ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಲಿದೆಯೇ ಜೆಡಿಎಸ್ ?
► ಕಾಂಗ್ರೆಸ್ ನಿಂದ ಕಣಕ್ಕಿಳಿಯೋದು ಯಾರು ? ► ಬಿಜೆಪಿ - ಜೆಡಿಎಸ್ ಮೈತ್ರಿ ಸವಾಲು ಸ್ವೀಕರಿಸಿ ಗೆಲ್ಲುತ್ತಾ ಕಾಂಗ್ರೆಸ್ ?
ಪ್ರತಾಪ್ ಸಿಂಹ | Photo: PTI
ಸದ್ಯ ರಾಜ್ಯದಲ್ಲಿ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ಲೋಕಸಭಾ ಕ್ಷೇತ್ರ ಮೈಸೂರು. ಮೈಸೂರು ಕ್ಷೇತ್ರ, ಅಲ್ಲಿನ ಸಂಸದರ ಅವಾಂತರಗಳು , ಅಲ್ಲಿನ ರಾಜಕೀಯ ಹಾಗು ಅಲ್ಲಿನ ಸಂಭಾವ್ಯ ಚುನಾವಣಾ ಅಭ್ಯರ್ಥಿಗಳ ಬಗ್ಗೆ ಈಗಾಗಲೇ ಬಹಳ ಜೋರಾಗಿಯೇ ಚರ್ಚೆ ಶುರುವಾಗಿವೆ.
ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಅಖಾಡ ಅಂತಿಮಗೊಳ್ಳುವ ಮೊದಲೇ ಒಂದು ದೊಡ್ಡ ಮಟ್ಟದ ಹಣಾಹಣಿ ನಡೆಯಲಿದೆಯೆ?. ಈಗಿನ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ಅಂಥ ಸೂಚನೆಗಳು ಕಾಣಿಸುತ್ತಿವೆ. ಒಂದೆಡೆ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ಗಾಗಿ ಈಗ ಮೈತ್ರಿ ಪಕ್ಷಗಳಾಗಿರುವ ಬಿಜೆಪಿ ಮತ್ತು ಜೆಡಿಎಸ್ ನಡುವೆಯೇ ಪೈಪೋಟಿ ಉಂಟಾಗಲಿದೆ. ಇನ್ನೊಂದೆಡೆ ಕಾಂಗ್ರೆಸ್ನಲ್ಲಿಯೂ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸೇರಿದಂತೆ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಸಾಲೇ ಇರುವಾಗಲೇ ಈಗ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಕೂಡ ಕಾಂಗ್ರೆಸ್ನಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಇದೆಲ್ಲವೂ ಹೇಗೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿನ ರಾಜಕೀಯವನ್ನು ರಂಗೇರಿಸಲಿದೆ ಎಂಬ ಕುತೂಹಲ ಮೂಡಿದೆ. ಲೋಕಸಭೆಯಲ್ಲಿ ಆಗಂತುಕರು ಸಂಸದ ಪ್ರತಾಪ್ ಸಿಂಹ ಹೆಸರಿನ ಪಾಸ್ ಇಟ್ಟುಕೊಂಡು ನುಗ್ಗಿ ಹೊಗೆ ಬಾಂಬ್ ಹಾಕಿದ ಮೇಲೆ ಮೈಸೂರು ಲೋಕಸಭಾ ಕ್ಷೇತ್ರ ದೇಶಾದ್ಯಂತ ಭಾರೀ ಸುದ್ದಿಯಲ್ಲಿದೆ.
ಅಲ್ಲಿನ ಸಂಸದ ಪ್ರತಾಪ್ ಸಿಂಹ ಆಗಾಗ ಬೇಡದ ಕಾರಣಕ್ಕೇ ಸುದ್ದಿಯಾಗುವುದಂತೂ ಇದ್ದೇ ಇದೆ. ಸಂಸತ್ನಲ್ಲಿ ಹೊಗೆ ಬಾಂಬ್ ಪ್ರಕರಣದ ಬಳಿಕ ಬಿಜೆಪಿ ನಾಯಕರೂ ಪ್ರತಾಪ್ ಸಿಂಹ ವಿಚಾರದಲ್ಲಿ ಒಂದು ಮಟ್ಟದ ದೂರ ಕಾಯ್ದುಕೊಂಡಿರುವುದು ಸ್ಪಷ್ಟವಾಗಿ ಕಂಡಿದೆ. ಎಲ್ಲರೂ ಪಕ್ಷದ ಸಂಸದ ಎಂಬ ನೆಲೆಯಲ್ಲಿ ಒಂದಷ್ಟು ವಕಾಲತ್ತು ವಹಿಸಿದರೇ ವಿನಃ, ಯಾವ ಹಿರಿಯ ಮುಖಂಡರೂ ಬಹಳ ಗಟ್ಟಿಯಾಗಿ ಪ್ರತಾಪ್ ಸಿಂಹ ಅವರ ಜೊತೆ ತಾವಿದ್ದೇವೆ ಎಂದು ತೋರಿಸಿಕೊಂಡದ್ದು ಅಷ್ಟಾಗಿ ಕಾಣಲಿಲ್ಲ.
