ಸಂಸತ್ತಿನ ವಿಶೇಷ ಅಧಿವೇಶನ : ಪ್ರಧಾನಿ ಸರಣಿ ಭಾಷಣ, ರಾಷ್ಟ್ರಪತಿ ಬಂದೇ ಇಲ್ಲ
► ಆದಿವಾಸಿ ಮಹಿಳಾ ರಾಷ್ಟ್ರಪತಿಯನ್ನು ಮೋದಿ ಸರಕಾರ ಮತ್ತೆ ಮತ್ತೆ ಕಡೆಗಣಿಸಲು ಕಾರಣವೇನು ? ► ಕಂಗನಾ ಸಂಸತ್ತಲ್ಲಿ ಮಿಂಚುತ್ತಿರುವಾಗ ದ್ರೌಪದಿ ಮುರ್ಮು ಅಲ್ಲಿ ಯಾಕಿಲ್ಲ ?
Photo: PTI
ಬರೀ ಭಾಷಣ, ಬೊಗಳೆ, ಬಡಾಯಿ… ನುಡಿಗೂ ನಡೆಗೂ ಸಂಬಂಧವೇ ಇಲ್ಲ… ಇದ್ದರೆ ಹೀಗಾಗುತ್ತಲೂ ಇರಲಿಲ್ಲ. ಮಹಿಳೆಯರ ಬಗ್ಗೆ ದೊಡ್ಡ ದೊಡ್ಡ ಪದಗಳನ್ನು ಬಳಸಿ ಭಾಷಣ ಬಿಗಿಯುವ, ಅವರ ರಾಜಕೀಯ ಪಾಲ್ಗೊಳ್ಳುವಿಕೆಯ ಬಗ್ಗೆ ಅಪಾರ ಕಳಕಳಿ ಹೊಂದಿರುವಂತೆ ತೋರಿಸಿಕೊಳ್ಳುವ, ಅಲ್ಪಸಂಖ್ಯಾತರ ಬಗ್ಗೆ, ದಮನಿತರ ಬಗ್ಗೆ, ಆದಿವಾಸಿಗಳ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ, ಈ ದೇಶದ ರಾಷ್ಟ್ರಪತಿ ಸ್ಥಾನದಲ್ಲಿರುವ ದ್ರೌಪದಿ ಮುರ್ಮು ಅವರನ್ನು ಯಾಕೆ ಮತ್ತೆ ಮತ್ತೆ ಮರೆಯುತ್ತಿದ್ದಾರೆ? ಅಥವಾ ಬೇಕೆಂದೇ ಕಡೆಗಣಿಸುತ್ತಿದ್ದಾರೆಯೆ?.
ರಾಷ್ಟ್ರಪತಿ ನಮ್ಮ ದೇಶದ ಸಂಸತ್ತಿನ ಮುಖ್ಯಸ್ಥರು . ಸಂಸತ್ತಿನ ಅಧಿವೇಶನ ಕರೆಯುವುದೂ ಅವರೇ. ಆದರೆ ಅವರಿಗೆ ಇನ್ನೂ ಹೊಸ ಸಂಸತ್ತು ಪ್ರವೇಶಿಸುವ, ಸಂಸದರನ್ನು ಉದ್ದೇಶಿಸಿ ಮಾತನಾಡುವ ಭಾಗ್ಯ ಯಾಕೆ ನಿನ್ನೆವರೆಗೂ ಸಿಕ್ಕಿಲ್ಲ?. ಮಹಿಳಾ ಮೀಸಲಾತಿ ತಂದು ಇತಿಹಾಸ ನಿರ್ಮಿಸುತ್ತೇವೆ ಎಂದು ಕೊಚ್ಚಿಕೊಳ್ಳುತ್ತಿರುವವರು ಮಿಂಚುವ ಕಾರ್ಯಕ್ರಮದಲ್ಲಿ ಆದಿವಾಸಿ ಮಹಿಳಾ ರಾಷ್ಟ್ರಪತಿಯ ಅನುಪಸ್ಥಿತಿ ಏಕೆ ಎದ್ದು ಕಾಣುತ್ತಿದೆ ? ಏಕೆ ಇಂಥ ಅವಗಣನೆ?.
