400 ಸೀಟು ಗೆಲ್ಲುವವರಿಗೆ ಇಷ್ಟೆಲ್ಲಾ ಕಸರತ್ತಿನ ಅನಿವಾರ್ಯತೆ ಏನು ?
ಪ್ರಧಾನಿ ಮೋದಿ | Photo: PTI
ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತರತ್ನ ಘೋಷಿಸಲಾಗಿದೆ.
ಆದರೆ ಇದರ ಹಿಂದೆ ಇರುವುದು ಕರ್ಪೂರಿ ಠಾಕೂರ್ ಅವರ ಬಗೆಗಿನ ಗೌರವ, ಸಾಮಾಜಿಕ ನ್ಯಾಯದ ಬಗೆಗಿನ ಕಳಕಳಿಯೆ ಅಥವಾ ಆ ರಾಜ್ಯದ ಸರ್ಕಾರವನ್ನು ಉರುಳಿಸಿ ಹೊಸ ಆಟ ಶುರು ಮಾಡುವ ರಾಜಕೀಯವೆ?
ಮೋದಿ ಮತ್ತು ಬಿಜೆಪಿಯ ರಾಜಕೀಯಕ್ಕಾಗಿಯೇ ಭಾರತ ರತ್ನವನ್ನು ಬಳಸಿಕೊಳ್ಳಲಾಯಿತೇ?. ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಿಸಿದ್ದರ ಹಿಂದಿನ ಉದ್ದೇಶ ರಾಜಕೀಯ ಮಸಲತ್ತಿನಿಂದ ಕೂಡಿದೆಯೆ?. ಭಾರತ ರತ್ನ ಘೋಷಣೆ ಮಾಡಿದ್ದು ನಿಜವಾಗಿಯೂ ಕರ್ಪೂರಿ ಠಾಕೂರ್ ಅವರ ಕೊಡುಗೆಗಳನ್ನು ಗುರುತಿಸಿ ಗೌರವಿಸಲಿಕ್ಕಾಗಿಯೇ ಅಥವಾ ಬಿಹಾರದಲ್ಲಿರುವ ಸರಕಾರವನ್ನು ಉರುಳಿಸುವುದಕ್ಕಾಗಿಯೇ?.
ನಿಜಕ್ಕೂ ಪ್ರಧಾನಿ ಮೋದಿ ಹಾಗು ಬಿಜೆಪಿಗೆ ಕರ್ಪೂರಿ ಠಾಕೂರ್ ಅವರ ರಾಜಕೀಯ ಮತ್ತವರ ಕೊಡುಗೆಗಳ ಬಗ್ಗೆ ಗೌರವವಿದೆಯೇ?. ಇದ್ದಿದ್ದರೆ ಕರ್ಪೂರಿ ಠಾಕೂರ್ ಅವರು ಅಷ್ಟೊಂದು ಒತ್ತು ಕೊಟ್ಟಿದ್ದ ಹಿಂದುಳಿದವರಿಗೆ ಮೀಸಲಾತಿ ಬಗ್ಗೆ ಯಾಕೆ ಬಿಜೆಪಿ ದ್ವಂದ್ವ ನಿಲುವು ತಾಳುತ್ತದೆ? ಇದೆಂಥ ಬಗೆಯ ರಾಜಕೀಯ?.
400 ಸೀಟು ಗೆಲ್ಲುತ್ತೇವೆ ಎಂದು ಹೇಳುತ್ತಲೇ, ಸರಕಾರಗಳನ್ನು ಉರುಳಿಸಿ ಇರುವ ಸೀಟು ಉಳಿಸಿಕೊಳ್ಳುವ ಕಸರತ್ತು ಮಾಡಬೇಕಾದ ಅನಿವಾರ್ಯತೆ ಬಿಜೆಪಿಗೆ ಏಕೆ ಬಂದಿದೆ ?. ಈ ಹಿಂದೆಯೂ ಭಾರತ ರತ್ನವನ್ನು ರಾಜಕೀಯ ಲೆಕ್ಕಾಚಾರ ಮಾಡಿ ಕೊಡಲಾಗಿದೆ. ಇಲ್ಲ ಅಂತೇನಿಲ್ಲ. ಆದರೆ ಈ ಬಾರಿ ನೇರವಾಗಿ ಒಂದು ರಾಜ್ಯದ ಸರಕಾರವನ್ನು ಉರುಳಿಸಿ ಹೊಸ ಸರಕಾರ ರಚಿಸುವುದಕ್ಕಾಗಿಯೇ ಭಾರತ ರತ್ನ ಘೋಷಣೆ ಮಾಡಲಾಯಿತೇ ಎಂಬ ಸಂಶಯ ಈಗ ಎಲ್ಲರನ್ನೂ ಕಾಡುತ್ತಿದೆ.
