ಸಾಲಗಾರ ಸನ್ನಿ ಡಿಯೋಲ್ ಆಗಬೇಕು !
ಬಿಜೆಪಿ ಸಂಸದನ ಬಂಗಲೆ ಹರಾಜು ನೋಟಿಸ್ ಹಿಂಪಡೆದ ಬ್ಯಾಂಕ್ ► ಸಾಮಾನ್ಯ ಸಾಲಗಾರರಿಗೆ ಉಂಟೇ ಈ ವಿಶೇಷ ಸೌಲಭ್ಯ ?
Sunny Deol | Photo:PTI
ಸಾಲ ತೆಗೊಳೋದಿದ್ರೆ ನೀವು ಸನ್ನಿ ಡಿಯೋಲ್ ಆಗಬೇಕು. ಗದರ್ ನಲ್ಲಿ ವಿರೋಧಿಗಳನ್ನು ಚೆಂಡಾಡುವ ಹೀರೊ ಸನ್ನಿ ಡಿಯೋಲ್ ಈಗ ಬ್ಯಾಂಕುಗಳ ಪಾಲಿಗೂ ಹೀರೊ. ಕೋಟಿಗಟ್ಟಲೆ ಸಾಲ ಪಡೆದು ಮರುಪಾವತಿಸದ ಹೀರೊ.
ಆದರೆ, ಹೀರೋನಿಂದ ಸಾಲ ಮರುಪಾವತಿಗಾಗಿ ಹಠ ಹಿಡಿಯೋದು ಸಾಧ್ಯನಾ ?. ಅದೂ ಆ ಹೀರೊ ಆಡಳಿತ ಪಕ್ಷದ ಸಂಸದನೂ ಆಗಿದ್ರೆ ಹೇಳೋದೇ ಬೇಡ. 56 ಇಂಚಿನ ಎದೆಯವರ ಪಕ್ಷದ ಸಂಸದರು, ಕೇವಲ 56 ಕೋಟಿ ಸಾಲ ಪಡೆದು ಮರುಪಾವತಿ ಮಾಡಿಲ್ಲ ಎಂಬ ಒಂದೇ ಕಾರಣಕ್ಕೆ ಅವರ ಬಂಗಲೆ ಹರಾಜು ಹಾಕಲು ಸಾಧ್ಯವೇ ?
ನಾವು ನೀವು ಒಂದೆರಡು ಲಕ್ಷದಷ್ಟು ಸಾಲ ತೆಗೊಂಡ್ರೆ ಅದರ ಬಡ್ಡಿ ಸಮೇತ ಪ್ರತಿಯೊಂದು ಪೈಸೆಯನ್ನೂ ಬ್ಯಾಂಕ್ ವಸೂಲಿ ಮಾಡುತ್ತೆ.
ಕೊನೆಯ ಪೈಸೆ ಕೂಡ ಚುಕ್ತಾ ಆಗುವವರೆಗೂ ನಿಮಗೆ ನೆಮ್ಮದಿಯಿಂದ ನಿದ್ರಿಸಲು ಬಿಡೋದಿಲ್ಲ ಬ್ಯಾಂಕ್. ಎಲ್ಲಾದರೂ ಸಾಲ ಮರು ಪಾವತಿ ಆಗೋದಿಲ್ಲ ಅಂತ ಕಂಡ್ರೆ ನೀವು ಅದಕ್ಕಾಗಿ ಗ್ಯಾರಂಟಿ ಇಟ್ಟಿರೋ ಸೊತ್ತನ್ನು ಯಾವುದೇ ಮುಲಾಜಿಲ್ಲದೆ ಹರಾಜು ಹಾಕುತ್ತೆ.
ಇದು ನಮ್ಮ, ನಿಮ್ಮ ಸಾಲದ ಕತೆ. ಆದರೆ ಸೆಲೆಬ್ರಿಟಿಗಳು,ಸಂಸದರು ಅದರಲ್ಲೂ ಬಿಜೆಪಿ ಸಂಸದರ ಸಾಲದ್ದು ಈ ದೇಶದಲ್ಲಿ ಬೇರೇನೇ ಕತೆ.
