ಕಳಪೆ ಔಷಧ ತಯಾರಿಸುವ ಕಂಪೆನಿಗಳೇಕೆ ಚುನಾವಣಾ ಬಾಂಡ್ ಖರೀದಿಸಿದವು ?
► ಮೋದಿ ಸರಕಾರ ಬಚ್ಚಿಡಲು ಬಯಸುವ ಬಾಂಡ್ ಹಗರಣ ಅದೆಷ್ಟು ದೊಡ್ಡದು ?
ಸಾಂದರ್ಭಿಕ ಚಿತ್ರ
ರೆಮ್ ಡಿಸಿವಿರ್. ಈ ಹೆಸರು ನಿಮಗೆ ಮರೆತು ಹೋಗಿರಲು ಸಾಧ್ಯವೇ ಇಲ್ಲ. ಕೊರೊನ ಸೋಂಕು ಈ ದೇಶದ ಜನರನ್ನು ಕಂಗಾಲು ಮಾಡಿದ್ದಾಗ, ಅದೇ ಜನರನ್ನು ಆರ್ಥಿಕವಾಗಿ, ಮಾನಸಿಕವಾಗಿ ಇನ್ನಷ್ಟು ಕಂಗಾಲು ಮಾಡಿದ ಔಷಧಿಯ ಹೆಸರಿದು.
ರೆಮ್ ಡಿಸಿವಿರ್ ಅಂದ್ರೆ ಕೊರೊನಕ್ಕೆ ರಾಮಬಾಣ ಎಂದೇ ಎಲ್ಲಿಲ್ಲದ ಪ್ರಚಾರ ನಡೀತು. ಸರಕಾರವೇ ಮುಂದೆ ನಿಂತು ರೆಮ್ ಡಿಸಿವಿರ್ ಕೊಡಿ ಎಂದು ಮಾರ್ಗಸೂಚಿ ಮೂಲಕ ಹೇಳಿತು. ರೆಮ್ ಡಿಸಿವಿರ್ ಬೆಲೆ ಗಗನಕ್ಕೇರಿತು. ರೆಮ್ ಡಿಸಿವಿರ್ ಸಿಗೋದು ಅಂದ್ರೆ ಹೋಗೋ ಪ್ರಾಣ ವಾಪಸ್ ಬರೋದು ಅನ್ನೋ ಹಾಗಾಯಿತು.
ಆದರೆ ಕೊನೆಗೆ ಆಗಿದ್ದೇನು ?
ರೆಮ್ ಡಿಸಿವಿರ್ ನಿಂದಲೇ ಅಡ್ಡ ಪರಿಣಾಮಗಳಾಗಿ ಪ್ರಾಣ ಹೋಗುತ್ತಿದೆ ಎಂಬ ಆರೋಪ ಕೇಳಿ ಬಂತು. ನವೆಂಬರ್ 2020 ರಲ್ಲಿ ರೆಮ್ ಡಿಸಿವಿರ್ ಅನ್ನು ಕೊರೊನ ಸೋಂಕಿತರಿಗೆ ನೀಡಬಾರದು ಎಂದು WHO ಸಲಹೆ ನೀಡಿತು. ಏಕೆಂದರೆ ಇದು ಚಿಕಿತ್ಸೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಅಥವಾ ಇದು ಜೀವಗಳನ್ನು ಉಳಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು WHO ಹೇಳಿತು. ಆದರೂ ರೆಮ್ ಡಿಸಿವಿರ್ ಅನ್ನು ಭಾರತದಲ್ಲಿ ಬಳಸಲಾಯಿತು.
WHO ಸಲಹೆ ನೀಡಿದ ನಂತರ ಒಂದೂಕಾಲು ವರ್ಷಗಳವರೆಗೂ , ಸರಕಾರ ಮಾತ್ರ ರೆಮ್ ಡಿಸಿವಿರ್ ಅನ್ನು ಬಳಸಬಹುದು ಎಂದೇ ಹೇಳಿತ್ತು. ಮೇ 2021 ರಲ್ಲಿ ಆರೋಗ್ಯ ಸಚಿವ ಮನಸುಕ್ ಮಾಂಡವಿಯಾ " ಸರ್ಕಾರವು ಅದರ ಉತ್ಪಾದನೆಯನ್ನು 10 ಪಟ್ಟು ಹೆಚ್ಚಿಸುತ್ತದೆ " ಎಂದು ಹೇಳಿದರು. .