ಮೋದಿ ಸರ್ಕಾರ ತನಗೆ ಬೇಕಾದಾಗಲೆಲ್ಲ ಈ ದೇಶದ ಮಹಾನಾಯಕರುಗಳ ಹುಟ್ಟುಹಬ್ಬ ಅಥವಾ ಜನ್ಮಶತಮಾನೋತ್ಸವ ಜೀವನಘಟ್ಟದಂಥ ವಿಶಿಷ್ಟ ಸಂದರ್ಭಗಳ ನೆಪವಿಟ್ಟುಕೊಂಡು ಆ ವ್ಯಕ್ತಿತ್ವಗಳನ್ನು ಹೈಜಾಕ್ ಮಾಡುತ್ತಲೇ ಬಂದಿದೆ. ಅವರನ್ನು ಗೌರವಿಸುವ ನೆಪದಲ್ಲಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕೀಯ ಮಾಡುತ್ತಲೇ ಬಂದಿದೆ.
ಸಮುದಾಯಗಳ ನಾಯಕರ ಸ್ಮರಣೆಯಲ್ಲೂ ರಾಜಕೀಯ ಮಾಡುತ್ತ, ತನ್ನ ಲಾಭದ ಲೆಕ್ಕಾಚಾರ ಹಾಕುವ ಬಿಜೆಪಿ, ಸಂಘ ಪರಿವಾರ, ಮೋದಿ ಸರ್ಕಾರ, ಈಗ ಕರ್ಪೂರಿ ಠಾಕೂರ್ ವಿಚಾರದಲ್ಲಿಯೂ ಅದನ್ನೇ ಮಾಡಿತೆ?.
ಬಿಹಾರದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ, ನಿತೀಶ್ ಕುಮಾರ್ ಅವರ ರಾಜಕೀಯ ನಡೆಯ ಬಗ್ಗೆ ಎದ್ದಿರುವ ಊಹಾಪೋಹಗಳನ್ನು ಗಮನಿಸಿದರೆ ಈ ಅನುಮಾನ ಇನ್ನೂ ಹೆಚ್ಚುತ್ತದೆ. ಹಾಗಾಗಿಯೇ, ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಲಾಗುತ್ತಿರುವುದು ಅವರ ಕುರಿತ ಗೌರವದಿಂದಲೋ ಅಥವಾ ಅದಕ್ಕೆ ಪ್ರತಿಯಾಗಿ ಬಿಹಾರದಲ್ಲಿ ಅಧಿಕಾರ ಪಡೆಯುವುದಕ್ಕೆ ತಯಾರಿಯಾಗಿಯೊ ಎಂದು ಕೇಳಲೇಬೇಕಾಗಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ಬಿಜೆಪಿ ಜೊತೆ ಹೋಗಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿರುವ ಈ ಸನ್ನಿವೇಶದಲ್ಲಿ,
ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಿಸಲಾಗಿರುವುದರ ಹಿಂದಿನ ಅಸಲಿ ಕಾರಣ ಬಯಲಾಗಲು ಹೆಚ್ಚು ಸಮಯ ಹಿಡಿಯಲಾರದು.
ಆದರೆ. ಒಂದು ವೇಳೆ ಅದೇ ನಿಜವೆಂದಾದಲ್ಲಿ ಅದು ಅತ್ಯಂತ ಕೆಡುಕಿನ ವಿಚಾರವಾಗಲಿದೆ. ಭಾರತ ರತ್ನದಂಥ ಅತ್ಯುನ್ನತ ಗೌರವಕ್ಕೆ ಅತ್ಯಂತ ಅರ್ಹ ವ್ಯಕ್ತಿತ್ವವಾಗಿರುವ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನವನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದೊಂದಿಗೆ ನೀಡುವ ಮೂಲಕ ಅವರನ್ನು ದುರ್ಬಳಕೆ ಮಾಡಿಕೊಂಡಂತಾಗಲಿದೆಯಲ್ವಾ ?.