ಅದಕ್ಕೇ ಹೇಳಿದ್ದು ಸಾಲ ತೆಗೊಳೋರು ಸನ್ನಿ ಡಿಯೋಲ್ ಆಗಿರ್ಬೇಕು ಅಂತ. ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್ ಕೋಟಿಗಟ್ಟಲೆ ಸಾಲ ಬಾಕಿ ಉಳಿಸಿಕೊಂಡಿದ್ದಾರೆ. ಅದಕ್ಕಾಗಿ ಬ್ಯಾಂಕ್ ಅವರ ಬಂಗಲೆಯ ಹರಾಜಿಗೂ ಮುಂದಾಗುತ್ತದೆ. ಅಚ್ಚರಿಯೆಂದರೆ, 24 ಗಂಟೆಗಳೊಳಗೇ ಆ ನೊಟೀಸ್ ಅನ್ನು ಬ್ಯಾಂಕ್ ಹಿಂಪಡೆಯುತ್ತದೆ.
ಒಮ್ಮೆ ಯೋಚಿಸಿ, ಈ ನಟನ ಗದರ್ 2 ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆ ಹೊಡೆಯುತ್ತಿದೆ. ಸಿನಿಮಾ ನೋಡುತ್ತ ಜನಸಾಮಾನ್ಯರು ಶಿಳ್ಳೆ ಹೊಡೆಯುತ್ತಾರೆ. ಇನ್ನೊಂದೆಡೆ ಆತನ ಕೋಟಿಗಟ್ಟಲೆ ಸಾಲ ವಸೂಲಿಗೆ ಹೊರಡಿಸಿರೋ ನೋಟಿಸನ್ನೇ ಬ್ಯಾಂಕ್ ವಾಪಸ್ ಪಡೆಯುತ್ತೆ. ಬಿಜೆಪಿ ಸಂಸದ ಸನ್ನಿ ಡಿಯೋಲ್ಗೆ ಸಿಗುವ ಈ ವಿಶೇಷ ಸವಲತ್ತು, ಆತನ ಸಿನಿಮಾವನ್ನು ಹಣ ಕೊಟ್ಟು ನೋಡುತ್ತ ಗಲ್ಲಾ ಪೆಟ್ಟಿಗೆ ತುಂಬಿಸುವ, ಶಿಳ್ಳೆ ಹೊಡೆಯುವ ಎಷ್ಟು ಮಂದಿ ಜನಸಾಮಾನ್ಯರಿಗೆ, ದೇಶದ ಎಷ್ಟು ಸಾಮಾನ್ಯ ಸಾಲಗಾರರಿಗೆ ಸಿಗುತ್ತದೆ?
ಬರೀ ಸಾವಿರ, ಲಕ್ಷಗಳೊಳಗಿನ ಸಾಲ ತೀರಿಸಲಾರದೆ ದೇಶದ ಅದೆಷ್ಟೋ ಬಡ ರೈತರನ್ನು ಸಾವಿನ ಕುಣಿಕೆಗೆ ತಳ್ಳುವ ಬ್ಯಾಂಕುಗಳು ಶ್ರೀಮಂತರ ವಿಚಾರದಲ್ಲಿ ಕೊಡುವ ವಿನಾಯಿತಿಗಳ ಬಗ್ಗೆ ಎಂದಾದರೂ ಕಿಂಚಿತ್ ಪಶ್ಚಾತ್ತಾಪದಿಂದ ಯೋಚಿಸಿವೆಯೆ?. ಅಂದಹಾಗೆ, ಸನ್ನಿ ಡಿಯೋಲ್ ತೀರಿಸಬೇಕಿರುವ ಸಾಲ ವಸೂಲಿ ಮಾಡಲು ನೀಡಲಾಗಿದ್ದ ಹರಾಜು ನೊಟೀಸ್ ಹಿಂಪಡೆಯಲು ಕಾರಣವೇನು?
