ವಿಶ್ವಗುರುವನ್ನು ಬಿಟ್ಟು, ಪ್ರಾಣ ಪಣಕ್ಕಿಟ್ಟು ಜನ ಅಕ್ರಮವಾಗಿ ವಿದೇಶಕ್ಕೆ ಹೋಗ್ತಾ ಇರೋದು ಯಾಕೆ ?
► ಅಮೇರಿಕಾಕ್ಕೆ ಅಕ್ರಮವಾಗಿ ಹೋಗುವವರಲ್ಲಿ ಗುಜರಾತಿಗಳೇ ಹೆಚ್ಚು !► ಒಂದೇ ವರ್ಷದಲ್ಲಿ ಅಕ್ರಮವಾಗಿ ಅಮೇರಿಕ ಪ್ರವೇಶಿಸಲು ಯತ್ನಿಸಿದ 96,917 ಭಾರತೀಯರ ಬಂಧನ
ಶಾರುಖ್ ಖಾನ್ ಅಭಿನಯದ ಡಂಕಿ ಸಿನಿಮಾ ಅಕ್ರಮ ವಲಸೆಗೆ 'ಡಾಂಕಿ ರೂಟ್' ಬಳಸುವ ಕುರಿತ ಕಥೆಯುಳ್ಳದ್ದು. ರಾಜ್ಕುಮಾರ್ ಹಿರಾನಿಯ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭಾರೀ ಸುದ್ದಿ ಮಾಡುತ್ತಿರುವಾಗಲೇ ಬಂದಿರುವ ಇನ್ನೊಂದು ಸುದ್ದಿ ವಿಶ್ವಗುರುವಿನ ವರ್ಚಸ್ಸು, ಪ್ರಭಾವಳಿಗೆ ತಕ್ಕುದಾಗಿಲ್ಲ.
ನಿಕರಾಗುವಕ್ಕೆ ಹೋಗುತ್ತಿದ್ದ ರೊಮೇನಿಯಾದ ಲೆಜೆಂಡ್ ಏರ್ ಲೈನ್ಸ್ ನ ಫ್ಲೈಟ್ನಲ್ಲಿದ್ದವರು ಭಾರತೀಯರಾಗಿದ್ದರು ಎಂಬುದು ಚಿಂತೆಗೆ ಹಚ್ಚುವಂಥ ಸಂಗತಿಯಾಗಿದೆ. ಯಾಕೆ ಆ ಮುನ್ನೂರು ಮಂದಿ ಹಾಗೆ ದೇಶ ಬಿಟ್ಟು ಹೊರಟಿದ್ದರು? ಯಾಕೆ ಅಕ್ರಮವಾಗಿ ಬೇರೆ ದೇಶಕ್ಕೆ ನುಸುಳಲು ಹೋಗಿದ್ದರು ? ಎಂಬ ಪ್ರಶ್ನೆ ಕಾಡುತ್ತದೆ.
ಈಗಲೂ ಆ ಪೈಕಿ 27 ಮಂದಿ ತಾವು ಭಾರತಕ್ಕೆ ವಾಪಸ್ ಹೋಗೋದಿಲ್ಲ ಎಂದು ಅಲ್ಲೇ ಆಶ್ರಯ ಕೇಳಿ ಉಳಿದಿರೋದು ಯಾಕೆ?
ಆ ಮುನ್ನೂರು ಮಂದಿ ಪೈಕಿ 90 ಕ್ಕೂ ಹೆಚ್ಚು ಮಂದಿ ಗುಜರಾತಿನವರು ಎಂಬ ಕಾರಣಕ್ಕೆ ಈ ವಿಷಯ ಯಾವ ಟಿವಿ ಚಾನಲ್ ಗಳಲ್ಲೂ ಚರ್ಚೆ ಆಗ್ತಾ ಇಲ್ವಾ ?
ಪ್ರಧಾನಿ ಮೋದಿ ಹಾಗು ಗೃಹ ಸಚಿವ ಅಮಿತ್ ಶಾ ಅವರ ತವರಿನಿಂದಲೇ ಈ ಪರಿ ಜನ ವಿಶ್ವಗುರುವಿನ ದೇಶ ಬಿಟ್ಟು ಬೇರೆ ದೇಶದೊಳಗೆ ಅಕ್ರಮವಾಗಿ ನುಸುಳಲು ಯಾಕೆ ಹೋಗುತ್ತಿದ್ದಾರೆ ?