ಅವತ್ತು ಜನಸಂಘ ಕರ್ಪೂರಿ ಠಾಕೂರ್ ವಿಚಾರದಲ್ಲಿ ಏನೇನು ಮಾಡಿತು ಎಂಬುದು ಚರಿತ್ರೆಯಲ್ಲಿ ದಾಖಲಾಗಿರುವಾಗ, ಇಂದು ಆ ಜನಸಂಘದ ಜಾಗದಲ್ಲಿರುವ ಬಿಜೆಪಿ ಕೂಡ ಕರ್ಪೂರಿ ಠಾಕೂರ್ ವಿಚಾರದಲ್ಲಿ ಮತ್ತೊಮ್ಮೆ ಅದನ್ನೇ ಮಾಡುತ್ತಿದೆ ಎಂದಾಯಿತಲ್ವಾ ?. ಕರ್ಪೂರಿ ಠಾಕೂರ್ ಅವರಿಗೆ ಭಾರತರತ್ನ ಘೋಷಿಸಿದ್ದರ ಬೆನ್ನಲ್ಲೇ ಅವರ ಬಗ್ಗೆ ಪ್ರಧಾನಿ ಮೋದಿ ಅವರ ವಿಶೇಷ ಲೇಖನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ.
ಕರ್ಪೂರಿ ಅವರ ಬದುಕಿನಲ್ಲಿ ಯಾವುದು ಅತಿ ದೊಡ್ಡ ವಿಚಾರವಾಗಿತ್ತೊ, ಯಾವುದಕ್ಕಾಗಿ ಅವರು ತಮ್ಮ ರಾಜಕೀಯ ಬದುಕನ್ನೇ ಮುಡಿಪಾಗಿಟ್ಟಿದ್ದರೊ ಆ ಮೀಸಲಾತಿ ವಿಚಾರವಾಗಿ ಪ್ರಸ್ತಾಪವೇ ಮೋದಿ ಲೇಖನದಲ್ಲಿ ಬರುವುದಿಲ್ಲ. ಕರ್ಪೂರಿ ಅವರಿಗೆ ಭಾರತ ರತ್ನ ನೀಡುವ ಮೊದಲು ಈ ಸರಕಾರದಿಂದ ಅಟಲ್ ಬಿಹಾರಿ ವಾಜಪೇಯಿ, ಮದನ ಮೋಹನ್ ಮಾಳವೀಯ, ನಾನಾಜಿ ದೇಶ್ಮುಖ್, ಭೂಪೇನ್ ಹಜಾರಿಕಾ, ಪ್ರಣಬ್ ಮುಖರ್ಜಿಯವರಿಗೆ ಭಾರತ ರತ್ನ ನೀಡಲಾಗಿದೆ.
ಆದರೆ ಅವರಾರ ಬಗ್ಗೆಯೂ, ಅವರಿಗೆ ಭಾರತರತ್ನ ಘೋಷಣೆ ಬಳಿಕ ಪ್ರಧಾನಿ ಮೋದಿ ಲೇಖನವನ್ನೇನೂ ಬರೆದದ್ದಿಲ್ಲ. ಹೀಗಿರುವಾಗ, ಕರ್ಪೂರಿ ಠಾಕೂರ್ ಅವರಿಗೆ ಭಾರತರತ್ನ ಘೋಷಣೆಯಾದ ಮರುದಿನವೇ ಪ್ರಧಾನಿ ಲೇಖನ ಪ್ರಕಟವಾಗುತ್ತದೆ.
ಮೋದಿ ಲೇಖನದಲ್ಲಿಯ ಎರಡು ಅಂಶಗಳನ್ನು ಈಗಿನ ಸಂದರ್ಭದ ಚರ್ಚೆಯ ಹಿನ್ನೆಲೆಯಲ್ಲಿ ಇಲ್ಲಿ ಪ್ರಸ್ತಾಪಿಸಬೇಕು.
