ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಇರುವುದಾದರೂ ಏನು?
2047ಕ್ಕೆ ವಿಕಸಿತ ಭಾರತ ನಿರ್ಮಿಸುವ ಮಾತಾಡುತ್ತಿರುವ ಬಿಜೆಪಿಯ ಲೋಕಸಭಾ ಚುನಾವಣಾ ಪ್ರಣಾಳಿಕೆ ಬಂದಿದೆ. ಈ ಪ್ರಣಾಳಿಕೆ ನೋಡಿ ಬಿಜೆಪಿ ಬೆಂಬಲಿಗ ಯುವಜನತೆ ಈಗ ಉದ್ಯೋಗ ಕೇಳಬೇಕೇ ಅಥವಾ 2047ರಲ್ಲಿ ಅವರಿಗೆ ಉದ್ಯೋಗ ಸಿಕ್ಕಿದರೆ ಸಾಕೇ ಎಂದು ನಿರ್ಧರಿಸಬೇಕಾಗಿದೆ.
2014ರಲ್ಲಿ ಮೋದಿಯವರು ನನಗೆ ಕೇವಲ 60 ತಿಂಗಳು ಕೊಡಿ ಸಾಕು ಅಂದಿದ್ದರು. ಅಲ್ಲದೆ ನೋಟು ರದ್ದತಿ ಮಾಡಿದಾಗ ಕೇವಲ 50 ದಿನ ಕೊಡಿ ಸಾಕು, ಎಲ್ಲ ಸರಿ ಮಾಡುತ್ತೇನೆ ಎಂದಿದ್ದರು.
2022ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು. ಮಾರ್ಚ್ 2022ರೊಳಗೆ ದೇಶದಲ್ಲಿ ಎಲ್ಲರಿಗೂ ಮನೆ ಒದಗಿಸುವುದಾಗಿಯೂ ಮೋದಿಯವರೇ ಹೇಳಿದ್ದರು.
ಆದರೆ ಈಗ ಹತ್ತು ವರ್ಷಗಳ ಅಧಿಕಾರಾವಧಿ ಮುಗಿಸಿದ ಬಳಿಕ, ಅಂದರೆ, ಎಲ್ಲ ಅವಧಿಗಳೂ ಎಲ್ಲವೂ ಕಳೆದು ಹೋದ ಬಳಿಕ ಮೋದಿ ನೇರ 2047ಕ್ಕೆ ಜಂಪ್ ಮಾಡಿ ಬಿಟ್ಟಿದ್ದಾರೆ. ಮೋದಿಯವರನ್ನು ನಂಬಿ ಮತ ಹಾಕಿದವರಿಗೆ ಇದಕ್ಕಿಂತ ದೊಡ್ಡ ದ್ರೋಹ ಏನಿದೆ?
ಬಿಜೆಪಿ ಬೆಂಬಲಿಗ ಯುವಕ ಯುವತಿಯರು ತಾವು ಕಳೆದ ಹತ್ತು ವರ್ಷಗಳಿಂದ ಅರಸುತ್ತಿರುವ ಉದ್ಯೋಗಕ್ಕಾಗಿ ತಡಕಾಡುತ್ತಿದ್ದಾರೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಅವರಿಗೆ ಉದ್ಯೋಗದ ಭರವಸೆ ಸಿಗುವುದಿಲ್ಲ. ಆದರೆ 2047ರಲ್ಲಿ ವಿಕಸಿತ ಭಾರತ ನಿರ್ಮಿಸುವ ಮಾತಾಡಲಾಗಿದೆ.
ಹಾಗಾದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಇರುವುದೇನು? ಅದರಲ್ಲಿ ಬಿತ್ತಿರುವ ಕನಸುಗಳೇನು?