ಹೊಸ ಸಂಸತ್ ಭವನದಲ್ಲಿ ಕಲಾಪ ಆರಂಭಕ್ಕೆ ಮೊದಲು ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಕೂಡ ರಾಷ್ಟ್ರಪತಿಯವರನ್ನು ಆಹ್ವಾನಿಸಿರಲಿಲ್ಲ ಎಂಬುದು ಕಳವಳಕ್ಕೆ ಕಾರಣವಾಗಿರುವ ವಿಚಾರ. ಈ ವಿಶೇಷ ಅಧಿವೇಶನ ಪ್ರಧಾನಿ ಮೋದಿಯವರ ಸರಣಿ ಭಾಷಣಗಳಿಗೆ ಸಾಕ್ಷಿಯಾಯಿತು. ಅಧಿವೇಶನದ ಮೊದಲ ದಿನ ಸುದೀರ್ಘ ಭಾಷಣ, ಮರುದಿನ ಸೆಂಟ್ರಲ್ ಹಾಲ್ ನಲ್ಲಿ ಮತ್ತೆ ಇನ್ನೊಂದು ಸುದೀರ್ಘ ಭಾಷಣ, ಅಲ್ಲಿಂದ ಬಂದು ಹೊಸ ಸಂಸತ್ತಿನಲ್ಲಿ ಇನ್ನೊಂದು ಭಾಷಣ.
ಆದರೆ ಇಲ್ಲೆಲ್ಲೂ ರಾಷ್ಟ್ರಪತಿಗಳು ಕಾಣಲೇ ಇಲ್ಲ ಯಾಕೆ ?. ಕಂಗನಾ ರಣಾವತ್ ಮೊದಲಾದವರೆಲ್ಲ ಸಂಸತ್ ಭವನಕ್ಕೆ ಬಂದು ನಿಂತು ಮಿಂಚುತ್ತಿದ್ದಾರೆ. ಎಲ್ಲಿ ನೋಡಿದರೂ ಅವರದೇ ಫೋಟೋ, ವಿಡಿಯೋಗಳು. ಅವರು ಪ್ರಧಾನಿ ಮೋದಿ ಬಗ್ಗೆ ಮಾಡಿದ ಗುಣಗಾನದ್ದೇ ಸುದ್ದಿ. ಆದರೆ ಅದೇ ಸಂಸತ್ತಿನ ಮುಖ್ಯಸ್ಥರಾದ ರಾಷ್ಟ್ರಪತಿಯವರಿಗೆ ಏಕೆ ಆಹ್ವಾನವಿರಲಿಲ್ಲ ಎಂಬುದೇ ದೇಶವನ್ನು ಕಾಡುವ ಪ್ರಶ್ನೆಯಾಗಿದೆ.
ಎಲ್ಲರಿಗೂ ನೆನಪಿರುವ ಹಾಗೆ, ನೂತನ ಸಂಸತ್ ಭವನದ ಉದ್ಘಾಟನೆಗೂ ದ್ರೌಪದಿ ಮುರ್ಮು ಅವರನ್ನು ಮೋದಿ ಸರ್ಕಾರ ಆಹ್ವಾನಿಸಿರಲಿಲ್ಲ. ಆಗಲೂ ಪ್ರಶ್ನೆಗಳೆದ್ದಿದ್ದವು. ಈಗ ಮತ್ತೊಮ್ಮೆ ತನ್ನ ಅದೇ ವರ್ತನೆಯನ್ನು ಸರ್ಕಾರ ಪುನರಾವರ್ತಿಸಿದೆ.