1.ಕರ್ಪೂರಿ ಅವರನ್ನು ಭೇಟಿಯಾಗುವ ಅವಕಾಶ ನನಗೆ ಎಂದೂ ಸಿಕ್ಕಿರಲಿಲ್ಲ. ಆದರೆ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದ ಕೈಲಾಸಪತಿ ಮಿಶ್ರಾ ಅವರಿಂದ ನಾನು ಅವರ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಅವರು ಹಲವಾರು ಅಡೆತಡೆಗಳನ್ನು ಮೆಟ್ಟಿನಿಂತು ಸಮಾಜ ಸುಧಾರಣೆಗೆ ಶ್ರಮಿಸಿದರು.
2.ಕರ್ಪೂರಿ ಠಾಕೂರ್ ಹಿಂದುಳಿದ ವರ್ಗಗಳ ಬಲವರ್ಧನೆಗಾಗಿ ಕೈಗೊಂಡ ಕ್ರಮಗಳಿಗೆ ಭಾರೀ ವಿರೋಧ ವ್ಯಕ್ತವಾಯಿತು. ಆದರೂ ಯಾವುದೇ ಒತ್ತಡಕ್ಕೆ ಅವರು ಮಣಿಯಲಿಲ್ಲ.
ತಮಾಷೆಯೆಂದರೆ, ಹೀಗೆ ಬರೆಯುವ ಮೋದಿಯವರಿಗೆ ಅವತ್ತು ಕರ್ಪೂರಿ ನಿರ್ಧಾರಗಳನ್ನು ವಿರೋಧಿಸಿದ್ದವರು ಯಾರಾಗಿದ್ದರೆಂದು ಗೊತ್ತಿದೆಯಲ್ಲವೆ ಎಂಬುದು.
ಅಂದು ಅವರನ್ನು ವಿರೋಧಿಸಿದ್ದವರು ಯಾರಾಗಿದ್ದರು, ಮತ್ತು ಹಿಂದುಳಿದ ವರ್ಗದವರ ಪ್ರಾತಿನಿಧ್ಯದ ವಿಚಾರದಲ್ಲಿನ ಅವರ ತೀರ್ಮಾನ ಏನಾಗಿತ್ತು?
ಕರ್ಪೂರಿಯವರ ನಿರ್ಧಾರಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವರು ಸಂಘ ಅಥವಾ ಜನಸಂಘದ ಜನರೇ ಆಗಿದ್ದರಲ್ಲವೆ?
ಹಿಂದುಳಿದವರಿಗೆ, ಅತಿ ಹಿಂದುಳಿವದರಿಗೆ ಪ್ರಾತಿನಿಧ್ಯ ಸಿಗುವುದಕ್ಕೆ ಕಾರಣವಾದವರು ಕರ್ಪೂರಿ. ಆದರೆ ಮೀಸಲಾತಿಗೆ ಜನಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕಡೆಗೆ ಅವರ ಸರ್ಕಾರವೂ ಬಿದ್ದು ಹೋಗುವಂತಾಯಿತು. ಯಾರಿಂದ ತಾನು ಕರ್ಪೂರಿ ಬಗ್ಗೆ ತಿಳಿದುಕೊಂಡೆ ಎಂದು ಪ್ರಧಾನಿ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೋ ಅದೇ ಕೈಲಾಸಪತಿ ಮಿಶ್ರಾ ಅವರೇ ಕರ್ಪೂರಿ ಸರ್ಕಾರ ಬೀಳುವುದಕ್ಕೆ ಕಾರಣರಾಗಿದ್ದರು.
ಇದಕ್ಕಿಂತ ವಿಪರ್ಯಾಸ ಬೇಕೇ ?. ಹಾಗೆ ಅವತ್ತು ಕರ್ಪೂರಿಯವರ ಸಾಮಾಜಿಕ ನ್ಯಾಯದ ಕ್ರಮಕ್ಕೆ, ಅವರ ನಿರ್ಧಾರಗಳಿಗೆ ಯಾರು ಉರಿದುಬಿದ್ದಿದ್ದರೊ, ಅದೇ ಸಂಘ ಪರಿವಾರದ ಜನರೇ ಇಂದು ಭಾರತ ರತ್ನ ಘೋಷಿಸುವುದರೊಂದಿಗೆ ಕರ್ಪೂರಿಯವರ ಹೆಸರನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆ.