ಪ್ರಣಾಳಿಕೆಯಲ್ಲಿ ವಿಕಾಸದ ದೊಡ್ಡ ದೊಡ್ಡ ಕನಸುಗಳನ್ನು ಬಿತ್ತಲಾಗಿದೆ. ಭಾರತದ ಆರ್ಥಿಕತೆಯನ್ನು ಜಗತ್ತಿನಲ್ಲೇ ಮೂರನೇ ಸ್ಥಾನಕ್ಕೆ ಕೊಂಡೊಯ್ಯುವ ಭರವಸೆ ಕೊಡಲಾಗಿದೆ. ಆದರೆ ಉದ್ಯೋಗಗಳ ಮಾತೇ ಇಲ್ಲ. ಬದಲಾಗಿ ಅವಕಾಶಗಳ ಮಾತನ್ನಷ್ಟೇ ಆಡಿ ಮೂಗಿಗೆ ತುಪ್ಪ ಸವರಲಾಗಿದೆ.
ಭಾರತ ಜಗತ್ತಿನ ಗ್ರೀನ್ ಎನರ್ಜಿ ಹಬ್ ಆಗಲಿದೆ, ಫಾರ್ಮಾ ಹಬ್ ಆಗಲಿದೆ, ಎಲೆಕ್ಟ್ರಾನಿಕ್ಸ್ ಹಬ್ ಆಗಲಿದೆ, ಆಟೊಮೊಬೈಲ್ ಹಬ್ ಆಗಲಿದೆ, ಸೆಮಿ ಕಂಡಕ್ಟರ್ ಹಬ್ ಆಗಲಿದೆ, ಇನ್ನೋವೇಷನ್ ಹಬ್ ಆಗಲಿದೆ ಎಂದೆಲ್ಲ ಇಲ್ಲದ ಮರಕ್ಕೆ ಬಳ್ಳಿ ಹಬ್ಬಿಸುವ ಮಾತನ್ನಾಡಿದ್ದಾರೆ ಮೋದಿ. ತಾವು ತೋರಿಸುತ್ತಿರುವ ಆ ಕನಸಿನ ದಿನಗಳು ನನಸಾಗುವುದು ದೂರ ಇಲ್ಲ ಎಂದು ಕೂಡ ಇನ್ನಷ್ಟು ಆಮಿಷ ಒಡ್ಡುತ್ತಿದ್ದಾರೆ.
ಉಳಿದೆಲ್ಲ ಪಕ್ಷಗಳ ಪ್ರಣಾಳಿಕೆಗಳು ಈಗೇನು ಸಮಸ್ಯೆ ಇದೆ, ಅವನ್ನು ಪರಿಹರಿಸಲು ತಮ್ಮ ಕಾರ್ಯಕ್ರಮ ಏನು ಎಂದು ಹೇಳುತ್ತಿದ್ದರೆ, ಬಿಜೆಪಿ ಪ್ರಣಾಳಿಕೆಯ ವರಸೆಯೇ ಬೇರೆ. ಅದು ಮೋದಿ ವರಸೆ.
ವಿಪಕ್ಷಗಳೆಲ್ಲ ನಿರುದ್ಯೋಗವನ್ನು ಮುಖ್ಯ ಚುನಾವಣಾ ವಿಷಯವಾಗಿ ತೆಗೆದುಕೊಂಡಿದ್ದರೆ, ಬಿಜೆಪಿಗೆ ಮಾತ್ರ ನಿರುದ್ಯೋಗದಿಂದ ಈ ದೇಶದ ಯುವಜನತೆ ಹತಾಶವಾಗಿರುವುದು ಒಂದು ವಿಚಾರವೇ ಅಲ್ಲ. ಅದರ ಬಗ್ಗೆ ಬಿಜೆಪಿಗೆ ಕಿಂಚಿತ್ ಕಳವಳವೂ ಇಲ್ಲ.
