ಕುಮಾರಸ್ವಾಮಿ, ದೇವೇಗೌಡರ ಲೆಕ್ಕಾಚಾರಗಳೇನು ?
► ಕಾಂಗ್ರೆಸ್ ಅನ್ನು ಕನ್ ಫ್ಯೂಸ್ ಮಾಡುತ್ತಿದ್ದಾರಾ ಮಾಜಿ ಸಿಎಂ ? ► ಲೋಕಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಕಾದಿದೆಯೇ ಶಾಕ್ ?
ಎಚ್ ಡಿ ಕುಮಾರಸ್ವಾಮಿ ,ದೇವೇಗೌಡ
ಎಚ್ ಡಿ ಕುಮಾರಸ್ವಾಮಿಯವರನ್ನು ನರೇಂದ್ರ ಮೋದಿಯವರ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿಯೊಂದು ಹಬ್ಬಿದೆ. ಆದರೆ ಕುಮಾರಸ್ವಾಮಿ ಮಾತ್ರ ಇದನ್ನು ನಿರಾಕರಿಸಿದ್ಧಾರೆ ಮತ್ತು ಮುಂದಿನ ವಾರ ದೆಹಲಿಗೆ ಹೋಗುತ್ತಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. ಹೀಗೊಂದು ಸುದ್ದಿ ಹಬ್ಬುತ್ತಿರುವುದು ಅಥವಾ ಹಬ್ಬಿಸಲಾಗುತ್ತಿರುವುದು ಮತ್ತದನ್ನು ಕುಮಾರಸ್ವಾಮಿ ನಿರಾಕರಿಸುತ್ತಿರುವುದರ ನಡುವೆಯೇ, ಕೇಂದ್ರ ಸಚಿವ ಅರ್ಜುನ್ ಮುಂಡಾ ದೇವೇಗೌಡರ ಮನೆಗೆ ಭೇಟಿ ಕೊಟ್ಟು ಹೋಗಿದ್ದಾರೆ.
ಅರ್ಜುನ್ ಮುಂಡಾ ಬಿಜೆಪಿ ಹೈಕಮಾಂಡ್ ಕಡೆಯಿಂದ ಯಾವುದಾದರೂ ಸಂದೇಶದೊಂದಿಗೆ ದೇವೇಗೌಡರನ್ನು ಕಂಡರಾ ಎಂಬುದು ಖಚಿತವಿಲ್ಲ. ಸದ್ಯಕ್ಕೆ ಹೊರಗಿನವರಿಗೆ ಅದು ಸೌಜನ್ಯದ ಭೇಟಿ ಮಾತ್ರ. ಆದರೆ ಜನವರಿ 15ಕ್ಕೆ ದೆಹಲಿಗೆ ಬರುವಂತೆ ಕುಮಾರಸ್ವಾಮಿಯವರಿಗೆ ಆಹ್ವಾನ ನೀಡಿರುವ ವಿಚಾರ ಮಾತ್ರ ಬಹಿರಂಗವಾಗಿದೆ. ಮುಂಡಾ ಯಾರ ಪರವಾಗಿ ಅವರನ್ನು ದೆಹಲಿಗೆ ಆಹ್ವಾನಿಸಿದ್ಧಾರೆ ಎಂಬುದು ಊಹಿಸಲಾರದ ಸಂಗತಿಯೇನಲ್ಲ.
ಈಗ, ಲೆಕ್ಕಾಚಾರಗಳು ಮತ್ತು ಒಳಗುಟ್ಟುಗಳು, ಈ ಸೌಜನ್ಯದ ಭೇಟಿ ಎಂಬ ಬಣ್ಣನೆ ಅಥವಾ ಕೇಂದ್ರ ಮಂತ್ರಿಯಾಗಲು ಇಷ್ಟವಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗಳಿಗಿಂತ, ಬೇರೆಯೇ ಇವೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ. ಈವರೆಗೆ ಸ್ಪಷ್ಟವಾಗಿರುವಂತೆ, ಈಗಿನ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ಹಾಗೂ ಕುಮಾರಸ್ವಾಮಿಗೆ ಬಿಜೆಪಿ ಅನಿವಾರ್ಯವೊ ಅಥವಾ ಬಿಜೆಪಿಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಜೊತೆಗಿನ ನಂಟು ಅನಿವಾರ್ಯವೊ ಎಂಬುದನ್ನು ಬಿಡಿಸಿ ಹೇಳಲು ಸಾಧ್ಯವಿಲ್ಲ.
