ಮಾನವ ಸಮಾಜಕ್ಕೆ ಪ್ರವಾದಿ ಮುಹಮ್ಮದರ (ಸ) ಎರಡು ಮಹದುಪಕಾರಗಳು
''ನಿಜವಾಗಿ, ಜಗತ್ತಿನ ಬೇರೆಲ್ಲ ಮಹಾನುಭಾವರಂತೆ ಮುಹಮ್ಮದರು (ಸ) ಕೂಡಾ ಕಾಲಕ್ರಮೇಣ ದೇವರಾಗಿ ಬಿಡುವ ಸಾಧ್ಯತೆ ಇತ್ತು. ಕನಿಷ್ಠ ಪಕ್ಷ ದೇವರ ಪುತ್ರ, ಅವತಾರ ಇತ್ಯಾದಿಯಾಗುವ ಸಾಧ್ಯತೆಯಂತೂ ಖಂಡಿತ ಇತ್ತು. ಆದರೆ ಮುಹಮ್ಮದ್ (ಸ) ಪರಿಚಯಿಸಿದ ಧರ್ಮ ಹಾಗೂ ಜೀವನ ವ್ಯವಸ್ಥೆಯಲ್ಲಿ ದೇವರನ್ನು ಮಾನವರ ಸ್ಥಾನಕ್ಕೆ ಇಳಿಸುವುದಕ್ಕಾಗಲಿ, ಮಾನವರನ್ನು ದೇವರ ಸ್ಥಾನಕ್ಕೆ ಏರಿಸುವುದಕ್ಕಾಗಲಿ ಯಾವುದೇ ಬಾಗಿಲು ಮಾತ್ರವಲ್ಲ, ಸಣ್ಣ ಕಿಟಕಿ ಕೂಡಾ ಉಳಿಯದಂತೆ ನೋಡಿಕೊಳ್ಳಲಾಗಿದೆ. ಉದಾ: ಒಬ್ಬ ವ್ಯಕ್ತಿ ಇಸ್ಲಾಮ್ ಧರ್ಮದ ಅನುಯಾಯಿಯಾಗಬೇಕಿದ್ದರೆ ಅಥವಾ ಇಸ್ಲಾಮ್ ಧರ್ಮದೊಳಗೆ ಪ್ರವೇಶ ಪಡೆದು ಮುಸ್ಲಿಮನಾಗಬೇಕಿದ್ದರೆ, ಅವನು ಕೆಲವು ವಿಷಯಗಳನ್ನು ಅರಿತುಕೊಂಡು ಆ ಕುರಿತು ತನ್ನ ನಂಬಿಕೆಯನ್ನು ಬಹಿರಂಗವಾಗಿ ಘೋಷಿಸಬೇಕಾಗುತ್ತದೆ.''
- ರೂಹೀ, ಪುತ್ತಿಗೆ
ಕ್ರಿ.ಶ. ಏಳನೆಯ ಶತಮಾನದ ಆದಿಯಲ್ಲಿ ಪ್ರವಾದಿ ಮುಹಮ್ಮದ್ (ಸ) ಜಗತ್ತಿಗೆ ಕಲಿಸಿ ಹೋದ ಧರ್ಮವು ಆ ವರೆಗೆ ಜಗತ್ತಿಗೆ ಪರಿಚಿತವಾಗಿದ್ದ ಇತರ ಧರ್ಮಗಳಿಗಿಂತ ಸಂಪೂರ್ಣ ಭಿನ್ನವೇನೂ ಆಗಿರಲಿಲ್ಲ. ತಾನು ತೀರಾ ಹೊಸ ಧರ್ಮವೊಂದನ್ನು ತಂದಿದ್ದೇನೆ ಎಂದು ಸ್ವತಃ ಮುಹಮ್ಮದ್ (ಸ) ಅವರು ಕೂಡಾ ಹೇಳಿಕೊಂಡಿದ್ದಿಲ್ಲ. ನಿಜವಾಗಿ, ಅವರ ಧರ್ಮದ ಕುರಿತು ಅವರ ಕೆಲವು ಸಮಕಾಲೀನ ವಿರೋಧಿಗಳು ಆರೋಪ ಅಥವಾ ದೂಷಣೆಯ ಧ್ವನಿಯಲ್ಲಿ, ಇದೊಂದು ಹೊಸ ಧರ್ಮ ಎಂದು ಕರೆದದ್ದುಂಟು. ಆದರೆ ಪ್ರತಿಬಾರಿಯೂ ಇಂತಹ ಆರೋಪ ಬಂದಾಗ ಮುಹಮ್ಮದರು (ಸ) ಅದನ್ನು ಸ್ಪಷ್ಟವಾಗಿ ಅಲ್ಲಗಳೆಯುತ್ತಿದ್ದರು. ಅವರು ತಮ್ಮ ಧರ್ಮವನ್ನು ಜಗತ್ತಿನ ಪ್ರಪ್ರಥಮ ಮಾನವನು ಪಾಲಿಸಿದ್ದ ಅದೇ ಧರ್ಮವೆಂದು, ಎಲ್ಲ ಕಾಲ ಮತ್ತು ಎಲ್ಲ ಪ್ರದೇಶಗಳಲ್ಲಿ ಎಲ್ಲ ದೇವದೂತರು ಮುಂದಿಟ್ಟ ಧರ್ಮವೆಂದು ಪರಿಚಯಿಸುತ್ತಿದ್ದರು.
ಮಾತ್ರವಲ್ಲ, ಅವರು ತಮ್ಮ ಧರ್ಮವನ್ನು ಅಖಿಲ ಬ್ರಹ್ಮಾಂಡದ, ಅದರಲ್ಲಿರುವ ಸರ್ವಸ್ವದ, ಸಕಲ ಚರಾಚರರ ಮತ್ತು ಎಲ್ಲ ಜೀವಿ-ನಿರ್ಜೀವಿಗಳ ಸೃಷ್ಟಿಕರ್ತನು ನೀಡಿದ ಧರ್ಮವೆಂದು, ವಾಯು ಮತ್ತು ಜಲಗಳ ಧರ್ಮವೆಂದು, ಭೂಮಿ ಮತ್ತು ಆಕಾಶಗಳ ಧರ್ಮವೆಂದು, ಸೂರ್ಯ-ಚಂದ್ರರ ಧರ್ಮವೆಂದು, ಪ್ರಕೃತಿಯ ಧರ್ಮವೆಂದು, ನಿಸರ್ಗದೊಂದಿಗೆ ಹಾಗೂ ಮಾನವ ಸ್ವಭಾವದೊಂದಿಗೆ ಸಂಪೂರ್ಣ ಸಾಮರಸ್ಯವಿರುವ ಧರ್ಮವೆಂದು ವರ್ಣಿಸುತ್ತಿದ್ದರು. ಪ್ರಾಚೀನ ಕಾಲದಿಂದಲೂ ಎರಡು ವಿಷಯಗಳು ಮಾನವ ಸಮಾಜವನ್ನು ಗೊಂದಲಕ್ಕೆ ಕೆಡವುತ್ತಾ ಬಂದಿವೆ. ಒಂದು, ದೇವರು ಮತ್ತು ಎರಡನೆಯದು ಮಾನವೀಯ ಸಂಬಂಧಗಳು.