ಈಗ ಹುಬ್ಬಳ್ಳಿಯ ಹಿಂದುತ್ವ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಪರ ವಹಿಸಿಕೊಂಡು ಪ್ರತಿಭಟಿಸಿದಂಥ ರಾಜಕೀಯವನ್ನೂ ರಾಜ್ಯ ಬಿಜೆಪಿ ಪ್ರತಾಪ್ ಸಿಂಹ ವಿಚಾರವಾಗಿ ಒಂದಿಷ್ಟೂ ಮಾಡಲಿಲ್ಲ. ದೆಹಲಿ ನಾಯಕರೂ ಕೂಡ ಹೊಗೆ ಬಾಂಬ್ ಪ್ರಕರಣದ ವಿಚಾರವಾಗಿ ಪ್ರತಾಪ್ ಸಿಂಹ ಕಾರಣದಿಂದ ಪಕ್ಷದ ಇಮೇಜ್ ಗೆ ಧಕ್ಕೆಯಾಯಿತೆಂಬ ಭಾವನೆಯಿಂದ ಅಸಮಾಧಾನ ತಳೆದಿದ್ದಾರೆ ಎಂಬ ವರದಿಗಳಿವೆ.
ಇದೆಲ್ಲವೂ ಸೇರಿರುವುದು ನೋಡಿದರೆ ಬಿಜೆಪಿ ಪ್ರತಾಪ್ ಸಿಂಹರನ್ನು ದೂರವಿಡುತ್ತಿದೆಯೆ ಎಂಬ ಅನುಮಾನಗಳು ಎದ್ದಿವೆ. ಈಗ ಮರಗಳ್ಳತನ ಆರೋಪದ ಮೇಲೆ ಸಹೋದರನ ಬಂಧನವಾದ ಮೇಲಂತೂ ಪ್ರತಾಪ್ ಸಿಂಹ ವಿಚಲಿತರಾಗಿದ್ದಾರೆ. ಅದನ್ನು ಹೇಗಾದರೂ ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿರುವುದೂ ಕಾಣುತ್ತಿದೆ.
ತಮ್ಮ ಪುತ್ರ ಯತೀಂದ್ರ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸುವುದಕ್ಕಾಗಿ ತನ್ನ ರಾಜಕೀಯ ಭವಿಷ್ಯವನ್ನು ಸಿದ್ದರಾಮಯ್ಯನವರು ಬಲಿಗೊಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಈಗಾಗಲೇ ಆರೋಪಿಸಿರುವುದೂ ಆಗಿದೆ. ಸಿದ್ದರಾಮಯ್ಯನವರ ಮೇಲಿನ ತನ್ನ ಹಗೆಯನ್ನು ಸಾಧಿಸಿಲು ಸಿಗುವ ಯಾವ ಅವಕಾಶವನ್ನೂ ಬಿಡದ ಕುಮಾರಸ್ವಾಮಿ ಕೂಡ ಪ್ರತಾಪ್ ಸಿಂಹ್ ಆರೋಪಕ್ಕೆ ದನಿಗೂಡಿಸುತ್ತಿದ್ದಾರೆ.
ಬಿಜೆಪಿ ಜೊತೆ ಹೋಗಿದ್ದಕ್ಕಾಗಿ ಅವರು ಹೀಗೆಲ್ಲ ಮಾತಾಡುತ್ತಿರುವುದು ಒಂದೆಡೆಯಾದರೆ, ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಸೇಡನ್ನು ಸಿದ್ದರಾಮಯ್ಯ ವಿರುದ್ಧ ತೀರಿಸಿಕೊಳ್ಳುವುದಕ್ಕಾಗಿಯೂ ಅವರು ಮೈಸೂರು ಭಾಗದಲ್ಲಿ ತಮ್ಮದೇ ಆದ ಅಖಾಡವನ್ನು ತಯಾರು ಮಾಡಿಕೊಳ್ಳುತ್ತಿರುವುದೂ ಇನ್ನೊಂದು ಕಾರಣ.