ಹೊಸ ಸಂಸತ್ತಿಗೆ ಕಂಗನಾ ರಣಾವತ್ ಬಂದಿದ್ದು ಭಾರೀ ಸುದ್ದಿಯಾಗುತ್ತಿರುವಾಗ, ಮಹಿಳಾ ಮೀಸಲಾತಿ ಮಸೂದೆ ವಿಚಾರದಲ್ಲಿ ಮೋದಿಯವರನ್ನು ಕಂಗನಾ ಮತ್ತಿತರರು ಹೊಗಳುತ್ತಿರುವಾಗ, ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೇಕೆ ಆಹ್ವಾನವಿಲ್ಲ ಎಂಬ ಪ್ರಶ್ನೆಯನ್ನು ಪ್ರತಿಪಕ್ಷಗಳು ಎತ್ತಿವೆ.
ಸೆಂಟ್ರಲ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ವಹಿಸಿದ್ದರು. ಹಾಗಾದರೆ ರಾಷ್ಟ್ರಪತಿಯವರು ಏಕಿರಲಿಲ್ಲ?. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತೆ ಎಂದು ತೃಣಮೂಲ ಕಾಂಗ್ರೆಸ್ ಕೇಳಿದೆ.
ಸೆಂಟ್ರಲ್ ಹಾಲ್ನಲ್ಲಿನ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿಗಳು ಎಲ್ಲಿದ್ದರು? ಅವರನ್ನು ಆಹ್ವಾನಿಸಲಾಗಿತ್ತೆ? ಏಕೆ ಅವರನ್ನು ನಿರ್ಲಕ್ಷಿಸಲಾಗಿದೆ?" ಎಂದು ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ ಪ್ರಶ್ನಿಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಸೆಂಟ್ರಲ್ ಹಾಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಸಂಸತ್ತಿನ ಮುಖ್ಯಸ್ಥರಾಗಿರುವ ರಾಷ್ಟ್ರಪತಿಯವರು ಮಾತ್ರ ಕಾರ್ಯಕ್ರಮದಲ್ಲಿ ಇಲ್ಲದಿದ್ದುದು ಎದ್ದು ಕಾಣಿಸುತ್ತಿತ್ತು.
ಒಂದೆಡೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾರ್ಯಕ್ರಮದಿಂದ ದೂರವೇ ಇರಿಸಲಾಗಿದ್ದ ಹೊತ್ತಿನಲ್ಲಿಯೇ ಮತ್ತೊಂದೆಡೆ ಕಂಗನಾ ಮೊದಲಾದ ಬಿಜೆಪಿ ಬೆಂಬಲಿಗ ಸಿನಿಮಾ ತಾರೆಯರಲ್ಲದೆ ವಿವಿಧ ಗಣ್ಯ ಮಹಿಳೆಯರನ್ನು ಸಂಸತ್ ಭವನಕ್ಕೆ ಆಹ್ವಾನಿಸಲಾಗಿತ್ತು. ಸಿನಿಮಾ, ಫ್ಯಾಷನ್, ನೃತ್ಯ ಮತ್ತು ಸಂಗೀತ ಕ್ಷೇತ್ರಗಳ ಹಲವು ಸಾಧಕರು ಮಂಗಳವಾರ ಹೊಸ ಸಂಸತ್ ಭವನಕ್ಕೆ ಭೇಟಿ ನೀಡಿದ್ದರು.
