ಮುನವ್ವರ್ ಫಾರೂಕಿಗೆ ಜಾಮೀನು ನಿರಾಕರಿಸಿದ್ದ ನ್ಯಾಯಾಧೀಶರು ಬಿಜೆಪಿಗೆ ಸೇರ್ಪಡೆ!
► ನಾನು ಆರೆಸ್ಸೆಸ್ ನ ಕಟ್ಟಾ ಅನುಯಾಯಿ ಎಂದ ನ್ಯಾ. ಚಿತ್ತರಂಜನ್ ದಾಸ್ ! ► 'ನ್ಯಾಯಾಂಗ ಸ್ವತಂತ್ರವಾಗಿದೆ' ಎಂಬ ನಂಬಿಕೆ ಇನ್ನೂ ಇದೆಯೇ ?
PC ; PTI
ನ್ಯಾಯಾಧೀಶರು ನಿವೃತ್ತರಾದ ಬೆನ್ನಿಗೇ ರಾಜ್ಯಪಾಲರಾಗುವುದು, ರಾಜ್ಯಸಭಾ ಸದಸ್ಯರಾಗುವುದು ಈಗ ಹಳತಾಯಿತು. ಮೋದಿ ಸರಕಾರ ಬಂದ ಮೇಲೆ ಸಬ್ ಕುಚ್ ಮುಮ್ಕಿನ್ ಹೈ ಎನ್ನುವ ಹಾಗೆ ಈಗ ನ್ಯಾಯಾಧೀಶರು ನೇರವಾಗಿ ರಾಜಕೀಯ ಪಕ್ಷವನ್ನು ಸೇರುತ್ತಿದ್ದಾರೆ. ನೇರವಾಗಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಒಬ್ಬರು ಹೈಕೋರ್ಟ್ ನ್ಯಾಯಧೀಶರು ನಿವೃತ್ತರಾದ ಬೆನ್ನಿಗೆ ಬಿಜೆಪಿ ಸೇರಿದ್ದಾರೆ. ಇನ್ನೊಬ್ಬರು ಹೈಕೋರ್ಟ್ ನ್ಯಾಯಧೀಶರು ನಿವೃತ್ತರಾದ ಬೆನ್ನಿಗೇ ನಾನು ಆರೆಸ್ಸೆಸ್ ನ ಕಟ್ಟಾ ಅನುಯಾಯಿ ಎಂದಿದ್ದಾರೆ. ಈ ವ್ಯವಸ್ಥೆಯೊಳಗೆ, ಅದರಲ್ಲೂ ನ್ಯಾಯಾಂಗ ಹಾಗು ಸಾಂವಿಧಾನಿಕ ಸಂಸ್ಥೆಗಳೊಳಗೆ ಹೇಗೆ ಸಂಘ ಪರಿವಾರದ ಮನಸ್ಥಿತಿಗಳು ಸೇರಿಕೊಂಡಿವೆ ಎಂಬುದು ಮತ್ತೆ ಮತ್ತೆ ಬಯಲಾಗುತ್ತಲೇ ಇದೆ.
ಇಂಥದೊಂದು ಸ್ಥಿತಿಯಲ್ಲಿ ನ್ಯಾಯಮೂರ್ತಿಗಳ ಹುದ್ದೆಯಲ್ಲಿರುವವರು ವೃತ್ತಿಗೆ ಪ್ರಾಮಾಣಿಕವಾಗಿದ್ದರೇ ಎಂಬ ಬಗ್ಗೆ ಅನುಮಾನಗಳು ಏಳದೇ ಇರುವುದಿಲ್ಲ. ನ್ಯಾಯಧೀಶರು ಆಗಿದ್ದವರು ನಿವೃತ್ತಿ ಬಳಿಕ ಸರ್ಕಾರದ ಹುದ್ದೆಗಳಲ್ಲಿ ಹೋಗಿ ಕುಳಿತಾಗ, ಈ ಮೊದಲು ಅವರೆಷ್ಟು ಶುದ್ಧವಿದ್ದರು ಎಂಬ ಸಂದೇಹ ಈ ದೇಶದ ಜನಸಾಮಾನ್ಯರನ್ನು ಕಾಡದೇ ಇರುವುದಿಲ್ಲ.
