"ನನ್ನ ಬಗ್ಗೆ ನನಗೆ ಅಸಹ್ಯ ಆಗಿ ಬಿಟ್ಟಿದೆ" ಎಂದು Yash ಹೇಳಿದ್ದೇಕೆ ?
ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುವವನೇ ನಿಜವಾದ ಹೀರೊ ! ► ಸ್ಟಾರ್ ಗಳಿಂದ ಸ್ಫೂರ್ತಿ ಪಡೆಯಿರಿ, ಶಾಕ್ ಅಲ್ಲ
"ಬರ್ತ್‌ಡೇ ಅಂದರೆ ನನಗೀಗ ಭಯ ಶುರು ಆಗುತ್ತಿದೆ. ನಿಜ ಹೇಳಬೇಕು ಅಂದರೆ, ನನ್ನ ಬಗ್ಗೆ ನನಗೆ ಅಸಹ್ಯ ಆಗಿ ಬಿಟ್ಟಿದೆ. ನನ್ನ ಅಭಿಮಾನಿಗಳು ಬ್ಯಾನರ್, ಕಟೌಟ್ ನಿಲ್ಲಿಸಿ ಅಭಿಮಾನ ವ್ಯಕ್ತಪಡಿಸಬೇಕು ಎಂದು ನಾನೂ ಯಾವತ್ತೂ ಇಷ್ಟಪಡುವುದಿಲ್ಲ" ಹೀಗೆ ಹೇಳಿದ್ದು ಖ್ಯಾತ ನಟ ಯಶ್.
ಅವರು ಇದನ್ನು ಹೇಳಿದ್ದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ. ಅದಕ್ಕೆ ಕಾರಣ - ಅಲ್ಲಿನ ಅವರ ಮೂವರು ಅಭಿಮಾನಿಗಳು ಹಿಂದಿನ ರಾತ್ರಿ ಅವರ ಕಟೌಟ್ ನಿಲ್ಲಿಸಲು ಸಿದ್ಧತೆ ನಡೆಸಿದ್ದ ವೇಳೆ ವಿದ್ಯುತ್ ಪ್ರವಹಿಸಿ ಸಾವಿಗೀಡಾಗಿದ್ದು. ನಟ ಯಶ್ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಕಟೌಟ್ ನಿಲ್ಲಿಸಲು ಸಿದ್ಧತೆ ನಡೆಸಿದ್ದ ವೇಳೆ ವಿದ್ಯುತ್ ಪ್ರವಹಿಸಿ ಮೂವರು ಯುವಕರು ಮೃತಪಟ್ಟ ಘಟನೆ ಸೂರಣಗಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದ ಅಂಬೇಡ್ಕರ್ ನಗರದ ಯಶ್ ಅಭಿಮಾನಿಗಳು ಭಾನುವಾರ ಮಧ್ಯರಾತ್ರಿ ಬೃಹತ್ ಗಾತ್ರದ ಫ್ಲೆಕ್ಸ್ ಅಳವಡಿಸುವುದಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಕಟೌಟ್ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹನುಮಂತ ಹರಿಜನ, ಮುರಳಿ ನಡುವಿನಮನಿ ಮತ್ತು ನವೀನ ಗಾಜಿ ಮೃತ ಯುವಕರು. ಈ ವೇಳೆ ಇನ್ನೂ ಮೂರು ಮಂದಿ ಗಂಭಿರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಭಿಮಾನಿಗಳ ಸಾವಿನ ಸುದ್ದಿ ಕೇಳಿ ಆಘಾತಕ್ಕೆ ಒಳಗಾದ ನಟ ಯಶ್ ಪ್ರವಾಸ ರದ್ದುಗೊಳಿಸಿ, ಸೋಮವಾರ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿದರು.
