ನಿವೃತ್ತಿ ಬೆನ್ನಿಗೇ ನ್ಯಾಯಾಧೀಶರಿಗೆ ಸರಕಾರಿ ಹುದ್ದೆ ಯಾಕೆ ಕೊಡಬೇಕು ? | Retired Judges | Government post
► ನ್ಯಾಯಾಧೀಶರಿಗೆ ಸರಕಾರಿ ಹುದ್ದೆ ಕೊಡುವ ಬಗ್ಗೆ ಜೇಟ್ಲಿ, ಗಡ್ಕರಿ ಆಗ ಹೇಳಿದ್ದೇನು ? ಈಗ ಆಗ್ತಾ ಇರೋದೇನು ?
Photo: PTI
ಜಸ್ಟಿಸ್ ಎ ಎಂ ಖಾನ್ವಿಲ್ಕರ್ ಅವರು ಹೊಸ ಲೋಕಪಾಲರಾಗಿ ನೇಮಕವಾದ ಬೆನ್ನಿಗೇ ನಿವೃತ್ತ ನ್ಯಾಯಾಧೀಶರಿಗೆ ಸರಕಾರಿ ಹುದ್ದೆ ಕೊಡುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಖಾನ್ವಿಲ್ಕರ್ ಅವರ ಅವಧಿಯಲ್ಲಿ ನೀಡಲಾದ ಹಲವು ತೀರ್ಪುಗಳು ಈಗ ಚರ್ಚೆಯಾಗುತ್ತಿವೆ. ವಿಶೇಷವೆಂದರೆ ಬಿಜೆಪಿಯ ಹಿರಿಯ ಮುಖಂಡರೇ 2014ರ ಮೊದಲು ನಿವೃತ್ತ ನ್ಯಾಯಾಧೀಶರಿಗೆ ಕೂಡಲೇ ಬೇರೆ ಸರಕಾರಿ ಹುದ್ದೆ ಕೊಡುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಈಗ ನಿವೃತ್ತರಾದ ಬೆನ್ನಿಗೇ ಬೇರೆ ಮಹತ್ವದ ಸರಕಾರಿ ಹುದ್ದೆ ಪಡೆಯುತ್ತಿರುವ ನ್ಯಾಯಾಧೀಶರ ಪಟ್ಟಿ ಬಹಳ ಉದ್ದವಿದೆ.
ಜಿಲ್ಲಾ ನ್ಯಾಯಾಲಯಗಳಿಂದ ಸುಪ್ರೀಂ ಕೋರ್ಟ್ ವರೆಗೂ ಇದು ನಡೆಯುತ್ತಿದೆ. ಮೊನ್ನೆ ಜ್ಞಾನವ್ಯಾಪಿ ಮಸೀದಿ ಕುರಿತು ತೀರ್ಪು ನೀಡಿದ ದಿನವೇ ನಿವೃತ್ತರಾದ ನ್ಯಾಯಾಧೀಶರಿಗೆ ಆದಿತ್ಯನಾಥ್ ಸರಕಾರ ಒಂದೇ ತಿಂಗಳೊಳಗೆ ಇನ್ನೊಂದು ಪ್ರಮುಖ ಸರಕಾರಿ ಹುದ್ದೆ ನೀಡಿದೆ. ಯಾಕೆ ನ್ಯಾಯಾಧೀಶರಿಗೆ ನಿವೃತ್ತರಾದ ಬೆನ್ನಿಗೇ ಬೇರೆ ಸರಕಾರಿ ಹುದ್ದೆ ಕೊಡಬೇಕು ? ಈಗಾಗಲೇ ನೂತನ ಲೋಕಪಾಲ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಅವರ ವಿಚಾರವಾಗಿ ಪ್ರಶ್ನೆಗಳು ಎದ್ದಿವೆ.
