ಕಾಂಗ್ರೆಸ್ ಖಾತೆ ಸ್ಥಗಿತದ ಹಿಂದಿನ ಹುನ್ನಾರವೇನು ?
ಚುನಾವಣಾ ಬಾಂಡ್ ರದ್ದತಿ ಬೆನ್ನಿಗೇ ವಿಪಕ್ಷದ ವಿರುದ್ಧ ಸವಾರಿ ► ಚುನಾವಣಾ ಬಾಂಡ್ ಹಿಂದಿನ ರೂವಾರಿ ಯಾರು ?
ಒಂದೆಡೆ ಮೋದಿ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದು ರದ್ದುಗೊಳಿಸಿದೆ.
ಇದರೊಂದಿಗೆ ಪ್ರಜಾಸತ್ತೆಯ ಜೊತೆಗಿನ ಮೋದಿ ಸರ್ಕಾರದ ವಂಚನೆಯೊಂದು ಬಯಲಾಗಿರುವಾಗಲೇ, ಅದು ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ಮುಂದುವರಿಸಿಯೇ ಇದೆ.
ಚುನಾವಣೆಗೆ ಕೆಲವೇ ವಾರಗಳು ಬಾಕಿಯಿರುವಾಗ, ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಬೆಳವಣಿಗೆಯೊಂದು ನಡೆದಿದೆ.
ಚುನಾವಣಾ ಬಾಂಡ್ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಒಂದು ದಿನದ ಬಳಿಕ ಈ ಮಾಹಿತಿ ಬಹಿರಂಗವಾಗಿದೆ. ಖಾತೆಗಳನ್ನು ಅನಂತರ ಅನ್ಲಾಕ್ ಮಾಡಲಾಗಿದೆಯಾದರೂ, ಮುಂದಿನ ವಿಚಾರಣೆವರೆಗೆ ಎನ್ನುವ ಮೂಲಕ ತೂಗುಕತ್ತಿಯನ್ನು ಇಡಲಾಗಿದೆ.
ಅಂದರೆ ಏನರ್ಥ? ಚುನಾವಣೆ ಹೊತ್ತಲ್ಲಿ ವಿಪಕ್ಷಗಳು ಏನನ್ನೂ ಮಾಡಲಾರದ ಸ್ಥಿತಿಗೆ ತಳ್ಳುವ ತಯಾರಿಯೆ? ಇದು ಮುಂದಿನ ಲೋಕಸಭೆ ಚುನಾವಣೆ ಯಾವ ರೀತಿಯಲ್ಲಿ ನಡೆದೀತು ಎಂಬುದರ ಸೂಚನೆಯಾಗಿದೆಯೆ? ಪ್ರತಿಪಕ್ಷಗಳನ್ನು ಈ ರೀತಿ ಇಕ್ಕಟ್ಟಿಗೆ ಸಿಲುಕಿಸಿ, ಚುನಾವಣಾ ಕಣಕ್ಕೆ ಇಳಿಯಲು ಬಿಡದಂತೆ ಮಾಡಿ, ಖಾಲಿ ಮೈದಾನದಲ್ಲಿ ತಾನೇ ಗೆದ್ದೆ ಎಂದು ತೋರಿಸಿಕೊಳ್ಳಲು ಮೋದಿ ಸರ್ಕಾರ ತಂತ್ರ ರೂಪಿಸುತ್ತಿದೆಯೆ?
400 ಸೀಟುಗಳನ್ನು ಗೆಲ್ಲುವುದು ಖಚಿತ ಎಂದು ಕಳೆದ ಮೂರು ತಿಂಗಳಿಂದ ಬಿಜೆಪಿ ಹೇಳುತ್ತಿರುವಾಗಲೇ ವಿಪಕ್ಷಗಳ ವಿಚಾರದಲ್ಲಿ ಅದರ ಇಂಥ ದಾಳಿಗಳು ಮುಂದುವರಿದೇ ಇರುವುದೇಕೆ?
ಮುಂದಿನ ದಿನಗಳಲ್ಲಿ ಏನೆಲ್ಲಾ ಆಗಬಹುದು? ವಿಪಕ್ಷದ ಯಾವ ನಾಯಕರು ಜೈಲುಪಾಲಾಗಬಹುದು? ಇಂಥ ಅನೇಕ ಅನುಮಾನಗಳು ಕಾಡುವಂಥ ಸ್ಥಿತಿ ಸದ್ಯಕ್ಕೆ ತಲೆದೋರಿದೆ. ಈ ನಡುವೆ, ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವ ಚುನಾವಣಾ ಬಾಂಡ್ ಯೋಜನೆ ವಿಚಾರ ಜನರ ನಡುವೆ ಇನ್ನೂ ಚರ್ಚೆಯಾಗುವ ಅಗತ್ಯವಿದೆ.