ಅವರಿಗೆ ದೇಶ ಪ್ರೇಮ ಕಡಿಮೆಯಾಗಿದೆಯೇ ?
ಅವರು ಮೋದಿಯವರ ಭಾಷಣ ಹಾಗು ಇಲ್ಲಿನ ಟಿವಿ ಚಾನಲ್ ಗಳ ಕಾರ್ಯಕ್ರಮಗಳನ್ನು ನೋಡ್ತಾ ಇಲ್ವಾ ?
ಹೀಗೆ ಅಕ್ರಮವಾಗಿ ಹೋಗೋದೇನು ಅಗ್ಗದ ವಿಚಾರ ಅಲ್ಲ.
ಒಬ್ಬೊಬ್ಬರು ಸುಮಾರು ಒಂದು ಕೋಟಿ ರೂಪಾಯಿ ಕೊಟ್ಟು ಹೀಗೆ ಹೋಗ್ತಾರೆ.
ಅಷ್ಟೊಂದು ದುಡ್ಡು ಕೊಟ್ಟ ಮೇಲೂ ಅದೇನು ಸುರಕ್ಷಿತ, ಸುಲಭ ವಿಧಾನವೂ ಅಲ್ಲ.
ತೀರಾ ಅಪಾಯಕಾರಿ, ರಿಸ್ಕೀ ಪ್ರಯಾಣ ಅದು.
ಅಷ್ಟು ದೊಡ್ಡ ಮೊತ್ತ ತೆತ್ತು,
ಅಷ್ಟೊಂದು ಅಪಾಯ ಮೈಮೇಲೆ ಎಳೆದುಕೊಂಡು,
ಇನ್ನೊಂದು ದೇಶದಲ್ಲಿ ನುಸುಳುಕೋರರಾಗುವಂತಹ ಅನಿವಾರ್ಯತೆ ಈ ಜನರಿಗೆ ಏನಿತ್ತು ?
ಇದು ಇನ್ನೂ ಕಳವಳ ಮೂಡಿಸೋ ವಿಚಾರವಾಗಿದೆ.
ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವ ಗುರು ಆಗಿರುವಾಗ,
ಇಡೀ ಜಗತ್ತಿಗೇ ಮೋದಿಯವರೇ ಲೀಡರ್ ಆಗಿರುವಾಗ,
ಇಲ್ಲಿನ ಜನರೇಕೆ ದೇಶ ಬಿಟ್ಟು ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ?
ಅದಾವುದೋ ಗೊತ್ತಿಲ್ಲದ ದೇಶದಲ್ಲಿ ಆಶ್ರಯ ಕೇಳಿಕೊಂಡು ಇರುವ ದೈನೇಸಿ ಪರಿಸ್ಥಿತಿ ಅವರಿಗೇಕೆ ಬಂದಿದೆ?
ನಾಡಿದ್ದು ಜನವರಿ 26 ರಂದು ಫ್ರಾನ್ಸ್ ಅಧ್ಯಕ್ಷ ಭಾರತದ ಗಣರಾಜ್ಯೋತ್ಸವದ ಅತಿಥಿಯಾಗಿ ಬರ್ತಾರೆ.
ಆಗ ಅವರಿಗೆ ಇಲ್ಲಿ ಭಾರತದ ಅಭಿವೃದ್ಧಿ ಬಗ್ಗೆ ತರಹೇವಾರಿಯಾಗಿ ಬಣ್ಣಿಸಲಾಗುತ್ತೆ.
ಆದರೆ ಅವರು ಆಗಲೇ ಫ್ರಾನ್ಸ್ ವಿಮಾನ ನಿಲ್ದಾಣಕ್ಕೆ ಅಕ್ರಮವಾಗಿ ಬಂದಿಳಿದ ಭಾರತೀಯರ ಕತೆ ಕೇಳಿ ಆಗಿದೆ.
ಹಾಗಾದರೆ ಅವರ ಮನಸ್ಸಲ್ಲಿ ಅದೆಂತಹ ಚಿತ್ರಣ ಬರಬಹುದು ?
ಈಗ ಸುದ್ದಿ ಏನೆಂಬುದನ್ನು ಮೊದಲು ಗಮನಿಸೋಣ.
ದುಬೈನಿಂದ ನಿಕರಾಗುವಕ್ಕೆ ಹೊರಟಿದ್ದ ವಿಮಾನವನ್ನು ಮಾನವ ಕಳ್ಳ ಸಾಗಾಣಿಕೆ ಶಂಕೆಯ ಮೇಲೆ ಫ್ರಾನ್ಸ್ನಲ್ಲಿ ತಡೆಹಿಡಿಯಲಾಗಿತ್ತು.
