ಇವಿಎಂ ವಿರುದ್ಧ ಮೊದಲ ಬಾರಿ ಮಾತಾಡಿದ ರಾಹುಲ್ ಗಾಂಧಿ ಹೇಳಿದ್ದೇನು ?
► ಇಂಡಿಯಾ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸಬಹುದೆ ? ► ಬದಲಾಗಿದ್ದು ರಾಹುಲ್ ಮಾತ್ರವೇ ? ಭಾರತವೂ ಬದಲಾಗುತ್ತಾ ?
ರಾಹುಲ್ ಗಾಂಧಿ | Photo: PTI
ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಪೂರ್ಣಗೊಂಡಿದೆ.
ರಾಹುಲ್ ಅವರು ಈ ಯಾತ್ರೆ ಮುಂಬೈಯಲ್ಲಿ ಕೊನೆಗೊಳ್ಳುವಾಗ ಅದು ಹಲವು ಸಂಕೇತಗಳನ್ನು ಒಳಗೊಂಡಿತ್ತು.
ಮತ್ತು ಆ ಸಂಕೇತಗಳು ನ್ಯಾಯ ಯಾತ್ರೆಯ ಹಾದಿಯಲ್ಲಿ ಇತಿಹಾಸ ಮತ್ತು ವರ್ತಮಾನವನ್ನು ಜೋಡಿಸುವಂತೆ ಇದ್ದವು.
ರಾಹುಲ್ ಅವರ ಈ ಯಾತ್ರೆ ಇವತ್ತಿನ ರಾಜಕಾರಣದಲ್ಲಿ ಚುನಾವಣೆಯ ಉದ್ದೇಶವನ್ನೂ ಮೀರಿ ಒಂದು ತತ್ವದ ಆದರ್ಶದ ರೂಪಕವಾಗಿ ಬೆಳೆದಿದೆ.
ಎರಡು ಹಂತದ ಭಾರತ್ ಜೋಡೋ ಯಾತ್ರೆ ಬಳಿಕ ರಾಹುಲ್ ಸಂಪೂರ್ಣ ಹೊಸ ರಾಷ್ಟ್ರೀಯ ನಾಯಕರಾಗಿ ಬೆಳೆದು ನಿಂತಿದ್ದಾರೆ.
ಅವರ ಮಾತುಗಳಲ್ಲಿ, ನಿಲುವು ಅತ್ಯಂತ ಸ್ಪಷ್ಟವಾಗಿದೆ, ನೇರವಾಗಿದೆ, ನಿಖರವಾಗಿದೆ. ಅಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವೇ ಇಲ್ಲ.
ಇನ್ನು ದೇಶದಲ್ಲಿರುವ ಅತ್ಯಂತ ಬಲಿಷ್ಠ ಸರಕಾರ ಹಾಗು ನಾಯಕರಿಗೆ ನೇರ ಸವಾಲು ಹಾಕುವ ನಾಯಕ ನಾನೇ ಎಂಬುದನ್ನೂ ಅವರು ಸಾಬೀತುಪಡಿಸಿದ್ದಾರೆ.
ನೇರವಾಗಿ ಪ್ರಧಾನಿಗೆ ಅವರು ಸವಾಲು ಹಾಕಿದ್ದಾರೆ. ಪ್ರಧಾನಿ ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ.
ಈ ದೇಶದ ಸಮಸ್ಯೆಗಳು ಏನೇನು ? ಅದಕ್ಕಿರುವ ಪರಿಹಾರೋಪಾಯಗಳು ಏನು ಎಂಬುದನ್ನೂ ಅತ್ಯಂತ ವಿವರವಾಗಿಯೇ ಅವರು ಜನರ ಮುಂದಿಟ್ಟಿದ್ದಾರೆ.
ಆದರೆ ಅದು ದೇಶದ ಜನರಿಗೆ ಮನವರಿಕೆಯಾಗಬಲ್ಲುದೆ ?
ಯಾತ್ರೆಯುದ್ದಕ್ಕೂ ಮತ್ತು ಮುಂಬೈನಲ್ಲಿನ ಸಮಾರೋಪದಲ್ಲಿಯೂ ರಾಹುಲ್ ಆಡಿದ ಮಾತುಗಳು ಈ ದೇಶದ ಜನರ ಮನಸ್ಸನ್ನು ಕಾಡಬಲ್ಲವೆ?
