ಕೆಟ್ಟದನ್ನು ಮಾಡೋರೆಲ್ಲಾ ಮುಸ್ಲಿಂ ಹೆಸರು ಬಳಸುತ್ತಾರೆ ಏಕೆ ?
► ಆಮಿನಾ ಹೆಸರಲ್ಲಿ ಅತ್ಯಾಚಾರ ಬೆದರಿಕೆ ಹಾಕುವ ರಾಮನಾಗೇಶ್ ! ► ಆರೋಪಿ ಮುಸ್ಲಿಂ ಆಗಿದ್ದರೆ ಹೆಡ್ ಲೈನ್ ನಲ್ಲೇ ಹೆಸರು, ಇಲ್ದಿದ್ರೆ ಹೆಸರಿಲ್ಲ !
ಸಾಂದರ್ಭಿಕ ಚಿತ್ರ (PTI)
ಭಾರತದಲ್ಲಿ ಮುಸ್ಲಿಂ ದ್ವೇಷ ಹರಡುವುದು ಇತ್ತೀಚಿನ ಕೆಲವು ವರ್ಷಗಳಲ್ಲಿ ನಿರಂತರವಾಗಿ, ಅತ್ಯಂತ ವ್ಯವಸ್ಥಿತವಾಗಿ ನಡೆದುಕೊಂಡೇ ಬಂದಿದೆ.
ಅದರ ಫಲವಾಗಿ ನಮ್ಮ ನಡುವೆ ಇಸ್ಲಾಮೋಫೋಬಿಯಾ ಕೂಡ ತೀವ್ರಗೊಳ್ತಾ ಇದೆ. ಕೆಟ್ಟದು ಏನೇ ನಡೆದರೂ ಅದನ್ನು ಮುಸ್ಲಿಂರು ಮಾಡಿದರು ಅಂತ ಬಿಂಬಿಸೋ ಪ್ರಯತ್ನಗಳು ನಡೀತಾನೇ ಇರೋದನ್ನ ನೋಡಬಹುದಾಗಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೆಟ್ಟದನ್ನು ಮಾಡೋರೆಲ್ಲಾ ಮುಸ್ಲಿಂ ಹೆಸರು ಬಳಸಿ ಮಾಡ್ತಾ ಇರೋದನ್ನೂ ಕೂಡ ನೋಡ್ತಾ ಇದ್ದೇವೆ. ಯಾಕೆ ಹೀಗೆ ದುಷ್ಟ ಕೆಲಸವನ್ನೆಲ್ಲ ಮುಸ್ಲಿಮ್ ಹೆಸರು ಬಳಸಿ ಮಾಡಲಾಗ್ತಾ ಇದೆ?. ಯಾಕೆಂದರೆ ಅದು ಕೂಡ ಮುಸ್ಲಿಂ ದ್ವೇಷ ಹರಡುವುದರ ಒಂದು ಭಾಗವೇ ಆಗಿದೆ.
ಏನು ಮಾಡಲಾಗಿದೆ ಅನ್ನೋದಕ್ಕಿಂತ ಮಾಡಿದೋರು ಯಾರು ಅನ್ನೋದೇ ಈಗ ಎಲ್ಲರ ಗಮನ ಸೆಳೆಯೋದು. ಹಾಗಾಗಿ ಅದು ಮುಸ್ಲಿಂ ವ್ಯಕ್ತಿಯೊಬ್ಬ ಮಾಡಿರೋದು ಅನ್ನಿಸಿದ ಕೂಡಲೇ ಅದು ಹರಡಿಕೊಳ್ಳೋ ವೇಗವೇ ಬೇರೆ. ಆಗೋ ಪರಿಣಾಮವೇ ಬೇರೆ.
ಆ ಥರದ ಅತ್ಯಂತ ಕೆಟ್ಟ ಸ್ಥಿತಿಯನ್ನ ದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಮತ್ತು ಮುಸ್ಲಿಂರ ವಿರುದ್ಧ ದ್ವೇಷದ ಕಿಡಿ ಆರಬಾರದು ಅನ್ನೋ ಹಾಗೆ ಪ್ರಚೋದಿಸೋ ಕೆಲಸ ಆಗ್ತಾ ಇದೆ.