303 ಮಂದಿ ಭಾರತೀಯರಿದ್ದ ವಿಮಾನವನ್ನು ಪ್ಯಾರೀಸ್ಗೆ 150 ಕಿಮೀ ದೂರದ ವಟ್ರಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿತ್ತು.
ನಾಲ್ಕು ದಿನಗಳ ಕಾಲ ಪ್ರಯಾಣಿಕರನ್ನು ಪ್ರಶ್ನಿಸಿದ ನಂತರ, ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ವಿಮಾನ ವಾಪಸ್ ಹೊರಡಲು ಅನುಮತಿ ನೀಡಿದರು.
ನಾಲ್ಕು ದಿನ ಅಲ್ಲಿಯೇ ವಶದಲ್ಲಿದ್ದ ವಿಮಾನ ಅಲ್ಲಿಂದ ಮುಂಬೈಗೆ ಆಗಮಿಸಿದೆ.
ಫ್ರಾನ್ಸ್ನಲ್ಲಿ ತಡೆಹಿಡಿದಿದ್ದ ವೇಳೆ ವಿಮಾನದಲ್ಲಿ ಒಟ್ಟು 303 ಮಂದಿ ಇದ್ದರು.
ಅಲ್ಲಿಂದ ಮುಂಬೈಗೆ ಹೊರಟಾಗ ವಿಮಾನದಲ್ಲಿದ್ದವರು 276 ಮಂದಿ.
ಉಳಿದ 25 ಮಂದಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿ ಅಲ್ಲಿಯೇ ಉಳಿದಿದ್ದಾರೆ.
ಇನ್ನು ಬಂಧಿತ ಇಬ್ಬರನ್ನು ನ್ಯಾಯಾಧೀಶರೆದುರು ವಿಚಾರಣೆಗೆ ಹಾಜರುಪಡಿಸಿದ ಬಳಿಕ ನೆರವಿನ ಸಾಕ್ಷಿ ಸ್ಥಿತಿಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಹೀಗೆ 27 ಮಂದಿ ಅಲ್ಲಿಯೇ ಉಳಿದಂತಾಗಿದೆ.
ಅಮೆರಿಕೆಯಲ್ಲಿ ಆಶ್ರಯ ಬಯಸುವವರು ನಿಕರಾಗುವಕ್ಕೆ ಹೋಗುವುದು ಸಾಮಾನ್ಯ.
ನಿಕರಾಗುವಾ ಅಥವಾ ಪ್ರಯಾಣ ದಾಖಲೆಗಳನ್ನು ಪಡೆಯುವುದು ಸುಲಭವಾದ ತೃತೀಯ ದೇಶಗಳಿಗೆ ಹೋಗುವ ವಿಮಾನಗಳನ್ನು 'ಡಾಂಕಿ' ವಿಮಾನಗಳು ಎಂದೇ ಕರೆಯಲಾಗುತ್ತದೆ.
ನಿಕರಾಗುವಾದಿಂದ ಮೆಕ್ಸಿಕೋ ದಾರಿಯಾಗಿ ಅಮೆರಿಕಕ್ಕೆ ನುಸುಳುವುದು ಹೀಗೆ ಹೋಗುವವರ ಪ್ಲ್ಯಾನ್.
ಅಂದರೆ ಅಕ್ರಮ ಮಾರ್ಗದಲ್ಲಿ ವಲಸೆ ಹೋಗುವುದು ಅಂತ ಅರ್ಥ.
ಈಗ ಪ್ರಶ್ನೆಯಿರುವುದು, ಇಷ್ಟೆಲ್ಲಾ ಕ್ರಾಂತಿ ಆಗ್ತಾ ಇರೋ ಮೋದಿಯವರ ಭಾರತದಲ್ಲಿ ಇರಲಾರದೆ ಅದಾವುದೋ ದೇಶಕ್ಕೆ ನುಸುಳುಕೋರರಾಗಿ ಹೋಗುವ ಸ್ಥಿತಿ ಏಕಿದೆ ಎನ್ನೋದು.
ಅದೂ ಚಿಕ್ಕ ಚಿಕ್ಕ ಮಕ್ಕಳನ್ನೂ ಕಟ್ಟಿಕೊಂಡು ಗೊತ್ತಿಲ್ಲದ ದೇಶದಲ್ಲಿ ಬದುಕಲು ಹೊರಟಿದ್ದರು ಎಂದರೆ, ಅಂಥ ನಿರ್ಧಾರ ಕೈಗೊಳ್ಳಬೇಕಾಗಿ ಬರಲು ಕಾರಣವಾದರೂ ಏನು?
