ಲಕ್ಷ ಲಕ್ಷ ಸಂಪಾದಿಸುವ ಭ್ರಮೆ ಹುಟ್ಟಿಸಿ ಕೋಟಿ ಕೋಟಿ ಬಾಚಿಕೊಂಡ ವಿವೇಕ್ ಬಿಂದ್ರಾ
ಹತ್ತೇ ದಿನದಲ್ಲಿ ಎಂಬಿಎ ಎಂದು ವಂಚಿಸುತ್ತಿದ್ದ ವಿವೇಕ್ ಬಿಂದ್ರಾ !► ವಿದ್ಯಾರ್ಥಿಗಳಿಂದ ಹಣ ಪಡೆದು, ಅವರನ್ನೇ ತನ್ನ ಸೇಲ್ಸ್ ಮ್ಯಾನ್ ಮಾಡಿಕೊಂಡಿದ್ದ !
ಎಲ್ಲ ಭರವಸೆಗಳೂ ಚುನಾವಣಾ ಜುಮ್ಲಾ ಆಗುತ್ತಿರುವ ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ನಕಲಿಗಳ ಹಾಗು ವಂಚಕರ ಕಾಟ ವಿಪರೀತವಾಗಿಬಿಟ್ಟಿದೆ. ಯಾರೋ ಒಬ್ಬ ವಂಚಕ ನಾನು ಪ್ರಧಾನಿ ಕಚೇರಿಯ ಹಿರಿಯ ಅಧಿಕಾರಿ ಎಂದು ಬಂದು ಇಡೀ ರಾಜ್ಯ ಸರಕಾರವನ್ನೇ ವಂಚಿಸುತ್ತಾನೆ, ಇನ್ನೊಬ್ಬ ವಂಚಕ ನಾನು ಯುಪಿ ಸಿಎಂ ಆಪ್ತ ಎಂದು ಜನರನ್ನು ಲೂಟಿ ಮಾಡ್ತಾನೆ, ಅದೆಷ್ಟೋ ಮಂದಿ ಚುನಾವಣೆಗೆ ಟಿಕೆಟ್ ಕೊಡಿಸುತ್ತೇವೆ ಎಂದು ಕೋಟಿ ಕೋಟಿ ವಂಚಿಸಿದ್ದು ಬೆಳಕಿಗೆ ಬಂತು.
ಹೀಗೆ ವೈವಿಧ್ಯಮಯ ರೀತಿಗಳಲ್ಲಿ, ವಿಧಾನಗಳಲ್ಲಿ, ಶೈಲಿಗಳಲ್ಲಿ ಜನರನ್ನು ವಂಚಿಸುವವರ ಸಂಖ್ಯೆ ಇತ್ತೀಚಿಗೆ ತೀರಾ ಹೆಚ್ಚಾಗಿಬಿಟ್ಟಿದೆ. ರಾಜಕೀಯದಲ್ಲಿ, ಶಿಕ್ಷಣದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ, ಉದ್ಯಮದಲ್ಲಿ, ಕೊನೆಗೆ ನೋಡಿದರೆ ಯೂಟ್ಯೂಬ್ ನಲ್ಲೂ ಈ ವಂಚಕರ ಪಡೆಯೇ ಇದೆ.
ಒಂದು ಕಡೆ ಸರಕಾರದ ನೀತಿಗಳಿಂದಾಗಿ ಉನ್ನತ ಶಿಕ್ಷಣ ಪಡೆಯಲು ಹೆಣಗಾಡುತ್ತಾ , ಉದ್ಯೋಗ ಇಲ್ಲದೆ, ಹೇಗಾದರೂ ಮಾಡಿ ಹಣ ಸಂಪಾದಿಸಲು ಸುಲಭದ ದಾರಿ ಹುಡುಕಬೇಕೆಂಬ ಹತಾಶೆಗೆ ಒಳಗಾಗಿರುವ ಈ ದೇಶದ ಲಕ್ಷಾಂತರ ಯುವಕರು, ವಿದ್ಯಾರ್ಥಿಗಳು.
ಇನ್ನೊಂದೆಡೆ ಇಂಥವರನ್ನೇ ಗುರಿಯಾಗಿಸಿ, ಮರುಳು ಮಾಡುವ, ಅವರನ್ನು ಬಳಸಿಕೊಂಡು ತಾವು ಹಣ ಮಾಡುವ ವೈಟ್ ಕಾಲರ್ ಚಾಲಾಕಿಗಳು. ಇಂಥ ಅನೇಕ ಚಾಲಾಕಿಗಳು ಇವತ್ತು ಮೋಟಿವೇಶನಲ್ ಸ್ಪೀಕರ್ ಎಂಬ ಅತ್ಯಾಕರ್ಷಕ ಅವತಾರದಲ್ಲೂ ಇದ್ದಾರೆ ಎನ್ನೋದಕ್ಕೆ ಒಂದು ತಾಜಾ ಉದಾಹರಣೆ, ವಿವೇಕ್ ಬಿಂದ್ರಾ ಅನ್ನೋ ವ್ಯಕ್ತಿ.
ಈ ವಿವೇಕ್ ಬಿಂದ್ರಾ ಹಣ ಮಾಡೋಕ್ಕೆ ಅನುಕೂಲವಾಗುವ, ಲಕ್ಷಾಂತರ ಗಳಿಸಲು ನೆರವಾಗುವ ಕೋರ್ಸ್ ತನ್ನದು ಎಂದು ಹೇಳಿ ಸಾವಿರಾರು ಯುವಕರಿಂದ ಕೋಟ್ಯಂತರ ಹಣ ಪಡೆದು ವಂಚಿಸಿರುವುದು ಈಗ ಬಯಲಾಗಿದೆ. ಹಾಗೆ ಈತನ ಹಗರಣವನ್ನು ಬಯಲಿಗೆಳೆದಿದ್ದು ಇನ್ನೊಬ್ಬ ಮೋಟಿವೇಶನಲ್ ಸ್ಪೀಕರ್ ಹಾಗು ಯೂಟ್ಯೂಬರ್ ಸಂದೀಪ್ ಮಹೇಶ್ವರಿ.