ಪ್ರಸ್ತುತ ಎರಡೂ ವಿಷಯಗಳ ಕುರಿತು ಮುಹಮ್ಮದರು (ಸ) ಸವಿಸ್ತಾರ ಬೆಳಕು ಚೆಲ್ಲಿದರು. ಈ ವಿಷಯಗಳಲ್ಲಿ ಇತರ ಅನೇಕ ಮಹಾತ್ಮರು ಅಥವಾ ದಾರ್ಶನಿಕರು ಮುಂದಿಟ್ಟ ವಿಶ್ಲೇಷಣೆಗಳಿಗೆ ಹೋಲಿಸಿದರೆ ಪ್ರವಾದಿ ಮುಹಮ್ಮದ್ (ಸ) ಅವರು ಮುಂದಿಟ್ಟ ವಿಶ್ಲೇಷಣೆಯಲ್ಲಿ ಎದ್ದು ಕಾಣುವ ದೊಡ್ಡ ವಿಶೇಷತೆ, ಅದರಲ್ಲಿನ ಅದ್ಭುತ ಸ್ಪಷ್ಟತೆ ಮತ್ತು ಪರಮ ಸರಳತೆ. ದೇವರು ಮತ್ತು ಮಾನವೀಯ ಸಂಬಂಧ, ಸ್ಥಾನಮಾನ ಇತ್ಯಾದಿಗಳ ಕುರಿತಾದ ಅವರ ಅನೇಕ ಹೇಳಿಕೆಗಳು ವಿವಿಧ ಪ್ರಾಚೀನ, ಕುತೂಹಲ ಭರಿತ, ಮುಗ್ಧ ಪ್ರಶ್ನೆಗಳಿಗೆ ಉತ್ತರವಾಗಿ ಮೂಡಿ ಬಂದಿದ್ದವು. ಅವರ ಹೇಳಿಕೆಗಳು ಮತ್ತವರ ಉತ್ತರಗಳು ಧರ್ಮಶಾಸ್ತ್ರ, ತತ್ವಶಾಸ್ತ್ರ, ಅಧ್ಯಾತ್ಮ, ಪರಮಾರ್ಥ ಇತ್ಯಾದಿಗಳ ಕುರಿತು ಪ್ರಾಥಮಿಕ ತಿಳುವಳಿಕೆಯೂ ಇಲ್ಲದ ಅಮಾಯಕರಿಗೆ ಕೂಡಾ ವಿಷಯವನ್ನು ಮನವರಿಕೆ ಮಾಡಿಸುತ್ತಿದ್ದವು.
ಅದೇವೇಳೆ, ಸದಾ ಅಧ್ಯಾತ್ಮ, ಪರಮಾರ್ಥ, ಧರ್ಮಶಾಸ್ತ್ರ, ತತ್ವಶಾಸ್ತ್ರ ಇತ್ಯಾದಿಗಳಿಗೆ ಸಂಬಂಧಿಸಿದ ಆಳವಾದ ಚಿಂತನೆ, ಅಧ್ಯಯನ, ಸಂಶೋಧನೆ ಮತ್ತು ಸಂವಾದಗಳಲ್ಲೇ ಮುಳುಗಿರುತ್ತಿದ್ದ ವಿದ್ವಾಂಸ ಚೇತನಗಳಿಗೂ ಸಂಪೂರ್ಣ ಸಂತೃಪ್ತಿ ಒದಗಿಸುವ ಸಾಮರ್ಥ್ಯ ಅವರ ಹೇಳಿಕೆ ಮತ್ತು ಉತ್ತರಗಳಲ್ಲಿರುತ್ತಿತ್ತು. ಎಲ್ಲ ಕಾಲಗಳಲ್ಲೂ ಜಗತ್ತಿನೆಲ್ಲೆಡೆ, ಪುಟ್ಟ ಗುಹೆಗಳ ನಿವಾಸಿಗಳಿಂದಾರಂಭಿಸಿ, ಭವ್ಯ ಅರಮನೆವಾಸಿಗಳ ತನಕ ಎಲ್ಲರಲ್ಲೂ ಅತ್ಯಧಿಕ ಕುತೂಹಲ ಹಾಗೂ ಜಿಜ್ಞಾಸೆ ಮೂಡಿಸಿದ ಮತ್ತು ಅವರನ್ನು ಭಾರೀ ಸಂದೇಹ, ಗೊಂದಲಗಳಿಗೆ ತಳ್ಳಿರುವ ಒಂದು ವಿಷಯವಿದ್ದರೆ ಅದು - ದೇವರು. ಹಲವು ಶ್ರೇಷ್ಠ ಉದ್ದೇಶಗಳಿಗಾಗಿ ದೇವರ ಹೆಸರು ಬಳಕೆಯಾಗಿದೆ. ಆದರೆ ಅದೇ ವೇಳೆ, ಎಲ್ಲ ಬಗೆಯ ವೌಢ್ಯಗಳನ್ನು ಪೋಷಿಸಲು, ಜನರನ್ನು ವಿಂಗಡಿಸಲು, ಶ್ರೇಣೀಕರಿಸಲು, ಅವರ ನಡುವೆ ರಕ್ತಪಾತ ಮಾಡಿಸಲು, ಅವರನ್ನು ಶೋಷಿಸಲು, ತುಳಿಯಲು, ದೋಚಲು ಮತ್ತು ದಾಸ್ಯದಲ್ಲಿಡಲು ಬಹಳ ವ್ಯಾಪಕವಾಗಿ ಬಳಸಲಾಗಿರುವ ಒಂದು ಪದವಿದ್ದರೆ ಅದು - ದೇವರು. ಎಲ್ಲ ಬಗೆಯ ಅನ್ಯಾಯ, ಅಪರಾಧ, ನಿರ್ಲಜ್ಜೆ, ಅನೈತಿಕತೆ, ಪಾಶವೀಯತೆ ಮತ್ತು ಕ್ರೌರ್ಯಗಳನ್ನು ಸಮರ್ಥಿಸುವುದಕ್ಕೂ ದೇವರ ಹೆಸರನ್ನೇ ಬಳಸಲಾಗಿದೆ.
