ಪ್ರಧಾನಿಯೇಕೆ ಕಪ್ಪುಬಟ್ಟೆಗೆ ಅಷ್ಟೊಂದು ಹೆದರುತ್ತಾರೆ?
- ಎ.ಕೆ.ಬಿ.
ಕಪ್ಪುಬಣ್ಣ ಎನ್ನುವುದು ಪ್ರತಿಭಟನೆಯ ರೂಪಕ. ಪ್ರಶ್ನೆಗಳಿಗೆ, ಟೀಕೆಗಳಿಗೆ, ಅಸಮ್ಮತಿಗೆ ಹೆದರುವ ಮೋದಿ ಈ ಬಾರಿ ವಿಶ್ವವಿದ್ಯಾನಿಲಯದಲ್ಲೂ ಪ್ರಶ್ನೆಗಳಿಗೆ ಹೆದರಿದ್ದಾರೆ. ಪ್ರಶ್ನೆಗಳಿಗೆ, ಪ್ರತಿಭಟನೆಗಳಿಗೆ ಹೆದರುವುದರಿಂದ ವಿದ್ಯಾರ್ಥಿಗಳಿಗೆ ಪ್ರಧಾನಿ ನೀಡುವ ಸಂದೇಶವೇನು? ಯಾವ ರೀತಿಯ ನಾಳೆಗಳ ಭರವಸೆಯನ್ನು ಅವರಿಗೆ ಪ್ರಧಾನಿ ನೀಡುತ್ತಿದ್ದಾರೆ?
‘‘ಯಾವುದೇ ಕಾರಣಕ್ಕೂ ಕಪ್ಪು ಬಟ್ಟೆ ಧರಿಸಬೇಡಿ...’’
ಇದು ದಿಲ್ಲಿ ವಿವಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಸೂಚನೆ. ಇದಲ್ಲದೆ, ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ವಿದ್ಯಾರ್ಥಿಗಳ ಮೇಲೆ ಹೇರುತ್ತಲೇ, ಪಾಲ್ಗೊಂಡವರಿಗೆ 5 ಹಾಜರಿಗಳು ಉಚಿತ ಎಂಬ ಆಮಿಷವನ್ನೂ ಒಡ್ಡಲಾಗಿತ್ತು. ದಿಲ್ಲಿ ವಿವಿಯಡಿಯಲ್ಲಿ ಬರುವ ಹಿಂದೂ ಕಾಲೇಜು, ಡಾ.ಭೀಮರಾವ್ ಅಂಬೇಡ್ಕರ್ ಕಾಲೇಜು ಮತ್ತು ಝಾಕಿರ್ ಹುಸೇನ್ ದಿಲ್ಲಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಂಥ ವಿಚಿತ್ರ ಆದೇಶಗಳನ್ನು ಹೊರಡಿಸಲಾಗಿತ್ತು.
ಎಲ್ಲಕ್ಕಿಂತ ಮುಖ್ಯವಾದ ಪ್ರಶ್ನೆಯಿರುವುದು, ಕಪ್ಪುಬಣ್ಣದ ಬಟ್ಟೆಗೆ ಯಾಕೆ ಪ್ರಧಾನಿ ಅಷ್ಟೊಂದು ಹೆದರುತ್ತಾರೆ ಎಂಬುದು. ಮೋದಿ ಕಾರ್ಯಕ್ರಮದಲ್ಲಿ ಕಪ್ಪುಬಣ್ಣದ ಬಟ್ಟೆ, ವಸ್ತುಗಳನ್ನು ನಿಷೇಧಿಸುತ್ತಿರುವುದು ಇದು ಮೊದಲೇನಲ್ಲ. ಆದರೆ ಅವೆಲ್ಲವೂ ಆದದ್ದು ರಾಜಕೀಯ ರ್ಯಾಲಿಗಳ ಸಂದರ್ಭಗಳಲ್ಲಿ. ಆದರೆ ಶಿಕ್ಷಣ ಸಂಸ್ಥೆಯಲ್ಲೂ ಈ ನಿರ್ಬಂಧ ವಿಧಿಸಲಾಗುತ್ತದೆ ಎಂದರೆ ಪ್ರಧಾನಿಗೆ ಕಪ್ಪುಬಣ್ಣ ಅಥವಾ ಪ್ರತಿಭಟನೆಯ ಬಗ್ಗೆ ಅದೆಷ್ಟು ಭಯ!