ಅಷ್ಟರ ಮಟ್ಟಿಗೆ ಪರಸ್ಪರ ಅನಿವಾರ್ಯತೆಯೊಂದು ಅವರ ನಡುವೆ ತಲೆದೋರಿದೆ. ಮತ್ತಿದಕ್ಕೆ ಕಾರಣವಾದದ್ದು ಕಳೆದ ವಿಧಾನಸಭೆಯಲ್ಲಿ ಬಿಜೆಪಿ, ಜೆಡಿಎಸ್ ಎರಡೂ ಕಂಡ, ಅವು ನಿರೀಕ್ಷಿಸಿಯೇ ಇರದ ಮಟ್ಟಿನ ಸೋಲು.ಅಂಥದೊಂದು ಸೋಲನ್ನು ಕಂಡ ಅರ್ಥದಲ್ಲಿ, ಮೈತ್ರಿಗೂ ಮೊದಲೇ ಅವೆರಡೂ ಒಂದಾಗಿಬಿಟ್ಟಿದ್ದವು. ಅದು ಸಮಾನ ದುಃಖಿಗಳು ಒಂದಾದ ರೀತಿಯಾಗಿತ್ತು.
ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಈಗಾಗಲೇ ಬಿಜೆಪಿ ಧೋರಣೆಯನ್ನು ಬಿಜೆಪಿಗಿಂತಲೂ ಹೆಚ್ಚು ಪ್ರಖರವಾಗಿ ವ್ಯಕ್ತಪಡಿಸುತ್ತಿದೆ. ಆದರೆ ಇದನ್ನು ಜೆಡಿಎಸ್ ಚುನಾವಣೆಯಲ್ಲಿನ ಸೋಲಿನ ಕ್ಷಣದಿಂದಲೇ ಶುರು ಮಾಡಿತ್ತು. ಮತ್ತು ಬಿಜೆಪಿಗಿಂತಲೂ ತೀವ್ರವಾಗಿ, ಅಬ್ಬರದಿಂದ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಮುಗಿಬೀಳತೊಡಗಿದ್ದರು.ಬಿಜೆಪಿ ಮುಖಂಡರಿಗಿಂತಲೂ ಖಡಕ್ಕಾಗಿ ಬಜರಂಗದಳದ ನಾಯಕರ ಧಾಟಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿದ್ದರು.
ಒಂದು ಹಂತದಲ್ಲಂತೂ, ವಿಪಕ್ಷ ನಾಯಕನ ಸ್ಥಾನಕ್ಕೆ ರಾಜ್ಯ ಬಿಜೆಪಿಯಲ್ಲಿರುವ ನಾಯಕರಿಗಿಂತಲೂ ಕುಮಾರಸ್ವಾಮಿಯೇ ಬೆಸ್ಟ್ ಎಂಬ ನಿಲುವಿಗೆ ಬಿಜೆಪಿ ಹೈಕಮಾಂಡ್ ತಲುಪಿತ್ತು. ಆದರೆ, ಕುಮಾರಸ್ವಾಮಿ ಜಾಣರು. ಅಂಥದೊಂದು ಆಫರ್ ಅನ್ನು ಅವರು ಒಪ್ಪಲಿಲ್ಲ ಎನ್ನಲಾಗುತ್ತದೆ. ಹಾಗೊಂದು ಆಫರ್ ಒಪ್ಪಿಕೊಂಡಿದ್ದರೆ ಅದು ಬಿಜೆಪಿಯೊಳಗೆ ಜೆಡಿಎಸ್ ವಿಲೀನದ ಹಾಗೆ ಆಗಿಬಿಡುತ್ತಿತ್ತು.
