ರಾಹುಲ್ ಹೇಳಿದ 'ಶಕ್ತಿ' ಯಾವುದು, ಮೋದಿ ಅದನ್ನು ತಿರುಚಿದ್ದು ಹೇಗೆ ?
ರಾಹುಲ್ ಗಾಂಧಿ | Photo: PTI
ಇದ್ಯಾವುದು ಶಕ್ತಿ ವಿವಾದ ? ಏನಿದು ಶಕ್ತಿ ವಿರುದ್ಧದ ಹೋರಾಟ ? ಪ್ರಧಾನಿ ಮೋದಿ ಜೀವ ಬೇಕಾದರೂ ಕೊಡುತ್ತೇನೆ ಎಂದು ಹೊರಟಿರುವ ಶಕ್ತಿ ಯಾವುದು ? ನಿಜವಾಗಿ ರಾಹುಲ್ ಗಾಂಧಿ ಹೇಳಿರುವ ಶಕ್ತಿ ಯಾವುದು ? ನಿಜವಾಗಿ ಈಗ ದೇಶದಲ್ಲಿ ವಿಜೃಂಭಿಸುತ್ತಿರುವ ಶಕ್ತಿ ಯಾವುದು ?
ಆ ಶಕ್ತಿ ಈ ದೇಶಕ್ಕೆ ತಂದಿರುವ ಆಪತ್ತು ಎಂತಹದ್ದು ? ಏಕೆ ಈ ಚುನಾವಣೆಯಲ್ಲಿ ಶಕ್ತಿ ವರ್ಸಸ್ ಶಕ್ತಿ ನಡೆಯುತ್ತಿದೆ? ರಾಹುಲ್ ಗಾಂಧಿ ಹೇಳಿದ ಶಕ್ತಿ ವಿಚಾರವನ್ನು ಪ್ರದಾನಿ ಮೋದಿ ಹೇಗೆ ತಮಗೆ ಬೇಕಾದಂತೆ ಹಿಂದುತ್ವಕ್ಕೆ ತಿರುಗಿಸಿಕೊಂಡಿದ್ದಾರೆ ? ಅಷ್ಟಕ್ಕೂ ರಾಹುಲ್ ಗಾಂಧಿಯವರ ಹೇಳಿಕೆಯಲ್ಲಿ ಮೋದಿ ಏನನ್ನು ಕಂಡರು? ಪ್ರಾಣವನ್ನೇ ಪಣಕ್ಕಿಡುವ ಮಾತನ್ನು ಮೋದಿ ಏಕೆ ಹೇಳಿದರು?
ಜನಸಾಮಾನ್ಯರನ್ನು ಮತ್ತೊಮ್ಮೆ ಈ ನೆಪದಲ್ಲಿ ಬುಟ್ಟಿಗೆ ಬೀಳಿಸಲು ತಂತ್ರ ರೂಪಿಸಿಬಿಟ್ಟರೆ ಅವರು? ಮುಂಬೈನ ಶಿವಾಜಿ ಪಾರ್ಕ್ ರ್ಯಾಲಿಯಲ್ಲಿನ ರಾಹುಲ್ ಗಾಂಧಿಯವರ ಭಾಷಣ ಕೇಳಿದ್ದವರಿಗೆ ಅವರು ಯಾವ ಶಕ್ತಿಯ ವಿಚಾರವಾಗಿ ಮಾತನಾಡಿದ್ದರು ಎಂಬುದು ಸರಿಯಾಗಿಯೇ ಗೊತ್ತಿರುತ್ತದೆ.
ಆದರೆ ಮೋದಿ ಆ ವಿಚಾರವನ್ನು ತೆಗೆದುಕೊಂಡು ಈಗ ಮಾತನಾಡುತ್ತಿರುವುದು ಯಾವ ಶಕ್ತಿಯ ಬಗ್ಗೆ? ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್ ಒಂದು ಪೋಸ್ಟರನ್ನು ಹಂಚಿಕೊಂಡಿದ್ದಾರೆ. ರಾಹುಲ್ ಕಿ ಶಕ್ತಿ ಮತ್ತು ಮೋದಿ ಕಿ ಶಕ್ತಿ ಎಂಬ ಹೆಸರಿನಲ್ಲಿ ಎರಡು ಚಿತ್ರಗಳು ಅದರಲ್ಲಿವೆ.