ಮೊನ್ನೆಯ ಒಂದು ಉದಾಹರಣೆ ನೋಡೋಣ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರಿಗೆ ಅಕ್ಟೋಬರ್ 27ರಿಂದ ಅಕ್ಟೋಬರ್ 31ರ ಅವಧಿಯಲ್ಲಿ ಒಂದರ ಬೆನ್ನಿಗೊಂದರ ಹಾಗೆ ಮೂರು ಕೊಲೆ ಬೆದರಿಕೆಗಳು ಬಂದವು. ಆ ಕೊಲೆ ಬೆದರಿಕೆ ಇಮೇಲ್ಗಳು ಬಂದದ್ದು ಶಾದಾಬ್ ಖಾನ್ ಅನ್ನೋ ಹೆಸರಿನಲ್ಲಿ. ಆದರೆ, ಹಾಗೆ ಬೆದರಿಕೆ ಇಮೇಲ್ಗಳನ್ನು ಕಳುಹಿಸಿದವನು ರಾಜ್ವೀರ್ ಕಾಂತ್ ಅನ್ನೋ 21 ವರ್ಷದ ವಿದ್ಯಾರ್ಥಿ ಅನ್ನೋದು ಪೊಲೀಸ್ ತನಿಖೆಯಲ್ಲಿ ಬಹಳ ಬೇಗ ಪತ್ತೆಯಾಯ್ತು.
ತನ್ನ ಸ್ನೇಹಿತರಿಗೆ ತೋರಿಸೋದಕ್ಕೋಸ್ಕರ ಆತ ಈ ಬೆದರಿಕೆ ಮೇಲ್ಗಳನ್ನು ವರ್ಚುವಲ್ ಖಾಸಗಿ ನೆಟ್ವರ್ಕ್ ಅಥವಾ ವಿಪಿಎನ್ ಬಳಸಿ ಮಾಡಿದ್ದ ಅನ್ನೋದನ್ನ ಪೊಲೀಸರು ಬಯಲು ಮಾಡಿದ್ದರು.
ಶಾದಾಬ್ ಖಾನ್ ಅನ್ನೋ ಹೆಸರಿನ ಪಾಕಿಸ್ತಾನಿ ಆಟಗಾರನಿದ್ದ ಕ್ರಿಕೆಟ್ ಪಂದ್ಯ ನೋಡ್ತಿದ್ದಾಗ ಈ ಕೆಲಸಕ್ಕೆ ಅದೇ ಹೆಸರು ಬಳಸೋ ಯೋಚನೆ ಬಂತು ಅಂತ ಆತ ಪೊಲೀಸ್ ತನಿಖೆ ವೇಳೆ ಬಾಯ್ಬಿಟ್ಟಿದ್ದ.
ಹೀಗೆ ಕೆಟ್ಟ ಕೆಲಸಕ್ಕೆ ಸುಳ್ಳು ಮುಸ್ಲಿಂ ಗುರುತು ಬಳಸೋದು ಕಳೆದ ಕೆಲ ವರ್ಷಗಳಿಂದ ನಡೀತಾ ಇದೆ. ತಮ್ಮನ್ನ ತಿರಸ್ಕರಿಸಿದ ಮಹಿಳೆಯರ ವಿರುದ್ಧ ಸೇಡು ತೀರಿಸಿಕೊಳ್ಳುವವರಿಂದ ಹಿಡಿದು, ವೈರಲ್ ಆಗುವಂಥ ಪ್ರಚೋದನಕಾರಿ ವೀಡಿಯೊಗಳನ್ನು ಮಾಡುವವರವರೆಗೆ ಎಲ್ಲರೂ ಮುಸ್ಲಿಮ್ ಹೆಸರನ್ನು ಬಳಸ್ತಿದ್ದಾರೆ.
