'ನಂಬರ್ 1' ಸಂಸದರಿಗೇ ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಯಾಕೆ ?
► ಒಂದು ಲಕ್ಷ ಕೋಟಿಯ ಅಭಿವೃದ್ಧಿ ಮಾಡಿದ್ದರೆ ಮತ್ಯಾಕೆ ಹೊಸ ಅಭ್ಯರ್ಥಿ ? ► ಕಾರ್ಯಕರ್ತರಿಂದಲೇ ಗೆದ್ದು ಕಾರ್ಯಕರ್ತರಿಂದಲೇ ತಿರಸ್ಕೃತಗೊಂಡ ನಾಯಕ
ನಳಿನ್ ಕುಮಾರ್ ಕಟೀಲ್
27 ಜುಲೈ 2022 ರಂದು ಸುಳ್ಯದ ನೆಟ್ಟಾರ್ ನಲ್ಲಿ ಅಲುಗಾಡಿದ್ದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕಾರು ಮಾತ್ರ ಅಲ್ಲ. ಅಲ್ಲಿ ಜೋರಾಗಿ ಅಲುಗಾಡಿ ಬಿದ್ದಿದ್ದು ಅವರ ಈ ಬಾರಿಯ ಲೋಕಸಭಾ ಟಿಕೆಟ್ ಎಂಬುದು ನಿನ್ನೆ ಖಚಿತವಾಗಿದೆ. ದಕ್ಷಿಣ ಕನ್ನಡ ಕ್ಷೇತ್ರಕ್ಕೆ ಹೊಸ ಬಿಜೆಪಿ ಅಭ್ಯರ್ಥಿಯ ಘೋಷಣೆಯಾಗಿದೆ.
" ಘೋಷಣೆ ಕೂಗಿದವರಿಗೆ ಟಿಕೆಟ್ ಇಲ್ಲ, ನಾನು ಕೊಡುವುದಿಲ್ಲ ನಾನು ರಾಜ್ಯಾಧ್ಯಕ್ಷ " ಎಂದು ಹೇಳಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೇ ಈ ಬಾರಿ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಕೆಲವು ತಿಂಗಳ ಹಿಂದೆ ಪಕ್ಷದ ರಾಜ್ಯಾಧ್ಯಕ್ಷರಾಗಿ ರಾಜ್ಯದ ಅಷ್ಟೂ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಬಿ ಫಾರ್ಮ್ ಗೆ ಸಹಿ ಮಾಡಿದ ನಳಿನ್ ಗೆ ಈ ಬಾರಿ ಸ್ವತಃ ಟಿಕೆಟ್ ಇಲ್ಲ ಎಂದು ಹೇಳಿದೆ ಅವರ ಪಕ್ಷ
ಟಿಕೆಟ್ ಕೈತಪ್ಪುವ ಸುಳಿವು ಅವರಿಗೆ ಸಿಕ್ಕಿತ್ತು. ಹಾಗಾಗಿ ಟಿಕೆಟ್ ಘೋಷಣೆಗೆ ಒಂದು ದಿನ ಮೊದಲು ಪಕ್ಷದಲ್ಲಿ ಹೊಸ ಮುಖಗಳಿಗೆ ಅವಕಾಶ ಸಿಗಬೇಕು. ಪಕ್ಷ ನಿಂತ ನೀರಾಗಬಾರದು. ನಾನು ಪಕ್ಷ ಹೇಳಿದರೆ ಗುಡಿಸುವುದಕ್ಕೂ ಸಿದ್ಧ, ಒರೆಸುವುದಕ್ಕೂ ಸಿದ್ಧ ಎಂದು ಹೇಳಿದ್ದರು.
ನಳಿನ್ ಕುಮಾರ್ ಕಟೀಲ್ ಹಾಗೆ ಹೇಳಿರುವುದರಲ್ಲಿ ಯಾವುದೇ ಅಚ್ಚರಿ ಇಲ್ಲ. ಏಕೆಂದರೆ ಅವರಿಗೆ ಬಹಳ ಚೆನ್ನಾಗಿ ಗೊತ್ತಿದೆ.
