'ನಮ್ಮ ಹೆಸರಲ್ಲಿ ಬೇಡ' ಎಂದು 3000ಕ್ಕೂ ಹೆಚ್ಚು ಕ್ರೈಸ್ತರಿಂದ ಹೇಳಿಕೆ ಬಿಡುಗಡೆ
► ವಾರಣಾಸಿಯ ಪಾದ್ರಿ ಆನಂದ್ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು ?
ಮೋದಿ | Photo : PTI
“ನಾಟ್ ಇನ್ ಅವರ್ ನೇಮ್”. ಇದು, ಪ್ರಧಾನಿ ಮೋದಿಯವರ ಕ್ರಿಸ್ಮಸ್ ಔತಣಕೂಟದಲ್ಲಿ ಭಾಗಿಯಾಗಿದ್ದ ಕ್ರೈಸ್ತ ಮುಖಂಡರಿಂದ ಅಂತರ ಕಾಯ್ದುಕೊಂಡ 3000ಕ್ಕೂ ಹೆಚ್ಚು ಕ್ರೈಸ್ತರು ಬಿಡುಗಡೆ ಮಾಡಿರುವ ಹೇಳಿಕೆಯ ಮುಖ್ಯ ಒಕ್ಕಣಿಕೆ.
ಪ್ರಧಾನಿ ಆಮಂತ್ರಣವನ್ನು ಒಪ್ಪಿ ಹೋದವರು ಅದನ್ನು ಒಪ್ಪಿರುವುದು ನಮ್ಮ ಪರವಾಗಿ ಅಲ್ಲ ಎಂಬ ಸ್ಪಷ್ಟನೆ ಇದು . ಆತ್ಮಸಾಕ್ಷಿಗೆ ಒಪ್ಪಿ ನಡೆಯಬೇಕೇ ಹೊರತು ರಾಜಕೀಯ ಅವಕಾಶವಾದಿಯಾಗಿ ಅಲ್ಲ ಎಂಬ ಮಾತನ್ನೂ 'ನಾಟ್ ಇನ್ ಅವರ್ ನೇಮ್' ಸಹಿ ಅಭಿಯಾನದ ಪರವಿದ್ದ ಪಾದ್ರಿಗಳು ಹೇಳಿದ್ದಾರೆ.
ಎಂಥ ವಿಪರ್ಯಾಸವೆಂದರೆ, ತನ್ನ ನಿವಾಸದಲ್ಲಿ ಕ್ರಿಸ್ಮಸ್ ಔತಣಕೂಟ ಏರ್ಪಡಿಸಿ, ಆಯ್ದ ಕ್ರೈಸ್ತ ಮುಖಂಡರನ್ನು ಆಹ್ವಾನಿಸಿದ ಪ್ರಧಾನಿ, ಮಣಿಪುರ ಹಿಂಸಾಚಾರದಲ್ಲಿ ಕ್ರೈಸ್ತ ಸಮುದಾಯಕ್ಕಾದ ಅನ್ಯಾಯದ ಬಗ್ಗೆ ಇವತ್ತಿನವರೆಗೂ ಒಂದು ಶಬ್ದ ಮಾತನಾಡಿಲ್ಲ. ನೂರಾರು ಚರ್ಚ್ಗಳು ಭಸ್ಮವಾಗಿ ಹೋದ, ನೂರಾರು ಮಂದಿ ಸಾವಿಗೀಡಾದ ಮಣಿಪುರಕ್ಕೆ ಒಂದೇ ಒಂದು ಬಾರಿಯೂ ಭೇಟಿ ನೀಡಿ ಸಾಂತ್ವನ ಹೇಳಲೇ ಇಲ್ಲ.
ಆದರೆ ಟಿವಿ ಚಾನಲ್ ಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ ಕೊಡಬೇಕಲ್ವಾ ?. ಅದಕ್ಕೆ ಕೆಲವು ಕ್ರೈಸ್ತ ಮುಖಂಡರನ್ನು ತನ್ನ ನಿವಾಸಕ್ಕೆ ಔತಣಕ್ಕೆ ಕರೆಸಿ, ಕ್ರೈಸ್ತರನ್ನು ಹೊಗಳಿ ಭಾಷಣ ಮಾಡಿ, ಅವರೊಡನೆ ಕ್ಯಾಮೆರಾಕ್ಕೆ ಪೋಸು ಕೊಟ್ಟಿದ್ದಾರೆ ಪ್ರಧಾನಿ ಮೋದಿ . ಇದನ್ನೇ ಮೋದಿ ಆಮಂತ್ರಣ ಒಪ್ಪಿ ಔತಣದಲ್ಲಿ ಪಾಲ್ಗೊಂಡ ಕ್ರೈಸ್ತ ಮುಖಂಡರ ವಿರುದ್ಧ ನಿಂತ ಸಾವಿರಾರು ಕ್ರೈಸ್ತರು 'ನಾಟ್ ಇನ್ ಅವರ್ ನೇಮ್' ಸಹಿ ಅಭಿಯಾನದ ಮೂಲಕ ಕಟುವಾಗಿ ಟೀಕಿಸಿದ್ದಾರೆ.
