ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಹೇಳುತ್ತಿರುವ ವಾಸ್ತವವೇನು?
ಶತಮಾನಗಳ ಕಾಲ ಬಾಯಿಪಾಠದ ಶಿಕ್ಷಣದ ಮೇಲೆ ಪ್ರಭುತ್ವ ಸಾಧಿಸಿದ್ದ ವೈದಿಕರಿಗೆ ಲಾಭ ಮಾಡಿಕೊಡಲೆಂದೇ ಈ ಶಿಕ್ಷಣ ಪದ್ಧತಿಯನ್ನು ಅತ್ಯಂತ ಜಾಗರೂಕತೆಯಿಂದ ಜಾರಿಗೆ ತರಲಾಯಿತು. ಒಂದು ವೇಳೆ ಈ ಜಾಗದಲ್ಲಿ ಕೌಶಲಾಧಾರಿತ ಶಿಕ್ಷಣ ಪದ್ಧತಿ ಜಾರಿಯಾಗಿದ್ದರೆ, ದೈಹಿಕ ಚಟುವಟಿಕೆ, ಕ್ರಿಯಾಶೀಲತೆಯಲ್ಲಿ ಸದಾ ಚುರುಕಾಗಿರುವ ಶೂದ್ರ, ದಲಿತರೇ ಈ ಶಿಕ್ಷಣ ಪದ್ಧತಿಯಲ್ಲಿ ಮುಂಚೂಣಿ ಸಾಧಕರಾಗಿರುತ್ತಿದ್ದರು. ಆಗ ಬಾಯಿಪಾಠದ ಶಿಕ್ಷಣದ ಮೇಲೆ ಮಾತ್ರ ಪ್ರಭುತ್ವ ಸಾಧಿಸಿದ್ದ ವೈದಿಕರು ಹಿಂದೆ ಬೀಳುತ್ತಿದ್ದರು.
ಶಾಲಾ ವಿದ್ಯಾರ್ಥಿಗಳ ಪಾಲಿಗೆ ಪ್ರಮುಖ ಘಟ್ಟವಾದ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಇದರ ಬೆನ್ನಿಗೇ ಪರೀಕ್ಷಾ ದತ್ತಾಂಶಗಳು ಹಲವು ಕಹಿ ಸತ್ಯಗಳು ಕಣ್ಣಿಗೆ ರಾಚುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿಯ ಫಲಿತಾಂಶದಲ್ಲಿನ ತೇರ್ಗಡೆ ಪ್ರಮಾಣವು ಗಮನಾರ್ಹವಾಗಿ ಇಳಿಮುಖವಾಗಿದೆ. ಅದರಲ್ಲೂ ಸಾಮಾನ್ಯ ದರ್ಜೆಯಲ್ಲಿ, ಮೌಲ್ಯಮಾಪಕರ ಕೃಪಾಂಕದಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಆತಂಕಕಾರಿ ಹೆಚ್ಚಳವಾಗಿದೆ. ಫಲಿತಾಂಶದಲ್ಲಿನ ಈ ಇಳಿಮುಖಕ್ಕೆ ಈ ಬಾರಿ ಶಿಕ್ಷಣ ಇಲಾಖೆಯು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದ ವೆಬ್ ಕಾಸ್ಟಿಂಗ್ ವ್ಯವಸ್ಥೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ವಾಸ್ತವವಾಗಿ ಈ ಕಟ್ಟುನಿಟ್ಟಿನ ಪರೀಕ್ಷಾ ವ್ಯವಸ್ಥೆಗಿಂತ ವಿದ್ಯಾರ್ಥಿಗಳ ಆಸಕ್ತಿಗೆ ಒಗ್ಗದ ಈಗಿನ ಶೈಕ್ಷಣಿಕ ಪದ್ಧತಿಯಿಂದಾಗಿಯೇ ಫಲಿತಾಂಶದ ಪ್ರಮಾಣವು ಕುಸಿತ ವಾಗಲು ಪ್ರಮುಖ ಕಾರಣ ಎಂಬುದು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಫಲಿತಾಂಶದ ದತ್ತಾಂಶಗಳಿಂದಲೇ ವ್ಯಕ್ತವಾಗುತ್ತಿದೆ.
ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಗೆ ಒಟ್ಟು 8,03,107 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 6,17,665 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ತೇರ್ಗಡೆಯಾದ ವಿದ್ಯಾರ್ಥಿಗಳ ಒಟ್ಟಾರೆ ಶೇಕಡಾವಾರು ಪ್ರಮಾಣ ಶೇ. 76.91ರಷ್ಟಿದೆ. ಇದೇ ವೇಳೆ ಪರೀಕ್ಷೆಗೆ ಹಾಜರಾಗಿರುವ ಬಾಲಕರ ಸಂಖ್ಯೆ 3,97,952ರಷ್ಟಿದ್ದು, 2,72,214 ಬಾಲಕರು ತೇರ್ಗಡೆಯಾಗಿದ್ದರೆ, 4,05,155 ಬಾಲಕಿಯರ ಪೈಕಿ 3,38,451 ಬಾಲಕಿಯರು ತೇರ್ಗಡೆಯಾಗಿ ದ್ದಾರೆ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಬಾಲಕರ ಶೇಕಡಾ ವಾರು ಪ್ರಮಾಣ ಶೇ. 70.16ರಷ್ಟಿದ್ದರೆ, ಬಾಲಕಿಯರ ಶೇಕಡಾವಾರು ಪ್ರಮಾಣ ಶೇ. 83.54ರಷ್ಟಿದೆ.
ಇನ್ನು ಸಾಮಾಜಿಕವಾರು ತೇರ್ಗಡೆ ಶೇಕಡಾವಾರು ಪ್ರಮಾಣವು ಹಾಲಿ ಶೈಕ್ಷಣಿಕ ಪದ್ಧತಿಯಲ್ಲಿನ ದೋಷವನ್ನು ಎತ್ತಿ ತೋರಿಸುತ್ತಿದೆ. ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಪೈಕಿ ಕ್ರಮವಾಗಿ ಶೇ. 61.18 ಬಾಲಕರು ಹಾಗೂ 77.53 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಪೈಕಿ ಕ್ರಮವಾಗಿ ಶೇ. 61.22 ಬಾಲಕರು ಹಾಗೂ 76.9 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಪ್ರವರ್ಗ-1ರ ವಿದ್ಯಾರ್ಥಿಗಳ ಪೈಕಿ ಕ್ರಮವಾಗಿ ಶೇ. 65.85 ಬಾಲಕರು ಹಾಗೂ ಶೇ. 73.07 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಪ್ರವರ್ಗ 2ಎ ವಿದ್ಯಾರ್ಥಿಗಳ ಪೈಕಿ ಕ್ರಮವಾಗಿ ಶೇ. 74.63 ಬಾಲಕರು ಹಾಗೂ ಶೇ. 87.01 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಪ್ರವರ್ಗ 2ಬಿ ವಿದ್ಯಾರ್ಥಿಗಳ ಪೈಕಿ ಕ್ರಮವಾಗಿ ಶೇ. 62.67 ಬಾಲಕರು ಹಾಗೂ ಶೇ. 80 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಪ್ರವರ್ಗ 3ಎ ವಿದ್ಯಾರ್ಥಿಗಳ ಪೈಕಿ ಕ್ರಮವಾಗಿ ಶೇ. 81.42 ವಿದ್ಯಾರ್ಥಿಗಳು ಹಾಗೂ ಶೇ. 92.23 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಪ್ರವರ್ಗ 3ಬಿ ವಿದ್ಯಾರ್ಥಿಗಳ ಪೈಕಿ ಕ್ರಮವಾಗಿ ಶೇ. 75.91 ಬಾಲಕರು ಹಾಗೂ ಶೇ. 89.38 ಬಾಲಕಿಯರು ತೇರ್ಗಡೆಯಾಗಿದ್ದಾರೆ. ಇತರ ವರ್ಗಗಳ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಜೈನ ಇತ್ಯಾದಿ) ವಿದ್ಯಾರ್ಥಿಗಳ ಪೈಕಿ ಕ್ರಮವಾಗಿ ಶೇ. 84.69 ಬಾಲಕರು ಹಾಗೂ ಶೇ. 89.34 ಬಾಲಕಿಯರು ತೇರ್ಗಡೆಯಾಗಿದ್ದಾರೆ.