ಅಷ್ಟಕ್ಕೂ ಪ್ರಧಾನಿಯ ಎದುರು ನಿಂತು ವಿದ್ಯಾರ್ಥಿಗಳು ಏನನ್ನು ಕೇಳಬಹುದು?
ಪ್ರಧಾನಿಯಾಗಿ 9 ವರ್ಷಗಳಾಗಿವೆ. ‘ಅಚ್ಛೇ ದಿನ’ದ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದ್ದೀರಿ. ಆದರೆ ನೀವು ಅಧಿಕಾರಕ್ಕೇರಿದ ಮೇಲೆ ನಿರುದ್ಯೋಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಬೆಲೆಗಳು ಗಗನಕ್ಕೇರಿವೆ. ದ್ವೇಷ ಹೆಚ್ಚಿದೆ.ಧರ್ಮದ ಹೆಸರಿನಲ್ಲಿ ಹೊಡೆದು ಕೊಲ್ಲಲಾಗುತ್ತಿದೆ. ಕ್ಯಾಂಪಸ್ಗಳಲ್ಲಿ ದ್ವೇಷ ಹರಡಲಾಗುತ್ತಿದೆ. ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸುತ್ತಾರೆ. ಕ್ಯಾಂಪಸ್ಗಳಿಗೆ ರೌಡಿಗಳು ನುಗ್ಗುತ್ತಿದ್ದಾರೆ. ಉದ್ಯೋಗ ಕೇಳಿದರೆ ನೀವು ಪಕೋಡ ಮಾರಲು ಹೇಳುತ್ತೀರಿ. ಮಣಿಪುರ ಹೊತ್ತಿ ಉರಿಯುತ್ತಿದ್ದರೂ ನಿಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಮೌನಿಯಾಗಿದ್ದೀರಿ. ಇದು ಸರಿಯೇ..?
ಇಂತಹ, ಈಗ ಇಡೀ ದೇಶವೇ ಕೇಳುತ್ತಿರುವ ಸಹಜ ಪ್ರಶ್ನೆಗಳನ್ನೇ ವಿದ್ಯಾರ್ಥಿಗಳೂ ಕೇಳಿಯಾರು. ಆದರೆ ಪ್ರಧಾನಿಗೆ ಮಾತ್ರ ಪ್ರಶ್ನೆಗಳೆಂದರೆ, ಕಪ್ಪುಬಣ್ಣವೆಂದರೆ ಆಗದು.
ವಿವಿ ಕಾರ್ಯಕ್ರಮದಲ್ಲಿ ಕಪ್ಪುಬಣ್ಣ ನಿಷೇಧಿಸಿದ್ದಕ್ಕೆ ಮತ್ತೊಂದು ಕಾರಣವೂ ಇದೆ. ಮೋದಿ ದಿಲ್ಲಿ ವಿವಿಗೆ ಭೇಟಿ ನೀಡುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಶನ್ ವಿರೋಧ ವ್ಯಕ್ತಪಡಿಸಿತ್ತು. ಜೊತೆಗೆ ಬೆಲೆ ಏರಿಕೆ, ನಿರುದ್ಯೋಗ, ಅಂಬೇಡ್ಕರ್ ಪಠ್ಯಗಳನ್ನು ಕೈಬಿಟ್ಟದ್ದನ್ನು ಪ್ರಶ್ನಿಸಿ ಕ್ಯಾಂಪಸ್ನಲ್ಲಿ ಪೋಸ್ಟರ್ಗಳನ್ನು ಅಂಟಿಸಿತ್ತು.
ಪ್ರಧಾನಿ ಭೇಟಿ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರನ್ನು ದಿಗ್ಬಂಧನದಲ್ಲಿ ಇರಿಸಲಾಗಿತ್ತು ಎಂದು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ಆರೋಪಿಸಿದೆ.
ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ದಿಲ್ಲಿ ವಿವಿಯ ನೂರಾರು ಶಿಕ್ಷಕರು ಪ್ರಧಾನಿ ಕಾರ್ಯಕ್ರಮದ ಲೈವ್ ಸ್ಟ್ರೀಮ್ಗೆ ಗೈರುಹಾಜರಾಗುವ ಮೂಲಕ ಪ್ರತಿಭಟಿಸಿದ್ದಾರೆ ಎಂದು ಟೆಲಿಗ್ರಾಫ್ ಇಂಡಿಯಾ ವರದಿ ಮಾಡಿದೆ. ಕೆಲ ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕಿರುವುದು, ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸ್ಗಾಗಿ ಹಣ ಇಲ್ಲದೆ ಇರುವುದು, ಮೂಲಸೌಕರ್ಯಗಳ ಅಭಿವೃದ್ಧಿಗೆ ವಿವಿ ಸಾಲ ಪಡೆದುಕೊಳ್ಳಬೇಕು ಎಂಬ ಸರಕಾರದ ಒತ್ತಾಯವನ್ನು ವಿರೋಧಿಸಿ ಈ ಪ್ರತಿಭಟನೆ ನಡೆದಿತ್ತು.
ದಿಲ್ಲಿ ವಿವಿಗೆ ಹೋಗಿ ಭಾಷಣ ಮಾಡಿ, ವಿವಿಯನ್ನು ಹಾಡಿ ಹೊಗಳಿದ್ದ ಇದೇ ಮೋದಿಯವರ ಆಡಳಿತಾವಧಿಯಲ್ಲಿ ವಿವಿಗೆ ಸರಕಾರದಿಂದ ಸಿಗಬೇಕಾದ ಹಣಕಾಸಿನ ನೆರವು ಸಿಕ್ಕಿಲ್ಲ ಎಂದು ಟೆಲಿಗ್ರಾಫ್ ವರದಿ ತಿಳಿಸುತ್ತದೆ. 2018ರಲ್ಲಿ ಮೋದಿ ಸರಕಾರ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆಯನ್ನು ಸ್ಥಾಪಿಸಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಾಲ ನೀಡುವುದು ಇದರ ಕೆಲಸ. ಆದರೆ ಈ ಸಾಲವನ್ನು ಬಡ್ಡಿ ಸಮೇತ ಹಿಂದಿರುಗಿಸಬೇಕಾಗಿದೆ. ಆದರೆ ಹಿಂದಿನ ಯುಪಿಎ ಸರಕಾರ ಇದ್ದಾಗ ಶಿಕ್ಷಣ ಸಂಸ್ಥೆಗಳಿಗೆ ಎಲ್ಲ ಅಗತ್ಯಗಳಿಗೂ ಅನುದಾನ ಸಿಗುತ್ತಿತ್ತು ಎಂದು ಟೆಲಿಗ್ರಾಫ್ ಇಂಡಿಯಾದ ವರದಿ ಹೇಳುತ್ತದೆ.