ಇತ್ತೀಚಿನ ಒಂದು ವೀಡಿಯೊದಲ್ಲಿ ಮೊದಲು ಸಂದೀಪ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಯೊಬ್ಬ ವಿವೇಕ್ ಬಿಂದ್ರಾನ ಹೆಸರು ಹೇಳದೆಯೇ ಆತ ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದಾನೆ ಎಂದು ದೂರುತ್ತಾನೆ. ಆತನ ದೂರಿನ ವಿವರ ಗಮನಿಸಿದ ಹಲವರು ಅದು ವಿವೇಕ್ ಬಿಂದ್ರಾ ನೇ ಆಗಿರಬೇಕು ಎಂದು ಟ್ಯಾಗ್ ಮಾಡ್ತಾರೆ.
ಅದರ ಬೆನ್ನಿಗೇ ಇನ್ನೊಂದು ವಿಡಿಯೋದಲ್ಲಿ ಸಂದೀಪ್ ಮಹೇಶ್ವರಿ ನೇರವಾಗಿಯೇ ವಿವೇಕ್ ಬಿಂದ್ರಾನ ಹೆಸರು ಹೇಳಿ ಆತನ ಕೋರ್ಸ್ ಹಿಂದಿನ ವಂಚನೆಯ ಮುಖ ಬಯಲಿಗೆಳೆಯುತ್ತಾರೆ. ಅದಾದ ಬಳಿಕ ಇಬ್ಬರ ನಡುವೆಯೂ ಸಿಕ್ಕಾಪಟ್ಟೆ ಕಚ್ಚಾಟ ನಡೆಯುತ್ತದೆ. ಒಬ್ಬರ ಮೇಲೊಬ್ಬರು ಎಗರಾಡಿಕೊಳ್ಳುತ್ತಾರೆ. ಆದರೆ ಅಂತಿಮವಾಗಿ ಬಿಂದ್ರಾ ಎನ್ನುವ ದೊಡ್ಡ ಮನುಷ್ಯನ ಅಸಲೀಯತ್ತು ಬಯಲಾಗುತ್ತದೆ.
ಹೇಗೆ ಆತ ಲಕ್ಷಾಂತರ ಮಕ್ಕಳಿಂದ ಫೀ ಹೆಸರಲ್ಲಿ ಹಣ ಪಡೆದು ವಂಚಿಸಿದ್ದಾನೆ, ತಾನು ಮಾತ್ರ ಕೋಟಿ ಕೋಟಿ ಎಣಿಸಿಕೊಂಡಿದ್ಧಾನೆ ಎನ್ನೋ ಭಯಂಕರ ಸತ್ಯ ಗೊತ್ತಾಗುತ್ತದೆ.
ಆತನ ಮಾತು ನಂಬಿ, ನಾಟಕಕ್ಕೆ ಮರುಳಾಗಿ ಹಣ ಕಳೆದುಕೊಂಡವರು ಕೈಕೈ ಹಿಸುಕಿಕೊಳ್ಳೋ ಹಾಗಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಂದೀಪ್ ಮಹೇಶ್ವರಿ ಮತ್ತು ವಿವೇಕ್ ಬಿಂದ್ರಾ ನಡುವೆ ನಡೆದ ಕಚ್ಚಾಟ, ದೇಶದ ಲಕ್ಷಾಂತರ ಯುವಕರು ವಂಚನೆಗೊಳಗಾಗಿರುವುದಕ್ಕೆ ಸಂಬಂಧಿಸಿದ್ದು ಅನ್ನೋದಕ್ಕಾಗಿ ನಾವೀಗ ಹೇಳಬೇಕಾಗಿದೆ.
ಇದು ಒಬ್ಬ ವ್ಯಕ್ತಿಯ ವಂಚಕತನವನ್ನು ಬಯಲು ಮಾಡುವುದರ ಕುರಿತದ್ದು ಮಾತ್ರವಲ್ಲ, ಬದಲಾಗಿ ಇಡೀ ವ್ಯವಸ್ಥೆಗೆ ಸಂಬಂಧಿಸಿದ್ದು.
ನಿರುದ್ಯೋಗಿ ಯುವಕರಲ್ಲಿ ಮಹತ್ವಾಕಾಂಕ್ಷಿ ಜೀವನಶೈಲಿಯ ಹುಚ್ಚು ಹಿಡಿಸಿ, ಭ್ರಮೆಗಳನ್ನು ತುಂಬಿ ಅವರ ಜೇಬಿಗೇ ಕನ್ನ ಹಾಕಿದ್ದರ ಕುರಿತದ್ದು.
ಸಂದೀಪ್ ಮಹೇಶ್ವರಿ ಮತ್ತು ವಿವೇಕ್ ಬಿಂದ್ರಾ ನಡುವಿನ ಈ ಫೈಟ್, ಈ ಕಚ್ಚಾಟದಲ್ಲಿ, ಮತ್ತೊಬ್ಬರಲ್ಲಿ ದುಡ್ಡಿನ ಆಸೆಯನ್ನು ಹುಟ್ಟಿಸಿ, ಅವರನ್ನು ಮೂರ್ಖರನ್ನಾಗಿ ಮಾಡಿ ತಾನು ಕೋಟಿ ಕೋಟಿ ಗಳಿಸಿದ ವಂಚಕ ಬಯಲಿಗೆ ಬಂದು ನಿಂತಿದ್ಧಾನೆ.