ಈ ದತ್ತಾಂಶಗಳು ನಮ್ಮ ಸಾಮಾಜಿಕ ಸಂರಚನೆಗನುಗುಣವಾಗಿ ಆಗುತ್ತಿರುವ ಶೈಕ್ಷಣಿಕ ಬೆಳವಣಿಗೆ/ಕುಂಠಿತದ ಕುರಿತು ಸೂಕ್ಷ್ಮವಾಗಿ ಹೇಳುತ್ತಿವೆ. ಕಳೆದ ಸುಮಾರು 70 ವರ್ಷಗಳಿಂದಷ್ಟೇ ಶಿಕ್ಷಣದ ಅವಕಾಶ ಪಡೆದಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಕ್ರಮವಾಗಿ (ಬಾಲಕ/ಬಾಲಕಿ) 64.18/77.53ರಷ್ಟಿದ್ದರೆ, ಪರಂಪರಾಗತವಾಗಿ ಶಿಕ್ಷಣದ ಸೌಲಭ್ಯ ಪಡೆದಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಜೈನ ಇತ್ಯಾದಿ ಸಮುದಾಯಗಳ ವಿದ್ಯಾರ್ಥಿಗಳ ತೇರ್ಗಡೆಯ ಪ್ರಮಾಣ ಕ್ರಮವಾಗಿ (ಬಾಲಕ/ಬಾಲಕಿ) ಶೇ. 84.69 ಹಾಗೂ ಶೇ. 89.34ರಷ್ಟಿದೆ. ಈ ದತ್ತಾಂಶಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಅಂಕಿ-ಅಂಶಗಳು ಇಲ್ಲದಿರುವುದರಿಂದ, ಅವರ ಶೈಕ್ಷಣಿಕ ಬೆಳವಣಿಗೆ/ಕುಂಠಿತದ ಬಗ್ಗೆ ಸ್ಪಷ್ಟ ಚಿತ್ರಣ ದೊರೆತಿಲ್ಲ.
ಈ ಫಲಿತಾಂಶದ ದತ್ತಾಂಶಗಳು ಹೇಳುತ್ತಿರುವ ವಾಸ್ತವ:
ಚಾಲ್ತಿಯಲ್ಲಿರುವ ಶಿಕ್ಷಣ ಪದ್ಧತಿಯು ಪಾರಂಪರಿಕವಾಗಿ ಬಾಯಿಪಾಠ ಶಿಕ್ಷಣದ ಸವಲತ್ತು ಪಡೆದಿರುವ ಸಮುದಾಯಗಳ ವಿದ್ಯಾರ್ಥಿಗಳ ಪಾಲಿಗೇ ಹೆಚ್ಚು ಪೂರಕವಾಗಿದೆ ಎಂಬ ಸತ್ಯವನ್ನು. ಹಾಲಿ ಶಿಕ್ಷಣ ಪದ್ಧತಿಯಲ್ಲಿ ಕೌಶಲಾಧಾರಿತ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಿಲ್ಲದಿರುವುದರಿಂದ ಸಹಜವಾಗಿಯೇ ದಲಿತರು, ಶೂದ್ರ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದಾರೆ.
ಭಾರತದಲ್ಲಿನ ಶಿಕ್ಷಣ ಪದ್ಧತಿ ಮೊದಲಿನಿಂದಲೂ ಕುಶಲ ಪ್ರತಿಭೆಗಳ ವಿರುದ್ಧವೇ ಬೆಳೆದು ಬಂದಿದೆ. ಇಲ್ಲಿ ಕುಶಲಕರ್ಮಿ ಉದ್ಯೋಗಗಳನ್ನು ಇಂದಿಗೂ ತುಚ್ಛವಾಗಿ ಭಾವಿಸಲಾಗುತ್ತಿದೆ. ಹೀಗಾಗಿಯೇ ಜಗತ್ತಿನ ಅತ್ಯುತ್ತಮ ತಂತ್ರಜ್ಞರು ಜಪಾನ್, ಚೀನಾ ದೇಶಗಳಲ್ಲಿ ಕಂಡು ಬರುತ್ತಾರೆಯೇ ಹೊರತು ಭಾರತದಲ್ಲಲ್ಲ.