2021 ರಲ್ಲಿ ಅದೇ ರೆಮ್ ಡಿಸಿವಿರ್ ನಲ್ಲಿ ಭಾರೀ ಹಾನಿಕಾರಕ ಅಂಶಗಳಿವೆ ಎಂದು ವರದಿಯಾಯಿತು. ಆದರೆ ಆ ಗುಜರಾತಿ ಕಂಪೆನಿ ವಿರುದ್ಧ ಏನೂ ಕ್ರಮವಾದ ವರದಿ ಬರಲಿಲ್ಲ.
ಈಗ ಬಹಿರಂಗ ಆಗಿರೋ ಮಾಹಿತಿ ಏನು ಗೊತ್ತೇ ?
ಅದೇ ರೆಮ್ ಡಿಸಿವಿರ್ ಔಷಧ ಉತ್ಪಾದಿಸುವ ಗುಜರಾತಿನ ಝೈಡಸ್ ಹೆಲ್ತ್ ಕೇರ್ 2022 ಹಾಗು 2023 ರ ನಡುವೆ 29 ಕೋಟಿ ರೂಪಾಯಿಯ ಚುನಾವಣಾ ಬಾಂಡ್ ಖರೀದಿಸಿದೆ.
ಯಾಕೆ ಗುಜರಾತಿನ ಔಷಧ ತಯಾರಕ ಕಂಪೆನಿಯೊಂದು ಇಷ್ಟೊಂದು ದೊಡ್ಡ ಮೊತ್ತದ ಚುನಾವಣಾ ಬಾಂಡ್ ಖರೀದಿಸುತ್ತೆ ?
ಅದೂ ಆ ಕಂಪೆನಿಯ ಔಷಧದ ಗುಣಮಟ್ಟದ ಬಗ್ಗೆ ಗಂಭೀರ ಆರೋಪ ಕೇಳಿ ಬಂದ ಮೇಲೆ ?
ಈ ಮಾಹಿತಿ ಬಹಿರಂಗ ಆಗಬೇಡ್ವಾ ?
ಕೊರೊನ ಕಾಲದಲ್ಲೂ ಈ ದೇಶದ ಜನರ ಪ್ರಾಣದ ಜೊತೆ, ಅವರು ಕಷ್ಟಪಟ್ಟು ದುಡಿದ ಹಣದ ಜೊತೆ ಚೆಲ್ಲಾಟ ಆಡಿದ ಕಂಪೆನಿ ಅದ್ಯಾಕೆ 29 ಕೋಟಿಯ ಚುನಾವಣಾ ಬಾಂಡ್ ಖರೀದಿಸುತ್ತೆ ? ಅದು ಯಾವ ಪಕ್ಷಕ್ಕೆ ಹೋಗಿ ತಲುಪುತ್ತೆ ಎಂಬುದು ಈ ದೇಶದ ಜನರಿಗೆ ಗೊತ್ತಾಗಬೇಕಾ ? ಬೇಡ್ವಾ ?
ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರ ತನ್ನ ಬಳಿ ಇರುವ ಈ ಮಾಹಿತಿಯನ್ನು ಕೊಡದೇ ಇರಲು ಎಲ್ಲ ಪ್ರಯತ್ನವನ್ನೂ ಮಾಡ್ತಾನೆ ಇದೆ.
ಹಾಗಾಗಿ ಸುಪ್ರೀಂ ಕೋರ್ಟ್ನಿಂದ ಪದೇ ಪದೇ ಛೀಮಾರಿ ಹಾಕಿಸಿಕೊಳ್ಳುತ್ತಲೇ ಇದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.
ಅಷ್ಟಾಗಿಯೂ ಚುನಾವಣಾ ಬಾಂಡ್ಗಳ ವಿಚಾರವಾಗಿ ಕೆಲವು ಗುಟ್ಟುಗಳನ್ನು ಬಿಟ್ಟುಕೊಡುತ್ತಲೇ ಇಲ್ಲ ಅದು.