‘ಇಂಡಿಯಾ’ ಮೈತ್ರಿ ಸರಕಾರ ಬಂದರೆ ದೇಶದ ಒಂದು ಕೋಟಿ ಯುವಕರಿಗೆ ಉದ್ಯೋಗ ಎಂಬ ಮಾತನ್ನು ವಿಪಕ್ಷಗಳು ಆಡುತ್ತಿವೆ. 30 ಲಕ್ಷ ಸರಕಾರಿ ನೌಕರಿ ಭರ್ತಿ ತಮ್ಮ ಮೊದಲ ಹೆಜ್ಜೆ ಎನ್ನುತ್ತಿವೆ. ಮೋದಿ ಮಾತ್ರ ಇನ್ನೂ ಅವಕಾಶಗಳ ಮಾತನ್ನಷ್ಟೇ ಆಡುತ್ತಿದ್ದಾರೆ. ಕನಸುಗಳನ್ನು ಬಿತ್ತುವುದರಲ್ಲಿಯೇ ಇದ್ದಾರೆ.
ದೇಶದಲ್ಲಿ ಮೋದಿ ಕಾಲದಲ್ಲಿ ಉದ್ಯೋಗ ಸ್ಥಿತಿ ಎಷ್ಟು ಹದಗೆಟ್ಟಿದೆ ಎನ್ನುವುದು ಈಗಾಗಲೇ ಗೊತ್ತಿರುವ ವಿಚಾರ.
ಡೇಟಾ ಫಾರ್ ಇಂಡಿಯಾ ಡಾಟ್ಕಾಂನಲ್ಲಿ ಅಭಿಷೇಕ್ ವಾಗ್ಮರೆ ಅವರ ವರದಿ ಹೇಳುತ್ತಿರುವ ಸತ್ಯಗಳನ್ನು ಒಮ್ಮೆ ಗಮನಿಸಬೇಕು.
ಚೀನಾದಲ್ಲಿ ಶೇ.55ರಷ್ಟು ಜನರು ನಿಶ್ಚಿತ ಸಂಬಳದ ಕೆಲಸದಲ್ಲಿದ್ದಾರೆ.ಆದರೆ ಭಾರತದಲ್ಲಿ ಅಂಥವರ ಪ್ರಮಾಣ ಶೇ.20ರಷ್ಟು ಮಾತ್ರ.ಶ್ರೀಲಂಕಾದಲ್ಲಿ ಶೇ.58ರಷ್ಟು ಮಂದಿ ಸಂಬಳದ ಕೆಲಸದಲ್ಲಿದ್ದಾರೆ.ಅಮೆರಿಕದಲ್ಲಿ ಶೇ.90ಕ್ಕೂ ಹೆಚ್ಚು ಮಂದಿ ಸಂಬಳದ ಕೆಲಸದಲ್ಲಿದ್ದಾರೆ. ಪ್ರತೀ ತಿಂಗಳೂ ನಿಗದಿತ ಸಂಬಳ ಸಿಗುವ ಇಂಥ ನೌಕರಿಗಳು ಭಾರತದ ಹೆಚ್ಚಿನ ಜನರ ಪಾಲಿಗೆ ಮಾತ್ರ ಇನ್ನೂ ಕನಸು.
ಆದರೆ ಮೋದಿ ಮಾತ್ರ ಕನಸು ಬಿತ್ತುವುದನ್ನು ನಿಲ್ಲಿಸುತ್ತಲೇ ಇಲ್ಲ.
ನಿಗದಿತ ಸಂಬಳದ ಕೆಲಸವೂ ಒಂದೇ ರೂಪದಲ್ಲಿ ಇರುವುದಿಲ್ಲ.