ವೈದಿಕರು ಗುರುಕುಲಗಳ ಮೂಲಕ ಬಾಯಿಪಾಠದ ಶಿಕ್ಷಣದ ಮೇಲೆ ಪ್ರಭುತ್ವ ಸಾಧಿಸಿದ್ದರಾದ್ದರಿಂದ, ಈ ದೇಶದಲ್ಲಿ ಮೆಕಾಲೆ ಶಿಕ್ಷಣ ಪದ್ಧತಿ ಜಾರಿಯಾದ ನಂತರವೂ ಬಾಯಿಪಾಠವೇ ಪ್ರಧಾನವಾದ ಇಂದಿನ ಶಿಕ್ಷಣ ಪದ್ಧತಿಯನ್ನು ಪ್ರಜ್ಞಾಪೂರ್ವಕವಾಗಿ ಉಳಿಸಿಕೊಂಡು, ಬೆಳೆಸಿಕೊಂಡು ಬರಲಾಗಿದೆ. ಅದಕ್ಕೆ ಬಲವಾದ ಕಾರಣವೂ ಇತ್ತು: ಶತಮಾನಗಳ ಕಾಲ ಬಾಯಿಪಾಠದ ಶಿಕ್ಷಣದ ಮೇಲೆ ಪ್ರಭುತ್ವ ಸಾಧಿಸಿದ್ದ ವೈದಿಕರಿಗೆ ಲಾಭ ಮಾಡಿಕೊಡಲೆಂದೇ ಈ ಶಿಕ್ಷಣ ಪದ್ಧತಿಯನ್ನು ಅತ್ಯಂತ ಜಾಗರೂಕತೆಯಿಂದ ಜಾರಿಗೆ ತರಲಾಯಿತು. ಒಂದು ವೇಳೆ ಈ ಜಾಗದಲ್ಲಿ ಕೌಶಲಾಧಾರಿತ ಶಿಕ್ಷಣ ಪದ್ಧತಿ ಜಾರಿಯಾಗಿದ್ದರೆ, ದೈಹಿಕ ಚಟುವಟಿಕೆ, ಕ್ರಿಯಾಶೀಲತೆಯಲ್ಲಿ ಸದಾ ಚುರುಕಾಗಿರುವ ಶೂದ್ರ, ದಲಿತರೇ ಈ ಶಿಕ್ಷಣ ಪದ್ಧತಿಯಲ್ಲಿ ಮುಂಚೂಣಿ ಸಾಧಕರಾಗಿರುತ್ತಿದ್ದರು. ಆಗ ಬಾಯಿಪಾಠದ ಶಿಕ್ಷಣದ ಮೇಲೆ ಮಾತ್ರ ಪ್ರಭುತ್ವ ಸಾಧಿಸಿದ್ದ ವೈದಿಕರು ಹಿಂದೆ ಬೀಳುತ್ತಿದ್ದರು. ಶೂದ್ರರು, ದಲಿತರು ಶೈಕ್ಷಣಿಕ ವಲಯದಲ್ಲಿ ಗಮನಾರ್ಹ ಸಾಧನೆ ಮಾಡದಂತೆ ತಡೆಯುವ ಪಿತೂರಿಯ ಭಾಗವಾಗಿಯೇ ಈಗಿನ ಮಕ್ಕಿಕಾಮಕ್ಕಿ ಶಿಕ್ಷಣ ಪದ್ಧತಿ ಜಾರಿಗೊಂಡಿರುವುದು.