ಯಶ್ ಅವರನ್ನು ನೋಡಿದ ತಕ್ಷಣ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಕ್ಕಳನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ಪೋಷಕರನ್ನು ಕಂಡು ಯಶ್ ಕೂಡ ಭಾವುಕರಾದರು. ಅಭಿಮಾನಿಗಳ ಸಾವಿನ ಸುದ್ದಿ ಕೇಳಿ ಸೋಮವಾರ ಸಂಜೆ ವೇಳೆ ಸೂರಣಗಿಗೆ ಬಂದ ನಟ ಯಶ್, ಮೊದಲಿಗೆ ಮುರಳಿ ಮನೆಗೆ ಭೇಟಿ ನೀಡಿದರು. ಅವರ ತಂದೆ ಮಗ ಮೃತಪಟ್ಟ ಘಟನೆಯನ್ನು ವಿವರಿಸುವಾಗ ಯಶ್ ಕಣ್ಣುಗಳಲ್ಲಿ ದುಃಖ ಮನೆಮಾಡಿತ್ತು. ಬಳಿಕ ನವೀನ ಮತ್ತು ಹನುಮಂತಪ್ಪ ಅವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರು.
‘ಕೋವಿಡ್ ಹೆಚ್ಚುತ್ತಿದೆ ಎಂಬ ಕಾರಣಕ್ಕೆ ನಾನು ಈ ವರ್ಷ ಜನರಿಂದ ದೂರ ಉಳಿದು ಕುಟುಂಬದ ಸದಸ್ಯರ ಜತೆಗಷ್ಟೇ ಜನ್ಮದಿನ ಆಚರಿಸಲು ನಿರ್ಧರಿಸಿದ್ದೆ. ಜತೆಗೆ ಅಭಿಮಾನಿಗಳು ಕೇವಲ ನನ್ನ ಬಗ್ಗೆ ಯೋಚನೆ ಮಾಡಿಕೊಂಡು ಇರಬಾರದು. ಅವರೂ ನಮ್ಮಂತೆ ಬೆಳೆಯಬೇಕು ಎಂಬ ಆಸೆಯಿಂದ ನಾನು ಆದಷ್ಟೂ ಜನರಿಂದ ದೂರವೇ ಉಳಿಯಲು ಬಯಸುವೆ. ಆದರೂ, ಪ್ರತಿವರ್ಷ ಈ ಬಗೆಯ ಒಂದಿಲ್ಲೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಕಾರಣಕ್ಕೆ ಜನ್ಮದಿನಾಚರಣೆ ಅಂದರೆ ಭಯ ಶುರುವಾಗಿದೆ’ ಎಂದರು.
ಮೃತ ಯುವಕರ ಕುಟುಂಬಕ್ಕೆ ನೆರವಾಗುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸೂತಕದ ಮನೆಯಲ್ಲಿ ನಿಂತು ಏನು ಬೇಕಾದರೂ ಘೋಷಣೆ ಮಾಡಬಹುದು; ಅದೇನು ದೊಡ್ಡದಲ್ಲ. ಆದರೆ, ಮನೆಗೆ ಆಧಾರಸ್ತಂಭವಾಗಿದ್ದ ಮಕ್ಕಳನ್ನು ಕಳೆದುಕೊಂಡಿರುವ ಅವರ ಕುಟುಂಬಕ್ಕೆ ನಿಜವಾಗಿ ಏನು ಅವಶ್ಯಕತೆ ಇದೆ ಎಂಬುದನ್ನು ಅರಿತುಕೊಂಡು ಅವರಿಗೆ ನೆರವಾಗುವೆ’ ಎಂದು ತಿಳಿಸಿದರು.