ಬಿಜೆಪಿಗೆ ರಾಹುಲ್ ಹಾಕಿದ ಸವಾಲುಗಳ ಹಿಂದಿನ ಪ್ರಾಮಾಣಿಕತೆ ಈ ದೇಶದ ಜನರಿಗೆ ಅರ್ಥವಾಗಬಲ್ಲುದೆ?
ರಾಹುಲ್ ಒಂದು ದೊಡ್ಡ ಹೋರಾಟವನ್ನು ಈ ಮೂಲಕ ಸಂಕೇತಿಸಿದ್ದಾರೆ. ಬಿಜೆಪಿಗೆ ಸವಾಲು ಹಾಕಲು ಸರ್ವ ಪ್ರಯತ್ನ ಮಾಡಿದ್ದಾರೆ.
ಈಗ ಆ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುವುದು ಅವರ ಪಕ್ಷ ಹಾಗೂ ವಿಪಕ್ಷ ಒಕ್ಕೂಟದ ಕೈಯಲ್ಲಿದೆ.
ರಾಹುಲ್ ಯಾತ್ರೆ, ಅವರು ಎತ್ತಿದ ಪ್ರಶ್ನೆಗಳು, ಅವರು ನೀಡಿರುವ ಎಚ್ಚರಿಕೆಗಳು ಹಾಗೂ ಕೊಟ್ಟಿರುವ ಭರವಸೆಗಳು ಈ ದೇಶದ ರಾಜಕಾರಣದಲ್ಲಿ ಪರಿವರ್ತನೆಯನ್ನು ತರಬಲ್ಲವೆ?
ಇಂಡಿಯಾ ಕೂಟ ಬಿಜೆಪಿಯನ್ನು ಸೋಲಿಸಬಹುದೆ ? ಇಲ್ಲವೇ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಮುಂಬೈನಲ್ಲಿ ಭಾನುವಾರ ಸಮಾರೋಪಗೊಂಡಿದೆ.
ಅದು ಕೊನೆಗೊಂಡಿರುವುದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಸ್ಮಾರಕವಾದ ದಾದರ್ ನ ಚೈತ್ಯಭೂಮಿಯಲ್ಲಿ.
ಯಾತ್ರೆಯನ್ನು ರಾಹುಲ್ ಅವರು ಅಲ್ಲಿ ಪೂರ್ಣಗೊಳಿಸಿರುವುದು, ಸಂವಿಧಾನ ಪೀಠಿಕೆಯನ್ನು ಓದಿ ಡಾ.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದರೊಂದಿಗೆ.
ಅದರ ಮೂಲಕ, ನ್ಯಾಯ ಎನ್ನುವುದು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮತ್ತೊಂದು ಹೆಸರೆಂಬುದನ್ನು ಮತ್ತೊಮ್ಮೆ ಅಲ್ಲಿಯೂ ಪ್ರತಿಪಾದಿಸಲಾಗಿದೆ.
ಅದಕ್ಕೂ ಮೊದಲು ಭಾನುವಾರ ಬೆಳಗ್ಗೆ ರಾಹುಲ್ ಅವರು ದಕ್ಷಿಣ ಮುಂಬೈನ ಮಹಾತ್ಮ ಗಾಂಧಿ ಅವರ ನಿವಾಸವಾದ ಮಣಿ ಭವನದಿಂದ ಆಗಸ್ಟ್ ಕ್ರಾಂತಿ ಮೈದಾನದವರೆಗೆ ನ್ಯಾಯ ಸಂಕಲ್ಪ ಪಾದಯಾತ್ರೆ ನಡೆಸಿದರು.
ಮಹಾತ್ಮ ಗಾಂಧಿಯವರು ಮುಂಬೈನಲ್ಲಿ ಇದ್ದಾಗಲೆಲ್ಲ ಮಣಿ ಭವನದಲ್ಲಿ ಉಳಿದುಕೊಳ್ಳುತ್ತಿದ್ದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ 1942ರಲ್ಲಿ ಮುಂಬೈನ ಕ್ರಾಂತಿ ಮೈದಾನದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಆರಂಭವಾಗಿತ್ತು.
ಸಮಾರೋಪ ರ್ಯಾಲಿಗೂ ಮೊದಲು ರಾಹುಲ್ ಅವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.
ವಿಶ್ವದ ಅತಿದೊಡ್ಡ ಕೊಳಗೇರಿ ಪ್ರದೇಶ ಎಂದೇ ಹೇಳಲಾಗುವ ಧಾರಾವಿಯಲ್ಲಿ ಜನರ ಜೊತೆ ಮಾತಾಡಿದ ಅವರು " ಧಾರಾವಿ ಭಾರತದ ಕೌಶಲ್ಯ ರಾಜಧಾನಿ " ಎಂದು ಬಣ್ಣಿಸಿದರು.