ಕೆಲವು ಚಿಕ್ಕ ಮಕ್ಕಳೊಂದಿಗೆ ಅವರ ಹೆತ್ತವರು ಇರಲಿಲ್ಲ. ಇದು ಇನ್ನಷ್ಟು ಕಳವಳಕಾರಿ ವಿಷಯ.
ಮೋದಿ ದೇಶದಲ್ಲಿ, ಅವರದೇ ರಾಜ್ಯದಲ್ಲಿ , ಅವರದೇ ತವರು ಜಿಲ್ಲೆಯಲ್ಲಿ ಜನರಿಗೆ ಅಷ್ಟೊಂದು ಕಷ್ಟವೆ?.
ಇಡೀ ಜಗತ್ತೇ ಕೊಂಡಾಡುವ ಮೋದಿಯವರ ಭಾರತದಲ್ಲಿ ಇರಲು ಸಾಧ್ಯವಾಗದ ಸ್ಥಿತಿ ಏನದು ?.
ಇಂಥ ಗಂಭೀರ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಆದರೆ ಈ ಪ್ರಶ್ನೆಗಳನ್ನು ಮೊನ್ನೆ ವಾಪಸ್ ಬಂದವರಲ್ಲಿ ಕೇಳಲು ಅವಕಾಶವನ್ನೇ ನೀಡಲಾಗಿಲ್ಲ.
ಹಾಗೆ ಹೊರಟು ವಾಪಸ್ ಬಂದವರಲ್ಲಿ 90ಕ್ಕೂ ಹೆಚ್ಚು ಮಂದಿ ಗುಜರಾತಿನವರು ಎಂಬ ಕಾರಣಕ್ಕೆ ಹೀಗೆ ನಿರ್ಬಂಧಿಸಲಾಯಿತೇ ಎಂಬ ಪ್ರಶ್ನೆಯೂ ಇದೆ.
ಭಾರತಕ್ಕೆ ವಲಸೆ ಬಂದವರನ್ನು ಮೋದಿ, ಅಮಿತ್ ಶಾ ಅವರು ನುಸುಳುಕೋರರು ಅಂತ ಬಣ್ಣಿಸ್ತಾರೆ. ಕೆಲವೊಮ್ಮೆ ಉಗ್ರರು ಎಂದೂ ಹೇಳ್ತಾರೆ.
ಆದರೆ ಇಲ್ಲಿಂದ ಬೇರೆ ದೇಶಕ್ಕೆ ಅಕ್ರಮವಾಗಿ ನುಸುಳಲು ಹೋದವರ ಬಗ್ಗೆ "ವೀಸಾ ಅಕ್ರಮ" ಮಾಡಿದ್ದಾರೆ ಎಂದು ಮಾತ್ರ ಹೇಳಲಾಗುತ್ತದೆ. ಮತ್ತೆ ಅದರ ಚರ್ಚೆಯೇ ಇಲ್ಲ.
ಅಕ್ರಮವಾಗಿ ವಲಸೆ ಹೋಗುವ ಭಾರತೀಯರ ಕುರಿತ ಅಂಕಿಅಂಶಗಳನ್ನು ಸ್ವಲ್ಪ ಗಮನಿಸಿದರೆ ನಿಜವಾಗಿಯೂ ಮೋದಿ ಭಾರತದಲ್ಲಿ ಏನಾಗುತ್ತಿದೆ ಎಂಬ ಆತಂಕ ಮೂಡುತ್ತದೆ.
ಅಕ್ಟೊಬರ್ 2022 ರಿಂದ ಸೆಪ್ಟೆಂಬರ್ 2023ರ ಅವಧಿಯಲ್ಲಿ 96,917 ಭಾರತೀಯರು ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಪ್ರಯತ್ನಿಸಿ ಬಂಧನಕ್ಕೆ ಒಳಗಾಗಿದ್ದಾರೆ.
ಇದು ಹಿಂದಿನ ವರ್ಷಕ್ಕಿಂತ ಶೇ.51.61ರಷ್ಟು ಹೆಚ್ಚು ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ಯಾಟ್ರೋಲ್ (ಸಿಬಿಪಿ) ಅಂಕಿಅಂಶ ಹೇಳುತ್ತದೆ.
