2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತ ಎಂಬ ಮರೀಚಿಕೆ
ಕೇಂದ್ರ ಸರಕಾರವು ಭಾರತ ದೇಶವನ್ನು 2047ರಲ್ಲಿ ಕಡಿಮೆ-ಆದಾಯದ ದೇಶದಿಂದ ಅಧಿಕ ಆದಾಯ ಅಥವಾ ಅಭಿವೃದ್ಧಿ ಹೊಂದಿದ ರಾಷ್ಟ್ರ (ವಿಕಸಿತ ಭಾರತ) ಆಗುವ ಆಶಯವನ್ನು ಹೊಂದಿದೆ. ಆದರೆ ಸಮಗ್ರ ಆರ್ಥಿಕ ದೃಷ್ಟಿ ಕೋನದಿಂದ ನೋಡಿದಾಗ ಈ ಯೋಜನೆಯ ಅನುಸರಣೆಯಲ್ಲಿ, ಭಾರತ ಆರ್ಥಿಕತೆಯು ಮುಂದಿನ 23 ವರ್ಷಗಳಲ್ಲಿ ಪ್ರಸ್ತುತ 3.73 ಟ್ರಿಲಿಯನ್ ಡಾಲರ್ನಿಂದ 30 ಟ್ರಿಲಿಯನ್ ಡಾಲರ್ಗೆ ಜಿಡಿಪಿ ವೃದ್ಧಿಸಲು ಅಸಾಧಾರಣ ಆರ್ಥಿಕ ಬೆಳವಣಿಗೆ ಹೊಂದುವ ಅಗತ್ಯವಿದೆ. ವಾಸ್ತವದಲ್ಲಿ, ವಿಶ್ವದ ಐದನೇ-ಅತಿದೊಡ್ಡ ಆರ್ಥಿಕತೆಯು 23 ವರ್ಷಗಳಲ್ಲಿ 26.14 ಟ್ರಿಲಿಯನ್ ಡಾಲರ್ ಗರಿಷ್ಠ ಮಟ್ಟವನ್ನು ತಲುಪಲು ಪ್ರತೀ ವರ್ಷ 1.14 ಟ್ರಿಲಿಯನ್ ಡಾಲರ್ ಅಸಾಧಾರಣ ಬೆಳವಣಿಗೆಯನ್ನು ತೋರಿಸಬೇಕು.
ಪ್ರಸಕ್ತ ಶೇ. 7.6ರ ಜಿಡಿಪಿ ಬೆಳವಣಿಗೆಯ ದರವನ್ನು ಪರಿಗಣಿಸಿದರೆ ಕಳೆದ ಒಂದು ವರ್ಷದಲ್ಲಿ (2023 ರಿಂದ 2024) ಜಿಡಿಪಿಯ ಹೆಚ್ಚಳದ ಅಂದಾಜು 38.78ರಿಂದ 41.74 ಲಕ್ಷ ಕೋಟಿ ರೂ. ಇದು ಅಗತ್ಯವಿರುವ 81 ಲಕ್ಷ ಕೋಟಿ ರೂ.ಗಳ ವಿರುದ್ಧ ಕೇವಲ 2.96 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ, ಭಾರತ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶದ ಗುರಿಯನ್ನು ಸಾಧಿಸಲು ಅತ್ಯಲ್ಪ ಮೊತ್ತವಾಗಿದೆ ಮತ್ತು ವಾರ್ಷಿಕವಾಗಿ ಶೇ. 15ರಷ್ಟು ಜಿಡಿಪಿ ಬೆಳವಣಿಗೆಯ ದರದಲ್ಲಿ ಆರ್ಥಿಕತೆ ಬೆಳವಣಿಗೆ ಆದರೆ ಮಾತ್ರ ಈ ಗುರಿಯನ್ನು ಸಾಧಿಸಲು ಸಾಧ್ಯ. ಅಮೆರಿಕ, ಚೀನಾ, ಜರ್ಮನಿ, ಜಪಾನ್ ಮತ್ತು ಭಾರತದಂತಹ ದೊಡ್ಡ ಆರ್ಥಿಕತೆಗಳ ಜಿಡಿಪಿ ಟ್ರಿಲಿಯನ್ ಅಮೆರಿಕನ್ ಡಾಲರ್ನಲ್ಲಿ ಕ್ರಮವಾಗಿ 26.95, 17.78, 4.43, 4.23 ಮತ್ತು 3.73 ಆಗಿದೆ. ಆದರೆ ದೊಡ್ಡ ಆರ್ಥಿಕತೆಗಳ ಜಿಡಿಪಿ ತಲಾ ಆದಾಯ (USಆ ಸಾವಿರ) 80.41, 12.54, 52.82, 33.95 ಮತ್ತು 2.61 ಆಗಿದೆ. ಭಾರತವು ಪ್ರಸಕ್ತ 2,610 ಡಾಲರ್ ತಲಾ ಆದಾಯದೊಂದಿಗೆ ಕಡಿಮೆ ಆದಾಯದ ರಾಷ್ಟ್ರದ ಗುಂಪಿನಲ್ಲಿದೆ, ಇದು 23 ವರ್ಷಗಳಲ್ಲಿ ಕಡಿಮೆ ಆದಾಯ, ಮಧ್ಯಮ ಆದಾಯ ಮತ್ತು ಹೆಚ್ಚಿನ ಆದಾಯದ ವಿವಿಧ ಹಂತಗಳನ್ನು ತಲುಪಲು ಸುದೀರ್ಘ ಭೂಪ್ರದೇಶವನ್ನು ಕ್ರಮಿಸಬೇಕಾಗಿದೆ. ಅಧಿಕ-ಆದಾಯದ ದೇಶದ ಗುರಿಯನ್ನು ಹೊಂದಲು, ಭಾರತದ ತಲಾವಾರು ಜಿಡಿಪಿ 2047ರ ವೇಳೆಗೆ 12,055 ಡಾಲರ್ ಅನ್ನು ಮೀರಬೇಕು.