ಇನ್ನು, ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ‘‘ಎಲ್ಲವನ್ನೂ ಸಂಪೂರ್ಣವಾಗಿ ಬದಲಿಸಬೇಡಿ. ಕೆಲವೊಂದು ವಿಷಯಗಳನ್ನು ಹಾಗೆಯೇ ಬಿಡಿ. ನಾರ್ತ್ ಕ್ಯಾಂಪಸ್ನಲ್ಲಿ ಸಿಗುವ ಚಹಾ ಮತ್ತು ನೂಡಲ್ಸ್ನ ಹಾಗೆ, ಸೌತ್ ಕ್ಯಾಂಪಸ್ನಲ್ಲಿ ಸಿಗುವ ಮೋಮೊಸ್ನ ಹಾಗೆ ಕೆಲವೊಂದರ ರುಚಿ ಬದಲಾಗಬಾರದು’’ ಎಂದು ಹೇಳಿದರು. ನಾಳೆಯ ಭಾರತ ಕಟ್ಟಬೇಕಾದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಜೊತೆ ದೇಶದ ಪ್ರಧಾನಿ ನೂಡಲ್ಸ್, ಚಹಾ, ಮೋಮೊಸ್ ಬಗ್ಗೆ ಮಾತನಾಡುವುದನ್ನು ನೋಡುವ ಸ್ಥಿತಿ ಬಂದಿದೆ. ದಿಲ್ಲಿ ವಿವಿಗೆ ಮೆಟ್ರೋ ರೈಲಿನಲ್ಲಿ ಪ್ರಧಾನಿ ಆಗಮಿಸಿದ್ದರು. ಎಂದಿನಂತೆ ಹಲವು ಕ್ಯಾಮರಾಗಳು ಅವರನ್ನು ಸುತ್ತುವರಿದು, ಅವರ ಪ್ರತಿಯೊಂದು ಚಲನವಲನಗಳನ್ನೂ ಸೆರೆಹಿಡಿಯುತ್ತಿದ್ದವು. ಸ್ವತಃ ಪ್ರಧಾನಿಯೇ ಹೇಳಿದ ಹಾಗೆ ಮೆಟ್ರೋದಲ್ಲಿ ಸಿಕ್ಕ ವಿದ್ಯಾರ್ಥಿಗಳ ಜೊತೆ ಅವರು ಒಟಿಟಿಯಲ್ಲಿರುವ ಸೀರೀಸ್, ರೀಲ್ಸ್ ಬಗ್ಗೆ ಮಾತನಾಡಿದರಂತೆ.
ಒಂದೆಡೆ ಹೀಗೆ ವಿದ್ಯಾರ್ಥಿಗಳ ಜೊತೆ ವೆಬ್ ಸೀರೀಸ್, ರೀಲ್ಸ್, ಚಹಾ, ನೂಡಲ್ಸ್, ಮೋಮೊಸ್ ಬಗ್ಗೆ ಪ್ರಧಾನಿ ಮಾತನಾಡಿದರೆ, ಇನ್ನೊಂದೆಡೆ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ದಿಗ್ಬಂಧನದಲ್ಲಿಡಲಾಗಿತ್ತು.
ಪ್ರಧಾನಿಗೆ ಪ್ರಶ್ನೆಗಳೆಂದರೆ ಅಲರ್ಜಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ದೇಶದ ಪ್ರಧಾನಿಯಾದ ಮೇಲೆ ಒಂದೇ ಒಂದು ಸಲವೂ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವ ಧೈರ್ಯ ತೋರಿಸದವರು ಅವರು. ಕಡೆಗೂ ಅಮೆರಿಕ ಭೇಟಿ ವೇಳೆ ಶ್ವೇತಭವನದಲ್ಲಿ ಪ್ರಶ್ನೆಯನ್ನೆದುರಿಸುವ ಅನಿವಾರ್ಯತೆ ಉಂಟಾಯಿತು. ಆ ಒಂದು ಪ್ರಶ್ನೆಗೂ ನೇರ ಉತ್ತರ ನೀಡಲಿಲ್ಲ ಮೋದಿ. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಪ್ರಶ್ನಿಸಿದ ಪತ್ರಕರ್ತೆಯ ವಿರುದ್ಧ ಬಿಜೆಪಿ, ಬಲಪಂಥೀಯರ ಪಡೆಯ ಆನ್ಲೈನ್ ದಾಳಿ ನಡೆಯಿತು. ಒಂದೇ ಒಂದು ಪ್ರಶ್ನೆ ಇವರನ್ನು ಹೇಗೆಲ್ಲಾ ಕಾಡುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಕಡೆಗೆ, ಪ್ರಶ್ನೆ ಕೇಳಿದ ಪತ್ರಕರ್ತೆ ಮೇಲಿನ ಬಲಪಂಥೀಯರ ಆನ್ಲೈನ್ ದಾಳಿಯನ್ನು ಸ್ವತಃ ಶ್ವೇತಭವನವೇ ಖಂಡಿಸುವ ಮೂಲಕ ಭಾರತಕ್ಕೆ ಜಾಗತಿಕ ಅವಮಾನವಾಗಿದೆ.