2009 ರ ಲೋಕಸಭಾ ಚುನಾವಣೆ ಘೋಷಣೆಯಾದಾಗ ನಳಿನ್ ಕುಮಾರ್ ಕಟೀಲ್ ಅಂದ್ರೆ ಯಾರು ಅಂತ ಕೇಳಿದರೆ ಮಂಗಳೂರಿನ ಬಿಜೆಪಿ ಮುಖಂಡರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತೇ ಇರಲಿಲ್ಲ.
ಪುತ್ತೂರಿನ ಸೈಂಟ್ ಫಿಲೋಮಿನಾ ಹೈಸ್ಕೂಲ್ ನಲ್ಲಿ ಶಿಕ್ಷಣದ ಬಳಿಕ ತನ್ನ 18ನೆ ವಯಸ್ಸಿನಲ್ಲಿ ಆರೆಸ್ಸೆಸ್ ನ ಪ್ರಚಾರಕರಾಗಿದ್ದ ನಳಿನ್ ಬಳಿಕ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಅಲ್ಲಲ್ಲಿ ಭಾಷಣ ಮಾಡುತ್ತಿದ್ದರು. ಅವರು ಆವರೆಗೆ ಒಂದೇ ಒಂದು ಚುನಾವಣೆಗೆ ಸ್ಪರ್ಧಿಸಿರಲಿಲ್ಲ.
ಸರಿಯಾಗಿ ರಾಜಕಾರಣಿಗಳ ಟ್ರೇಡ್ ಮಾರ್ಕ್ ಖಾದಿ ಬಟ್ಟೆ ಕೂಡ ಅಭ್ಯಾಸ ಆಗಿರದಿದ್ದ ನಳಿನ್ ಸೀದಾ ಸಾದಾ ಪ್ಯಾಂಟ್ ಶರ್ಟ್ ನಲ್ಲೇ ಬರುತ್ತಿದ್ದರು.
ಆದರೆ ಪಕ್ಷದ ಹಿರಿಯ ನಾಯಕ, ಹಾಲಿ ಸಂಸದ ಡಿ ವಿ ಸದಾನಂದ ಗೌಡರನ್ನು ಬದಲಾಯಿಸಿ, ಬಂಟ ಸಮುದಾಯದ ನಳಿನ್ ಕುಮಾರ್ ಕಟೀಲ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದಾಗ ಪಕ್ಷದ ಸ್ಥಳೀಯ ನಾಯಕರಿಗೆ, ಕಾರ್ಯಕರ್ತರಿಗೆ ಹಾಗು ಮಂಗಳೂರಿಗರಿಗೂ ಅಚ್ಚರಿ. ಇವರ್ಯಾರು ಎಂದು ಕೇಳಿದವರೇ ಹೆಚ್ಚು.
ಅಂದು ನಳಿನ್ ಎದುರು ಕಾಂಗ್ರೆಸ್ ಅಭ್ಯರ್ಥಿ ಹಿರಿಯ ನಾಯಕ ಕೇಂದ್ರ ಸಚಿವರಾಗಿ ಜನಪರ ಕಾರ್ಯಗಳ ಮೂಲಕ ಗುರುತಿಸಿ ಕೊಂಡಿದ್ದ , ಬಿಲ್ಲವ ಸಮುದಾಯದ ಜನಾರ್ದನ ಪೂಜಾರಿಯವರು. ಆದರೆ ಬಿಜೆಪಿ, ಸಂಘ ಪರಿವಾರದ ಅದ್ಭುತ ಸಂಘಟನಾ ಶಕ್ತಿ ಹಾಗು ಕೋಮು ರಾಜಕೀಯ ನಳಿನ್ ರನ್ನು 40 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿತು. ಕರಾವಳಿ ಬಿಜೆಪಿಯಲ್ಲಿ ಹೊಸ ಫೈರ್ ಬ್ರ್ಯಾಂಡ್ ನಾಯಕನೊಬ್ಬನ ಉದಯವಾಗಿತ್ತು.
ಆಮೇಲೆ ನಳಿನ್ ಹಿಂದಿರುಗಿ ನೋಡಿದ್ದೇ ಇಲ್ಲ. ಪಕ್ಕಾ ರಾಜಕಾರಣಿಯಾಗಿ ರಾಜಕೀಯದ ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತಲೇ ಹೋದರು.