ಅದರ ಬದಲು ಹೊರಗಿದ್ದುಕೊಂಡೇ ಬಿಜೆಪಿಯ ದೋಸ್ತಿ ಮಾಡುವುದು ಸೇಫ್ ಎಂದು ಕುಮಾರಸ್ವಾಮಿ ಮತ್ತು ದೇವೇಗೌಡರು ಲೆಕ್ಕ ಹಾಕಿರುತ್ತಾರೆ. ಆದರೆ ಕೇಂದ್ರ ಮಂತ್ರಿಯಾಗುವ ಇರಾದೆ ಇದೆಯೆಂಬುದನ್ನು ಮಾತ್ರ ವಿಪಕ್ಷ ನಾಯಕನ ಪಟ್ಟದ ಆಫರ್ ಬಂದಾಗ ಕುಮಾರಸ್ವಾಮಿ ಹೇಳಿದ್ದರು ಎಂಬ ಮಾತುಗಳಿವೆ.
ಅವರ ಆ ಇರಾದೆಯನ್ನು ಬಿಜೆಪಿ ಈಗ ಈಡೇರಿಸಲು ಹೊರಟಿದೆಯೆ?. ಹಾಗಿದ್ದಲ್ಲಿ ಕುಮಾರಸ್ವಾಮಿ ಅದನ್ನು ನಿಜವಾಗಿಯೂ ನಿರಾಕರಿಸುತ್ತಿದ್ದಾರೆಯೆ ಅಥವಾ ಗುಟ್ಟು ಬಿಟ್ಟುಕೊಡುತ್ತಿಲ್ಲವೆ?. ಒಂದಂತೂ ನಿಜ. ಏನೆಂದರೆ, ಇವೆರಡರ ಹಿಂದೆಯೂ ಬಿಜೆಪಿ ಮತ್ತು ಈಗ ಅದರ ಜೊತೆಯಾಗಿರುವ ಜೆಡಿಎಸ್ ನಾಯಕರಾದ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಲೆಕ್ಕಾಚಾರಗಳಿವೆ.
ಕಾಂಗ್ರೆಸ್ನ ಹಾದಿ ತಪ್ಪಿಸುವುದು, ಅದನ್ನುಗೊಂದಲದಲ್ಲಿ ಬೀಳಿಸುವುದು ಅವರ ಮೊದಲ ಗುರಿ. ಈಗಾಗಲೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ವಿರುದ್ಧ ಕುಮಾರಸ್ವಾಮಿ ಉರಿದು ಬೀಳುತ್ತಿದ್ಧಾರೆ. ದೇವೇಗೌಡರು ಕೂಡ ಕಾಂಗ್ರೆಸ್ ಬಗ್ಗೆ ಹಿಗ್ಗಾಮುಗ್ಗಾ ಟೀಕಿಸಿ ಮಾತನಾಡಿದ್ದಾರೆ.
ಕೇಂದ್ರ ಮಂತ್ರಿ ಸ್ಥಾನದ ವಿಚಾರ ಗೊತ್ತಿಲ್ಲ ಎಂದಿರುವ ಕುಮಾರಸ್ವಾಮಿ, ಮತ್ತೊಂದು ಮಹತ್ವದ ಅನುಮಾನವನ್ನೂ ಮುಂದಿಟ್ಟಿದ್ದಾರೆ. ಏನೆಂದರೆ, ಫೆಬ್ರವರಿಯಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಾದರೆ ಕೇಂದ್ರ ಮಂತ್ರಿಯಾಗಿ ಏನು ಮಾಡಲಿ ಎಂಬುದು. ಸಮಸ್ಯೆ ಇರುವುದು ಇಲ್ಲಿಯೇ. ಕೇಂದ್ರ ಮಂತ್ರಿಯಾಗುವ ಆಸೆ ಇದ್ದರೂ, ಈಗ ಅದರಿಂದ ಉಪಯೋಗವಿಲ್ಲ ಎಂಬ ಲೆಕ್ಕಾಚಾರವನ್ನು ಅವರು ಆಗಲೇ ಹಾಕಿಯಾಗಿದೆ.