ಯಾವ ಕೈಲಾಸಪತಿ ಮಿಶ್ರಾ ಅವರ ಕಾರಣದಿಂದ ಕರ್ಪೂರಿ ಸರ್ಕಾರ ಬಿದ್ದುಹೋಗಿತ್ತೋ ಅದೇ ತಮ್ಮ ನಾಯಕನನ್ನು ಮೋದಿ ಸರ್ಕಾರ ಯಾವತ್ತೋ ಗೌರವಿಸಿ ಆಗಿತ್ತು. ಈಗ ಕರ್ಪೂರಿ ಅವರಿಗೆ ಭಾರತ ರತ್ನ ಘೋಷಿಸಿರುವ ಮೋದಿ ಸರ್ಕಾರ, ಇದಕ್ಕೂ ಬಹಳ ವರ್ಷಗಳ ಹಿಂದೆಯೆ ಸಂಘ ಪರಿವಾರದ ನಾಯಕ ಕೈಲಾಸಪತಿ ಮಿಶ್ರಾ ಹೆಸರಿನ ಅಂಚೆಚೀಟಿ ತಂದಿತ್ತು. ಮಿಶ್ರಾ ಮತ್ತು ಜನಸಂಘದ ಜನ ಕರ್ಪೂರಿ ಠಾಕೂರ್ ವಿಚಾರದಲ್ಲಿ ಅವತ್ತು ಹೇಗೆಲ್ಲ ನಡೆದುಕೊಂಡಿದ್ದರು ಎಂಬುದನ್ನೂ ಮೋದಿ ಹೇಳಬೇಕಿತ್ತಲ್ಲವೆ?.
ಆದರೆ, ಕರ್ಪೂರಿ ಠಾಕೂರ್ ರಾಜಕೀಯ ಬದುಕಿನ ಸತ್ಯಗಳು ಬಿಜೆಪಿಗಾಗಲೀ, ಆರ್ಎಸ್ಎಸ್ಗಾಗಲೀ ಅಥವಾ ಇವತ್ತಿನ ಮಡಿಲ ಮೀಡಿಯಾಗಳಿಗಾಗಲೀ ಬೇಕಿಲ್ಲ. ಮತ್ತವಕ್ಕೆ ಆ ಆದರ್ಶ ನಾಯಕನ ಬಗ್ಗೆ ಸಹನೆಯೂ ಇಲ್ಲ. ಕರ್ಪೂರಿ ಠಾಕೂರ್ ರಾಜಕೀಯ ಬದುಕು, ಸಾಮಾಜಿಕ ನ್ಯಾಯದ ಅವರ ರಾಜಕಾರಣ ಯಾವುದೂ ಇವತ್ತಿನ ಈ ಹೊಲಸು ರಾಜಕೀಯದಲ್ಲಿ ಮುಖ್ಯವಾಗುತ್ತಿಲ್ಲ.
ಬದಲಾಗಿ ಅವರ ಹೆಸರು ಬಳಸಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳುವ ಕೊಳಕು ಮನಃಸ್ಥಿತಿಗಳನ್ನೇ ನೋಡಬೇಕಾಗಿದೆ. ಕರ್ಪೂರಿ ಅವರನ್ನು ತಮ್ಮವರೆಂದು ಮಾಡಿಕೊಳ್ಳುವ ಪ್ರಯತ್ನಗಳನ್ನೂ ಅವರ ಜನ್ಮಶತಮಾನೋತ್ಸವದ ನೆಪದಲ್ಲಿ ಬಿಜೆಪಿ ಮಾಡಿದೆ. ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಮಾಡಲು ಉದ್ದೇಶಿಸಿದ್ದರೂ, ನಿತೀಶ್ ಕುಮಾರ್ ಸರ್ಕಾರ ತಮಗೆ ಅವಕಾಶ ಕೊಡಲಿಲ್ಲ ಎಂದು ಬಿಹಾರ ಬಿಜೆಪಿ ಹೇಳಿಕೊಂಡಿತ್ತು.
ನಿತೀಶ್ ಕುಮಾರ್ ಗೂಂಡಾ ವರ್ತನೆ ತೋರುತ್ತಿದ್ಧಾರೆ ಎಂದು ಕೂಡ ಜರೆದಿತ್ತು. ಹಾಗಾದರೆ, ಈಗ ಅದೇ ಜನರೊಂದಿಗೆ ನಿತೀಶ್ ಕುಮಾರ್ ಹೇಗೆ ಹೋಗುತ್ತಾರೆ ?. ಅಂತಹ ನಿತೀಶ್ ಜೊತೆ ಬಿಜೆಪಿ ಹೇಗೆ ಕೈ ಜೋಡಿಸುತ್ತದೆ ?