ಹೀಗೆ ಎಲ್ಲದಕ್ಕೂ ಮುಸ್ಲಿಂ ಸಮುದಾಯದವರು ಕಾರಣ ಅನ್ನೋ ಹಾಗೆ ಬಿಂಬಿಸೋದು ಮತ್ತು ನಿಜ ಗೊತ್ತಾಗೋ ಮೊದಲೇ ಜನರನ್ನು ಪ್ರಚೋದಿಸಿಬಿಡೋದು ಇಲ್ಲಿನ ಹಿಕಮತ್ತು. ಯಾವುದೇ ಪ್ರಕರಣದ ಶಂಕಿತ ಅಥವಾ ಆರೋಪಿಯ ಮುಸ್ಲಿಂ ಗುರುತನ್ನು ಉದ್ದೇಶಪೂರ್ವಕವಾಗಿ ಒತ್ತಿಹೇಳೋದರ ಹಿಂದೆ ಇರೋದು ಆ ಸಮುದಾಯದ ವಿರುದ್ಧ ದ್ವೇಷ ಹೆಚ್ಚಿಸೋ ಉದ್ದೇಶ ಅಂತಾರೆ ಪತ್ರಕರ್ತ ಅಲಿಶಾನ್ ಜಾಫ್ರಿ.
ಆಪಾದಿತ ವ್ಯಕ್ತಿ ನಿಜವಾಗಿ ಮುಸ್ಲಿಂ ಆಗಿರುವ ಪ್ರಕರಣಗಳಲ್ಲಿ ಕೂಡ ಸುದ್ದಿವಾಹಿನಿಗಳು ಹೆಡ್ಲೈನ್ ಗಳಲ್ಲಿ ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್ಗಳಲ್ಲಿ ನೇರವಾಗಿ ಆರೋಪಿಯ ಹೆಸರನ್ನ ಹೇಳ್ತವೆ.
ಆದರೆ ಬೇರೆ ಪ್ರಕರಣಗಳಲ್ಲಾದರೆ ಆರೋಪಿಯ ಹೆಸರಿನ ಪ್ರಸ್ತಾಪವೇ ಇರೋದಿಲ್ಲ. ಮುಸ್ಲಿಂ ಹೆಸರಿನಲ್ಲಿ ದುಷ್ಟ ಕೆಲಸಗಳನ್ನು ಮಾಡೋ ರೀತಿ ಕೂಡ ಇಂಥದೇ ಮನಃಸ್ಥಿತಿಯ ಮುಂದುವರಿಕೆ. ವ್ಯಕ್ತಿಯೊಬ್ಬ ತಾನು ಮುಸ್ಲಿಂ ಎಂದು ತೋರಿಸಿಕೊಂಡು ಇಂಥ ಕೃತ್ಯಗಳನ್ನ ಮಾಡಿದಾಗ ಪರಿಣಾಮ ಇನ್ನೂ ತೀವ್ರವಾಗಿರುತ್ತದೆ ಅಂತಾರೆ ಜಾಫ್ರಿ.
ಉದಾಹರಣೆಗೆ, ಲಿವ್-ಇನ್ ಗೆಳೆಯನಾಗಿದ್ದ ಮುಸ್ಲಿಂ ವ್ಯಕ್ತಿಯಿಂದ ನಡೆದ ಶ್ರದ್ಧಾ ವಾಕರ್ ಕೊಲೆ ಬಗ್ಗೆ ಉತ್ತರ ಪ್ರದೇಶದ ವಿಕಾಸ್ ಕುಮಾರ್ ಅನ್ನೋನು ಯೂಟ್ಯೂಬ್ ವೀಡಿಯೊದಲ್ಲಿ ರಶೀದ್ ಖಾನ್ ಅನ್ನೋ ಹೆಸರಿನಿಂದ ಆಕ್ಷೇಪಾರ್ಹ ಮಾತುಗಳನ್ನಾಡಿದ್ದ.
