ಸುಧೀರ್ ಚೌಧರಿಗೆ ಜೈಲಿನ ದಿನ ನೆನಪಿಸಿದ ಸ್ಮೃತಿ ಇರಾನಿ
ಪ್ರಶ್ನೆ ಕೇಳಿದ್ದಕ್ಕೆ ಕೆಂಡವಾದ ಕೇಂದ್ರ ಸಚಿವೆ ► ಚಮಚಾಗಿರಿ ಮಾಡಿದ್ದಕ್ಕೆ ಇದೇನಾ ಪ್ರತಿಫಲ ?
ಸ್ಮೃತಿ ಇರಾನಿ | Photo: PTI
ಏನಾಗುವುದು ನಿಶ್ಚಿತವಾಗಿತ್ತೋ ಅದೇ ಆಗಿ ಬಿಟ್ಟಿದೆ. ಯಾವ ಸರಕಾರವನ್ನು ಭಟ್ಟಂಗಿ ಮಾಧ್ಯಮಗಳು ಎಲ್ಲ ಟೀಕೆಗಳಿಗೂ ಅತೀತವಾದ ದೇವರ ಸ್ಥಾನಕ್ಕೆ ತೆಗೆದುಕೊಂಡು ಹೋಗಿ ಇಟ್ಟಿವೆಯೋ ಅದೇ ಸರಕಾರ ಈಗ ತನ್ನನ್ನು ಇಷ್ಟೊಂದು ಎತ್ತರಕ್ಕೇರಿಸಿದ ಭಟ್ಟಂಗಿ ಮಾಧ್ಯಮಗಳಿಗೆ ಅವುಗಳ ನಿಜವಾದ ಸ್ಥಾನ ಏನು ಎಂದು ತೋರಿಸುತ್ತಿದೆ.
ಯಾವ ಸರಕಾರಕ್ಕಾಗಿ ಭಟ್ಟಂಗಿ ಚಾನಲ್ ಗಳು ಈ ದೇಶದ ಜನರನ್ನು ವಂಚಿಸಿದವೋ.. ಅದೇ ಸರಕಾರ ಈಗ ತನ್ನ ಚಮಚಾಗಿರಿ ಮಾಡುತ್ತಿರುವ ಭಟ್ಟಂಗಿ ಚಾನಲ್ ಗಳಿಗೆ, " ನೋಡಿ ...ನಿಮ್ಮ ಸ್ಥಾನ ಇದು, ಮರೆಯಬೇಡಿ " ಎಂದು ಮುಲಾಜಿಲ್ಲದೆ ತೋರಿಸುತ್ತಿದೆ. ಯಾವ ಸರಕಾರಕ್ಕಾಗಿ ಭಟ್ಟಂಗಿ ಆಂಕರ್ ಗಳು ವಿಪಕ್ಷಗಳ ನಾಯಕರನ್ನು ವಿನಾ ಕಾರಣ ಹಿಗ್ಗಾಮುಗ್ಗಾ ಟೀಕಿಸುತ್ತಿದ್ದವೋ ಅದೇ ಸರಕಾರ ಈಗ ಅದೇ ಆಂಕರ್ ಗಳನ್ನು ಕಾಲ ಕಸವಾಗಿ ನೋಡುತ್ತಿದೆ. ಯಾವ ಸರಕಾರಕ್ಕಾಗಿ ಈ ದ್ವೇಷ ಕಾರುವ ನಿರೂಪಕರು ಪ್ರತಿದಿನ ರಾತ್ರಿ ಹಿಂದೂ ಮುಸ್ಲಿಂ ದ್ವೇಷ ಹರಡುತ್ತಿದ್ದರೋ ಅದೇ ನಿರೂಪಕರನ್ನು " ನೋಡಪ್ಪಾ ... ನಿನ್ನ ಜಾತಕವೆಲ್ಲಾ ನಮಗೆ ಗೊತ್ತಿರದೆ ಇರೊದೇನಲ್ಲ... ಮಾತಾಡುವಾಗ ಜಾಗೃತೆ " ಎಂದು ಎಲ್ಲರೆದುರೇ ಬೆದರಿಸುತ್ತಿದ್ದಾರೆ.
