ಫೈನಲ್ ನಲ್ಲಿ ಎಡವಿದ ಟೀಮ್ ಇಂಡಿಯಾ, ಆಸಿಸ್ ಮತ್ತೆ ವಿಶ್ವ ಚಾಂಪಿಯನ್
► ಅಜೇಯ ಭಾರತವನ್ನು ಕಾಂಗರೂ ಪಡೆ ಸೋಲಿಸಿದ್ದು ಹೇಗೆ ? ► ಕಪ್ ಗೆಲ್ಲದಿದ್ದರೂ ಇಡೀ ಟೂರ್ನಿಯಲ್ಲಿ ಮಿಂಚಿದ ಬ್ಲೂ ಬಾಯ್ಸ್
Photo: PTI
ಐಸಿಸಿ ಏಕದಿನ ವಿಶ್ವಕಪ್ ಅಭಿಯಾನದಲ್ಲಿ ಭಾರತಕ್ಕೆ ಸೋಲಾಗಿದೆ. ಆದರೆ ಅದು ವೀರೋಚಿತ ಸೋಲು ಎಂಬುದರಲ್ಲಿ ಎರಡು ಮಾತಿಲ್ಲ.
ಗೆದ್ದರೆ ಭಾರತದ ಪಾಲಿಗೆ ಇದು ಮೂರನೇ ವಿಶ್ವಕಪ್ ಕಿರೀಟವಾಗಿರುತ್ತಿತ್ತು. ಆಸ್ಟ್ರೇಲಿಯಾ ಆರನೇ ಬಾರಿಗೆ ವಿಶ್ವಕಪ್ ಗೆದ್ದು ಬಿಗಿದೆ.
ಆತಿಥೇಯ ಭಾರತದೆದುರು 6 ವಿಕೆಟ್ ಅಂತರದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, ಆರನೇ ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿತು. ಆಸ್ಟ್ರೇಲಿಯಾ ತಂಡಕ್ಕೆ ನಿನ್ನೆಯ ಅವರ ಅದ್ಭುತ ಆಟಕ್ಕಾಗಿ ಮೊದಲು ಅಭಿನಂದನೆ ಹೇಳೋಣ.
ಒಂದು ಇಂಟರೆಸ್ಟಿಂಗ್ ಸಂಗತಿ ಏನೆಂದರೆ, ಈ ಟೂರ್ನಿಯಲ್ಲಿ ಭಾರತ ಆಡಿದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಜಯ ಸಾಧಿಸಿತ್ತು. ಮತ್ತೆ ಇವೆರಡೂ ತಂಡಗಳು ಮುಖಾಮುಖಿಯಾದದ್ದು ಫೈನಲ್ನಲ್ಲಿಯೇ. ಫೈನಲ್ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 6 ವಿಕೆಟ್ಗಳ ಜಯ ಸಾಧಿಸಿತು ಮತ್ತು ಆರಕ್ಕೇರಿತು.
ಇನ್ನು ಪಂದ್ಯದ ವಿಚಾರಕ್ಕೆ ಬರೋದಾದರೆ, ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಭಾರತ, ನಿಗದಿತ 50 ಓವರ್ಗಳಲ್ಲಿ 240ಕ್ಕೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 4 ವಿಕೆಟ್ ಕಳೆದುಕೊಂಡು ಇನ್ನೂ 7 ಓವರ್ಗಳು ಬಾಕಿಯಿರುವಾಗಲೇ ಜಯದ ನಗೆ ಬೀರಿತು. ಟ್ರಾವಿಸ್ ಹೆಡ್ ಗಳಿಸಿದ ಅಮೋಘ ಶತಕ ಆಸಿಸ್ಗೆ ದೊಡ್ಡ ಬಲವಾಗಿ ಒದಗಿತ್ತು.
ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಶಿಸ್ತಿನ ಬೌಲಿಂಗ್ ಸಂಘಟಿಸಿತ್ತು. ಅದರ ಫೀಲ್ಡಿಂಗ್ ಅಂತೂ ಅತ್ಯದ್ಭುತ ಎಂಬಂತಿತ್ತು.