ಏನಿದು ಹಗರಣ? ಯಾರಿದ್ದಾರೆ ಇದರಲ್ಲಿ? ಯಾರು ಈ ಸಂದೀಪ್ ಮಹೇಶ್ವರಿ ಮತ್ತು ವಿವೇಕ್ ಬಿಂದ್ರಾ? ಯಾಕೆ ಈ ಕಚ್ಚಾಟ ಶುರುವಾಯಿತು? ಹೇಗೆ ಈ ವಿಚಾರ ಬಯಲಾಯಿತು?
ಸಂದೀಪ್ ಮಹೇಶ್ವರಿ ಒಬ್ಬ ಯೂಟ್ಯೂಬರ್. ದೇಶದ ಟಾಪ್ ಮೋಟಿವೇಶನಲ್ ಸ್ಪೀಕರ್. ವಿದ್ಯಾರ್ಥಿಗಳಂತೂ ಅವರ ಬಹು ದೊಡ್ಡ ಅಭಿಮಾನಿಗಳು.
ಇನ್ನು ವಿವೇಕ್ ಬಿಂದ್ರಾ ವಿಶ್ವದಲ್ಲೇ ದೊಡ್ಡ ಬಿಸಿನೆಸ್ ಯೂಟ್ಯೂಬರ್ ಎಂದು ಹೇಳಿಕೊಳ್ಳುವ ವ್ಯಕ್ತಿ. ದೊಡ್ಡ ದೊಡ್ಡ ಕಂಪನಿಗಳು ಹೇಗೆ ಯಶಸ್ಸಿನತ್ತ ಹೋಗಬೇಕು ಅಂತ ಗೈಡ್ ಮಾಡೋನು ನಾನು ಎಂದು ಹೇಳಿಕೊಳ್ಳುವವನು.
ಬಿಸಿನೆಸ್ ರಹಸ್ಯಗಳೆಲ್ಲ ಗೊತ್ತಿರೋ ವ್ಯಕ್ತಿ ನಾನು ಎಂದು ಹೇಳಿಕೊಳ್ಳುತ್ತಾನೆ ಈತ .
ವಿದ್ಯಾರ್ಥಿಗಳು 40-50 ಸಾವಿರ ಕೊಟ್ಟರೆ ಹೇಗೆ ಅವರು ಪ್ರತಿ ತಿಂಗಳು ಲಕ್ಷ ಲಕ್ಷ ಗಳಿಸಬಹುದು ಅಂತ ಹೇಳಿಕೊಡ್ತೀನಿ ಅಂತಾನೆ ಈ ವಿವೇಕ್ ಬಿಂದ್ರಾ.
ಕೆಲ ದಿನಗಳ ಹಿಂದಿನವರೆಗೂ ಎಲ್ಲವೂ ಸರಿಯಾಗಿಯೇ ಸಾಗಿತ್ತು. ಸಂದೀಪ್ ಮಹೇಶ್ವರಿ ಮೋಟಿವೇಟ್ ಮಾಡುತ್ತಿದ್ದರು. ವಿವೇಕ್ ಬಿಂದ್ರಾ ತನ್ನ ಐಡಿಯಾ ಸೇಲ್ ಮಾಡಿ ಕೋಟಿ ಕೋಟಿ ಗಳಿಸ್ತಾ ಇದ್ದ.
ವಾಸ್ತವವಾಗಿ, ಸಂದೀಪ್ ಮಹೇಶ್ವರಿಯ ಮೋಟಿವೇಶನಲ್ ಶೋ ನಲ್ಲಿ ಸ್ವತಃ ಭಾಗವಹಿಸಿ ಜನರಿಗೆ ಹೇಳುವ ಮಟ್ಟಿಗೆ ಬಿಂದ್ರಾ ಆಪ್ತನಾಗಿದ್ದ.
ಆದರೆ ಈಚೆಗೆ, ಬಿಂದ್ರಾ 50 ಸಾವಿರದ ಕೋರ್ಸ್ ಅನ್ನು ಮಾರುವ ಸ್ಕೀಮ್ ಹಿಂದಿನ ಅಸಲಿಯತ್ತು ಏನು ಅನ್ನೋದನ್ನು ಕೆಲ ವಿದ್ಯಾರ್ಥಿಗಳು ಸಂದೀಪ್ ಮಹೇಶ್ವರಿ ಬಳಿ ಹೇಳಿದರು.
ಬಿಂದ್ರಾ ಸ್ಕೀಮ್ ಹೇಗಿತ್ತೆಂದರೆ, ಹಣ ಮಾಡಬೇಕು ಎಂದರೆ ಆತನ ಕೋರ್ಸ್ ಅನ್ನು ಸ್ವತಃ ಅವರು 50 ಸಾವಿರ ಕೊಟ್ಟು ಖರೀದಿಸಬೇಕು. ಆಮೇಲೆ ಆ ವಿದ್ಯಾರ್ಥಿಗಳು ಅದೇ ಕೋರ್ಸ್ ಅನ್ನು ಬೇರೆ ಬೇರೆಯವರಿಗೆ ಮಾರಬೇಕಿತ್ತು.
ಸರಳವಾಗಿ ಹೇಳಬೇಕೆಂದರೆ, ಅದೊಂದು ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಅಥವಾ ಪಿರಮಿಡ್ ಸ್ಕೀಮ್ ಆಗಿತ್ತು. ಮಾತ್ರವಲ್ಲ, ಇದು ಸರ್ಕಾರ ನಿಷೇಧಿಸಿರೋ ಮಾದರಿಯ ಸ್ಕೀಮ್ ಆಗಿತ್ತು.