ಭಾರತದಲ್ಲಿ ನಿಗದಿತ ಸಂಬಳದ ಕೆಲಸ ಮಾಡುವವರ ಪೈಕಿ ಶೇ.42ರಷ್ಟು ಮಂದಿಯ ಬಳಿ ಮಾತ್ರವೇ ಲಿಖಿತ ಕಾಂಟ್ರ್ಯಾಕ್ಟ್ ಇದೆ. ಇದಲ್ಲದೆ, ರಜೆ ಹಾಕಿದರೆ ಸಂಬಳವೂ ಇಲ್ಲ ಎನ್ನುವ ಸ್ಥಿತಿಯಲ್ಲಿ ದುಡಿಯುತ್ತಿರುವವರ ದೊಡ್ಡ ವರ್ಗವೇ ಇದೆ.
ಇಂತಹ ಸ್ಥಿತಿಯಲ್ಲಿ ಯುವಕರು ಹೆಮ್ಮೆಪಡಬೇಕಾದ ವಿಚಾರಗಳು ಎಂದು ಮೋದಿ ಪಟ್ಟಿ ಮಾಡಿ ತಮ್ಮ ಭಾಷಣಗಳಲ್ಲಿ ಹೇಳುತ್ತಾರೆ.
ಆದರೆ ವಾಸ್ತವ ಏನೆಂದರೆ ಭಾರತದಲ್ಲಿ ಈಗ ಸಿಗುತ್ತಿರುವ ಉದ್ಯೋಗಗಳ ಮಟ್ಟ ಮೂರನೇ ದರ್ಜೆಯದ್ದು. ಇಲ್ಲಿ ಯುವಕರಿಗೆ ಸಿಗುತ್ತಿರುವುದು ಸಾಧಾರಣ ಸಂಬಳ, ಸಿಕ್ಕಾಪಟ್ಟೆ ದುಡಿಮೆಯ ಕೆಲಸಗಳೇ. ಈ ಕಟು ಸತ್ಯದ ಬಗ್ಗೆ ಸರಕಾರ ಲೆಕ್ಕವನ್ನೇ ಇಟ್ಟಿಲ್ಲ. ಇಟ್ಟರೂ, ಜನರಿಗೆ ಮಾತ್ರ ಕೊಡುತ್ತಿಲ್ಲ.
ಏನೇ ವರದಿಗಳು ಬಂದು, ಭಾರತದ ಸ್ಥಿತಿಯ ಬಗ್ಗೆ ಹೇಳಿದರೂ ಅದನ್ನೆಲ್ಲ ಸುಳ್ಳು ಎನ್ನುವುದು, ಪಿತೂರಿ ಎನ್ನುವುದು ಮೋದಿ ಸರಕಾರಕ್ಕೆ ಅಭ್ಯಾಸವೇ ಆಗಿಹೋಗಿದೆ.
ಇನ್ನೊಂದೆಡೆ ರೈತರ ವಿಚಾರವಾಗಿಯೂ ಮೋದಿ ಸರಕಾರದ್ದು ದಿವ್ಯ ನಿರ್ಲಕ್ಷ್ಯ. ರೈತರು ಸುದೀರ್ಘ ಅವಧಿಗೆ ಪ್ರತಿಭಟನೆಯಲ್ಲಿ ತೊಡಗಿದ್ದಾಗ ಮೋದಿ ಸರಕಾರ ಹೇಗೆ ನಡೆದುಕೊಂಡಿತು, ಹೇಗೆ ಬಲ ಪ್ರಯೋಗಿಸಿತು? ಎಂದು ನೋಡಿದ್ದೇವೆ. ಇಷ್ಟಾದ ಮೇಲೆಯೂ ಅವರಿಗೆ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಖಾತರಿ ಕೊಡುತ್ತಿಲ್ಲ.
ದೇಶದಲ್ಲಿ 26 ಕೋಟಿ ಜನರು ಕೃಷಿಯಲ್ಲಿ ತೊಡಗಿದ್ದಾರೆ. ಕೈಗಾರಿಕೆಗಳಲ್ಲಿ 14 ಕೋಟಿ ಜನರಿದ್ದಾರೆ. 7.5 ಕೋಟಿ ಜನರು ನಿರ್ಮಾಣ ಕ್ಷೇತ್ರದಲ್ಲಿದ್ದಾರೆ. 6.5 ಕೋಟಿ ಜನರು ಉತ್ಪಾದನಾ ಕ್ಷೇತ್ರದಲ್ಲಿ ಕೆಲಸದಲ್ಲಿದ್ದಾರೆ.