2014ರ ಲೋಕಸಭಾ ಚುನಾವಣೆ. ಕರಾವಳಿಯಲ್ಲಿ ಹೇಗೂ ಬಿಜೆಪಿ ಬಹಳ ಪವರ್ ಫುಲ್ ಆಗಿತ್ತು. ಜೊತೆಗೆ ದೇಶಾದ್ಯಂತ ಮೋದಿ ಅಲೆ. ಬಹಳ ಸುಲಭವಾಗಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಮತಗಳಿಂದ ಮತ್ತೆ ಜನಾರ್ದನ ಪೂಜಾರಿಯವರನ್ನು ಸೋಲಿಸಿ ಸಂಸದರಾದರು ನಳಿನ್.
ಅಲ್ಲಿಂದಲೇ ನಳಿನ್ ಅವರ ರಾಜಕೀಯದ ಉತ್ಥಾನ ಹಾಗು ಪಥನ ಗಾಥೆ ಎರಡೂ ಶುರುವಾಯಿತು. 2014ರ ಗೆಲುವು ನಳಿನ್ ಅವರಿಗೆ ರಾಜಕೀಯದಲ್ಲಿ ಹೊಸ ಅವಕಾಶಗಳನ್ನು ತೆರೆದಿಟ್ಟಿತ್ತು. ಪಕ್ಷದ ಪ್ರಭಾವ ಶಾಲಿ ನಾಯಕನಾಗಿ ಗುರುತಿಸಿಕೊಳ್ಳುತ್ತಾ ಸಾಗಿದ ನಳಿನ್ ಪ್ರಚಾರದ ಅಬ್ಬರದ ಮೂಲಕವೇ ರಾಜ್ಯದ ನಂಬರ್ ವನ್ ಸಂಸದ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡರು. ಅಂಕಿಅಂಶಗಳ ಆಟದಲ್ಲಿ ಜಿಲ್ಲೆಗೆ ಅಭಿವೃದ್ಧಿಯ ಮಹಾಪೂರವೇ ಹರಿದು ಬಂದಂತೆ ಬಿಂಬಿಸುವ ಕೆಲಸವೂ ನಡೆಯಿತು. ಈ ನಡುವೆ 2019ರ ಲೋಕಸಭಾ ಚುನಾವಣೆ ಹತ್ತಿರ ಆಗುತ್ತಿದ್ದಂತೆ ಜಿಲ್ಲೆಯಲ್ಲಿ ಅಭಿವೃದ್ಧಿ ಕುರಿತ ಚರ್ಚೆ ಮುನ್ನೆಲೆಗೆ ಬಂತು.
ಅದರಲ್ಲಿ ಪ್ರಮುಖವಾಗಿ ಪಂಪ್ವೆಲ್ ಸೇತುವೆ 10 ವರ್ಷಗಳಾದರೂ ಪೂರ್ಣಗೊಂಡಿಲ್ಲ ಎಂದು ಸಂಸದ ನಳಿನ್ ಭಾರೀ ಟ್ರೊಲ್ ಗೆ ಒಳಗಾದರು. ತೀವ್ರ ಇರಿಸು ಮುರಿಸಿನ ಸನ್ನಿವೇಶದ ನಡುವೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ಪಂಪ್ವೆಲ್ ಸೇತುವೆ ಕೂಡ ಪೂರ್ಣಗೊಳಿಸಲು ನಳಿನ್ ಇನ್ನಿಲ್ಲದ ಶ್ರಮ ವಹಿಸಿ ತನ್ನ ಬೆನ್ನು ತಾನೇ ತಟ್ಟಿ ಕೊಂಡರು. ಪಂಪ್ವೆಲ್ ಸೇತುವೆ ಏನೋ ಆಯಿತು, ಆದರೆ ಪ್ರತಿ ಮಳೆಗಾಲದಲ್ಲಿ ಪಂಪ್ವೆಲ್ ಸೇತುವೆ ಜೊತೆ ನಳಿನ್ ಕುಮಾರ್ ಕಟೀಲ್ ಅವರು ಟ್ರೊಲ್ ಆಗುವುದು ಮಾತ್ರ ಮುಂದುವರಿದಿದೆ. 15 ವರ್ಷಗಳಲ್ಲಿ ಅವರ ಅಭಿವೃದ್ಧಿ ಕೆಲಸಗಳ ಪಟ್ಟಿಯಲ್ಲಿ ಈ ಅವೈಜ್ಞಾನಿಕ ಪಂಪ್ವೆಲ್ ಸೇತುವೆ ಪ್ರಮುಖ ಕಪ್ಪುಚುಕ್ಕೆಯಾಗಿ ಇವತ್ತಿಗೂ ಗುರುತಿಸಿ ಕೊಂಡಿದೆ.