ಅಲ್ಲಿಗೆ ಈ ಭಟ್ಟಂಗಿ ಮಾಧ್ಯಮಗಳು, ಟಿವಿ ಚಾನಲ್ ಗಳು, ಆಂಕರ್ ಗಳು ಕಳೆದ ಒಂಬತ್ತು ವರ್ಷಗಳಲ್ಲಿ ಯಾರಿಗಾಗಿ ಪತ್ರಿಕೋದ್ಯಮವನ್ನೇ ಬಲಿ ಕೊಟ್ಟು ಕೇವಲ ಚಮಚಾಗಿರಿ ಮಾತ್ರ ಮಾಡುತ್ತಿದ್ದರೋ ಅವರಿಗೆ ಈಗ ಅದೇ ಸರಕಾರ , " ನೀವು ಮಾಡುತ್ತಿರೋದು ಪತ್ರಿಕೋದ್ಯಮ ಅಲ್ಲ, ನೀವು ಏನಿದ್ದರೂ ಭಟ್ಟಂಗಿತನಕ್ಕೆ ಮಾತ್ರ ಫಿಟ್, ಸಡನ್ನಾಗಿ ಪತ್ರಿಕೋದ್ಯಮ ಮಾಡಲು ಹೊರಟರೆ ಹುಷಾರ್ " ಎಂದು ಯಾವುದೇ ಹಿಂಜರಿಕೆ ಇಲ್ಲದೆ ಸಾರ್ವಜನಿಕವಾಗಿ ಹೆದರಿಸುತ್ತಿದೆ , ಬೆದರಿಸುತ್ತಿದೆ, ಅವಮಾನ ಮಾಡುತ್ತಿದೆ.
ಇಷ್ಟು ವರ್ಷ ಈ ಸರಕಾರ ಹಾಗು ಇದರ ಮುಖ್ಯಸ್ಥರಿಗಾಗಿ ಪತ್ರಿಕೋದ್ಯಮವನ್ನು, ಅದರ ಮೂಲ ನೀತಿಗಳನ್ನು ಗಾಳಿಗೆ ತೂರಿ ತಮ್ಮ ಘನತೆಯನ್ನೇ ಅಡವಿಟ್ಟು ಸೇವೆ ಸಲ್ಲಿಸಿದರೋ ಅದೇ ಸರಕಾರ ಈಗ " ನೀವು ಪತ್ರಕರ್ತರೇ ಅಲ್ಲ, ನೀವು ಪತ್ರಕರ್ತರ ಹಾಗೆ ವರ್ತಿಸಿದರೆ ಏನು ಮಾಡಬೇಕು ಎಂದು ನಮಗೆ ಚೆನ್ನಾಗಿ ಗೊತ್ತಿದೆ " ಎಂದು ಹೇಳುತ್ತಿದೆ.
ಈ ಸುದೀರ್ಘ ಪೀಠಿಕೆಗೆ ಕಾರಣ ಮೊನ್ನೆ ನಡೆದ ಘಟನೆ. ಅಲ್ಲಿ ಆಗಿದ್ದಿಷ್ಟು. ಆಜ್ ತಕ್ ಚಾನಲ್ ನ ಜಿ ಟ್ವೆಂಟಿ ಸಮಿಟ್ ಎಂಬ ದೊಡ್ಡ ಕಾರ್ಯಕ್ರಮ. ಅಲ್ಲೊಂದು ಗೋಷ್ಠಿ. ಅದರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅತಿಥಿ. ಅವರನ್ನು ಮಾತನಾಡಿಸುತ್ತಿದ್ದವರು ಆಜ್ ತಕ್ ನ ಸ್ಟಾರ್ ಆಂಕರ್ , ಭಟ್ಟಂಗಿ ಆಂಕರ್ ಗಳಲ್ಲೇ ಟಾಪ್ ತ್ರೀ ಯಲ್ಲಿರುವ ಸುಧೀರ್ ಚೌಧರಿ.