ಈ ಹಿಂದೆ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಬೆಲೆ ಏರಿಕೆಯನ್ನು ವಿರೋಧಿಸಿ ರಾಹುಲ್ ಗಾಂಧಿಯವರೂ ಸೇರಿದಂತೆ ಕಾಂಗ್ರೆಸ್ ನಾಯಕರು 2022ರಲ್ಲಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆ ಸಾಂಕೇತಿಕವಾಗಿತ್ತು. ಕಪ್ಪುಬಣ್ಣದ ವಸ್ತ್ರ ಧರಿಸುವುದು ಪ್ರತಿಭಟನೆಯ ರೂಪಕವಾಗಿತ್ತು. ಆದರೆ ಪ್ರಧಾನಿ ಅದನ್ನು ‘ಕಾಲಾ ಜಾದೂ’ ಎಂದು ವಾಮಾಚಾರಕ್ಕೆಲ್ಲಾ ಹೋಲಿಸಿ ವಿಚಿತ್ರ ಹೇಳಿಕೆ ನೀಡಿದ್ದರು. ದುರಂತವೆಂದರೆ, ಯಾವುದರ ವಿರುದ್ಧ ಪ್ರತಿಭಟನೆ ನಡೆದಿತ್ತೋ ಆ ನಿರುದ್ಯೋಗ, ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳ ಬಗ್ಗೆ ಪ್ರಧಾನಿ ಒಂದು ಮಾತನ್ನೂ ಆಡಿರಲಿಲ್ಲ. 40 ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿ, ಹಲವು ಬಾಂಬ್ ಸ್ಫೋಟಗಳು, ಪಠಾಣ್ ಕೋಟ್ ಉಗ್ರ ದಾಳಿ, ಕೋಮು ಹಿಂಸಾಚಾರಗಳ ಹೊರತಾಗಿಯೂ ಮೋದಿ ಆಡಳಿತದಲ್ಲಿ ದೇಶ ಸುರಕ್ಷಿತವಾಗಿದೆ ಎಂದು ಹಸಿ ಹಸಿ ಸುಳ್ಳನ್ನು ಸುಳ್ಳೇ ನಾಚುವ ಹಾಗೆ ಬಿಜೆಪಿ ನಾಯಕರು, ಬಲಪಂಥೀಯರು ಹೇಳುತ್ತಿರುವ ಹೊತ್ತಲ್ಲೇ ದೇಶದ ರಾಜ್ಯವೊಂದು ಆಂತರಿಕ ಗಲಭೆಯಿಂದ ಹೊತ್ತಿ ಉರಿಯುತ್ತಿದೆ. ಮಣಿಪುರದಲ್ಲಿ 100ಕ್ಕೂ ಹೆಚ್ಚು ಜನರು ಈಗಾಗಲೇ ಮೃತಪಟ್ಟಿದ್ದಾರೆ. 40 ಸಾವಿರಕ್ಕೂ ಹೆಚ್ಚು ಜನರು ಮನೆಮಠ ಕಳೆದುಕೊಂಡು ದಿಕ್ಕಾಪಾಲಾಗಿದ್ದಾರೆ. ಕೇಂದ್ರ ಸಚಿವರ ಮನೆಗೆ ಬೆಂಕಿ ಬಿದ್ದಿದೆ. ಇಡೀ ರಾಜ್ಯಾಡಳಿತ ಯಂತ್ರವೇ ಇಲ್ಲದೆ ಹಿಂಸೆಯಲ್ಲಿ ನಲುಗುತ್ತಿದೆ.