ಅದರಲ್ಲಿ ಒಂದೆಡೆ ರಾಹುಲ್ ಗಾಂಧಿ ಜೊತೆ ಮಹಿಳೆಯರಿದ್ಧಾರೆ. ಇನ್ನೊಂದರಲ್ಲಿ ಮೋದಿ ಜೊತೆ ನ್ಯೂಸ್ ಚಾನೆಲ್, ಫೇಸ್ಬುಕ್, ವಾಟ್ಸ್ಯಾಪ್, ಯೂಟ್ಯೂಬ್ ಗಳಿವೆ. ಹಾಗೆಯೆ ಅದಾನಿ, ಮೋಹನ್ ಭಾಗ್ವತ್, ಬ್ರಿಜ್ ಭೂಷಣ್ ಸಿಂಗ್, ಜೊತೆಗೆ ಐಟಿ, ಸಿಬಿಐ, ಈಡಿ ಇವೆಲ್ಲ ಇವೆ.
ಅವು ಮೋದಿ ಶಕ್ತಿಗಳಾಗಿವೆ ಎಂಬುದನ್ನು ಆ ಪೋಸ್ಟರ್ ಹೇಳುತ್ತಿದೆ.
ಶಕ್ತಿಯ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುವ ಮಾತಾಡುವಷ್ಟರ ಮಟ್ಟಿಗೆ ಮೋದಿ ಹೋಗುವ ಹಾಗೆ ಏನಾಯಿತು? ರಾಹುಲ್ ಮಾತಾಡಿದ್ದರಲ್ಲಿ ಏನಿತ್ತು? ಯಾರಾದರೂ ಒಬ್ಬ ವಿಪಕ್ಷ ನಾಯಕ ದೇಶದ ತಾಯಂದಿರು ಸಹೋದರಿಯರ ವಿರುದ್ಧ ಹೋರಾಡುತ್ತೇವೆ ಎಂದು ಹೇಳುವುದು ಸಾಧ್ಯವೆ? ರಾಹುಲ್ ಗಾಂಧಿ ಹೇಳಿದ್ದು ಏನು, ಮತ್ತದನ್ನು ಬಳಸಿಕೊಂಡು ಹೇಗೆ ಜನರಲ್ಲಿ ವಿಷಬೀಜ ಬಿತ್ತುವ ಹಾಗೆ ಮೋದಿ ಹೇಳಿದ್ದೇನು ಎಂಬುದು ಸ್ಪಷ್ಟ.
ಈ ದೇಶದ ಸರ್ಕಾರದ ಬಗ್ಗೆ, ಇವಿಎಂ, ಈಡಿ, ಐಟಿ, ಸಿಬಿಐ ಅನ್ನು ಬಳಸಿಕೊಂಡು ದುರಾಡಳಿತ ನಡೆಸುತ್ತಿರುವ ಶಕ್ತಿಯ ಬಗ್ಗೆ ರಾಹುಲ್ ಮಾತನಾಡಿದ್ದರು. ಆದರೆ ಅದನ್ನು ಉದ್ದೇಶಪೂರ್ವಕವಾಗಿ ತಿರುಚಿ, ತಾಯಂದಿರು ಮತ್ತು ಸಹೋದರಿಯರ ರಕ್ಷಣೆಗೆ ಪ್ರಾಣ ಕೊಡುವುದಕ್ಕೂ ಸಿದ್ಧ ಎಂದು ಅತಿಭಾವುಕತೆಯ ನಾಟಕ ಮಾಡಿದ್ದೇಕೆ ಮೋದಿ?
ಕುಸ್ತಿಪಟು ವಿನೇಶ್ ಫೋಗಟ್ ಇದರ ಬಗ್ಗೆಯೇ ಟ್ವೀಟ್ ಮಾಡಿದ್ದಾರೆ. ವಿಪಕ್ಷ ನಾಯಕನ ಭಾಷಣಕ್ಕೆ ಪ್ರತ್ಯುತ್ತರ ಕೊಡಲು ಮಹಿಳಾ ಶಕ್ತಿಯ ವಿಚಾರ ಎತ್ತಿಕೊಂಡು ಗೊಂದಲ ಸೃಷ್ಟಿಸಿರುವ ಮೋದಿ ಒಳ್ಳೆ ಸ್ಪಿನ್ ಮಾಸ್ಟರ್ ಎಂದು ಅವರು ಟೀಕಿಸಿದ್ದಾರೆ. ತಾಯಂದಿರು, ಸೋದರಿಯರ ರಕ್ಷಣೆಗೆ ಪ್ರಾಣ ಕೊಡುವ ಮಾತಾಡುವ ಮೋದಿ, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿನ ದೌರ್ಜನ್ಯ ನಡೆಸಿದ್ದ ಅವರದೇ ಪಕ್ಷದ ಬ್ರಿಜ್ ಭೂಷಣ್ ಸಿಂಗ್ ವಿಚಾರದಲ್ಲಿ ಏನು ಮಾಡಿದರು?