ಹೇಳಿ ಕೇಳಿ ಅಜ್ ತಕ್ ಮೋದಿ ಸರಕಾರದ ಗುಣಗಾನಕ್ಕೆ ಭಾರೀ ಫೇಮಸ್ ಆಗಿರುವ ಚಾನಲ್. ಇನ್ನು ಸುಧೀರ್ ಚೌಧರಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕೇ ? ದೇಶದಲ್ಲೇ ಮೋದಿ ಭಕ್ತ ಆಂಕರ್ ಗಳಲ್ಲಿ ನಂಬರ್ ಒನ್ ಸ್ಥಾನಕ್ಕೆ ಪೈಪೋಟಿಯಲ್ಲಿರುವವರು ಈ ಸುಧೀರ್ ಚೌಧರಿ. ಇನ್ನು ಈ ಚಾನಲ್ ಗಳ ಸಮಿಟ್ ಗಳಂತಹ ಪ್ರೋಗ್ರಾಮ್ ಗಳು ನಡೆಯೋದೇ ಖಾಸಗಿ ಹಾಗು ಸರಕಾರಿ ಪ್ರಾಯೋಜಕತ್ವದಲ್ಲಿ. ಹಾಗಾಗಿ ಸ್ಮೃತಿ ಇರಾನಿ ಬಹಳ ಆರಾಮವಾಗಿ ಬಂದಿದ್ದಾರೆ.
ಒಂದಿಷ್ಟು ಮೋದಿ ಸರಕಾರ ಮಾಡಿಲ್ಲದ ಸಾಧನೆಗಳನ್ನು ಮಾಡಿದ್ದಾರೆ ಎಂದು ಪಟ್ಟಿ ಮಾಡಿದರಾಯಿತು, ವಿಶ್ವಗುರು, ದೊಡ್ಡ ಆರ್ಥಿಕತೆ, ನ್ಯೂ ಇಂಡಿಯಾ.. ಇತ್ಯಾದಿ ಪದಪುಂಜ ಬಳಸಿದರೆ ಆಯ್ತು, ಹೇಗೂ ಆಜ್ ತಕ್ , ಹೇಗೂ ಸುಧೀರ್ ಚೌಧರಿ ... ಕೇಳಿದರೆ ಏನು ಕೇಳಿಯಾರು ಎಂದು ಬಹಳ ಧೈರ್ಯದಿಂದ ಬಂದು ಕೂತಿದ್ದಾರೆ ಸ್ಮೃತಿ ಇರಾನಿ.
ಸಾಲದ್ದಕ್ಕೆ ಈ ಸ್ಮೃತಿ ಇರಾನಿ ಇತ್ತೀಚಿಗೆ ಪತ್ರಕರ್ತರು ಹಾಗು ಪ್ರಶ್ನೆಗಳೆಂದರೆ ಉರಿದು ಬೀಳುವವರು ಎಂದೇ ಕುಖ್ಯಾತಿ ಪಡೆದಿದ್ದಾರೆ. ತನ್ನ ಕ್ಷೇತ್ರದಲ್ಲಿ ಒಂದು ಪ್ರಶ್ನೆ ಕೇಳಿದ ಪತ್ರಕರ್ತನನ್ನ ಆತನ ಪತ್ರಿಕೆಯ ಮಾಲಕರಿಗೆ ಫೋನ್ ಮಾಡಿ ಕೆಲಸದಿಂದ ತೆಗೆಸಿದವರು ಈ ಸ್ಮೃತಿ ಇರಾನಿ. ಆದರೆ ಅದ್ಯಾಕೋ ಏನೋ.. ಸುಧೀರ್ ಚೌಧರಿ ಒಳಗೆ ದಶಕದ ಹಿಂದೆ ಇದ್ದ ಪತ್ರಕರ್ತ ದಿಢೀರನೆ ಜಾಗೃತನಾಗಿದ್ದಾನೆ. ಸರಕಾರ ಎಂದ ಮೇಲೆ ಪ್ರಶ್ನೆ ಕೇಳಲೇಬೇಕು ಎಂಬ ಅರಿವಾಗಿಬಿಟ್ಟಿದೆ. ಹಾಗಾಗಿ ಒಂದು ಪ್ರಶ್ನೆ ಕೇಳಿದ್ದಾರೆ.