ಮೋದಿ ಮಾತ್ರ ಚುನಾವಣಾ ರ್ಯಾಲಿಗಳಲ್ಲಿನ ಭಾಷಣಗಳಲ್ಲಿ ಏನೇನೋ ಹೇಳುತ್ತಾರೆ. ಆದರೆ ಉದ್ಯೋಗದ ವಿಚಾರ, ಜೀವನೋಪಾಯದ ವಿಷಯ ಮಾತ್ರ ಎತ್ತುವುದೇ ಇಲ್ಲ.
ನಿಜವಾಗಿಯೂ ಈ ದೇಶದ ಜನರಿಗೆ ಬದ್ಧವಾಗಿರಬೇಕು, ಸತ್ಯವನ್ನು ಅವರೆದುರು ಇಡಬೇಕು ಎಂದಿದ್ದರೆ ಮೋದಿ ಸರಕಾರ, ಬಿಜೆಪಿ ಎಲ್ಲ ಅಂಕಿ ಅಂಶಗಳನ್ನು ಇಡುತ್ತಿತ್ತು. ಇಡುವುದು ಅದಕ್ಕೆ ಸಾಧ್ಯವೂ ಇತ್ತು.
ಆದರೆ ಸತ್ಯ ಹೊರಬೀಳುವುದೇ ಅದಕ್ಕೆ ಬೇಕಿಲ್ಲ.
ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಷನ್ (ಐಎಲ್ಒ) ಮತ್ತು ಮಾನವ ವಿಕಾಸ ಸಂಸ್ಥಾನ ಪ್ರಕಟಿಸಿರುವ ಇಂಡಿಯಾ ಅನ್ಎಂಪ್ಲಾಯ್ಮೆಂಟ್ ರಿಪೋರ್ಟ್, ಭಾರತದ ನಿರುದ್ಯೋಗಿಗಳಲ್ಲಿ ಶೇ.83ರಷ್ಟು ಯುವಕರೇ ಇದ್ದಾರೆ ಎಂಬ ಕಟು ವಾಸ್ತವವನ್ನು ತೆರೆದಿಟ್ಟಿದೆ. 2000ದಲ್ಲಿ ಈ ಪ್ರಮಾಣ ಶೇ.35.2 ಇತ್ತು. 2022ರಲ್ಲಿ ಶೇ.65.7ಕ್ಕೇರಿತ್ತು. ಇತ್ತೀಚಿನ ವರದಿಗಳ ಪ್ರಕಾರ ಯುವಕರಲ್ಲಿ ನಿರುದ್ಯೋಗಿಗಳ ಸಂಖ್ಯೆ ತೀವ್ರ ಮಟ್ಟದಲ್ಲಿ ಹೆಚ್ಚಾಗಿದೆ. 20ರಿಂದ 24ರ ವಯೋಮಾನದ ಯುವಕರಲ್ಲಿ ಶೇ.44.49ರಷ್ಟು ನಿರುದ್ಯೋಗಿಗಳೇ ಇದ್ದಾರೆ. 25ರಿಂದ 29ರ ಯುವಕರಲ್ಲಿ ಈ ಪ್ರಮಾಣ ಶೇ.14.33 ಇದೆ.
ಇಂತಹ ಯುವಕರಿಗೆ ಈಗ ಮೋದಿ ವಿಕಸಿತ ಭಾರತ 2047ರ ಕನಸು ತೋರಿಸುತ್ತಿದ್ದಾರೆ. ಇದು ರೈತರಿಗೆ ಈ ಹಿಂದೆ 2022ರ ಕನಸನ್ನು ತೋರಿಸಿದ್ದ ಹಾಗೆ.