ಮಣಿಪುರದಲ್ಲಿನ ಕ್ರೈಸ್ತ ಸಮುದಾಯದವರ ನೋವಿನ ಬಗ್ಗೆ ಕಿಂಚಿತ್ ಪಶ್ಚಾತ್ತಾಪವೂ ಇಲ್ಲದ ಪ್ರಧಾನಿ ಕ್ರಿಸ್ಮಸ್ ಆಚರಿಸಿ, ಭಾರೀ ಬಹುಪರಾಕ್ ಅನ್ನೂ ಪಡೆಯುತ್ತಾರೆ. ಯೇಸುಕ್ರಿಸ್ತನ ಬಗ್ಗೆ ಅಭಿಮಾನದಿಂದ ಮಾತನಾಡುತ್ತಾರೆ. ಕ್ರೈಸ್ತ ಮಿಷನರಿಗಳ ಕೊಡುಗೆಗಳನ್ನು ಕೊಂಡಾಡುತ್ತಾರೆ.
ಆದರೆ ಕ್ರೈಸ್ತರ ಬಗ್ಗೆ, ಮಿಷನರಿಗಳ ಬಗ್ಗೆ ಮೋದಿ ಹೇಳಿದ ಅದೇ ಪ್ರಶಂಸೆಯ ಮಾತುಗಳನ್ನು ಅವರ ಪಕ್ಷದ ನಾಯಕರು, ಸಂಘ ಪರಿವಾರದವರು ದೇಶಾದ್ಯಂತ ಹೇಳ್ತಾರಾ ?. ಕ್ರೈಸ್ತರ ಪ್ರಾರ್ಥನಾ ಸಭೆಗಳಿಗೆ ನುಗ್ಗಿ, ದಾಂಧಲೆ, ಹಲ್ಲೆ ನಡೆಸಿದ ಸಂಘ ಪರಿವಾರದವರು ಮೋದಿಯವರ ಮಾತನ್ನು ಪಾಲಿಸುತ್ತಾರಾ ?.
ಅವರ ಇಂಥದೊಂದು ರಾಜಕೀಯ ಗಿಮಿಕ್ಕಿನ ನಡುವೆ, ಈ ಅಬ್ಬರದ ಪ್ರಚಾರದ ಭರಾಟೆಯ ನಡುವೆ, ಕ್ರೈಸ್ತರಿಗೆ ಅವರು ಮಾಡಿರುವ ಅನ್ಯಾಯ ಮರೆತು ಹೋಗುವುದು ಸಾಧ್ಯವೆ?. ಮರೆಸಲಿಕ್ಕೆಂದೇ ಇಂಥ ಎಷ್ಟೇ ನಾಟಕವಾಡಿದರೂ ಅದು ಮರೆತುಹೋಗಲಾರದು. ಯಾಕೆಂದರೆ ಇವರು, ಇವರ ದ್ವೇಷ ರಾಜಕೀಯ ಮಾಡಿರುವುದು ಅಂಥ ಆರಲಾರದ ಗಾಯ.
ಈಗಲೂ ಹಾಗೆಯೇ ಆಗಿದೆ. ಮೋದಿ ಆಮಂತ್ರಣ ಒಪ್ಪಿ ಹೋದ ಕ್ರೈಸ್ತ ಮುಖಂಡರ ವಿರುದ್ಧವೇ ಕ್ರೈಸ್ತ ಸಮುದಾಯ ತೀವ್ರ ಅಸಮಾಧಾನಗೊಂಡಿದೆ. ಅದರ ವಿರುದ್ಧ ಸಾತ್ವಿಕ ಪ್ರತಿಭಟನೆ ತೋರಿಸಿದೆ. ಹೇಗೆಲ್ಲ ಕ್ರೈಸ್ತ ಸಮುದಾಯದ ವಿರುದ್ಧ ಮೋದಿ ದರ್ಬಾರಿನ ಪರಿವಾರದವರು ದಾಳಿ ಮಾಡುತ್ತಾರೆ ಎಂಬುದನ್ನು 'ನಾಟ್ ಇನ್ ಅವರ್ ನೇಮ್' ಅಭಿಯಾನದಲ್ಲಿ ಭಾಗಿಯಾದವರು ನೆನಪಿಸಿಕೊಂಡಿದ್ದಾರೆ.