ಜನಸಾಮಾನ್ಯರಲ್ಲಿ ದೇವರ ಕುರಿತು ಕಂಡು ಬರುವ ಅಜ್ಞಾನ, ಅಸ್ಪಷ್ಟತೆ, ಸಂದೇಹ ಮತ್ತು ಗೊಂದಲವು ಹಲವಾರು ಬಗೆಯ ವಿಕೃತ ನಿರೂಪಣೆ, ವಿಶ್ಲೇಷಣೆ ಮತ್ತು ದುರ್ವ್ಯಾಖ್ಯಾನಗಳಿಗೆ ದಾರಿ ಮಾಡಿಕೊಟ್ಟದ್ದಿದೆ. ದೇವರ ಕುರಿತು ಜನರು ಮನಬಂದಂತೆ ಕಥೆಗಳನ್ನು ಕಟ್ಟಿದರು. ಕವಿತೆಗಳನ್ನು ಬರೆದರು. ತಮ್ಮ ಇಚ್ಛಾನುಸಾರ ಅವನನ್ನು ಕಲ್ಪಿಸಿಕೊಂಡರು. ಇಚ್ಛಾನುಸಾರ ಅವನನ್ನು ಚಿತ್ರಿಸಿದರು. ಎಲ್ಲ ಬಗೆಯ ಇತಿಮಿತಿಗಳನ್ನು ಮತ್ತು ದೌರ್ಬಲ್ಯಗಳನ್ನು ದೇವರ ಮೇಲೆ ಆರೋಪಿಸಲಾಯಿತು. ವಿವಿಧ ಸೃಷ್ಟಿಗಳ ರೂಪ, ಗುಣ, ಲಕ್ಷಣ ಮತ್ತು ವಿಶೇಷತೆಗಳನ್ನೆಲ್ಲ ಸೃಷ್ಟಿಕರ್ತನಿಗೆ ಜೋಡಿಸಲಾಯಿತು. ದೇವರು ನಿರಾಕಾರನೆಂದು ಹೇಳುತ್ತಾ ಅದರ ಜೊತೆಗೇ ಆಕಾರಗಳನ್ನು ದೇವರೆಂದು ಗುರುತಿಸಲಾಯಿತು. ದೇವರನ್ನು ಅನಾದಿ ಮತ್ತು ಅನಂತನೆಂದು ಕರೆಯುವ ಜೊತೆಗೇ ಅವನು ಒಮ್ಮೆ ಹುಟ್ಟಿದ, ಒಮ್ಮೆ ಸತ್ತ, ಮತ್ತೆ ಹುಟ್ಟಿದ, ಮತ್ತೆ ಸತ್ತ ಕತೆಗಳನ್ನು ಹೆಣೆಯಲಾಯಿತು.
ದೇವರನ್ನು ವಿಭಿನ್ನ ಆಕಾರಗಳ, ಚಿತ್ರಗಳ ಮತ್ತು ವಿಗ್ರಹಗಳ ಮಟ್ಟಕ್ಕೆ ಇಳಿಸಿ ವಿವಿಧ ಆಕಾರ, ಚಿತ್ರ ಮತ್ತು ವಿಗ್ರಹಗಳನ್ನು ದೇವತ್ವದ ಸ್ಥಾನಕ್ಕೆ ಏರಿಸಲಾಯಿತು. ಮಾನವರನ್ನು ಮಾತ್ರವಲ್ಲ, ಹಸು, ಆನೆ, ಕೋತಿ, ಹಾವು, ಚೇಳು, ಮೀನು, ಪಕ್ಷಿ ಇತ್ಯಾದಿಗಳನ್ನು, ವಾಯು, ನೀರು ಮತ್ತು ಮಣ್ಣನ್ನು, ಕಲ್ಲನ್ನು, ಆಯುಧಗಳನ್ನು, ಯಂತ್ರಗಳನ್ನು, ವಾಹನಗಳನ್ನು ಹೀಗೆ ಬಹುತೇಕ ಎಲ್ಲವನ್ನೂ ದೇವರೆಂದು ಕರೆಯಲಾಯಿತು. ಅವುಗಳಿಗೆ ಪೂಜೆ ಸಲ್ಲಿಸಲಾಯಿತು. ತಾಯಿ, ತಂದೆ, ಪತಿ, ಗುರು, ರಾಜ, ದೇಶ ಇವರನ್ನೆಲ್ಲ ಹೊಗಳುತ್ತಾ ದೇವರೆಂದು ವರ್ಣಿಸಲಾಯಿತು. ಯಾರನ್ನಾದರೂ ಹೊಗಳುವುದಕ್ಕೆ ‘ದೇವರಂಥವರು, ದೇವ ಸಮಾನರು, ದೇವ ಸದೃಶರು, ಮಾನವರೂಪದಲ್ಲಿ ಅವತರಿಸಿ ಬಂದ ದೇವರು... ...’ ಮುಂತಾದ ಪದಗಳ ಬಳಕೆ ಸಾಮಾನ್ಯವಾಗಿ ಬಿಟ್ಟಿತು. ಇಷ್ಟೊಂದು ಸಂಕೀರ್ಣ ಸ್ವರೂಪ ತಾಳಿದ್ದ ವಿಷಯವನ್ನು ಮುಹಮ್ಮದ್ (ಸ), ಜನಸಾಮಾನ್ಯರು ಗ್ರಹಿಸಲು ಸಾಧ್ಯವಾಗುವಷ್ಟು ಸರಳ ಹಾಗೂ ಸ್ಪಷ್ಟವಾಗಿ ನಿರೂಪಿಸಿದರು.
ಮಾತ್ರವಲ್ಲ ಆ ಗ್ರಹಿಕೆಯನ್ನು ಬಹುಕಾಲ ಸುರಕ್ಷಿತವಾಗಿ ಉಳಿಸಿಕೊಳ್ಳುವ ವಿಧಾನವನ್ನೂ ಕಲಿಸಿ ಕೊಟ್ಟರು. ಇದು ಸುಲಭಕಾರ್ಯವಾಗಿರಲಿಲ್ಲ. ಆದರೆ ಮುಹಮ್ಮದ್ (ಸ) ಈ ಕಾರ್ಯವನ್ನು ಸಾಧಿಸಿ ತೋರಿಸಿದರು. ನಮ್ಮ ಜಗತ್ತಿನಲ್ಲಿ ದೇವರನ್ನು ಪರಿಚಯಿಸಲು ಬಂದ ಹೆಚ್ಚಿನವರೆಲ್ಲಾ ಸ್ವತಃ ದೇವರಾಗಿ ಬಿಟ್ಟರು. ವಿಗ್ರಹಾರಾಧನೆ ಮಾಡಬಾರದು ಎಂದು ಉಪದೇಶಿಸಿದವರಲ್ಲಿ ಹೆಚ್ಚಿನವರ ವಿಗ್ರಹಗಳು ನಿರ್ಮಾಣವಾದವು. ಒಬ್ಬ ದೇವರ ಹೊರತು ಇನ್ನಾರನ್ನೂ ಪೂಜಿಸಬೇಡಿ ಎಂದು ಬೋಧಿಸಿದ ಅನೇಕರು ಸ್ವತಃ ಪೂಜ್ಯರು ಹಾಗೂ ಪೂಜಾ ಪಾತ್ರರಾಗಿ ಬಿಟ್ಟರು. ಅವರಿಗೆಲ್ಲಾ ಹೋಲಿಸಿದರೆ ಮುಹಮ್ಮದ್ (ಸ) ಅವರಲ್ಲಿ ಎದ್ದು ಕಾಣುವ ಒಂದು ದೊಡ್ಡ ವಿಶೇಷತೆ ಏನೆಂದರೆ ಮುಹಮ್ಮದರು (ಸ) ಎಂದೂ ಎಲ್ಲೂ ಯಾರ ಪಾಲಿಗೂ ದೇವರಾದದ್ದಿಲ್ಲ. ಲೋಕದಲ್ಲಿಂದು ಮುಹಮ್ಮದರಿಗೆ ಇನ್ನೂರು ಕೋಟಿಗೂ ಅಧಿಕ ಮಂದಿ ಅನುಯಾಯಿಗಳಿದ್ದಾರೆ, ಅಭಿಮಾನಿಗಳಿದ್ದಾರೆ.