ಅದನ್ನು ತಾಂತ್ರಿಕ ಕಾರಣ ಎಂದಷ್ಟೇ ಬ್ಯಾಂಕ್ ಉಲ್ಲೇಖಿಸಿದೆ. ಹಾಗೆ ತಾಂತ್ರಿಕ ಕಾರಣ ಎಂದು ಹೇಳುವುದರೊಂದಿಗೆ, ಅದೇನು ಎಂಬುದು ಯಾರಿಗೂ ತಿಳಿಯಬೇಕಿಲ್ಲ. ಸಂಸದನೊಬ್ಬನ, ಸೆಲೆಬ್ರಿಟಿಯೊಬ್ಬನ ಬೆಂಬಲಕ್ಕೆ ಹೀಗೆ ತಾಂತ್ರಿಕ ಕಾರಣ ಎಂಬ ಅದೃಶ್ಯ ಶಕ್ತಿ ಬಂದು ನಿಲ್ಲುವುದೇ ತಮಾಷೆಯಾಗಿದೆ. 56 ಕೋಟಿ ಸಾಲ ವಸೂಲಿ ಮಾಡಲು ಪೂರ್ವ ಮುಂಬೈನ ಜುಹುವಿನಲ್ಲಿರುವ ಪ್ರತಿಷ್ಠಿತ ಪ್ರದೇಶದಲ್ಲಿನ ಸನ್ನಿ ಡಿಯೋಲ್ ಅವರ ಐಷಾರಾಮಿ ವಿಲ್ಲಾವನ್ನು ಹರಾಜು ಹಾಕಲು ಬ್ಯಾಂಕ್ ಆಫ್ ಬರೋಡಾ ಮುಂದಾಗಿತ್ತು.
ಹರಾಜಿನ ನೊಟೀಸ್ ಸಂಬಂಧ ಜಾಹೀರಾತನ್ನು ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಭಾನುವಾರವಷ್ಟೇ ಪ್ರಕಟಿಸಲಾಗಿತ್ತು. ಆದರೆ ಅದಾಗಿ 24 ಗಂಟೆಗಳೊಳಗೆ ಬ್ಯಾಂಕ್ ತಾಂತ್ರಿಕ ಕಾರಣ ಉಲ್ಲೇಖಿಸಿ ನೊಟೀಸ್ ಹಿಂಪಡೆದಿದೆ. ಪತ್ರಿಕೆಯಲ್ಲಿ ಬಂದಿದ್ದ ಪ್ರಕಟಣೆಯಲ್ಲಿ ಸನ್ನಿ ಡಿಯೋಲ್ ನಿಜ ಹೆಸರು ಅಜಯ್ ಸಿಂಗ್ ಡಿಯೋಲ್ ಉಲ್ಲೇಖವಿತ್ತು. ಸನ್ನಿ ವಿಲ್ಲಾ ಎಂಬ ಹೆಸರಿನ ಅವರ ಮಾಲೀಕತ್ವದ ಜುಹು ಆಸ್ತಿ ಹಾಗೂ ಸಾಲದ ವಿವರಗಳಿದ್ದವು.
ಹರಾಜಾಗಲಿರುವ ವಿಲ್ಲಾವನ್ನು ಜುಹುವಿನ ಗಾಂಧಿಗ್ರಾಮ ರಸ್ತೆಯಲ್ಲಿರುವ ಸನ್ನಿ ವಿಲ್ಲಾ ಎಂದು ನಮೂದಿಸಲಾಗಿತ್ತು. ಮಾತ್ರವಲ್ಲದೆ, ಬಾಕಿ ಮೊತ್ತವನ್ನು ವಸೂಲಿ ಮಾಡಲು ವಿಲ್ಲಾದ ಆಸುಪಾಸಿರುವ ಜಮೀನನ್ನೂ ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗಿತ್ತು. ಸನ್ನಿ ವಿಲ್ಲಾದ ಹೊರತಾಗಿ, 599.44 ಚದರ ಮೀಟರ್ ಆಸ್ತಿಯನ್ನು ಡಿಯೋಲ್ಸ್ ಒಡೆತನದ ಸನ್ನಿ ಸೌಂಡ್ಸ್ ಹೊಂದಿದೆ ಮತ್ತು ಅದೇ ಸಂಸ್ಥೆಯನ್ನು ಸಾಲದ ಕಾರ್ಪೊರೇಟರ್ ಜಾಮೀನುದಾರರು ಎಂದೂ, ಅವರ ತಂದೆ ನಟ ಮತ್ತು ರಾಜಕಾರಣಿ ಧರ್ಮೇಂದ್ರ ಅವರನ್ನು ವೈಯಕ್ತಿಕ ಜಾಮೀನುದಾರರೆಂದೂ ಹೆಸರಿಸಲಾಗಿತ್ತು.