ಈ ನಡುವೆ ಕೋಮು ಪ್ರಚೋದಕಾರಿ ಮಾತುಗಳ ಮೂಲಕವೇ ಸುದ್ದಿಯಲ್ಲಿರುವ ಚಾಳಿ ನಳಿನ್ ಅವರಿಗೆ ಅಂಟಿಕೊಂಡಿತು. ಆಗಾಗ ಯಾವುದಾದರೂ ಒಂದು ವಿಷಯ ಎತ್ತಿಕೊಂಡು ತೀರಾ ಪ್ರಚೋದನಕಾರಿ, ಬೇಜವಾಬ್ದಾರಿಯುತ ಹೇಳಿಕೆ ನೀಡುವುದು ಅವರಿಗೆ ಅಭ್ಯಾಸವಾಯಿತು. ಕ್ಷೇತ್ರದಲ್ಲಿ ಅವರು ಮಾಡಿದ ಅಭಿವೃದ್ಧಿ ಏನೆಂಬುದು ಜನರೆದುರೇ ಇತ್ತು. ಹಾಗಾಗಿ ಸಂಘ ಪರಿವಾರದ ಶಕ್ತಿ ಕೇಂದ್ರದಲ್ಲಿ ಕೋಮು ರಾಜಕೀಯದ ಮೂಲಕವೇ ಚಾಲ್ತಿಯಲ್ಲಿರುವುದು ಸೇಫ್ ಎಂದೂ ಅವರಿಗೆ ಅನಿಸಿತು. 2017 ರಲ್ಲಿ ಕೊಣಾಜೆಯಲ್ಲಿ ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್ ಎಂಬವರ ಕೊಲೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಹೇಳಿ ಬಿಟ್ಟರು ನಳಿನ್. ಕೊನೆಗೆ ಕಾರ್ತಿಕ್ ಕೊಲೆಯಲ್ಲಿ ಅವರ ಕುಟುಂಬ ಸದಸ್ಯರೇ ಬಂಧನಕ್ಕೆ ಒಳಗಾದರು.
2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಬಿಜೆಪಿಯ ಒಂದು ವರ್ಗದ ವಿರೋಧದ ನಡುವೆಯೂ ನಳಿನ್ ಗೆ ಬಿಜೆಪಿ ಟಿಕೆಟ್ ನೀಡಿತ್ತು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮಿಥುನ್ ರೈ ಅವರನ್ನು ನಳಿನ್ 2.7 ಲಕ್ಷಕ್ಕೂ ಅಧಿಕ ಮತದಿಂದ ಸೋಲಿಸಿ ಹ್ಯಾಟ್ರಿಕ್ ವಿಜಯದ ನಗೆ ಬೀರಿದರು. ಅಲ್ಲಿಂದ ನಳಿನ್ ಅವರು ರಾಜ್ಯ ರಾಜಕೀಯದಲ್ಲಿ ಪ್ರಮುಖ ಬಿಜೆಪಿ ನಾಯಕನಾಗಿ ಗುರುತಿಸಿಕೊಂಡರು. ಪಕ್ಷದ ಅಧ್ಯಕ್ಷರಾಗಿದ್ದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ಜಾಗಕ್ಕೆ ನಳಿನ್ ಕುಮಾರ್ ಅವರನ್ನು ನೇಮಕ ಮಾಡಲಾಯಿತು. 2019ರ ಆಗಸ್ಟ್ 20ರಂದು ಬಿಜೆಪಿಯ 9ನೆ ರಾಜ್ಯಾಧ್ಯಕ್ಷ ರಾಗಿ ಪಕ್ಷದ ಚುಕ್ಕಾಣಿ ಹಿಡಿದ ನಳಿನ್ ರಾಜ್ಯ ನಾಯಕರಾದರು. ಅದೇ ಹೊತ್ತಿಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರ ಉರುಳಿ ಬಿಜೆಪಿ ಸರಕಾರವೂ ಅಸ್ತಿತ್ವಕ್ಕೆ ಬಂದಿದ್ದರಿಂದ ನಳಿನ್ ಅತ್ಯಂತ ಪ್ರಭಾವೀ ನಾಯಕನಾಗಿ ಬೆಳೆದರು. ಕರಾವಳಿಯ ಮಟ್ಟಿಗೆ ಅವರೇ ಪಕ್ಷದ ಹೈಕಮಾಂಡ್ ಎಂಬಂತಾಯಿತು.