ಒಂದು ದೇಶದ ಆರ್ಥಿಕ ಬೆಳವಣಿಗೆಯ ಪ್ರಮುಖ ಮೂಲಗಳೆಂದರೆ ಒಟ್ಟು ಜಿಡಿಪಿಗೆ ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳ ಕೊಡುಗೆ. ಭಾರತದ ಆರ್ಥಿಕ ಬೆಳವಣಿಗೆಯ ಇತಿಹಾಸ ನೋಡಿದರೆ, ಸೇವಾ ವಲಯವು ಶೇ. 53.34ರಷ್ಟು ಪ್ರಾಬಲ್ಯ ಹೊಂದಿದೆ. ಆದರೆ 2023ರಲ್ಲಿ ಒಟ್ಟು ಜಿಡಿಪಿಗೆ ಉದ್ಯಮ ಮತ್ತು ಕೃಷಿ ಕ್ಷೇತ್ರಗಳು ಕ್ರಮವಾಗಿ ಶೇ. 28.25 ಮತ್ತು ಶೇ. 18.42 ಕೊಡುಗೆ ನೀಡುತ್ತಿವೆ. ಆದರೆ ಬಲಾಢ್ಯ ಅಥವಾ ಉನ್ನತ ಆರ್ಥಿಕತೆಗಳ ಆರ್ಥಿಕ ಬೆಳವಣಿಗೆ ನೋಡುವುದಾದರೆ, ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿಯಲ್ಲಿ, ಸೇವೆ ಮತ್ತು ಕೈಗಾರಿಕೆ ವಲಯವು ತಮ್ಮ ಜಿಡಿಪಿ ಬುಟ್ಟಿಗೆ ಸುಮಾರು 95ರಿಂದ 98 ಪ್ರತಿಶತದಷ್ಟು ಕೊಡುಗೆ ನೀಡುತ್ತವೆ ಮತ್ತು ಚೀನಾದ ಶೇ. 6.9 ಹೊರತುಪಡಿಸಿ, ಅಮೆರಿಕ, ಜರ್ಮನಿ, ಜಪಾನ್ ದೇಶಗಳ ಕೃಷಿಯ ಮೇಲಿನ ಅವಲಂಬನೆಯು ಕೇವಲ ಶೇ. 1 ಆಗಿರುತ್ತದೆ. ಆದರೆ ಈ ಎರಡು ವಲಯಗಳಿಂದ ಭಾರತದ ಜಿಡಿಪಿ ಇನ್ನೂ ಶೇ. 82. ಭಾರತದ ಬೆಳವಣಿಗೆಯ ಮಹತ್ವಾಕಾಂಕ್ಷೆಗೆ ಒಂದು ದೊಡ್ಡ ಆತಂಕ ಎಂದರೆ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳೆರಡರ ನಿಧಾನಗತಿಯ ಬೆಳವಣಿಗೆ.