"ಟೊಮೆಟೊ ಬೆಲೆ ಇನ್ನೂರೈವತ್ತು ಮುನ್ನೂರು ರೂಪಾಯಿ ಆಗಿರೋದು ನಿಮ್ಮ ಮನೆಯಲ್ಲೂ ಚರ್ಚೆ ಆಗ್ತಾ ಇರಬಹುದಲ್ವಾ " ಅನ್ನೋ ಧಾಟಿಯ ಪ್ರಶ್ನೆ ಅದು. ಈ ಸಂದರ್ಭಕ್ಕೆ ಅತ್ಯಂತ ಸೂಕ್ತ ಹಾಗು ಕೇಳಲೇಬೇಕಾದ ಪ್ರಶ್ನೆ. ಅದೂ ಯುಪಿಎ ಸರಕಾರ ಇರುವಾಗ ಆಗಾಗ ಬೆಲೆ ಏರಿಕೆ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದ ಖ್ಯಾತಿಯ ಸ್ಮೃತಿ ಇರಾನಿ ಈಗ ಒಂಬತ್ತು ವರ್ಷಗಳಿಂದ ಸಚಿವೆಯಾಗಿದ್ದಾರೆ. ಬೆಲೆ ಏರಿಕೆ ಬಗ್ಗೆ ಅವರಲ್ಲಿ ಕೇಳದೆ ಇನ್ಯಾರಲ್ಲಿ ಕೇಳೋದು.
ಆದರೆ ಸ್ಮೃತಿ ಇರಾನಿಗೆ ಎಂದಿನಂತೆ ಈ ಪ್ರಶ್ನೆ ಭಾರೀ ಅಲರ್ಜಿ ತಂದಿದೆ. ಅವರು ಕೂಡಲೇ " ನೀವು ಇದನ್ನೆಲ್ಲಾ ಲಘುವಾಗಿ ತೆಗೆದುಕೊಳ್ಳಬೇಡಿ " ಎಂದು ಸುಧೀರ್ ಗೆ ತಿರುಗೇಟು ನೀಡಲು ಹೋಗಿದ್ದಾರೆ. ಪಟ್ಟು ಬಿಡದ ಸುಧೀರ್ " ನೀವೀಗ ನೆಪ ಹೇಳುತ್ತಿದ್ದೀರಿ " ಎಂದು ಪ್ರತ್ಯುತ್ತರ ಕೊಟ್ಟಿದ್ದಾರೆ. ಇದಕ್ಕೆ ಕೆರಳಿದ ಸ್ಮೃತಿ " ಹಾಗಾದರೆ ನಾನೂ ನಿಮ್ಮಲ್ಲಿ ನಿಮ್ಮ ಜೈಲಿನ ದಿನಗಳ ಬಗ್ಗೆ ಕೇಳಬಹುದಲ್ವಾ " ಎಂದು ಹೇಳಿ ಬಿಟ್ಟಿದ್ದಾರೆ.