ನಟಿಯರಾದ ಕಂಗನಾ ರಣಾವತ್ ಮತ್ತು ಇಶಾ ಗುಪ್ತಾ, ಫ್ಯಾಷನ್ ಡಿಸೈನರ್ ರಿನಾ ಢಾಕಾ, ಗಾಯಕಿ ಸಪ್ನಾ ಚೌಧರಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನೃತ್ಯಗಾರ್ತಿಯರಾದ ನಳಿನಿ ಮತ್ತು ಕಮಲಿನಿ, ಪದ್ಮಶ್ರೀ ಪುರಸ್ಕೃತ ಗಾಯಕಿ ಸುಮಿತ್ರಾ ಗುಹಾ ಮೊದಲಾದವರು ನಿನ್ನೆ ಹೊಸ ಸಂಸತ್ ಭವನಕ್ಕೆ ಭೇಟಿ ನೀಡಿದ್ದರು. ಅವರೊಂದಿಗೆ ಬಿಜೆಪಿ ಸಂಸದರು ನಿಂತು ಫೋಟೋಗಳಿಗೆ ಪೋಸ್ ನೀಡಿದರು.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವಾಗ ಅವರೆಲ್ಲರೂ ಉಪಸ್ಥಿತರಿದ್ದರು. ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ಕಾರ ಮಂಡಿಸಿದ್ದಕ್ಕಾಗಿ ಮೋದಿಯನ್ನು ಅವರೆಲ್ಲ ಹಾಡಿ ಹೊಗಳಿದರು. ಕಂಗನಾ ರಣಾವತ್ ಅಂತೂ, ಇನ್ನಾವುದೋ ಮಸೂದೆಯ ಬದಲು ಮಹಿಳಾ ಮೀಸಲಾತಿ ಮಸೂದೆಯನ್ನೇ ಆರಿಸಿಕೊಂಡಿರುವುದು ಮೋದಿಯವರ ಚಿಂತನೆಯನ್ನು ತೋರಿಸುತ್ತದೆ ಎಂತಲೂ, ದೇಶ ಸಮರ್ಥರ ಕೈಯಲ್ಲಿದೆ ಎಂತಲೂ ಹೇಳಿಬಿಟ್ಟರು. ಮಹಿಳಾ ಮೀಸಲಾತಿ ಮಸೂದೆಯಲ್ಲಿ ಏನೇನು ಇದೆ ? ಏನೇನು ಇರಲೇಬೇಕಾದ್ದು ಅದರಲ್ಲಿಲ್ಲ ಇಲ್ಲ ಅಂತ ಕಂಗನಾ ನೋಡಿದ್ದಾರಾ ? ಗೊತ್ತಿಲ್ಲ. ಇರಲಿ ಬಿಡಿ.
ಹಾಗಾದರೆ, ರಾಷ್ಟ್ರಪತಿ ಸ್ಥಾನದಲ್ಲಿರುವ ಆದಿವಾಸಿ ಮಹಿಳೆ ಆ ಕಾರ್ಯಕ್ರಮದಲ್ಲಿ ಇರಲಿಲ್ಲ ಎಂಬುದು ಬಿಜೆಪಿ ನಾಯಕರ ಆತ್ಮಸಾಕ್ಷಿಯನ್ನು ಒಂದು ಕ್ಷಣವೂ ಕಾಡಲಿಲ್ಲವೆ?. ಹಾಗೆ ಕಾಡಲಿಲ್ಲವೆಂದಾದರೆ ಬಿಜೆಪಿ ಸಂಸದರು, ಬೆಂಬಲಿಗರು, ಕಂಗನಾ ಅಂಥವರು ಮೋದಿಯವರ ಯಾವ ಚಿಂತನೆಯ ಬಗ್ಗೆ ಸಮರ್ಥಿಸಿಕೊಳ್ಳುತ್ತಿದ್ಧಾರೆ?.
ಮಹಿಳಾ ಕುಸ್ತಿಪಟುಗಳನ್ನು ನ್ಯಾಯ ಕೇಳಿದ್ದಕ್ಕಾಗಿ ದೆಹಲಿಯ ನಡುಬೀದಿಯಲ್ಲಿ ಥಳಿಸಿದಾಗ, ಅವರು ಕಣ್ಣೀರು ಹಾಕುತ್ತಿದ್ದರೆ ದೇಶ ಮಾತ್ರವಲ್ಲ, ವಿಶ್ವವೇ ಮರುಗುತ್ತಿದ್ದಾಗ ಈ ಕಂಗನಾ ಎಲ್ಲಿದ್ದರು?.