ಬಹುಶಃ ಇಲ್ಲೊಂದು ದೊಡ್ಡ ನಾಟಕವೇ ನಡೆಯುತ್ತಿರುವ ಹಾಗಿದೆ.
ಒಂದೊಂದೇ ಮನವಿ ಮುಂದಿಡುತ್ತ, ಮಾಹಿತಿ ಹೊರಬರದಂತೆ ತಡೆಯುವುದಕ್ಕೆ ಅಥವಾ ಮಾಹಿತಿ ಸಾರ್ವಜನಿಕರಿಗೆ ತಿಳಿಯದಂತೆ ಮಾಡುವುದಕ್ಕೆ ಯತ್ನಿಸುತ್ತಿರುವ ಹಾಗೆ ಕಾಣಿಸುತ್ತಿದೆ.
ಈ ಪ್ರಯತ್ನದ ಹಿಂದೆ ಮೋದಿ ಸರಕಾರವೇ ಇದೆ ಎಂಬುದು ಈಗ ಗುಟ್ಟಾಗಿ ಏನೂ ಉಳಿದಿಲ್ಲ.
ದೇಶದ ಅತಿದೊಡ್ಡ ಬ್ಯಾಂಕ್ , ಸ್ಟೇಟ್ ಬ್ಯಾಂಕ್ ಗೆ ಮಾಹಿತಿ ಕೊಡದಂತೆ ಒತ್ತಡ ಹಾಕುವವರು ಇಲ್ಲಿ ಬೇರೆ ಯಾರಿದ್ದಾರೆ ?
ಈಗ ಸಿಐಐ, ಫಿಕ್ಕಿ, ಅಸೋಚಾಮ್ ಗಳಂತಹ ದೇಶದ ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಗಳು ಯಾಕೆ ಸುಪ್ರೀಂ ಕೋರ್ಟ್ ಗೆ ಹೋಗಿ ಬಾಂಡ್ ಗಳ ಮಾಹಿತಿ ಬಹಿರಂಗಪಡಿಸಬಾರದು ಎಂದು ಹೇಳುತ್ತಿವೆ ?
ಅವುಗಳ ಮೇಲೆ ಈ ರೀತಿ ಮನವಿ ಮಾಡಲು ಒತ್ತಡ ಹಾಕಿದವರು ಯಾರು ?
ಇದ್ಯಾಕೆ ಮೋದಿ ಸರಕಾರ ಈ ಪರಿ ಮಾಹಿತಿ ಅಡಗಿಸಲು ಹೆಣಗಾಡುತ್ತಿದೆ ?
ಹಾಗಾದರೆ ಇದು ಅದೆಷ್ಟು ದೊಡ್ಡ ಹಗರಣ ?
ಮೋದಿ ಸರ್ಕಾರದ ಈ ಧೋರಣೆಯಿಂದಾಗಿ ಎಸ್ ಬಿಐ , ಫಿಕ್ಕಿ ಸಹಿತ ದೇಶದ ಪ್ರತಿಷ್ಠಿತ ಸಂಸ್ಥೆಗಳು ದೇಶದ ಪರಮೋಚ್ಚ ನ್ಯಾಯಾಲಯದಲ್ಲಿ ಅವಮಾನಕ್ಕೆ ಒಳಗಾಗುತ್ತಿವೆ.
ಚುನಾವಣಾ ಬಾಂಡ್ ಬಳಸಿ ಕೋಟಿಗಟ್ಟಲೆ ವಸೂಲಿ ಮಾಡಲಾಗಿದೆ. ಆದರೆ ಈ ಮಾಹಿತಿ ಮಾತ್ರ ಜನರನ್ನು ತಲುಪಬಾರದು ಎಂದು ಭಾರೀ ಸರ್ಕಸ್ ನಡೀತಿದೆ. ಏಕೆ?
ಸೋಮವಾರ ಮತ್ತೊಮ್ಮೆ ಎಸ್ಬಿಐಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.
ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಮಾರ್ಚ್ 21ರೊಳಗೆ ಬಹಿರಂಗಪಡಿಸುವಂತೆ ಎಸ್ಬಿಐಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಬಾಂಡ್ಗಳಿಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗಗೊಳಿಸಬೇಕೆಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಎಲ್ಲ ವಿವರಗಳು ಬಹಿರಂಗಗೊಳ್ಳಲೇಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಹೇಳಿದೆ.
