದೆ. ಆದರೆ ವಾಸ್ತವ ಯಥಾ ಪ್ರಕಾರ ಬೇರೆಯೇ ಇದೆ.
ಮನಮೋಹನ್ ಸಿಂಗ್ ಅವಧಿಯಲ್ಲಿ ಜಿಡಿಪಿಯ ಶೇ.26ರಷ್ಟಿದ್ದ ಖಾಸಗಿ ಹೂಡಿಕೆ ಪಾಲು, ಮೋದಿ ದರ್ಬಾರಿನಲ್ಲಿ ಶೇ.22ಕ್ಕೆ ಕುಸಿದಿದೆ.
ಶ್ರೀಮಂತ ಕಾರ್ಪೊರೇಟ್ಗಳು ಕಡಿಮೆ ತೆರಿಗೆಯ ರಿಯಾಯ್ತಿಯನ್ನೂ ಪಡೆದರು. ಆ ಉಳಿತಾಯವನ್ನು ಮತ್ತಷ್ಟು ಹೂಡಿಕೆ ಮಾಡಲು ಬಳಸುವ ಮೂಲಕ ಹಿಂತಿರುಗಿಸದೆ ಅದನ್ನೂ ತಮ್ಮ ಜೇಬಿಗೇ ಹಾಕಿಕೊಂಡರು.
ಮೋದಿ ಸರ್ಕಾರ ಮಾತ್ರ ಬಡವರ ಮೇಲೆ ತೆರಿಗೆ ಹೇರುತ್ತ, ದುಡಿದು ತಿನ್ನುವ ಅವರ ಬದುಕನ್ನೇ ಹೈರಾಣಾಗಿಸಿಬಿಟ್ಟಿತು. ಹೋಗಲಿ, ಬಡವರಿಂದ ಅಷ್ಟು ದೊಡ್ಡ ಪ್ರಮಾಣದಲ್ಲಿ ತೆರಿಗೆ ನೆಪದಲ್ಲಿ ಕಿತ್ತುಕೊಳ್ಳುವ ಸರ್ಕಾರ, ಅವರಿಗೆ ಅದೇ ಮಟ್ಟದಲ್ಲಿ ಹಿಂತಿರುಗಿಸುವುದನ್ನಾದರೂ ಮಾಡುತ್ತಿದೆಯೆ ಎಂದರೆ ಅದೂ ಇಲ್ಲ. ಅಲ್ಲಂತೂ ದೊಡ್ಡ ಮೋಸ.
ವೆಚ್ಚ ಮಾಡಿದ ಪ್ರತಿ 100 ರೂ.ಗಳಲ್ಲಿ ಮೋದಿ ಸರ್ಕಾರ ಜನ ಕಲ್ಯಾಣಕ್ಕಾಗಿ ಹಾಕುತ್ತಿರುವುದು ಸುಮಾರು 18 ರೂ.ಗಳನ್ನು ಮಾತ್ರ. ಮನಮೋಹನ್ ಸಿಂಗ್ ಸರಕಾರ ಜನ ಕಲ್ಯಾಣಕ್ಕಾಗಿ 21 ರೂ. ಖರ್ಚು ಮಾಡಿತ್ತು. ಹಾಗಾದರೆ ಮೋದಿ ಸರ್ಕಾರ ಬಡವರಿಗಾಗಿ ಮಾಡಿದ್ದೇನು ಈ 10 ವರ್ಷಗಳಲ್ಲಿ?. ಬಡವರನ್ನು ತುಳಿಯುತ್ತಲೇ, ತನ್ನ ಪಕ್ಕ ನಿಲ್ಲಿಸಿಕೊಂಡು ಶ್ರೀಮಂತರನ್ನು ಬೆಳೆಸುತ್ತ ಬಂದಿರುವ ಮೋದಿ ಸರ್ಕಾರ ಈಗ ರಾಮನ ಹೆಸರು ಹೇಳಿ,
ಅವರೆಲ್ಲರೂ ಮೈಮರೆಯುವ ಹಾಗೆ ಮಾಡಿ, ಮತ್ತೊಂದು ಚುನಾವಣೆ ಗೆಲ್ಲಲು ತಯಾರಿ ನಡೆಸಿದೆ.ರಾಮ ಎಂದೂ ಮೆಚ್ಚಲಾರದ ಮೋದಿ ಸರ್ಕಾರದ ನೀತಿಯನ್ನು ಅದೇ ರಾಮನ ಹೆಸರಿನ ಅಬ್ಬರದಲ್ಲಿ ಮುಚ್ಚಿಹಾಕಲಾಗುತ್ತಿದೆ. ಯಾರೂ ಕೊರಗಬಾರದು, ಎಲ್ಲರ ಪರವಾಗಿಯೂ ಸಹಾನುಭೂತಿ ಇರಬೇಕೆಂಬ ರಾಮರಾಜ್ಯದ ತತ್ವವೆಲ್ಲಿ?.
ಬಡವರನ್ನು ಇನ್ನಷ್ಟು ಬಡವರನ್ನಾಗಿಸುತ್ತ ಶ್ರೀಮಂತರನ್ನು ಸಾಕುತ್ತಿರುವ, ಪ್ರಶ್ನಿಸಿದವರನ್ನೆಲ್ಲ ಪಪ್ಪುಗಳನ್ನಾಗಿ ಮಾಡಲು ಮಡಿಲ ಮೀಡಿಯಾಗಳನ್ನು ಬಳಸುವ, ಜೈಲಿಗೆ ಕಳಿಸಲು ತನಿಖಾ ಏಜನ್ಸಿಗಳನ್ನು ಬಳಸುವ, ವಿಲಕ್ಷಣ ಕ್ರೌರ್ಯ ಮತ್ತು ದ್ವೇಷ ಮೆರೆಯುವ ಅಧಿಕಾರದಾಹಿ ಮೋದಿ ನೀತಿಯೆಲ್ಲಿ?. ಈ ಸರಕಾರದ ನೀತಿಯನ್ನು ಶ್ರೀರಾಮ ಮೆಚ್ಚಲು ಸಾಧ್ಯವೇ ?.