ಮನೆಗೆ ಹೋಗಿ ಬೆಂಬಲ ಕೇಳುವ ಅನಿವಾರ್ಯತೆ ಯಾಕೆ ಬಂತು ?
► ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅಷ್ಟು ಪ್ರಭಾವೀ ನಾಯಕಿಯೇ ? ► ಕುಮಾರಸ್ವಾಮಿಯ ಅನಿವಾರ್ಯತೆಗಳೇನು ? ಸುಮಲತಾ ಎದುರಿರುವ ಸಾಧ್ಯತೆಗಳೇನು ?
ಸುಮಲತಾ
ತನ್ನ ಪುತ್ರನನ್ನು ಸೋಲಿಸಿದ್ದ ದ್ವೇಷವನ್ನೂ ಬದಿಗಿಟ್ಟು ಮಾಜಿ ಸಿಎಂ, ಜೆಡಿಎಸ್ ನ ಪ್ರಮುಖ ನಾಯಕ, ಒಕ್ಕಲಿಗ ಸಮುದಾಯದ ಅತ್ಯಂತ ಪ್ರಭಾವೀ ಮುಖಂಡ ಕುಮಾರಸ್ವಾಮಿ ಅವರು ಸುಮಲತಾ ಎಂಬ ಪಕ್ಷೇತರ ಸಂಸದೆ ಮನೆಗೆ ಹೋಗಿ, " ಆಗಿದ್ದು ಆಗಿ ಹೋಯಿತು, ಮರೆತು ಬಿಡಿ, ನನಗೆ ಬೆಂಬಲ ನೀಡಿ " ಎಂದು ಮನವಿ ಮಾಡಿದ್ದಾರೆ.
ಹಾಗಾದರೆ ಐದು ವರ್ಷಗಳ ಹಿಂದೆ ರಾಜಕೀಯಕ್ಕೆ ಬಂದ ಸುಮಲತಾ ಹೇಗೆ ಇಷ್ಟು ಪ್ರಭಾವೀ ನಾಯಕಿ ಆದರು ? ಅವರ ಮನೆಗೆ ಬಂದು ಬೆಂಬಲ ಕೇಳುವಂತಹ ಅದ್ಯಾವ ಅನಿವಾರ್ಯತೆ ಕುಮಾರಸ್ವಾಮಿಯಂತಹ ಹಿರಿಯ , ಪ್ರಭಾವೀ ನಾಯಕನಿಗೆ ಇತ್ತು ? ಜೆಡಿಎಸ್ ನ ಪಾಳೇಗಾರ ಮನಸ್ಥಿತಿಯ ನಾಯಕರು ಒಬ್ಬ ಸಂಸದೆಯ ಮನೆಗೆ ಹೋಗಿ ಬೆಂಬಲಕ್ಕಾಗಿ ವಿನಂತಿಸುವ ಸ್ಥಿತಿ ನಿರ್ಮಾಣ ಆಗಿದ್ದು ಹೇಗೆ ?
ಅಂಬರೀಶ್ ಪತ್ನಿ, ಒಂದು ಕಾಲದ ನಟಿ ಸುಮಲತಾ ಇವತ್ತು ಮಂಡ್ಯದಲ್ಲಿ ಇಷ್ಟು ಪ್ರಭಾವೀ ನಾಯಕಿ ಆಗಿದ್ದು ಹೇಗೆ ?
ಇದರ ಹಿಂದೆ ಕೆಲಸ ಮಾಡಿರುವ ಅಂಶಗಳು ಏನೇನು ? ಅವರ ಮುಂದಿನ ನಡೆ ಏನಿರಲಿದೆ ? ಅದು ಮಂಡ್ಯದಲ್ಲಿ ಬೀರುವ ಪರಿಣಾಮಗಳು ಏನು ? ಬಿಜೆಪಿಯಿಂದ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿದ್ದರು ಸುಮಲತಾ. ತನಗೆ ಕೊಡದೆ ಬಿಜೆಪಿ ಇಲ್ಲಿ ಇನ್ಯಾರಿಗೆ ಟಿಕೆಟ್ ನೀಡಲು ಸಾಧ್ಯ ಎಂಬ ಭಾವನೆಯಲ್ಲಿಯೇ ಇದ್ದರು.