ಅತ್ತ ಬಿಜೆಪಿ ಕುಮಾರಸ್ವಾಮಿಯವರನ್ನು ಹೇಗಾದರೂ ಒಲಿಸಿ ಒಂದು ಮಂತ್ರಿಗಿರಿ ಕೊಟ್ಟಂತೆ ಮಾಡುವ ಮೂಲಕ ಲಾಭ ತೆಗೆದುಕೊಳ್ಳಲು ಸಾಧ್ಯವಾಗಬಹುದೆ ಎಂದು ಯೋಚಿಸಿರುವ ಹಾಗಿದೆ. ತನ್ನ ಗುರಿಯೇನಿದ್ದರೂ ಕಾಂಗ್ರೆಸ್ ಅನ್ನು ಸೋಲಿಸಿ ಎಲ್ಲ 28 ಕ್ಷೇತ್ರಗಳಲ್ಲಿ ಮೈತ್ರಿಕೂಟವನ್ನು ಗೆಲ್ಲಿಸುವುದು ಎಂದಿದ್ದಾರೆ ಕುಮಾರಸ್ವಾಮಿ.
ಹಾಗೆ ನೋಡಿದರೆ ಕಳೆದ ಬಾರಿ 25 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ, ವಿಧಾನಸಭೆ ಚುನಾವಣೆಯ ವೇಳೆ ಈ ಮಟ್ಟದ ಆಘಾತವಾಗದೇ ಹೋಗಿದ್ದಲ್ಲಿ ಮೈತ್ರಿಯ ಜರೂರಿನ ಬಗ್ಗೆಯೇ ಯೋಚಿಸುತ್ತಿರಲಿಲ್ಲ. ಆದರೆ ಈಗ ಸ್ಥಿತಿ ಹಾಗಿಲ್ಲ. ಒಕ್ಕಲಿಗರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ಎರಡೂ ಹಿನ್ನಡೆ ಕಂಡಿವೆ. ಈಗ ಕುಮಾರಸ್ವಾಮಿಯವರನ್ನು ಜೊತೆಗಿಟ್ಟುಕೊಂಡು ಹೋದರೆ ತಮ್ಮದೇ ಮತಬಲವೂ ಸೇರಿ ಸುಲಭವಾಗಿ ಗೆಲ್ಲಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.
ಬಿಜೆಪಿಯ ಜೊತೆಗಿರುವ ಮೂಲಕ, ತನಗೆ ಬರುವ ಮತಗಳು ಒಡೆಯದಂತೆ ನೋಡಿಕೊಳ್ಳುವ ಉದ್ದೇಶ ಜೆಡಿಎಸ್ನದ್ದು. ಮೈಸೂರು, ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಉತ್ತರ ಕ್ಷೇತ್ರಗಳನ್ನು ಗೆಲ್ಲಲು ಈ ಮೈತ್ರಿಯ ಅಗತ್ಯವನ್ನು ಅವೆರಡೂ ಮನಗಂಡಿವೆ.
ವಿಧಾನಸಭೆಯಲ್ಲಿ ಕಿಂಗ್ ಮೇಕರ್ ಆಗಲು ಸಾಧ್ಯವಾಗದ ಹತಾಶೆಯಲ್ಲಿರುವ ಕುಮಾರಸ್ವಾಮಿಯವರಿಗೆ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋಗುವ ವಿಶ್ವಾಸವಂತೂ ಉಳಿದಿಲ್ಲ. ಹಾಗೆಯೇ ಬಿಜೆಪಿಗೆ ಕೂಡ ಕಳೆದ ಸಲ ಗೆದ್ದ ಹಾಗೆ ಈ ಸಲ ಗೆದ್ದುಬಿಡುವುದು ಸಾಧ್ಯವಾಗಲಿಕ್ಕಿಲ್ಲ ಎಂಬ ಆತಂಕ ಕಾಡುತ್ತಿದೆ.