‘ಅಭಿಮಾನಿಗಳ ತಂದೆ ತಾಯಿಗಳ ಮೇಲಿನ ಗೌರವದಿಂದ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿರುವೆ. ಯಾರೇ ಆಗಲಿ ಅಭಿಮಾನ ತೋರಿಸಲು ಹೋಗಿ ಜೀವಕ್ಕೆ ಅಪಾಯ ಮಾಡಿಕೊಳ್ಳಬೇಡಿ. ಕಟೌಟ್, ಬ್ಯಾನರ್ ಬೇಡವೇ ಬೇಡ. ಕಾರಿನಲ್ಲಿ ಹೋಗುವಾಗಿ ಚೇಸ್ ಮಾಡಿಕೊಂಡು ಬರುವುದನ್ನೂ ಬಿಟ್ಟುಬಿಡಿ. ಮನೆಯಲ್ಲಿರುವ ತಂದೆ ತಾಯಿಗಳ ಬಗ್ಗೆ ಗಮನ ಕೊಡಿ’ ಎಂದು ಯಶ್ ಅಭಿಮಾನಿಗಳಲ್ಲಿ ಮನವಿ ಮಾಡಿದರು.
ವಿದ್ಯುತ್ ಪ್ರವಹಿಸಿ ಮೃತಪಟ್ಟ ಮೂವರು ಯುವಕರನ್ನು ಸೋಮವಾರ ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು. ಈ ವೇಳೆ ಗ್ರಾಮದಲ್ಲಿ ಶೋಕ ಮಡುಗಟ್ಟಿತ್ತು. ಮೃತ ಯುವಕರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ₹2 ಲಕ್ಷ ಹಾಗೂ ಗಾಯಾಳುಗಳ ಕುಟುಂಬಕ್ಕೆ ₹50 ಸಾವಿರ ಪರಿಹಾರ ಘೋಷಣೆ ಮಾಡಿದೆ.
ಶಿರಹಟ್ಟಿ ಮೀಸಲು ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ವೈಯಕ್ತಿಕವಾಗಿ ಮೃತ ಕುಟುಂಬಗಳಿಗೆ ತಲಾ ₹25 ಸಾವಿರ ಹಣ ನೀಡಿದ್ದಾರೆ. ಜತೆಗೆ ಕಾಂಗ್ರೆಸ್ ಮುಖಂಡ ಆನಂದ ಗಡ್ಡದೇವರ ಮಠ ಅವರ ಅಭಿಮಾನಿ ಸಂಘದವರು ಮೃತರ ಕುಟುಂಬಗಳಿಗೆ ತಲಾ ₹50 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ.
ಈ ಘಟನೆಯ ವಿವರ ಹಾಗು ಮೃತ ಪಟ್ಟವರ ಹಿನ್ನೆಲೆ ನೋಡಿದರೆ ಎಂತಹ ಕಲ್ಲು ಹೃದಯವೂ ಕರಗಿ ನೀರಾಗುತ್ತೆ. ತಮ್ಮ ಪ್ರಾಣವನ್ನೇ ಕಳಕೊಂಡ ಆ ಮೂವರೂ ತೀರಾ ದುರ್ಬಲ ಸಮುದಾಯಗಳಿಂದ ಬಂದವರು. ಮೂವರೂ ಕೂಲಿ ಕೆಲಸ ಮಾಡಿಕೊಂಡಿದ್ದ ಅತ್ಯಂತ ಬಡ ಕುಟುಂಬದವರು. ಅವರೇ ಕುಟುಂಬಗಳ ಆಧಾರವಾಗಿದ್ದವರು.
ಇನ್ನೂ ಬಾಳಿ ಬದುಕಬೇಕಾದ, ಕುಟುಂಬಕ್ಕೆ ಆಸರೆಯಾಗಬೇಕಾದ ಮೂವರು ಕ್ಷಣದಲ್ಲಿ ಇಲ್ಲವಾಗಿದ್ದಾರೆ. ಅವರ ಮನೆಯ ದೀಪ ಆರಿ ಹೋಗಿದೆ.