ಅವರೆಲ್ಲಾ ಮುಹಮ್ಮದರನ್ನು ಅಪಾರ ಗೌರವದಿಂದ ಕಾಣುತ್ತಾರೆ. ಅವರನ್ನು ತುಂಬಾ ಭಾವುಕರಾಗಿ ಪ್ರೀತಿಸುತ್ತಾರೆ, ಹೊಗಳುತ್ತಾರೆ, ವೈಭವೀಕರಿಸುತ್ತಾರೆ. ಕೆಲವೊಮ್ಮೆ ಹೊಗಳಿಕೆಯಲ್ಲಿ ಉತ್ಪ್ರೇಕ್ಷೆಯನ್ನೂ ಮಾಡುತ್ತಾರೆ. ಕಥೆಗಳನ್ನೂ ಕಟ್ಟುತ್ತಾರೆ. ಆದರೆ ಅವರಲ್ಲಿ ಯಾರೊಬ್ಬರೂ ಮುಹಮ್ಮದರನ್ನು ಪೂಜಿಸುವುದಿಲ್ಲ. ಯಾರೂ ಮುಹಮ್ಮದ್ (ಸ)ರನ್ನು ದೇವರೆಂದಾಗಲಿ, ದೇವರ ಅವತಾರವೆಂದಾಗಲಿ, ದೇವರ ಪುತ್ರ ಅಥವಾ ದೇವರ ಸಂತಾನವೆಂದಾಗಲಿ, ದೇವರ ಸಹಾಯಕ ಅಥವಾ ಪಾಲುದಾರನೆಂದಾಗಲಿ ಕರೆಯುವುದಿಲ್ಲ. ಇತರೆಲ್ಲ ಮಾನವರಂತೆ ಮುಹಮ್ಮದ್ (ಸ) ಕೂಡಾ ದೇವರ ದಾಸರಾಗಿದ್ದರು ಎಂದೇ ಕರೆಯುತ್ತಾರೆ ಮತ್ತು ಅದುವೇ ಅವರ ಕುರಿತು ಹೇಳಬಹುದಾದ ಅತ್ಯಂತ ಗೌರವದ ಮಾತಾಗಿದೆ. ಈ ರೀತಿ ಮುಹಮ್ಮದರು (ಸ) ಈ ಲೋಕದಿಂದ ನಿರ್ಗಮಿಸಿ ಸುಮಾರು ಒಂದೂವರೆ ಸಹಸ್ರಮಾನದ ಬಳಿಕವೂ ಜನಮಾನಸದಲ್ಲಿ ದೇವರಾಗದೆ ಮನುಷ್ಯನಾಗಿಯೇ ಉಳಿದಿರುವುದು ಆಕಸ್ಮಿಕವೇನಲ್ಲ. ಇತಿಹಾಸವು ಪುರಾಣವಾಗಿ ಬಿಡದಂತೆ, ಕಥೆಗಳು ಇತಿಹಾಸವಾಗಿ ಬಿಡದಂತೆ, ಸೃಷ್ಟಿಕರ್ತನು ಸೃಷ್ಟಿಯಾಗಿ ಬಿಡದಂತೆ, ಮನುಷ್ಯನು ದೇವರಾಗಿ ಬಿಡದಂತೆ ಮತ್ತು ಘಟನೆಗಳು ಕಥೆಗಳ ಮಟ್ಟಕ್ಕೆ ಇಳಿಯದಂತೆ ನೋಡಿಕೊಳ್ಳುವಲ್ಲಿ, ಮುಹಮ್ಮದರು (ಸ) ಮಾನವ ಸಮಾಜಕ್ಕೆ ತಲುಪಿಸಿದ ಕುರ್ಆನ್, ಸ್ವತಃ ಅವರ ಮಾತು-ಕೃತಿಗಳ ಸಂಗ್ರಹವಾದ ಹದೀಸ್, ಅವರು ಪರಿಚಯಿಸಿದ ಸತ್ಯ ಹಾಗೂ ಧರ್ಮದ ವಿವರಗಳು, ನಂಬಿಕೆಗಳು, ನಿತ್ಯ ಕರ್ಮಗಳು ಮತ್ತು ಆಚರಣೆಗಳ ವ್ಯೆಹ - ಇವೆಲ್ಲವೂ ಪ್ರಮುಖ ಪಾತ್ರ ವಹಿಸಿವೆ.
ಧರ್ಮವನ್ನರಿಯುವುದಕ್ಕೆ ಅವಲಂಬಿಸಲಾಗುವ ಮೂಲಗಳು ಸ್ವಸ್ಥವಾಗಿರುವ ತನಕ ಧರ್ಮವೂ ಸ್ವಸ್ಥವಾಗಿರುತ್ತದೆ. ಜ್ಞಾನದ ಮೂಲಗಳು ವಿರೂಪಗೊಂಡಾಗ ಅಜ್ಞಾನವೇ ಧರ್ಮವಾಗಿ ಬಿಡುತ್ತದೆ. ಧರ್ಮವನ್ನು ಅರಿಯಲು ಕಥೆ ಕಾದಂಬರಿಗಳನ್ನು ಅವಲಂಬಿಸಬೇಕಾದಾಗ ಸುಳ್ಳುಗಳು ಮತ್ತು ಭ್ರಮೆಗಳೇ ಧರ್ಮವಾಗಿ ಬಿಡುತ್ತವೆ. ಪ್ರವಾದಿ ಮುಹಮ್ಮದ್ (ಸ) ಅವರ ವ್ಯಕ್ತಿತ್ವವಾಗಲಿ ಅವರು ಕಲಿಸಿ ಹೋದ ಧರ್ಮವಾಗಲಿ ಯಾವ ಹಂತದಲ್ಲೂ ಅಂತಹ ದುರಂತಕ್ಕೆ ತುತ್ತಾಗಲಿಲ್ಲ. ಹಲವಾರು ಶತಮಾನಗಳು ಕಳೆದ ಬಳಿಕವೂ ಅವು ತಮ್ಮ ಮೂಲರೂಪದಲ್ಲಿ ಸ್ವಸ್ಥವಾಗಿ ಉಳಿದುಕೊಂಡಿವೆ. ನಿಜವಾಗಿ, ಜಗತ್ತಿನ ಬೇರೆಲ್ಲ ಮಹಾನುಭಾವರಂತೆ ಮುಹಮ್ಮದರು (ಸ) ಕೂಡಾ ಕಾಲಕ್ರಮೇಣ ದೇವರಾಗಿ ಬಿಡುವ ಸಾಧ್ಯತೆ ಇತ್ತು. ಕನಿಷ್ಠ ಪಕ್ಷ ದೇವರ ಪುತ್ರ, ಅವತಾರ ಇತ್ಯಾದಿಯಾಗುವ ಸಾಧ್ಯತೆಯಂತೂ ಖಂಡಿತ ಇತ್ತು. ಆದರೆ ಮುಹಮ್ಮದ್ (ಸ) ಪರಿಚಯಿಸಿದ ಧರ್ಮ ಹಾಗೂ ಜೀವನ ವ್ಯವಸ್ಥೆಯಲ್ಲಿ ದೇವರನ್ನು ಮಾನವರ ಸ್ಥಾನಕ್ಕೆ ಇಳಿಸುವುದಕ್ಕಾಗಲಿ, ಮಾನವರನ್ನು ದೇವರ ಸ್ಥಾನಕ್ಕೆ ಏರಿಸುವುದಕ್ಕಾಗಲಿ ಯಾವುದೇ ಬಾಗಿಲು ಮಾತ್ರವಲ್ಲ, ಸಣ್ಣ ಕಿಟಕಿ ಕೂಡಾ ಉಳಿಯದಂತೆ ನೋಡಿಕೊಳ್ಳಲಾಗಿದೆ.