ಸಾವಿರಾರು ಮಕ್ಕಳು ಆತನ ಕೋರ್ಸ್ ಮಾರುವ ಇದೇ ಕೆಲಸದಲ್ಲಿ ತೊಡಗಿದ್ದರು.
ಮೊದಲ ಕಾರ್ಯಕ್ರಮದಲ್ಲಿ ಸಂದೀಪ್ ಮಹೇಶ್ವರಿ ಎಲ್ಲೂ ಯಾರ ಹೆಸರನ್ನೂ ತೆಗೆದುಕೊಳ್ಳದಿದ್ದರೂ, ಬಿಗ್ ಯೂಟ್ಯೂಬರ್ ಯಾರು ಎನ್ನೋದನ್ನು ಜಾಣರು ಅರ್ಥ ಮಾಡಿಕೊಂಡಿದ್ದರು. ಮತ್ತು ವಿವೇಕ್ ಬಿಂದ್ರಾಗೆ ಟ್ಯಾಗ್ ಮಾಡತೊಡಗಿದ್ದರು.
ಬಿಂದ್ರಾ ಇದನ್ನು ಬಗೆಹರಿಸಿಕೊಳ್ಳಲು ಸಂದೀಪ್ ಅನ್ನು ಸಂಪರ್ಕಿಸುವುದಕ್ಕೆ ಯತ್ನಿಸಿದ. ಕೆಲವರನ್ನು ಅವರ ಬಳಿಯೂ ಕಳಿಸಿದ್ದ. ಸಂದೀಪ್ ಮಹೇಶ್ವರಿ ಹೇಳಿಕೊಂಡಿರೋ ಹಾಗೆ ಅವರಿಗೆ ಬೆದರಿಕೆ ಕೂಡ ಬಂದಿತ್ತು.
ಮತ್ತು ಈ ಧಮ್ಕಿಯ ಕಾರಣದಿಂದಾಗಿಯೇ. ವಿವೇಕ್ ಬಿಂದ್ರಾ ಹಗರಣವನ್ನು ಬಯಲು ಮಾಡಲು ಸಂದೀಪ್ ಮಹೇಶ್ವರಿ ಮುಂದಾಗಿಬಿಟ್ಟರು.
ನೇರವಾಗಿ ಬಿಂದ್ರಾ ಹೆಸರನ್ನೇ ತೆಗೆದುಕೊಂಡರು ಮತ್ತು ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಂದ ತೆಗೆದುಕೊಂಡ 500 ಕೋಟಿಯಷ್ಟು ಹಣವನ್ನು ಅವರಿಗೆ ಹಿಂತಿರುಗಿಸುವಂತೆ ಒತ್ತಾಯ ಮಾಡಿದರು.
ಇದಾದ ಬಳಿಕ ವಿವೇಕ್ ಬಿಂದ್ರಾ ಕೂಡ ಒಂದು ವೀಡಿಯೊ ಬಿಡುಗಡೆ ಮಾಡಿ, ತನ್ನ ಅಕೌಂಟ್ ಜಾಗತಿಕ ಮಟ್ಟದ ಕಂಪನಿಯೊಂದರಿಂದ ಆಡಿಟ್ ಆಗುವುದರ ಬಗ್ಗೆ ಹೇಳಿಕೊಂಡ.
ಸಂದೀಪ್ ಮಹೇಶ್ವರಿ ಕುಸಿಯುತ್ತಿರೋ ತನ್ನ ಯೂಟ್ಯೂಬ್ ವ್ಯೂಸ್ ಜಾಸ್ತಿ ಮಾಡಿಕೊಳ್ಳೋಕೆ ಇದನ್ನೆಲ್ಲ ಮಾಡುತ್ತಿರುವುದಾಗಿಯೂ ಬಿಂದ್ರಾ ಆರೋಪಿಸಿದ್ದ.
ಆರೋಪಗಳಿಗೆ ಬಿಂದ್ರಾ ಉತ್ತರಿಸುವ ಮಾತು ದೂರವೇ ಉಳಿಯಿತು. ಬದಲಾಗಿ ಕೂತು ಮಾತನಾಡಿ ಬಗೆಹರಿಸಿಕೊಳ್ಳೋಣ ಎಂಬುದು ಬಿಂದ್ರಾ ಒತ್ತಾಯವಾಗಿತ್ತು.
ಅಂತಿಮವಾಗಿ ಸ್ಟಾಪ್ ವಿವೇಕ್ ಬಿಂದ್ರಾ ಎಂಬ ಹ್ಯಾಶ್ಟ್ಯಾಗ್ ಜೊತೆ ಬಿಂದ್ರಾ ಮೇಲೆ ಸಂದೀಪ್ ಮಹೇಶ್ವರಿ ಮುಗಿಬಿದ್ದರು.
ಬಿಂದ್ರಾ ಬಗ್ಗೆ ಸರ್ಕಾರಕ್ಕೆ ದೂರುವಂತೆ ಸಂದೀಪ್ ಮಹೇಶ್ವರಿ ತನ್ನ ವೀಕ್ಷಕರಿಗೆ ಹೇಳಿದರು. ಆತನನ್ನು ತಡೆಯಿರಿ, ಆತ ದೇಶ ಬಿಟ್ಟು ಹೋಗಲೂಬಹುದು ಎಂದರು.
ಮೊನ್ನೆ ಮೊನ್ನೆಯವರೆಗೂ ತನ್ನ ಶೋನ ಅತಿಥಿಯಾಗಿದ್ದವನ ವಿರುದ್ಧ ಅವರು ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದ್ದರು.