ಅಭಿವೃದ್ಧಿ ಹೊಂದಿದ ಆರ್ಥಿಕತೆಯ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ ಅವರು ಸರಕು ಮತ್ತು ಸೇವೆಗಳ ಆಮದುಗಳಿಗಿಂತ ಹೆಚ್ಚಿನದನ್ನು ರಫ್ತು ಮಾಡುತ್ತಾರೆ. ಭಾರತದ ಆರ್ಥಿಕತೆಯು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದರೂ, ಹೆಚ್ಚಿನ ಆಮದುಗಳ ಅವಲಂಬನೆ ಪ್ರಮುಖ ಆರ್ಥಿಕ ದುರ್ಬಲತೆ ಗಲ್ಲಿ ಒಂದು ಮತ್ತು ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇ. 2ರಷ್ಟು ಇದ್ದು, ಹೆಚ್ಚಿನ ರಾಷ್ಟ್ರ ಆದಾಯ ತೈಲ ಆಮದುಗಳ ಪಾವತಿಗೆ ಹೋಗುತ್ತಿದೆ. ಆದರೆ ಅಮೆರಿಕ, ಚೀನಾ, ಜಪಾನ್ಮತ್ತು ಜರ್ಮನಿಯು ತಮ್ಮ ಜಿಡಿಪಿಯ ಶೇ. 5ರಿಂದ 10ರಷ್ಟು ಚಾಲ್ತಿ ಖಾತೆಯಲ್ಲಿ ಹೆಚ್ಚುವರಿ ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ಎಫ್ಡಿಐ ಒಳಹರಿವು ತೀವ್ರವಾಗಿ ಕುಸಿದಿದೆ ಮತ್ತು 625 ಶತಕೋಟಿ ಅಮೆರಿಕನ್ ಡಾಲರ್ ವಿದೇಶಿ ಸಾಲವನ್ನು ಹೊಂದಿದೆ.
ಇದು ಭಾರತದ ಜಿಡಿಪಿಯ ಶೇ. 18.83 ರಷ್ಟಿದೆ. ಭಾರತದ ಆರ್ಥಿಕತೆಯು ತನ್ನ ರಫ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಆಮದುಗಳನ್ನು ಕಡಿಮೆ ಮಾಡಲು, ಪ್ರಮುಖ ವಲಯಗಳಿಗೆ ಹೆಚ್ಚಿನ ಎಫ್ಡಿಐ ಒಳಹರಿವನ್ನು ಆಕರ್ಷಿಸಲು, 2047ರಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಿ ನನಸಾಗಿಸಲು ಕೈಗಾರಿಕಾ ವಲಯವನ್ನು ಅಭಿವೃದ್ಧಿಪಡಿಸಲು ಇನ್ನೂ ಅಗತ್ಯವಿದೆ ಎಂದು ಈ ಸಮಗ್ರ ಆರ್ಥಿಕ ಲೆಕ್ಕಾಚಾರ ಮಾಹಿತಿಯು ಸ್ಪಷ್ಟವಾಗಿ ತೋರಿಸುತ್ತದೆ.
ಭಾರತದ ಆರ್ಥಿಕತೆಯು ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸದೆ ಬೆಳೆಯುತ್ತಲೇ ಇದೆ, ಇದು ತೀವ್ರ ಆದಾಯ ಮತ್ತು ಸಂಪತ್ತಿನ ಅಸಮಾನತೆಯನ್ನು ಉಂಟುಮಾಡಿದೆ. ಆರ್ಥಿಕ ನೀತಿಗಳು ಇತ್ತೀಚಿನ ವರ್ಷಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರದ ತ್ವರಿತ ಅವನತಿಯನ್ನು ಉಂಟುಮಾಡಿ ವಿಶ್ವದಲ್ಲೇ ಪರಿಸರ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ 180 ಸ್ಥಾನದಲ್ಲಿದೆ. ನಿರುದ್ಯೋಗ ದರವು 20 ರಿಂದ 24 ವರ್ಷ ವಯಸ್ಸಿನ ಯುವಕರಲ್ಲಿ ಶೇ. 44.49 ಮತ್ತು 25ರಿಂದ 29ರ ನಡುವೆ ಶೇ. 14.33 ಆಗಿದೆ. ಸಂಪತ್ತಿನ ಅಸಮಾನತೆಯು ಇತ್ತೀಚಿನ ವರ್ಷಗಳಲ್ಲಿ ಶೇ.1 ಶ್ರೀಮಂತರ ಆದಾಯ ಶೇ. 22.6ರಿಂದ ಶೇ. 40.1ಕ್ಕೆ ಏರಿದೆ. ನೀರಿನ ಲಭ್ಯತೆ ಪ್ರತೀ ವ್ಯಕ್ತಿಗೆ ತೀವ್ರವಾಗಿ 1,486 ಘನ ಮೀಟರ್ಗೆ ಕುಸಿದಿದೆ.