ನ್ಯಾಯಮೂರ್ತಿಗಳ ಹುದ್ದೆಯಲ್ಲಿದ್ದವರ ರಾಜಕೀಯ ಆಕಾಂಕ್ಷೆಗಳು ಇತ್ತೀಚಿನ ದಿನಗಳಲ್ಲಿ ತುಸು ಹೆಚ್ಚಾಗಿಯೇ ವ್ಯಕ್ತವಾಗುತ್ತಿರುವುದಂತೂ ನಿಜ. ಈಗ, ಮಧ್ಯಪ್ರದೇಶ ಹೈಕೋರ್ಟ್ ನಿವೃತ್ತ ನ್ಯಾಯಧೀಶರು ರೋಹಿತ್ ಆರ್ಯ ತಮ್ಮ ನಿವೃತ್ತಿಯ ಮೂರು ತಿಂಗಳ ಬಳಿಕ ಮೊನ್ನೆ ಜುಲೈ 13ರಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಾರ್ & ಬೆಂಚ್ ವರದಿಯ ಪ್ರಕಾರ, ಭೋಪಾಲ್ನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾ. ಆರ್ಯ ಬಿಜೆಪಿ ಮಧ್ಯಪ್ರದೇಶ ಘಟಕದ ಅಧ್ಯಕ್ಷ ಡಾ ರಾಘವೇಂದ್ರ ಶರ್ಮಾ ಅವರಿಂದ ಸದಸ್ಯತ್ವ ಸ್ವೀಕರಿಸಿದ್ದಾರೆ.
1962ರಲ್ಲಿ ಜನಿಸಿದ ರೋಹಿತ್ ಆರ್ಯ, 1984ರಲ್ಲಿ ವಕೀಲಿಕೆ ವೃತ್ತಿಗೆ ನೋಂದಾಯಿಸಿಕೊಂಡಿದ್ದರು. 2003ರಲ್ಲಿ ಅವರನ್ನು ಮಧ್ಯಪ್ರದೇಶ ಹೈಕೋರ್ಟಿನ ಹಿರಿಯ ವಕೀಲರನ್ನಾಗಿ ನೇಮಿಸಲಾಗಿತ್ತು. 2013ರಲ್ಲಿ ಅವರಿಗೆ ಹೈಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ನೀಡಲಾಗಿತ್ತು ಹಾಗೂ 2015ರಲ್ಲಿ ಖಾಯಂ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 2024ರ ಎಪ್ರಿಲ್ 27ರಂದು ಅವರು ತಮ್ಮ ಸೇವೆಯಿಂದ ನಿವೃತ್ತರಾಗಿದ್ದರು.
2021ರಲ್ಲಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಹಾಸ್ಯ ಕಲಾವಿದ ಮುನವರ್ ಫಾರೂಕಿ ಮತ್ತು ನಳಿನ್ ಯಾದವ್ ಅವರಿಗೆ ನ್ಯಾ. ಆರ್ಯ ಜಾಮೀನು ನಿರಾಕರಿಸಿದ್ದರು. ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಫಾರೂಕಿ ಅವರಿಗೆ ಜಾಮೀನು ನೀಡಿತ್ತು.
ಮತ್ತೂ ಒಂದು ವಿಲಕ್ಷಣ ತೀರ್ಪಿಗಾಗಿ ನ್ಯಾ.ಆರ್ಯ ಸುದ್ದಿಯಾಗಿದ್ದರು. ಲೈಂಗಿಕ ದೌರ್ಜನ್ಯ ಎಸಗಿದವ ರಾಖಿ ಕಟ್ಟಿಸಿಕೊಳ್ಳಬೇಕು ಎಂಬ ವಿವಾದಾತ್ಮಕ ತೀರ್ಪನ್ನು 2020ರಲ್ಲಿ ನೀಡಿ ನ್ಯಾ. ರೋಹಿತ್ ಆರ್ಯ ದೇಶದ ಗಮನ ಸೆಳೆದಿದ್ದರು. ಆರೋಪಿ ತನ್ನ ಹೆಂಡತಿ ಜೊತೆಗೆ ಸಂತ್ರಸ್ತೆಯ ಮನೆಗೆ ತೆರಳಿ ಸಿಹಿ ಹಂಚಬೇಕು. ಸಂತ್ರಸ್ತೆಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳಬೇಕು. ಜೊತೆಗೆ ಯಾವತ್ತಿಗೂ ಆಕೆಗೆ ತನ್ನ ಕೈಲಾದಷ್ಟು ರಕ್ಷಣೆ ನೀಡುವುದಾಗಿ ಪ್ರಮಾಣ ಮಾಡಬೇಕು. ಅಲ್ಲದೆ ಅಣ್ಣಂದಿರು, ತಂಗಿಯರಿಗೆ ಸಾಂಪ್ರದಾಯಿಕವಾಗಿ ಕೊಡುವಂತೆ ಹಣ ನೀಡಬೇಕು. ಜೊತೆಗೆ ಆಕೆಯ ಆಶೀರ್ವಾದವನ್ನೂ ಪಡೆಯಬೇಕು ಎಂದು ಅವರು ಆದೇಶಿಸಿದ್ದರು.