ಮಣಿಪುರದಲ್ಲಿನ ದಾರುಣ ಕಥೆ ಮಾತ್ರವಲ್ಲ, ದೇಶದ ಬಹುತೇಕ ಕಡೆ ಕ್ರೈಸ್ತ ಸಮುದಾಯದ ವಿರುದ್ಧ ಏನು ನಡೆಯುತ್ತಿದೆ ಎಂಬುದನ್ನು ಅವರು ಹೇಳಿದ್ದಾರೆ. ಹುಟ್ಟುಹಬ್ಬ ಆಚರಣೆ, ಭಾನುವಾರದ ಪ್ರಾರ್ಥನೆಗಳಂಥ ನಿರುಪದ್ರವಿ ಚಟುವಟಿಕೆಗಳಿಗೂ ಕಾನೂನುಬಾಹಿರ ಮತಾಂತರದ ಆರೋಪದಡಿಯಲ್ಲಿ ತಡೆಯೊಡ್ಡಿ, ಪಾದ್ರಿಗಳನ್ನೂ ಕ್ರೈಸ್ತ ಸಮುದಾಯದವರನ್ನೂ ಜೈಲಿಗೆ ಹಾಕಲಾಗುತ್ತಿದೆ ಎಂಬುದನ್ನು ಅವರು ಉತ್ತರ ಪ್ರದೇಶದಲ್ಲಿನ ಉದಾಹರಣೆಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.
ಪ್ರಭಾವಿ ಹಿಂದುತ್ವ ಮುಖಂಡರು ಹೇಗೆ ಕ್ರೈಸ್ತ ಸಮುದಾಯಕ್ಕೆ ವ್ಯಾಪಕ ಕಿರುಕುಳ ಕೊಡುತ್ತಿದ್ದಾರೆ ಮತ್ತು ದ್ವೇಷವನ್ನು ಹಬ್ಬಿಸುತ್ತಿದ್ದಾರೆ ಎಂಬುದನ್ನು ವಿವರಿಸಿದ್ದಾರೆ. ಹಲವಾರು ಚರ್ಚ್ಗಳು ಮತ್ತು ಅವರ ಎನ್ಜಿಒಗಳಿಗೆ ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆಯಡಿಯಲ್ಲಿ ಸರ್ಕಾರ ಪರವಾನಗಿ ಹಿಂತೆಗೆದುಕೊಳ್ಳುತ್ತಿರುವುದನ್ನೂ ಟೀಕಿಸಲಾಗಿದೆ.
ಕ್ರಿಶ್ಚಿಯನ್ ಸಮುದಾಯದ ವಿರುದ್ಧ ಹೇಗೆ ವ್ಯವಸ್ಥಿತ ಪಿತೂರಿ ನಡೆದಿದೆ ಎಂಬುದನ್ನು ಗಮನಕ್ಕೆ ತರಲಾಗಿದೆ. 2014ರಿಂದಲೂ ಭಾರತದಲ್ಲಿನ ಕ್ರಿಶ್ಚಿಯನ್ನರು ಪದೇ ಪದೇ ಉದ್ದೇಶಿತ ದಾಳಿಗಳು ಮತ್ತು ನಿಂದನೆಗೆ ಒಳಗಾಗಿದ್ದಾರೆ ಎಂದು ಈ ಖಂಡನೆಯಲ್ಲಿ ದಾಖಲಿಸಲಾಗಿದೆ.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಜಾರಿಗೆ ತಂದಿರುವ ಮತಾಂತರ ವಿರೋಧಿ ಕಾನೂನುಗಳು ಸಮುದಾಯದ ವಿರುದ್ಧ ತಾರತಮ್ಯದ ಸಾಧನವಾಗಿ ಬಳಕೆಯಾಗುತ್ತಿವೆ. ಸರ್ಕಾರದ ನಡೆಯಿಂದಾಗಿ, ಅದರ ರಾಜಕೀಯ ಧೋರಣೆಯಿಂದಾಗಿ ಕ್ರಿಶ್ಚಿಯನ್ ಸಮುದಾಯ ಎದುರಿಸುತ್ತಿರುವ ಸವಾಲುಗಳನ್ನು ಮರೆಯಲು ಸಾಧ್ಯವಿಲ್ಲ.