ಯೂನಿಕ್ ಬಾಂಡ್ ನಂಬರ್ಗಳನ್ನು ಒಳಗೊಂಡಂತೆ ಎಲ್ಲ ವಿವರಗಳನ್ನು ಮಾರ್ಚ್ 21ರ ಸಂಜೆ 5ರೊಳಗೆ ಅಫಿಡವಿಟ್ ಮೂಲಕ ಕೋರ್ಟ್ಗೆ ಸಲ್ಲಿಸುವಂತೆ ಪೀಠ ಸೂಚಿಸಿದೆ.
ಆದರೆ ಚುನಾವಣಾ ಬಾಂಡ್ ಹೆಸರಿನ ಅತಿ ದೊಡ್ಡ ಹಗರಣದ ವಿಚಾರವೇ ಮಡಿಲ ಮೀಡಿಯಾಗಳಲ್ಲಿ ಇಲ್ಲವಾಗಿದೆ.
ಈಗ ಜನರೂ ಈ ಮಹಾ ಹಗರಣದ ಒಂದೊಂದೂ ಮಾಹಿತಿಯನ್ನು ಸೇರಿಸಿ ಎಲ್ಲವನ್ನೂ ಪ್ರತಿಯೊಬ್ಬರೂ ತಿಳಿಯುವ ಹಾಗೆ ಮಾಡುವುದು ಅಗತ್ಯವಿದೆ. ಈ ವೀಡಿಯೊವನ್ನು ಆದಷ್ಟು ಹೆಚ್ಚು ಜನರಿಗೆ ಫಾರ್ವರ್ಡ್ ಮಾಡಬೇಕಿದೆ.
ಕೋರ್ಟ್ ನೀಡಿದ ಆದೇಶ ಪಾಲಿಸುವಲ್ಲಿ ಏನೋ ನೆಪ ಮುಂದೆ ಮಾಡುವುದು, ಆ ನೆಪದೊಂದಿಗೆ ಮತ್ತೆ ದಿನ ನೂಕುವುದು ಇಂಥ ನಾಟಕ ನಡೆದಿದ್ದು, ಇದು ಕೋರ್ಟ್ಗೂ ಗೊತ್ತಾಗಿದೆ.
ದೇಶದ ಹಿತದೃಷ್ಟಿಯಿಂದ ಈ ಹಗರಣದ ಪ್ರತಿ ವಿವರವೂ ಬಯಲಿಗೆ ಬರುವುದು ಅಗತ್ಯ ಎಂದು ಭಾವಿಸಿಯೇ ಕೋರ್ಟ್ ತನ್ನ ಆದೇಶ ಪಾಲಿಸಲು ಅತ್ಯಂತ ಕಠಿಣವಾಗಿ ಸೂಚಿಸಿದೆ.
ಇದರಲ್ಲಿ ಯಾವ ರಿಯಾಯ್ತಿಯೂ ಸಿಗಲಾರದು ಎಂಬುದನ್ನು ಅದು ತನ್ನ ಮಾತುಗಳಲ್ಲಿ ಅತ್ಯಂತ ಸ್ಪಷ್ಟವಾಗಿ ಸೂಚಿಸಿಬಿಟ್ಟಿದೆ.
ಈಗ ಕೋರ್ಟ್ ಆದೇಶಗಳನ್ನು ಜಾರಿಗೊಳಿಸುವುದು ಈಗ ಎಸ್ ಬಿ ಐ ಕರ್ತವ್ಯವಾಗಿದೆ.