ಈ ವಿವೇಕ್ ಬಿಂದ್ರಾ ಮಾಡಿರುವುದು ಎಷ್ಟು ದೊಡ್ಡ ಅಕ್ರಮ ?
ಇದನ್ನು ಮಹೇಶ್ವರ್ ಪೆರಿ ಎಂಬವರು ಬಯಲು ಮಾಡಿದ್ದಾರೆ.
ಮಹೇಶ್ವರ್ ಪೆರಿ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಹೆಸರುಳ್ಳವರು. ಶೈಕ್ಷಣಿಕ ಕೋರ್ಸ್ಗಳ ಬಗ್ಗೆ ಬಹಳ ತಿಳಿದುಕೊಂಡವರು. ಅವರು ಯೂಟ್ಯೂಬರ್ ಅಲ್ಲ. ಅವರು ಕೆರೀಯರ್ 360 ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ.
ವಿವೇಕ್ ಬಿಂದ್ರಾ ವಿಚಾರವಾಗಿ ಪೆರಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಮುಖ್ಯವಾಗಿ ಆ ವ್ಯಕ್ತಿ ಕಡೆ ಪೆರಿ ಗಮನ ಹೋದದ್ದೇ ಹತ್ತೇ ದಿನದಲ್ಲಿ ಎಂಬಿಎ ಎಂಬ ಆತನ ಕೋರ್ಸ್ ಕಾರಣದಿಂದಾಗಿ.
ಮೋಟಿವೇಶನಲ್ ಸ್ಪೀಕರ್ ಆಗಿ, ರಾಷ್ಟ್ರೀಯತೆ ಬಗ್ಗೆ , ಸುಲಭವಾಗಿ ಹಣ ಮಾಡೋದು ಹೇಗೆ ಎಂದೆಲ್ಲ ಸಿಕ್ಕಾಪಟ್ಟೆ ಹೇಳಬಹುದು. ಆದರೆ, ಹೇಗೆ ಹತ್ತೇ ದಿನಗಳಲ್ಲಿ ಯುವಕರಿಗೆ ಎಂಬಿಎ ಕಲಿಸುತ್ತಾರೆ, ಏನು ಆ ಬಿಸಿನೆಸ್ನ ವಿವರ ಅನ್ನೋದು ಪೆರಿ ಅನುಮಾನವಾಗಿತ್ತು.
ಮೊದಲನೆಯದಾಗಿ, ಹತ್ತೇ ದಿನದ ಎಂಬಿಎ ಕೋರ್ಸ್ ಎಂದರೆ ಅದೇನು ತಮಾಷೆಯೆ? ನಾಳೆ ಇನ್ನಾರೋ ಹತ್ತೇ ಗಂಟೆಗಳ ಎಂಬಿಎ ಶುರು ಮಾಡಿದರೂ ಮಾಡಿಯಾರು. ಹೇಗೆ ಅದು ಸಾಧ್ಯ?
ಯಾವುದೇ ಡಿಗ್ರಿ ಪಡೆಯಲು ಯುಜಿಸಿ ಅನುಮೋದಿತ ಕಾಲೇಜುಗಳಲ್ಲಿ ಓದಬೇಕು. ಡಿಗ್ರಿ ಸರ್ಟಿಫಿಕೇಟು ಸಿಗುವುದು ಆ ಕಾಲೇಜು ಯಾವ ವಿವಿ ಅಡಿಯಲ್ಲಿ ಬರುತ್ತದೆಯೋ ಆ ವಿವಿಯಿಂದ. ಕಾಲೇಜಿನಿಂದ ಅಲ್ಲ. ಹಾಗೆ ವಿವಿ ಕೊಡಬೇಕಾದ ಡಿಗ್ರಿ ಸರ್ಟಿಫಿಕೇಟ್ ಅನ್ನು ಯಾರೋ ಹೇಗೆ ಕೊಡಲು ಸಾಧ್ಯ?
ಭಾರತದಲ್ಲಿ ಎಂಬಿಎ 2 ವರ್ಷದ ಕೋರ್ಸ್. ಓದಿ ಕಲಿಯಬೇಕಾದ ಅಂಥದ್ದನ್ನು ಹತ್ತು ದಿನದಲ್ಲಿ ಯಾರೋ ಕೊಡುತ್ತಾರೆ ಎನ್ನುವುದೇ ಅಕ್ರಮ ಎನ್ನುತ್ತಾರೆ ಪೆರಿ.
ಎರಡನೆಯದಾಗಿ, ಎಂಬಿಎ ಡಿಗ್ರಿ ಕೊಡೋಕ್ಕೆ ಬಿಂದ್ರಾ ಯಾರು? ಎಂಬುದು ಪೆರಿ ಅವರ ಮತ್ತೊಂದು ಪ್ರಶ್ನೆ.
ಬಿಂದ್ರಾ ಶ್ರೀಲಂಕಾದ ಮುಕ್ತ ವಿವಿಯೊಂದರಿಂದ ಫಿಲಾಸಫಿಯಲ್ಲಿ ಡಾಕ್ಟರೇಟ್ ಮಾಡಿರೋ ವ್ಯಕ್ತಿ. ಆ ಯೂನಿವರ್ಸಿಟಿಯ ವೆಬ್ಸೈಟ್ ಓಪನ್ ಆಗೋದೇ ಇಲ್ಲ.
ಆದರೆ ಜನ ಮಾತ್ರ ಈ ವಿವೇಕ್ ಬಿಂದ್ರಾ ಹೆಸರಿನ ಜೊತೆಗಿರೋ ಡಾಕ್ಟರ್ ಅನ್ನೋದು ನೋಡಿ ಮರುಳಾಗಿದ್ದಾರೆ.
