ದೇಶದ ಅನ್ನದಾತರು ಮತ್ತೊಮ್ಮೆ ಚಳವಳಿಗೆ ಮುಂದಾಗಿದ್ದು ಯಾಕೆ?
ನ್ಯಾಯಕ್ಕಾಗಿ ಹೋರಾಟಕ್ಕಿಳಿದ ರೈತರ ಮೇಲೆ ಕಾನೂನು ಅಸ್ತ್ರ ಬಳಕೆ ► ಕಾರ್ಪೊರೇಟ್ ಗಳಿಗೆ ಕೆಂಪು ಹಾಸು ಹಾಕುವ ಮೋದಿ ಸರಕಾರಕ್ಕೆ ರೈತರ ಬಗ್ಗೇಕೆ ಇಷ್ಟೊಂದು ಅಸಹನೆ ?
ರೈತರು ಮತ್ತೊಮ್ಮೆ ರಾಷ್ಟ್ರ ರಾಜಧಾನಿಯತ್ತ ಹೊರಟಿದ್ದಾರೆ. ಮೋದಿ ಸರ್ಕಾರ ಯಥಾಪ್ರಕಾರ ದೆಹಲಿಯಲ್ಲಿ ಕಾಂಕ್ರೀಟ್ ತಡೆಗೋಡೆ ಹಾಕಿ ಮತ್ತು ರಸ್ತೆಗಳಲ್ಲಿ ಮೊಳೆಗಳನ್ನು ನೆಟ್ಟು ರೈತರು ದೆಹಲಿ ಪ್ರವೇಶಿಸದ ಹಾಗೆ ತಡೆಯಲು ತಯಾರಾಗಿಬಿಟ್ಟಿದೆ. ಈ ಹಿಂದೆ ರೈತರು ಪ್ರತಿಭಟನೆಗಿಳಿದಾಗಲೂ ಅವರ ವಿರುದ್ಧ ಇದೇ ಮೋದಿ ಸರ್ಕಾರ ಏನೇನೆಲ್ಲ ಮಾಡಿತು ಎಂಬುದನ್ನು ನೋಡಿದ್ದೇವೆ.
ಕಡೆಗೆ ರೈತರನ್ನು ಭಯೋತ್ಪಾದಕರು ಎನ್ನುವಲ್ಲಿಯವರೆಗೂ ಬಿಜೆಪಿ ನಾಯಕರು ಹೋಗಿದ್ದರು. ಈಗ ಮತ್ತೊಮ್ಮೆ ರೈತರ ಬಗೆಗಿನ ತನ್ನ ಕಾಳಜಿ ಏನಿದ್ದರೂ ಭಾಷಣಕ್ಕೆ ಸೀಮಿತವಾದದ್ದು ಎಂಬುದನ್ನೇ ತಮ್ಮ ನಡೆಯ ಮೂಲಕ ಮೋದಿ ಮತ್ತವರ ಬಿಜೆಪಿ ಸರ್ಕಾರಗಳು ತೋರಿಸುತ್ತಿವೆ.ಆಗಲೇ ರೈತರನ್ನು ವಿವಿಧ ರೀತಿಯಲ್ಲಿ ಬೆದರಿಸುವುದೂ ನಡೆದಿದೆ. ದೆಹಲಿಗೆ ಪ್ರವೇಶಿಸದಂತೆ ತಡೆಯಲಾಗಿದೆ. ಕರ್ನಾಟಕದಿಂದ ಹೊರಟಿದ್ದ ರೈತರ ಬಂಧನವೂ ಆಗಿದೆ.