96,917 ಭಾರತೀಯರ ಪೈಕಿ 30,010 ಮಂದಿ ಅಮೇರಿಕ ಕೆನಡಾ ಗಡಿಯಲ್ಲಿ ಹಾಗು 41,770 ಭಾರತೀಯರು ಮೆಕ್ಸಿಕನ್ ಭೂ ಗಡಿಯ ಮೂಲಕ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವಾಗ ಸಿಕ್ಕಿ ಬಿದ್ದಿದ್ದಾರೆ ಎಂದು ಸಿಬಿಪಿ ಡೇಟಾ ಹೇಳುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಹೀಗೆ ಅಕ್ರಮವಾಗಿ ಅಮೆರಿಕಕ್ಕೆ ನುಸುಳುವ ಭಾರತೀಯರ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚಳವಾಗಿದೆ.
ಇದೆಲ್ಲ ಬಡವರ ಕಥೆಯಾದರೆ, ಶ್ರೀಮಂತರು ಕೂಡ ದೇಶ ಬಿಡೋದ್ರಲ್ಲಿ ಕಡಿಮೆಯಿಲ್ಲ.
ಮೋದಿ ಸರ್ಕಾರವೇ ಕೊಟ್ಟಿರೋ ಅಂಕಿಅಂಶಗಳ ಪ್ರಕಾರ, 2011ರಿಂದ 17.50 ಲಕ್ಷ ಭಾರತೀಯರು ಪೌರತ್ವ ತ್ಯಜಿಸಿದ್ದಾರೆ.
2022, ಇದೊಂದೇ ವರ್ಷವೇ 2,25,620 ಮಂದಿ ಪೌರತ್ವ ತ್ಯಜಿಸಿದ್ದಾರೆ. ಅಂದರೆ ದಿನಕ್ಕೆ ಸರಾಸರಿ 618 ಮಂದಿ.
ಈ ಅಂಕಿಅಂಶಗಳು ಏನನ್ನು ಹೇಳುತ್ತಿವೆ?.
ಯಾಕೆ ಶ್ರೀಮಂತ ಭಾರತೀಯರು ಹೀಗೆ ದೇಶ ಬಿಟ್ಟು ವಿದೇಶಗಳಲ್ಲಿ ಹೋಗಿ ನೆಲೆಸುತ್ತಿದ್ದಾರೆ?.
ದೇಶದಲ್ಲಿ ಎಲ್ಲ ಚೆನ್ನಾಗಿದ್ದು ಅಚ್ಚೇದಿನ್ ಬಂದಿದ್ದರೆ ಯಾಕೆ ಇಷ್ಟೊಂದು ಜನ ಶ್ರೀಮಂತರು ಇಲ್ಲಿ ದುಡಿದ ಸಂಪತ್ತು ಹಿಡಿದುಕೊಂಡು ದೇಶ ಬಿಡುತ್ತಿದ್ದಾರೆ ?
ಅಂಕಿಅಂಶಗಳ ಪ್ರಕಾರ ಹಿಂದೆಂದಿಗಿಂತಲೂ ಹೆಚ್ಚಿನ ಭಾರತೀಯರು 2022ರಲ್ಲಿ ತಮ್ಮ ಪೌರತ್ವ ತ್ಯಜಿಸಿದ್ದಾರೆ ಮತ್ತು ಇತರ ದೇಶಗಳಲ್ಲಿ ಪೌರತ್ವ ಪಡೆದಿದ್ದಾರೆ.
ಇನ್ನು, ಮೋದಿಯವರ ಗುಜರಾತ್ನಿಂದಲೇ ಅಮೆರಿಕಕ್ಕೆ ಅಕ್ರಮ ವಲಸೆ ಹೋಗುವವರು ಅತಿ ಹೆಚ್ಚು ಎನ್ನೋದು ಕೂಡ ಜಗಜ್ಜಾಹೀರಾಗಿರೋ ವಿಚಾರ.
ಮಾತೆತ್ತಿದರೆ ಗುಜರಾತ್ ಮಾಡೆಲ್ ಎಂದು ಬಡಾಯಿ ಕೊಚ್ಚುವವರ ಗುಜರಾತಿನ ಹಳ್ಳಿಗಳಲ್ಲಿನ ಜನರ ಗೋಳಿನ ಕಥೆಗಳ ಕುರಿತ ವರದಿಗಳಂತೂ ಬೆಚ್ಚಿ ಬೀಳಿಸುತ್ತವೆ.