ಏನೇನೆಲ್ಲಾ ನಡೆಯಿತು ಎಂಬ ಇಂಚಿಂಚು ಮಾಹಿತಿಯೂ ಜನರ ಎದುರು ಚುನಾವಣೆಗೆ ಮೊದಲೇ ಬಹಿರಂಗವಾಗುವುದು ಅಗತ್ಯವಿದೆ.
ಆದರೆ ಅದು ಆಗುವುದೆ? ಚುನಾವಣಾ ಬಾಂಡ್ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಬಳಿಕ ಸರ್ಕಾರದಿಂದ ಯಾವುದೇ ಹೇಳಿಕೆ ಯಾಕೆ ಬಂದಿಲ್ಲ? ಚುನಾವಣಾ ಬಾಂಡ್ ಯೋಜನೆ ರದ್ದಾದ ಬಳಿಕ ಅದರ ಮುಂದಿನ ಹೆಜ್ಜೆ ಏನಿರಲಿದೆ ಎಂಬುದು ಯಾರಿಗೂ ಗೊತ್ತಿಲ್ಲ.
ಸದ್ಯ ಕಾಂಗ್ರೆಸ್ ಖಾತೆಗಳು ಫ್ರೀಜ್ ಆದದ್ದು, ಅನಂತರ ಅನ್ಲಾಕ್ ಆಗಿದ್ದರೂ, ಅದರ ಎದುರು ಇರುವ ಆತಂಕಗಳು ಬಿಜೆಪಿಯ ಹುನ್ನಾರದ ಸುಳಿವನ್ನಂತೂ ಕೊಡುತ್ತವೆ.
ಲೋಕಸಭೆ ಚುನಾವಣೆಗೆ ಕೆಲವೇ ವಾರಗಳಿರುವಾಗ ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಾಂಗ್ರೆಸ್ ಮಾಹಿತಿ ಕೊಟ್ಟಿರುವುದು ಶುಕ್ರವಾರ. ನಾವು ನೀಡುವ ಚೆಕ್‌ಗಳನ್ನು ಬ್ಯಾಂಕ್‌ಗಳು ನಗದುಗೊಳಿಸುತ್ತಿಲ್ಲ ಎಂದು ಗೊತ್ತಾಗಿ ವಿಚಾರಿಸಿದಾಗ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿರುವುದು ಗೊತ್ತಾಯಿತು ಎಂದು ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್ ಹೇಳಿದರು. ಯೂತ್ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದು ತಿಳಿದುಬಂತು. ಕಾಂಗ್ರೆಸ್ ಪಕ್ಷದ ಖಾತೆಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣವಾಗಿ ಕೊನೆಗೊಂಡಿದೆ. ದೇಶದ ಪ್ರಮುಖ ವಿರೋಧ ಪಕ್ಷದ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ, ಇದರೊಂದಿಗೆ ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ಮಾಕನ್ ಟೀಕಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಬಳಿಕ ಕಾಂಗ್ರೆಸ್ ಆದಾಯ ತೆರಿಗೆ ಇಲಾಖೆ ಹಾಗೂ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಮನವಿ ಸಲ್ಲಿಸಿತು. ಅದಾದ ನಂತರ ಕೆಲ ನಿರ್ಬಂಧದೊಂದಿಗೆ ಬ್ಯಾಂಕ್ ಖಾತೆಗಳನ್ನು ಅನ್‌ಲಾಕ್ ಮಾಡಲಾಗಿದೆ. ಆದರೆ ಖಾತೆಗಳು ಆದಾಯ ತೆರಿಗೆ ಇಲಾಖೆ ವಿಚಾರಣೆ ಅಡಿಯಲ್ಲಿರಲಿವೆ.