ಇಲ್ಲಿ ಒಂದು ತಮಾಷೆಯನ್ನು ಗಮನಿಸಬೇಕು.ಒಬ್ಬ ಮಾಜಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಹಾಲಿ ಮುಖ್ಯಮಂತ್ರಿಯ ಬಗ್ಗೆ ಮಾತಾಡುತ್ತಿರುವಲ್ಲಿನ ರೀತಿಯಲ್ಲಿ ಸಣ್ಣ ವಿವೇಚನೆಯೂ ಇಲ್ಲವಾಗಿದೆ.
ಪ್ರತಾಪ್ ಸಿಂಹ ಅವರನ್ನು ಲೋಕಸಭೆ ಕಣದಿಂದ ತಪ್ಪಿಸಲು ಸಿದ್ದರಾಮಯ್ಯ ಷಡ್ಯಂತ್ರ ಹೂಡಿದ್ಧಾರೆ ಎಂದು ಬೇಜವಾಬ್ದಾರಿತನದಿಂದ ಆರೋಪಿಸುವ ಕುಮಾರಸ್ವಾಮಿ, ಮೈಸೂರು ಲೋಕಸಭಾ ಕ್ಷೇತ್ರ ತಮಗೇ ಬೇಕು ಎಂದು ಬಿಜೆಪಿ ಎದುರು ಪಟ್ಟು ಹಿಡಿಯಲಿರುವುದು ಸುಳ್ಳೇ ?ಪ್ರತಾಪ್ ಸಿಂಹ ಬಗ್ಗೆ ಸಹಾನುಭೂತಿಯನ್ನೇ ಕುಮಾರಸ್ವಾಮಿ ಹೊಂದಿದ್ದಲ್ಲಿ ಅವರೇಕೆ ಮೈಸೂರು ಲೋಕಸಭಾ ಕ್ಷೇತ್ರವನ್ನು ಕೇಳುವ ಸನ್ನಾಹದಲ್ಲಿದ್ದಾರೆ?
ಹಾಗಾದರೆ ಕುಮಾರಸ್ವಾಮಿಯವರು ಮೈಸೂರು ಕ್ಷೇತ್ರಕ್ಕಾಗಿ ಪಟ್ಟು ಹಿಡಿಯೋದಿಲ್ವ ?. ಮೈಸೂರು, ಮಂಡ್ಯದಂಥ ಕ್ಷೇತ್ರಗಳಲ್ಲಿ ತಾನೇ ಸ್ಪರ್ಧಿಸಿ ಕಾಂಗ್ರೆಸ್ , ಸಿದ್ದರಾಮಯ್ಯ ಹಾಗು ಡಿಕೆಶಿ ವಿರುದ್ಧ ಸೇಡು ತೀರಿಸಿಕೊಳ್ಳುವ ತಯಾರಿಯಲ್ಲಿರುವುದು ಜೆಡಿಎಸ್. ಹಾಗಾಗಿ, ಪ್ರತಾಪ್ ಸಿಂಹಗೆ ಮೈಸೂರು ಲೋಕಸಭಾ ಕಣ ತಪ್ಪಿದರೆ ಅದಕ್ಕೆ ಕುಮಾರಸ್ವಾಮಿ ಕಾರಣರಾಗುತ್ತಾರೆಯೇ ಹೊರತು, ಇಲ್ಲಿ ಸಿದ್ದರಾಮಯ್ಯ ಷಡ್ಯಂತ್ರ ಏನು ಬಂತು?.
ಇನ್ನು ಯತೀಂದ್ರ ಅವರನ್ನೇ ಕಾಂಗ್ರೆಸ್ ಕಣಕ್ಕಿಳಿಸಲಿದೆ ಎಂದಿಟ್ಟುಕೊಂಡರೂ, ಅವರೊಬ್ಬ ಎದುರಾಳಿಯಾಗಿ ಕಣದಲ್ಲಿರುತ್ತಾರೆಯೇ ಹೊರತು, ಜೆಡಿಎಸ್ ರೀತಿಯಲ್ಲೇನೂ ಟಿಕೆಟನ್ನೇ ಕಿತ್ತುಕೊಳ್ಳೋದಿಲ್ಲ. ಅಲ್ವಾ ?. ಪ್ರತಾಪ್ ಸಿಂಹ ಸಹೋದರನ ಮೇಲಿನ ಕೇಸ್ ವಿಚಾರವಾಗಿಯೂ ಮಾತನಾಡುವ ಕುಮಾರಸ್ವಾಮಿ, ಇನ್ನೂ ಹುರುಳಿಲ್ಲದ ಆರೋಪಗಳನ್ನು ಸಿದ್ದರಾಮಯ್ಯ ವಿರುದ್ಧ ಮಾತಾಡುತ್ತಾರೆ.