ಸುಪ್ರೀಂ ಕೋರ್ಟ್ನಿಂದ ನಿವೃತ್ತರಾಗಿರುವ ನ್ಯಾಯಮೂರ್ತಿ ಖಾನ್ವಿಲ್ಕರ್ ಅವರ ಕೆಲವು ತೀರ್ಪುಗಳು ಮೋದಿ ಸರ್ಕಾರಕ್ಕೆ ಬಿಗ್ ರಿಲೀಫ್ ನೀಡಿದ್ದವು ಎಂದು ಅವರ ಹಳೆಯ ತೀರ್ಪುಗಳನ್ನು ಉಲ್ಲೇಖಿಸಲಾಗುತ್ತಿದೆ. ನಿವೃತ್ತಿ ಬಳಿಕ ನ್ಯಾಯಾಧೀಶರಿಗೆ ಹೊಸ ಹುದ್ದೆ ನೀಡುವುದರ ಸಂಬಂಧ ಪ್ರಶ್ನೆಗಳು ಏಳುತ್ತಿರುವುದು ಇದೇ ಮೊದಲೇನೂ ಅಲ್ಲ.
ನ್ಯಾ. ರಂಜನ್ ಗೊಗೊಯ್, ನ್ಯಾ. ಅಶೋಕ್ ಭೂಷಣ್ ಮತ್ತು ನ್ಯಾ.ಎಸ್ ಅಬ್ದುಲ್ ನಜೀರ್ ಅವರನ್ನು ಬೇರೆ ಹುದ್ದೆಗಳಿಗೆ ನೇಮಕ ಮಾಡಿರುವುದು ಕೂಡ ಚರ್ಚೆಗೆ ಈಗಾಗಲೇ ಎಡೆ ಮಾಡಿಕೊಟ್ಟಿದ್ದನ್ನು ನೆನಪು ಮಾಡಿಕೊಳ್ಳಬಹುದು. 2014ರ ಮೊದಲು ಇಂತಹ ನೇಮಕಾತಿಗಳು ನಡೆದಿಲ್ಲವೆಂದಲ್ಲ. ಆದರೆ ಅದರ ಹೆಸರಿನಲ್ಲಿ ಇಂದು ಆಗುತ್ತಿರುವುದನ್ನು ಸಮರ್ಥಿಸಿಕೊಳ್ಳಬಹುದೇ?
ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಅದರ ಹಿರಿಯ ನಾಯಕರು ನಿವೃತ್ತ ನ್ಯಾಯಮೂರ್ತಿಗಳು ಸರ್ಕಾರಿ ಹುದ್ದೆ ಪಡೆಯುವುದನ್ನು ಸ್ಪಷ್ಟವಾಗಿ ವಿರೋಧಿಸಿದ್ದರಲ್ಲವೆ?
ಈಗ ಅವರದೇ ಸರ್ಕಾರದಲ್ಲಿ ಆಗುತ್ತಿರುವುದಾದರೂ ಏನು? ನಿವೃತ್ತ ನ್ಯಾಯಮೂರ್ತಿಗಳನ್ನ ನೇಮಿಸಲು ನಿವೃತ್ತಿ ನಂತರ ಎರಡು ವರ್ಷಗಳಾದರೂ ಅಂತರ ಇರಬೇಕೆಂದು 2012ರಲ್ಲಿ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದರು.
ಇಲ್ಗದೆ ಹೋದರೆ ನ್ಯಾಯಾಂಗದ ಮೇಲೆ ಸರ್ಕಾರ ಪ್ರಭಾವ ಬೀರಲು ಪ್ರಯತ್ನಿಸುವ ಸಾಧ್ಯತೆ ಇರುತ್ತದೆ ಎಂದಿದ್ದರು. ಅಷ್ಟೇ ಅಲ್ಲ, ಸುಪ್ರೀಮ್ ಕೋರ್ಟ್ ಹಾಗೂ ಹೈಕೋರ್ಟಿನ ಯಾವ ನ್ಯಾಯಮೂರ್ತಿಗಳಿಗೆ ಮತ್ತೆ ಯಾವ ಆಯೋಗದ ಹುದ್ದೆ ಕೊಡಬೇಕು ಎಂದು ಮೊದಲೇ ನಿರ್ಧಾರ ಆಗಿರುತ್ತದೆ ಎಂದೂ ಗಡ್ಕರಿ ಹೇಳಿದ್ದರು.