ಸದ್ಯಕ್ಕೆ ಕಾಂಗ್ರೆಸ್‌ಗೆ ರಿಲೀಫ್ ಸಿಕ್ಕಿದೆಯಾದರೂ, ಆದಾಯ ತೆರಿಗೆ ಇಲಾಖೆ ವಿಚಾರಣೆ ಮುಂದುವರಿಯಲಿರುವುದು ಮತ್ತೊಂದು ವ್ಯೂಹದ ಹಾಗೆಯೇ ಇದೆ ಎಂಬುದು ಸ್ಪಷ್ಟ. ಕಾಂಗ್ರೆಸ್ ಪಕ್ಷವನ್ನು ಹೀಗೆ ವಿದ್ಯುತ್ ಬಿಲ್ ಕಟ್ಟಲು ಕೂಡ ಆಗದ ಸ್ಥಿತಿಗೆ ತಳ್ಳಲಾಗುತ್ತಿದೆ ಎಂದರೆ, ಚುನಾವಣೆಯ ಹೊತ್ತಿನಲ್ಲಿ ಎಂಥ ಇಕ್ಕಟ್ಟನ್ನು ಅದರ ಮುಂದೆ ತಂದಿಡಬಹುದು?
ಆರ್ಥಿಕವಾಗಿ ಬಿಜೆಪಿಯ ಎದುರಲ್ಲಿ ಅತಿ ದುರ್ಬಲವಾಗಿರುವ ವಿಪಕ್ಷದ ಬಗ್ಗೆ ಮೋದಿ ಸರ್ಕಾರ ಯಾಕೆ ಇಂಥ ನಡೆಯನ್ನು ಅನುಸರಿಸುತ್ತಿದೆ?
ಆರ್ಥಿಕವಾಗಿ ಬಿಜೆಪಿಯ ಮುಂದೆ ಕಾಂಗ್ರೆಸ್ ಏನೇನೂ ಅಲ್ಲ. ಅದು ತನ್ನ ಬಳಿಯಿರುವ ಅತ್ಯಲ್ಪ ಹಣದಿಂದ ಬಿಜೆಪಿಯೆದುರು ಪ್ರಬಲವಾಗಿ ಚುನಾವಣೆ ಎದುರಿಸುವ ಸ್ಥಿತಿಯಲ್ಲೂ ಇಲ್ಲ. ಹೀಗಿರುವಾಗಲೂ ವಿಪಕ್ಷದ ಮೇಲೆ ಏಕೆ ದಾಳಿ ನಡೆದೇ ಇದೆ?
ಚುನಾವಣೆಗೆ ಹೆಚ್ಚು ಸಮಯವಿಲ್ಲದಿರುವ ಹೊತ್ತಿನಲ್ಲಿ ಪ್ರಮುಖ ಪ್ರತಿಪಕ್ಷದ ಖಾತೆಗಳು ಫ್ರೀಝ್ ಆಗುವುದೆಂದರೆ ಏನು? ಮತ್ತೀಗ ಅವು ಆದಾಯ ತೆರಿಗೆ ಇಲಾಖೆಯ ನದರಿನಡಿಯಲ್ಲಿಯೇ ಇರುವುದೆಂದರೆ ಏನರ್ಥ? ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಹೆದರಬೇಡಿ ಮೋದಿಯವರೆ, ಕಾಂಗ್ರೆಸ್ ಬಳಿ ಧನಬಲವಿಲ್ಲ. ಅದರದು ಜನಬಲ ಮಾತ್ರ. ಭಾರತದ ಪ್ರಜಾಸತ್ತೆಯ ಉಳಿವಿಗೆ ಪ್ರತಿಯೊಬ್ಬ ಕಾಂಗ್ರೆಸಿಗನೂ ಹೋರಾಡುತ್ತಾನೆ ಎಂದು ಟ್ವೀಟ್ ಮಾಡಿದ್ದಾರೆ.
ಇಲ್ಲಿ ಮೂಡುವ ಪ್ರಶ್ನೆ, ವಿಪಕ್ಷವನ್ನು ಈ ರೀತಿಯಲ್ಲಿ ಅತಂತ್ರಗೊಳಿಸುವುದರ, ಕಾಡುವುದರ ಸಂಕೇತವೇನು ಎಂಬುದು.
ಇದು ಏನನ್ನು ಸೂಚಿಸುತ್ತದೆ? ಚುನಾವಣಾ ಅಖಾಡದಲ್ಲಿ ಹೋಗುವುದಕ್ಕೂ ಬಿಡಬಾರದೆಂಬುದು ಉದ್ದೇಶವೆ? ಖಾಲಿ ಮೈದಾನದಲ್ಲಿ ತಾವೇ ಗೆಲ್ಲಬೇಕೆಂಬುದು ಧೋರಣೆಯೆ? ಲೋಕಸಭೆ ಚುನಾವಣೆಯಲ್ಲಿ 400 ಸೀಟುಗಳನ್ನು ಗೆಲ್ಲುವುದು ಖಚಿತ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ, ಇನ್ನೊಂದೆಡೆ ಆದಾಯ ತೆರಿಗೆ ಇಲಾಖೆ ಮತ್ತು ಈ.ಡಿ ಎಂಬ ಅಸ್ತ್ರಗಳನ್ನು ವಿಪಕ್ಷಗಳ ಮೇಲೆ ಪ್ರಯೋಗಿಸುತ್ತಿರುವುದು ಏಕೆ?