ಆ ಮನೆಯವರಿಗೆ ದಿಕ್ಕಿಲ್ಲದಂತಾಗಿದೆ. ಈ ಘಟನೆಯ ಬಳಿಕವಾದರೂ ನಮ್ಮ ಜನರು ಸಿನಿಮಾಗಳ ಬಗ್ಗೆ, ಕ್ರಿಕೆಟ್ ಬಗ್ಗೆ ಇಂತಹ ಹುಚ್ಚು ಅಭಿಮಾನದ ಬಗ್ಗೆ ಗಂಭೀರವಾಗಿ ಯೋಚಿಸುವಂತಾದರೆ ಆ ಮೂವರ ಬಲಿದಾನಕ್ಕೆ ಏನಾದರೂ ಅರ್ಥ ಬರಲಿದೆ.
ನಟರು, ಕ್ರಿಕೆಟಿಗರು ಬಹಳ ಶ್ರಮ ಹಾಕ್ತಾರೆ, ಪ್ರಯತ್ನ ಪಡ್ತಾರೆ. ಕೋಟಿಗಟ್ಟಲೆ ಜನರಿರುವ ಈ ದೇಶದಲ್ಲಿ ಹದಿನೈದು ಜನ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗ್ತಾರೆ. ಐದೋ ಹತ್ತೋ ಮಂದಿ ಸಿನಿಮಾದಲ್ಲಿ ಸೂಪರ್ ಸ್ಟಾರ್ ಗಳಾಗ್ತಾರೆ. ಅವರನ್ನು ಸಿನಿಮಾದಲ್ಲಿ, ಕ್ರಿಕೆಟ್ ಪಂದ್ಯದಲ್ಲಿ ನೋಡಿ ಆನಂದಿಸಿ ಸ್ಫೂರ್ತಿ ಪಡೆದು ತಮ್ಮ ಬದುಕು ರೂಪಿಸಿಕೊಳ್ಳಬೇಕೇ ವಿನಃ ಅವರ ಅಂಧ ಆರಾಧಕರಾಗಬಾರದು.
ಅವರನ್ನು ತಮ್ಮ ದೇವರು ಮಾಡಿಕೊಳ್ಳಬಾರದು. ಅವರ ಹಿಂದೆ ಬಿದ್ದು ತಮ್ಮ ಜೀವನ ಬರ್ಬಾದ್ ಮಾಡಿಕೊಳ್ಳಲೇ ಬಾರದು.
ಸ್ಟಾರ್ ಗಳಿಗೆ ಅವರ ಜೀವನ, ಜನರಿಗೆ ಅವರ ಜೀವನ. ಅಷ್ಟೇ. ಯಾರೂ ಯಾರಿಗೂ ಆಸರೆಯಾಗೋದಿಲ್ಲ. ನಿಮ್ಮ ಮನೆಗೇ ನೀವೇ ಸಂಪಾದಿಸಿ ದಿನಸಿ ತೆಗೆದುಕೊಂಡು ಹೋಗಬೇಕು. ನಿಮ್ಮ ಮನೆಯ ಖರ್ಚನ್ನು, ಸಮಸ್ಯೆಗಳನ್ನು ನೀವೇ ನೋಡಿಕೊಳ್ಳಬೇಕು. ಅದನ್ನು ನೋಡಿಕೊಳ್ಳಲು ಯಾವ ಸ್ಟಾರ್ ಗಳೂ ಬರಲ್ಲ. ಬರೋದು ಸಾಧ್ಯವೂ ಇಲ್ಲ. ಅವರಿಗೆ ಅವರ ಮನೆ ನೋಡಿಕೊಳ್ಳಬೇಕು.
ಅವರೂ ನಮ್ಮಂತೆ ಮನುಷ್ಯರು. ಅವರಿಗೆ ಒಂದಿಷ್ಟು ಹೆಚ್ಚು ಅವಕಾಶ ಸಿಕ್ಕಿದೆ. ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ ಅಷ್ಟೇ. ಅವರ ಬಗ್ಗೆ ಮೆಚ್ಚುಗೆ ಇರಲಿ. ಅಭಿಮಾನ ಇರಲಿ. ಅವರ ಸಿನಿಮಾ ಬಂದರೆ ನೋಡಿ. ಖುಷಿ ಪಡಿ. ಅಷ್ಟೇ. ಅದಕ್ಕಿಂತ ಹೆಚ್ಚು ನೀವು ಅವರ ಹಿಂದೆ ಬಿದ್ದರೆ,
ನೀವೇ ನಿಮ್ಮ ಜೀವನ ಹಾಳು ಮಾಡಿಕೊಳ್ತೀರಿ.