ಈಗ ದೇಶದಲ್ಲಿ ನಡೆಯುತ್ತಿರುವುದು ಕೌಶಲ ಹಾಗು ದಲ್ಲಾಳಿಗಳ ನಡುವಿನ ಹೋರಾಟ ಎಂದೂ ಹೇಳಿದರು.
ಸಾಮಾಜಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ರಾಹುಲ್, " ನಿಮ್ಮ ವಿರುದ್ಧ ಮಾತ್ರವಲ್ಲ ಇನ್ನೊಬ್ಬನ ವಿರುದ್ಧದ ಅನ್ಯಾಯವನ್ನೂ ವಿರೋಧಿಸಿ. ಚಳವಳಿ ಅಂದ್ರೆ ನಮ್ಮ ನೋವನ್ನು ಬಿಟ್ಟು ಪಕ್ಕದವನ ನೋವನ್ನು ನೋಡಿ ಅದಕ್ಕಾಗಿ ಹೋರಾಡುವುದು " ಎಂದು ಹೇಳಿದರು ರಾಹುಲ್.
ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಶಿವಾಜಿ ಪಾರ್ಕ್ನಲ್ಲಿನ ರ್ಯಾಲಿಯೊಂದಿಗೆ ಕೊನೆಗೊಳಿಸುವಾಗ ಅಲ್ಲಿ ಇಂಡಿಯಾ ಮೈತ್ರಿಕೂಟದ ಶಕ್ತಿ ಪ್ರದರ್ಶನವೂ ಆಯಿತು.
ಭಾರೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದ ಸಮಾವೇಶದಲ್ಲಿ
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಉದ್ಧವ್ ಠಾಕ್ರೆ, ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರುಖ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಎಎಪಿ ನಾಯಕ ಸೌರಭ್ ಭಾರದ್ವಾಜ್, ಸಿಪಿಐ ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ, ಜಾರ್ಖಂಡ್ ಸಿಎಂ ಚಂಪೈ ಸೊರೇನ್, ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಸೊರೇನ್ ಪಾಲ್ಗೊಂಡಿದ್ದರು. ಇಂಡಿಯಾ ಮೈತ್ರಿಕೂಟದ ವಿಚಾರದಲ್ಲಿ ಇದೊಂದು ಬಹಳ ಮಹತ್ವಪೂರ್ಣವಾದ ಸನ್ನಿವೇಶವೂ ಆಗಿ ಕಂಡಿತು.
ಆದರೆ ಎಸ್ಪಿ ಮುಖ್ಯಸ್ಥ ಅಖಿಲೇಶ್ ಭಾಗವಹಿಸಿರಲಿಲ್ಲ. ಆದರೆ ಅವರೊಂದು ಪತ್ರ ಬರೆದು ಇಂತಹದೊಂದು ಯಾತ್ರೆ ಕೈಗೊಂಡಿದ್ದಕ್ಕೆ ರಾಹುಲ್ ಗಾಂಧಿ ಅವರನ್ನು ಅಭಿನಂದಿಸಿದ್ದಾರೆ. ರಾಹುಲ್ ಒಬ್ಬ ಅತ್ಯಂತ ಅಪರೂಪದ ವ್ಯಕ್ತಿ, ಇದೊಂದು ಅಸಾಮಾನ್ಯ ಕೆಲಸ ಎಂದು ಪ್ರಶಂಸಿಸಿದ್ದಾರೆ.
ಯಾತ್ರೆ ಸಮಾರೋಪದ ರ್ಯಾಲಿಯಲ್ಲಿ ರಾಹುಲ್ ಅವರೊಡನೆ ಸೋದರಿ ಪ್ರಿಯಾಂಕ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದ್ದರು. ಪ್ರಕಾಶ್ ಅಂಬೇಡ್ಕರ್ ಪಾಲ್ಗೊಂಡಿದ್ದರು.
ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು ಮೋದಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನಿಗೆ ನೇರ ಸವಾಲು ಹಾಕಿದರು.
ರಾಜನ ಆತ್ಮ ಇವಿಎಂನಲ್ಲಿದೆ.