ಆದರೆ ಬಿಜೆಪಿ ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿತು. ಬಹುಶಃ ಅದು ಉದ್ದೇಶಪೂರ್ವಕ ತೀರ್ಮಾನವೇ ಆಗಿದ್ದರೂ ಇರಬಹುದು.
ಅಂತೂ ಸುಮಲತಾ ಪಾಲಿಗೆ ಮಾತ್ರ ಇದು ಅನಿರೀಕ್ಷಿತ ಹಿನ್ನಡೆಯಾಗಿ ಹೋಯ್ತು. ಹೀಗೊಂದು ಬೆಳವಣಿಗೆಯನ್ನು ಅವರು ನಿರೀಕ್ಷೆ ಮಾಡಿರಲಿಲ್ಲ. ಅದಾದ ಮೇಲೆ ಅವರು ಮಂಡ್ಯ ಜನರನ್ನು ಬಿಟ್ಟು ತಾವು ರಾಜಕೀಯ ಮಾಡುವುದಿಲ್ಲ. ಮಂಡ್ಯ ನನ್ನ ಕ್ಷೇತ್ರ, ಅದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದೆಲ್ಲ ಹೇಳುತ್ತ, ಪಕ್ಷೇತರರಾಗಿ ಸ್ಪರ್ಧಿಸಲೂಬಹುದು ಎಂಬ ಅನುಮಾನವನ್ನು ಮೂಡಿಸಿದ್ದಾರೆ.
ಮತ್ತು ತಮ್ಮ ನಿರ್ಧಾರವನ್ನು ಕ್ಷೇತ್ರದ ಜನರ ಜೊತೆ ಚರ್ಚಿಸಿ ಅವರ ಸಮ್ಮುಖದಲ್ಲಿಯೇ ಏಪ್ರಿಲ್ 3ರಂದು ಘೋಷಿಸುವುದಾಗಿಯೂ ಹೇಳಿದ್ದಾರೆ.
ಈ ನಡುವೆ ಕುಮಾರಸ್ವಾಮಿಯವರು ಭಾನುವಾರ ಸುಮಲತಾ ಅವರನ್ನು ಜೆಪಿ ನಗರದ ಅವರ ಮನೆಗೆ ಹೋಗಿ ಭೇಟಿಯಾಗಿದ್ದಾರೆ. ಬೆಂಬಲ ಕೇಳಿದ್ದಾರೆ ಎಂಬುದು ಭೇಟಿ ನಂತರದ ಇಬ್ಬರೂ ನಾಯಕರ ಹೇಳಿಕೆಗಳಿಂದ ಗೊತ್ತಾಗಿದೆ.
ನಾನು ಅವರು ಸಹಾಯ ಕೇಳಿದ್ದೇನೆ. ಅವರು ಅಭಿಮಾನಿಗಳು, ಬೆಂಬಲಿಗರ ಜೊತೆ ಚರ್ಚಿಸಿ ಅವರ ಸಮ್ಮುಖದಲ್ಲಿ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ ಎಂದು ಭೇಟಿ ಬಳಿಕ ಕುಮಾರಸ್ವಾಮಿ ಹೇಳಿದ್ದಾರೆ. ಕಾರ್ಯಕರ್ತರೊಂದಿಗೆ ಮತ್ತೊಮ್ಮೆ ಸಭೆ ನಡೆಸಿ, ನನಗಿರುವ ಒಂದಷ್ಟು ಪ್ರಶ್ನೆ, ಅನುಮಾನಗಳನ್ನು ನಿವಾರಿಸಿಕೊಂಡು ಮಂಡ್ಯದಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸುಮಲತಾ ಹೇಳಿದ್ದಾರೆ.