ಇಡೀ ಚುನಾವಣಾ ಬಾಂಡ್ ಯೋಜನೆಯನ್ನೇ, ಆ ಕಾನೂನನ್ನೇ ಸುಪ್ರೀಂ ಕೋರ್ಟ್ ರದ್ದು ಮಾಡಿದೆ.ಹಾಗಿರುವಾಗ ಎಸ್ಬಿಐ ಸುಪ್ರೀಂ ಕೋರ್ಟ್ ಆದೇಶವನ್ನು ತಕ್ಷಣ ಪಾಲಿಸದೆ, ಒಂದೊಂದೇ ನೆಪಗಳನ್ನು ಮುಂದೆ ಮಾಡುತ್ತಿರುವುದೇಕೆ? ಕೆಲ ಮಾಹಿತಿ ಬಹಿರಂಗಪಡಿಸಿದಂತೆ ಮಾಡಿ, ಅಲ್ಲೇ ಕೆಲವನ್ನು ಅಡಗಿಸುತ್ತಿರುವುದೇಕೆ? ಎಲ್ಲವನ್ನೂ ಏಕೆ ಒಮ್ಮೆಯೇ ಅದು ಹೇಳುತ್ತಿಲ್ಲ?ಎಲ್ಲ ವಿವರವನ್ನೂ, ರಹಸ್ಯವಾಗಿರುವ ಎಲ್ಲ ಮಾಹಿತಿಯನ್ನೂ ಬಹಿರಂಗಗೊಳಿಸಬೇಕು ಎಂಬುದು ಸುಪ್ರೀಂ ಕೋರ್ಟ್ ನ ಸ್ಪಷ್ಟ ಆದೇಶ.
ಆದರೆ ಮತ್ತೆ ಮತ್ತೆ ಸುಪ್ರೀಂ ಕೋರ್ಟ್ ಮುಂದೆ ಎಸ್ಬಿಐ ನೆಪಗಳನ್ನು ತೆಗೆದುಕೊಂಡು ಹೋಗಿ ಏಕೆ ನಿಲ್ಲುತ್ತಿದೆ? ಏಕೆ ಮತ್ತೆ ಮತ್ತೆ ಛೀಮಾರಿ ಹಾಕಿಸಿಕೊಳ್ಳುತ್ತಿದೆ?ಯಾರನ್ನು ರಕ್ಷಿಸುವುದಕ್ಕಾಗಿ ಅದು ಇಷ್ಟನ್ನೆಲ್ಲ ಮಾಡುತ್ತಿದೆ?
ಯಾಕೆ ಸರ್ಕಾರ, ಎಸ್ಬಿಐ, ಫಿಕ್ಕಿ ಥರದ ಸಂಸ್ಥೆಗಳು ಮಾಹಿತಿ ಬಹಿರಂಗಗೊಳಿಸದೇ ಇರಲು ಏನೇನೋ ಕಸರತ್ತು ಮಾಡುತ್ತಿವೆ?
ಏನನ್ನು ನಿಭಾಯಿಸುವುದಕ್ಕಾಗಿ ಇದನ್ನೆಲ್ಲ ಮಾಡಲಾಗುತ್ತಿದೆ?
ಯೂನಿಕ್ ಕೋಡ್ ನಂಬರ್ ನೀಡಬೇಕಾಗಿರುವುದು ಈಗ ಎಸ್ಬಿಐ ಕೆಲಸ. ಯುನಿಕ್ ನಂಬರ್ ಸಿಕ್ಕಿದರೆ ಯಾವ ಬಾಂಡ್ ಅನ್ನು ಯಾವ ಪಕ್ಷ ತೆಗೆದುಕೊಂಡಿದೆ ಎಂಬುದು ಬಯಲಾಗುತ್ತದೆ.
ಆದರೆ ಬಹುಶಃ ದೇಶದ ಇತಿಹಾಸದಲ್ಲೇ ಅತಿ ದೊಡ್ಡದಾಗಿರಬಹುದಾದ ಈ ಹಗರಣವನ್ನು ಮುಚ್ಚಿಹಾಕಲು ಎಷ್ಟೊಂದು ಪ್ರಯತ್ನ ನಡೆಯುತ್ತಿದೆ?
ರಾಮರಾಜ್ಯದ ಹೆಸರಿನಲ್ಲಿ ಜನರನ್ನು ಮರುಳು ಮಾಡುತ್ತಿರುವವರು ಹೇಗೆಲ್ಲ ಸುಪ್ರೀಂ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ? ಮತ್ತು ಏಕೆ?