ಇವಿಎಂ ಮತ್ತು ಈಡಿ, ಸಿಬಿಐ, ಐಟಿ ಹೀಗೆ ದೇಶದ ಪ್ರತಿಯೊಂದು ಸಂಸ್ಥೆಗಳಲ್ಲಿ ರಾಜನ ಆತ್ಮವಿದೆ ಎಂದು ನೇರವಾಗಿಯೇ ಹೇಳಿದರು.
ನಾವು ಈ ಯಾತ್ರೆಯನ್ನು ಕೈಗೊಳ್ಳಲೇಬೇಕಾಗಿತ್ತು. ಏಕೆಂದರೆ ಇಂದು ಮಾಧ್ಯಮಗಳು ದೇಶದ ಪ್ರಮುಖ ಸಮಸ್ಯೆಗಳಾದ ನಿರುದ್ಯೋಗ, ಹಣದುಬ್ಬರ, ರೈತರ ಸಮಸ್ಯೆ, ಅಗ್ನಿವೀರ್ ಸಮಸ್ಯೆಯನ್ನು ಪ್ರಸ್ತಾಪಿಸುವುದಿಲ್ಲ. ಈ ಎಲ್ಲಾ ಸಮಸ್ಯೆಗಳು ಇಂದು ಮಾಧ್ಯಮಗಳಲ್ಲಿ ಕಾಣಿಸುವುದೇ ಇಲ್ಲ. ಈ ಸಮಸ್ಯೆಗಳ ಬಗ್ಗೆ ಜನರ ಗಮನ ಸೆಳೆಯಲು ನಾವು 4,000 ಕಿಮೀ ನಡೆಯಬೇಕಾಯಿತು ಎಂದು ರಾಹುಲ್ ಗಾಂಧಿ ಹೇಳಿದರು.
ನಾವು ಒಬ್ಬ ವ್ಯಕ್ತಿ ಅಥವಾ ಪಕ್ಷದ ವಿರುದ್ಧ ಹೋರಾಡುತ್ತಿಲ್ಲ. ಹಿಂದೂ ಧರ್ಮದಲ್ಲಿ ಶಕ್ತಿ ಎಂಬ ಪದವಿದೆ. ನಾವು ಆ ಶಕ್ತಿಯ ವಿರುದ್ಧ ಹೋರಾಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ನರೇಂದ್ರ ಮೋದಿ ಕೇವಲ ಒಂದು ಮುಖವಾಡ. ಬಾಲಿವುಡ್ ನಟರಂತೆ ನರೇಂದ್ರ ಮೋದಿಯೂ ಒಂದು ನಟ. ಅವರಿಗೇ ಒಂದು ಪಾತ್ರ ನೀಡಲಾಗಿದೆ. ಆ ಶಕ್ತಿ ಹೇಳಿದಂತೆ ಅವರು ಕೇಳುತ್ತಾರೆ. ಆ ಶಕ್ತಿ ಹೇಳಿದಂತೆ ಮೋದಿ ನಟಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಬಿಜೆಪಿ ಸೇರಿದರು. ಅವರು ನನ್ನ ತಾಯಿ ಸೋನಿಯಾ ಅವರ ಬಳಿ ಅಳುತ್ತ ಹೇಳಿಕೊಂಡರು. ನನಗೆ ಈ ಶಕ್ತಿಯ ವಿರುದ್ಧ ಹೋರಾಡಲು ಆಗುತ್ತಿಲ್ಲ. ನನಗೆ ನಾಚಿಕೆಯಾಗುತ್ತಿದೆ. ನಾನು ಜೈಲಿಗೆ ಹೋಗಲಾರೆ ಎಂದು ಹೇಳಿಕೊಂಡರು. ಅಂಥವರು ಒಬ್ಬರಲ್ಲ, ಹಲವರು ಎಂದು ರಾಹುಲ್ ಹೇಳಿದರು.
ವಿಪಕ್ಷ ನಾಯಕರನ್ನು ಹೆದರಿಸಿ, ಬೆದರಿಸಿ, ಕತ್ತು ಹಿಡಿದು ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು ರಾಹುಲ್ ಗಾಂಧಿ.