ಈವರೆಗೂ ಮನಿ ಲಾಂಡರಿಂಗ್ ಎಂಬ ನೆಪ ಮುಂದಿಟ್ಟು ವಿಪಕ್ಷಗಳನ್ನು ಕಾಡುತ್ತಲೇ ಬಂದಿರುವ ಬಿಜೆಪಿ ಅಸಾಂವಿಧಾನಿಕ ಚುನಾವಣಾ ಬಾಂಡ್ಗಳ ಮೂಲಕ ದೊಡ್ಡ ಲಾಭ ಗಳಿಸಿರುವಾಗ, ಅದರ ಖಾತೆಗಳು ಈಗ ಅದೇ ಮನಿ ಲಾಂಡರಿಂಗ್ ಕಾಯ್ದೆಯಡಿ ಬರಬೇಕಲ್ಲವೆ? 6,500 ಕೊಟಿಗೂ ಅಧಿಕ ಹಣ ಬಿಜೆಪಿ ಖಾತೆಯಲ್ಲಿ ಚುನಾವಣಾ ಬಾಂಡ್ ಮೂಲಕ ಬಂದಿದೆ. ಕಂಪನಿಗಳ ಹೆಸರನ್ನು ರಹಸ್ಯವಾಗಿಡಲಾಗಿದೆ.
ಹಾಗಾದರೆ, ಈ ಬಾಂಡ್ಗಳ ಮೂಲಕ ನೆರವು ಸಿಕ್ಕಿರುವುದಲ್ಲ, ಅದು ಮನಿ ಲಾಂಡರಿಂಗ್ ಅಲ್ಲವೆ? ಚುನಾವಣಾ ಬಾಂಡ್ಗಳ ಮೂಲಕ ಅತಿ ಹೆಚ್ಚು ಹಣ ಬಿಜೆಪಿಗೆ ಸಿಕ್ಕಿದೆ. ಹಾಗಿರುವಾಗ ಮನಿ ಲಾಂಡರಿಂಗ್ ಅನುಮಾನದ ಮೇಲೆ ಎಲ್ಲರಿಗಿಂತ ಮೊದಲು ಬಿಜೆಪಿಯ ಖಾತೆಗಳು ಜಪ್ತಿಯಾಗಬೇಕಲ್ಲವೆ?
ಯಾರು ಇದರ ನೈತಿಕ ಹೊಣೆ ಹೊರುತ್ತಾರೆ? ಅಸಾಂವಿಧಾನಿಕ ಕಾನೂನು ಮಾಡಿದವರು ಯಾರು? ಈವರೆಗೆ ಯಾರೂ ಹೊಣೆ ಹೊರಲು ಮುಂದಾಗಿಲ್ಲ. ಬಾಂಡ್ಗಳ ಬಗ್ಗೆ ಆಕ್ಷೇಪ ಎತ್ತಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿ ತೀರ್ಪು ಬರುವವರೆಗೆ ನಾಲ್ಕು ಸಿಜೆಐಗಳು ಬದಲಾದರು. ಲೋಕಸಭೆ, ವಿಧಾನಸಭೆಗಳಿಗೆ ಎಷ್ಟೋ ಚುನಾವಣೆಗಳು ನಡೆದವು.