ಕಳೆದ ವರ್ಷ ನವೆಂಬರ್ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಆ ವೀಡಿಯೋದಲ್ಲಿ, ತನ್ನನ್ನು ಖಾನ್ ಅಂತಾ ಹೇಳಿಕೊಂಡಿದ್ದ ವಿಕಾಸ್ ಕುಮಾರ್, ಕೊಲೆಗಾರ ಕೋಪದಲ್ಲಿದ್ದರೆ ಯಾರನ್ನಾದರೂ ಕೊಲೆ ಮಾಡೋದು ಮತ್ತು ದೇಹವನ್ನ ಕತ್ತರಿಸೋದು ಸಾಮಾನ್ಯ ಅಂದಿದ್ದ.
ಅತನನ್ನು ಅರೆಸ್ಟ್ ಮಾಡಿದ ಮೇಲೆ ಎರಡು ವಿಚಾರಗಳು ಗಮನಕ್ಕೆ ಬಂದಿದ್ದವು. ಒಂದು, ಆತ ಆ ಮಾತುಗಳನ್ನ ಮುಸ್ಲಿಂ ಹೆಸರಲ್ಲಿ ಹೇಳೋಕ್ಕೆ ಆ ವೀಡಿಯೊ ಮಾಡಿಸಿದವರ ಪ್ರಚೋದನೆ ಇತ್ತು. ಆತ ಮೊದಲು ತನ್ನ ನಿಜವಾದ ಹೆಸರನ್ನೇ ಹೇಳಿದ್ದರೂ ವೀಡಿಯೊ ಮಾಡುತ್ತಿದ್ದವರು ಅವನನ್ನು ಗೇಲಿ ಮಾಡಿ " ನೀನು ಸುಳ್ಳು ಹೇಳ್ತಾ ಇದ್ದೀಯ, ನೀನು ವಿಕಾಸ್ ಅಲ್ಲ, ನೀನೊಬ್ಬ ಮುಸ್ಲಿಂ" ಎಂದು ಹೇಳಿ ಹಾಗೆ ಹೇಳಲು ಒತ್ತಡ ಹಾಕಿದ್ದರು.
ಎರಡನೆಯದಾಗಿ, ಆತನ ವೀಡಿಯೊ ಹಾಕಿದ್ದ ಯೂಟ್ಯೂಬ್ ಚಾನೆಲ್ ಅನ್ನು ನಡೆಸ್ತಿದ್ದ ಅಂಕುರ್ ಆರ್ಯ ಅನ್ನೋ ವ್ಯಕ್ತಿ ನಿಯಮಿತವಾಗಿ ಅಂಥದೇ ಪ್ರಚೋದನಕಾರಿ ವೀಡಿಯೊಗಳನ್ನೇ ಪೋಸ್ಟ್ ಮಾಡುತ್ತಿದ್ದ.
ಆರ್ಯ ಥರದವರ ಯೂಟ್ಯೂಬ್ ಚಾನೆಲ್ಗಳಲ್ಲಿ ಸೂಕ್ಷ್ಮ ವಿಷಯಗಳ ಬಗ್ಗೆ ಯಾವುದೋ ಮುಸ್ಲಿಂ ವ್ಯಕ್ತಿಯ ಪ್ರತಿಕ್ರಿಯೆ ಪಡೆಯೋ ವೀಡಿಯೊಗಳೇ ತುಂಬಿರ್ತವೆ. ಏಕೆಂದರೆ ಅಂಥವೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿ ಮಾಡೋದು. ಅಂಥ ಎಷ್ಟೋ ವೀಡಿಯೊಗಳನ್ನ ಬಿಜೆಪಿ ನಾಯಕರು, ಆ ಪಕ್ಷದ ಅಧಿಕೃತ ಹ್ಯಾಂಡಲ್ಗಳು ಶೇರ್ ಮಾಡೋದೂ ಸಾಮಾನ್ಯ.