ಅಲ್ಲಿನ ನಡವಳಿಕೆಯಲ್ಲಿಯೇ ಮೋದಿ ತಾವೇನು ಎಂಬುದನ್ನು ಸಾಬೀತು ಮಾಡಿಬಿಟ್ಟಿದ್ದಾರೆ ಎಂದು ವಿನೇಶ್ ಫೋಗಟ್ ಟೀಕಿಸಿದ್ದಾರೆ. ಪಕ್ಕದಲ್ಲೇ ಅತ್ಯಾಚಾರಿಗಳನ್ನು, ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟವರನ್ನು ಇಟ್ಟುಕೊಂಡು ಅವರನ್ನು ರಕ್ಷಿಸುವುದಕ್ಕೆ ಮೌನ ವಹಿಸಿದ್ದು ಈಗ ಪ್ರಾಣ ಕೊಡುವುದಕ್ಕೂ ಸಿದ್ಧ ಎನ್ನುತ್ತಿರುವುದು ಇದೇ ಮೋದಿಯೇ ಅಲ್ಲವೆ?
ಮೋದಿಯದ್ಧೇ ಕ್ಷೇತ್ರ ವಾರಾಣಸಿಯಲ್ಲೇ ಬೇಟಿ ಬಚಾವೋ ಘೋಷಣೆಯ ಬಂಡವಾಳ ಬಯಲಾಗಿತ್ತಲ್ಲವೆ? ಪ್ರಧಾನಿಯ ನಾರಿ ಶಕ್ತಿ ಕುರಿತ ಟ್ವೀಟ್ ಅನ್ನು ರಿಟ್ವೀಟ್ ಮಾಡುವ, ಅವರ ಪಕ್ಕದಲ್ಲೇ ನಿಂತುಕೊಳ್ಳುವ ಅವರದೇ ಬಿಜೆಪಿಯ ಮಂದಿ ಸಾಮೂಹಿಕ ಅತ್ಯಾಚಾರ ಕೇಸಲ್ಲಿ ಬಂಧನಕ್ಕೆ ಒಳಗಾಗಿದ್ದರಲ್ಲವೆ?
ಬನಾರಸ್ ಹಿಂದೂ ವಿವಿ ಕ್ಯಾಂಪಸ್ನಲ್ಲಿಯೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅಂಥದೊಂದು ಕರಾಳ ಘಟನೆ ನಡೆದು ಎರಡು ತಿಂಗಳುಗಳೇ ಕಳೆದು, ಕಡೆಗೆ ಪ್ರತಿಭಟನೆಗಳು ಶುರುವಾದ ಮೇಲೆ ಅತ್ಯಾಚಾರ ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತರು ಯಾರು? ಅದೇ ಮೋದಿ ಕ್ಷೇತ್ರ ವಾರಾಣಸಿಯ ಬಿಜೆಪಿಯ ಐಟಿ ಸೆಲ್ನವರು. ಒಬ್ಬ ವಾರಾಣಸಿ ಬಿಜೆಪಿ ಐಟಿ ಸೆಲ್ನ ಸಂಯೋಜಕ ಕುನಾಲ್ ಪಾಂಡೆ, ಮತ್ತೊಬ್ಬ ಐಟಿ ಸೆಲ್ ಸಹ ಸಂಯೋಜಕ ಸಕ್ಷಮ್ ಪಟೇಲ್ ಹಾಗೂ ಮೂರನೆಯವನು ಐಟಿ ಸೆಲ್ ಕಾರ್ಯಸಮಿತಿ ಸದಸ್ಯ ಆನಂದ್ ಅಲಿಯಾಸ್ ಅಭಿಷೇಕ್ ಚೌಹಾಣ್ ಬಂಧಿತರಾಗಿದ್ದರು.