ಅಷ್ಟಕ್ಕೂ ರೈತರು ಏಕೆ ಮತ್ತೊಮ್ಮೆ ದೆಹಲಿ ಚಲೋ ನಡೆಸುವ ಸ್ಥಿತಿ ಬಂತು? ಈಗ ರೈತರನ್ನು ತಡೆದು ನಿಲ್ಲಿಸಲು ಮಾತ್ರ ಮುಂದಾಗಿರುವ ಮೋದಿ ಸರ್ಕಾರ ಈ ಪ್ರಶ್ನೆಯನ್ನು ತನಗೆ ತಾನೇ ಕೇಳಿಕೊಂಡಿದೆಯೆ? ಬಹುಶಃ ಕೇಳಿಕೊಂಡಿದ್ದಿದ್ದರೆ ಮತ್ತೊಮ್ಮೆ ರೈತಹೋರಾಟದ ದಮನಕ್ಕೆ ನಿಲ್ಲುವ ಅದೇ ಹಳೆಯ ತಪ್ಪನ್ನು ಮೋದಿ ಸರ್ಕಾರ ಮಾಡುತ್ತಿರಲಿಲ್ಲ. ರೈತರ ಬಗ್ಗೆ ಅದರ ಕಾಳಜಿಯೆಂಬುದು ಕೂಡ ದೊಡ್ಡ ಸೋಗಲಾಡಿತನವಾಗಿರುವುದರಿಂದ, ಅದು ರೈತರ ವಿಚಾರದಲ್ಲಿನ ತನ್ನ ಉದ್ದೇಶಪೂರ್ವಕ ದಮನ ನೀತಿಯನ್ನು ಬಿಡುವುದಿಲ್ಲ.
ಮಾತಲ್ಲಷ್ಟೇ ಮೋದಿ ಮತ್ತು ಬಿಜೆಪಿ ರೈತರಿಗಾಗಿ ಕಳಕಳಿ ತೋರುವುದೇ ಹೊರತು, ರೈತರಿಗೆ ಬೆಂಬಲ, ಅವರ ಆದಾಯ ಡಬಲ್ ಮಾಡುವುದು ಎಂಬುದೆಲ್ಲ ಬರೀ ಬಡಾಯಿ. ರೈತರ ಮಹಾ ನಾಯಕ ಚೌಧರಿ ಚರಣ್ ಸಿಂಗ್ ಗೆ ಭಾರತ ರತ್ನ ನೀಡಿ ಅವರ ಮೊಮ್ಮಗನ ಪಕ್ಷವನ್ನು ತನ್ನೆಡೆಗೆ ಸೆಳೆದುಕೊಂಡ ಮೋದಿ ಸರಕಾರ ಈಗ ರೈತರ ದಾರಿಗೆ ಮೊಳೆ ನೆಟ್ಟು ಕೂತಿದೆ.
ರೈತರ ಬಗ್ಗೆ ಮೋದಿ ಮತ್ತು ಬಿಜೆಪಿ ತೋರಿಸುವುದು ಬರೀ ಕ್ರೌರ್ಯವನ್ನೇ. ಕಾರ್ಪೊರೇಟ್ ವಲಯಕ್ಕೆ ಅನುಕೂಲ ಮಾಡಿಕೊಡಲೆಂದೇ ಮೋದಿ ಸರ್ಕಾರ ಕೃಷಿ ಕಾನೂನುಗಳೆಂಬ ಹೆಸರಿನಲ್ಲಿ ತರಲು ಹೊರಟಿದ್ದ ರೈತವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ರೈತರು ವರ್ಷಗಟ್ಟಲೆ ಚಳಿ ಬಿಸಿಲೆನ್ನದೆ ಹೋರಾಡಬೇಕಾಗಿ ಬಂದುದನ್ನು ದೇಶವೇ ನೋಡಿದೆ.
ರೈತರ ಆ ಅಪ್ರತಿಮ ಹೋರಾಟಕ್ಕೆ ದೇಶವೇ ನಿಬ್ಬೆರಗಾಗಿದ್ದರೂ, ಮೋದಿ ಸರ್ಕಾರಕ್ಕೆ ಮಾತ್ರ ರೈತರ ಬಗ್ಗೆ ಒಂದಿಷ್ಟೂ ಕನಿಕರವೆಂಬುದಿರಲಿಲ್ಲ.
ಬದಲಾಗಿ ನ್ಯಾಯಕ್ಕಾಗಿ ಹೋರಾಟಕ್ಕಿಳಿದ ರೈತರ ಮೇಲೆ ಕಾನೂನನ್ನು ಅಸ್ತ್ರವಾಗಿ ಬಳಸಲಾಯಿತು, ಕೇಸುಗಳನ್ನು ಹಾಕಲಾಯಿತು. ಹೋರಾಟವನ್ನು ಹಳಿತಪ್ಪಿಸಲು ಏನೇನೆಲ್ಲ ಪಿತೂರಿಗಳೂ ನಡೆದಿದ್ದವು.