ಉದಾ: ಒಬ್ಬ ವ್ಯಕ್ತಿ ಇಸ್ಲಾಮ್ ಧರ್ಮದ ಅನುಯಾಯಿಯಾಗಬೇಕಿದ್ದರೆ ಅಥವಾ ಇಸ್ಲಾಮ್ ಧರ್ಮದೊಳಗೆ ಪ್ರವೇಶ ಪಡೆದು ಮುಸ್ಲಿಮನಾಗಬೇಕಿದ್ದರೆ, ಅವನು ಕೆಲವು ವಿಷಯಗಳನ್ನು ಅರಿತುಕೊಂಡು ಆ ಕುರಿತು ತನ್ನ ನಂಬಿಕೆಯನ್ನು ಬಹಿರಂಗವಾಗಿ ಘೋಷಿಸಬೇಕಾಗುತ್ತದೆ. ಅಲ್ಲಾಹನೊಬ್ಬನೇ ಪೂಜಾರ್ಹ, ಅವನ ಹೊರತು ಬೇರಾರೂ ಪೂಜಾರ್ಹರಲ್ಲ ಎಂಬುದು ಅಂತಹ ಒಂದು ಘೋಷಣೆಯಾದರೆ, ಮುಹಮ್ಮದರು (ಸ) ಅಲ್ಲಾಹನ ದಾಸರು ಮತ್ತು ದೂತರು ಎಂಬುದು ಆ ಪೈಕಿ ಇನ್ನೊಂದು ಘೋಷಣೆಯಾಗಿದೆ. (ಇತರ ಘೋಷಣೆಗಳು ಎಲ್ಲ ದೇವದೂತರು, ಎಲ್ಲ ದೇವಗ್ರಂಥಗಳು, ಮಲಕ್ ಎಂಬ ಜೀವಿಗಳು, ವಿಧಿ ಮತ್ತು ಪರಲೋಕಗಳಿಗೆ ಸಂಬಂಧಿಸಿವೆ.) ಇಲ್ಲಿ ಮುಹಮ್ಮದರು ಅಲ್ಲಾಹನ ದೂತರು ಎನ್ನುವುದಕ್ಕೆ ಮುನ್ನ ಅವರು ಅಲ್ಲಾಹನ ದಾಸರೆಂದು ಘೋಷಿಸಬೇಕಾಗುತ್ತದೆಂಬುದು ಬಹಳ ಗಮನಾರ್ಹ. ಅಂದರೆ ಧರ್ಮದ ಪ್ರವೇಶದ್ವಾರದಲ್ಲೇ ವೈಚಾರಿಕ ಸ್ಪಷ್ಟತೆಯನ್ನು ಖಚಿತ ಪಡಿಸಿಕೊಳ್ಳಲಾಗುತ್ತದೆ. ಇದು ಜೀವನದಲ್ಲೊಮ್ಮೆ ಮಾತ್ರ ಮಾಡಬೇಕಾದ ಘೋಷಣೆಯಲ್ಲ. ಈ ಘೋಷಣೆಯನ್ನು ನಿತ್ಯ ಉಚ್ಚರಿಸಬೇಕಾಗುತ್ತದೆ.
ಪದೇ ಪದೇ ಉಚ್ಚರಿಸಬೇಕಾಗುತ್ತದೆ. ಪ್ರತಿಯೊಂದು ನಮಾಝ್ನಲ್ಲಿ ಉಚ್ಚರಿಸಬೇಕಾಗುತ್ತದೆ. ಪ್ರವಾದಿಯ ಮೇಲೆ ಎಷ್ಟೇ ಪ್ರೀತಿ ಇದ್ದರೂ ಯಾವುದೇ ಸ್ವರೂಪದಲ್ಲಿ ಅವರ ಚಿತ್ರ ಬಿಡಿಸುವ ಅಥವಾ ಅವರ ಮೂರ್ತಿ ಕೆತ್ತುವ ಹಕ್ಕು ಯಾರಿಗೂ ಇಲ್ಲ. ಮಾತ್ರವಲ್ಲ, ಅಂತಹ ಚಟುವಟಿಕೆಗಳನ್ನು ಮಹಾ ಪಾಪ ಎಂದು ಪರಿಗಣಿಸಲಾಗುತ್ತದೆ. ನಿತ್ಯ ಹಲವಾರು ಬಾರಿ, ಅಲ್ಲಾಹನು ದೇವರೆಂಬುದನ್ನು ನೆನಪಿಸುವುದಕ್ಕೆ ಏರ್ಪಾಡು ಇರುವಂತೆಯೇ, ಮುಹಮ್ಮದರು ಅಲ್ಲಾಹನ ದೂತರು ಮತ್ತು ದಾಸರು ಎಂಬುದನ್ನು ನೆನಪಿಸುವುದಕ್ಕೆ ಕೂಡಾ ಪ್ರಬಲವಾದ ಏರ್ಪಾಡು ಮಾಡಲಾಗಿದೆ. ಮುಹಮ್ಮದ್ (ಸ) ಹೀಗೆಂದು ಆದೇಶಿಸಿದ್ದರು:
‘‘ಕ್ರೈಸ್ತರು ಮರ್ಯಮರ ಪುತ್ರ ಈಸಾರ ವಿಷಯದಲ್ಲಿ ಮಾಡಿದಂತೆ ನೀವು ನನ್ನನ್ನು ಹೊಗಳುವ ವಿಷಯದಲ್ಲಿ ಉತ್ಪ್ರೇಕ್ಷೆಗೆ ಇಳಿಯಬೇಡಿ. ನಾನು ಅಲ್ಲಾಹನ ದಾಸ ಮಾತ್ರ. ಆದ್ದರಿಂದ ನನ್ನನ್ನು ‘ಅವನ ದಾಸ ಮತ್ತು ದೂತ’ ಎಂದು ಕರೆಯಿರಿ.’’ ಈ ಕುರಿತಂತೆ ಕುರ್ಆನ್ನಲ್ಲಿ ದಿವ್ಯಾದೇಶವು ಹೀಗಿದೆ: ‘‘(ದೂತರೇ), ಹೇಳಿರಿ; ನಾನು ಕೇವಲ ನಿಮ್ಮಂತಹ ಮಾನವ. ಏಕ ಮಾತ್ರ ದೇವರೇ ನಿಮ್ಮ ದೇವರೆಂದು ನನಗೆ ದಿವ್ಯವಾಣಿಯನ್ನು ಕಳಿಸಲಾಗಿದೆ.... ......’’ (ಕುರ್ ಆನ್: 41:6)