ಪ್ರಧಾನಿಯಾಗಿ ಯಾರಿಗೆ ಬೇಕಾದರೂ ಔತಣವೇರ್ಪಡಿಸಲು ಅವರಿಗೆ ಹಕ್ಕಿದೆಯಾದರೂ, ತಮ್ಮದೇ ಸರ್ಕಾರದಲ್ಲಿ ಕ್ರಿಶ್ಚಿಯನ್ನರ ಮೇಲಿನ ಒಂದೇ ಒಂದು ದಾಳಿಯನ್ನು ಖಂಡಿಸದಿರುವಾಗ, ಈ ಔತಣಕೂಟದ ಉದ್ದೇಶವನ್ನು ಯಾರೇ ಆದರೂ ಪ್ರಶ್ನಿಸುತ್ತಾರೆ.
ಕ್ರಿಸ್ತನನ್ನು, ಕ್ರೈಸ್ತ ಸಮುದಾಯದ ಸೇವೆಗಳನ್ನು ಹೊಗಳಿದರೂ, ದೇಶದಲ್ಲಿನ ಕ್ರೈಸ್ತರ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಯಾವುದೇ ಕಳವಳ ಅಥವಾ ಸಹಾನುಭೂತಿ ತೋರಿಸಿಲ್ಲ ಎಂಬುದನ್ನು ಗಮನಿಸದೇ ಇರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಲಾಗಿದೆ. ಔತಣಕ್ಕೆ ಪ್ರಧಾನಿ ಆಹ್ವಾನಿಸಿದಾಗ, ಮಣಿಪುರ ಮತ್ತು ಇತರೆಡೆಗಳಲ್ಲಿ ಕ್ರಿಶ್ಚಿಯನ್ನರಿಗೆ ಏನಾಗುತ್ತಿದೆ ಎಂಬುದರ ಹಿನ್ನೆಲೆಯಲ್ಲಿ ಆಹ್ವಾನವನ್ನು ಸೌಜನ್ಯದಿಂದಲೇ ತಿರಸ್ಕರಿಸಬಹುದಿತ್ತು ಎಂದು ಈ ಖಂಡನಾ ಹೇಳಿಕೆಯಲ್ಲಿ ಹೇಳಲಾಗಿದೆ.
ಆದರೆ ಹಾಗೆ ಮಾಡದೆ ಔತಣದಲ್ಲಿ ಭಾಗಿಯಾಗುವ ಮೂಲಕ ಕ್ರೈಸ್ತ ಪ್ರತಿನಿಧಿಗಳು ಈ ಸರ್ಕಾರದ ಎಲ್ಲಾ ತಪ್ಪುಗಳನ್ನು ಪರೋಕ್ಷವಾಗಿ ಸಮ್ಮತಿಸಿದಂತಾಗಿದೆ. ಹಾಗಾಗಿಯೇ ಇದು 'ನಾಟ್ ಇನ್ ಅವರ್ ನೇಮ್' ಎನ್ನಲಾಗಿದೆ. ಈ ಅಭಿಯಾನ ಬೆಂಬಲಿಸದಂತೆಯೂ ಕ್ರೈಸ್ತ ಮುಖಂಡರಿಂದಲೇ ಕರೆ ಬಂದಾಗ, ವಾರಣಾಸಿಯ ಪಾದ್ರಿ ಫಾದರ್ ಆನಂದ್ ಅದನ್ನು ಬಹಿರಂಗ ಪತ್ರದ ಮೂಲಕವೇ ಪ್ರಬಲವಾಗಿ ಖಂಡಿಸಿದ್ದಾರೆ.