ಮೂಲಗಳ ಪ್ರಕಾರ, ಸನ್ನಿ ಡಿಯೋಲ್ ಡಿಸೆಂಬರ್ 2022ರಿಂದ ಸಾಲದ ಅಸಲು, ಬಡ್ಡಿ ಮತ್ತು ದಂಡವನ್ನು ಪಾವತಿಸಲು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಇ-ಹರಾಜು ಪ್ರಕ್ರಿಯೆ ನಡೆಸುವುದಾಗಿ ಬ್ಯಾಂಕ್ ಪ್ರಕಟಿಸಿತ್ತು. ಹರಾಜಿಗೆ ಮೀಸಲು ಬೆಲೆಯನ್ನು 51.43 ಕೋಟಿ ರೂ.ಎಂದು ಬ್ಯಾಂಕ್ ನಿಗದಿಪಡಿಸಿತ್ತು. ಈಗ, ತಾಂತ್ರಿಕ ಕಾರಣ ಉಲ್ಲೇಖಿಸಿ, ಬ್ಯಾಂಕ್ ಆಫ್ ಬರೋಡಾ ಸನ್ನಿ ಡಿಯೋಲ್ ಬಂಗಲೆಯ ಹರಾಜು ನೋಟಿಸ್ ಅನ್ನು ಹಿಂತೆಗೆದುಕೊಂಡಿದೆ.
ನೊಟೀಸ್ ಹಿಂಪಡೆಯಲಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಈ ತಾಂತ್ರಿಕ ಕಾರಣಗಳನ್ನು ಪ್ರಚೋದಿಸಿದವರು ಯಾರು? ಎಂದು ಪ್ರಶ್ನಿಸಿದ್ದಾರೆ. ನೋಟಿಸ್ ರದ್ದುಗೊಳಿಸಿರುವುದರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಬ್ಯಾಂಕ್ ಆಫ್ ಬರೋಡ 'ತಾಂತ್ರಿಕ ಕಾರಣಗಳಿಂದ ಹರಾಜು ನೋಟಿಸ್ ಹಿಂಪಡೆದಿದೆ. ಇದರ ಹಿಂದಿರುವವರು ಯಾರು ಎಂದು ಪ್ರಶ್ನಿಸಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಮತ್ತಿದು ಕೇಳಲೇಬೇಕಿರುವ ಪ್ರಶ್ನೆಯೂ ಹೌದು. ಬ್ಯಾಂಕ್ ಆಫ್ ಬರೋಡಾ ಆಗಸ್ಟ್ 23 ರಂದು 556 ಜನರ ಆಸ್ತಿಯನ್ನು ಹರಾಜು ಮಾಡಲಿದೆ. ಇಷ್ಟು ಜನರಲ್ಲಿ ಯಾವುದೂ ಸಮಸ್ಯೆಯಾಗಲಿಲ್ಲ. ಆದರೆ 56 ಕೋಟಿಯ ಲೋನ್ ಕಟ್ಟದ ಸನ್ನಿ ಡಿಯೋಲ್ ಮನೆಯ ಹರಾಜು ತಾಂತ್ರಿಕ ಕಾರಣಗಳಿಂದ ರದ್ದು ಮಾಡಲಾಯಿತು. ಈ ತಾಂತ್ರಿಕ ಕಾರಣಗಳು ಕೇವಲ ಸನ್ನಿ ಡಿಯೋಲ್ ವಿಷಯದಲ್ಲಿ ಮಾತ್ರ ಸಿಕ್ಕಿತಾ , ಇತರ ಐನೂರಕ್ಕೂ ಹೆಚ್ಚು ಜನರ ವಿಷಯದಲ್ಲಿ ಸಿಗಲಿಲ್ಲ ಯಾಕೆ ?