ಹಾಗಾಗಿ ಸಾಧಾರಣ ಮೊತ್ತಕ್ಕೇ ಭಾರತವನ್ನು ಕಟ್ಟಿಹಾಕುವುದು ಅದಕ್ಕೆ ಸಾಧ್ಯವಾಯಿತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಬಿಟ್ಟರೆ ಬೇರಾರಿಗೂ ಆಸಿಸ್ ಬೌಲಿಂಗ್ ಎದುರು ತಡೆದು ನಿಲ್ಲುವುದು ಆಗಲೇ ಇಲ್ಲ. ಶುಭಮನ್ ಗಿಲ್, ಶ್ರೇಯಸ್ ಐಯ್ಯರ್, ರವೀಂದ್ರ ಜಡೇಜಾರಂತಹ ಬ್ಯಾಟರ್ ಗಳು ವಿಫಲರಾದರು. ಸೂರ್ಯ ಕುಮಾರ್ ಯಾದವ್ ಕೂಡ ಹೆಚ್ಚೇನೂ ಮಾಡಲಾಗಲಿಲ್ಲ. ಆಸ್ಟ್ರೇಲಿಯಾ ಬೌಲರ್ಗಳ ಶಿಸ್ತಿನ ಬೌಲಿಂಗ್ ಎದುರು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು ಭಾರತದ ಹಿನ್ನಡೆಗೆ ಕಾರಣವಾಯಿತು.
ಭಾರತದ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲಿ ಕುಂಟಿದ್ದು ನಿಜ. ವೇಗಿಗಳಾದ ಬೂಮ್ರ ಮತ್ತು ಮೊಹಮ್ಮದ್ ಶಮಿ ನೀಡಿದ ಆಘಾತಕ್ಕೆ ಡೇವಿಡ್ ವಾರ್ನರ್, ಮಿಚೇಲ್ ಮಾರ್ಷ್, ಸ್ಟೀವ್ ಸ್ಮಿತ್ ಔಟಾದರು. ಮೂವರೂ ತಂಡದ ಅತ್ಯಂತ ಪ್ರಮುಖ ಬ್ಯಾಟರ್ ಗಳು.
ಆಗ ಆಸಿಸ್ ಮೊತ್ತ ಬರೀ 47 ಇತ್ತು. ಆದರೆ ಅನಂತರ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಾಬುಷೇನ್ ಜೊತೆಯಾಟ ಭಾರತದ ಬೌಲರ್ಗಳ ಬೆವರಿಳಿಸಿಬಿಟ್ಟಿತು. ಇವರಿಬ್ಬರ ಪಾಲುದಾರಿಕೆಯಲ್ಲಿ ಬಂದ 192 ರನ್ಗಳು ತಂಡಕ್ಕೆ ಜಯ ತಂದುಕೊಟ್ಟವು.
3ನೇ ಸಲ ಪ್ರಶಸ್ತಿ ಗೆಲ್ಲುವ ಭಾರತದ ಕನಸು ಭಗ್ನವಾಯಿತು.
ಆಸ್ಟ್ರೇಲಿಯಾ ಪಡೆಯ ಬ್ಯಾಟರ್ಗಳನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಬೇಕಾದ ಒತ್ತಡವೂ ಭಾರತದ ಬೌಲರ್ಗಳ ಮೇಲಿದ್ದುದು ಈ ಸೋಲಿನಲ್ಲಿ ಪಾತ್ರ ವಹಿಸಿದೆ. ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ 1 ಲಕ್ಷ 30 ಸಾವಿರ ಅಭಿಮಾನಿಗಳ ಎದುರು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರೋಚಕ ವಿಶ್ವಕಪ್ ಫೈನಲ್ ಪಂದ್ಯ ನಡೆಯಿತು.
ಆಸ್ಟ್ರೇಲಿಯಾ ತಂಡಕ್ಕೆ ಟೀಂ ಇಂಡಿಯಾ ಆಟಗಾರರ ಸವಾಲಷ್ಟೇ ಅಲ್ಲ, ಲಕ್ಷಾಂತರ ಅಭಿಮಾನಿಗಳ ಸವಾಲು ಕೂಡ ಇತ್ತು.
ವಿಶ್ವಕಪ್ ಉದ್ದಕ್ಕೂ ಅಜೇಯವಾಗಿದ್ದ ಭಾರತ ತಂಡ ಫೈನಲ್ ಪಂದ್ಯವನ್ನು ಗೆದ್ದೇ ಗೆಲ್ಲುತ್ತದೆ ಎಂದೇ ಎಲ್ಲರೂ ಹೇಳುತ್ತಿದ್ದರು.