ಚುನಾವಣಾ ಬಾಂಡ್ ಖರೀದಿಸಿದ್ದಕ್ಕಾಗಿ ಕಂಪನಿಗಳಿಗೆ ಲಕ್ಷ ಕೋಟಿಯ ಬಿಸಿನೆಸ್ ಸಿಕ್ಕಿದೆ. ಈ ದಂಧೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಯಬಾರದು ಎಂದರೆ ಹೇಗೆ?
ಇನ್ನು, ಸರ್ಕಾರ ಕೋರ್ಟ್ ನಲ್ಲಿ ಎಂತೆಂತಹ ಹಾಸ್ಯಾಸ್ಪದ ನೆಪಗಳನ್ನು, ಕಾರಣಗಳನ್ನು ಕೊಡುತ್ತಿದೆ ?
ಯೋಜನೆ ರದ್ದುಗೊಳಿಸಲಾದ ತೀರ್ಪನ್ನು ವಿವಿಧ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಹೊಸ ತಕರಾರೊಂದನ್ನು ಕೋರ್ಟ್ ಎದುರು ಇಡಲು ಸರ್ಕಾರ ಪ್ರಯತ್ನಿಸಿತು.
ಚುನಾವಣಾ ಬಾಂಡ್ ಮೂಲಕ ಬಹಿರಂಗಪಡಿಸಲಾದ ಎಲ್ಲಾ ವಿವರಗಳನ್ನು ಹಲವರು ತಮ್ಮ ಅಗತ್ಯಕ್ಕೆ ತಕ್ಕಂತೆ ತಿರುಚುತ್ತಿದ್ದು, ಇದರಿಂದಾಗಿ ನ್ಯಾಯಾಲಯ ಮುಜಗರಕ್ಕೊಳಗಾಗುತ್ತಿದೆ ಎಂದು ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.
ಆದರೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಐವರು ಸದಸ್ಯರ ಪೀಠ ಕೇಂದ್ರದ ಈ ಅರ್ಥ ಹೀನ ವಾದವನ್ನು ಸ್ಪಷ್ಟವಾಗಿ ತಳ್ಳಿ ಹಾಕಿತು.
ತನ್ನ ತೀರ್ಪುಗಳನ್ನು ಮೂರನೆಯವರು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದರ ಬಗ್ಗೆ ತಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ನಾವು ಕಾನೂನು ಪರಿಪಾಲನೆಯನ್ನು ಮಾತ್ರವೇ ಪರಿಗಣಿಸುತ್ತೇವೆ, ಸಂವಿಧಾನದ ಪ್ರಕಾರ ಕೆಲಸ ಮಾಡುತ್ತೇವೆ. ಕಾನೂನು ಪರಿಪಾಲನೆಗಾಗಿ ಮಾತ್ರವೇ ನ್ಯಾಯಾಲಯ ಕೆಲಸ ಮಾಡುತ್ತದೆ. ನ್ಯಾಯಮೂರ್ತಿಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾತನಾಡಲಾಗುತ್ತದೆ. ಆದರೆ ಆ ಮಾತುಗಳನ್ನು ಸಹಿಸುವಷ್ಟು ನ್ಯಾಯಾಂಗದ ಭುಜಗಳು ದೃಢವಾಗಿವೆ ಎಂದು ಸಿಜೆಐ ಹೇಳಿದರು.
ಈಗಾಗಲೇ ನೀಡಲಾಗಿರುವ ತೀರ್ಪಿನಲ್ಲಿರುವ ನಿರ್ದೇಶನಗಳನ್ನು ಜಾರಿಗೊಳಿಸಲಾಗಿದೆಯೇ ಎಂಬುದನ್ನಷ್ಟೇ ತಾನು ಗಮನಿಸುವುದಾಗಿ ನ್ಯಾಯಾಲಯ ತಿಳಿಸಿತು.
ಬಾಂಡ್ಗಳಿಗೆ ನೀಡಲಾದ ಆಲ್ಫಾ ನ್ಯೂಮರಿಕ್ ಸಂಖ್ಯೆಗಳ ವಿವರ ಸೇರಿದಂತೆ ಅವುಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಬಹಿರಂಗಪಡಿಸುವಂತೆ ನ್ಯಾಯಾಲಯ ಎಸ್ಬಿಐಗೆ ತಾಕೀತು ಮಾಡಿತು.