ಆದರೆ ಈ ಬಗ್ಗೆ ದೇಶದ ಪ್ರಧಾನಿ ಒಂದೇ ಒಂದು ಮಾತನ್ನೂ ಆಡುವುದಿಲ್ಲ. ಅವರಿಗೆ ಅಮೆರಿಕಕ್ಕಿಂತ ಮಣಿಪುರ ದೂರ. ಮತ್ತೊಂದು ಕಡೆ ಮಣಿಪುರದ ಜನರ ಸಂಕಷ್ಟಕ್ಕೆ ಮರುಗಿ ಅವರ ಭೇಟಿಗೆ ಹೋದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತಡೆಯಲಾಗುತ್ತದೆ. ಹೊತ್ತಿ ಉರಿಯುತ್ತಿರುವ ರಾಜ್ಯದಲ್ಲಿಯೂ ದ್ವೇಷ ರಾಜಕಾರಣ ಮಾಡಲಾಗುತ್ತದೆ. ಈ ಎಲ್ಲದರ ಹೊರತಾಗಿ ರಾಹುಲ್ ಮಣಿಪುರದ ಜನರನ್ನು ಭೇಟಿಯಾಗುತ್ತಾರೆ. ಮಣಿಪುರದ ಜನರು ರಾಹುಲ್ ಅವರನ್ನು ತಬ್ಬಿಕೊಂಡು ತಮ್ಮ ಸ್ಥಿತಿಯನ್ನು ವಿವರಿಸಿ ಬಿಕ್ಕಿ ಬಿಕ್ಕಿ ಅಳುತ್ತಾರೆ. ಇದ್ಯಾವುದೂ ಪ್ರಧಾನಿಯ ಎದೆ ನಾಟುವುದಿಲ್ಲ. ದಿನಗಳ ಕಾಲ ಭೇಟಿಗೆ ಕಾದಿದ್ದ ಮಣಿಪುರದ ನಿಯೋಗಕ್ಕೆ ಬೆನ್ನುಹಾಕಿ ವಿದೇಶಕ್ಕೆ ಹಾರುತ್ತಾರೆ. ಅಲ್ಲಿಂದ ಹಿಂದಿರುಗಿದ ಬಳಿಕವೂ ಅವರು ನೇರವಾಗಿ ಹೋದದ್ದು ಚುನಾವಣಾ ಪ್ರಚಾರಕ್ಕಾಗಿ ಮಧ್ಯಪ್ರದೇಶಕ್ಕೇ ಹೊರತು ಹೊತ್ತಿ ಉರಿಯುತ್ತಿರುವ ಮಣಿಪುರಕ್ಕಲ್ಲ.
ಈ ನಡುವೆ ಸಂತ್ರಸ್ತರ ಅಳಲನ್ನು ಆಲಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಣಿಪುರ ನಿವಾಸಿ, ಪರಿಸರ ಮತ್ತು ಸಾಮಾಜಿಕ ಹೋರಾಟಗಾರ್ತಿ ಲೀಸಿಪ್ರಿಯಾ ಕಂಗ್ ಜುಂ ಧನ್ಯವಾದ ಸಲ್ಲಿಸಿದ್ದಾರೆ. ಅವರು ಮಾಡಿರುವ ಟ್ವೀಟ್ ಎಲ್ಲವನ್ನೂ ಹೇಳುತ್ತದೆ. ‘‘ಪ್ರಿಯ ರಾಹುಲ್ ಗಾಂಧೀಜಿ, ನನ್ನ ರಾಜ್ಯ ಮಣಿಪುರಕ್ಕೆ ಅದರ ಕಠಿಣ ದಿನಗಳಲ್ಲಿ ಭೇಟಿ ನೀಡಿರುವುದಕ್ಕೆ ಧನ್ಯವಾದಗಳು. ನಮ್ಮ ಪ್ರಧಾನಿ ನರೇಂದ್ರ ಮೋದೀಜಿ ಮಾಡಲು ವಿಫಲವಾಗಿದ್ದ ಕೆಲಸವನ್ನು ನೀವು ಮಾಡಿದ್ದೀರಿ. ಹಿಂಸಾಚಾರದಲ್ಲಿ ನನ್ನ ಹಲವಾರು ಗೆಳೆಯರು ತಮ್ಮ ಮನೆಗಳು ಹಾಗೂ ಪೋಷಕರನ್ನು ಕಳೆದುಕೊಂಡಿದ್ದಾರೆ. ಅವರ ಮಕ್ಕ ಳಾದ ನಾವು ಹತಾಶೆಯಿಂದ ಶಾಂತಿಗಾಗಿ ಪ್ರಾರ್ಥಿಸುತ್ತೇವೆ’’ ಎಂಬ ಲೀಸಿಪ್ರಿಯಾ ಮಾತು ಅವರೊಬ್ಬರದ್ದಲ್ಲ, ಇಡೀ ಮಣಿಪುರದ ಮಾತು.