ಬಿಜೆಪಿಯ ಇನ್ನೊಬ್ಬ ಹಿರಿಯ ನಾಯಕ ದಿವಂಗತ ಅರುಣ್ ಜೇಟ್ಲಿ ಅವರೂ " ನಿವೃತ್ತಿ ನಂತರ ನ್ಯಾಯಮೂರ್ತಿಗಳು ಬೇರೆ ಹುದ್ದೆ ಪಡೆದರೆ ಅವರು ನಿವೃತ್ತಿಯಿಂದ ಮೊದಲು ನೀಡಿದ ತೀರ್ಪುಗಳ ಬಗ್ಗೆ ಸಂಶಯ ಉಂಟಾಗುತ್ತದೆ ಎಂದು ಹೇಳಿದ್ದರು. ನ್ಯಾಯಾಧೀಶರು ನಿವೃತ್ತಿ ನಂತರದ ಹುದ್ದೆಗಳಿಗೆ ಆಸೆಪಡುವುದು ಅವರು ಹುದ್ದೆಯಲ್ಲಿರುವಾಗ ನೀಡುವ ತೀರ್ಪುಗಳನ್ನು ಪ್ರಭಾವಿಸುತ್ತವೆ ಎಂದು 2013ರಲ್ಲಿ ಪಿಯೂಷ್ ಗೋಯಲ್ ಅವರು ಅರುಣ್ ಜೇಟ್ಲಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿದ್ದರು.
ಈ ಇಬ್ಬರೂ ಈಗ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ಈಗ ಇವರಿಬ್ಬರೂ ವಿಪಕ್ಷದಲ್ಲಿದ್ದಿದ್ದರೆ ಖಾನ್ವಿಲ್ಕರ್ ಅವರು ಲೋಕಪಾಲರಾಗಿ ನೇಮಕವಾದ ಬಗ್ಗೆ ಏನು ಹೇಳುತ್ತಿದ್ದರು?
ಖಾನ್ವಿಲ್ಕರ್ ಅವರು ನೀಡಿದ್ದ ತೀರ್ಪುಗಳಿಗೂ ಈಗಿನ ಅವರ ನೇಮಕಕ್ಕೂ ಸಂಬಂಧವಿದೆಯೆ ಇಲ್ಲವೆ ಎಂಬುದನ್ನು ಹೇಳಲಾಗದು.
ಇನ್ನು ಲೋಕಪಾಲ ನೇಮಕ ಸಮಿತಿಯಲ್ಲಿ ಪ್ರಧಾನಿ ಜೊತೆ ಸ್ಪೀಕರ್ , ವಿಪಕ್ಷ ನಾಯಕ ಹಾಗೂ ಸಿಜೆಐ ಕೂಡ ಇರುತ್ತಾರೆ.
ಆದರೆ ಜಸ್ಟಿಸ್ ಖಾನ್ವಿಲ್ಕರ್ ಅವರ ಕೆಲವು ತೀರ್ಪುಗಳ ಕುರಿತು ಮಾತಾಡಲೇಬೇಕಾಗುತ್ತದೆ.
ಈಡಿ ವಿಚಾರವಾಗಿ ಅವರು ನೀಡಿದ್ದ ತೀರ್ಪು ಅಂಥವುಗಳಲ್ಲಿ ಒಂದು.
ನಿವೃತ್ತಿಗೆ ಎರಡು ದಿನ ಮೊದಲು ಈಡಿ ವಿಚಾರದಲ್ಲಿ ಒಂದು ದೊಡ್ಡ ತೀರ್ಪು ಕೊಟ್ಟಿದ್ದರು. ಅದು ಈಡಿ ಶಕ್ತಿಯನ್ನು ಹೆಚ್ಚು ಮಾಡಿಬಿಟ್ಟಿತು.
ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಮತ್ತು ಈಡಿ ಸಂಸ್ಥೆಗೆ ಮಾಡಿದ ತಿದ್ದುಪಡಿಯ ಕರಾಳ ಶಾಸನದ ವಿರುದ್ಧ ಸುಮಾರು 200 ಅರ್ಜಿಗಳು ದಾಖಲಾಗಿದ್ದವು.