ಮೊದಲ ಬಾರಿ ಬಿಜೆಪಿ ಸರಕಾರ ಬಂದಾಗ, ಅರುಣ್ ಜೇಟ್ಲಿ ನನ್ನ ಬಳಿ ಬಂದಿದ್ದರು. ಒಂದು ಕೊಠಡಿಯಲ್ಲಿ ಕುಳಿತು ನಾವು ಮಾತನಾಡಿದೆವು. ಅರುಣ್ ಜೇಟ್ಲಿ ನನ್ನ ಬಳಿ ಭೂಕಬಳಿಕೆ ವಿಚಾರದಲ್ಲಿ ಮಾತನಾಡಬಾರದು. ಮಾತನಾಡಿದರೆ ನಿಮ್ಮ ಮೇಲೆ ಕೇಸು ದಾಖಲಿಸುತ್ತೇವೆ ಎಂದು ಹೇಳಿದರು. ನಾನು ಅದಕ್ಕೆಲ್ಲ ಹೆದರುವವನಲ್ಲ, ಕೇಸು ದಾಖಲಿಸಿ ಎಂದು ಹೇಳಿದೆ. ಬಳಿಕ ಈಡಿಯವರು ಬಂದರು. 50 ಗಂಟೆಗಳ ಕಾಲ ನನ್ನನ್ನು ಕೂರಿಸಿದರು. ಒಬ್ಬ ಈಡಿ ಅಧಿಕಾರಿ ನನ್ನಲ್ಲಿ " ರಾಹುಲ್, ನೀವು ಯಾರಿಗೂ ಹೆದರುವವರಲ್ಲ. ನೀವು ನರೇಂದ್ರ ಮೋದಿಯವರನ್ನು ಸೋಲಿಸಬಹುದು" ಎಂದು ಹೇಳಿದ್ದರು ಎಂದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ವಿರುದ್ಧ ಕೇಂದ್ರೀಯ ಸಂಸ್ಥೆಗಳು ಮತ್ತು ಇವಿಎಂಗಳನ್ನು ಬಳಸುತ್ತಿದೆ ಎಂದು ರಾಹುಲ್ ಆರೋಪಿಸಿದರು.
ಆಡಳಿತ ಪಕ್ಷವು ಇವಿಎಂಗಳು, ಈಡಿ ಮತ್ತು ಸಿಬಿಐ ಇಲ್ಲದೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ರಾಹುಲ್ ವಾಗ್ದಾಳಿ ನಡೆಸಿದರು.
ಭಾರತದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತೆರೆಯಲು ವರ್ಷಗಳು ಬೇಕು. ಆದರೆ ಒಂದು ಮದುವೆಗಾಗಿ ಕೇವಲ 10 ದಿನಗಳಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತೆರೆಯಬಹುದು. ಇದು ಒಳ್ಳೆಯ ಬೆಳವಣಿಗೆಯೇ. ಆದರೆ ಉಳಿದ ಪ್ರದೇಶಗಳಲ್ಲಿ ಏನು ಸಮಸ್ಯೆ. ಅಲ್ಲಿಯೂ ಬೇಗನೇ ತೆರೆಯಬಹುದಲ್ಲವೇ ಎಂದು ರಾಹುಲ್ ಪ್ರಶ್ನಿಸಿದರು.
ಇದು ದ್ವೇಷಿಸುವ ದೇಶವಲ್ಲ. ಪ್ರೀತಿಸುವ ದೇಶ. ದ್ವೇಷದ ಬಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆಯಲು ನಮ್ಮ ಮೊದಲ ಯಾತ್ರೆಯಲ್ಲಿ ಹೇಳಿದ್ದೆವು. ಅದು ಆಗಬೇಕು. ದ್ವೇಷದ ಬಜಾರಿನಲ್ಲಿ ಪ್ರೇಮದ ಅಂಗಡಿ ತೆರೆಯಿರಿ ಎಂದು ರಾಹುಲ್ ಕೇಳಿಕೊಂಡರು.
ಚುನಾವಣಾ ದಿನಾಂಕ ಘೋಷಣೆಯಾಗಿದೆ, ನಾವೆಲ್ಲ ಮುಂಬೈಗೆ ಬಂದಿದ್ದೇವೆ. ಈ ದೇಶದಲ್ಲಿನ ನಮ್ಮ ಅತಿ ದೊಡ್ಡ ಶತ್ರುಗಳೆಂದರೆ, ನಿರುದ್ಯೋಗ, ಬೆಲೆಯೇರಿಕೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದರು.
ಇಂಡಿಯಾ ಮೈತ್ರಿಕೂಟದ ಹೋರಾಟ ವೈಯಕ್ತಿಕವಾಗಿ ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅಲ್ಲ, ಆದರೆ ಆಡಳಿತಾರೂಢ ಬಿಜೆಪಿ ಪ್ರಚಾರ ಮಾಡುತ್ತಿರುವ ದ್ವೇಷದ ಸಿದ್ಧಾಂತದ ವಿರುದ್ಧ ಎಂದರು.