ಮೊದಲೇ ಹೇಳಿದ ಹಾಗೆ ಕಪ್ಪು ಬಣ್ಣಕ್ಕೆ ಮೋದಿ ಹೆದರುತ್ತಿರುವುದು ಇದು ಮೊದಲೇನಲ್ಲ. 2019ರಲ್ಲಿ ಜಾರ್ಖಂಡ್ನ ಪಲಮು ಎಂಬಲ್ಲಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕಪ್ಪು ಬಣ್ಣದ ಯಾವುದೇ ವಸ್ತ್ರ ಧರಿಸುವುದನ್ನು ನಿಷೇಧಿಸಲಾಗಿತ್ತು. ಪಲಮು ಎಸ್ಪಿ ಇಂದ್ರಜಿತ್ ಮಹಾಂತ ಹೊರಡಿಸಿದ್ದ ಪ್ರಕಟಣೆಯಲ್ಲಿ ಕಪ್ಪುಬಣ್ಣದ ಶಾಲು, ಅಂಗಿ, ಚಡ್ಡಿ, ಸ್ವೆಟರ್, ಮಫ್ಲರ್, ಸಾಕ್ಸ್, ಟೈ, ಚೀಲಗಳು ಮತ್ತು ಶೂ ಧರಿಸುವಂತಿಲ್ಲ ಎಂದು ಸೂಚಿಸಲಾಗಿತ್ತು. ಕಪ್ಪುಶೂ ಧರಿಸುವಂತಿಲ್ಲ ಎಂಬ ಸೂಚನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಅದೊಂದು ನಿರ್ಬಂಧವನ್ನು ಹಿಂದೆಗೆದುಕೊಳ್ಳಲಾಗಿತ್ತು. 2016ರಲ್ಲಿ ಕನ್ಯಾಕುಮಾರಿಯಲ್ಲಿನ ಮೋದಿ ಕಾರ್ಯಕ್ರಮದಲ್ಲೂ ಕಪ್ಪು ಬಣ್ಣದ ಬಟ್ಟೆಗಳನ್ನು ನಿಷೇಧಿಸಲಾಗಿತ್ತು. ಮಹಿಳೆಯೊಬ್ಬರು ಕಪ್ಪು ಶಾಲು ಧರಿಸಿ ಬಂದಾಗ ಕಾರ್ಯಕ್ರಮದಿಂದ ನಿರ್ಬಂಧಿಸಲಾಗಿತ್ತು. ಕಪ್ಪುಬಣ್ಣ ಎನ್ನುವುದು ಪ್ರತಿಭಟನೆಯ ರೂಪಕ. ಪ್ರಶ್ನೆಗಳಿಗೆ, ಟೀಕೆಗಳಿಗೆ, ಅಸಮ್ಮತಿಗೆ ಹೆದರುವ ಮೋದಿ ಈ ಬಾರಿ ವಿಶ್ವವಿದ್ಯಾನಿಲಯದಲ್ಲೂ ಪ್ರಶ್ನೆಗಳಿಗೆ ಹೆದರಿದ್ದಾರೆ. ಪ್ರಶ್ನೆಗಳಿಗೆ, ಪ್ರತಿಭಟನೆಗಳಿಗೆ ಹೆದರುವುದರಿಂದ ವಿದ್ಯಾರ್ಥಿಗಳಿಗೆ ಪ್ರಧಾನಿ ನೀಡುವ ಸಂದೇಶವೇನು? ಯಾವ ರೀತಿಯ ನಾಳೆಗಳ ಭರವಸೆಯನ್ನು ಅವರಿಗೆ ಪ್ರಧಾನಿ ನೀಡುತ್ತಿದ್ದಾರೆ?