ಈ ತಿದ್ದುಪಡಿಯ ಅನುಸಾರ ಆರೋಪಿಗಳಿಗೆ ಎಫ್ಐಆರ್ ಪ್ರತಿ ಕೊಡುವ ಅಗತ್ಯವಿಲ್ಲ, ಆರೋಪಿಯನ್ನು ಬಂಧಿಸಿದ ತಕ್ಷಣ ಆತ ಅಪರಾಧಿ ಎಂದು ಪರಿಗಣಿಸುವುದು, ತಾನು ನಿರಪರಾಧಿ ಎಂದು ಸ್ವತಃ ಆರೋಪಿಯೆ ಸಾಬೀತುಪಡಿಸಬೇಕು ಮತ್ತು ಅಲ್ಲಿಯವರೆಗೂ ಬೇಲ್ ನಿರಾಕರಣೆ, ಎನ್ನುವಂತಹ ಆ ಕರಾಳ ಶಾಸನವನ್ನು ಖಾನ್ವಿಲ್ಕರ್ ಒಳಗೊಂಡ ಮೂವರು ಸದಸ್ಯರ ವಿಭಾಗೀಯ ಪೀಠ ಮಾನ್ಯ ಮಾಡಿತ್ತು.
ಈಗ ಈಡಿ ಸತತವಾಗಿ ಕೇವಲ ವಿಪಕ್ಷಗಳ ಬೆನ್ನು ಬಿದ್ದಿದೆ. ಎಎಪಿಯ ಮನೀಶ್ ಸಿಸೋಡಿಯ ವರ್ಷದಿಂದ ಜೈಲಿನಲ್ಲಿದ್ದಾರೆ, ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದಾರೆ. ಜಾರ್ಖಂಡ್ ಮಾಜಿ ಸಿಎಂ ಜೆಎಂಎಂನ ಹೇಮಂತ್ ಸೋರೇನ್ ಜೈಲುಪಾಲಾಗಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಸತತ ಸಮನ್ಸ್ಗಳು ಬರುತ್ತಿವೆ.
ಬಚಾವಾಗಲು ವಿಪಕ್ಷಗಳ ಎಷ್ಟೋ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಬಿಜೆಪಿ ಸೇರಿದ ಕೂಡಲೇ ಅವರ ವಿರುದ್ಧದ ಈ ಡಿ ತನಿಖೆ ನಿಂತು ಬಿಡುತ್ತದೆ. ಹಾಗಾಗಿ ಈಗ ಈ ಡಿ ಎಂಬುದು ವಿಪಕ್ಷಗಳ ನಾಯಕರನ್ನು ಬೇಟೆಯಾಡುವ ಸಂಸ್ಥೆ ಎಂಬಂತಾಗಿದೆ. ಖಾನ್ವಿಲ್ಕರ್ 2022ರಲ್ಲಿ ನಿವೃತ್ತಿ ಹೊಂದಿದ್ದರು. ನಿವೃತ್ತರಾದ ಒಂದೂವರೆ ವರ್ಷದ ಬಳಿಕ ಅವರು ಲೋಕಪಾಲ್ ಆಗಿ ನೇಮಕಗೊಂಡಿದ್ಧಾರೆ.
ಖಾನ್ವಿಲ್ಕರ್ ಅವರ ಈ ನೇಮಕವು ನಿವೃತ್ತಿಯ ನಂತರ ನ್ಯಾಯಾಧೀಶರಿಗೆ ಉನ್ನತ ಹುದ್ದೆಗಳನ್ನು ನೀಡುವ ಸಂಪ್ರದಾಯದ ಮುಂದುವರಿಕೆಗೆ ನಿದರ್ಶನವಾಗಿದೆ. ತಮ್ಮ ಕರ್ತವ್ಯದ ಕೊನೆಯ ದಿನವಾದ ಜನವರಿ 31ರಂದು ಜ್ಞಾನವಾಪಿ ಮಸೀದಿಯ ನೆಲ ಮಹಡಿಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿ ತೀರ್ಪು ಪ್ರಕಟಿಸಿದ್ಧ ನ್ಯಾ. ಎ ಕೆ ವಿಶ್ವೇಶ ಅವರನ್ನು ನಿವೃತ್ತರಾಗಿ ಒಂದು ತಿಂಗಳೂ ಆಗುವ ಮೊದಲೇ ಉತ್ತರ ಪ್ರದೇಶ ಸರ್ಕಾರ ಲಕ್ನೋದ ಡಾ. ಶಕುಂತಳಾ ಮಿಶ್ರಾ ನ್ಯಾಷನಲ್ ರಿಹೆಬಿಲಿಟೇಶನ್ ವಿಶ್ವವಿದ್ಯಾಲಯಕ್ಕೆ ಲೋಕ್ಪಾಲ್ ಆಗಿ ನೇಮಿಸಿದೆ.