ಈ ಮಧ್ಯೆ ಕುಮಾರಸ್ವಾಮಿ ಭೇಟಿಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಸುಮಲತಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ವಿಜಯೇಂದ್ರ ಅವರೊಂದಿಗೆ ಕೆಲವು ವಿಚಾರ ಚರ್ಚೆ ಆಗಿದೆ. ಮಂಡ್ಯ ಕಾರ್ಯಕರ್ತರ ಸಭೆ ಬಳಿಕ ನನ್ನ ನಿರ್ಧಾರವನ್ನು ಕ್ಷೇತ್ರದಲ್ಲಿಯೇ ತಿಳಿಸುತ್ತೇನೆ ಎಂದು ಸುಮಲತಾ ಹೇಳಿದರೆ, ಬಿಜೆಪಿಗೆ ಅವರ ಸಹಕಾರ ಕೇಳಿದ್ದೇನೆ. ಸುಮಲತಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲವೂ ಸರಿಹೋಗಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಹಾಗಾದರೆ ಏಪ್ರಿಲ್ 3ಕ್ಕೆ ಸುಮಲತಾ ಪ್ರಕಟಿಸಲಿರುವ ನಿರ್ಧಾರ ಏನಿರಬಹುದು? ಅವರು ಪಕ್ಷೇತರರಾಗಿ ಕಣಕ್ಕಿಳಿಯುತ್ತಾರಾ? ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುತ್ತಾರಾ? ಅಥವಾ ನಿರ್ಲಿಪ್ತವಾಗುಳಿಯಲು ತೀರ್ಮಾನಿಸಿ, ಪರೋಕ್ಷವಾಗಿ ಕಾಂಗ್ರೆಸ್ಗೆ ಅನುಕೂಲವಾಗುವಂತೆ ನೋಡಿಕೊಳ್ಳಲು ಮುಂದಾಗುತ್ತಾರಾ?
ಸದ್ಯಕ್ಕೆ ಇವು ಪ್ರಶ್ನೆಗಳು ಮಾತ್ರ. ಆದರೆ ಕಳೆದ ಐದು ವರ್ಷಗಳಲ್ಲಿ ಮಂಡ್ಯ ರಾಜಕೀಯದಲ್ಲಿ ಏನೇನೆಲ್ಲಾ ಆಗಿಹೋಯಿತು ಮತ್ತದು ರಾಜ್ಯ ರಾಜಕಾರಣವನ್ನೂ ಪ್ರಭಾವಿಸುವ ಹಾಗಾದದ್ದು ಹೇಗೆ ? ಎಲ್ಲವೂ ಶರುರುವಾದದ್ದು ಸ್ವಾಭಿಮಾನದ ಪ್ರಶ್ನೆಯೊಂದಿಗೆ ಸುಮಲತಾ ಸೆರಗೊಡ್ಡಿ ಮತ ಕೇಳಿದರಲ್ಲ, ಅಲ್ಲಿಂದ. 2019 ರಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಕೊಡಲು ನಿರ್ಧರಿಸಿದಾಗ ಸ್ವಾಭಿಮಾನಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೆಡ್ಡು ಹೊಡೆದವರು ಸುಮಲತಾ ಅಂಬರೀಶ್.
ಸರಕಾರದ ಅಬ್ಬರದ ಎದುರು ಮಂಡ್ಯದ ಸೊಸೆಯ ಹೋರಾಟ ಎಂದು ಬಿಂಬಿತವಾದ ಆ ಚುನಾವಣೆಯಲ್ಲಿ ಮಂಡ್ಯದ ಜನರು ಸುಮಲತಾ ಕೈ ಹಿಡಿದರು. ಮತ ನೀಡಿ ಆಶೀರ್ವದಿಸಿದರು. ಅದು ಎಂಥ ಪರಿಣಾಮ ಬೀರಿತೆಂದರೆ, ಕುಮಾರಸ್ವಾಮಿ ಸಿಎಂ ಆಗಿರುವಾಗಲೇ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲನ್ನು ಅನುಭವಿಸಬೇಕಾಯಿತು. ಅನಂತರದ್ದು ಮತ್ತೊಂದೇ ಪರ್ವ. ಅದು ಜೆಡಿಎಸ್ ಅದಕ್ಕಿಂತ ಹೆಚ್ಚಾಗಿ ಕುಮಾರಸ್ವಾಮಿ ಮತ್ತು ಸುಮಲತಾ ನಡುವಿನ ಜಿದ್ದಾಜಿದ್ದಿ.