ಈ ಆದೇಶವನ್ನು ಕೂಡ ಅನಂತರ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಜಾಮೀನಿಗೆ ವಿಧಿಸಿದ್ದ ಷರತ್ತುಗಳನ್ನು ಬಲವಾಗಿ ಖಂಡಿಸಿತ್ತು. ನ್ಯಾ. ಆರ್ಯ ಅವರ ಇಂಥದೊಂದು ತೀರ್ಪಿನ ಬಳಿಕ, ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಾಮೀನು ಅರ್ಜಿಗಳ ವಿಚಾರಣೆ ನಡೆಸುವಾಗ ಕೆಳ ನ್ಯಾಯಾಲಯಗಳು ಪಾಲಿಸಬೇಕಾದ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ನೀಡಬೇಕಾಗಿ ಬಂದಿತ್ತು.
ಕೊಲ್ಕತ್ತಾ ಹೈಕೋರ್ಟಿನಿಂದ ನಿವೃತ್ತರಾದ ಜಸ್ಟಿಸ್ ಚಿತ್ತರಂಜನ್ ದಾಸ್ ಯಾವುದೇ ಮುಲಾಜಿಲ್ಲದೆ ತಾನು ಆರೆಸ್ಸೆಸ್ ಕಟ್ಟಾ ಅನುಯಾಯಿ ಎಂದು ಹೇಳಿಕೊಂಡಿದ್ದಾರೆ. ಕಳೆದ ಮಾರ್ಚ್ನಲ್ಲಿ ನಿವೃತ್ತರಾದ ಬಳಿಕ ನ್ಯಾ.ದಾಸ್ ಆರೆಸ್ಸೆಸ್ ಜೊತೆಗಿನ ತಮ್ಮ ಹಳೇ ನಂಟನ್ನು ಬಹಿರಂಗಪಡಿಸಿದ್ಧರು. ಬಾಲ್ಯದಲ್ಲಿ ತಾವು ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದುದರ ಬಗ್ಗೆ ನಿವೃತ್ತಿ ಬಳಿಕ ವಿದಾಯದ ವೇಳೆ ಹೇಳಿಕೊಂಡಿದ್ದರು. ಈಗ, ಮತ್ತೊಮ್ಮೆ ಸಂಘ ಕರೆದರೆ ಸೇವೆಗೆ ಸಿದ್ಧ ಎಂದೂ ಹೇಳಿಕೊಂಡಿದ್ಧಾರೆ.
ಆರೆಸ್ಸೆಸ್ ವ್ಯಕ್ತಿತ್ವ ರೂಪಿಸುವ ಸಂಘಟನೆಯಾಗಿದೆಯೆ ಹೊರತು ಅದು ವ್ಯಕ್ತಿಯ ಮನಸ್ಸು ಬದಲಿಸುವ ಕೆಲಸ ಮಾಡುತ್ತದೆ ಎಂಬ ಆರೋಪ ಸುಳ್ಳು ಎಂದಿದ್ದಾರೆ ನ್ಯಾ. ಚಿತ್ತರಂಜನ್ ದಾಸ್. ಯಾರೇ ಆಗಲಿ ರಾಷ್ಷ್ರಕ್ಕಾಗಿ ಸೇವೆ ಸಲ್ಲಿಸಬೇಕು ಎಂಬುದನ್ನು ಆರೆಸ್ಸೆಸ್ ಕಲಿಸುತ್ತದೆ ಎಂದು ಬಾರ್ & ಬೆಂಚ್ ಗೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆರೆಸ್ಸೆಸ್ ಬಗ್ಗೆ ತಪ್ಪಾಗಿ ಭಾವಿಸುವುದು ಹೆಚ್ಚಾಗಿದೆ ಎಂದೂ ಅವರು ಹೇಳಿದ್ದಾರೆ. ಇದರಿಂದಾಗಿ ಸಂಘದ ಪ್ರತಿಷ್ಠೆ ಹಾಳಾಗುತ್ತಿದೆ ಎಂದು ಅವರು ಬೇಸರ ತೋಡಿಕೊಂಡಿದ್ದಾರೆ.