ಈ ಲಕ್ಷಾಂತರ ಅಭಿಮಾನಿಗಳನ್ನು ಮೌನವಾಗಿಸುವುದೇ ನಮ್ಮ ಗುರಿ ಎಂದು ಹೇಳಿಕೊಂಡೇ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಆಟಕ್ಕಿಳಿದಿದ್ದರು. ಅವರ ಆತ್ಮವಿಶ್ವಾಸದ ಮಾತುಗಳು ಸುಳ್ಳಾಗಲಿಲ್ಲ.
240ಕ್ಕೆ ಭಾರತ ಆಲೌಟ್ ಆದಾಗಲೇ ಗೆಲ್ಲುವುದರ ಬಗ್ಗೆ ಅನುಮಾನ ಕಾಡತೊಡಗಿತ್ತು. ಯಾಕೆಂದರೆ, ಈ ಬಾರಿಯ ಟೂರ್ನಿಯಲ್ಲಿ ಎರಡು ತಂಡಗಳು ಮಾತ್ರವೇ ಮೊದಲು ಬ್ಯಾಟಿಂಗ್ ಮಾಡಿ 250ಕ್ಕಿಂತ ಕಡಿಮೆ ರನ್ ಗಳಿಸಿಯೂ ಗೆದ್ದಿದ್ದವು. ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ಸ್ ಎರಡು ಸಲ ಇಂಥ ಗೆಲುವು ಸಾಧಿಸಿದ್ದರೆ, ಭಾರತವೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆದ್ದಿತ್ತು.
ಆದರೆ ಅಕ್ಟೋಬರ್ 29ರ ಆ ಪಂದ್ಯದಲ್ಲಿ ಭಾರತದ 229 ರನ್ಗಳ ಸುಲಭ ಗುರಿ ಬೆನ್ನತ್ತಿದ್ದ ಆಂಗ್ಲರು ಇನ್ನೂ ಹೀನಾಯವಾಗಿ, 129 ರನ್ಗಳಿಗೇ ಸೋಲೊಪ್ಪಿಕೊಂಡಿದ್ದರು. ಆಸ್ಟ್ರೇಲಿಯಾವನ್ನು ಹಾಗೆ ಕಟ್ಟಿಹಾಕುವುದು ಮಾತ್ರ ಭಾರತದಿಂದ ಸಾಧ್ಯವಾಗಲಿಲ್ಲ. ಟೂರ್ನಿಯಲ್ಲಿ ಎಲ್ಲ ವಿಭಾಗದಲ್ಲೂ ಅಮೋಘ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಫೈನಲ್ಗೆ ಲಗ್ಗೆ ಇಟ್ಟಿತ್ತು. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ತನ್ನದೇ ಛಾಪು ಮೂಡಿಸಿತ್ತು.
ವಿಶ್ವಕಪ್ ಟೂರ್ನಿಯ ಫೈನಲ್ವರೆಗಿನ ರೋಚಕ ಯಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳದ್ದು ಅವುಗಳದ್ದೇ ಆದ ವಿಶಿಷ್ಟತೆ.
ಈ ಟೂರ್ನಿಯಲ್ಲಿ ಸೋಲನ್ನೇ ಕಾಣದೆ ಫೈನಲ್ಗೆ ಲಗ್ಗೆಯಿಟ್ಟಿದ್ದು ಭಾರತ. ಫೈನಲ್ ಪ್ರವೇಶಕ್ಕೆ ಮೊದಲು ಸತತ 10 ಪಂದ್ಯಗಳಲ್ಲಿ ಗೆದ್ದು ವಿಶ್ವಾಸದ ಅಲೆಯಲ್ಲಿ ತೇಲಿತ್ತು ಭಾರತ.
ಆದರೆ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲೇ ಮುಗ್ಗರಿಸಿದ್ದ ಆಸ್ಟ್ರೇಲಿಯಾ, ಬಳಿಕ ಮೈಕೊಡವಿ ಎದ್ದಿತ್ತು. ಕಡೆಗೂ ಅದು ಆತಿಥೇಯರನ್ನು ಮಣಿಸಿ ಆರನೇ ಬಾರಿಗೆ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡಿದೆ. ಈ ಬಾರಿ ವಿಶ್ವಕಪ್ ನಮ್ದೇ ಎಂಬ ಅತಿ ಆತ್ಮ ವಿಶ್ವಾಸದಲ್ಲಿದ್ದ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ.