ಮಗನ ಸೋಲನ್ನು ಅರಗಿಸಿಕೊಳ್ಳಲಾರದ ಹತಾಶೆಯಲ್ಲಿ ಕುಮಾರಸ್ವಾಮಿ ಬಿದ್ದಿದ್ದನ್ನು ಕೂಡ ಜನರು ಮತ್ತು ರಾಜಕೀಯ ವಲಯ ನೋಡಬೇಕಾಯಿತು.ಅನಂತರ ಏನೇನೆಲ್ಲ ಆಯಿತು? ಹೇಗೆಲ್ಲ ಬೀದಿರಂಪದಂತೆ ಆ ಸಂಘರ್ಷ ಬೆಳೆದಿತ್ತು ಎಂಬುದನ್ನು ರಾಜ್ಯದ ಜನತೆ ಕಂಡಿದೆ.
ಆಮೇಲೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದರು. ಮೋದಿ ಗುಣಗಾನ ಪ್ರಾರಂಭಿಸಿದರು. ಆದಿತ್ಯನಾಥ್ ರಂತಹ ಸಿಎಂ ರಾಜ್ಯಕ್ಕೆ ಸಿಗಬೇಕು ಎಂದು ಬಿಟ್ಟರು. ಆದರೆ ಅಧಿಕೃತವಾಗಿ ಬಿಜೆಪಿ ಸೇರಲಿಲ್ಲ. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಅವರು ಸಜ್ಜಾಗಿದ್ದರು. ಪಕ್ಷದ ಹೈಕಮಾಂಡ್ ಜೊತೆ ಸಾಕಷ್ಟು ಬಾರಿ ಮಾತಾಡಿದ್ದರು.
ಆದರೆ ಕೊನೆಗೂ ಕುಮಾರಸ್ವಾಮಿ ಹಟ ಗೆದ್ದಿತು. ಆ ಕ್ಷೇತ್ರವನ್ನೇ ಜೆಡಿಎಸ್ ಗೆ ಬಿಜೆಪಿ ಬಿಟ್ಟು ಕೊಟ್ಟಿದ್ದೂ ಆಯಿತು.
ಆ ಜಿದ್ದಾಜಿದ್ದಿ ಈಗ ಕುಮಾರಸ್ವಾಮಿ ಬಂದು ಸಮಲತಾ ನನ್ನ ಅಕ್ಕ ಇದ್ದ ಹಾಗೆ, ಅಂಬರೀಷ್ ನನ್ನ ಅಣ್ಣ ಇದ್ದ ಹಾಗೆ ಎಂದ ತಕ್ಷಣ ಮರೆಯಾಗುವುದು ಸಾಧ್ಯವೆ? ಸುಮಲತಾ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶವಾಗದಂತೆ ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಯಿತು.
ಜೆಡಿಎಸ್ ಜೊತೆಗಿನ ಮೈತ್ರಿ ಮೂಲಕ ಅದರ ಮತಗಳನ್ನು ಕಸಿಯುವ ಲೆಕ್ಕಾಚಾರದಲ್ಲಿರುವ ಬಿಜೆಪಿ, ಆ ಲೆಕ್ಕಾಚಾರ ಸುಮಲತಾ ಕಾರಣದಿಂದ ತಪ್ಪಬಾರದು, ಜೆಡಿಎಸ್ ಜೊತೆಗಿನ ದೋಸ್ತಿಗೆ ಚುನಾವಣೆ ಹೊತ್ತಲ್ಲಿ ತೊಡಕು ತಂದುಕೊಳ್ಳಬಾರದು ಎಂದು ಯೋಚಿಸಿದ್ದಿರಬಹುದು.