‘‘(ದೂತರೇ), ಹೇಳಿರಿ; ನಾನೊಬ್ಬ ಹೊಸ ಬಗೆಯ ದೂತನೇನೂ ಅಲ್ಲ. ನಾಳೆ ನನಗೇನಾಗಲಿದೆ ಎಂಬುದಾಗಲಿ ನಿಮಗೇನಾಗಲಿದೆ ಎಂಬುದಾಗಲಿ ನನಗೆ ತಿಳಿಯದು. ನಾನಂತು ನನಗೆ ಇಳಿಸಿ ಕೊಡಲಾಗಿರುವ ಸಂದೇಶವನ್ನಷ್ಟೇ ಅನುಸರಿಸುತ್ತೇನೆ. ನಾನು ಸ್ಪಷ್ಟವಾಗಿ ಎಚ್ಚರಿಸುವವನೇ ಹೊರತು ಬೇರೇನೂ ಅಲ್ಲ.’’ (ಕುರ್ ಆನ್: 46:9)
ಮುಹಮ್ಮದರು (ಸ) ಎಂದೂ ಯಾರಿಗೂ ತಮ್ಮ ಮುಂದೆ ತಲೆ ಬಾಗಲು, ತಮ್ಮ ಪಾದ ಮುಟ್ಟಲು ಅಥವಾ ತಮಗೆ ಸಾಷ್ಟಾಂಗವೆರಗಲು ಅನುಮತಿಸಲಿಲ್ಲ. ಅವರು ಯಾವುದಾದರೂ ಜನಸಭೆಗೆ ಬಂದಾಗ ಅವರ ಗೌರವಾರ್ಥ ಜನರು ಎದ್ದು ನಿಲ್ಲುವುದು ಕೂಡಾ ಅವರಿಗೆ ಅಪ್ರಿಯವಾಗಿತ್ತು. ಅವರ ಶಿರವನ್ನು ‘ಶ್ರೀ ಶಿರ’ ಎಂದು ಕರೆಯುವ ಸಂಸ್ಕೃತಿಯನ್ನು ಅವರು ಪೋಷಿಸಲಿಲ್ಲ. ಆದ್ದರಿಂದ ಅವರ ಪಾದವನ್ನು ‘ಶ್ರೀಪಾದ’ ಎಂದು ಕರೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಈ ರೀತಿ ಪ್ರವಾದಿವರ್ಯರು ತಮ್ಮ ಸ್ಥಾನಮಾನದ ಕುರಿತು ಯಾವುದೇ ಗೊಂದಲಕ್ಕೆ ಎಡೆ ಇಲ್ಲದಂತೆ ಎಲ್ಲವನ್ನೂ ಸ್ಪಷ್ಟಪಡಿಸಿದರು. ತಾನು ಸರ್ವಜ್ಞನಲ್ಲ, ತ್ರಿಕಾಲ ಜ್ಞಾನಿಯಲ್ಲ, ತಾನು ಸರ್ವಶಕ್ತನಲ್ಲ, ಪವಾಡಗಳ ಪ್ರದರ್ಶನಕ್ಕಾಗಿ ಬಂದವನಲ್ಲ, ತಾನು ದೇವರ ದಾಸ ಮಾತ್ರ, ಅವನ ಮುಂದೆ ತಾನು ಸಂಪೂರ್ಣ ಅಸಹಾಯಕ ಎಂದೆಲ್ಲಾ ಅವರು ಪದೇ ಪದೇ ಜನರಿಗೆ ಮನವರಿಕೆ ಮಾಡಿಸುತ್ತಿದ್ದರು. ಹಾಗೆಯೇ ದೇವರ ಸ್ಥಾನಮಾನದ ಕುರಿತು ಕೂಡಾ ಯಾವುದೇ ಎಡವಟ್ಟಿಗೆ ಅವಕಾಶವಿಲ್ಲದಂತೆ ಎಲ್ಲವನ್ನೂ ಬಹಳ ಸರಳವಾಗಿ ಸ್ಪಷ್ಟಪಡಿಸಿದರು. ಎಲ್ಲರ ಮತ್ತು ಎಲ್ಲವುಗಳ ಸೃಷ್ಟಿಕರ್ತ, ಪಾಲಕ, ನಿಯಂತ್ರಕ ಮತ್ತು ಮಾಲಕ ಒಬ್ಬನೇ. ಅವನೇ ಎಲ್ಲರ ದೇವರು. ಅವನು ಅನಾದಿ, ಅನಂತ, ಸರ್ವಶಕ್ತ. ಅವನು ಕಾಲ, ಸ್ಥಾನ ಮತ್ತು ಆಕಾರಗಳನ್ನು ಮೀರಿದವನು ಎಂಬಿತ್ಯಾದಿ ವಿವರಗಳನ್ನು ಅವರು ಜನರಿಗೆ ಮನಮುಟ್ಟುವಂತೆ ತಿಳಿಯಪಡಿಸುತ್ತಿದ್ದರು.
ಮುಹಮ್ಮದರು (ಸ) ದೇವರನ್ನು ವಿವಿಧ ಆಯಾಮಗಳಿಂದ ಪರಿಚಯಿಸಿದರು. ಅವನ ಗುಣ ಮತ್ತು ಸಾಮರ್ಥ್ಯಗಳ ಆಧಾರದಲ್ಲಿ ಅವನನ್ನು ಊಹಿಸಲು ಮತ್ತು ಕಲ್ಪಿಸಲು ಕಲಿಸಿದರು. ಅಸ್ತಿತ್ವದಲ್ಲಿರುವ ಎಲ್ಲವನ್ನೂ ಸೃಷ್ಟಿಸಿದವನು, ಎಲ್ಲವನ್ನೂ ಪೋಷಿಸುತ್ತಿರುವವನು ಮತ್ತು ಎಲ್ಲವನ್ನೂ ಪರಿಪಾಲಿಸುತ್ತಿರುವವನೇ ದೇವರು. ಈ ಕಾರ್ಯಗಳಲ್ಲಿ ಅವನಿಗೆ ಜೊತೆಗಾರರಾಗಲಿ, ಪಾಲುದಾರರಾಗಲಿ, ಸಹಾಯಕರಾಗಲಿ ಯಾರೂ ಇಲ್ಲ. ಅವನಿಗೆ ಹೆತ್ತವರಾಗಲಿ, ಸಂತಾನವಾಗಲಿ, ಬಂಧುಗಳಾಗಲಿ ಇಲ್ಲ. ಅವನಿಗೆ ಅಗತ್ಯಗಳಿಲ್ಲ. ಹಸಿವು, ದಾಹ, ಕಾಮ, ನಿದ್ದೆ, ತೂಕಡಿಕೆ ಇತ್ಯಾದಿ ಎಲ್ಲ ಅಗತ್ಯಗಳಿಂದ, ದೌರ್ಬಲ್ಯಗಳಿಂದ ಮತ್ತು ಇತಿಮಿತಿಗಳಿಂದ ಅವನು ಮುಕ್ತನು. ಅವನು ಏಕಮಾತ್ರನು, ಅದ್ವಿತೀಯನು, ಅನನ್ಯನು, ಅನುಪಮನು ಎಂದು ವಿವರಿಸಿದರು.