ಈ ಆರೋಪಿಗಳು ಬಿಜೆಪಿಯ ಹಲವಾರು ನಾಯಕರ ಜೊತೆ ಕಾಣಿಸಿಕೊಳ್ಳುವಂತೆ ಪ್ರಧಾನಿ ಮೋದಿ ಜೊತೆಯೂ ಫೊಟೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವರೇ ಆಗಿದ್ದರು. ಕಳೆದ 10 ವರ್ಷಗಳಿಂದ ಮೋದಿಯದ್ದೇ ಆಡಳಿತ ಈ ದೇಶದಲ್ಲಿದೆ. ಮೋದಿಯವರು ಕ್ರಾಂತಿಕಾರಿ ಅಭಿವೃದ್ಧಿ ಮಾಡಿದ್ದಾರೆ ಎಂದಾದರೆ ಅವುಗಳನ್ನೇ ಹೇಳಿ ಮತ ಕೇಳುತ್ತಿಲ್ಲ ಯಾಕೆ ?
ನಾವು ಕಳೆದ ಹತ್ತು ವರ್ಷಗಳಲ್ಲಿ ಇಷ್ಟೊಂದು ಅಭಿವೃದ್ಧಿ ಮಾಡಿದ್ದೇವೆ, ಇಷ್ಟು ಬೆಲೆ ಏರಿಕೆ ತಡೆದಿದ್ದೇವೆ, ಇಷ್ಟು ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದೇವೆ, ಇಷ್ಟು ರೈತರ ಆದಾಯ ಹೆಚ್ಚಿಸಿದ್ದೇವೆ ಎಂದು ಹೇಳಿಯೇ ಮತ ಕೇಳುತ್ತಿಲ್ಲ ಯಾಕೆ ಮೋದಿಜಿಯವರು ? ಮತ ಗಳಿಸುವುದಕ್ಕಾಗಿ ಯಾಕೆ ಅವರು ಹಿಂದುತ್ವ ಅಥವಾ ಭಾವನಾತ್ಮಕ ವಿಚಾರಗಳ ಮೊರೆಹೋಗುವ ಸ್ಥಿತಿ ಇದೆ ಯಾಕೆ ಇವರಿಗೆ ವಿಪಕ್ಷ ನಾಯಕರ ಭಾಷಣದ ಸಾಲುಗಳನ್ನು ತಿರುಚಿ ಅದಕ್ಕೆ ಮಸಾಲೆ ಹಚ್ಚಿ, ಸುಳ್ಳು ಬೆರೆಸಿ ಜನರನ್ನು ತಪ್ಪು ದಾರಿಗೆಳೆಯುವ ಹುನ್ನಾರವೇ ಗತಿಯಾಗಿದೆ?
ಧರ್ಮದ ಮೇಲೆ ದಾಳಿಯಾಗಿದೆ. ಧರ್ಮದ ರಕ್ಷಣೆಗಾಗಿ ಪ್ರಾಣ ಕೊಡಲೂ ಸಿದ್ಧ ಎಂದೇಕೆ ಸುಳ್ಳೇ ಹೇಳಿ ಮತ್ತೆ ವೋಟು ಪಡೆಯಬೇಕಾದ ದುಸ್ಥಿತಿಯಿದೆ? ಇಲ್ಲಿಯವರೆಗೂ ಹೇಳಿದ ಸುಳ್ಳುಗಳ ಹೊರೆ ಸಾಲದೆ ? ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದಕ್ಕೂ ಮತ್ತಷ್ಟು ಸುಳ್ಳುಗಳೇ ಬಿಟ್ಟರೆ ಬೇರೆ ಗತಿಯೇ ಇಲ್ಲದಂತಾಗಿದೆಯೆ?
ವಿಪಕ್ಷದವರು ಮತ್ತೆ ಮತ್ತೆ ಹಿಂದೂ ಧರ್ಮಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದೆಲ್ಲ ಹೇಳುವ ಮೂಲಕವೇ ಮೋದಿ ವೋಟು ಪಡೆಯಬೇಕಾಗಿದೆಯೆ? ರಾಹುಲ್ ಗಾಂಧಿ ಈ ಬಗ್ಗೆ ಟ್ವೀಟ್ ಮಾಡಿದ್ದು, " ಬಹುಶಃ ಮೋದಿಯವರಿಗೆ ನನ್ನ ಮಾತುಗಳು ಇಷ್ಟವಾಗಿಲ್ಲವೆಂದು ಕಾಣಿಸುತ್ತದೆ. ನನ್ನ ಮಾತುಗಳಲ್ಲಿ ಸತ್ಯ ಇದೆಯೆಂದು ಅವರಿಗೆ ಗೊತ್ತಿದೆ. ಯಾವ ಶಕ್ತಿಯ ಬಗ್ಗೆ ನಾನು ಹೇಳಿದ್ದೆನೊ, ಯಾವ ಶಕ್ತಿಯ ವಿರುದ್ಧ ಹೋರಾಟ ಮಾಡಬೇಕು ಎಂದಿದ್ದೆನೊ ಆ ಶಕ್ತಿ ಮೋದಿಯೇ ಆಗಿದ್ದಾರೆ " ಎಂದು ತಿಳಿಸಿದ್ಧಾರೆ.