ಹಾಗಾಗಿಯೇ ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸದಂತೆ ಮಾಡಿ, ಬೇರೆ ಕ್ಷೇತ್ರಗಳಲ್ಲಿ ಅವಕಾಶ ಕೊಡುವ ಬಗ್ಗೆ ಹೇಳಲಾಯಿತು. ಮತ್ತೇನೋ ಮಹತ್ವದ ಜವಾಬ್ದಾರಿಯ ಆಮಿಷವನ್ನೂ ಬಹುಶಃ ಒಡ್ಡಲಾಯಿತು.
ಒಂದು ಹಂತದಲ್ಲಿ ಸುಮಲತಾ ಕೂಡ ಇದಾವುದಕ್ಕೊ ಒಳಗೊಳಗೇ ಒಪ್ಪಿಯೇ ದೆಹಲಿಯಿಂದ ವಾಪಸ್ ಆಗಿದ್ದರೆ ? ಹಾಗೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲವಾದರೂ, ಮಂಡ್ಯ ನನ್ನ ಕ್ಷೇತ್ರ, ಅದನ್ನು ಬಿಟ್ಟು ಏಕೆ ಹೋಗಲಿ ಎಂದು ಸುಮಲತಾ ಹೇಳಲು ಶುರು ಮಾಡಿದ್ದು ಸ್ವಲ್ಪ ತಡವಾಗಿಯೇ ಎಂಬುದನ್ನು ಗಮನಿಸಬಹುದು.
ಈ ನಡುವೆ ಯಾವ ಬೆಳವಣಿಗೆ ಅವರನ್ನು ಮಂಡ್ಯದ ಜನತೆ, ಮಂಡ್ಯದ ಅಭಿಮಾನಿಗಳು ಎಂದೆಲ್ಲ ಮಾತಾಡಲು ಹಚ್ಚಿದ್ದಿರಬಹುದು?
ಯಾವ ಕಾರಣಕ್ಕೆ ಅವರು ಕ್ಷೇತ್ರದ ಜನತೆಯೊಂದಿಗೆ ಚರ್ಚಿಸುವ ಇಂಗಿತ ವ್ಯಕ್ತಪಡಿಸಿದರು? ಮತ್ತು ಯಾಕೆ ಅಭಿಮಾನಿಗಳ ಸಮ್ಮುಖದಲ್ಲಿಯೇ ನಿರ್ಧಾರ ಘೋಷಿಸುವ ಬಗ್ಗೆ ಹೇಳತೊಡಗಿದರು?
ಖಂಡಿತವಾಗಿಯೂ ಇದು ಅಭಿಮಾನಿಗಳಿಗೋಸ್ಕರ ಎಂಬುದಕ್ಕಿಂತ ಹೆಚ್ಚಾಗಿ, ಇಲ್ಲೊಂದು ರಾಜಕೀಯ ಲೆಕ್ಕಾಚಾರ ಇದೆ. ಅದರಲ್ಲಿ ಅನುಮಾನವಿಲ್ಲ. ಈಗಾಗಲೇ ಅನುಮಾನಗಳಿರುವಂತೆ ಸುಮಲತಾ ಅವರು ಬಿಜೆಪಿ ಹೇಳಿದಂತೆ ಕುಮಾರಸ್ವಾಮಿಯವರನ್ನು ಬೆಂಬಲಿಸಬೇಕು.