ಈರೀತಿ ದೇವರು ಮತ್ತು ಅವನ ದೂತರ ಸ್ಥಾನಮಾನ ಹಾಗೂ ಹಕ್ಕು ಅಧಿಕಾರಗಳ ಕುರಿತು ಯಾವುದೇ ಗೊಂದಲ ಅಥವಾ ವಿರೂಪಕ್ಕೆ ಎಡೆ ಇಲ್ಲದಂತೆ ಎಲ್ಲವನ್ನೂ ಸ್ಪಷ್ಟಪಡಿಸಿದ್ದು ಅವರು ಮಾನವ ಸಮಾಜಕ್ಕೆ ಮಾಡಿದ ಒಂದು ಉಪಕಾರವಾದರೆ, ಮಾನವರ ನಡುವಣ ಸಂಬಂಧವನ್ನು ಸತ್ಯ, ನ್ಯಾಯ ಮತ್ತು ಸಮಾನತೆಯ ಆಧಾರದಲ್ಲಿ ಭದ್ರವಾಗಿ ಸ್ಥಾಪಿಸಿ ಆ ವಿಷಯದಲ್ಲೂ ಗೊಂದಲಕ್ಕೆ ಎಡೆ ಇಲ್ಲದಂತಾಗಿಸಿದ್ದು ಮನುಕುಲಕ್ಕೆ ಅವರು ಮಾಡಿದ ಇನ್ನೊಂದು ಮಹದುಪಕಾರವಾಗಿತ್ತು. ಮಾನವರೆಲ್ಲಾ ಮೂಲತಃ ಒಂದೇ ಕುಟುಂಬದಿಂದ ಬಂದವರು. ಎಲ್ಲರ ತಂದೆ ಒಬ್ಬನೇ. ಎಲ್ಲರೂ ಮೂಲತಃ ಒಂದೇ ವಂಶದವರು. ಎಲ್ಲರೂ ಜನ್ಮನಃ ಸ್ವತಂತ್ರರು. ಜನಾಂಗ, ಪ್ರದೇಶ, ಭಾಷೆ, ಬಣ್ಣ ಇವೆಲ್ಲವೂ ಇರುವುದು ಗುರುತಿಗಾಗಿಯೇ ಹೊರತು ಶ್ರೇಷ್ಠತೆಯನ್ನು ನಿರ್ಧರಿಸುವುದಕ್ಕಲ್ಲ.
ಯಾವುದೇ ಧರ್ಮ, ಬಣ್ಣ, ಭಾಷೆ, ದೇಶ ಅಥವಾ ಜನಾಂಗದವರು ಬೇರಾವುದೇ ಧರ್ಮ, ಬಣ್ಣ, ಭಾಷೆ, ದೇಶ ಅಥವಾ ಜನಾಂಗದವರಿಗಿಂತ ಕೀಳು ಅಥವಾ ಮೇಲಲ್ಲ. ಮಾನವರೆಂಬ ನೆಲೆಯಲ್ಲಿ ಎಲ್ಲರೂ ಸಮಾನ ಘನತೆ, ಗೌರವಗಳಿಗೆ ಪಾತ್ರರು. ಮೂಲಭೂತ ಮಾನವೀಯ ಹಕ್ಕುಗಳಿಗೆ ಎಲ್ಲ ಮಾನವರೂ ಸಮಾನ ಹಕ್ಕುದಾರರು. ‘‘ಮಾನವರೇ, ಖಂಡಿತವಾಗಿಯೂ ನಾವು ನಿಮ್ಮೆಲ್ಲರನ್ನೂ ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯಿಂದ ಸೃಷ್ಟಿಸಿರುವೆವು. ತರುವಾಯ, ನೀವು ಪರಸ್ಪರ ಗುರುತಿಸುವಂತಾಗಲು ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಹಾಗೂ ಪಂಗಡಗಳಾಗಿ ರೂಪಿಸಿರುವೆವು. ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನಾಗಿರುವವನೇ ನಿಮ್ಮಲ್ಲಿನ ಅತ್ಯುತ್ತಮನಾಗಿರುವನು.......’’ (ಕುರ್ ಆನ್: 49:13)
‘‘ನಾವು ಆದಮರ ಸಂತತಿಯನ್ನು ಗೌರವಾನ್ವಿತಗೊಳಿಸಿದೆವು....’’ (ಕುರ್ ಆನ್ : 17:70)
‘‘..... ಒಂದು ಮಾನವ ಜೀವಕ್ಕೆ ಪ್ರತಿಯಾಗಿ (ಒಂದು ಕೊಲೆಗೆ ಶಿಕ್ಷೆಯಾಗಿ) ಅಥವಾ ಭೂಮಿಯಲ್ಲಿ ಅಶಾಂತಿ ಹರಡಿದ್ದಕ್ಕೆ (ಶಿಕ್ಷೆಯಾಗಿ) ಹೊರತು-ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು (ಒಂದು ಮಾನವ ಜೀವವನ್ನು) ರಕ್ಷಿಸಿದವನು ಎಲ್ಲ ಮಾನವರನ್ನು ರಕ್ಷಿಸಿದಂತೆ.....’’ (ಕುರ್ ಆನ್: 5:32) ಮುಹಮ್ಮದರು (ಸ) ಹೊರಡಿಸಿದ ಒಂದು ಪ್ರಮುಖ ಸಾರ್ವಜನಿಕ ಪ್ರಕಟಣೆ ಹೀಗಿತ್ತು:
‘‘ಅರಬಿ ಜನಾಂಗದ ಯಾವುದೇ ವ್ಯಕ್ತಿ ಅರಬಿ ಅಲ್ಲದ ಯಾವುದೇ ವ್ಯಕ್ತಿಗಿಂತ ಶ್ರೇಷ್ಠನಲ್ಲ. ಹಾಗೆಯೇ, ಅರಬಿ ಅಲ್ಲದ ಯಾವುದೇ ವ್ಯಕ್ತಿ ಅರಬಿ ಜನಾಂಗದ ಯಾವುದೇ ವ್ಯಕ್ತಿಗಿಂತ ಶ್ರೇಷ್ಠನಲ್ಲ. ಬೆಳ್ಳಗಿರುವ ಯಾವುದೇ ವ್ಯಕ್ತಿ ಕರಿಯ ವ್ಯಕ್ತಿಗಿಂತ ಶ್ರೇಷ್ಠನಲ್ಲ. ಹಾಗೆಯೇ, ಕಪ್ಪಗಿರುವ ಯಾವುದೇ ವ್ಯಕ್ತಿ ಬಿಳಿಯನಿಗಿಂತ ಶ್ರೇಷ್ಠನಲ್ಲ. ಶ್ರೇಷ್ಠತೆ ಏನಿದ್ದರೂ ಕೇವಲ ಧರ್ಮನಿಷ್ಠೆಯ ಆಧಾರದಲ್ಲಿ ಮಾತ್ರ. ನೀವೆಲ್ಲರೂ ಆದಮ್ರ ಸಂತತಿಗಳು ಮತ್ತು ಆದಮ್ ರನ್ನು ಮಣ್ಣಿನಿಂದ ಸೃಷ್ಟಿಸಲಾಗಿತ್ತು.’’ (ಮುಸ್ನದ್ ಅಹ್ಮದ್)
ಮಾನವೀಯ ಏಕತೆ, ಸಮಾನತೆ, ಸಾಮಾಜಿಕ ನ್ಯಾಯ ಇತ್ಯಾದಿಗಳೆಲ್ಲಾ ಮುಹಮ್ಮದ್ (ಸ) ಅವರ ಉಪದೇಶಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸ್ವತಃ ಅವರ ಜೀವಿತಾವಧಿಯಲ್ಲಿ ಅವರು ಈ ವೌಲ್ಯಗಳನ್ನು ಸಮಾಜದಲ್ಲಿ ಮತ್ತು ಲಕ್ಷಾಂತರ ಜನರ ಬದುಕಿನಲ್ಲಿ ಅನುಷ್ಠಾನಿಸಿ ತೋರಿಸಿದರು. ಈ ಉದಾತ್ತ ವೌಲ್ಯಗಳು ಜನರ ನಂಬಿಕೆಗಳ ಭಾಗವಾದದ್ದು ಮಾತ್ರವಲ್ಲ, ಸಮಾಜವನ್ನಾಳುವ ಸಂವಿಧಾನದ ಭಾಗಗಳಾದವು.