ಭಾರತಕ್ಕೆ ವಿಶ್ವಕಪ್ನಲ್ಲಿ ಇದು ನಾಲ್ಕನೇ ಫೈನಲ್ ಪಂದ್ಯವಾಗಿತ್ತು. ಈವರೆಗೆ ಮೂರು ಬಾರಿಯಷ್ಟೇ ಫೈನಲ್ ಪ್ರವೇಶಿಸಿದ್ದ ಭಾರತ ಎರಡು ಬಾರಿ ವಿಶ್ವಕಪ್ ಗೆದ್ದಿತ್ತು. ಮೊಲದ ಬಾರಿ ಭಾರತ ವಿಶ್ವಕಪ್ ಫೈನಲ್ ತಲುಪಿದ್ದು ಇಂಗ್ಲೆಂಡ್ನಲ್ಲಿ ನಡೆದ 1983ರ ವಿಶ್ವಕಪ್ನಲ್ಲಿ.
ಆಗ ಭಾರತ ತಂಡಕ್ಕೆ ಕಪಿಲ್ ದೇವ್ ನಾಯಕತ್ವ. ಸಾಮಾನ್ಯ ತಂಡವಾಗಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿ ಅಚ್ಚರಿ ಮೂಡಿಸಿತ್ತು. ಮಾತ್ರವಲ್ಲ, ಸುಲಭ ಜಯದ ಕನಸು ಕಂಡಿದ್ದ ಬಲಿಷ್ಠ ವೆಸ್ಟಿಂಡೀಸ್ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡು ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿತ್ತು.
ಅದಾದ ಬಳಿಕ ಮತ್ತೆ ಭಾರತಕ್ಕೆ ಫೈನಲ್ ಪ್ರವೇಶಿಸಲು 20 ವರ್ಷಗಳೇ ಬೇಕಾದವು. 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಆಡಿದ್ದ ಭಾರತ ಫೈನಲ್ ಪ್ರವೇಶಿಸಿತಾದರೂ, ಆಸ್ಟ್ರೇಲಿಯಾ ಎದುರು ಸೋಲು ಕಂಡಿತ್ತು. ಮತ್ತೊಮ್ಮೆ ಭಾರತ ವಿಶ್ವಕಪ್ ಫೈನಲ್ ಮುಟ್ಟಿದ್ದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ. ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಜಂಟಿ ಆತಿಥ್ಯದಲ್ಲಿ ನಡೆದ 2011ರ ಟೂರ್ನಿಯಲ್ಲಿ ಭಾರತ ಎರಡನೇ ಸಲ ವಿಶ್ವಕಪ್ ಗೆದ್ದಿತ್ತು.
ಈ ಸಲ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿದ್ದ ಟೀಂ ಇಂಡಿಯಾ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಮತ್ತು ಭಾರತ ತಂಡದ ಆಟ ಸತತವಾಗಿ ಕ್ರಿಕಟ್ ದಿಗ್ಗಜರ ಮೆಚ್ಚುಗೆಗೆ ಪಾತ್ರವಾಗಿತ್ತು. ಟೂರ್ನಿಯಲ್ಲಿ ಅಧಿಕ ರನ್, ಅಧಿಕ ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ಟೀಂ ಇಂಡಿಯಾ ಆಟಗಾರರೇ ಅಗ್ರ ಸ್ಥಾನದಲ್ಲಿದ್ದರು. ಬ್ಯಾಟರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮುನ್ನಡೆ ಸಾಧಿಸಿದ್ದರೆ, ಬೌಲರ್ಗಳ ವಿಭಾಗದಲ್ಲಿ ಮೊಹಮ್ಮದ್ ಶಮಿ ಮುನ್ನಡೆಯಲ್ಲಿದ್ದರು.