ಆದರೂ ಎದೆಗುಂದದೆ ಗಟ್ಟಿಯಾಗಿ ನಿಂತು ಹೋರಾಟ ಗೆದ್ದಿದ್ದರು ರೈತರು. ಮೋದಿ ಸರ್ಕಾರ ಮಣಿದಿತ್ತು. ಹಾಗೆ ಮಣಿದ ಮೇಲಾದರೂ ರೈತರಿಗಾಗಿ ಅದು ಮಾಡಿದ್ದೇನು? ಅದೇನನ್ನೂ ಮಾಡಿಲ್ಲ ಎಂಬುದೇ ಈಗ ಮತ್ತೆ ರೈತರು ದೆಹಲಿಯತ್ತ ಹೊರಟು ಬರಲು ಕಾರಣವಾಗಿರುವುದು.ರೈತರು ಪಂಜಾಬ್ ಮತ್ತು ಹರ್ಯಾಣದಿಂದ ದೆಹಲಿಯತ್ತ ಹೊರಟಿರುವಾಗ, ಉತ್ತರ ಭಾರತದ ರಾಜ್ಯ ಗಡಿಗಳನ್ನು ಮತ್ತೆ ಮುಚ್ಚಲಾಗಿದೆ.
ವರ್ಷಗಟ್ಟಲೆ ಪ್ರತಿಭಟನೆಯ ನಂತರ ಮೋದಿ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ಎರಡು ವರ್ಷಗಳ ನಂತರ ಮತ್ತೆ ಹೋರಾಟಕ್ಕೆ ಅಣಿಯಾಗಿರುವ ರೈತರ ಕಷ್ಟ ಸುಖ ಕೇಳುವ ಬದಲು, ಅವರಿಗೆ ಕೊಡಲಾಗಿದ್ದ ಭರವಸೆ ಈಡೇರಿಸುವುದರ ಬದಲು ಅವರನ್ನು ತಡೆದು ನಿಲ್ಲಿಸುವ ಪ್ರತಾಪ ತೋರಿಸ ಹೊರಟಿದೆ ಮೋದಿ ಸರ್ಕಾರ.
ಅಂದಹಾಗೆ, 2021ರ ನವೆಂಬರ್ನಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದಾಗ ನೀಡಿದ್ದ ಭರವಸೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ವಿಫಲವಾಗಿರುವುದೇ ರೈತರ ಈ ಮತ್ತೊಂದು ಹೋರಾಟದ ಹಿನ್ನೆಲೆ.
ಪಂಜಾಬ್ ಮತ್ತು ಹರಿಯಾಣದ ರೈತರು ಕಿಸಾನ್ ಮಜ್ದೂರ್ ಮೋರ್ಚಾ ಒಕ್ಕೂಟದ ನೇತೃತ್ವದಲ್ಲಿ ದೆಹಲಿಯತ್ತ ಹೊರಟಿದ್ದರೆ, ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರ ರೈತರು ಪ್ರವೇಶಿಸದಂತೆ ತಡೆಯಲು ಪಂಜಾಬ್ನೊಂದಿಗಿನ ತನ್ನ ಗಡಿಯನ್ನು ಮೂರು ಸ್ಥಳಗಳಲ್ಲಿ ಮುಚ್ಚಿದೆ.
ಇನ್ನೊಂದೆಡೆ ಕರ್ನಾಟಕದಿಂದ ಹೊರಟಿದ್ದ 250 ರೈತರನ್ನು ಭೋಪಾಲ್ ರೈಲುನಿಲ್ದಾಣದಲ್ಲಿ ಮಧ್ಯಪ್ರದೇಶ ಸರ್ಕಾರ ಬಂಧಿಸಿದೆ.
ಈ ಎಲ್ಲ ಕ್ರಮಗಳ ಹಿಂದೆ ಇರುವುದು ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೋದಿ ಸರಕಾರದ
ದೆಹಲಿ ಪೊಲೀಸರು ನಗರದ ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಹರಿಯಾಣದ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದರೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಹರ್ಯಾಣ ಪೊಲೀಸರು ರೈತರಿಗೆ ನೋಟಿಸ್ ಕಳುಹಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸುವವರ ಪಾಸ್ಪೋರ್ಟ್ ರದ್ದುಪಡಿಸುವುದಾಗಿ, ಬ್ಯಾಂಕ್ ಖಾತೆಗಳನ್ನು ಫ್ರೀಝ್ ಮಾಡುವುದಾಗಿಯೂ ಪೊಲೀಸರು ಬೆದರಿಕೆ ಹಾಕಿದ್ದಾರೆ.