ಅತ್ಯಾಚಾರ ಆರೋಪಿಗಳನ್ನು ಅವಧಿಗೆ ಮೊದಲೇ ಬಿಡುಗಡೆ ಮಾಡಿ ಹೂಹಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಿದ್ದಾಗ ಇವರೆಲ್ಲ ಎಲ್ಲಿದ್ದರು?.
ಇವರೆಲ್ಲರ ಕಳಕಳಿ ಯಾವುದರ ಬಗ್ಗೆ ಹಾಗಾದರೆ? ಇವರೆಲ್ಲರಿಗೂ, ದ್ರೌಪದಿ ಮುರ್ಮು ಅವರನ್ನು ಸಂಸತ್ ಭವನದ ಉದ್ಘಾಟನೆಯಿಂದಲೂ, ಈಗ ಸಂಸತ್ ಭವನ ಪ್ರವೇಶದ ವೇಳೆಯೂ ದೂರವಿಟ್ಟಿರುವುದು ಒಂದು ಪ್ರಶ್ನೆಯಾಗಿ ಏಕೆ ಕಾಡಲಿಲ್ಲ?.
ಇದರ ಹೊರತಾಗಿ, ಇಲ್ಲಿ ಎದ್ದು ಕಾಣಿಸುವುದು ಈ ಸರ್ಕಾರದ್ದು ಅದೆಷ್ಟು ಭಂಡ ಧೋರಣೆ ಎಂಬ ಸಂಗತಿ. ಮೇ ತಿಂಗಳಲ್ಲಿ ನೂತನ ಸಂಸತ್ ಭವನ ಉದ್ಧಾಟನೆಗೆ ರಾಷ್ಟ್ರಪತಿಯವರಿಗೆ ಆಹ್ವಾನವೇ ಇರಲಿಲ್ಲ. ಆಗ, ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಬೇಕೇ ಹೊರತು ಪ್ರಧಾನಿ ಮೋದಿಯಲ್ಲ ಎಂದು ಪ್ರತಿಪಾದಿಸಿದ್ದ ಕಾಂಗ್ರೆಸ್ ಮತ್ತಿತರ 21 ವಿರೋಧ ಪಕ್ಷಗಳು ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿದ್ದವು.
ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅದಾದ ಬಳಿಕವೂ ಸರ್ಕಾರ ತನ್ನ ನಡೆಯನ್ನು, ಮನಃಸ್ಥಿತಿಯನ್ನು ಬದಲಿಸಿಕೊಳ್ಳದೆ ಮೊಂಡುತನವನ್ನೇ ತೋರಿಸುತ್ತಿದೆ, ತನ್ನದೇ ಪ್ರತಿಷ್ಠೆಗೆ ಅಂಟಿಕೊಂಡಿದೆ ಎಂಬುದನ್ನು ಯಾರೇ ಆದರೂ ಗ್ರಹಿಸಬಹುದಾಗಿದೆ.
ರಾಷ್ಟ್ರಪತಿ ಹುದ್ದೆಗೆ ದಲಿತರು, ಬುಡಕಟ್ಟು ಸಮುದಾಯದವರನ್ನು ನೇಮಿಸುವ ಮೂಲಕ ತನ್ನ ದೊಡ್ಡಸ್ತಿಕೆ ತೋರಿಸಿಕೊಳ್ಳುವ ಬಿಜೆಪಿ ಸರ್ಕಾರಕ್ಕಾಗಲಿ, ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಸನಾತನ ಧರ್ಮ ಎಂದು ಕನಿಷ್ಠ ಸೂಕ್ಷ್ಮತೆಯೂ ಇಲ್ಲದೆ ಹೇಳಿಕೊಳ್ಳುವ ಬಿಜೆಪಿ ಮಂದಿಗಾಗಲೀ ಇರುವುದು ರಾಜಕೀಯ ಲಾಭದ ಲೆಕ್ಕಾಚಾರ ಮಾತ್ರನಾ ?.