ಇದು ಹೇಗೆಂದರೆ, ಎಚ್ ವಿಶ್ವನಾಥ್ ಲೇವಡಿ ಮಾಡಿರುವಂತೆ ಮಾಜಿ ಮುಖ್ಯಮಂತ್ರಿಯೊಬ್ಬರು ಮರಗಳ್ಳನ ಪರ ವಕಾಲತ್ತು ವಹಿಸಿದಂತೆ. ಬಿಜೆಪಿ ಜೊತೆ ಹೋಗಿದ್ದಕ್ಕೆ ಕುಮಾರಸ್ವಾಮಿಯವರು ಹೀಗೆಲ್ಲಾ ವಕಾಲತ್ತು ವಹಿಸಬೇಕಾಗಿ ಬಂದಿದೆಯೆ?. ಒಂದು ಕಾಲದಲ್ಲಿ ದತ್ತಮಾಲ ಧಾರಿಗಳನ್ನು ಕಟುವಾಗಿ ಟೀಕಿಸಿದ್ದ ಕುಮಾರಸ್ವಾಮಿ ಈಗ ಅವರ ಜೊತೆ ಹೋಗುವುದಕ್ಕೂ ತಯಾರು. 16 ಕ್ರಿಮಿನಲ್ ಕೇಸ್ಗಳಲ್ಲಿ ಆರೋಪಿಯಾಗಿರುವ ಕರಸೇವಕನ ಪರವಾಗಿಯೂ ಮಾತನಾಡುತ್ತಾರೆ. ಮತ್ತೀಗ ಮರ ಕಡಿದವರ ಮೇಲೆ ಕೇಸ್ ಹಾಕಿದರೆ ಅದನ್ನೂ ಸಿದ್ದರಾಮಯ್ಯನವರ ಷಡ್ಯಂತ್ರ ಎಂದು ಯಾವ ವಿವೇಚನೆಯೂ ಇಲ್ಲದೆ ಹೇಳಿಬಿಡಬಲ್ಲರು.
ಅವರೀಗ ಅದೇ ಪ್ರತಾಪ್ ಸಿಂಹ ಪ್ರತಿನಿಧಿಸುವ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಕೇಳುತ್ತಾರೆ. ಮತ್ತು ಅವರಿಗೆ ಅಲ್ಲಿ ಸಾ ರಾ ಮಹೇಶ್ ಅವರನ್ನು ಕಣಕ್ಕಿಳಿಸುವ ಯೋಚನೆ ಇದೆಯೆನ್ನಲಾಗಿದೆ. ಇನ್ನೊಂದು ಕಡೆ, ಪ್ರತಾಪ್ ಸಿಂಹಗೆ ಟಿಕೆಟ್ ನೀಡುವುದು ಬಿಜೆಪಿಗೇ ಬೇಕಿರುವ ಹಾಗೆ ಕಾಣಿಸುತ್ತಿಲ್ಲ. ಯಾಕೆಂದರೆ ಪ್ರತಾಪ್ ಸಿಂಹಗೆ ಮೈಸೂರು ಲೋಕಸಭಾ ಕ್ಷೇತ್ರದ ತಲೆಬುಡವೂ ಗೊತ್ತಿಲ್ಲ. ಆದರೆ ಗೆದ್ದಿದ್ದು ಪಕ್ಷ, ಮೋದಿಯ ವರ್ಚಸ್ಸು ಮತ್ತು ಜಾತಿ ಬಲದಿಂದ ಮಾತ್ರ.
ಕಾಂಗ್ರೆಸ್ ಒಕ್ಕಲಿಗ ಅಭ್ಯರ್ಥಿಯನ್ನು ಹಾಕದೇ ಇದ್ದುದು, ವಿಶ್ವನಾಥ್ ದೇವೇಗೌಡರ ವಿರುದ್ಧ ಮಾತನಾಡಿದ್ದು ಎಲ್ಲವೂ ಸೇರಿ, ಕಳೆದೆರಡೂ ಚುನಾವಣೆಗಳಲ್ಲಿ ಒಕ್ಕಲಿಗರ ಮತಗಳೆಲ್ಲವೂ ಪ್ರತಾಪ್ ಸಿಂಹಗೆ ಸಿಗುವಂಥ ಸನ್ನಿವೇಶ ಉಂಟಾಯಿತು. ಆದರೆ ಈಗ ಪ್ರತಾಪ್ ಸಿಂಹ ಬಗ್ಗೆ ಮೈಸೂರು - ಕೊಡಗು ಬಿಜೆಪಿಯ ಬಹುತೇಕ ನಾಯಕರು ಅಸಮಾಧಾನ ಹೊಂದಿದ್ಧಾರೆ.