ತ್ರಿವಳಿ ತಲಾಖ್, ಎಸ್ಸಿ ಎಸ್ಟಿ ಕಾಯ್ದೆ, ವಿಚಾರವಾಗಿ ತೀರ್ಪು ನೀಡಿದ್ದ ನ್ಯಾ.ಎಕೆ ಗೋಯಲ್ ಅವರನ್ನು ಸುಪ್ರೀಂ ಕೋರ್ಟ್ನಿಂದ ನಿವೃತ್ತಿ ಹೊಂದಿದ ದಿನವೇ ಎನ್ ಜಿ ಟಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು.
ರಾಮಮಂದಿರ ಕುರಿತ ತೀರ್ಪು ಕೊಟ್ಟಿದ್ದ ಪೀಠದ ಐವರಲ್ಲಿ ಮೂವರಿಗೆ ನಿವೃತ್ತಿ ನಂತರ ಒಂದಲ್ಲ ಒಂದು ಹುದ್ದೆ ನೀಡಲಾಗಿದೆ. ಬಾಬರಿ ಮಸೀದಿ- ರಾಮಜನ್ಮ ಭೂಮಿ ವಿವಾದದ ತೀರ್ಪು ನೀಡಿದ್ದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಸುಪ್ರೀಂಕೋರ್ಟ್ನಿಂದ ಸಿಜೆಐ ಆಗಿ ನಿವೃತ್ತರಾದ ನಾಲ್ಕೇ ತಿಂಗಳಲ್ಲಿ ಮೋದಿ ಸರ್ಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.
ಜುಲೈ 2021ರಲ್ಲಿ ನಿವೃತ್ತರಾದ ನ್ಯಾ. ಅಶೋಕ್ ಭೂಷಣ್ ಅವರನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ನ್ಯಾ. ಎಸ್. ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ಗವರ್ನರ್ ಆಗಿ 2023ರಲ್ಲಿ ನೇಮಿಸಲಾಗಿತ್ತು.
ಆಗ ಕಾಂಗ್ರೆಸ್ ನ ಅಭಿಷೇಕ್ ಮನು ಸಿಂಘ್ವಿ ನಿವೃತ್ತಿ ನಂತರ ನ್ಯಾಯಾಧೀಶರನ್ನು ಬೇರೆ ಹುದ್ದೆಗಳಿಗೆ ನೇಮಿಸುವ ವಿಚಾರದಲ್ಲಿ ಬಿಜೆಪಿಯವರು ಏನು ಹೇಳಿದ್ದರೆಂಬುದನ್ನು ನೆನಪಿಸಿದ್ದರು. ಮೋದಿ ಸರಕಾರ ಬಂದ ವರ್ಷವೇ ದೇಶದ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ಜಸ್ಟಿಸ್ ಪಿ ಸದಾಶಿವಂ ಅವರನ್ನು ಕೇರಳ ಗವರ್ನರ್ ಹುದ್ದೆಗೆ ನೇಮಿಸಲಾಯಿತು.
ಸುಪ್ರೀಮ್ ಕೋರ್ಟ್ ನಲ್ಲಿ ಅಮಿತ್ ಶಾ ಅವರ ವಿರುದ್ಧದ ನಕಲಿ ಎನ್ಕೌಂಟರ್ ಪ್ರಕರಣದ ಎರಡನೇ ಎಫ್ ಐ ಆರ್ ರದ್ದು ಪಡಿಸಿದ ಪೀಠದಲ್ಲಿ ಜಸ್ಟಿಸ್ ಸದಾಶಿವಂ ಅವರಿದ್ದರು. ರಾಜ್ಯಪಾಲರಾಗಿ ನೇಮಕವಾದಾಗ ಅವರ ಆ ತೀರ್ಪು ಚರ್ಚೆಗೆ ಬಂತು.