ಈ ವೌಲ್ಯಗಳೇ ಕಾನೂನುಗಳಾದವು. ಈ ನಿಯಮಗಳ ಉಲ್ಲಂಘನೆ ಕೇವಲ ಖಂಡನಾರ್ಹ ಮಾತ್ರವಲ್ಲ ಶಿಕ್ಷಾರ್ಹ ಅಪರಾಧವಾಗಿ ಬಿಟ್ಟಿತು. ತೀರಾ ಆರಂಭಿಕ ಹಂತದಲ್ಲಿ ಪ್ರವಾದಿಯ ಅನುಯಾಯಿಯಾಗಿದ್ದ ಬಿಲಾಲ್ (ರ)ರನ್ನು ನಾವು ಈ ವಿಷಯದಲ್ಲಿ ಮಾದರಿಯಾಗಿ ಕಾಣಬಹುದು. ಒಂದು ಕಾಲದಲ್ಲಿ ಗುಲಾಮರಾಗಿದ್ದ, ಎಲ್ಲ ಬಗೆಯ ಅಪಮಾನ ಮತ್ತು ಹಿಂಸೆಗೆ ತುತ್ತಾಗಿದ್ದ, ಘನತೆಯ ಬದುಕನ್ನು ಕನಸಿನಲ್ಲಿ ಕಾಣುವುದಕ್ಕೂ ಅಸಮರ್ಥರಾಗಿದ್ದ ಆಫ್ರಿಕನ್ ಮೂಲದ, ದಟ್ಟ ಕರಿವರ್ಣದ ಬಿಲಾಲ್ ಮುಸ್ಲಿಮ್ ಸಮಾಜದ ಸಮಾನ ಸದಸ್ಯರಾದದ್ದು ಮಾತ್ರವಲ್ಲ, ಪ್ರವಾದಿಯ ಅತ್ಯಂತ ನಿಕಟ ಸಂಗಾತಿಗಳಲ್ಲೊಬ್ಬರಾದರು. ದೊಡ್ಡ ದೊಡ್ಡ ಕುಲೀನ ಹಿನ್ನೆಲೆಯವರು ‘‘ನಮ್ಮ ನಾಯಕರೇ’’ ಎನ್ನುತ್ತಾ ಅವರ ಹಿಂದೆ ನಡೆಯುತ್ತಿದ್ದರು.
ಯುದ್ಧದಲ್ಲಿ ಅವರು ಮುಸ್ಲಿಮ್ ಸೇನೆಯ ಪ್ರಮುಖ ಯೋಧರಾಗಿದ್ದರು. ಬಿಲಾಲ್ರನ್ನು ಅಮಾನುಷ ಚಿತ್ರಹಿಂಸೆಗೆ ತುತ್ತಾಗಿಸಿದ್ದ ಅವರ ಮಾಜಿ ಮಾಲಕ, ಮಕ್ಕಾದ ಓರ್ವ ಸರದಾರ ಉಮಯ್ಯ ಬಿನ್ ಖಲಫ್, ಬದ್ರ್ ಯುದ್ಧದಲ್ಲಿ ಬಿಲಾಲ್ರ ಕೈಯಿಂದಲೇ ಹತನಾಗಿದ್ದ. ಮದೀನಾದಲ್ಲಿ ಮುಸ್ಲಿಮ್ ಆಡಳಿತ ಸ್ಥಾಪನೆಯಾದಾಗ ಸರಕಾರೀ ಖಜಾನೆಯ ಉಸ್ತುವಾರಿಯನ್ನು ಅವರಿಗೆ ವಹಿಸಿಕೊಡಲಾಗಿತ್ತು. ಮದೀನಾದ ಗೌರವಾನ್ವಿತ ಕುಟುಂಬದ ಹೆಣ್ಣನ್ನು ಅವರು ವಿವಾಹವಾದರು. ಕ್ರಿ.ಶ. 622ರಲ್ಲಿ ಮಕ್ಕಾ ಪಟ್ಟಣವು ಮುಸ್ಲಿಮರ ವಶವಾದಾಗ ಅಲ್ಲಿನ ಪವಿತ್ರ ಕಾಬಾ ಮಸೀದಿಯಲ್ಲಿ ಮೊಳಗಿದ ಮೊದಲ ಅದಾನ್ಗೆ ಧ್ವನಿ ಕೊಟ್ಟವರು ಬಿಲಾಲ್.
ಆ ಅದಾನ್, ಕಾಬಾ ಮಂದಿರದ ಆವರಣದಿಂದ ಮೊಳಗಿರಲಿಲ್ಲ. ಪ್ರವಾದಿಯ ಆದೇಶ ಪ್ರಕಾರ ಬಿಲಾಲ್ ಅವರು ಕಾಬಾದ ಗೋಡೆಯ ಮೇಲೆ ಹತ್ತಿ ನಿಂತು, ತಮ್ಮ ಆಕರ್ಷಕ ಗಡಸು ಧ್ವನಿಯಲ್ಲಿ ಅದಾನ್ ಕರೆಯನ್ನು ಮೊಳಗಿಸಿದ್ದರು. ಆ ಅದಾನ್ ನಿಜವಾಗಿ, ಅನ್ಯಾಯ, ಅಸಮಾನತೆ ಹಾಗೂ ತಾರತಮ್ಯದ ವ್ಯವಸ್ಥೆಯ ಅಂತ್ಯ ಮತ್ತು ನ್ಯಾಯ, ಸಮಾನತೆ ಮತ್ತು ಮಾನವೀಯ ಘನತೆಯ ನವಯುಗದ ಆರಂಭದ ಘೋಷಣೆಯಾಗಿತು.