ಮೂರನೆಯದಾಗಿ, ಇಂಟರ್ನ್ಯಾಷನಲ್ ಬಿಸಿನೆಸ್ ಕನ್ಸಲ್ಟಂಟ್ ಅನ್ನೋದು ಬಿಂದ್ರಾನ ಮತ್ತೊಂದು ಕೋರ್ಸ್. ಅದನ್ನು ಮಾಡಿಕೊಂಡರೆ ತಿಂಗಳಿಗೆ ಒಂದು ಲಕ್ಷದಿಂದ 20 ಲಕ್ಷದವರೆಗೆ ಗಳಿಸಬಹುದು ಅಂತ ಆತ ಹೇಳಿಕೊಳ್ಳುತ್ತಾನೆ.
ಹಾಗಾದರೆ, ಬಿಂದ್ರಾ ಬಿಸಿನೆಸ್ ಸ್ಕೂಲೇ ಇಲ್ಲಿರುವಾಗ ಯಾಕೆ ಈ ದೇಶದಲ್ಲಿ ಐಐಎಂ ಗಳಂತಹ ಉನ್ನತ ಬಿಝಿನೆಸ್ ಸ್ಕೂಲ್ ಯಾಕೆ ಬೇಕು? ಎಂಬ ಪ್ರಶ್ನೆಯನ್ನೂ ಪೆರಿ ಎತ್ತುತ್ತಾರೆ.
ಸಂದೀಪ್ ಮಹೇಶ್ವರಿ ಶೋ ಬಯಲು ಮಾಡಿದ ಪ್ರಕಾರ, 50 ಸಾವಿರ ಕೊಟ್ಟ ಬಳಿಕ ಯಾವ ವಿದ್ಯಾರ್ಥಿಯೂ ದೊಡ್ಡ ಬಿಸಿನೆಸ್ ನಡೆಸಲು ಸಾಧ್ಯವಿಲ್ಲ. ಆವರು ಬಿಂದ್ರಾ ಕೋರ್ಸ್ ಅನ್ನು ಜನರಿಗೆ ಮಾರಿ ಕಮಿಷನ್ ಪಡೆಯುವ ಸಣ್ಣ ಸೇಲ್ಸ್ ಮೆನ್ ಆಗಬಹುದು ಅಷ್ಟೆ.
ಆದರೆ, ಆ ವಿದ್ಯಾರ್ಥಿಗಳು ಕೊಡೋ ಫೀಸ್ನಿಂದಾಗಿ ಬಿಂದ್ರಾ ಮಾತ್ರ ಭಾರೀ ಹಣ ಮಾಡಿಕೊಳ್ಳುತ್ತಿದ್ದ. ಒಂದೆಡೆ ಫೀಸ್ ಹಣ, ಇನ್ನೊಂದೆಡೆ ಕೋರ್ಸ್ ಕಮೀಷನ್ ಎರಡೂ ಬಿಂದ್ರಾಗೆ ಬರುತ್ತಿತ್ತು.
ಇದು ಸ್ಪಷ್ಟವಾಗಿ ಹಗರಣ ಎಂದು ಪೆರಿ ಹೇಳುತ್ತಾರೆ. ಬಿಂದ್ರಾ ಅಕೌಂಟ್ ಬಗ್ಗೆಯೂ ಪೆರಿ ಹೇಳುತ್ತಾರೆ.
ಬಿಂದ್ರಾ ಕೋರ್ಸ್ ನಿಂದಾಗಿ ವಿದ್ಯಾರ್ಥಿಗಳಿಗೆ ಏನು ಸಿಕ್ಕಿತೊ ಇಲ್ಲವೊ. ಆದರೆ ಬಿಂದ್ರಾ ಮಾತ್ರ ಹಣ ಮಾಡುತ್ತಿದ್ದ.
ವಿದ್ಯಾರ್ಥಿಗಳು ಹಣ, ಸಮಯ ಮತ್ತು ಭರವಸೆ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾಗ ಬಿಂದ್ರಾ ಮಾತ್ರ ಕೋಟಿಗಟ್ಟಲೆ ಎಣಿಸುತ್ತಿದ್ದ.
ಪೆರಿ ಹೇಳುವ ಪ್ರಕಾರ, 2022-23ರಲ್ಲಿ ಬಿಂದ್ರಾ ಗಳಿಸಿದ್ದು 308 ಕೋಟಿ. ಇದರಲ್ಲಿ ಹಿಂತಿರುಗಿಸದ ಶುಲ್ಕವೇ 227 ಕೋಟಿ ರೂ. ಎನ್ನುತ್ತಾರೆ ಪೆರಿ.
ಬಿಂದ್ರಾ ಯಾರನ್ನು ಟಾರ್ಗೆಟ್ ಮಾಡುತ್ತಾನೆ ಎನ್ನೋದರ ಬಗ್ಗೆಯೂ ಪೆರಿ ಗಮನ ಸೆಳೆಯುತ್ತಾರೆ.
ಬಿಂದ್ರಾ ಟಾರ್ಗೆಟ್ ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್ ಗಳಲ್ಲ . ಏನೂ ಗೊತ್ತಿಲ್ಲದ, ಮುಂದೇನು ಮಾಡಬೇಕು, ಹೇಗೆ ಬದುಕೋದು ಎಂದು ಚಿಂತೆಯಲ್ಲಿರುವ ವಿದ್ಯಾರ್ಥಿಗಳು, ಯುವಜನರು.