ಏತನ್ಮಧ್ಯೆ, ಭಾರತವು 1.42 ಶತಕೋಟಿ ಅಥವಾ ಶೇ. 17.5 ವಿಶ್ವದ ಜನಸಂಖ್ಯೆಯು ಕೇವಲ 2.4 ಪ್ರತಿಶತದಷ್ಟು ಭೂಮಿಯನ್ನು ಹಂಚಿಕೊಳ್ಳುವ ಮೂಲಕ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಸಾಮಾಜಿಕ-ಆರ್ಥಿಕ ಪರಿಸರದ ರಂಗಗಳಲ್ಲಿನ ಈ ಕ್ರಿಯಾತ್ಮಕ ಬದಲಾವಣೆಗಳು ಭಾರತದ ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳನ್ನು ಸೀಮಿತಗೊಳಿಸಿದೆ. ಇದಲ್ಲದೆ, ಸರಕಾರದ ಆರ್ಥಿಕ ನೀತಿಗಳು ಮತ್ತು ಕಾರ್ಮಿಕ ಕಾನೂನುಗಳ ಕಾರ್ಪೊರೇಟ್ ವಲಯಕ್ಕೆ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಿಗೆ ಅನುಕೂಲಕರವಾಗಿವೆ.
ಬಡವರು ಮತ್ತು ಯುವಕರು ಸರಾಸರಿ ಕೌಶಲ್ಯಗಳೊಂದಿಗೆ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಗಳನ್ನು ಎದುರಿಸಲು ಲೆವೆಲ್ ಪ್ಲ್ಯಾಯಿಂಗ್ ಫೀಲ್ಡ್ ಕೊರತೆಯನ್ನು ಎದುರಿಸುತ್ತಿದ್ದಾರೆ. ಭಾರತದ ಮಾನವ ಮತ್ತು ಪರಿಸರ ಸೂಚ್ಯಂಕಗಳು ಮತ್ತು ಶ್ರೇಯಾಂಕಗಳು ವಿಶ್ವದಲ್ಲಿ ಹದಗೆಡುತ್ತಿವೆ. ಉತ್ಪಾದನೆ ಮತ್ತು ಉತ್ಪಾದಕತೆಯ ವಿಷಯದಲ್ಲಿ ಭಾರತದ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಲ್ಲ.
ಪ್ರಸಕ್ತ ಭಾರತದ ಸಮಗ್ರ ಆರ್ಥಿಕ ನೀತಿಗಳು ಭಾರತದ ಆರ್ಥಿಕತೆ ಬೆಳವಣಿಗೆಯನ್ನು ವೇಗಗೊಳಿಸಲು, ಮಾನವ ಸಂಪನ್ಮೂಲ ದಕ್ಷತೆಯನ್ನು ಸುಧಾರಿಸಲು, ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಸಾಧಿಸಲು, ಪರಿಸರ ಸ್ನೇಹಿ ಸುಸ್ಥಿರ ಅಭಿವೃದ್ಧಿ ಮಾಡಲು, ವಲಯವಾರು ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಇದರಿಂದಾಗಿ ಉದ್ಯೋಗಗಳನ್ನು ಸೃಷ್ಟಿಸಿ ಬಡತನ ನೀಗಿಸಲು ಸಾಧ್ಯವಾಗಿಲ್ಲ.
ಆದರೂ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂಬ ಭಾರತ ಸರಕಾರದ ಮಹತ್ವಾಕಾಂಕ್ಷೆ ನೀತಿಯು ಅನೇಕ ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುವ ಭಾರತದ ಆರ್ಥಿಕ ನೀತಿಯು ಭಾರತದ ಜನರ ಆಕಾಂಕ್ಷೆ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆಯೇ? ತಲಾ ಆದಾಯದ ಬೆಳವಣಿಗೆ ಅಥವಾ ಜಿಡಿಪಿ ಮಾತ್ರ ಭಾರತವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶ ಎಂದು ನಿರ್ಧರಿಸುವ ಸೂಚಕವಾಗಿದೆಯೇ? ನೈಸರ್ಗಿಕ ಸಂಪನ್ಮೂಲಗಳ ನಾಶದಿಂದ ಹೆಚ್ಚಿನ ಬೆಳವಣಿಗೆಯ ದರವು ಪರಿಸರೀಯವಾಗಿ ಸಮರ್ಥನೀಯವಾಗಿದೆಯೇ? ಹೆಚ್ಚಿನ ಬೆಳವಣಿಗೆಯ ಮಾದರಿಯು ಎಲ್ಲಾ ಜನರ ನಡುವೆ ಆದಾಯವನ್ನು ಸರಿಯಾಗಿ ವಿತರಿಸುತ್ತದೆಯೇ? ಈ ಎಲ್ಲಾ ಪ್ರಶ್ನೆಗಳು ಮೂಲಭೂತವಾಗಿ ಯಾವ ವೆಚ್ಚದಲ್ಲಿ ಮತ್ತು ಯಾರ ವೆಚ್ಚದಲ್ಲಿ ಅಭಿವೃದ್ಧಿ ಎಂಬ ಉತ್ತರವನ್ನು ಸರಕಾರದಿಂದ ನಿರೀಕ್ಷಿಸುತ್ತವೆ.