ಅಸಾಂವಿಧಾನಿಕ ಮಾರ್ಗದಿಂದ ಪಡೆದ ಹಣದಲ್ಲಿ ಈ ದೇಶದಲ್ಲಿ ಚುನಾವಣೆಗಳು ನಡೆದಂತಾಯಿತು. ಯಾವ ಉದ್ಯಮಿಯಿಂದ ಎಷ್ಟು ಹಣ ಬಿಜೆಪಿಗೆ ಬಂತೆಂಬುದು ಗೊತ್ತೇ ಆಗದಂತೆ ಮಾಡಿದ್ದ ಕಾನೂನು ಅಸಾಂವಿಧಾನಿಕ. ಕೇಂದ್ರ ಮತ್ತು ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳಿಗೆ ಏನೇನು ಸಿಕ್ಕಿತು ಎಂಬುದು ಗೊತ್ತಾಗುವುದೇ ಇಲ್ಲ. ರಾಜಕೀಯ ಪಕ್ಷಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ತಿಳಿಯುವ ಹಕ್ಕು ಜನರಿಗಿಲ್ಲ ಎಂದೇ ಕೇಂದ್ರ ಸರ್ಕಾರ ವಾದಿಸಿತ್ತು. ಆದರೆ ಆ ಕಾನೂನನ್ನು ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದಿದೆ. ಬರೀ ತನ್ನ ಗೆಲುವಿನ ಬಗ್ಗೆ ಮಾತನಾಡುವ ಬಿಜೆಪಿ, ತಾನು ತಂದಿದ್ದ ಕಾನೂನು ಅಸಾಂವಿಧಾನಿಕ ಎನ್ನುವುದರ ಬಗ್ಗೆ ಮಾತೇ ಆಡುತ್ತಿಲ್ಲ.
ಚುನಾವಣಾ ಬಾಂಡ್ ವಿಚಾರ ಹಣಕಾಸು ಖಾತೆಗೆ, ಕಾನೂನು ಇಲಾಖೆಗೆ, ಪ್ರಧಾನಿಗೆ ಸಂಬಂಧಿಸಿದೆ. ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಹಣಕಾಸು ಸಚಿವರಿಂದಲೂ ಹೇಳಿಕೆಯಿಲ್ಲ, ಕಾನೂನು ಸಚಿವರಿಂದಲೂ ಇಲ್ಲ, ಪ್ರಧಾನಿ ಮೋದಿಯಿಂದಲೂ ಹೇಳಿಕೆ ಬರಲಿಲ್ಲ.
ರಾಜಕೀಯ ಪಕ್ಷಗಳಿಗೆ ಬರುವ ಹಣದ ಬಗ್ಗೆ ಜನರಿಗೆ ತಿಳಿಯುವ ಹಕ್ಕಿಲ್ಲ ಎಂಬುದು ಮೋದಿ ಸರ್ಕಾರದ ವಾದವಾದರೆ, ಈ ಸರ್ಕಾರದ ಕಣ್ಣಲ್ಲಿ ಜನತೆ ಎಂದರೆ ಏನು? ಬಿಜೆಪಿಗೆ ಯಾವ ಕಂಪನಿ ದೇಣಿಗೆ ಕೊಟ್ಟಿದೆ ಎಂಬುದನ್ನು ತಿಳಿಯಲು ಯಾಕೆ ಜನರಿಗೆ ಹಕ್ಕಿಲ್ಲ ಎಂದು ಕೇಳಬೇಕಾಗುತ್ತದೆ.
ಆ ಕಂಪನಿಗೆ ಮೋದಿ ಸರ್ಕಾರ ಪ್ರತ್ಯುಪಕಾರವಾಗಿ ಏನೇನನ್ನು ಕೊಟ್ಟಿತು ಎಂದು ತಿಳಿಯುವ ಹಕ್ಕು ಜನರಿಗೆ ಇಲ್ಲವೆ? ಜನರಿಗೆ ಇದು ಗೊತ್ತಾಗಬಾರದೆಂದರೆ ಮತ್ತೇನು ಗೊತ್ತಾಗಬೇಕು? ಮತ್ತೇನು ಗೊತ್ತಾಗುವುದು ಸಾಧ್ಯ? ಪ್ರಧಾನಿ ಮೋದಿ ಯಾವ ಉದ್ಯಮಿಯ ವಿಮಾನದಲ್ಲಿ ಚುನಾವಣಾ ರ್ಯಾಲಿಗಳಿಗೆ ಪ್ರಯಾಣಿಸುತ್ತಾರೆ?