ಬಡವರು, ಜನಸಾಮಾನ್ಯರ ವಿಚಾರವಾಗಿದ್ದರೆ, ಇಂಥದೊಂದು ತಾಂತ್ರಿಕ ಕಾರಣ ನೀಡಿ, ಅವರನ್ನು ಬಚಾವು ಮಾಡುವ ಔದಾರ್ಯವನ್ನು ಬ್ಯಾಂಕುಗಳಾಗಲೀ, ಬ್ಯಾಂಕುಗಳನ್ನು ಪ್ರಭಾವಿಸುವವರಾಗಲೀ ತೋರಿಸುತ್ತಿದ್ದರೆ?. ಗುಜರಾತಿನಲ್ಲಿ ರೈತನೊಬ್ಬ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನಾಲ್ಕೂವರೆ ಲಕ್ಷ ಲೋನ್ ಪಡೆದಿದ್ದ. ಅದನ್ನು ಚುಕ್ತಾ ಕೂಡ ಮಾಡಿದ್ದ. ಕೇವಲ 31 ಪೈಸೆ ಕಟ್ಟಿರಲಿಲ್ಲ. ಗಮನವಿಟ್ಟು ಕೇಳಿ... ಕೇವಲ 31 ಪೈಸೆ ಕಟ್ಟಿರಲಿಲ್ಲ. ಅದಕ್ಕಾಗಿ ಎಸ್ ಬಿ ಐ ಆತನಿಗೆ ನೋ ಡ್ಯೂ ಪ್ರಮಾಣ ಪತ್ರ ಜಾರಿ ಮಾಡಲಿಲ್ಲ. ಆ ವ್ಯಕ್ತಿ ಹೈಕೋರ್ಟ್ ಹೋಗಬೇಕಾಯ್ತು. ಹೈಕೋರ್ಟ್ ಛೀಮಾರಿ ಹಾಕಿದ ಮೇಲೆ ಬ್ಯಾಂಕ್ ಆತನಿಗೆ ಬಾಕಿ ಇಲ್ಲ ಎಂಬ ಪ್ರಮಾಣಪತ್ರ ನೀಡಿತು.
ಈ ದೇಶದ ಸಾಮಾನ್ಯ ಜನರ ಮೇಲೆ 31 ಪೈಸೆ ಬಾಕಿ ಎನ್ನುವ ಲೆಕ್ಕ ಬಂದರೆ ಬ್ಯಾಂಕ್ ಗಳಿಗೆ ಕರುಣೆಯೇ ಇರಲ್ಲ. ಒಂದೆಡೆ, ಸಾಲವನ್ನಾಗಲೀ ಬಡ್ಡಿಯನ್ನಾಗಲೀ ತೀರಿಸದ, ಅಥವಾ ಪಡೆದ ಸಾಲವನ್ನು ಐಷಾರಾಮಕ್ಕಾಗಿ ಬಳಸುತ್ತ ದೇಶವನ್ನು ವಂಚಿಸುವ ದೊಡ್ಡವರ ಪರವಾಗಿ ಅಧಿಕಾರಸ್ಥರೇ ನಿಂತುಬಿಡುತ್ತಾರೆ.