ಯಶಸ್ಸು ಗಳಿಸೋಕೆ ಯಾವುದಾದರೂ ಸುಲಭದ ದಾರಿ ಇದೆಯೆ ಎಂದು ನೋಡುವ ಅವರಿಗೆ ಬಿಂದ್ರಾ ಥರದವರು ಸಿಕ್ಕು, 10 ದಿನದ ಎಂಬಿಎ ಕೋರ್ಸ್ ಬಗ್ಗೆ ಹೇಳಿದರೆ ಮರುಳಾಗದೆ ಇರುತ್ತಾರೆಯೆ?
ತಿಂಗಳಲ್ಲೇ 1 ಲಕ್ಷದಿಂದ 20 ಲಕ್ಷ ಗಳಿಸಬಹುದು ಎಂದರೆ ಆಸೆ ಹುಟ್ಟದೆ ಇರುತ್ತದೆಯೆ?
ಬಿಂದ್ರಾ ಮಾಡೋ ಪ್ರಚಾರದಲ್ಲಿ ಕೆಲವು ಪದಗಳೇ ರಿಪೀಟ್ ಆಗೋದನ್ನೂ ಪೆರಿ ಹೇಳುತ್ತಾರೆ.
ಎಂಬಿಎ, ಲಕ್ಷ ಲಕ್ಷ, ಕನ್ಸಲ್ಟಂಟ್, ಇಂಟರ್ನ್ಯಾಷನಲ್ ಇಂಥ ಪದ ಬಳಸಿ ಸಣ್ಣ ಊರುಗಳ ಯುವಕರನ್ನು ಮರುಳು ಮಾಡುವುದು ನಡೆಯುತ್ತದೆ.
ತಿಂಗಳಿಗೆ 20 ಲಕ್ಷ ಗಳಿಸಬಹುದು ಎನ್ನಲಾಗುತ್ತದೆ. ಹಾಗಾದರೆ ಬಿಂದ್ರಾ ಬಳಿಯೇ 500-600 ಮಂದಿ ಕೆಲಸಕ್ಕಿದ್ದಾರೆ. ಅವರೇಕೆ ಆ ಕೋರ್ಸ್ ಮಾಡಿ ತಿಂಗಳಿಗೆ 20 ಲಕ್ಷ ಗಳಿಸೋಕ್ಕೆ ಹೋಗ್ತಿಲ್ಲ?
ಜೊತೆಗಿರುವವರಿಗೇ ಇಲ್ಲದ ಮೇಲೆ ಹೊರಗಿನವರಿಗೆ ಹೇಗೆ ಪ್ರಾಮಿಸ್ ಮಾಡಲು ಸಾಧ್ಯ? ಎಂಬುದು ಮಹೇಶ್ವರ್ ಪೆರಿ ಎತ್ತುವ ಪ್ರಶ್ನೆ.
ಇಲ್ಲಿ ಬರೀ ವಿದ್ಯಾರ್ಥಿಗಳನ್ನು ಮಾತ್ರ ಅಡ್ಡದಾರಿಗೆ ಹಚ್ಚಿದಂತಲ್ಲ. ದೊಡ್ಡ ಮಟ್ಟದಲ್ಲಿ ಅಕ್ರಮ ನಡೆಯುವುದಕ್ಕೆ ಅವಕಾಶವಾಗಿದೆ ಎನ್ನುತ್ತಾರೆ ಪೆರಿ.
ಈಗ ಬಿಂದ್ರಾ ಮೇಲೆ ಕೇಸ್ ಆಗುತ್ತದೆಯೆ? ತನಿಖೆ ನಡೆಯುವುದೆ?
ಹೌದೆನ್ನುತ್ತಾರೆ ಮಹೇಶ್ವರ್ ಪೆರಿ. ಆದರೆ ಅದಕ್ಕೂ ಮೊದಲು ಆತನ ವಿರುದ್ದ ಸಂತ್ರಸ್ತರು ಗ್ರಾಹಕ ಕೋರ್ಟ್ಗೆ ಅಥವಾ ಪೊಲೀಸರಿಗೆ ದೂರು ಕೊಡಬೇಕು. ಎಫ್ಐಆರ್ ದಾಖಲಾಗಬೇಕು.
ಇದರ ವಿರುದ್ಧ ಸಂತ್ರಸ್ತರೇ ಹೋರಾಡಬೇಕು, ಕೇಸ್ ದಾಖಲಿಸಬೇಕು. ಬೇರೆಯವರು ಬೆಂಬಲ ಕೊಡಬಹುದು ಎನ್ನುತ್ತಾರೆ ಪೆರಿ.
ಎಲ್ಲರಿಗೂ ತಾನು ಜಾಸ್ತಿ ಹಣ ಗಳಿಸೋ ಹಾಗಾಗಬೇಕು, ಏನೋ ಆಗಿಬಿಡಬೇಕು ಎಂದಿರುತ್ತದೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಹಾಗೆಲ್ಲ ಮಾಡಲು ಅಡ್ಡದಾರಿಗಳಿಲ್ಲ.
ಸುಲಭವಾಗಿ ಏನನ್ನಾದರೂ ಮಾಡಿಬಿಡಬಹುದು ಎಂದು ಯಾರಾದರೂ ಆಸೆ ಹುಟ್ಟಿಸಿದಾಗ ಆಸೆಯಾಗುವುದು, ನಂಬಿಬಿಡುವುದು ಸಹಜ.
ಲಕ್ಷ ಲಕ್ಷ ಮಕ್ಕಳಿಗೆ ವಂಚನೆಯಾಗಿದೆ. ಅದು ಅತ್ಯಂತ ಪಾಪದ ಕೆಲಸ ಎಂದಿದ್ಧಾರೆ ಪೆರಿ.