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏನೇ ಆಗಬೇಕಾದರೂ ನಳಿನ್ ಯಸ್ ಎನ್ನಬೇಕು ಎಂಬಂತಹ ಪರಿಸ್ಥಿತಿ ನಿರ್ಮಾಣವಾಯಿತು. ರಾಜಕೀಯದಲ್ಲಿ, ಜಿಲ್ಲೆಯ ಯಾವುದೇ ಅಭಿವೃದ್ಧಿ ಕಾಮಗಾರಿಗಳಲ್ಲಿ, ಗುತ್ತಿಗೆ ಕೆಲಸಗಳಲ್ಲಿ ನಳಿನ್ ಮುದ್ರೆ ಬೀಳದಿದ್ದರೆ ಏನೂ ಆಗುವುದಿಲ್ಲ ಎಂಬಂತಾಯಿತು.
ಆರೆಸ್ಸೆಸ್ ನ ಕರಾವಳಿ ಪಾಲಿನ ಹೈಕಮಾಂಡ್ ಎಂದೇ ಗುರುತಿಸಿಕೊಂಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಗರಡಿಯಲ್ಲಿ ಬೆಳೆದಿದ್ದ ನಳಿನ್ ಮೂರನೇ ಬಾರಿ ಸಂಸದರಾಗುವಾಗ ಆರೆಸ್ಸೆಸ್ ನ ಇನ್ನೊಬ್ಬ ಪ್ರಭಾವೀ ಮುಖಂಡ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡರು. ಅವರ ಇಶಾರೆಯಂತೆಯೇ ನಳಿನ್ ಬಿಜೆಪಿ ರಾಜ್ಯ ಘಟಕವನ್ನು ನಡೆಸುತ್ತಿದ್ದಾರೆ, ಯಡಿಯೂರಪ್ಪ ಸಹಿತ ಹಿರಿಯ ಮುಖಂಡರನ್ನು ಕಡೆಗಣಿಸುತ್ತಿದ್ದಾರೆ ಎಂಬ ದೂರು ವ್ಯಾಪಕವಾಗಿ ಕೇಳಿ ಬಂತು.
ಅದೇ ಹೊತ್ತಿಗೆ ನಳಿನ್ ತನ್ನನ್ನು ನೆಲದಿಂದ ಬೆಳೆಸಿ ನಾಯಕನಾಗಿಸಿದ ತಮ್ಮ ಜಿಲ್ಲೆಯ ಸಾಮಾನ್ಯ ಕಾರ್ಯ ಕರ್ತರಿಂದ ದೂರವಾಗುತ್ತಾ ಹೋದರು. ಜಿಲ್ಲೆಯಲ್ಲಿ ಕೋಮು ಕಲಹದ ಉನ್ಮಾದದ ನಡುವೆ ಸಾಮಾನ್ಯ ಕಾರ್ಯಕರ್ತರ ನೋವಿಗೆ ಸಂಸದರ ಸ್ಪಂದನೆ ಸಿಗುತ್ತಿಲ್ಲ ಎಂಬ ಕೂಗು ಬಲವಾಗುತ್ತಾ ಸಾಗಿತು. ಕಾರ್ಯ ಕರ್ತರ ಒಂದು ವಲಯದಲ್ಲಿ ಒಳಗಿನಿಂದ ನಳಿನ್ ವಿರುದ್ಧ ಅಪಸ್ವರ ಕೇಳಲಾರಭಿಸಿತು. ಈ ವಿರೋಧದ ಅಪಸ್ವರ ಪಕ್ಷದ ರಾಷ್ಟ್ರೀಯ ನಾಯಕರವರೆಗೂ ತಲುಪಿತ್ತು. ಅದನ್ನು ಸರಿದೂಗಿಸಲು ಆಗಾಗ ಕೋಮು ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುತ್ತಿದ್ದರು ನಳಿನ್. ಆದರೆ ಅದು ಕಾರ್ಯಕರ್ತರ ಸಿಟ್ಟು ತಣಿಸಲಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಪ್ರಚೋದನೆ, ಪ್ರಬಲ ಹಿಂದುತ್ವ ಪ್ರತಿಪಾದನೆಯ ನಾಯಕ ಬಿಜೆಪಿ ಜೊತೆಗೆ ಆರೆಸ್ಸೆಸ್ ಗೊ ಅನಿವಾರ್ಯ ವಾಗಿತ್ತು. ಆದರೆ ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರ ಜೊತೆ ನಳಿನ್ ಸಂವಹನ, ಸಂಬಂಧ ಸಂಪೂರ್ಣ ಹಳಸುತ್ತಲೇ ಹೋಯಿತು.