ಕಳೆದ 10 ವರ್ಷಗಳಲ್ಲಿ ಬಡವರ ಕಲ್ಯಾಣದ ಮಾತು ಆಡುತ್ತಲೇ ಬಂದಿರುವ ಮೋದಿ ಸರಕಾರ ಮಾಡಿದ್ದಾದರೂ ಏನು?
ಮೋದಿ ಸರಕಾರದಲ್ಲಿ ಶ್ರೀಮಂತರೇ ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ.
ಪ್ಯಾರಿಸ್ ಸ್ಕೂಲ್ ಆಫ್ ಎಕನಾಮಿಕ್ಸ್ನ ವರ್ಲ್ಡ್ ಇನ್ಇಕ್ವಾಲಿಟಿ ಲ್ಯಾಬ್ ವರದಿಯ ಪ್ರಕಾರ, ಜಗತ್ತಿನಲ್ಲೇ ಅತ್ಯಂತ ಹೆಚ್ಚು ಅಸಮಾನತೆ ಭಾರತದಲ್ಲಿದೆ. ‘ಇನ್ಕಂ ವೆಲ್ತ್ ಇನಿಕ್ವಾಲಿಟಿ ಇನ್ ಇಂಡಿಯಾ, 1922-2023’ ಎಂಬ ಹೆಸರಿನ ಆ ವರದಿ, ‘ದಿ ರೈಸ್ ಆಫ್ ಬಿಲಿಯನೇರ್ ರಾಜ್’ ಎಂದು ವಿಶೇಷವಾಗಿ ಒತ್ತಿಹೇಳಿದೆ.
ಅದನ್ನು ಕೂಡ ನಿರಾಕರಿಸುವ ಕೆಲಸ ಆಯಿತು.
ಬ್ರಿಟಷ್ ರಾಜ್ಲ್ಲಿ ಇದ್ದ ಅಸಮಾನತೆಗಿಂತಲೂ ಹೆಚ್ಚು ಅಸಮಾನತೆ ಮೋದಿ ರಾಜ್ನಲ್ಲಿದೆ.
ಭಾರತದಲ್ಲಿನ ಜನಸಂಖ್ಯೆಯ ಶೇ.1ರಷ್ಟಿರುವ ಅತಿ ಶ್ರೀಮಂತರ ಕೈಯಲ್ಲಿ ದೇಶದ ಒಟ್ಟು ಸಂಪತ್ತಿನ ಶೇ. 40.1 ಇದೆ. ಉಳಿದ ಶೇ.99ರಷ್ಟು ಜನರ ಬಳಿ ಶೇ.59.9ರಷ್ಟು ಸಂಪತ್ತು ಇದೆ.
ಇಷ್ಟೆಲ್ಲ ಕಹಿ ಸತ್ಯಗಳನ್ನು ಅಡಗಿಸಿಟ್ಟು, ಧರ್ಮದ ಹೆಸರಿನಲ್ಲಿ, ರಾಮನ ಹೆಸರಿನಲ್ಲಿ ಮತ ಪಡೆಯಲು ಮೋದಿ ಸರಕಾರ ಯತ್ನಿಸುತ್ತಿದೆ.
ಬಿಜೆಪಿ ಖಜಾನೆ ಭರ್ತಿಯಾಗಿದೆ. ಮೋದಿ ಮೂರನೇ ಅವಧಿಯ ಕನಸು ಕಾಣುತ್ತಿದ್ದಾರೆ. ಬಿಜೆಪಿ ಪ್ರಣಾಳಿಕೆ ತುಂಬಾ ಬರೀ ಕನಸುಗಳೇ ಕಾಣುತ್ತಿದೆ. ಈ ಕನಸುಗಳಿಂದಲೇ ಜನರ ಹೊಟ್ಟೆ ತುಂಬಿಹೋಗಲಿದೆಯೇ?.