ಫೈನಲ್ಗೂ ಮೊದಲು ಕೊಹ್ಲಿ ಆಡಿದ್ದ 10 ಇನ್ನಿಂಗ್ಸ್ಗಳಲ್ಲಿ 3 ಶತಕ ಹಾಗೂ 5 ಅರ್ಧಶತಕ ಸಹಿತ 711 ರನ್ ಗಳಿಸಿದ್ದರು.
ಅದು ವಿಶ್ವಕಪ್ ಟೂರ್ನಿಯೊಂದರಲ್ಲಿ ಬ್ಯಾಟರ್ ಒಬ್ಬ ಗಳಿಸಿದ ಅತ್ಯಧಿಕ ಮೊತ್ತವಾಗಿ ದಾಖಲಾಯಿತು. ಇದಲ್ಲದೆ ಫೈನಲ್ ಪಂದ್ಯದಲ್ಲೂ ಕೊಹ್ಲಿ ಅರ್ಧಶತಕ ಸಿಡಿಸಿದರು. ಇನ್ನು ಶಮಿ, ಫೈನಲ್ ಪಂದ್ಯವೂ ಸೇರಿ ಆಡಿದ ಏಳು ಪಂದ್ಯಗಳಲ್ಲಿ ಮೂರು ಬಾರಿ 5 ವಿಕೆಟ್ ಸಾಧನೆಯೊಂದಿಗೆ 24 ವಿಕೆಟ್ಗಳನ್ನು ಬಾಚಿದರು.
ಕೊಹ್ಲಿ ದಾಖಲೆಗಳನ್ನು ನೋಡುವುದಾದರೆ, 2023ರ ವಿಶ್ವಕಪ್ನಲ್ಲಿ 11 ಪಂದ್ಯಗಳಲ್ಲಿ ಕೊಹ್ಲಿ 9 ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದು, ಇದರಲ್ಲಿ 3 ಶತಕಗಳೂ ಸೇರಿವೆ. ಸತತ 6 ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದು ವಿಶೇಷ. ವಿಶ್ವಕಪ್ ಟೂರ್ನಿಯೊಂದರ ಸೆಮಿ ಫೈನಲ್, ಫೈನಲ್ನಲ್ಲಿ ಅರ್ಧಶತಕ ಸಿಡಿಸಿದ 8ನೇ ಬ್ಯಾಟರ್ ಎಂಬ ಹೆಗ್ಗಳಿಕೆ. ಒಂದೇ ವಿಶ್ವಕಪ್ನಲ್ಲಿ 765 ರನ್ ಗಳಿಕೆಯೊಂದಿಗೆ, ಒಂದೇ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ 50 ಶತಕ ದಾಖಲಿಸುವುದರೊಂದಿಗೆ ಸಚಿನ್ ಅವರ ಹೆಸರಲ್ಲಿದ್ದ ಅತೀ ಹೆಚ್ಚು ಶತಕದ ಸಚಿನ್ ದಾಖಲೆ ಸರಿಗಟ್ಟಿ ವಿಶ್ವದಾಖಲೆ.
ಇನ್ನು ನಾಯಕ್ ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯುದ್ದಕ್ಕೂ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ರೋಹಿತ್ ದಾಖಲೆಗಳನ್ನು ನೋಡುವುದಾದರೆ, ವಿಶ್ವಕಪ್ನ 11 ಪಂದ್ಯಗಳಲ್ಲಿ ಅವರು 597 ರನ್ ಗಳಿಸಿದ್ದು, ಇದರಲ್ಲಿ ಒಂದು ಶತಕ, 3 ಅರ್ಧಶತಕಗಳೂ ಸೇರಿವೆ. ಏಕದಿನ ವಿಶ್ವಕಪ್ ಟೂರ್ನಿಯೊಂದರಲ್ಲಿ ನಾಯಕನಾಗಿ ಅತ್ಯಧಿಕ ರನ್ ಗಳಿಸಿದ ಹೆಗ್ಗಳಿಕೆ ಅವರದಾಗಿದೆ.