ಅಭಿವೃದ್ಧಿ ದೃಷ್ಟಿಯಲ್ಲಿ ಕಾಂಗ್ರೆಸ್ ಸಂಸದರ ಅವಧಿಯಲ್ಲೇ ಎಂ ಆರ್ ಪಿ ಎಲ್, ಎನ್ ಐ ಟಿ ಕೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೃಹತ್ ಕೈಗಾರಿಕೆಗಳ ಮೂಲಕ ಮುಂಚೂಣಿಯಲ್ಲಿದ್ದ ದಕ ಜಿಲ್ಲೆಯಲ್ಲಿ ಕಳೆದ 15 ವರ್ಷಗಳಲ್ಲಿ ಸಂಸದರಾಗಿ ನಳಿನ್ ಮಾಡಿರುವ ಅಭಿವೃದ್ಧಿ ಏನು ಎಂಬುದೇ ನಿಗೂಢ.
ಒಂದೆಡೆ ಕೋರೋನ ಸಂಕಷ್ಟ , ಜಿಲ್ಲೆಯ ಅಭಿವೃದ್ಧಿಯ ಕಡೆಗಣನೆ ಯ ಜೊತೆಗೆ ಕಾರ್ಯ ಕರ್ತರ ಅವಗಣನೆಯ ಆರೋಪ ನಳಿನ್ ಅವರನ್ನು ಸುತ್ತುವರಿದಿತ್ತು. ಸಾಮಾನ್ಯ ಕಾರ್ಯಕರ್ತರ ಒಳಗೊಳಗೇ ಭುಗಿಲೇಳುತ್ತಿದ್ದ ಈ ಅಸಮಾಧಾನದ ಹೊಗೆ 2022 ರ ಜುಲೈ 26ರಂದು ನಡೆದ ಪ್ರವೀಣ್ ನೆಟ್ಟಾರ್ ಎಂಬ ಕಾರ್ಯ ಕರ್ತನ ಕೊಲೆಯ ವೇಳೆಗೆ ಬಹಿರಂಗವಾಗಿ ಸ್ಫೋಟಗೊಂಡಿತ್ತು. ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಪಕ್ಷದ ರಾಜ್ಯಾಧ್ಯಕ್ಷರ ಕಾರನ್ನೇ ಕಾರ್ಯಕರ್ತರು ಅಲುಗಾಡಿಸಿ ಬೀಳಿಸಲು ಪ್ರಯತ್ನಿಸಿದರು. ಅದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು. ನಳಿನ್ ಗೆ ಇನ್ನಿಲ್ಲದ ಅವಮಾನವಾಯಿತು. ಜೊತೆಗೆ ನಳಿನ್ ಜೊತೆ ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರು ಇಲ್ಲ ಎಂಬ ಸಂದೇಶವೂ ರವಾನೆಯಾಯಿತು.
ಅದರ ಜೊತೆಜೊತೆಗೆ ಸುರತ್ಕಲ್ ನಲ್ಲಿ ಸತ್ಯಜಿತ್ ಸುರತ್ಕಲ್, ಬೆಳ್ತಂಗಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ರಂತಹ ಸಂಘ ಪರಿವಾರದ ಖಟ್ಟರ್ ನಾಯಕರು ನಳಿನ್ ವಿರುದ್ಧ ತಿರುಗಿ ಬಿದ್ದರು. ಕಾರ್ಯಕರ್ತರಿಗೆ ನ್ಯಾಯ ಸಿಗುತ್ತಿಲ್ಲ ಎಂಬ ದೂರು ವ್ಯಾಪಕವಾಯಿತು.