ಇಂಥದೊಂದು ರಾಜಕೀಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ನಿಮ್ಮ ತೀರ್ಪುಗಳು ನಿರ್ಲಿಪ್ತವಾಗಿದ್ದಿರಲು ಸಾಧ್ಯವೆ ಎಂಬ ಪ್ರಶ್ನೆಯೂ ಅವರಿಗೆ ಎದುರಾಯಿತು. ಅದಕ್ಕೆ ಉತ್ತರಿಸಿದ ಅವರು, ಒಮ್ಮೆ ನ್ಯಾಯಾಧೀಶನಾಗಿ ಪದವಿಗೆ ಏರಿದ ಬಳಿಕ ಅಂದರೆ, ಕಳೆದ 37 ವರ್ಷಗಳಿಂದ ಆರೆಸ್ಸೆಸ್ ಜೊತೆ ಅಂತರ ಕಾಯ್ದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಆರೆಸ್ಸೆಸ್ ಯಾವತ್ತೂ ಎಡಪಂಥ, ಬಲಪಂಥ ಎಂದು ಬೋಧಿಸಿರಲಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಕೊಲ್ಕತ್ತಾ ಹೈಕೋರ್ಟ್ ನ ನ್ಯಾಯಧೀಶರು ಅಭಿಜಿತ್ ಗಂಗೋಪಾಧ್ಯಾಯ ಅವಧಿಗೆ ಮೊದಲೇ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಅವರು ಪಶ್ಚಿಮ ಬಂಗಾಳದ ತಮ್ಲುಕ್ ಕ್ಷೇತ್ರದಿಂದ ಚುನಾವಣೆಗೂ ಸ್ಪರ್ಧಿಸಿ ಗೆದ್ದಿದ್ದಾರೆ. ನ್ಯಾ. ಅಭಿಜಿತ್ ಅವರು ನ್ಯಾಯಾಧೀಶರಾಗಿ ಅವರು ಸತತವಾಗಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧವೇ ತೀರ್ಪು ನೀಡುತ್ತಿದ್ದರು ಮತ್ತು ಇದೇ ವಿಚಾರದಲ್ಲಿ ತಮ್ಮ ಸಹೋದ್ಯೋಗಿಯ ವಿರುದ್ದವೇ ತಿರುಗಿಬಿದ್ದಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಆ ಬಗ್ಗೆ ಸಂದರ್ಶನ ನೀಡಿ ವಿವಾದ ಸೃಷ್ಟಿಸಿದ್ದರು.
ಆ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆಗೆ ಆದೇಶ ನೀಡಿದ ಕೆಲವೇ ಗಂಟೆಗಳಲ್ಲಿ, ನ್ಯಾ. ಗಂಗೂಲಿ ಅವರು ಬಂಗಾಳಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದ ವರದಿ ಮತ್ತು ಅಧಿಕೃತ ಅನುವಾದವನ್ನು ತಮ್ಮೆದುರು ಮಧ್ಯರಾತ್ರಿ ಒಳಗೆ ಹಾಜರುಪಡಿಸುವಂತೆ ಸುಪ್ರೀಂ ಕೋರ್ಟ್ ನ ಸೆಕ್ರೆಟರಿ ಜನರಲ್ ಗೆ ಆದೇಶ ನೀಡಿದ್ದರು. ನನ್ನ ಕೇಸು ಸುಪ್ರೀಂ ಕೋರ್ಟ್ ಎದುರು ಸರಿಯಾಗಿ ಸಲ್ಲಿಕೆಯಾಗಿದೆಯೇ ಎಂದು ನಾನು ನೋಡಬಯಸುತ್ತೇನೆ ಎಂದು ಅವರು ಹೇಳಿದ್ದರು.
ದೇಶದ ಇತಿಹಾಸದಲ್ಲೇ ಇಂತಹದೊಂದು ನಡೆದಿರಲಿಲ್ಲ. ನ್ಯಾಯಾಂಗ ವ್ಯವಸ್ಥೆಯಲ್ಲಿದ್ದವರ ರಾಜಕೀಯ ನಂಟು ಒಳ್ಳೆಯ ಲಕ್ಷಣವೆಂದಂತೂ ಕಾಣಿಸುವುದಿಲ್ಲ. ಮೊದಲೇ ಸರ್ಕಾರ ನ್ಯಾಯಾಂಗದ ಮೇಲೆಯೂ ತನ್ನ ಹಿಡಿತ ಹೊಂದಿರುವ ಆರೋಪಗಳು, ಅನುಮಾನಗಳು ಕಾಡುತ್ತಿರುವಾಗ, ಇದೆಲ್ಲವೂ ಇಡಿಯಾಗಿ ನ್ಯಾಯ ವ್ಯವಸ್ಥೆಯ ಮೇಲೆಯೇ ಜನಸಾಮಾನ್ಯರು ಅನುಮಾನಗೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ. ಆದರೆ ಸಾಂವಿಧಾನಿಕ ಹುದ್ದೆಗಳಲ್ಲಿ ಉಳಿಸಿಕೊಳ್ಳಬೇಕಾದ ಪಾವಿತ್ರ್ಯತೆ, ಪಾಲಿಸಬೇಕಾದ ತಟಸ್ಥ ನಿಲುವು, ರಾಜಕೀಯದೊಂದಿಗೆ ಕಾಯ್ದು ಕೊಳ್ಳಬೇಕಾದ ಅಂತರ - ಇವೆಲ್ಲವುಗಳ ಬಗ್ಗೆ ತಲೆಕೆಡಿಸಿಕೊಳ್ಳುವವರು ಈಗ ಯಾರಿದ್ದಾರೆ ?