ಯೂಟ್ಯೂಬ್ ಚಾನೆಲ್ಗಳ ಇಂತಹ ವೀಡಿಯೊಗಳು ಬಹಳ ಬೇಗ ದ್ವೇಷ ಹರಡುತ್ತವೆ. ಹಿಂದೂಗಳು ಮುಸ್ಲಿಮರ ವಿರುದ್ಧ ಹೊಂದಿರಬಹುದಾದ ಪೂರ್ವಾಗ್ರಹ ಇಂಥ ವೀಡಿಯೊಗಳಿಂದ ಇನ್ನೂ ಜಾಸ್ತಿಯೇ ಆಗುತ್ತದೆ.
ಇದೇ ಅಕ್ಟೋಬರ್ನಲ್ಲಿ ವೈರಲ್ ಆಗಿದ್ದ ವೀಡಿಯೊವೊಂದರಲ್ಲಿ ಜಾವೇದ್ ಹುಸೇನ್ ಅಂತ ಹೇಳಿಕೊಂಡಿದ್ದ ವ್ಯಕ್ತಿಯೊಬ್ಬ ಹಿಂದೂ ಧರ್ಮದ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನ ಮಾಡಿದ್ದ. ಹರಿದ್ವಾರದಲ್ಲಿ ಆತನನ್ನು ಬಂಧಿಸಿದ ನಂತರ, ಆತನ ನಿಜವಾದ ಹೆಸರು ದಿಲೀಪ್ ಬಘೇಲ್ ಅನ್ನೋದು ಗೊತ್ತಾಯ್ತು. ಅಷ್ಟೇ ಅಲ್ಲ, ಹಾಗೆ ಮಾತಾಡೋಕೆ ಆತನಿಗೆ ಯೂಟ್ಯೂಬರ್ ಒಬ್ಬ ಹಣ ನೀಡಿದ್ದ ಅನ್ನೋ ವಿಚಾರ ಕೂಡ ಬಯಲಿಗೆ ಬಂತು.
ಸಮಾಜದಲ್ಲಿ ಶಾಂತಿ ಕದಡೋ ಉದ್ದೇಶದಿಂದ ಧಾರ್ಮಿಕ ಸ್ಥಳಗಳಲ್ಲಿ ಉದ್ದೇಶಪೂರ್ವಕವಾಗಿ ಮಾಂಸ ಇಡೋ ಘಟನೆಗಳು ನಡೆಯೋದನ್ನು ಕೇಳಿರ್ತೀವಿ. ಮುಸ್ಲಿಂ ಹೆಸರು ಬಳಸಿ ಮಾಡೋ ಕೆಲಸಗಳು ಕೂಡ ಅಂಥ ಶಾಂತಿ ಕದಡೋ ಘಟನೆಗಳಿಗೆ ಸಮ ಅನ್ನೋದು ತಜ್ಞರ ಅಭಿಪ್ರಾಯ.
ಶಿಕ್ಷಣ ತಜ್ಞ ರಾಮ್ ಪುನಿಯಾನಿ ಹೇಳೋ ಪ್ರಕಾರ, ಹಣಕ್ಕಾಗಿ ಇಂಥ ಕೆಲಸಗಳನ್ನು ಮಾಡೋಕೆ ಎಷ್ಟೋ ಮಂದಿ ತಮ್ಮ ಬಡತನದ ಕಾರಣದಿಂದಾಗಿ ರೆಡಿ ಇರ್ತಾರೆ.
ಗೋವಿಂದ್ ನಿಹಲಾನಿಯವರ ತಮಸ್ ಸಿನಿಮಾದಲ್ಲಿ ನೋಡಿರ್ತೀರಿ. ಹಂದಿಯ ಶವವನ್ನು ಮಸೀದಿಯಲ್ಲಿ ಇರಿಸಿದ್ದಕ್ಕಾಗಿ ಆರೋಪಿ ಸ್ಥಾನದಲ್ಲಿ ನಿಲ್ಲೋನು ಒಬ್ಬ ದಲಿತ ವ್ಯಕ್ತಿ. ಹೀಗೆ ಮುಸ್ಲಿಂ ವ್ಯಕ್ತಿಯ ಹಾಗೆ ಸೋಗು ಹಾಕೋ ಘಟನೆಗಳು ಮುಸ್ಲಿಮರ ವಿರುದ್ಧ ದ್ವೇಷ ಹರಡುತ್ತವೆ ಮತ್ತು ಆ ದ್ವೇಷ ಅತ್ಯಂತ ತೀವ್ರವಾಗಿರುತ್ತೆ.