ಪುತ್ತೂರಿನಲ್ಲಂತೂ ಪುತ್ತಿಲ ಪರಿವಾರ ಎಂಬ ಬಣವೊಂದು ಸೃಷ್ಟಿ ಯಾಗಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯ ಬಿಜೆಪಿ ಶಕ್ತಿ ಕೇಂದ್ರ ಹಾಗು ನಳಿನ್ ತವರು ಪುತ್ತೂರಿನಲ್ಲೇ ಬಿಜೆಪಿ ಸೋಲುವಂತಾಯಿತು. ಬಿಜೆಪಿಗೆ, ನಳಿನ್ ಗೆ ದೊಡ್ಡ ಮುಖಭಂಗವಾಯಿತು. ರಾಜ್ಯದಲ್ಲೂ ನಳಿನ್ ಅಧ್ಯಕ್ಷತೆಯಲ್ಲಿ ಬಿಜೆಪಿ ಹೀನಾಯ ಸೋಲನುಭವಿಸಿತು. ವಿಧಾನ ಸಭಾ ಚುನಾವಣೆಗೆ ಮೊದಲು ಮಂಗಳೂರಿನ ಬೃಹತ್ ಸಭೆಯಲ್ಲಿ " ರಸ್ತೆ ಮೂಲಸೌಕರ್ಯ ಎಲ್ಲ ಕೇಳಬೇಡಿ, ಲವ್ ಜಿಹಾದ್ ಬಗ್ಗೆ ಗಮನ ಕೊಡಿ" ಎಂಬ ನಳಿನ್ ಅವರ ಮಾತು ಬಾರಿ ವಿವಾದಕ್ಕೂ ಕಾರಣವಾಗಿತ್ತು. ಕಾಂಗ್ರೆಸ್ ಗೆ ಪ್ರಚಾರಕ್ಕೆ ಒಳ್ಳೆಯ ಅಸ್ತ್ರ ಸಿಕ್ಕಿತು.
ಪ್ರಧಾನಿ ಮೋದಿ ಅವರು ಖುದ್ದು ಹಲವಾರು ರ್ಯಾಲಿ ಮಾಡಿದರೂ , ಅಮಿತ್ ಷಾ ರ ರೋಡ್ ಶೋ ಇದ್ಯಾವುದೂ ಪರಿಣಾಮ ಬೀರದೆ ರಾಜ್ಯದಲ್ಲಿ ನಳಿನ್ ನಾಯಕತ್ವ ಇರುವಾಗ ಬಿಜೆಪಿ ವಿಧಾನ ಸಭಾ ಚುನಾವಣೆಯಲ್ಲಿ ಸೋತಿದ್ದು ಪಕ್ಷದ ವರಿಷ್ಠರಿಗೆ ಅರಗಿಸಿ ಕೊಳ್ಳಲಾಗದಂತಾಯಿತು. ರಾಜ್ಯಾಧ್ಯಕ್ಷರಾಗಿ ನಳಿನ್ ಕರಾವಳಿ ಬಿಟ್ಟು ಬೇರೆಲ್ಲೂ ತಮ್ಮ ಛಾಪು, ವರ್ಚಸ್ಸು ಮೂಡಿಸುವಲ್ಲೂ ವಿಫಲರಾಗಿದ್ದರು. ಕರಾವಳಿಯಲ್ಲೂ ಪಕ್ಷದ ಸಂಘಟನೆಯೇ ಅವರ ಶಕ್ತಿಯಾಗಿತ್ತು. ಅವರ ವರ್ಚಸ್ಸು ಎಂಬುದು ಏನೂ ಇರಲಿಲ್ಲ.
ವಿಧಾನಸಭೆ ಚುನಾವಣೆ ಬಳಿಕ ಅವಧಿ ಮುಗಿದಿದ್ದ ನಳಿನ್ ಅವರ ಸ್ಥಾನಕ್ಕೆ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ನೇಮಕವಾದರು.