ಸಾಮಾಜಿಕ ನ್ಯಾಯದ ವಿಚಾರದಲ್ಲೂ ಇವರದು ರಾಜಕೀಯ ಲಾಭದ ಹವಣಿಕೆ ಮತ್ತು ತಾವು ಅವಕಾಶ ಕೊಟ್ಟಿದ್ದೇವೆ, ಔದಾರ್ಯ ಮೆರೆದಿದ್ದೇವೆ ಎಂದು ಹೇಳಿಕೊಳ್ಳುವ ಮನಸ್ಥಿತಿಯೇ ?. ಸಂಸತ್ ಭವನ ಉದ್ಘಾಟನೆಗೆ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೇ ಇದ್ದ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಟೀಕಿಸಿದ್ದಂತೆ, ಮೋದಿ ಸರ್ಕಾರ ಕೇವಲ ಮತಬ್ಯಾಂಕ್ ಭದ್ರ ಮಾಡಿಕೊಳ್ಳುವುದಕ್ಕಾಗಿ ಮಾತ್ರವೇ ರಾಷ್ಟ್ರಪತಿ ಹುದ್ದೆಗೆ ದಲಿತರು ಮತ್ತು ಬುಡಕಟ್ಟು ಸಮುದಾಯದವರನ್ನು ನೇಮಿಸುತ್ತಿದೆಯೆ?.
ರಾಷ್ಟ್ರಪತಿಗಳಿಲ್ಲದೆ ಒಕ್ಕೂಟ ವ್ಯವಸ್ಥೆಯಿಲ್ಲ ಎಂಬುದನ್ನೇ ಪ್ರಧಾನಿ ಮತ್ತು ಕೇಂದ್ರ ಸರ್ಕಾರ ಮರೆತಿದೆ ಎಂದು ಆಗ ಟೀಕೆ ವ್ಯಕ್ತವಾಗಿತ್ತು.
ಈಗ ಮತ್ತೆ ರಾಷ್ಟ್ರಪತಿಯವರನ್ನು ಕಡೆಗಣಿಸಲಾಗಿದೆ. ನಿನ್ನೆ ಹೊಸ ಸಂಸತ್ತಲ್ಲಿ ಮಾತಾಡಿದ ರಾಹುಲ್ ಗಾಂಧಿಯವರು " ಹೊಸ ಸಂಸತ್ತು ಬಹಳ ಸುಂದರ ಕಟ್ಟಡ. ಇದರಲ್ಲಿ ಆಕರ್ಷಕ ನವಿಲಿನ ವಿನ್ಯಾಸಗಳಿವೆ. ಎಲ್ಲವೂ ಸುಂದರವಾಗಿವೆ. ಆದರೆ ಇವತ್ತು ಇಲ್ಲಿ ನಮ್ಮ ರಾಷ್ಟ್ರಪತಿಗಳು ಇರಬೇಕಿತ್ತು. ಅವರೊಬ್ಬ ಮಹಿಳೆ, ಅವರೊಬ್ಬ ಆದಿವಾಸಿ. ಅವರು ಇವತ್ತು ಹೊಸ ಸಂಸತ್ತಿನ ಕಲಾಪ ಶುರುವಾಗುವಾಗ ಇದ್ದಿದ್ದರೆ ಬಹಳ ಸೂಕ್ತವಾಗಿರುತ್ತಿತ್ತು. " ಎಂದು ಹೇಳಿದರು.