ಇವತ್ತಿನ ಸಮಾಜದಲ್ಲಿ ಎಂಥ ಸ್ಥಿತಿ ನಿರ್ಮಾಣ ಮಾಡಲಾಗಿದೆ ಅಂದರೆ, ಅಪರಾಧಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಹೆಸರು ಕೇಳಿಬಂದೊಡನೆ, ಆ ವ್ಯಕ್ತಿ ಏನಾದರೂ ತಪ್ಪು ಮಾಡಿರಲೇಬೇಕು ಅಂತ ಜನ ನಂಬಿಬಿಡೋ ಹಾಗಾಗಿದೆ. ಇದರ ಜೊತೆಗೇ ಪೊಲೀಸರು ಕೂಡ ಕೋಮು ಪಕ್ಷಪಾತಿಗಳೇ ಆಗಿದ್ದರಂತೂ ಮುಗಿದೇ ಹೋಯ್ತು. ತನಿಖೆ ಹಳ್ಳ ಹಿಡಿಯೋದು ಗ್ಯಾರಂಟಿ. ಮುಸ್ಲಿಂರು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲೋ ಹಾಗಾಗೋದು ತಪ್ಪೋದಿಲ್ಲ.
ತೀರಾ ಇತ್ತೀಚಿನ ಒಂದು ಉದಾಹರಣೆ ನೋಡೋದಾದ್ರೆ, ಶಿಕ್ಷಕಿಯೊಡನೆ ಅಕ್ರಮ ಸಂಬಂಧ ಹೊಂದಿರಬೇಕು ಅಂತಾ ಶಂಕಿಸಿ ಕಾನ್ಪುರದಲ್ಲಿ 17 ವರ್ಷದ ಬಾಲಕನನ್ನ ಶಿಕ್ಷಕಿಯ ಗೆಳೆಯ ಕೊಲೆ ಮಾಡಿದ ಘಟನೆ ಅಕ್ಟೋಬರ್ನಲ್ಲಿ ನಡೀತು.
ಆರೋಪಿ ಪ್ರಭಾತ್ ಶುಕ್ಲಾ ಆ ಪ್ರಕರಣವನ್ನ ಅಪಹರಣ ಅನ್ನೋ ಹಾಗೆ ಬಿಂಬಿಸಿ, ಹಣಕ್ಕಾಗಿ ಬೇಡಿಕೆಯಿಟ್ಟ ಪತ್ರದಲ್ಲಿ "ಅಲ್ಲಾ ಹು ಅಕ್ಬರ್" ಅಂತ ಬರೆದಿದ್ದ. ತನಿಖೆಯ ದಿಕ್ಕು ತಪ್ಪಿಸೋಕೆ ಆತ ಹಾಗೆ ಬರೆದಿದ್ದ ಅಂತ ಪೊಲೀಸರು ಹೇಳಿದ್ದರು.
ಸೆಪ್ಟೆಂಬರ್ನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ, ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಭಾರತೀಯ ಸೇನೆಯ ಯೋಧ ಶೈನ್ ಕುಮಾರ್ ನನ್ನ ಪೊಲೀಸರು ಕೇರಳದಲ್ಲಿ ಅರೆಸ್ಟ್ ಮಾಡಿದ್ದರು. ಆತ ತನ್ನ ಮೇಲೆ ಹಲ್ಲೆ ಮಾಡಿದವರು ತನ್ನ ಬೆನ್ನಿನ ಮೇಲೆ ಪಿಎಫ್ಐ ಅಂತ ಬರೆದಿದ್ದರು ಅಂತ ನಿಷೇಧಿತ ಸಂಘಟನೆಯ ಹೆಸರನ್ನು ಬೇಕೆಂತಲೇ ಹೇಳಿದ್ದ.
ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಮಾಡೋದು ವೈಯಕ್ತಿಕ ಚಾರಿತ್ರ್ಯವಧೆಗೂ ಕಾರಣವಾಗ್ತಿದೆ. ಎಕ್ಸ್ನಲ್ಲಿನ ನಕಲಿ ಖಾತೆಯೊಂದು ತಮ್ಮ ತಿರುಚಲಾದ ಫೋಟೋಗಳನ್ನು ಬಳಸ್ತಿದೆ ಅಂತ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಇತ್ತೀಚೆಗೆ ಹೇಳಿದ್ದರು.
ಎಕ್ಸ್ನ ಬ್ಲೂ ಟಿಕ್ ಒದಗಿಸೋ ನೀತಿ ಬದಲಾಗಿದ್ದು, ದುಡ್ಡು ಕೊಡೋ ಯಾರಿಗೇ ಆದರೂ ಅದು ಈಗ ಬ್ಲೂ ಟಿಕ್ ನೀಡ್ತಿದೆ. ಹಾಗಾಗಿ ಬೇರೆ ಹೆಸರಿನಲ್ಲಿ ಕಾಣಿಸಿಕೊಳ್ಳೋದು ಬಹಳ ಸುಲಭ ಆಗ್ಬಿಟ್ಟಿದೆ ಅಂತಾರೆ Logically Facts ಅನ್ನೋ ಫ್ಯಾಕ್ಟ್ ಚೆಕಿಂಗ್ ವೆಬ್ಸೈಟ್ನ ಭಾರತದ ಮುಖ್ಯಸ್ಥೆ ಕೃತಿಕಾ ಗೋಯೆಲ್.
ಇತ್ತೀಚೆಗೆ ಅಲ್ ಜಝೀರಾ ಪತ್ರಕರ್ತ ಅಂತ ಹೇಳಿಕೊಂಡ ಎಕ್ಸ್ ಬಳಕೆದಾರ, ಗಾಝಾ ಪಟ್ಟಿಯಲ್ಲಿನ ಅಲ್-ಅಹ್ಲಿ ಅರಬ್ ಆಸ್ಪತ್ರೆ ಮೆಲೆ ದಾಳಿ ಮಾಡಿ ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡದ್ದು ಹಮಾಸ್ ಎಂದಿದ್ದ. ಆ ಟ್ವೀಟ್ ಅನ್ನ ಸಾವಿರಾರು ಬಳಕೆದಾರರು ಹಂಚಿಕೊಂಡಿದ್ದರು.
ಈಗ ಡಿಲೀಟ್ ಆಗಿರೋ ಆ ಖಾತೆ ತನಗೆ ಸಂಬಂಧಿಸಿದ್ದಲ್ಲ ಅಂತ ಅಲ್ ಜಝೀರಾ ಸ್ಪಷ್ಟಪಡಿಸಿತು. ಅದು ಭಾರತೀಯ ವ್ಯಕ್ತಿಯದ್ದಾಗಿತ್ತು ಹಾಗೂ ಈ ಹಿಂದೆ ಬಿಜೆಪಿಯನ್ನು ಬೆಂಬಲಿಸಿ ಅದರಿಂದ ಟ್ವೀಟ್ಗಳನ್ನು ಮಾಡಲಾಗಿತ್ತು ಅನ್ನೋದು ಆಮೇಲೆ ಗೊತ್ತಾಯ್ತು.
ಎರಡು ವರ್ಷಗಳ ಹಿಂದೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಒಂಬತ್ತು ತಿಂಗಳ ಮಗಳಿಗೆ ಟ್ವಿಟರ್ ಬಳಕೆದಾರನೊಬ್ಬ ಅತ್ಯಾಚಾರದ ಬೆದರಿಕೆ ಹಾಕಿದ್ದ. ಅದು ಪಾಕಿಸ್ತಾನದ ಬೋಟ್ ಖಾತೆ ಅಂತ್ಲೇ ಎಲ್ಲರೂ ಭಾವಿಸಿದ್ದರು. ಆದರೆ ಆರೋಪಿ ಹೈದರಾಬಾದ್ನ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದುದನ್ನು ಪೊಲೀಸರು ಪತ್ತೆ ಮಾಡಿದ್ದರು.