ಯಾವ್ಯಾವ ಉದ್ಯಮಿಗಳ ಜೊತೆ ಮೋದಿ ಕಾಣಿಸಿಕೊಳ್ಳುತ್ತಾರೆ? ಮೋದಿ ಜೊತೆ ಕಾಣಿಸಿಕೊಳ್ಳುವ ಆ ಉದ್ಯಮಿಗಳು ಬಿಜೆಪಿಗೆ ಎಷ್ಟು ದೇಣಿಗೆ ಕೊಡುತ್ತಾರೆ? ಇದೆಲ್ಲವೂ ಜನರಿಗೆ ಗೊತ್ತಾಗಬೇಕಲ್ಲವೆ? ಸರ್ಕಾರ ತನ್ನ ಆಟಗಳೊಂದೂ ಜನರಿಗೆ ಗೊತ್ತಾಗಬಾರದೆಂದು ಎಷ್ಟೆಲ್ಲ ಕಷ್ಟಪಡುತ್ತಿದೆ? ಜನರಿಗೋಸ್ಕರ ಏನೇನೂ ತಲೆಕೆಡಿಸಿಕೊಳ್ಳದ ಮೋದಿ ಸರ್ಕಾರ ತನ್ನ ಗುಟ್ಟುಗಳನ್ನು ಜನರಿಂದ ಮರೆಮಾಚಲು ಮಾತ್ರ ಎಷ್ಟು ಒದ್ದಾಡುತ್ತಿದೆ?
ಯಾವುದೇ ಕಂಪನಿಗಳು ಕೊಡಬಹುದಾದ ದೇಣಿಗೆಗೆ ಮೊದಲಾದರೆ ಒಂದು ಮಿತಿ ಎನ್ನುವುದಿತ್ತು. ಅಂಥ ಮಿತಿಯನ್ನು ತೆಗೆದುಹಾಕಲಾಯಿತು. ಎಷ್ಟು ಬೇಕಾದರೂ ಅವು ಯಾವ ಮಿತಿಯೂ ಇಲ್ಲದೆ ದೇಣಿಗೆ ನೀಡಲು ಅವಕಾಶ ಮಾಡಲಾಯಿತು. ಆ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಂಬಳ ಕೊಡದೇ ಇದ್ದರೂ, ರಾಜಕೀಯ ನಾಯಕರನ್ನು ಸಂತುಷ್ಟವಾಗಿಡಲು ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಹಣ ಕೊಡುತ್ತಿದ್ದವು. ವಂಚಕ ಕಂಪನಿಗಳು ಕೂಡ ಬಿಜೆಪಿಗೆ ಹಣ ಕೊಡುವುದು ಸಾಧ್ಯವಿತ್ತು.
ಹಾಗಾದರೆ ಆ ಕಾನೂನು ಹೇಗೆ ಪಾರದರ್ಶಕವಾಗಿರಲು ಸಾಧ್ಯ? ಮೊದಲಾದರೆ ಇಂಥ ಪಕ್ಷಕ್ಕೆ ಇಷ್ಟಿಷ್ಟು ಕೊಡಲಾಗಿದೆ ಎಂಬ ಲೆಕ್ಕವನ್ನು ಕಂಪನಿಗಳು ಇಡಬೇಕಿತ್ತು. ಅದೆಲ್ಲವೂ 2017ರಲ್ಲಿ ಇಲ್ಲವಾಯಿತು. ಯಾವ ಪಕ್ಷಕ್ಕೆ ಎಷ್ಟು ಕೊಡಲಾಗಿದೆ ಎಂದು ಹೇಳುವ ಅಗತ್ಯವೇ ಇಲ್ಲವಾಯಿತು. ಹಾಗಾದ ಮೇಲೆ ಅದು ಹೇಗೆ ಪಾರದರ್ಶಕವಾಗಿರುತ್ತದೆ?
ಜನರನ್ನೂ ಕತ್ತಲೆಯಲ್ಲಿಟ್ಟು, ಆ ಕಂಪನಿಯ ಷೇರುದಾರರನ್ನೂ ಕತ್ತಲಲ್ಲಿಟ್ಟು, ಸುದ್ದಿಗೋಷ್ಠಿಯಲ್ಲಿ ತಮ್ಮ ನಾಯಕರ ಮೂಲಕ ಬಾಂಡ್ ಬಹಳ ಪಾರದರ್ಶಕ ಎಂದು ಹೇಳಿಸುವುದು ನಡೆದುಬಂತು. ಅದು ಯಾವ ದೃಷ್ಟಿಯಿಂದಲೂ ಪಾರದರ್ಶಕವಲ್ಲ. ಅಷ್ಟು ಮಾತ್ರವಲ್ಲ, ಅದು ಸಾಂವಿಧಾನಿಕವೂ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಸಾಂವಿಧಾನಿಕ ಎಂದಿದೆ.