ಒಂದೇ ವಿಶ್ವಕಪ್ನಲ್ಲಿ ಅಧಿಕ ಸಿಕ್ಸ್ ಗಳಿಸಿದ ಶ್ರೇಯಸ್ಸು ಕೂಡ ರೋಹಿತ್ ಪಾಲಾಗಿದೆ. ಈ ವಿಶ್ವಕಪ್ನಲ್ಲಿ ಅವರು 31 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಒಂದೇ ವಿಶ್ವಕಪ್ ಟೂರ್ನಿಯಲ್ಲಿ ಯಾರೊಬ್ಬರೂ ಈ ಹಿಂದೆ ಇಷ್ಟು ಸಿಕ್ಸ್ ಬಾರಿಸಿದ್ದಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ 3 ಸಿಕ್ಸರ್ಗಳನ್ನು ಸಿಡಿಸುವ ಮೂಲಕ, ಆಸಿಸ್ ವಿರುದ್ಧ ಅವರು ಒಟ್ಟು 86 ಸಿಕ್ಸರ್ ಬಾರಿಸಿದಂತಾಯಿತು. ಒಂದೇ ಎದುರಾಳಿ ತಂಡದ ವಿರುದ್ಧ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.
ಇನ್ನು ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ನ ಅತ್ಯಂತ ಯಶಸ್ವೀ ತಂಡ ಎನಿಸಿದೆ. ಈ ಸಲ ಅದು ಆಡಿದ್ದು 8ನೇ ವಿಶ್ವಕಪ್ ಫೈನಲ್.
ಈವರೆಗೆ ಆಡಿದ್ದ 7ರಲ್ಲಿ 5 ಸಲ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. 1975ರಲ್ಲಿ ನಡೆದ ವಿಶ್ವಕಪ್ ಮೊದಲ ಟೂರ್ನಿಯಲ್ಲಿಯೇ ಫೈನಲ್ಗೇರಿತ್ತು ಆಸ್ಟ್ರೇಲಿಯಾ. ಆದರೆ ಆಗ ಪ್ರಶಸ್ತಿ ಸಿಕ್ಕಿರಲಿಲ್ಲ. ಅದಾದ 12 ವರ್ಷಗಳ ಬಳಿಕ, 1987ರಲ್ಲಿ ಮೊದಲ ಸಲ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಿತ್ತು.
ಅನಂತರ 1999, 2003, 2007ರಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದಿದ್ದು ಆಸ್ಟ್ರೇಲಿಯಾ. 2015ರಲ್ಲಿ ಮತ್ತೊಮ್ಮೆ ವಿಶ್ವಕಪ್ ಕಿರೀಟ ಆಸ್ಟ್ರೇಲಿಯಾ ಪಾಲಾಗಿತ್ತು. ಈಗ ಮತ್ತೊಮ್ಮೆ ಚಾಂಪಿಯನ್ ಆಗಿ ಅದು ಹೊಮ್ಮಿದೆ.
ಭಾರತದ ವಿರುದ್ಧ 2003ರ ಫೈನಲ್ನಲ್ಲಿ ಸಿಕ್ಕಿದ್ದ ಜಯ, ಆಗಲೇ 7 ಬಾರಿ ಫೈನಲ್ ಆಡಿದ್ದ ಅನುಭವ, ಹೆಚ್ಚು ಪ್ರಶಸ್ತಿ ಗೆದ್ದ ತಂಡ ಎಂಬ ಹೆಗ್ಗಳಿಕೆ ಇವೆಲ್ಲವೂ ಕಮಿನ್ಸ್ ಪಡೆಯ ಬಲಕ್ಕಿದ್ದವು. ಆಸ್ಟ್ರೇಲಿಯಾ ಪರ ಹೆಚ್ಚು ರನ್ ಗಳಿಸಿದ ಡೇವಿಡ್ ವಾರ್ನರ್, ಮಿಚೇಲ್ ಮಾರ್ಷ್, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್ ಇವರನ್ನೊಳಗೊಂಡ ಆಸ್ಟ್ರೇಲಿಯಾ ಬ್ಯಾಟಿಂಗ್ ಪಡೆ ಬಲಿಷ್ಠವಾಗಿತ್ತು.
ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಬ್ಯಾಲನ್ಸ್ ತಂದುಕೊಡಬಲ್ಲ ಗ್ಲೆನ್ ಮ್ಯಾಕ್ಸ್ ವೆಲ್ ಆಸ್ಟ್ರೇಲಿಯಾ ಪಾಲಿನ ಪ್ಲಸ್ ಪಾಯಿಂಟ್ ಆಗಿದ್ದರು.