ಸುಮಾರು 5,000 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ವರದಿಯಾಗಿದೆ. ನ್ಯಾಯ ಕೇಳಲು ರಾಜಧಾನಿಯತ್ತ ಈ ದೇಶದ ಅನ್ನದಾತರು ಬರುತ್ತಿದ್ದರೆ ಅವರು ಇಷ್ಟೆಲ್ಲ ಅಪಾಯಗಳನ್ನು ಎದುರಿಸುವ ಸ್ಥಿತಿನಾ ? ಅವರನ್ನು ದಮನಿಸಲು ಇಷ್ಟೊಂದು ರೀತಿಯಲ್ಲಿ ಸಜ್ಜಾಗಿರುವುದು, ಬೆದರಿಸುತ್ತಿರುವುದು ಯಾಕೆ?
ಹಾಗಾದರೆ ಮೋದಿ ಸರ್ಕಾರದ ದೃಷ್ಟಿಯಲ್ಲಿ ರೈತರೆಂದರೆ ಯಾರು ? ರೈತರೇನೋ ಶಾಂತಿಯುತ ಮೆರವಣಿಗೆ ನಡೆಸಲು ಯೋಜಿಸಿರುವವರು.
ಆದರೆ, ಮೋದಿ ಸರ್ಕಾರ ಮಾತ್ರ ದೆಹಲಿಯಲ್ಲಿ ಒಂದು ತಿಂಗಳ ನಿಷೇಧಾಜ್ಞೆ ಹೇರಿ ಕೂತುಬಿಟ್ಟಿದೆ. ಮಾರ್ಚ್ 12ರವರೆಗೂ ದೆಹಲಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ಅಷ್ಟಕ್ಕೂ ರೈತರ ಬೇಡಿಕೆಗಳಾದರು ಏನು? ಕೃಷಿ ಕಾನೂನುಗಳನ್ನು ರದ್ದುಗೊಳಿಸಿದಾಗ, ರೈತರ ಯಾವ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತೊ ಅದನ್ನು ನೆನಪಿಸುವುದಷ್ಟೇ ಈ ಪ್ರತಿಭಟನೆಯ ಉದ್ದೇಶ.
12 ಬೇಡಿಕೆಗಳನ್ನು ಇಡಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ, ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ
ಕೃಷಿ ಕಾನೂನು ವಿರುದ್ಧದ ಆಂದೋಲನದ ಸಂದರ್ಭದಲ್ಲಿ ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯುವುದು.
ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನೂ ಸೇರಿರುವ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮ. 2021ರ ಡಿಸೆಂಬರ್ನಲ್ಲಿ ಕೇಂದ್ರ ಕೃಷಿ ಸಚಿವಾಲಯ ಈ ಬೇಡಿಕೆಗಳನ್ನು ಈಡೇರಿಸುವುದಾಗಿ ರೈತರಿಗೆ ಭರವಸೆ ನೀಡುವ ಪತ್ರವನ್ನು ಬಿಡುಗಡೆ ಮಾಡಿತ್ತು.
ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತ್ರಿಯನ್ನು ಪರಿಶೀಲಿಸಲು ರಚಿಸಲಾದ ಸಮಿತಿ 37 ಸಭೆಗಳು ಮತ್ತು ಕಾರ್ಯಾಗಾರಗಳನ್ನು ನಡೆಸಿದೆ ಎಂದು ಕೇಂದ್ರ ಕೃಷಿ ಸಚಿವರು ಈ ತಿಂಗಳ ಆರಂಭದಲ್ಲಿ ಸಂಸತ್ತಿಗೆ ತಿಳಿಸಿದ್ದರು. ಆದರೆ ಆ ಸಮಿತಿ ಯಾವುದೇ ಶಿಫಾರಸು ಮಾಡಿದೆಯೇ ಎಂಬುದನ್ನು ಮಾತ್ರ ಅವರು ಬಾಯ್ಬಿಟ್ಟಿರಲೇ ಇಲ್ಲ. ಫೆಬ್ರವರಿ 8ರಂದು ರೈತರ ನಿಯೋಗ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಮತ್ತು ಮೂವರು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಅರ್ಜುನ್ ಮುಂಡಾ ಮತ್ತು ನಿತ್ಯಾನಂದ ರೈ ಅವರೊಂದಿಗೆ ತಮ್ಮ ಈ ಬೇಡಿಕೆಗಳ ವಿಚಾರವಾಗಿ ಸಭೆ ನಡೆಸಿತ್ತು.