ದೇಶದ ಎಲ್ಲ ಸಂಸ್ಥೆಗಳನ್ನು, ಈಡಿ, ಐಟಿ, ಸಿಬಿಐ ಅಂಥ ಏಜನ್ಸಿಗಳನ್ನು ತಮ್ಮ ಬೆರಳ ತುದಿಯಲ್ಲಿ ಆಡಿಸುತ್ತಿರುವ ಮೋದಿ, ಮೀಡಿಯಾಗಳನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವ ಮೋದಿ, ದೇಶದ ಎಲ್ಲ ವಿಭಿನ್ನ ಧ್ವನಿಗಳನ್ನು ಹತ್ತಿಕ್ಕುತ್ತಲೇ ಬಂದಿರುವ ಶಕ್ತಿ ವಿರುದ್ಧ ತಮ್ಮ ಹೋರಾಟ ಎಂದು ರಾಹುಲ್ ಹೇಳಿದ್ದರು.
ಈ ದೇಶದ ರೈತರು ಸಣ್ಣ ಒಂದು ಸಾಲ ಪಡೆದು, ಕಡೆಗೆ ಬ್ಯಾಂಕುಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗುವಾಗ, ಇದೇ ಮೋದಿ ಜೊತೆ ಕ್ಯಾಮೆರಾ ಮುಂದೆ ಮಿಂಚುವ ಮಂದಿ ಕೋಟಿ ಕೋಟಿ ಹಣಕ್ಕೆ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಇಂಥ ಸ್ಥಿತಿಗೆ ಕಾರಣವಾಗಿರುವ ಶಕ್ತಿಯ ವಿರುದ್ಧ, ಯುವಕರನ್ನು ಉದ್ಯೋಗ ಕೊಡದೆ ಹತಾಶಗೊಳಿಸಿರುವ ಶಕ್ತಿಯ ವಿರುದ್ಧ, ಈ ದೇಶದ ಬಡವರ ಮೇಲೆ ಜಿಎಸ್ಟಿ ಹೇರಿರುವ ಶಕ್ತಿಯ ವಿರುದ್ಧ, ಬೆಲೆಯೇರಿಕೆಗೆ ಲಗಾಮು ಹಾಕದ ಶಕ್ತಿಯ ವಿರುದ್ಧ ತಮ್ಮ ಹೋರಾಟ ಎಂಬುದನ್ನೇ ರಾಹುಲ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ಧಾರೆ.
ತಾವು ಹೇಳಿರುವುದು ಅಧರ್ಮ, ಭ್ರಷ್ಟಾಚಾರ ಮತ್ತು ಅಸತ್ಯದ ಶಕ್ತಿ ಎಂದು ರಾಹುಲ್ ಸ್ಫಷ್ಟಪಡಿಸಿದ್ದಾರೆ. ಮೋದಿ ಹಿಂದೆ ಪ್ರಬಲ ಉದ್ಯಮಿಗಳಿದ್ದು, ಆವರೇ ಎಲ್ಲವನ್ನೂ ನಿಯಂತ್ರಿಸುವ ಶಕ್ತಿಯಾಗಿದ್ದಾರೆ. ಆ ಶಕ್ತಿಯನ್ನು ಕೊನೆಗಾಣಿಸುವ ಮಾತನ್ನಷ್ಟೇ ರಾಹುಲ್ ಹೇಳಿರುವುದು. ಆದರೆ ಈ ಸತ್ಯ ಮರೆಮಾಚಿದ ಮೋದಿ ಯಾವ ಶಕ್ತಿಯ ವಿಚಾರ ಎತ್ತಿಕೊಂಡುಬಿಟ್ಟರು?