ಆಡಂ ಜಂಪಾ, ಮಿಚೇಲ್ ಸ್ಟಾರ್ಕ್, ಜೋಶ್ ಹ್ಯಾಝಲ್ ವುಡ್ , ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾದ ಬೌಲಿಂಗ್ ಶಕ್ತಿಯಾಗಿದ್ದರು.
ಇಂಗ್ಲೆಂಡ್ನ ರಿಚರ್ಡ್ ಇಲಿಂಗ್ವರ್ತ್ ಮತ್ತು ರಿಚರ್ಡ್ ಕೆಟೆಲ್ಬರೋ ಅವರು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಂಪೈರ್ಗಳಾಗಿದ್ದರು. ಕೆಟೆಲ್ಬರೊ 2015ರ ವಿಶ್ವಕಪ್ ಫೈನಲ್ಗೂ ಅಂಪೈರ್ ಆಗಿದ್ದರು. ಇಲಿಂಗ್ವರ್ತ್1992ರ ವಿಶ್ವಕಪ್ ಫೈನಲ್ನಲ್ಲಿ ಆಡಿದ್ದ ಇಂಗ್ಲೆಂಡ್ ತಂಡದಲ್ಲಿ ಆಟಗಾರನಾಗಿದ್ದರು.
ಈ ಸಲ ಚಾಂಪಿಯನ್ ಆಗಿರುವ ತಂಡಕ್ಕೆ ಸಿಕ್ಕಿರುವ ನಗದು ಬಹುಮಾನದ ಮೊತ್ತ 33.3 ಕೋಟಿ ರೂ. ರನ್ನರ್ ಅಪ್ ತಂಡಕ್ಕೆ 16 ಕೋಟಿ ರೂ. ಸೆಮಿಫೈನಲ್ ವರೆಗೂ ಬಂದು ಸೋತು ನಿರ್ಗಮಿಸಿರುವ ದಕ್ಷಿಣ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳಿಗೆ ಸಿಕ್ಕಿರುವುದು ತಲಾ 6 ಕೋಟಿ ರೂ.
ಈ ಸಲದ ಅತಿ ದೊಡ್ಡ ಕ್ರಿಕೆಟ್ ಹಬ್ಬ ಮುಗಿದಿದೆ. 3ನೇ ಸಲ ಪ್ರಶಸ್ತಿ ಗೆಲ್ಲುವ ಭಾರತದ ಕನಸು ಪೂರೈಸಲಿಲ್ಲ ಎಂಬ ಕೊರಗು ಇದ್ದರೂ, ಬಹುಕಾಲ ನೆನಪಿನಲ್ಲಿ ಉಳಿಯುವಂಥ ಆಟವನ್ನು ಟೀಂ ಇಂಡಿಯಾ ಆಡಿತು ಎಂಬುದು ಗಮನಾರ್ಹ.
ಕ್ರಿಕೆಟ್ ಪ್ರೇಮದ ನಡುವೆಯೂ ಹೊಲಸು ರಾಜಕೀಯವೊಂದು ಮತ್ತೆ ಮತ್ತೆ ನುಸುಳಿದ್ದು ಈ ದೇಶದ ಮಟ್ಟಿಗೆ ಬಹಳ ಬೇಸರದ ಸಂಗತಿ ಎಂಬುದನ್ನೂ ಹೇಳದೇ ಇರಲು ಆಗುವುದಿಲ್ಲ. ನರೇಂದ್ರ ಮೋದಿ ಕ್ರೀಡಾಂಗಣ ಮತ್ತೆ ಮತ್ತೆ ಬಿಜೆಪಿ ರಾಜಕೀಯದ ಅಡ್ಡೆಯಾಗಿ ಕಂಡಿದ್ದನ್ನು ನೋಡಿದ್ದೇವೆ.
ಇರಲಿ ಬಿಡಿ. ಈಗ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ತಂಡಕ್ಕೆ ಕಂಗ್ರಾಟ್ಸ್ ಹೇಳೋಣ. ಜೊತೆಗೆ ನಿನ್ನೆವರೆಗೂ ಅದ್ಭುತವಾಗಿ ಆಡಿದ ಭಾರತೀಯ ಕ್ರಿಕೆಟ್ ತಂಡಕ್ಕೂ ವೆಲ್ played ಬಾಯ್ಸ್ ಎಂದು ಅಭಿನಂದಿಸೋಣ.