ರಾಷ್ಟ್ರದಲ್ಲಿನ ವೈವಿಧ್ಯತೆ ಮತ್ತು ಸಹೋದರತ್ವವನ್ನು ರಕ್ಷಿಸುವುದು ಮತ್ತು ಕಳೆದ ಒಂದು ದಶಕದಲ್ಲಿ ದೇಶವನ್ನು ಪೀಡಿಸಿರುವ ದ್ವೇಷದ ಸಿದ್ಧಾಂತಗಳನ್ನು ಕಿತ್ತೊಗೆಯುವುದು ಈ ಸಮಯದ ಅಗತ್ಯವಾಗಿದೆ ಎಂದು ತೇಜಸ್ವಿ ಹೇಳಿದರು.
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಮೋದಿಯವರ ವಿದೇಶ ಪ್ರವಾಸ ಮ್ತತು ಸುಳ್ಳು ಪ್ರಚಾರಗಳ ವಿರುದ್ದ ವಾಗ್ದಾಳಿ ನಡೆಸಿದರು.
ಈಗ ರದ್ದುಪಡಿಸಲಾಗಿರುವ ಚುನಾವಣಾ ಬಾಂಡ್ಗಳನ್ನು ಆಡಳಿತಾರೂಢ ಬಿಜೆಪಿಯ ವೈಟ್ ಕಾಲರ್ ಭ್ರಷ್ಟಾಚಾರ. ಅವು ಬಿಜೆಪಿ ಭ್ರಷ್ಟ ಎಂಬುದನ್ನು ಸಾಬೀತು ಪಡಿಸಿವೆ ಎಂದರು.
ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆಗಳನ್ನು ಉಲ್ಲೇಖಿಸಿ ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ಪುಟಿನ್ ರಷ್ಯಾದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆಂದರೆ ಅವರ ಮುಂದೆ ಯಾರೂ ನಿಲ್ಲುವ ಸ್ಥಿತಿಯಿಲ್ಲ. ಇಲ್ಲಿ ಬಿಜೆಪಿ ಕೂಡ ಅಂಥದೇ ಪರಿಸ್ಥಿತಿ ಸೃಷ್ಟಿಸಲು ಬಯಸಿದೆ ಎಂದು ಟೀಕಿಸಿದರು. ಜನರು ಒಗ್ಗೂಡಿದಾಗ ಸರ್ವಾಧಿಕಾರ ಕೊನೆಗೊಳ್ಳುತ್ತದೆ ಎಂದು ಉದ್ಧವ್ ಠಾಕ್ರೆ ನೇರ ದಾಳಿ ನಡೆಸಿದರು.
ಇದು ಪ್ರಜಾಪ್ರಭುತ್ವವನ್ನು ಉಳಿಸಲು ಕಡೇ ಅವಕಾಶವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಭಾರತ್ ಜೋಡೋ ನ್ಯಾಯ ಯಾತ್ರೆ ಮುಗಿದಿದೆ.
ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಯಾವುದಕ್ಕಾಗಿ ಹೋರಾಡಬೇಕು ? ಹೇಗೆ ಹೋರಾಡಬೇಕು ಎಂಬ ಒಂದು ಸ್ಪಷ್ಟತೆಯನ್ನು ಕೊಟ್ಟಿದ್ದಾರೆ. ಅದಕ್ಕೊಂದು ಹೊಸ ರೂಪವನ್ನೂ ಕೊಟ್ಟಿದ್ದಾರೆ. ಆದರೆ ಅದನ್ನು ಕಾಂಗ್ರೆಸ್ ಎಷ್ಟರ ಮಟ್ಟಿಗೆ ಸ್ವೀಕರಿಸುತ್ತದೆ ಎಂಬುದು ಬಹಳ ಮುಖ್ಯ.
ಈಗ, ಇನ್ನು ಮುಂದಿರುವುದು ರಾಹುಲ್ ಮಾತುಗಳೆಲ್ಲ ಪ್ರತಿಶಕ್ತಿಯಾಗಬೇಕಿರುವುದು.
ರಾಹುಲ್ ಹೇಳಿದ ಆ ಶಕ್ತಿಯ ವಿರುದ್ಧ ಹೋರಾಟಕ್ಕೆ, ಆ ಶಕ್ತಿಯನ್ನು ಮಣಿಸುವುದಕ್ಕೆ ಈ ಪ್ರತಿಶಕ್ತಿ ಈಗ ಸನ್ನದ್ಧವಾಗಬೇಕಿದೆ.