ಹಾಗಾದರೆ ಚುನಾವಣಾ ಬಾಂಡ್ ಯಾರಿಗಾಗಿ ಪಾರದರ್ಶಕವಾಗಿತ್ತು ಎಂಬುದಕ್ಕೆ ಮೋದಿ ಸರ್ಕಾರ ಉತ್ತರಿಸಬೇಕಿದೆ. ಹೇಗೆ ಅದು ಪಾರದರ್ಶಕ ಎಂದು ಹೇಳಬೇಕಿದೆ. ಚುನಾವಣಾ ಆಯೋಗ, ಆರ್ಬಿಐ ಎಲ್ಲವೂ ಅದರ ಅಪಾಯದ ಬಗ್ಗೆ ಎಚ್ಚರಿಸಿದ್ದರೂ, ಆ ಎಲ್ಲ ಎಚ್ಚರಿಕೆಗಳನ್ನು, ಸಲಹೆಗಳನ್ನು ಕಸದ ಬುಟ್ಟಿಗೆ ಹಾಕಲಾಯಿತು.
ಮನಿ ಲಾಂಡರಿಂಗ್ ತಡೆಯಲು ಎಂಬುದು ಎಂಥ ನಾಟಕ ಅಲ್ಲವೆ? ವಿಪಕ್ಷಗಳಿಗೆ ದೇಣಿಗೆ ಕೊಟ್ಟ ಕಂಪನಿಗಳಿಗೆ ಏನೇನು ತೊಂದರೆ ಉಂಟಾಗಬಹುದು ಎಂದು ಹೇಳಲೂ ಸಾಧ್ಯವಿಲ್ಲ. ಮತ ಹಾಕುವ ಜನರಿಗೆ ಗೊತ್ತಾಗಬಾರದು ಎಂದು ಹೇಳುವ ಧಾರ್ಷ್ಟ್ಯ ಯಾವ ಮಟ್ಟಿನದು? ಪಕ್ಷಕ್ಕೆ ಮತ ನೀಡಬೇಕು. ಆದರೆ ಆ ಪಕ್ಷಕ್ಕೆ ಯಾರಿಂದ ಹಣ ಬಂತು ಎಂದು ಜನತೆ ತಿಳಿಯಲು ಅವಕಾಶವಿಲ್ಲ. ಹೇಗಿದೆಯಲ್ಲವೆ ನೀತಿ?
ಇದು ಬರೀ ಒಂದು ಹಗರಣವಲ್ಲ, ಅಪಾಯಕಾರಿ ಹಗರಣ. ಕೋರ್ಟ್ ತೀರ್ಪು ಪಾಲಿಸಲಾಗುವುದು, ಎಲ್ಲ ಮಾಹಿತಿಯನ್ನು ಜನರ ಮುಂದೆ ಇಡಲಾಗುವುದು ಎಂಬ ಹೇಳಿಕೆಯಾದರೂ ಮೋದಿಯಿಂದ ಬರಬೇಕಲ್ಲವೆ? ರಾಮಮಂದಿರದ ನ್ಯಾಯದ ಬಗ್ಗೆ ಮಾತನಾಡುವ ಮೋದಿ, ಪ್ರಜಾತಂತ್ರದ ನ್ಯಾಯದ ಪಾಲನೆಯನ್ನೂ ಮಾಡಬೇಕಲ್ಲವೆ? ರಾಜಕೀಯ ಪಕ್ಷಗಳಿಗೆ ನಗದು ರೂಪದಲ್ಲಿ ಬರುವ ದೇಣಿಗೆ ಮೇಲೆ ನಿರ್ಬಂಧ ಇರಬೇಕೆಂದು ಸರ್ಕಾರಕ್ಕೆ ಚುನಾವಣಾ ಆಯೋಗ 2022ರ ಸೆಪ್ಟೆಂಬರ್ನಲ್ಲೂ ಪತ್ರ ಬರೆದಿತ್ತು.
ಆದರೆ 2017-18ರಿಂದ 2022-23ರ ಅವಧಿಯಲ್ಲಿ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ಬಂದ ಹಣದ ಮೊತ್ತ ನೋಡಿದರೆ ಅಂಥ ಯಾವ ಪ್ರತಿಬಂಧವೂ ಇರಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ಈ ಅವಧಿಯಲ್ಲಿ ಬಿಜೆಪಿಗೆ ಚುನಾವಣಾ ಬಾಂಡ್ ಮೂಲಕ ಬಂದಿರುವ ಹಣ – 6,566 ಕೋಟಿ ರೂ.
ಕಾಂಗ್ರೆಸ್ಗೆ ಬಂದಿರುವ ಹಣ – 1,123 ಕೋಟಿ ರೂ.