ಅಷ್ಟು ದೊಡ್ಡ ಸಮಾರಂಭದಲ್ಲಿ ನೂರಾರು ಗಣ್ಯರ ಎದುರು ಸುಧೀರ್ ಚೌಧರಿಗೆ ಇದರಿಂದ ಭಾರೀ ಅವಮಾನವಾಗಿದೆ. ಆದರೂ ಅವರು ಅವಮಾನ ನುಂಗಿಕೊಂಡು ಕಾರ್ಯಕ್ರಮ ಮುಂದುವರೆಸಿದ್ದಾರೆ. ಆಮೇಲೆ ಸ್ಮೃತಿಗೂ ಈ ಬಗ್ಗೆ ಅರಿವಾಗಿದೆ. ಹಾಗಾಗಿ ಅದನ್ನು ಸರಿಪಡಿಸಲು " ನಾನು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಶುರು ಮಾಡಿದ್ದೇ ಸುಧೀರ್ ಚೌಧರಿ ಅವರ ಜೊತೆ " ಎಂದು ತೇಪೆ ಹಚ್ಚಲು ಪ್ರಯತ್ನಿಸಿದ್ದಾರೆ. ಆದರೆ ಅದಾಗಲೇ ಸುಧೀರ್ ಗೆ ಭಾರೀ ಇರಿಸು ಮುರುಸು ಆಗಿಬಿಟ್ಟಿದೆ. " ನೀವು ಬೇರೆಯವರ ವೈಯಕ್ತಿಕ ವಿಚಾರ ಎಳೆದು ತಂದರೆ ನೀವೂ ಅದಕ್ಕೆ ಸಿದ್ಧರಿರಬೇಕು, ನಾನು ನನ್ನ ವಿನಯತೆ ಉಳಿಸಿಕೊಂಡಿದ್ದೇನೆ " ಎಂದು ಹೇಳಿದ್ದಾರೆ ಸುಧೀರ್.
ಆದರೆ ಅಷ್ಟರಲ್ಲಿ ಆಗುವ ಅವಮಾನ ಆಗಿ ಹೋಗಿದೆ. ಎಲ್ಲರೆದುರೇ ಸುಧೀರ್ ಚೌಧರಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಅಂದ ಹಾಗೆ, ಸ್ಮೃತಿ ಇರಾನಿ ನೆನಪಿಸಿರುವ ಜೈಲಿನ ಘಟನೆ ನಡೆದಿದ್ದು 2012 ರಲ್ಲಿ. ಆಗ ಝೀ ನ್ಯೂಸ್ ನಲ್ಲಿದ್ದ ಸುಧೀರ್ ಚೌಧರಿ ಹಾಗು ಅವರ ಸಹೋದ್ಯೋಗಿ ಸಮೀರ್ ಅಹ್ಲುವಾಲಿಯಾ ಉದ್ಯಮಿ ನವೀನ್ ಜಿಂದಾಲ್ ಅವರಿಗೆ ನೂರು ಕೋಟಿ ರೂಪಾಯಿಯ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಲ್ಲಿ ತಿಹಾರ್ ಜೈಲು ಸೇರಿದ್ದರು.
ಹಾಗಾಗಿ ಈಗಲೂ ಸುಧೀರ್ ಚೌಧರಿ ಅವರನ್ನು ಟೀಕಿಸುವವರು "ತಿಹಾಡಿ" ಎಂದೇ ಕರೆಯುತ್ತಾರೆ. ಅದು ಅವರ ಅಡ್ಡ ಹೆಸರೇ ಆಗಿಬಿಟ್ಟಿದೆ. ಸುಧೀರ್ ಚೌಧರಿ ಸ್ಮೃತಿ ಇರಾನಿಗೆ ಕೇಳಿದ ಪ್ರಶ್ನೆ ಅತ್ಯಂತ ಸಮಂಜಸವಾಗಿತ್ತು. ಕೇಳಲೇಬೇಕಾದ ಪ್ರಶ್ನೆಯಾಗಿತ್ತು. ಯುಪಿಎ ಅವಧಿಯಲ್ಲಿ ಅಡುಗೆ ಅನಿಲಕ್ಕೆ ನಾನೂರು ರೂಪಾಯಿಯಾದಾಗ ಈ ಸ್ಮೃತಿ ಇರಾನಿ ಬೀದಿಗಿಳಿದು ಭಯಂಕರ ಪ್ರತಿಭಟನೆ ನಡೆಸಿದ್ದರು. ಅದು ಸರಿಯಾಗೇ ಇತ್ತು. ಆದರೆ ಈಗ ಅವರ ಸರಕಾರದ ಅವಧಿಯಲ್ಲಿ ಅದೇ ಅಡುಗೆ ಅನಿಲದ ಬೆಲೆ ಸಾವಿರಕ್ಕೂ ಹೆಚ್ಚಾಗಿರುವಾಗ ಸ್ಮೃತಿ ಇರಾನಿ ಮಾತೇ ಆಡೋದಿಲ್ಲ.