ಆದರೆ, ಒಕ್ಕೂಟ ವ್ಯವಸ್ಥೆಯ ಬಗ್ಗೆಯೇ, ಪ್ರಜಾಪ್ರಭುತ್ವದ ಬಗ್ಗೆಯೇ ಗೌರವವಿಲ್ಲದವರು ರಾಷ್ಟ್ರಪತಿಯವರನ್ನು ಗೌರವಿಸುತ್ತಾರೆಯೆ?. ಈಗ ಒಂದೇ ರಾಷ್ಟ್ರ, ಒಂದೇ ಚುನಾವಣೆ ಎನ್ನುತ್ತಿರುವ ಇವರ ಇರಾದೆಯ ಹಿಂದೆಯೂ ಇರುವುದು ಒಕ್ಕೂಟ ವ್ಯವಸ್ಥೆಯ ಬಗ್ಗೆ ಗೌರವವಿಲ್ಲದ ಮನಃಸ್ಥಿತಿಯೇ ಅಲ್ಲವೆ?. ಆಗ ತಮ್ಮನ್ನು ಆಹ್ವಾನಿಸದೇ ಇದ್ದಾಗಲೂ, ಪ್ರಧಾನಿ ಮೋದಿ ಸಂಸತ್ ಭವನ ಉದ್ಘಾಟಿಸುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಾಗತಿಸಿದ್ದರು.
ಇಡೀ ದೇಶಕ್ಕೆ ಹೆಮ್ಮೆ ಮತ್ತು ಸಂತಸದ ವಿಷಯವಾಗಿದೆ ಎಂಬ ಮುರ್ಮು ಅವರ ಸಂದೇಶವನ್ನು ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಸದನದಲ್ಲಿ ಓದಿದ್ದರು. ಈಗಲೂ, ಮಹಿಳಾ ಮೀಸಲಾತಿ ಮಂಡನೆಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ದ್ರೌಪದಿ ಮುರ್ಮು ಅವರು, ಲಿಂಗ ಸಮಾನತೆ ನ್ಯಾಯಕ್ಕಾಗಿ ಇದು ನಮ್ಮ ಕಾಲದಲ್ಲಿ ಅತ್ಯಂತ ಪರಿವರ್ತಕ ಕ್ರಾಂತಿಯಾಗಲಿದೆ ಎಂದು ಹೇಳಿದ್ದಾರೆ.
ಅದು ರಾಷ್ಟ್ರಪತಿಗಳ ಔದಾರ್ಯ. ಆದರೆ ಶಿಷ್ಟಾಚಾರ ಪಾಲಿಸಬೇಕಾದ ಮೋದಿ ಸರಕಾರ ಮಾಡಿದ್ದೇನು ? . ಈಗ ಮಹಿಳಾ ಮೀಸಲಾತಿ ಮಂಡಿಸಿದ ಮೋದಿ ಸರ್ಕಾರದ, ಸಂಘ ಪರಿವಾರದವರ ಲೆಕ್ಕಾಚಾರಗಳು ಏನೇನಿವೆ?.
ಅವರಿಗೆ ಅಲ್ಪಸಂಖ್ಯಾತರು ಬೇಕಾಗಿದ್ದಾರೆಯೆ? ಬೇಕಿಲ್ಲ. ಬಡವರು, ದಲಿತರು, ದಮನಿತರು, ಆದಿವಾಸಿಗಳು ? ಅವರೂ ಬೇಕಿಲ್ಲ.
ಹಿಂದುಳಿದ ವರ್ಗಗಳು ? ಅವರೂ ಬೇಡ. ಪ್ರಶ್ನಿಸುವವರನ್ನು ಕೂಡ ಜಾತಿ ಮತ್ತು ಧರ್ಮದ ಗುರುತು ತೋರಿಸಿ ತೆಗಳುವ, ಟೀಕಿಸುವ ಮನಃಸ್ಥಿತಿ ಅವರದು. ಸತ್ಯವನ್ನು ಹೇಳಿದರೆ ಅದನ್ನು ದೇಶದ್ರೋಹ ಎನ್ನಬಲ್ಲ ಅದೆಷ್ಟೋ ಇಂಚಿನ ಎದೆ ಅವರದು.