ಟಿಎಂಸಿಗೆ ಬಂದಿರುವ ಹಣ – 1,093 ಕೋಟಿ ರೂ.
ಬಿಜೆಡಿಗೆ – 774 ಕೋಟಿ ರೂ.
ಡಿಎಂಕೆಗೆ – 616 ಕೋಟಿ ರೂ.
ಹೀಗೆ ಬಿಜೆಪಿ ಗೆ ಒಟ್ಟು ಶೇ. 55ರಷ್ಟು ಹಣ ಬಂದಿದ್ದರೆ, ಕಾಂಗ್ರೆಸ್ಗೆ ಶೇ,9ರಷ್ಟು ಮಾತ್ರ. ಈ ಅಂತರೆ ನೋಡಿದರೆ, ಬಿಜೆಪಿ ಹೇಗೆ ಲಾಭ ಪಡೆದಿದೆ ಎಂಬುದು ಗೊತ್ತಾಗುತ್ತದೆ. ಬಿಜೆಪಿ ಮಾತ್ರವೇ ಲಾಭ ಪಡೆದಿದೆ. ಸಿಪಿಐಎಂ ಮಾತ್ರವೇ ಚುನಾವಣಾ ಬಾಂಡ್ ಮೂಲಕ ಯಾವುದೇ ದೇಣಿಗೆ ಪಡೆಯದ ಪಕ್ಷ. ಬಾಂಡ್ ವಿರುದ್ದ ಆಕ್ಷೇಪ ಎತ್ತಿ ಅದು ಕೂಡ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಜಯ ಸಿಕ್ಕಿದೆ.
ಹೇಗಾಗಿದೆಯೆಂದರೆ, ಚುನಾವಣೆಯಲ್ಲಿ ಮತದಾರರಿಗಿಂತ ಉದ್ಯಮಿಗಳು, ದೇಣಿಗೆ ಕೊಡುವ ಕಂಪನಿಗಳು ಪ್ರಭಾವಶಾಲಿಯಾಗಿವೆ. ರಾಷ್ಟ್ರೀಯ ಪಕ್ಷಕ್ಕೆ ಕಂಪನಿಯಿಂದ ಹಣ ಬರುತ್ತದೆ ಮತ್ತು ಆ ಕಂಪನಿಯ ಹೆಸರನ್ನು ರಹಸ್ಯವಾಗಿಡಲಾಗುತ್ತದೆ. ಅದು ಮನಿ ಲಾಂಡರಿಂಗ್ ಅಲ್ಲವೆ? ಇತರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ್ದಕ್ಕಾಗಿ ಆದಾಯ ತೆರಿಗೆ ಇಲಾಖೆ ದೇಣಿಗೆದಾರರಿಗೆ ನೊಟೀಸ್ ನೀಡುತ್ತದೆ. ಇದು ಯಾವ ಥರದ್ದು?
ಈಗ ಚುನಾವಣಾ ಬಾಂಡ್ ವಿಚಾರದಲ್ಲಿ ಎಲ್ಲ ಮಾಹಿತಿಗಳನ್ನು ಜನರ ಮುಂದಿಟ್ಟು ನಂತರ ಚುನಾವಣೆಗೆ ಹೋಗಬೇಕಿದೆ. ಸುಪ್ರೀಂ ಕೋರ್ಟ್ ಸೂಚಿಸಿರುವ ಹಾಗೆ ನಾಲ್ಕು ವಾರಗಳೊಳಗೆ ಪ್ರತಿಯೊಂದು ಮಾಹಿತಿಯೂ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಜನರು ನೋಡುವುದಕ್ಕೆ ಲಭ್ಯವಾಗಬೇಕಿದೆ. ಚುನಾವಣೆಗೆ ಮೊದಲು ಈ ಎಲ್ಲ ವಿವರಗಳು ಬಯಲಾಗದೇ ಇದ್ದಲ್ಲಿ, ಸುಪ್ರೀಂ ಕೋರ್ಟ್ನ ತೀರ್ಪಿಗೂ ಮಹತ್ವ ಇಲ್ಲದಂತಾಗುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧಿಕ್ಕರಿಸುತ್ತಲೇ ಬಂದಿರುವ ಮೋದಿ ಸರ್ಕಾರ ಈಗಲೂ ಅಂಥದೇ ಅಹಂಕಾರವನ್ನೇ ಮುಂದುವರಿಸುವುದೆ ಅಥವಾ ಜನರೆದುದು ಮಣಿಯುವುದೆ?