ಏಕೆ ಈ ಸರ್ಕಾರದ ನೇತೃತ್ವ ವಹಿಸಿರುವವರ ವಿಚಾರದಲ್ಲಿ ಎಚ್ಚರವಾಗಿರಬೇಕಿದೆ ಎಂಬುದನ್ನು ಅವರು ಹೇಳಿದ್ದಾರೆ. ಅವರ ಪತ್ರದಲ್ಲಿನ ಕೆಲವು ಉಲ್ಲೇಖಗಳನ್ನು ಗಮನಿಸಬೇಕು. ಎಚ್ಚರವಾಗಿರಬೇಕಿರುವುದು, ಎರಡು ದಶಕಗಳ ಹಿಂದೆ ಗುಜರಾತ್ ಹತ್ಯಾಕಾಂಡದಲ್ಲಿ ಬಲಿಯಾದ ಸಾವಿರಾರು ಅಮಾಯಕ ಮುಸ್ಲಿಮರ ನೆತ್ತರ ಕಲೆಗಳು ಯಾರ ಕೈಗೆ ಅಂಟಿವೆಯೊ ಅವರ ಬಗ್ಗೆ. ಕಳೆದ ಹತ್ತು ವರ್ಷಗಳಿಂದ ಅಚ್ಛೇ ದಿನ್ ಮತ್ತು ಇತರ ಅಸಂಖ್ಯಾತ ಸುಳ್ಳು ಭರವಸೆಗಳ ಮೂಲಕ ಈ ದೇಶವನ್ನು ಯಾರು ವಂಚಿಸಿದ್ದಾರೊ ಅವರ ಬಗ್ಗೆ. ಹಣದುಬ್ಬರ ಅದರ ತೀವ್ರ ಮಟ್ಟ ಮುಟ್ಟಲು ಮತ್ತು ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ಅತ್ಯಂತ ಕೆಳಮಟ್ಟಕ್ಕೆ ಕುಸಿಯಲು ಯಾರು ಕಾರಣರೊ ಅವರ ಬಗ್ಗೆ,
ರಾಷ್ಟ್ರದ ನೈಸರ್ಗಿಕ ಸಂಪನ್ಮೂಲಗಳು, ಏರ್ಪೋರ್ಟ್ಗಳು, ಬಂದರುಗಳು, ರೈಲು ನಿಲ್ದಾಣಗಳು, ಸಮುದ್ರ ಮತ್ತು ಸಮುದ್ರ ತೀರಗಳನ್ನು ಯಾರು ತನ್ನ ಕ್ರೋನಿ ಬಂಡವಾಳಶಾಹಿ ಗೆಳೆಯನಿಗೆ ಹೆಚ್ಚು ಕಡಿಮೆ ಪೂರ್ತಿ ಒಪ್ಪಿಸಿಬಿಟ್ಟಿದ್ದಾರೊ ಅವರ ಬಗ್ಗೆ. ಭಾರತದ ಲಕ್ಷಾಂತರ ರೈತರು, ಮೀನುಗಾರರು ಮತ್ತು ಅಸಂಘಟಿತ ಕಾರ್ಮಿಕರ ಜೀವನ ಮತ್ತು ಭವಿಷ್ಯವನ್ನು ಯಾರು ಕಸಿದುಕೊಂಡಿದ್ದಾರೊ ಅವರ ಬಗ್ಗೆ.
ಮಣಿಪುರದ ಕ್ರಿಶ್ಚಿಯನ್ನರು, ದಲಿತರು ಮತ್ತು ಬುಡಕಟ್ಟು ಜನಾಂಗದವರು ಸೇರಿದಂತೆ ಅಲ್ಪಸಂಖ್ಯಾತರ ಮೇಲಿನ ಗುಂಪು ಹತ್ಯೆ ಮತ್ತು ಹಿಂಸಾಚಾರದ ಬಗ್ಗೆ ಯಾವ ವ್ಯಕ್ತಿ ಶಾಶ್ವತವಾಗಿ ಮೌನವಾಗಿದ್ದಾರೊ ಅವರ ಬಗ್ಗೆ. ದೇಶದ ಪ್ರಜಾಪ್ರಭುತ್ವವನ್ನು ನಾಶಪಡಿಸಿ, ಯಾರು ಧರ್ಮದ ಹೆಸರಿನ ಮತ್ತು ಬಹುಸಂಖ್ಯಾತರ ಆಟಾಟೋಪಕ್ಕೆ ಅವಕಾಶ ಮಾಡಿದ್ದಾರೊ ಅವರ ಬಗ್ಗೆ. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಯಾರು ಪೂರ್ತಿ ನಾಶಪಡಿಸಿದ್ದಾರೊ ಅವರ ಬಗ್ಗೆ…
ಹೀಗೆ ಅವರು ಮೋದಿ ಸರ್ಕಾರ ಏನೇನು ಅನ್ಯಾಯ ಮಾಡಿದೆ ಎಂದು ಪಟ್ಟಿ ಮಾಡಿದ್ದಾರೆ. ಇನ್ನೂ ಹೇಳಬಹುದಾದದ್ದು ಇದೆ ಎಂದೂ ಸೂಚಿಸಿದ್ದಾರೆ. ಯಾರು 'ನಾಟ್ ಇನ್ ಅವರ್ ನೇಮ್' ಅಭಿಯಾನಕ್ಕೆ ತಡೆಯೊಡ್ಡಲು ಬಯಸಿದ್ದರೊ ಆ ಕ್ರೈಸ್ತ ಮುಖಂಡರಿಗೆ ವಾರಣಾಸಿಯ ಪಾದ್ರಿ ಫಾದರ್ ಆನಂದ್ ಇನ್ನೂ ಒಂದು ಬಹಿರಂಗ ಆಹ್ವಾನ ಕೊಟ್ಟಿದ್ದಾರೆ.