ರಾಜ್ಯಸಭೆಗೆ ಹೋದ ರಂಜನ್ ಗೊಗೊಯ್ ಒಂದಾದರೂ ಪ್ರಶ್ನೆಯನ್ನು ಸಂಸತ್ತಿನಲ್ಲಿ ಎತ್ತಿದರೆ? ಮಣಿಪುರದಲ್ಲಿನ ಕರಾಳತೆ ಬಗ್ಗೆ ಅವರೇನಾದರೂ ಮಾತಾಡಿದರೆ? ಸುಮ್ಮನೆ ಕೂತಿರಲು, ಪ್ರಶ್ನೆ ಮಾಡದೇ ಇರಲು ಅವರು ರಾಜ್ಯಸಭೆಗೆ ಹೋದರೆ? ಯಾಕೆ ಇದಕ್ಕಾಗಿ ಅವರು ರಾಜ್ಯಸಭೆಗೆ ಹೋಗಬೇಕಿತ್ತು?
ಒಂದು ಕಡೆ ಮೋದಿ ಸರ್ಕಾರಕ್ಕೆ ಖುಷಿ ಕೊಟ್ಟ ತೀರ್ಪು ನೀಡಿದವರು ನಿವೃತ್ತರಾದ ಬೆನ್ನಿಗೇ ಬೇರೆ ಪ್ರಮುಖ ಸರಕಾರಿ ಹುದ್ದೆ ಪಡೀತಾರೆ.
ಇನ್ನೊಂದು ಕಡೆ ಸುಪ್ರೀಮ್ ಕೋರ್ಟ್ ಗೆ ಬರಲೇ ಬೇಕಿದ್ದ ಅತ್ಯಂತ ಪ್ರತಿಭಾವಂತ, ಅನುಭವೀ ನ್ಯಾಯಾಧೀಶರು ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾಗುವ ಅವಕಾಶವನ್ನೇ ತಪ್ಪಿಸಲಾಗುತ್ತಿದೆ ಎಂಬ ಆರೋಪವೂ ಇದೆ.
ಜಸ್ಟಿಸ್ ಅಖಿಲ್ ಖುರೇಷಿ ಹಾಗೂ ಜಸ್ಟಿಸ್ ಎಸ್ ಮುರಳೀಧರ್ ಅವರು ದೇಶ ಕಂಡ ಅತ್ಯುತ್ತಮ ನ್ಯಾಯಾಧೀಶ ರಾಗಿದ್ದರು. ಆದರೆ ಅವರಿಬ್ಬರೂ ಕೊನೆಗೂ ಸುಪ್ರೀಮ್ ಕೋರ್ಟ್ ತಲುಪಲೇ ಇಲ್ಲ. ಅವರು ಕೊಟ್ಟ ಕೆಲವು ತೀರ್ಪುಗಳೆ ಅವರಿಗೆ ಮುಳುವಾದವು ಎಂಬ ಆರೋಪಗಳಿವೆ. ಹಿಂದೆಯೂ ಹೀಗೆಯೇ ಆಗುತ್ತಿತ್ತು. ಹಿಂದೆ ಆಗುತ್ತಿದ್ದದ್ದು ಸರಿ ಇತ್ತೆ ? ಈಗ ಆಗುತ್ತಿರುವುದು ಸರಿ ಇದೆಯೆ? ಹಿಂದೆ ಯವುದೂ ಸರಿ ಇರಲಿಲ್ಲ, ನಾವು ಬಂದಿರುವುದೇ ಎಲ್ಲವನ್ನೂ ಸರಿ ಪಡಿಸಲು ಎಂದು ಹೇಳಿದವರು ಅಧಿಕಾರಕ್ಕೆ ಬಂದ ಮೇಲೆ ಆಗಿದ್ದೇನು ?
ಈ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ನಿವೃತ್ತ ನ್ಯಾಯಮೂರ್ತಿಗಳಿಗೆ ಸರಕಾರಿ ಹುದ್ದೆಗಳು ಸಿಗುತ್ತಿರುವುದು ಹೇಗೆ ? ಮತ್ತು ಯಾಕೆ ?