ಶಕ್ತಿ ಎಂದೊಡನೆ ಕೆಟ್ಟ ಶಕ್ತಿಗಳೂ ಇವೆಯಲ್ಲವೆ ? ಆ ಕೆಟ್ಟ ಶಕ್ತಿಗಳನ್ನು ರಕ್ಷಿಸಲು ಮೋದಿ ಶತಪ್ರಯತ್ನ ಮಾಡುತ್ತಿರುವುದು ಏಕೆ? ಅವರದೇ ಪಕ್ಷದ ಸಂಸದನ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದಾಗ, ನಮಗೆ ನ್ಯಾಯ ಕೊಡಿ ಎಂದು ಬೀದಿಗಿಳಿದಾಗ , ಮೋದಿ ಸರ್ಕಾರ ಹೇಗೆ ಆ ಕುಸ್ತಿಪಟುಗಳ ವಿಚಾರದಲ್ಲಿ ಕ್ರೂರವಾಗಿ ನಡೆದುಕೊಂಡಿತು? ಹೇಗೆ ಆ ಹೆಣ್ಣುಮಕ್ಕಳ ಕಣ್ಣೀರಿಗೆ ಕಾರಣವಾಯಿತು ಎಂಬುದನ್ನು ಜಗತ್ತೇ ನೋಡಿದೆ.
ಇಂಥವರು ಈಗ ವಿಪಕ್ಷದ ನಾಯಕ ಹೇಳಿಯೇ ಇರದ ವಿಚಾರಕ್ಕೆ ಸಂಬಂಧಿಸಿ ಸುಳ್ಳು ಪೋಣಿಸಿ ಚುನಾವಣೆಯ ವಿಷಯವಾಗಿಸಲು ಯತ್ನಿಸುತ್ತಿರುವುದು ನಿಜಕ್ಕೂ ಬಿಜೆಪಿಯ ದುರವಸ್ಥೆಗೆ ಸಾಕ್ಷಿ.
ಇವರದೇ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ರದ್ದುಪಡಿಸಿತು.
ಅವತ್ತಿನಿಂದ ಇವತ್ತಿನವರೆಗೂ ಅದರ ಬಗ್ಗೆ ಒಂದೇ ಒಂದು ಹೇಳಿಕೆ ಮೋದಿ ಕಡೆಯಿಂದಾಗಲೀ, ಸರ್ಕಾರದ ಕಡೆಯಿಂದಾಗಲೀ ಬರಲೇ ಇಲ್ಲ.ಅಂತಹದೊಂದು ಅಸಂವಿಧಾನಿಕ ವ್ಯವಸ್ಥೆಯನ್ನು ದೇಶದಲ್ಲಿ ಜಾರಿಗೆ ತಂದ ಶಕ್ತಿ ಯಾವುದು ? ಈ ವಿಚಾರದಲ್ಲಿ ಮಾತಾಡುವುದಕ್ಕೆ ಮೋದಿಗೆ ಶಕ್ತಿ ಇಲ್ಲವೆ? ತಮ್ಮ ಅಪಾರ ಶಕ್ತಿಯನ್ನು ಬಳಸಿಕೊಂಡು ಯಾಕೆ ಒಂದೇ ಒಂದು ಮುಕ್ತ ಸುದ್ದಿಗೋಷ್ಠಿಯನ್ನು ಎದುರಿಸಲು ಪ್ರಧಾನಿ ಮೋದಿಗೆ ಆಗುತ್ತಿಲ್ಲ ?
ಸುಳ್ಳು ಹೇಳುವುದಕ್ಕೆ, ಬರೀ ಸುಳ್ಳುಗಳನ್ನು ಮಾತ್ರ ಹೇಳುವುದಕ್ಕೆ, ದ್ವೇಷ ಹರಡುವುದಕ್ಕೆ, ಭಾವನಾತ್ಮಕ ವಿಷಯಗಳನ್ನು, ಧರ್ಮದ ವಿಚಾರವನ್ನು ಎತ್ತಿಕೊಂಡು ಜನರನ್ನು ಮರುಳು ಮಾಡುವುದಕ್ಕೆ ಮತ್ತು ಆ ಮೂಲಕವೇ ಮತ್ತೆ ಅಧಿಕಾರಕ್ಕೆ ಏರುವುದಕ್ಕೆ ಕಸರತ್ತು ಮಾಡುತ್ತಿರುವವರು ಯಾರು? ಇದು ದುಷ್ಟ ಶಕ್ತಿಯೆ ಅಲ್ಲವೆ?