ದಯವಿಟ್ಟು ವಾರಣಾಸಿಗೆ ಬನ್ನಿ, ಗಾಂಧಿ, ಗಾಂಧಿಯ ಅನುಯಾಯಿಗಳು ಮತ್ತು ಅವರು ಸಂಪೂರ್ಣವಾಗಿ ಅಳಿಸಲು ಬಯಸುವ ಗಾಂಧಿ ಪರಂಪರೆಯ ಮೇಲಿನ ಅವರ ಕ್ರೂರ ದೌರ್ಜನ್ಯವನ್ನು ನಾನು ನಿಮಗೆ ತೋರಿಸುತ್ತೇನೆ ಎಂದು ಹೇಳಿದ್ದಾರೆ. ದೇಶವನ್ನು ಹಿಂದೂ ರಾಷ್ಟ್ರವಾಗಿ ಮಾಡಹೊರಟವರ ಜಾಣತನ ನಿಮಗೆ ಗೊತ್ತಾಗುವುದಿಲ್ಲವೆ? ಇನ್ನೂ ಜಾಣ ಕುರುಡರಂತೆಯೇ ವರ್ತಿಸುತ್ತೀರಾ ಎಂದೂ ಕೇಳಿದ್ಧಾರೆ.
ಅವರ ಆ ಬಹಿರಂಗ ಪತ್ರದಲ್ಲಿ, 'ನಾಟ್ ಇನ್ ಅವರ್ ನೇಮ್' ಅಭಿಯಾನದ ಹೇಳಿಕೆಯಲ್ಲಿ ಪ್ರತಿಪಾದಿಸಲಾಗಿರುವುದು, ಹೇಗೆ ಈ ದೇಶದ ಅಲ್ಪಸಂಖ್ಯಾತರನ್ನು ದಮನಿಸಲಾಗುತ್ತಿದೆ ಮತ್ತು ಅವರು ನೆಮ್ಮದಿಯಿಂದ ಬಾಳಲಾರದ ಸನ್ನಿವೇಶವನ್ನು ನಿರ್ಮಿಸಲಾಗುತ್ತಿದೆ ಎಂಬ ಕರಾಳ ಸತ್ಯವನ್ನೇ. ದಿ ವೈರ್ ವರದಿ ಮಾಡಿದ್ದಂತೆ, 2011 ಮತ್ತು 2022 ರ ನಡುವೆ ಭಾರತದಲ್ಲಿ ಕ್ರಿಶ್ಚಿಯನ್ನರ ವಿರುದ್ಧದ ದಾಳಿಗಳು ನಾಲ್ಕು ಪಟ್ಟು ಹೆಚ್ಚಾಗಿವೆ.
ದುರಂತವೆಂದರೆ, ಅನೇಕ ಸಂದರ್ಭಗಳಲ್ಲಿ ಪೊಲೀಸರು ಅಪರಾಧಿಗಳ ಬದಲು, ಹಿಂಸಾಚಾರ ಸಂತ್ರಸ್ತರ ವಿರುದ್ಧವೇ ಕೇಸ್ ದಾಖಲಿಸುತ್ತಾರೆ.
ಮೋದಿ ಔತಣಕೂಟದಲ್ಲಿ ಪಾಲ್ಗೊಂಡು, ಅದನ್ನು ತಮ್ಮ ಪಾಲಿನ ಹೆಮ್ಮೆ ಎಂದು ಭ್ರಮಿಸಿದವರಿಗೆ ಸಮುದಾಯಕ್ಕೆ ಆಗುತ್ತಿರುವ ಈ ಅನ್ಯಾಯ, ಈ ಕಟು ವಾಸ್ತವ ಕಾಣಿಸಲಿಲ್ಲವೆ? ಅಥವಾ ಕಾಣಿಸುವುದೂ ಇಲ್ಲವೆ?