ಚುನಾವಣೆ ಬಂದಾಗೊಮ್ಮೆ ಹೊಸ ನಾಟಕ ಶುರು ಮಾಡಲಾಗುತ್ತದೆ. ಅಂಥ ನಾಟಕಗಳು ಈಗ ನಡೆಯುತ್ತಿವೆ. ಒಂದೆಡೆ ಮಹಿಳಾ ಮೀಸಲಾತಿಯ ಮಾತಾಡುತ್ತಲೇ, ಅದು ತಮ್ಮನ್ನು ಯಾವುದೇ ಕಾರಣಕ್ಕೂ ಬಾಧಿಸದೇ ಇರುವಂಥ ಎಚ್ಚರವನ್ನೂ ವಹಿಸುತ್ತಾರೆ. ಇವರದು, ಐತಿಹಾಸಿಕ ದಿನವನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವ ವಿಚಾರದಲ್ಲಿ ಮಾತ್ರ ಪರಮ ಪ್ರಾವೀಣ್ಯತೆ. ಮತ್ತು ಆ ಐತಿಹಾಸಿಕ ದಿನದಂದು ಯಾರ್ಯಾರನ್ನು ತಮ್ಮ ಜೊತೆಯಲ್ಲಿ ಇರಿಸಿಕೊಳ್ಳಬೇಕು, ಯಾರ್ಯಾರನ್ನು ದೂರವಿಡಬೇಕು ಎಂಬುದರಲ್ಲಿ ಕೂಡ ಲೆಕ್ಕಾಚಾರವಿಲ್ಲದೆ ಇಲ್ಲ.
ಸನಾತನ ಧರ್ಮದ ಚರ್ಚೆಯನ್ನು ದೊಡ್ಡ ಮಟ್ಟದಲ್ಲಿ ಇವರೂ ಇವರ ವಂದಿಮಾಗಧ ಪಡೆಯಾದ ಮಡಿಲ ಮೀಡಿಯಾಗಳೂ ಮಾಡುತ್ತಿರುವಾಗ, ಸನಾತನ ಧರ್ಮದ ಬಗ್ಗೆ ಟೀಕಿಸುವವರಿಗೆ ತಕ್ಕ ಉತ್ತರ ಕೊಡಬೇಕೆಂದು ಸ್ವತಃ ಪ್ರಧಾನಿಯೇ ಸಂಪುಟ ಸಹೋದ್ಯೋಗಿಗಳಿಗೆ ಕರೆ ಕೊಡುತ್ತಿರುವಾಗ, ಯಾರೇ ಆದರೂ ಅಂದಾಜು ಮಾಡಬಹುದು.
ಇವರು ಸಾಮಾಜಿಕ ನ್ಯಾಯದ ಪರವಿಲ್ಲ, ಇವರು ಮಹಿಳೆಯರ ಪರವಿಲ್ಲ, ಇವರು ದಲಿತರ, ದಮನಿತರ, ಅಲ್ಪಸಂಖ್ಯಾತರ, ಆದಿವಾಸಿಗಳ ಪರವಿಲ್ಲ. ಇವರು ನಮ್ಮ ದೇಶ ಮದರ್ ಆಫ್ ಡೆಮಾಕ್ರಸಿ ಅಂತ ಭಾಷಣ ಮಾಡಿ ಮಾಡೋ ಕೆಲಸ ಮಾತ್ರ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದದ್ದು. ಇಂಥದೊಂದು ಮನಃಸ್ಥಿತಿ ದೇಶವನ್ನು ಎಲ್ಲಿಗೆ ಕೊಂಡೊಯ್ಯಲಿದೆ?. ಇದು ಬರೀ ಒಂದು ಪ್ರಶ್ನೆಯಲ್ಲ; ಈ ದೇಶದ ಎದುರಿನ ಅತಿ ದೊಡ್ಡ ತಲ್ಲಣ.