ಕರ್ಪೂರಿಯವರಿಗೆ ಭಾರತ ರತ್ನ ಘೋಷಣೆಯಾಗುವುದರೊಂದಿಗೆ ರಾಜಕೀಯ ಲಾಭವಾಗುತ್ತಿರುವುದು ಯಾರ್ಯಾರಿಗೆ? ಈಗ ಭಾರತ ರತ್ನ ಘೋಷಿಸುವ ಮೂಲಕ ಕರ್ಪೂರಿಯವರ ಹೆಸರಿನ ನೆಪದಲ್ಲಿ ಮಾಡಹೊರಟಿರುವುದು ಎಂಥ ರಾಜಕೀಯ? ಇಲ್ಲಿ ಎಷ್ಟು ಗೌರವ ಭಾವನೆ ಇದೆ, ಎಷ್ಟು ನೈತಿಕತೆ ಇದೆ, ಎಷ್ಟು ಜನಪರ ಚಿಂತನೆ ಇದೆ?
ಇದನ್ನು ಪಿಎಂ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ಅವರೇ ಹೇಳಬೇಕು. ಕರ್ಪೂರಿ ಠಾಕೂರ್ ಅವರಿಂದ ದೇಶದ ರಾಜಕೀಯದ ಚಿತ್ರಣವೇ ಬದಲಾಯಿತು. ಅವರದೇ ನೆಲದಲ್ಲಿ ಈಗ ಬಿಹಾರ ಜಾತಿ ಗಣತಿ ಕೂಡ ಇಡೀ ದೇಶದ ಗಮನ ಸೆಳೆದಿದೆ. ಜಾತಿ ಆಧಾರದ ಮೀಸಲಾತಿ ಮಾತು ಶುರುವಾಗಿದೆ. ಇಡೀ ದೇಶಕ್ಕೆ ಬಿಹಾರ ಮಾದರಿಯಾಗಿದೆ.
ಹಿಂದುಳಿದ, ಅತಿ ಹಿಂದುಳಿದವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಇಲ್ಲದಿರುವುದು ಬಯಲಾಗಿದೆ. ಹೀಗಿರುವಾಗ, ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುವುದರ ಹಿಂದೆ ರಾಜಕೀಯ ಉದ್ದೇಶವಿದ್ದರೆ ಅದಕ್ಕಿಂಥ ದೊಡ್ಡ ವಿಪರ್ಯಾಸ ಬೇರೆ ಇಲ್ಲ. ಅವತ್ತಿನ ಜನಸಂಘದ ಜಾಗದಲ್ಲಿ ಇವತ್ತು ಬಿಜೆಪಿಯಿದೆ. ಅವತ್ತು ಅದು ಮಾಡಿದ ರಾಜಕೀಯವನ್ನೇ ಇಂದು ಬಿಜೆಪಿ ಮತ್ತೊಂದು ಬಗೆಯಲ್ಲಿ ಮಾಡುತ್ತಿದೆ.
ಮೀಸಲಾತಿಯೆಂದರೇ ಭಯಬೀಳುವ ಮೋದಿ ಸರ್ಕಾರ, ದೂರ ಓಡುವ ಮೋದಿ ಸರ್ಕಾರ, ನಿಜವಾಗಿಯೂ ಹಿಂದುಳಿದ, ಅತಿ ಹಿಂದುಳಿದ ಜನಸಂಖ್ಯೆಯ ಸ್ಪಷ್ಟ ಚಿತ್ರಣ ಕೊಡುವ ಜಾತಿ ಗಣತಿ ಬಗ್ಗೆ ಉದ್ದೇಶಪೂರ್ವಕ ವಿಳಂಬ ತೋರುತ್ತಲೇ ಬಂದಿರುವ ಮೋದಿ ಸರ್ಕಾರ,
ಈಗ ಕರ್ಪೂರಿಯವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದೇ ವಿಚಿತ್ರವಾಗಿದೆ.