ಹಾಗಾಗಿ ಸುಧೀರ್ ಚೌಧರಿಯವರನ್ನು ಈ ಪ್ರಶ್ನೆ ಕೇಳಿದ್ದಕ್ಕೆ ನಾವು ಅಭಿನಂದಿಸಬೇಕು. ಆದರೆ ಈಗ ಇಂತಹ ಪ್ರಶ್ನೆ ಕೇಳಿದರೆ ಸಚಿವರು ಅದನ್ನು ಸಹಿಸದೇ ಇರುವ ವಾತಾವರಣ ಸೃಷ್ಟಿಸಿದವರು ಯಾರು ?. ಇದೇ ಸುಧೀರ್ ಚೌಧರಿ ಹಾಗು ಅವರ ಬಳಗ ಅಲ್ವಾ ?
ಕಳೆದ ಒಂಬತ್ತು ವರ್ಷಗಳಿಂದ ಈ ಸರಕಾರವನ್ನು ವಿನಾಕಾರಣ ಹೊಗಳುತ್ತಾ, ವಿಪಕ್ಷವನ್ನೇ ಪ್ರಶ್ನಿಸುತ್ತಾ ಪತ್ರಿಕೋದ್ಯಮಕ್ಕೆ ದ್ರೋಹ ಬಗೆದವರು ಯಾರು ?. ಇದೇ ಸುಧೀರ್ ಚೌಧರಿ ಹಾಗು ಅವರ ಟೀಮ್ ಅಲ್ವಾ ? . ಸರಕಾರವನ್ನು ಪ್ರಶ್ನಿಸುವುದು ಪತ್ರಕರ್ತರ ಕೆಲಸ ಎಂಬುದನ್ನು ಮರೆತು ಸರಕಾರದ ಭಟ್ಟಂಗಿತನ ಮಾತ್ರ ಮಾಡುತ್ತಾ ಬಂದಿದ್ದು ಇವರೇ ಅಲ್ವಾ ?. ಈಗ ಅದಕ್ಕೆ ಅವರು ತಕ್ಕ ಬೆಲೆ ತೆತ್ತಿದ್ದಾರೆ. ಆದರೆ ಸುಧೀರ್ ಚೌಧರಿಗೆ ಕೊನೆಗೂ ಬುದ್ಧಿ ಬಂತಲ್ಲ ಎಂದು ನಾವು ಸಮಾಧಾನ ಪಡುವ ಹಾಗಿಲ್ಲ.
ಈ ಒಂಬತ್ತು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಪತ್ರಿಕೋದ್ಯಮವನ್ನು, ಪತ್ರಿಕಾ ಧರ್ಮವನ್ನು ಯಾವ ರೀತಿಯಲ್ಲಿ ಸಮಾಧಿ ಮಾಡಲು ಪ್ರಯತ್ನಿಸಲಾಗಿದೆ ಎಂಬುದರ ಸಂಕೇತವಾಗಿ ಈ ಸುಧೀರ್ ಚೌಧರಿ ಪ್ರಕರಣ ಕಂಡು ಬರುತ್ತಿದೆ. ಅದಕ್ಕಾಗಿ ನಾವು ಬೇಸರಿಸಬೇಕಾಗಿದೆ.