ಅಂಥ ಖದೀಮರಿಗೆ ಇರುವ ರಾಜಕೀಯ ಬೆಂಬಲದ ಕಾರಣದಿಂದ ಬ್ಯಾಂಕುಗಳು ಕೂಡಾ ಸಾಲ ವಸೂಲಿ ಮಾಡಲಾರದೆ ಇಬ್ಬಂದಿತನ ಅನುಭವಿಸಬೇಕಾಗುತ್ತದೆ. ಬ್ಯಾಂಕ್ ಆಫ್ ಬರೋಡ ಕಡೆಯಿಂದ ಈ ಬಗ್ಗೆ ಸ್ಪಷ್ಟೀಕರಣ ಬಂದಿದ್ದು, ಇತರರ ವಿಷಯದಲ್ಲೂ ಈ ರೀತಿ ಆಗುತ್ತದೆ ಎಂದು ಹೇಳಿದೆ.
ಆದರೆ ಪ್ರಶ್ನೆ ಇರುವುದು ಪತ್ರಿಕೆಗಳಲ್ಲಿ ನೋಟಿಸ್ ಬರುವ ಮೊದಲು ಸನ್ನಿ ಅವರೊಂದಿಗೆ ಬ್ಯಾಂಕ್ ಮಾತನಾಡಿರಲಿಲ್ಲವೇ ? ಅವರಿಗೆ ಮಾಹಿತಿ ನೀಡದೆ ಬ್ಯಾಂಕ್ ಇಲ್ಲಿಯವರೆಗೆ ಕೆಲಸ ಮಾಡಿತ್ತೆ ? ಸನ್ನಿ ಪತ್ರಿಕೆಗಳಲ್ಲಿ ಸುದ್ದಿ ಓದಿದ ಬಳಿಕವೇ ಇದನ್ನೆಲ್ಲಾ ತಿಳಿದುಕೊಂಡರೇ ? ಹಾಗಾದರೆ ಸನ್ನಿ ಡಿಯೋಲ್ ಬ್ಯಾಂಕ್ ಮೇಲೆ ಮಾನ ಹಾನಿಯ ಪ್ರಕರಣ ದಾಖಲಿಸಲು ಸಾಧ್ಯವಿಲ್ಲವೇ? ಬ್ಯಾಂಕ್ ನೋಟೀಸ್ ಜಾರಿ ಮಾಡಿದ ನಂತರ ನೊಟೀಸ್ ಮತ್ತೆ ಹಿಂದಕ್ಕೆ ಪಡೆಯುತ್ತೆ ಅಂದರೆ ಇದು ಯಾವ ಪ್ರಕ್ರಿಯೆ?
ಸನ್ನಿ ಡಿಯೋಲ್ ಪಂಜಾಬ್ ನ ಗುರುದಾಸ್ ಪುರದಿಂದ ಬಿಜೆಪಿ ಸಂಸದರು. ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾರ್ಟಿಯ ಅದೆಷ್ಟು ಒಳ್ಳೆಯ ಸಂಸದರು ಅಂದರೆ ಇಡೀ ಮುಂಗಾರು ಅಧಿವೇಶನದಲ್ಲಿ ಒಮ್ಮೆಯೂ ಅವರು ಸಂಸತ್ತಿಗೆ ಹೋಗಿಯೇ ಇಲ್ಲ. ಅದರ ಹಿಂದಿನ ಅಧಿವೇಶನಗಳಲ್ಲೂ ಅವರ ಹಾಜರಾತಿ ತೀರಾ ಶೋಚನೀಯವಾಗಿಯೇ ಇದೆ. ಈಗ ಸಂಸದರಾಗಿಯೇ ಗದರ್ 2 ಚಿತ್ರ ಪೂರ್ಣಗೊಳಿಸಿರುವ ಅವರು ನಾಪತ್ತೆಯಾಗಿದ್ದಾರೆ ಎಂದು ಈ ಹಿಂದೆ ಅವರ ಕ್ಷೇತ್ರದಲ್ಲಿ ಪೋಸ್ಟರ್ ಹಚ್ಚಲಾಗಿತ್ತು. ಸಂಸದರಾಗಿ ಇವರ ಸಾಧನೆ ಎಂದು ಎಂದು ನೋಡಿದರೆ ನಾವೂ ಇವರಂತೆಯೇ ಸಂಸದರಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಶಾಸಕರೊಬ್ಬರಿಗೆ ಅವರು ಬುಕ್ ಮಾಡಿದ ಥಾರ್ ಜೀಪು ಬೇಗ ಡೆಲಿವರಿ ಕೊಡಬೇಕು ಎಂದು ಸಂಸದರ ಲೆಟರ್ ಹೆಡ್ ನಲ್ಲಿ ಶಿಫಾರಸು ಕೊಟ್ಟಿದ್ದರು ಸನ್ನಿ ಡಿಯೋಲ್.