ತಮ್ಮ ಸರ್ಕಾರ ಕರ್ಪೂರಿಯವರ ಹಾದಿಯಲ್ಲಿ ಸಾಗಿದೆ ಎಂದು ತಮ್ಮ ಬರಹದಲ್ಲಿ ಮೋದಿ ಯಾವ ಹಿಂಜರಿಕೆಯೂ ಇಲ್ಲದೆ ಹೇಳಿಕೊಳ್ಳುತ್ತಿದ್ದಾರೆ.ಇವತ್ತಿನ ರಾಜಕೀಯದ ದೊಡ್ಡ ದುರಂತವೆಂದರೆ, ಸಾಮಾಜಿಕ ನ್ಯಾಯದ ಕರೆಯನ್ನು ರಾಜಕೀಯ ಘೋಷಣೆಗೆ ಸೀಮಿತಗೊಳಿಸಲಾಗಿದೆ ಎಂದು ಕೂಡ ಅವರೇ ಹೇಳುತ್ತಾರೆ.
ಯಾರು ಹಾಗೆ ಮಾಡಿರುವವರು ಮತ್ತು ಮಾಡುತ್ತಿರುವವರು ಎಂಬುದೂ ಅವರಿಗೆ ಗೊತ್ತಿರಲೇಬೇಕು. ಕರ್ಪೂರಿಯವರಿಗೆ ಭಾರತ ರತ್ನ ಕೊಡುವ ಮೂಲಕ, ಬಿಹಾರದಲ್ಲಿ ಸರ್ಕಾರ ರಚನೆಗೆ ವ್ಯವಸ್ಥೆ ಮಾಡಿಕೊಂಡರೆ, ಲೋಕಸಭೆ ಚುನಾವಣೆಯಲ್ಲಿ ಸೀಟುಗಳನ್ನು ಗೆಲ್ಲಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರೆ, ಅದರಿಂದ ಕರ್ಪೂರಿಯವರಿಗೆ ನ್ಯಾಯ ಸಿಗುವುದಿಲ್ಲ, ಅವರನ್ನು ಗೌರವಿಸಿದಂತಾಗುವುದಿಲ್ಲ.
ಬದಲಾಗಿ, ಅವರನ್ನು ತಮ್ಮ ಕೊಳಕು ರಾಜಕೀಯಕ್ಕೆ ಬಳಸಿಕೊಂಡಂತಾಗುತ್ತದೆ ಅಷ್ಟೆ. ಕರ್ಪೂರಿಯವರಿಗೆ ಕೊಡಲಾಗುತ್ತಿರುವ ಭಾರತ ರತ್ನದ ಎಲ್ಲ ಶ್ರೇಯಸ್ಸನ್ನೂ ರಾಜಕೀಯವಾಗಿ ಪಡೆದುಕೊಳ್ಳಲು ಎಲ್ಲರೂ ಹವಣಿಸುತ್ತಿದ್ಧಾರೆ. ತಾವು ಹಲವು ವರ್ಷಗಳಿಂದ ಕರ್ಪೂರಿಯವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಗಳನ್ನು ಕೇಳುತ್ತಲೇ ಬಂದಿದ್ದುದಾಗಿ ನಿತೀಶ್ ಕುಮಾರ್ ಹೇಳುತ್ತಿದ್ದಾರೆ.
ಈ ಎಲ್ಲ ರಾಜಕೀಯದಲ್ಲಿ ಕರ್ಪೂರಿ ಅವರಿಗೆ ಭಾರತ ರತ್ನ ನೀಡುವ ಮೂಲಕ ಕರ್ಪೂರಿಯವರ ಕನಸುಗಳನ್ನು ಬಿಜೆಪಿ ಈಡೇರಿಸುತ್ತದೆಯೆ?
ಮತ್ತು ಈ ಕಾರಣದಿಂದಾಗಿ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಹೋಗುತ್ತಿದ್ದಾರೆಯೇ? ಇಂಥ ರಾಜಕೀಯ ವಿದ್ಯಮಾನಗಳ ಹಿಂದೆ,
ಯಾವ ಬದ್ಧತೆಯೂ ಕಾಣದ ಇಂಥ ರಾಜಕೀಯ ನಡೆಗಳ ಹಿಂದೆ, ಕರ್ಪೂರಿಯವರ ಸಾಮಾಜಿಕ ನ್ಯಾಯ ಇದೆಯೆಂದು ಹೇಳುವುದಾದರೂ ಹೇಗೆ ? ಅಲ್ವಾ ?.