ಈ ಒಟ್ಟು ಪ್ರಕ್ರಿಯೆಯಲ್ಲಿಯೇ ಸುಧಾರಣೆ ಆಗಬೆಕಿದೆ. ಯೋಗ್ಯತೆ ಆಧಾರದಲ್ಲಿ ಕೆಲವರ ನೇಮಕ ಆಗುತ್ತದೆ ಮತ್ತು ಅದು ಅನಿವಾರ್ಯವೂ ಹೌದು. ಪ್ರತಿ ನೇಮಕಕ್ಕೂ ಅಂಥ ಅಗತ್ಯವಿತ್ತು ಎಂಬುದನ್ನು ಸಾಬೀತುಪಡಿಸಬಲ್ಲ ಬಲವಾದ ಕಾರಣಗಳಿರಬೇಕು.
ಇಲ್ಲದೇ ಹೋದಲ್ಲಿ ನ್ಯಾಯದ ಬಗ್ಗೆಯೇ ಅನುಮಾನ ಮೂಡಲು ಇಂಥ ಬೆಳವಣಿಗೆಗಳು ಕಾರಣವಾಗುತ್ತವೆ. ರಂಜನ್ ಗೊಗೋಯ್ ವಿಚಾರವಾಗಿಯೂ ಇದೇ ಥರದ ಅನುಮಾನಗಳು ಎದ್ದಿದ್ದವು. ಅವರು ಕೊಟ್ಟ ತೀರ್ಪಿನ ಋಣ ತೀರಿಸಕೊಳ್ಳಲು ರಾಜ್ಯಸಭಾ ಸದಸ್ಯತ್ವ ನೀಡಲಾಗಿದೆ ಎಂದು ಟೀಕಿಸಲಾಗಿತ್ತು. ನಿವೃತ್ತಿಗೆ ಒಂದು, ಎರಡು ದಿನ ಮೊದಲು, ವಾರದ ಮೊದಲು, ತಿಂಗಳ ಮೊದಲು ಸರ್ಕಾರಕ್ಕೆ ಅನುಕೂಲಕರ ತೀರ್ಪು ಕೊಡುವುದು, ಮತ್ತದಕ್ಕೆ ಪ್ರತಿಯಾಗಿ ಹೊಸ ಹುದ್ದೆಯ ಇನಾಮು ಪಡೆಯುವುದು ನಡೆದುಬರತೊಡಗಿದೆ.
ಮೊದಲೆಲ್ಲ ಇದು ಬಹಳ ನಾಜೂಕಾಗಿ ಅಲ್ಲೊಂದು ಇಲ್ಲೊಂದು ನಡೆಯುತ್ತಿತ್ತು. ಈಗ ಯಾವ ಮುಲಾಜು, ಹಿಂಜರಿಕೆ ಇಲ್ಲದೆ ರಾಜಾರೋಷವಾಗಿಯೇ ನಡೆಯುತ್ತಿದೆ. ಹುದ್ದೆ ನೀಡುವ ಸರಕಾರವೂ ಯಾವುದೇ ಮುಲಾಜು ತೋರಿಸುತ್ತಿಲ್ಲ, ಹುದ್ದೆ ಪಡೆಯುವ ನ್ಯಾಯಮೂರ್ತಿಗಳೂ ಯಾವುದೇ ಹಿಂಜರಿಕೆ ತೋರಿಸುತ್ತಿಲ್ಲ.
ಇದು ಹೀಗೇ ನಡೆಯೋದು, ವ್ಯವಸ್ಥೆಯೇ ಹೀಗೇ ಎಂಬಂತೆ ಎಗ್ಗಿಲ್ಲದೆ ಈ ನಿವೃತ್ತಿ ಬೆನ್ನಿಗೇ ಸರಕಾರಿ ಹುದ್ದೆ ಕೊಡುವ ಪ್ರಕ್ರಿಯೆ ನಡೆಯುತ್ತಿದೆ.
ಇದಾವ ಬಗೆಯ ಕೊಡಕೊಳ್ಳುವ ವ್ಯವಹಾರ ? ಇದು ಯಾವ ಸ್ಥಿತಿಯನ್ನು ಸೂಚಿಸುತ್ತದೆ ? ಮದರ್ ಆಫ್ ಡೆಮಾಕ್ರಸಿಗೆ , ವಿಶ್ವ ಗುರುವಿಗೆ ಹೇಳಿದ ಮಾದರಿಯೇ ಇದು ?