ಆದರೆ ಅದು ಸಾಧ್ಯವೆ?. ಹಾಗೆ ನಿರ್ಧರಿಸಿದರು ಎಂದಾದರೆ ಐದು ವರ್ಷಗಳ ಹಿಂದೆ ಅವರು ಸ್ವಾಭಿಮಾನದ ಹೆಸರಲ್ಲಿ ಮತ ಕೇಳಿದ್ದಕ್ಕೂ ಈಗ ಅದಕ್ಕೇ ಪೂರ್ತಿಯಾಗಿ ವಿರುದ್ಧ ನಿಲ್ಲುವುದಕ್ಕೂ ತಾಳೆಯಾಗುವುದೆ?
ಅದು, ಶಾಸಕ ನರೇಂದ್ರಸ್ವಾಮಿ ಹೇಳಿದಂತೆ ಮಳವಳ್ಳಿಯ ಹುಚ್ಚೇಗೌಡರ ಸೊಸೆ ಮಳವಳ್ಳಿಯ ಸ್ವಾಭಿಮಾನ ಕಳೆದಂತಾಗುವುದಿಲ್ಲವೆ ಅಂಥದೊಂದು ನಿರ್ಧಾರ, ಮಂಡ್ಯ ತನ್ನ ಕ್ಷೇತ್ರ ಎಂದು ಹೇಳುವ ಸುಮಲತಾ ಅವರಿಗೆ ತಿರುಗುಬಾಣವಾಗಲಾರದೆ? ಇನ್ನು ಅವರ ಮುಂದಿರುವ ಆಯ್ಕೆ ಬಿಜೆಪಿಗೆ ಸೆಡ್ಡು ಹೊಡೆದು, ಕುಮಾರಸ್ವಾಮಿ ವಿರುದ್ಧವೇ ಸ್ವತಂತ್ರವಾಗಿ ಕಣಕ್ಕಿಳಿಯುವುದು. ಆದರೆ ಈಗ ಕೇಳಿಬರುತ್ತಿರುವ ಮಾತುಗಳ ಪ್ರಕಾರ ಅದಕ್ಕೆ ಸ್ವತಃ ಅವರಿಗೇ ಧೈರ್ಯ ಇಲ್ಲವಾಗಿದೆ.
ಈಗ ಮಂಡ್ಯ ತನ್ನ ಕ್ಷೇತ್ರ ಎಂದು ರಾಜಕೀಯ ಲೆಕ್ಕಾಚಾರದಲ್ಲಿ ಮಾತಾಡುತ್ತಿರುವ ಸುಮಲತಾ, ಸಂಸದೆಯಾದ ಬಳಿಕ ಮಂಡ್ಯಕ್ಕಾಗಿ ಮಾಡಿದ್ದು ಅಷ್ಟರಲ್ಲಿಯೇ ಇದೆ, ಕೊಟ್ಟ ಭರವಸೆಗಳನ್ನೆಲ್ಲ ಪೂರೈಸಲು ಅವರಿಂದ ಆಗಿಲ್ಲ ಎನ್ನಲಾಗುತ್ತಿದೆ. ಜೊತೆಗೇ ಅವತ್ತಿನ ಸಂದರ್ಭದಲ್ಲಿ ಅವರ ಕೈಹಿಡಿದದ್ದು ಸ್ವಾಭಿಮಾನದ ಮತಗಳು. ಈಗಿನ ಬದಲಾದ ರಾಜಕೀಯದಲ್ಲಿ ಅವರು ಚುನಾವಣೆ ಗೆಲ್ಲುವ ವಿಚಾರ ಹಾಗಿರಲಿ, ಜನರನ್ನು ಎದುರಿಸುವುದೇ ಕಷ್ಟವಾಗಲೂ ಬಹುದು ಎಂದು ಹೇಳಲಾಗುತ್ತಿದೆ.