ಅಲ್ಲಿಗೆ ನಳಿನ್ ರಾಜ್ಯ ರಾಜಕೀಯದಿಂದ ಸಂಪೂರ್ಣ ಬದಿಗೆ ಸರಿದರು. ಲೋಕಸಭಾ ಟಿಕೆಟ್ ಉಳಿಸಿಕೊಂಡರೆ ಸಾಕು ಎಂಬ ಮಾತು ಅಲ್ಲಿಂದಲೇ ಶುರುವಾಯಿತು.
ದಕ್ಷಿಣ ಕನ್ನಡದಲ್ಲಿ ಮತ್ತೆ ನಳಿನ್ ಗೆ ಟಿಕೆಟ್ ಕೊಟ್ಟರೆ ಪುತ್ತಿಲ ಸಹಿತ ಹಿಂದುತ್ವವಾದಿ ನಾಯಕರು ಮತ್ತೆ ಅಸಮಾಧಾನ ವ್ಯಕ್ತಪಡಿಸಿ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿತ್ತು. ಹಾಗಾಗಿ ಹೇಗೂ ವರ್ಚಸ್ಸು ಕಳಕೊಂಡಿರುವ ನಳಿನ್ ರನ್ನು ಬದಲಾಯಿಸಿ ಹೊಸ ಮುಖಕ್ಕೆ ಅವಕಾಶ ಮಾಡಿಕೊಡಲು ಬಿಜೆಪಿ ನಿರ್ಧರಿಸಿತು. ಆ ಮೂಲಕ ಪಕ್ಷದೊಳಗಿನ ಅಸಮಾಧಾನವನ್ನೂ ತಕ್ಕ ಮಟ್ಟಿಗೆ ಅದು ನಿವಾರಿಸಿಕೊಂಡಿದೆ. 2009 ರಲ್ಲಿ ಸದಾನಂದ ಗೌಡರನ್ನು ಬದಲಾಯಿಸಿ ಹೊಸ ಮುಖ ನಳಿನ್ ರನ್ನು ತರುವ ಮೂಲಕ ಗೆಲುವನ್ನು ಖಾತ್ರಿ ಮಾಡಿಕೊಂಡಿದ್ದ ಬಿಜೆಪಿ ಈಗ ಅದೇ ನಳಿನ್ ರನ್ನು ಬದಲಾಯಿಸಿ ಗೆಲ್ಲಲು ಹೊರಟಿದೆ. ಬಂಟ ಸಮುದಾಯದವರೇ ಆದ ಮಾಜಿ ಸೇನಾಧಿಕಾರಿ ಬೃಜೇಶ್ ಚೌಟ ಈಗ ದಕ್ಷಿಣ ಕನ್ನಡದ ಬಿಜೆಪಿಯ ಹೊಸ ನಾಯಕ.
2009ರಲ್ಲಿ ದಿಢೀರನೇ ಕರಾವಳಿ ಬಿಜೆಪಿ ವೇದಿಕೆಯ ಕೇಂದ್ರಕ್ಕೆ ಬಂದು ಅಲ್ಲಿಂದ ರಾಜ್ಯ ರಾಜಕೀಯದಲ್ಲೂ ಪ್ರಭಾವಿಯಾಗಿ ಮಿಂಚಿದ ನಳಿನ್ ಕುಮಾರ್ ಕಟೀಲ್ ಇವತ್ತು ಸ್ವತಃ ಟಿಕೆಟ್ ಕಳೆದುಕೊಂಡ ಇನ್ನೊಬ್ಬ ಮಾಜಿಯಾಗಿ ಮನೆಗೆ ಹೋಗಿದ್ದಾರೆ. ಆದರೆ ಬಿಜೆಪಿಯಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಅದೂ ಮೋದಿ ಶಾ ಅವರ ಬಿಜೆಪಿಯಲ್ಲಿ ಎಲ್ಲವೂ ಅನಿರೀಕ್ಷಿತವೇ. ಹಾಗಾಗಿ ನಳಿನ್ ಅವರಿಗೆ ಮುಂದೆ ಯಾವ ಅವಕಾಶ ಕಾದಿದೆ ಅಥವಾ ಇಲ್ಲ ಎಂಬುದನ್ನು ಕಾದು ನೋಡಬೇಕು. ಸದ್ಯಕ್ಕಂತೂ ರಾಜ್ಯಾಧ್ಯಕ್ಷರಿಗೆ ಟಿಕೆಟ್ ಇಲ್ಲ ಎಂಬುದೇ ವಾಸ್ತವ.