ಹೀಗಾಗಿಯೇ ಇಂಥ ಅನಿವಾರ್ಯತೆಯಲ್ಲಿ ಕುದುರಿದ ಮೈತ್ರಿ ಇದು. ಕಾಂಗ್ರೆಸ್ ವಿರುದ್ಧ ಎರಡೂ ಪಕ್ಷಗಳು ಹರಿಹಾಯುತ್ತಿರುವುದು, ಜೆಡಿಎಸ್ ಶಾಸಕರಿಗೆ ಸಿಎಂ ಮತ್ತು ಡಿಸಿಎಂ ಆಮಿಷ ಒಡ್ಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸುತ್ತಿರುವುದು ಸೋಲಿನ ಭಯದಿಂದಾಗಿಯೇ.
ಈ ಮೈತ್ರಿಯ ಹಿಂದಿನ ಲೆಕ್ಕಾಚಾರದಂತೆ ಒಕ್ಕಲಿಗರ ಮತಗಳನ್ನು ಒಗ್ಗೂಡಿಸುವುದು ಬಿಜೆಪಿ ಮತ್ತು ಜೆಡಿಎಸ್ಗೆ ಸಾಧ್ಯವಾದರೆ, ಕಾಂಗ್ರೆಸ್ ಪಾಲಿಗೆ ಕಷ್ಟವಾಗಲಿದೆ. ಕಾಂಗ್ರೆಸ್ ಈಗಾಗಲೇ ತನ್ನೊಳಗಿನದೇ ಹಲವು ಸಮಸ್ಯೆಗಳ ಕಾರಣದಿಂದಾಗಿ ವಿರೋಧ ಪಕ್ಷಗಳ ಬಾಯಿಗೆ ಬಿದ್ದಿದೆ.
ಇನ್ನೊಂದೆಡೆ, ಅದರ ತೀರ್ಮಾನಗಳನ್ನು ಕೂಡ ರಾಜಕೀಯವಾಗಿ ವಿವಾದದ ಕೇಂದ್ರವಾಗಿಸಲು ಬಿಜೆಪಿ, ಜೆಡಿಎಸ್ ಎರಡೂ ಯತ್ನಿಸುತ್ತಿವೆ.
ಹಿಂದುತ್ವ ಕಾರ್ಯಕರ್ತನ ಬಂಧನದಂಥ ವಿಚಾರವನ್ನು ಅವು ರಾಜಕೀಯಗೊಳಿಸಿದ ರೀತಿಯನ್ನು ನೋಡಬಹುದು. ಹಿಂದುತ್ವವನ್ನು ಬಿಜೆಪಿ ಮಾತ್ರ ಈಗ ಅಸ್ತ್ರವಾಗಿ ಹಿಡಿದಿಲ್ಲ. ಕುಮಾರಸ್ವಾಮಿ ಕೂಡ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.
ಕಾಂಗ್ರೆಸ್ ಅನ್ನು ಹಿಂದೂ ವಿರೋಧಿ ಸರ್ಕಾರ ಎನ್ನುವ ಮೂಲಕ ಮಾಡಿಕೊಳ್ಳಬಹುದಾದ ಲಾಭಗಳನ್ನು ಅವೆರಡೂ ಲೆಕ್ಕ ಹಾಕುತ್ತಿವೆ. ಇದೆಲ್ಲದರ ನಡುವೆಯೇ ಕಾಂಗ್ರೆಸ್ನ ಸಂಘಟನಾ ಚತುರ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಯ ಅಸ್ತ್ರವೂ ಜಾರಿಯಲ್ಲಿದೆ. ಇದೆಲ್ಲವನ್ನೂ ನೋಡಿದರೆ ಅಖಾಡದಲ್ಲಿ ಕಾಂಗ್ರೆಸ್ ಅನ್ನು ಎದುರಿಸುವುದಕ್ಕೆ ಮೊದಲೇ ತನ್ನ ಗೆಲುವನ್ನು ನಿರ್ಧರಿಸುವ ದಾರಿಗಳನ್ನು ಬಿಜೆಪಿ ನಿರ್ಮಿಸಿಕೊಳ್ಳುತ್ತಿರುವ ಹಾಗೆ ಕಾಣಿಸುತ್ತಿದೆ. ಕಾಂಗ್ರೆಸ್ ಮೈಮರೆಯುವ ಸಮಯವಂತೂ ಇದಲ್ಲ.