ಇನ್ನು ಮೂರನೇ ಆಯ್ಕೆ, ಮುಂದೆ ಏನೇ ಆಗಲಿ ನೇರವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತೇನೆ ಎಂದು ಮುಂದಾಗುವುದು ಅಥವಾ ನಿರ್ಲಿಪ್ತವಾಗುಳಿದು, ಕಾಂಗ್ರೆಸ್ಗೆ ಅನುಕೂಲಕರ ಸನ್ನಿವೇಶ ಕಲ್ಪಿಸುವುದಕ್ಕೆ ನೆರವಾಗುವುದು. ಸದ್ಯದ ಸನ್ನಿವೇಶದಲ್ಲಿ ಸುಮಲತಾ ಅವರು ಪ್ರಭಾವಿ ರಾಜಕಾರಣಿಯ ಹಾಗೆ ಕಾಣಿಸುತ್ತಿದ್ದರೂ, ಎಲ್ಲರೂ ಅವರ ಬಳಿ ಹೋಗಿ ಸಹಕಾರ ಕೇಳುವ ಮಟ್ಟಿಗೆ ಬೆಳೆದಿದ್ದಾರೆ ಎನ್ನಿಸಿದರೂ, ಅದರ ಹಿಂದೆ ಇರುವುದು ಚುನಾವಣೆ ಎಂಬ ಅನಿವಾರ್ಯತೆ ಮಾತ್ರ ಎಂಬುದನ್ನು ಮರೆಯುವ ಹಾಗಿಲ್ಲ.
ಒಮ್ಮೆ ಚುನಾವಣೆ ಮುಗಿಯಿತು ಎಂದರೆ ಸುಮಲತಾ ಅವರ ರಾಜಕೀಯ ಭವಿಷ್ಯವೇ ಮಸುಕಾಗಿ ಹೋಗಲೂ ಬಹುದು. ಮತ್ತು ಇದು ಬಹುಶಃ ಸ್ವತಃ ಸುಮಲತಾ ಅವರಿಗೂ ಹೆಚ್ಚು ಕಡಿಮೆ ಖಾತ್ರಿಯಾಗಿರಲೂ ಸಾಕು. ಹೀಗಿರುವಾಗ ಅವರ ನಿರ್ಧಾರ ಏನಿರಲಿದೆ? ಏಪ್ರಿಲ್ 3 ಅವರ ರಾಜಕೀಯ ಭವಿಷ್ಯವನ್ನು ಯಾವ ರೀತಿಯಲ್ಲಿ ಕೊಂಡೊಯ್ಯಬಲ್ಲ ನಿರ್ಧಾರಕ್ಕೆ ಸಾಕ್ಷಿಯಾದೀತು?
ಅಷ್ಟಕ್ಕೂ ಅವರು ರಾಷ್ಟ್ರ ರಾಜಕಾರಣವೊ ಅಥವಾ ರಾಜ್ಯ ರಾಜಕಾರಣವೊ ಎಂಬ ಗೊಂದಲದಲ್ಲೂ ಬಿದ್ದಿರಬಹುದೆ? ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಏನಾದರೂ ಒಂದು ಆಸರೆ ಸಾಕೆಂಬ ಅನಿವಾರ್ಯತೆ ಅವರ ಎದುರು ಬಂದಿದ್ದಲ್ಲಿ ಅಂಥ ಸಾಧ್ಯತೆಯೂ ಇಲ್ಲದೇ ಇಲ್ಲ. ಏಪ್ರಿಲ್ 3ಕ್ಕೆ ಬಹುಶಃ ಎಲ್ಲದಕ್ಕೂ ಉತ್ತರ ಸಿಗಬಹುದು ಮತ್ತು ಅದು ನಿಜವಾಗಿಯೂ ಸುಮಲತಾ ಅವರು ಮಂಡ್ಯದ ಬಗ್ಗೆ ಬದ್ಧತೆ ಹೊಂದಿದಾರೆಯೊ ಅಥವಾ ಹಾಗೆ ಹೇಳುವಲ್ಲಿ ಇರುವುದು ರಾಜಕೀಯ ಲೆಕ್ಕಾಚಾರ ಮಾತ್ರವೊ ಎಂಬುದಕ್ಕೂ ಉತ್ತರವಾಗಬಹುದು.