ಪಂಜಾಬ್ನಿಂದ ಸೋಮವಾರ ಬೆಳಗ್ಗೆ ಹರಿಯಾಣಕ್ಕೆ ತೆರಳಿರುವ ರೈತರು ದೆಹಲಿಯತ್ತ ಹೊರಟಿರುವಾಗ, ಅವರನ್ನು ತಡೆಯಲು, ಹರಿಯಾಣ ಸರ್ಕಾರ ಅಂಬಾಲಾ-ಶಂಭು, ಖಾನೌರಿ-ಜಿಂದ್ ಮತ್ತು ದಬ್ವಾಲಿ ಎಂಬ ಮೂರು ಗಡಿ ಬಿಂದುಗಳಲ್ಲಿ ಕಾಂಕ್ರೀಟ್ ತಡೆಗೋಡೆ ಮತ್ತು ಮುಳ್ಳುತಂತಿಗಳನ್ನು ಹಾಕಿದೆ. ರಸ್ತೆಯಲ್ಲಿ ಮೊಳೆಗಳನ್ನು ನೆಡಲಾಗಿದೆ. ಹರಿಯಾಣದ ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು 15 ಜಿಲ್ಲೆಗಳಲ್ಲಿ ಸೆಕ್ಷನ್ 144ರ ಅಡಿಯಲ್ಲಿ ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ.
ಚಂಡೀಗಢದಲ್ಲಿ 60 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಟ್ರಾಕ್ಟರ್ ಮಾಲೀಕರಿಗೆ 10 ಲೀಟರ್ಗಿಂತ ಹೆಚ್ಚು ಇಂಧನ ನೀಡದಂತೆ ಸೂಚಿಸಲಾಗಿದೆ. ದೆಹಲಿಯ ಗಡಿ ಪ್ರದೇಶಗಳಲ್ಲಿಯೂ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸುವ ರೈತರು ಮತ್ತು ಅವರ ಸಂಬಂಧಿಕರ ಪಾಸ್ಪೋರ್ಟ್ ರದ್ದುಪಡಿಸುವುದಾಗಿ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ ಎಂದು ರೈತ ನಾಯಕರು ದೂರಿದ್ದಾರೆ.
ರೈತರು ಪ್ರತಿಭಟನೆ ನಡೆಸಿದರೆ ಸರ್ಕಾರಿ ಉದ್ಯೋಗದಲ್ಲಿರುವ ಅವರ ಸಂಬಂಧಿಗಳನ್ನು ಕೆಲಸದಿಂದ ಸಸ್ಪೆಂಡ್ ಮಾಡುವ ಬೆದರಿಕೆಯನ್ನೂ ಹಾಕಲಾಗಿದೆ. ಅಂದರೆ ರೈತ ಹೋರಾಟದ ದಮನಕ್ಕೆ ಯಾವ ಮಟ್ಟಕ್ಕೂ ಮೋದಿ ಸರ್ಕಾರ ಇಳಿಯಬಲ್ಲದು, ಏನು ಬೇಕಾದರೂ ಮಾಡಬಲ್ಲದು ಎಂಬುದು ಸ್ಪಷ್ಟವಾಗುತ್ತಿದೆ. ಬ್ಯಾಂಕ್ ಖಾತೆಗಳನ್ನು ಫ್ರೀಝ್ ಮಾಡಲು ಮತ್ತು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನೋಟಿಸ್ ನೀಡಿರುವುದನ್ನು ಪೊಲೀಸರೆ ದೃಢಪಡಿಸಿರುವುದಾಗಿ ವರದಿಗಳಿವೆ.