ದೊಡ್ಡವರ ವಿಚಾರದಲ್ಲಿ ಹಿಂಜರಿಯುವ ಇದೇ ಬ್ಯಾಂಕ್ಗಳು, ಬಡವರ ಮತ್ತು ಜನಸಾಮಾನ್ಯರ ಪುಡಿ ವ್ಯವಹಾರಕ್ಕೂ ಆ ಶುಲ್ಕ ಈ ಶುಲ್ಕ ಎಂದು ನೂರಾರು ಬಗೆಯಲ್ಲಿ ಶುಲ್ಕ ಕಟ್ಟಿಸಿಕೊಳ್ಳುತ್ತ ಜನಸಾಮಾನ್ಯರನ್ನು ಹೈರಾಣಾಗಿಸುತ್ತಿವೆ. ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದಿರುವುದು, ಹೆಚ್ಚುವರಿ ಎಟಿಎಂ ವಹಿವಾಟುಗಳು ಮತ್ತು ಎಸ್ಎಂಎಸ್ ಸೇವೆಗಳ ಹೆಸರಿನಲ್ಲಿ ಗ್ರಾಹಕರಿಂದ ಬ್ಯಾಂಕುಗಳು ವಸೂಲಿ ಮಾಡುವ ಶುಲ್ಕವೇ ಕೋಟಿ ಕೋಟಿ.
2018ರಿಂದ ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು 5 ಪ್ರಮುಖ ಖಾಸಗಿ ವಲಯದ ಬ್ಯಾಂಕ್ಗಳು ಈ ಶುಲ್ಕಗಳ ಮೂಲಕವೇ ಜನಸಾಮಾನ್ಯರಿಂದ 35,000 ಕೋಟಿಗೂ ಹೆಚ್ಚು ಮೊತ್ತ ಸಂಗ್ರಹಿಸಿವೆ ಎಂಬ ವಿಚಾರವನ್ನು ಕೇಂದ್ರ ಸರ್ಕಾರವೇ ಇತ್ತೀಚೆಗೆ ಹೇಳಿತ್ತು. ಹೀಗೆ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡಲು ಆಗದಿರುವುದು, ಉಳಿಸಿದ ಬಿಡಿಗಾಸು ಪಡೆದುಕೊಳ್ಳುವುದಕ್ಕೂ ಎಟಿಎಂ ಬಳಕೆ ಅನಿವಾರ್ಯವಾಗಿ, ನಿಗದಿಗಿಂತ ಹೆಚ್ಚು ಸಲ ಬಳಸಿದರೆ ಅದಕ್ಕೂ ದಂಡ ಕಟ್ಟಬೇಕಿರುವುದು ಇವೆಲ್ಲವೂ ಇಲ್ಲಿನ ಬಡವರ ಪಾಲಿನ ತಾಪತ್ರಯಗಳು ಮಾತ್ರ.