ಹೀಗಾಗಿ ಸದಾ ಆಟೋಟಗಳಲ್ಲಿ ಮುಂಚೂಣಿಯಲ್ಲಿರುವ ಶೂದ್ರ, ದಲಿತರಲ್ಲಿ ಸ್ಪರ್ಧಾತ್ಮಕ ಗುಣ ವೃದ್ಧಿಯಾಗದಂತೆ ಬಹುತೇಕ ಶಾಲೆಗಳನ್ನು ಆಟದ ಮೈದಾನಗಳಿರದಂತೆ ನಿರ್ಮಿಸಲಾಗಿದೆ. ಕ್ರೀಡೆಗಳು ಮಕ್ಕಳ ಬುದ್ಧಿಯನ್ನು ಚುರುಕುಗೊಳಿಸುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ, ಅಂತಹ ಅವಕಾಶವೇ ಇರದಂತಹ ಅದೆಷ್ಟೋ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ರಾಜ್ಯಾದ್ಯಂತ ಇವೆ. ಕೊಕ್ಕೊ, ಕಬಡ್ಡಿ, ಓಟದ ಸ್ಪರ್ಧೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು, ಅದರಲ್ಲೂ ಶೂದ್ರ, ದಲಿತ ವಿದ್ಯಾರ್ಥಿಗಳೇ ಮುಂಚೂಣಿಯಲ್ಲಿರುವುದನ್ನು ಗಮನಿಸಿದರೆ ಮಾತ್ರ, ಆಟದ ಮೈದಾನಗಳೇ ಇಲ್ಲದ ಶಾಲೆಗಳನ್ನು ಎಷ್ಟು ಪ್ರಜ್ಞಾಪೂರ್ವಕವಾಗಿ ನಿರ್ಮಿಸಲಾಗಿದೆ ಎಂಬ ಸತ್ಯ ಅರ್ಥವಾಗಲು ಸಾಧ್ಯ.
ಕೈ ಗಲೀಜಾಗುವ ಕುಶಲಕರ್ಮಿ ಕೆಲಸಗಳ ಕುರಿತು ಈ ದೇಶದಲ್ಲಿ ಮೊದಲಿನಿಂದಲೂ ತಿರಸ್ಕಾರದ ಭಾವನೆ ಇರುವುದರಿಂದ ಕೌಶಲಾಧಾರಿತ ಶಿಕ್ಷಣ ವ್ಯವಸ್ಥೆಯು ನಮ್ಮಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬಂದಿದ್ದೇ ಇಲ್ಲ. ಕೌಶಲಾಧಾರಿತ ಶಿಕ್ಷಣ ಪದ್ಧತಿಗಳಾದ ಐಟಿಐ, ಡಿಪ್ಲೊಮಾ ಪದವಿಗಳು ಅಸ್ತಿತ್ವದಲ್ಲಿವೆಯಾದರೂ, ಇಲ್ಲಿಯೂ ಮಕ್ಕಿಕಾಮಕ್ಕಿ ಶಿಕ್ಷಣವನ್ನು ಒದಗಿಸಲಾಗುತ್ತಿದೆಯೇ ಹೊರತು ಆವಿಷ್ಕಾರಿ ಕುಶಲ ತರಬೇತಿಯನ್ನು ಒದಗಿಸುತ್ತಿಲ್ಲ. ಹೀಗಾಗಿ ನಮ್ಮಲ್ಲಿ ವಿಶ್ವದ ಅತ್ಯುತ್ತಮ ತಂತ್ರಜ್ಞರೇ ತಯಾರಾಗುತ್ತಿಲ್ಲ.
ಚೀನಾದಲ್ಲಿ ಎಳವೆಯಲ್ಲೇ ಕೌಶಲಾಧಾರಿತ ಶಿಕ್ಷಣ ನೀಡುತ್ತಿರುವುದರಿಂದ, ಜಪಾನ್ನ ನಂತರ ಚೀನಾದಲ್ಲೇ ಅತ್ಯುತ್ತಮ ತಂತ್ರಜ್ಞರು ತಯಾರಾಗುತ್ತಿರುವುದು. ಹೀಗಾಗಿಯೇ ಒಂದು ಕಾಲದಲ್ಲಿ ಭಾರತಕ್ಕಿಂತ ಹಿಂದುಳಿದಿದ್ದ ಚೀನಾವು, ಕೇವಲ ಎರಡು ದಶಕಗಳಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಮುಂಚೂಣಿಗೆ ಬಂದಿದೆ. ಇಂತಹ ಶಿಕ್ಷಣ ಪದ್ಧತಿಯನ್ನು ಭಾರತದಲ್ಲೂ ಸುಲಭವಾಗಿ ಜಾರಿಗೊಳಿಸಲು ಅವಕಾಶವಿದೆ.