ಕೇಂದ್ರ ಸರ್ಕಾರದ ವಾದ ಎಷ್ಟು ತಮಾಷೆಯದ್ದಾಗಿದೆ ನೋಡಿ.
ಚುನಾವಣಾ ಬಾಂಡ್ ಯೋಜನೆಯ ಹಿಂದುಮುಂದಿನ ಸತ್ಯಗಳು ಬಯಲಾಗದಂತೆ ತಡೆಯಲು ಸುಪ್ರೀಂ ಕೋರ್ಟ್ ಎದುರು ಪ್ರಯತ್ನಿಸುವ ಅದರ ಈ ನಡೆಯೇ ಅದರ ಹುಳುಕುಗಳಿಗೆ ಸಾಕ್ಷಿಯಲ್ಲವೆ?
ಸೋಷಿಯಲ್ ಮೀಡಿಯಾದಲ್ಲಿ ಈ ತೀರ್ಪಿನ ಬಗ್ಗೆ ಚರ್ಚೆಯಾದರೆ ಅದರಿಂದ ಸರ್ಕಾರ ಏಕೆ ಇಷ್ಟೊಂದು ಗಾಬರಿ ಬೀಳಬೇಕು ? ಕಂಪನಿಗಳು ಏಕೆ ಭಯ ಬೀಳಬೇಕು ?
ಮಾಹಿತಿ ಬಹಿರಂಗವಾಗಬೇಕು. ಅದೊಂದೇ ಈಗ ಆಗಬೇಕಿರುವುದು.
ಬಾಂಡ್ ನ ಯೂನಿಕ್ ನಂಬರ್ ಬಹಿರಂಗವಾಗಬೇಕಿರುವುದು ಅತಿ ಅಗತ್ಯವಾಗಿದೆ.
ಯಾಕೆ ಅದನ್ನು ಕೊಡಲಾರದೆ ಏನೇನೋ ಕಥೆಗಳನ್ನು ಹೇಳುತ್ತ ದಿನಗಳನ್ನು ತಳ್ಳಲಾಗುತ್ತಿದೆ?
ಸುಪ್ರೀಂ ಕೋರ್ಟ್ ಆದೇಶ ಬಂದು ತಿಂಗಳಾದ ಬಳಿಕ ಫೆಡೆರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಅಂದ್ರೆ ಫಿಕ್ಕಿ, ಸಿಐಐ ಹಾಗು ಅಸೋಚಾಮ್ ಗಳು ಏಕೆ ಕೋರ್ಟ್ ಮೆಟ್ಟಿಲೇರುತ್ತವೆ ?
ಆದರೆ ಹಾಗೆ ಹೋದದ್ದಕ್ಕೆ ಈ ಸಂಸ್ಥೆಗಳು ಸುಪ್ರೀಂ ಕೋರ್ಟ್ನಿಂದ ಸರಿಯಾಗಿಯೇ ಪಾಠ ಕೇಳಿಸಿಕೊಂಡಿವೆ.
ಕಂಪನಿಗಳಿಗೂ ತಾವು ಯಾವ ಪಕ್ಷಕ್ಕೆ ಎಷ್ಟು ಕೊಟ್ಟಿದ್ದೇವೆ ಎಂಬುದನ್ನು ಬಹಿರಂಗಪಡಿಸಲು ಇರುವ ತೊಂದರೆಯೇನು? ಯಾಕೆ ಆ ಮಾಹಿತಿ ಬಹಿರಂಗವಾಗಬಾರದು ಎಂದು ಅವು ಬಯಸುತ್ತವೆ?
ಈಗ ಎಸ್ಬಿಐ ಎಲ್ಲ ಮಾಹಿತಿಗಳನ್ನೂ ಬಹಿರಂಗಪಡಿಸಲೇಬೇಕಿದೆ. ಮಾರ್ಚ್ 21ರಂದು ಏನಾಗಲಿದೆ ಎಂಬುದು ಕುತೂಹಲಕಾರಿ.
ಯಾರು ಇಲ್ಲಿ ಹೇಗೆಲ್ಲ ಫಲಾನುಭವಿಗಳು ಎಂಬುದು ಬಯಲಾಗಲೇಬೇಕಿದೆ.