ಹೇಗೆ ಬಿಂದ್ರಾ ಥರದವರು ಈ ಮಟ್ಟದ ಮೋಟಿವೇಶನಲ್ ಸ್ಪೀಕರ್ ಆಗುತ್ತಾರೆ?
ನಮ್ಮಲ್ಲಿಯೇ ಮೋಟಿವೇಶನ್ ಕೊರತೆಯೆ?
ಅಥವಾ ನಾವು ಅಷ್ಟು ಮೂರ್ಖರೆ?
ಈ ಪ್ರಶ್ನೆಯನ್ನು ಎಲ್ಲರೂ ಕೇಳಿಕೊಳ್ಳಬೇಕಾಗಿದೆ.
ಬೇರೆಯವರಿಗೆ ಮೋಟಿವೇಶನ್ ಮಾಡುವ ಆತ, ಮನೆಯ ಗೇಟ್ ಬಳಿಯೇ ಹೆಂಡತಿಯೊಡನೆ ಜಗಳವಾಡಿದ್ದ. ಅವನ ವಿರುದ್ಧ ಡೊಮೆಸ್ಟಿಕ್ ವಯಲೆನ್ಸ್ ಕೇಸ್ ಆಗಿತ್ತು ಎನ್ನೋದು ಕೂಡ ಸೋಷಿಯಲ್ ಮೀಡಿಯಾದಲ್ಲಿ ಬಯಲಾಗಿದೆ.
ದುರಂತವೆಂದರೆ ಇಂಥವನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಐಕಾನ್. ವೀಡಿಯೊದಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ಮಾತಾಡುವವನ ಮನೆಯಲ್ಲಿ ನಡೆಯುತ್ತಿದ್ದುದು ಏನು?
ಇದೇ ಮನುಷ್ಯ, ಶೂದ್ರರೆಂದರೆ ಹೇಳಿದ ಕೆಲಸ ಮಾಡಿಕೊಂಡಿರಬೇಕಾದವರು. ಅವರನ್ನು ತೆಗೆದುಕೊಂಡು ಹೋಗಿ ನಾಯಕತ್ವದ ಸ್ಥಾನದಲ್ಲಿ ಕೂರಿಸಿಬಿಟ್ಟರೆ ಎಲ್ಲ ಅಯೋಮಯವಾಗುತ್ತದೆ ಎಂದು ಕೂಡ ಸಂದರ್ಶನವೊಂದರಲ್ಲಿ ಹೇಳಿದ್ದ.
ಇಂಥ ಕೊಳಕು ಮನಃಸ್ಥಿತಿಯವನು ಹೆಸರಿನ ಜೊತೆ ಡಾಕ್ಟರ್ ಎಂದಿಟ್ಟುಕೊಂಡ ಕೂಡಲೆ, ಐಷಾರಾಮಿ ಕಾರುಗಳ ಜೊತೆ ಇರುವ ಫೊಟೊ ಶೇರ್ ಮಾಡಿಕೊಂಡ ಕೂಡಲೇ, ಲಕ್ಷ ಲಕ್ಷ ಗಳಿಸುವ ಮಾತಾಡಿದ ಕೂಡಲೇ ಜನ ಹೇಗೆ ಮರುಳಾಗುತ್ತಾರಲ್ಲ ಅನ್ನೋದು ಕಳವಳದ ಸಂಗತಿ.
ಆಕರ್ಷಕವಾಗಿ ಭಾಷಣ ಮಾಡುವವರ ಬಲೆಗೆ ಬೀಳೋದು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.
ತನ್ನ ಹೆಸರಲ್ಲಿ ಸರ್ಕಾರ ಸ್ಟಾಂಪ್ ಬಿಡುಗಡೆ ಮಾಡಿದೆ ಎಂದೂ ಇತ್ತೀಚೆಗೆ ಆತ ಹೇಳಿಕೊಂಡಿದ್ದ. ಬೂಮ್ ವೆಬ್ ಸೈಟ್ ಅದನ್ನು ಸುಳ್ಳು ಎಂದು ಬಯಲು ಮಾಡಿತ್ತು.
ಅದು ಆತನ ಕ್ಷುಲ್ಲಕ ಗಿಮಿಕ್ ಆಗಿತ್ತು. ಹಣ ಪಾವತಿಸಿದರೆ ಯಾರಿಗೂ ಅಂತಹ ಸ್ಟ್ಯಾಂಪ್ ಮಾಡಿಸಿಕೊಳ್ಳೋದು ಸಾಧ್ಯವಿದೆ.
ಆದರೆ ಈ ಬಾರಿ ಬಯಲಾಗಿರುವ ಆತನ ವಂಚನೆ ನೂರಾರು ಕೋಟಿ ರೂಗಳದ್ದು. ಲಕ್ಷಾಂತರ ಯುವಕರನ್ನು ಮೂರ್ಖರನ್ನಾಗಿಸಿದ್ದು.
ಮೋಟಿವೇಶನಲ್ ಸ್ಪೀಕರ್ ಎಂಬ ಅವತಾರದಲ್ಲಿದ್ದ ವಂಚಕನ ಬಣ್ಣವೇನೋ ಬಯಲಾಗಿದೆ.
ಆದರೆ, ಬಣ್ಣದ ಮಾತು ನಂಬಿ ಮರುಳಾಗುವ ನಮ್ಮ ಯುವಕರು, ಓದಿ, ಸ್ವಪ್ರಯತ್ನದಿಂದ ಮೇಲೇರಬೇಕಿರುವುದರ ಬದಲು ಅಡ್ಡದಾರಿಯ ಕಡೆ ಆಕರ್ಷಿತರಾಗೋ ವಿದ್ಯಾರ್ಥಿಗಳು ಇನ್ನಾದರೂ ಪಾಠ ಕಲೀತಾರ ?