ಅಕ್ರಮ ವಲಸೆ ಯತ್ನದಲ್ಲಿ ವಿಫಲರಾಗಿ ಗುಜರಾತಿನ ಇಡೀ ಕುಟುಂಬಗಳೇ ಅಮೇರಿಕಾದ ಗಡಿಗಳಲ್ಲಿ ಪ್ರಾಣ ತೆತ್ತಿರುವ ಹಲವು ಉದಾಹರಣೆಗಳಿವೆ.
ಬಹುತೇಕ ಗುಜರಾತಿಗಳು, ಅದರಲ್ಲೂ ಉತ್ತರ ಗುಜರಾತ್‌ನಲ್ಲಿ ಅನೇಕರು ಹೀಗೆ ಅಮೆರಿಕ ಕನಸನ್ನು ತಲೆಗೆ ತುಂಬಿಕೊಂಡು ಅದಕ್ಕಾಗಿ ತಮ್ಮ, ಹಾಗು ತಮ್ಮ ಇಡೀ ಕುಟುಂಬದ ಪ್ರಾಣವನ್ನೆ ಪಣಕ್ಕಿಟ್ಟು ಅಕ್ರಮ ಮಾರ್ಗಗಳಲ್ಲಿ ಹೋಗುತ್ತಾರೆ.
ಅದಕ್ಕಾಗಿ ತಮ್ಮ ಮನೆ, ಮಾರುಗಳನ್ನು ಮಾರಿ ಇಡೀ ಜೀವನದ ಉಳಿತಾಯವನ್ನು ವಲಸೆ ಏಜೆಂಟರಿಗೆ ಕೊಟ್ಟು ಅಪಾಯದ ದಾರಿ ಹಿಡಿಯುತ್ತಿದ್ದಾರೆ.
ಮೋದಿಯವರ ತವರು ಮೆಹಸಾನಾ ಹಾಗು ಅಮಿತ್ ಶಾ ಅವರ ಕ್ಷೇತ್ರ ಗಾಂಧಿ ನಗರದಿಂದಲೇ ಹೀಗೆ ಅಕ್ರಮವಾಗಿ ಅಮೆರಿಕಕ್ಕೆ ಗುಜರಾತಿಗಳು ಹೋಗುತ್ತಿದ್ದಾರೆ.
ಹೀಗೆ ವಲಸೆ ಹೋಗುವ ಜನರಿಗೆ ಹೆಚ್ಚಿನ ಶಿಕ್ಷಣವಿಲ್ಲ. ಕೆಳ ಮಧ್ಯಮ ವರ್ಗದವರಂತೂ ಎಂಥ ರಿಸ್ಕ್ ತೆಗೆದುಕೊಳ್ಳೋದಕ್ಕೂ ಹಿಂದೆಮುಂದೆ ನೋಡುವುದಿಲ್ಲ ಎನ್ನಲಾಗುತ್ತದೆ.
ಹಾಗಾದರೆ ಮೋದಿಯವರ ಗುಜರಾತ್ನಲ್ಲಿ ಇಲ್ಲದೇ ಇರೋದು, ಮೋದಿಯವರ ಭಾರತದಲ್ಲಿ ಇಲ್ಲದೇ ಇರೋದು ಅಮೆರಿಕದಲ್ಲಿ ಏನಿದೆ ?
ಯಾಕೆ ಜನ ಹೇಗಾದರೂ ಮಾಡಿ ಈ ದೇಶ ಬಿಟ್ಟು ಅಲ್ಲೆಲ್ಲೋ ಹೋಗಿ ಸೇರಿಕೊಂಡರೆ ಸಾಕು ಎಂದು ಹೀಗೆ ಒದ್ದಾಡುತ್ತಿದ್ದಾರೆ ?
ಮೋದಿಯವರು ಐದನೇ ಆರ್ಥಿಕತೆ, ಮೂರನೇ ಆರ್ಥಿಕತೆ ಅಂತೆಲ್ಲ ಹೇಳಿಕೊಳ್ಳುವುದು ಮುಂದುವರಿದೇ ಇರುವಾಗ, ದೇಶದಲ್ಲಿ ಇಂಥ ಸ್ಥಿತಿ ಏಕಿದೆ?
ಮೋದಿಯವರಾಗಲಿ, ಅವರಿಗೆ ಜೈಕಾರ ಹಾಕುವ ಮಡಿಲ ಮೀಡಿಯಾಗಳಾಗಲಿ ಇಂಥ ಪ್ರಶ್ನೆಗಳಿಗೆ ಉತ್ತರಿಸುವುದು ಸಾಧ್ಯವೆ ?