ಸಿನಿಮಾ ಹಾಗು ಕ್ರಿಕೆಟ್ ಸ್ಟಾರ್ ಗಳ ಗುಂಗಿನಲ್ಲಿ ಈ ದೇಶದ ಸಾವಿರಾರು ಯುವಜನರು ದಾರಿ ತಪ್ಪಿದ್ದಾರೆ.
ಅವರ ವಿಲಾಸಿ ಜೀವನ, ಅವರ ದೊಡ್ಡ ದೊಡ್ಡ ಕಾರ್ ಗಳು, ಅವರ ವೈಭವದ ಕಾರ್ಯಕ್ರಮಗಳು, ಅವರ ಬಟ್ಟೆ ಬರೆ - ಇವೆಲ್ಲವನ್ನೂ ನೋಡಿ ಭ್ರಮಾ ಲೋಕದಲ್ಲಿ ಬದುಕುತ್ತಿರುವ ಲಕ್ಷಾಂತರ ಜನರು ಇಲ್ಲಿದ್ದಾರೆ.
ಅವರೆಲ್ಲರೂ ಯಶ್ ನಿನ್ನೆ ಹೇಳಿರುವ ಮಾತುಗಳನ್ನು ಸರಿಯಾಗಿ ಕೇಳಿಕೊಳ್ಳಬೇಕು. ಸ್ಟಾರ್ ಗಳ ಜನ್ಮದಿನ ನಿಮ್ಮ ಸಾವಿನ ದಿನವಾಗೋದು ಬೇಡ.
ಅದು ನಿಮ್ಮ ಮನೆಯವರ ಆಕ್ರಂದನದ ದಿನ ಆಗೋದು ಬೇಡ. ಯಾವ ಸ್ಟಾರ್ ಗಳೂ ಅದನ್ನು ಬಯಸೋದಿಲ್ಲ. ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ದುಡಿದು, ತನ್ನ ತಂದೆ ತಾಯಿಗಳನ್ನು, ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವವನಿಗಿಂತ ದೊಡ್ಡ ಸ್ಟಾರ್ ಯಾರೂ ಇಲ್ಲ.
ಯಶ್ ಸಿನಿಮಾದಲ್ಲಿ ಹೇಳಿರುವ ಡೈಲಾಗ್ ಎಲ್ಲರೂ ನೆನಪಿಡುತ್ತಾರೆ. ಆದರೆ ಅವರು ನಿನ್ನೆ ಸೂರಣಗಿ ಗ್ರಾಮದಲ್ಲಿ ಹೇಳಿರುವ ಡೈಲಾಗ್ ಅನ್ನು ಎಲ್ಲ ಸಿನಿಮಾ ಹಾಗು ಕ್ರಿಕೆಟ್ ಭಕ್ತರು ಸರಿಯಾಗಿ ನೆನಪಿಟ್ಟುಕೊಳ್ಳಬೇಕು. ಸ್ಟಾರ್ ಗಳಿಂದ ಸ್ಫೂರ್ತಿ ಪಡೆಯೋದು ಒಳ್ಳೆಯದು. ಆದರೆ ಸ್ಟಾರ್ ಗಳಿಂದಾಗಿ ವಿದ್ಯುತ್ ಶಾಕ್ ಪಡೆಯೋದು ಅತಿದೊಡ್ಡ ದುರಂತ. ತನ್ನ ಜೀವ, ತನ್ನವರ ಜೀವನ ಕಳಕೊಳ್ಳುವಷ್ಟು ಮೌಲ್ಯದ ಅಭಿಮಾನ ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಹಾಗಾಗಲೇಬಾರದು.