ಕಾಣದೆಯೂ ಕಾಡುವ...ಸಹವಾಸಿ
ಪ್ರೊ. ಪಟ್ಟಾಭಿರಾಮ ಸೋಮಯಾಜಿಯವರಿಗೆ ವಿದಾಯ
- ಡಾ. ಉದಯಕುಮಾರ್ ಇರ್ವತ್ತೂರು
ನನ್ನ ಸಹೋದ್ಯೋಗಿ ಮತ್ತು ಗೆಳೆಯ ಪಟ್ಟ್ಟಾಭಿರಾಮ ಸೋಮಯಾಜಿಯವರು ಆನೆ ನಡೆದದ್ಧೇ ದಾರಿ ಎನ್ನುವ ಹಾಗೆ ಸಾಗಿ, ನಿನ್ನೆ ಮುಂಜಾನೆ ಮುಂಗಾರಿನ ಮುಗಿಲಿನೊಂದಿಗೆ ಇನ್ನೆಂದೂ ಕಾಣದಂತೆ ಮರಳಿ ಬಾರದ ಹಾದಿಯಲ್ಲಿ ಕಣ್ಮರೆಯಾದರು.
ನಮ್ಮೆಂದಿಗೆ ಇದ್ದರೂ ಅಳೆದು ತೂಗಿ ಮಾತನಾಡುವ ಸೋಮಯಾಜಿ ಅವರು ನಂಬಿದ್ದ, ಅವರು ಬಯಸಿದ್ದ, ಆಶಿಸಿದ್ದ, ಕೆಲವು ಸಾಮಾಜಿಕ ನಿಲುವುಗಳ ಬಗ್ಗೆ ಮಾತ್ರ ಅವರದು ಗುಂಡು ಹೊಡೆದಂತೆ ಮಾತು. ಅಲ್ಲಿ ಯಾವ ಸಂಕೋಚ, ಅಂಜಿಕೆ, ಮುಲಾಜುಗಳೂ ಇಲ್ಲ.
ಕೆಲವೊಂದು ಬಾರಿ ಅವರ ಮಾತುಗಳನ್ನು ಸಂಭಾಳಿಸುವುದು ಕಷ್ಟವೆನಿಸಿದರೂ ಅದು ನೇರ ಮತ್ತು ನಿಷ್ಠುರವಾಗಿದ್ದುದರಲ್ಲಿ ಸಂಶಯವಿರುತ್ತಿರಲಿಲ್ಲ. ಅಪಾರ ಓದು, ಆಳವಾದ ಜ್ಞಾನ, ವೈಜ್ಞಾನಿಕವಾದ ವಿಶ್ಲೇಷಣೆ, ವಿಮರ್ಶೆ ಅದರೊಂದಿಗೇ ಸಾಮಾಜಿಕ ಸೌಹಾರ್ದಕ್ಕೆ ಹಪಹಪಿಸುವ ಮೃದು ಮನಸ್ಸು ಹೊಂದಿದ್ದರು ಸೋಮಯಾಜಿ. ತನ್ನ ಶಿಷ್ಯರಿಗೆಲ್ಲ ಅದ್ಬುತ ಕಾವ್ಯವಾಗಿದ್ದರೆ, ಸಹೋದ್ಯೋಗಿಗಳಿಗೆ ಅರ್ಥಮಾಡಿಕೊಳ್ಳಲು ಸಾಹಸ ಪಡಬೇಕಿದ್ದ ವ್ಯಾಕರಣ. ಎಲ್ಲ ಸಂಕೀರ್ಣಗಳ ಸಮ್ಮಿಲನವಾಗಿದ್ದ ಸೋಮಯಾಜಿಯೊಳಗಿದ್ದ ಮಮತೆ ಬಯಸುವ ಮುಗ್ಧ ಹುಡುಗ, ಗೌರವಾದರ ಬಯಸುವ ಆಚಾರ್ಯ, ಆದರ್ಶ ಸಮಾಜ ಬಯಸುವ ಸಮಾಜವಾದಿ, ಎಲ್ಲ ಸಿದ್ಧ್ದಾಂತಗಳಿಗಿಂತ ಗಾಂಧೀಜೀಯವರ ಆದರ್ಶ ನಮ್ಮನ್ನು ಪ್ರೇರೇಪಿಸುವ ಶಕ್ತಿಯಾಗಬೇಕೆಂಬ ಉತ್ಕಟ ಕನಸುಗಾರ.
ಎಲ್ಲವೂ ಇದ್ದೂ ಏನೆಲ್ಲಾ ಮಾಡಬಹುದಾಗಿದ್ದ ಅವರನ್ನು ಸಮಾಜವೇ ಗುರುತಿಸಲಿಲ್ಲವೋ ಅಥವಾ ಅವರೇ ಸಂಕೋಚದಿಂದ ಹಿಂದುಳಿದರೋ ಗೊತ್ತಾಗುತ್ತಿಲ್ಲ. ಆದರೆ ಸೋಮಯಾಜಿ ನೂರಾರು ಗೆಳೆಯರ ಮನಸ್ಸಲ್ಲಿ, ಸಾವಿರಾರು ವಿದ್ಯಾರ್ಥಿಗಳ ಮನಸ್ಸಿನ ಕದತೆರೆದು ಕೂತು ಬಿಟ್ಟಿದ್ದಾರೆ. ಎಲ್ಲ ಭಿನ್ನಮತದೊಂದಿಗೆ ಪ್ರೀತಿಯಿಂದ ಜಗಳವಾಡ ಬಹುದಾದ ನಮ್ಮವರೊಬ್ಬರ ಅಗಲಿಕೆಯಿಂದಾದ ವಾತಾಯನ (vacum) ನಮ್ಮನ್ನು ಕಾಡತೊಡಗಿದೆ... ಸೋಮಯಾಜಿಯವರ ಸಿರಿತನ ಅವರ ಅಗಲಿಕೆಯಿಂದ ಬಡವರಾದ ಗೆಳೆಯರನ್ನು ಕಾಡಲಿದೆ.