ಆ ಖಾತೆ "ಆಮಿನಾ" ಅನ್ನೋ ಮುಸ್ಲಿಂ ಹೆಸರಲ್ಲಿತ್ತು. ಆದರೆ ಆರೋಪಿ ರಾಮನಾಗೇಶ್ ಅನ್ನೋ 23 ವರ್ಷದ ಹಿಂದೂ ವ್ಯಕ್ತಿಯಾಗಿದ್ದ. ಅಂಥದೇ ಇನ್ನೊಂದು ಉದಾಹರಣೆ, ಕರ್ನಾಟಕದ ಕೊಡಗಿನ ನಿವಾಸಿ ದಿವಿನ್ ದೇವಯ್ಯ. ಕೊಡವರ ಕುಲದೇವಿ ಕಾವೇರಿ ಹಾಗು ಕೊಡವ ಹೆಣ್ಣುಮಕ್ಕಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಹೆಸರಿನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಕ್ಕಾಗಿ ಆತನನ್ನು 2022ರ ಜುಲೈನಲ್ಲಿ ಬಂಧಿಸಲಾಗಿತ್ತು.
ಇತ್ತೀಚೆಗಂತೂ ದ್ವೇಷ ಹೆಚ್ಚಾಗಿ ಹರಡೋದಕ್ಕಾಗಿಯೇ ಸಾಮಾಜಿಕ ಮಾಧ್ಯಮವನ್ನು ಅತ್ಯಂತ ಅಪಾಯಕಾರಿ ಪ್ರಮಾಣದಲ್ಲಿ ಬಳಸಿಕೊಳ್ಳಲಾಗ್ತಾ ಇದೆ. ಮೊದಲೇ ಮುಸ್ಲಿಂರ ವಿರುದ್ಧ ದ್ವೇಷ ಕಾರೋರು ಇರೋ ಸಮಾಜದಲ್ಲಿ, ಎಲ್ಲರೂ ಅವರ ವಿರುದ್ಧ ಇರೋ ಹಾಗೆ ಮಾಡಲಾಗಿರೋ ಸನ್ನಿವೇಶದಲ್ಲಿ, ಮುಸ್ಲಿಂ ಹೆಸರು ಬಳಸಿ ಮಾಡುವ ದ್ವೇಷಪೂರಿತ ಪೋಸ್ಟ್ಗಳು ಇನ್ನಷ್ಟು ವಿಷ ಹರಡೋದಕ್ಕೆ ಕಾರಣವಾಗ್ತಿವೆ.
ಕಡೆಗೂ ಜನ ನಂಬೋದು ಸುಳ್ಳುಗಳು, ಸೋಗುಗಳನ್ನೇ ಹೊರತು, ನಿಜ ಏನು ಅನ್ನೋದನ್ನಲ್ಲ. ಸತ್ಯ ಗೊತ್ತಾಗೋ ಹೊತ್ತಿಗೆ ಆರೋಪಿ ಸ್ಥಾನದಲ್ಲಿರೋ ಅಮಾಯಕರಿಗೆ ಎಷ್ಟು ಹಾನಿಯಾಗಬೇಕೋ ಅಷ್ಟು ಹಾನಿಯಾಗಿಬಿಟ್ಟಿರುತ್ತೆ. ಜನರ ಮೆದುಳಿನಲ್ಲಿ ಸುಳ್ಳಿನ ಸಗಣಿ ಹಾಗು ಹೃದಯದಲ್ಲಿ ದ್ವೇಷದ ವಿಷ ತುಂಬಿ ಆಗಿರುತ್ತೆ.