ಕೋಟಿಗಟ್ಟಲೆ ಕೊಳ್ಳೆ ಹೊಡೆಯುವ ಖದೀಮರಿಗೆ ಇಂಥ ಯಾವ ಮುಳ್ಳುಗಳೂ ಚುಚ್ಚುವುದಿಲ್ಲ. ಬಡವರು ಮಾತ್ರ ಸಣ್ಣ ಗಳಿಕೆಗೂ ದೊಡ್ಡ ತೆರಿಗೆ ಕಟ್ಟುವುದು ಮಾತ್ರವಲ್ಲ, ಜೀವ ತೇಯ್ದು ಉಳಿಸಿಕೊಳ್ಳಬೇಕಾದ ಹಣಕ್ಕೂ ದಂಡ ಕಟ್ಟಬೇಕಿರುವ ಸ್ಥಿತಿ. ಇನ್ನು ಅಪ್ಪಿತಪ್ಪಿ ಸಾಲದ ಸುಳಿಗೇನಾದರೂ ಸಿಲುಕಿದರಂತೂ ಅವರ ಕಥೆ ಮುಗಿದೇಹೋಯಿತು. ದಬ್ಬಾಳಿಕೆ ಮಾಡಿ, ಕಿರುಕುಳ ನೀಡಿ ಅವರಿಂದ ಸಾಲ ವಸೂಲಿಗೆ ನಿಂತುಬಿಡುತ್ತವೆ ಬ್ಯಾಂಕುಗಳು, ಕನಿಷ್ಠ ಮಾನವೀಯತೆಯನ್ನೂ ತೋರಿಸದೆ ಕ್ರೂರವಾಗಿ ವರ್ತಿಸುತ್ತವೆ.
ಶ್ರೀಮಂತರಿಗೆ ಮಾತ್ರ ತೆರಿಗೆಯಲ್ಲಿಯೂ ರಿಯಾಯ್ತಿ. ಅವರು ಕಟ್ಟಬೇಕಾದ ಕೋಟಿಗಟ್ಟಲೆ ಸಾಲಕ್ಕೂ ರಿಯಾಯ್ತಿ. ಈಗ ಸನ್ನಿ ಡಿಯೋಲ್ ವಿಚಾರದಲ್ಲಿ ಆಗಿರುವುದೂ ಅದೇ. ರಾಜಕೀಯ ಬೆಂಬಲವಿರುವ, ಸ್ವತಃ ರಾಜಕಾರಣಿಯಾಗಿರುವ ಈ ನಟನನ್ನು ಸಾಲದಿಂದ ಪಾರು ಮಾಡುವುದಕ್ಕೆ, ಅವರ ಐಷಾರಾಮಿ ಬಂಗಲೆ ಅವರ ಕೈಯಲ್ಲಿಯೇ ಇರುವಂತೆ ಮಾಡುವುದಕ್ಕೆ ತಾಂತ್ರಿಕ ಕಾರಣ ಎನ್ನಲಾಗಿರುವ ಕಾರಣವೊಂದು ಒದಗಿ ಬಂದಿದೆ.
ಶ್ರೀಮಂತರು, ಸೆಲೆಬ್ರಿಟಿಗಳು, ರಾಜಕೀಯ ಬೆಂಬಲವುಳ್ಳವರೂ ಏನೂ ಮಾಡಿಯೂ ಅರಗಿಸಿಕೊಳ್ಳುತ್ತಾರೆ ಎಂಬುದಕ್ಕೆ ಇದು ಈಗ ಮತ್ತೊಂದು ಉದಾಹರಣೆ. ಸನ್ನಿ ಡಿಯೋಲ್ ಥರದವರಿಂದ ಸಾಲ ವಸೂಲಿ ಮಾಡುವುದಕ್ಕೆ ಆಗುವುದಿಲ್ಲ ಎಂದಾದರೆ, ಸಣ್ಣ ಸಾಲ ಮಾಡಿಕೊಂಡ ಬಡವರನ್ನು ಬೆನ್ನುಬಿದ್ದು ಸಾಲ ವಸೂಲಿ ಮಾಡಲು ಬ್ಯಾಂಕುಗಳಿಗೆ ಯಾರ ತಡೆಯೂ ಇಲ್ಲ, ಯಾವ ಮುಲಾಜೂ ಇಲ್ಲವೆಂದಾದರೆ, ಈ ದೇಶದಲ್ಲಿ ಬಡವರಾಗಿರುವುದೇ ತಪ್ಪೇ, ಹಾಗಾದರೆ ?