ಆಸಕ್ತಿಯಾಧಾರಿತ ಶಿಕ್ಷಣ ವ್ಯವಸ್ಥೆ
ಮಕ್ಕಳಿಗೆ ಎಳವೆಯಲ್ಲಿ ಪ್ರಾಪಂಚಿಕ, ವ್ಯಾವಹಾರಿಕ ಜ್ಞಾನದ ಅಗತ್ಯವಿರುವುದರಿಂದ ಏಳನೇ ತರಗತಿಯವರೆಗೂ ಹಾಲಿ ಚಾಲ್ತಿಯಲ್ಲಿರುವ ಶಿಕ್ಷಣ ಪದ್ಧತಿಯಲ್ಲಿಯೇ ಶಿಕ್ಷಣ ನೀಡಬೇಕು. ಮಕ್ಕಳು ಪ್ರೌಢ ಶಿಕ್ಷಣದ ಹಂತಕ್ಕೆ ತಲುಪಿದಾಗ, ಅವರ ಆಸಕ್ತಿಯ ವಿಷಯ, ಕ್ಷೇತ್ರವನ್ನು ವಿದ್ಯಾರ್ಥಿ, ಪೋಷಕರು ಹಾಗೂ ಶಿಕ್ಷಕರು ಕೂಡಿ ಮೌಲ್ಯಮಾಪನ ಮಾಡಿ, ಅಂತಹ ವಿಷಯ, ಕ್ಷೇತ್ರಗಳಲ್ಲಿ ಅವರಿಗೆ ವಿಶೇಷ ಶಿಕ್ಷಣ (Specialized education) ಒದಗಿಸಬೇಕು. ಆಗ ಅಂತಹ ಮಕ್ಕಳು ತಮಗೆ ಒಲ್ಲದ ವಿಷಯಗಳನ್ನು ಕಲಿಯುವುದರಿಂದ ಮುಕ್ತರಾಗುವುದರಿಂದ, ಕಲಿಕೆಯ ಒತ್ತಡ ಹಗುರಾಗಿ, ತಮ್ಮಿಷ್ಟದ ವಿಷಯ, ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಮುಂದುವರಿಯಲು ಸಾಧ್ಯವಾಗುತ್ತದೆ. ಯಾವುದೇ ಕಲಿಕೆ ಹೇರಿಕೆಯಾದಾಗ, ಅದು ಮಗುವಿನ ದೈಹಿಕ, ಮಾನಸಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸದ್ಯ ಪ್ರಕಟವಾಗಿರುವ ಎಸೆಸೆಲ್ಸಿ ಫಲಿತಾಂಶ ಬಿಂಬಿಸುತ್ತಿರುವುದೇ ಈ ಸತ್ಯವನ್ನು.
ಇನ್ನಾದರೂ ಶಿಕ್ಷಣ ತಜ್ಞರು, ಶಿಕ್ಷಣ ಇಲಾಖೆ ಹಾಗೂ ನಮ್ಮನ್ನಾಳುವವರು ಹಾಲಿ ಶಿಕ್ಷಣ ಪದ್ಧತಿಯ ಬಗ್ಗೆ ಗಂಭೀರ ಪರಾಮರ್ಶೆ ನಡೆಸಬೇಕಿದೆ. ವಿದ್ಯಾರ್ಥಿಗಳ ಆಸಕ್ತಿಗನುಗುಣವಾದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕಿದೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಇಡೀ ವಿಶ್ವದೆದುರು ನಮ್ಮ ಶಿಕ್ಷಣ ವ್ಯವಸ್ಥೆ ತಲೆ ತಗ್ಗಿಸಿ ನಿಲ್ಲುವಂತಾಗುವುದು ನಿಶ್ಚಿತ.