ಇದೇ ವೇಳೆ, ಪಂಜಾಬ್-ಹರಿಯಾಣ ಮತ್ತು ದೆಹಲಿ ಗಡಿಯಲ್ಲಿ ಅಗತ್ಯ ಬಿದ್ದರೆ ಠಿಕಾಣಿ ಹೂಡುವುದಕ್ಕೂ ಸಿದ್ಧ ಎಂದು ರೈತರು ತಿಳಿಸಿದ್ದಾರೆ. ಆರು ತಿಂಗಳ ಕಾಲ ಸಾಲುವಷ್ಟು ಆಹಾರ ಸಾಮಗ್ರಿಗಳನ್ನು ಇಟ್ಟುಕೊಂಡೇ ಅವರು ದೆಹಲಿ ಚಲೋಗೆ ಹೋರಟಿರುವುದು ಎಂದು ರೈತನಾಯಕರು ಹೇಳಿದ್ದಾರೆ. ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳಿಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ರೈತರು ಮುಂದೇನು ಮಾಡಲಿದ್ದಾರೆ ಎಂಬುದು ಸರ್ಕಾರದ ನಡೆ ಏನು ಎಂಬುದರ ಮೇಲೆ ನಿರ್ಧಾರವಾಗಲಿದೆ. ಈ ನಡುವೆ ಕರ್ನಾಟಕದ ರೈತರನ್ನು ಬಂಧಿಸಿರುವ ಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಹೀಗೆ ಬಂಧಿಸಿ, ಬೆದರಿಸಿ ರೈತ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇಂಥ ದಬ್ಬಾಳಿಕೆಯಿಂದ ಇನ್ನಷ್ಟು ರೈತರು ಬೀದಿಗಿಳಿಯಬಹುದೇ ಹೊರತು ಮಣ್ಣಿನ ಮಕ್ಕಳ ಹೋರಾಟ ನಿಲ್ಲದು. ರೈತರ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆ ಬಗೆಹರಿಸಬೇಕೇ ಹೊರತು ದಮನ, ದೌರ್ಜನ್ಯ ನಡೆಸಿ ರೈತರ ಬಾಯಿ ಮುಚ್ಚಿಸುವುದಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ರೈತರ ಬಂಧನ ಖಂಡಿಸಿ ಮೈಸೂರಿನಲ್ಲಿ ರೈತ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿವೆ. ಮೈಸೂರು ಭಾಗದ 150 ಮಂದಿ ಸೇರಿ 500ಕ್ಕೂ ಹೆಚ್ಚು ರೈತರು ರಾಜ್ಯದಿಂದ ತೆರಳಿದ್ದು, ಭೋಪಾಲ್ನಲ್ಲಿ ಬಂಧಿಸಲಾಗಿದೆ. ಈ ಸರ್ಕಾರ ತನ್ನನ್ನು ಪ್ರಶ್ನಿಸಿದ, ತನ್ನ ವಿರುದ್ಧ ಪ್ರತಿಭಟನೆ ನಡೆಸಿದ ಯಾರನ್ನೂ ಬಿಡುವುದಿಲ್ಲ. ಕಡೆಗೆ ಉದ್ಯೋಗಗಳ ಸಂಖ್ಯೆ ಹೆಚ್ಚಿಸಿ ಎಂದು ಪ್ರತಿಭಟನೆ ನಡೆಸುವ ಹತಾಶ ನಿರುದ್ಯೋಗಿ ಯುವಕರಿಗೂ ಪೊಲೀಸರಿಂದ ಲಾಠಿಯ ರುಚಿ ತೋರಿಸುವ ಈ ಸರ್ಕಾರ, ಈಗ ರೈತರ ವಿಚಾರದಲ್ಲಿಯೂ ಮತ್ತದೇ ಧೋರಣೆಯೊಂದಿಗೆ ತಯಾರಾಗಿ ನಿಂತಂತಿದೆ.
3ನೇ ಅವಧಿಯಲ್ಲಿ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆ ಎಂದೆಲ್ಲ ಹೇಳಿಕೊಂಡು ಓಡಾಡುತ್ತಿರುವ ಮೋದಿ, ದೇಶದ ಆರ್ಥಿಕತೆಯ ಬೆನ್ನೆಲುಬಾದ ರೈತರನ್ನು ಮಾತ್ರ ಹೇಗೆ ಕಡೆಗಣಿಸುತ್ತಲೇ ಬಂದಿದ್ಧಾರೆ, ದಮನಿಸುತ್ತಲೇ ಬಂದಿದ್ದಾರೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿ ಕಾಣಿಸುತ್ತಿದೆ.