ರಾಮದಾಸ್, ಅಪ್ಪಚ್ಚು ರಂಜನ್, ವಿಜಯಶಂಕರ್ ಅಂಥ ನಾಯಕರಿಗೆಲ್ಲ ಪ್ರತಾಪ್ ಸಿಂಹ ಎಂದರೇ ಆಗುತ್ತಿಲ್ಲ. ಹಾಗಾಗಿ ಕಣಕ್ಕಿಳಿದರೂ ಅವರ ಪರವಾಗಿ ಕೆಲಸ ಮಾಡುವವರಿಲ್ಲ. ಮತ್ತು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಅಸೆಂಬ್ಲಿ ಕ್ಷೇತ್ರಗಳಲ್ಲಿ ಪ್ರತಾಪ್ ಸಿಂಹಗೆ ಬೆಂಬಲವೂ ಇಲ್ಲ. ಇನ್ನು ಜೆಡಿಎಸ್ ಕಣಕ್ಕಿಳಿದರೂ, ಹುಣಸೂರು ಮತ್ತು ಚಾಮರಾಜನಗರ ಭಾಗದಲ್ಲಷ್ಟೇ ತುಸು ಪ್ರಾಬಲ್ಯವಿರುವ ಜೆಡಿಎಸ್ ಇಲ್ಲಿ ಎಷ್ಟರ ಮಟ್ಟಿಗೆ ಪೈಪೋಟಿ ಕೊಡಬಲ್ಲುದು ಎಂಬ ಪ್ರಶ್ನೆ ಇದೆ.
ಅಲ್ಲದೆ ಸಾ ರಾ ಮಹೇಶ್ ಅವರಿಗೆ ಮೈಸೂರು ಲೋಕಸಭಾ ಕ್ಷೇತ್ರದ ಮೇಲೆ ಯಾವ ಹಿಡಿತವೂ ಇಲ್ಲದಿರುವುದು ಕೂಡ ಕಾಂಗ್ರೆಸ್ಗೆ ಲಾಭ ತರುವ ಸಾಧ್ಯತೆ ಹೆಚ್ಚು. ಆದರೆ ಬಿಜೆಪಿ ಜೆಡಿಎಸ್ ಮೈತ್ರಿಯಾಗಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಮತಗಳು ಪೂರ್ತಿಯಾಗಿ ಮೈತ್ರಿ ಅಭ್ಯರ್ಥಿಗೇ ಹೋಗಲಿವೆ, ಜೊತೆಗೆ ಲಿಂಗಾಯತರೂ ಬಿಜೆಪಿ ಕಾರಣದಿಂದ ಬೆಂಬಲಿಸುತ್ತಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ನಲ್ಲಿ ಯತೀಂದ್ರ ಮಾತ್ರವಲ್ಲದೆ, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ದೇವರಾಜ ಅರಸು ಮೊಮ್ಮಗ ಸೂರಜ್ ಹೆಗಡೆ ಆಕಾಂಕ್ಷಿಗಳಾಗಿದ್ಧಾರೆ. ಇದರ ನಡುವೆಯೇ ತಾನೂ ಕಾಂಗ್ರೆಸ್ನಿಂದ ಸ್ಪರ್ಧಿಸಲು ಸಿದ್ದವಿರುವುದಾಗಿ ಈಗ ವಿಶ್ವನಾಥ್ ಹೇಳಿದ್ದಾರೆ. ವಿಶ್ವನಾಥ್ ಅಥವಾ ಯತೀಂದ್ರ ಇಬ್ಬರಲ್ಲಿ ಯಾರೇ ಕಣಕ್ಕಿಳಿದರೂ ಗೆಲ್ಲುವುದು ತೀರಾ ಕಷ್ಟವಾಗಲಾರದು ಎಂಬ ವಾತಾವರಣ ಮೈಸೂರು ಭಾಗದಲ್ಲಿ ಕಂಡು ಬರುತ್ತಿದೆ.
ವಿಶ್ವನಾಥ್ ಅವರಿಗೂ ವರ್ಚಸ್ಸಿದೆ. ಹಾಗೆಯೇ ಯತೀಂದ್ರ ಅವರನ್ನು ಸಿದ್ದರಾಮಯ್ಯ ಅವರ ಪ್ರತಿನಿಧಿಯಾಗಿ ಜನರು ಕಾಣುವುದರಿಂದ ಬೆಂಬಲ ಸಿಗಲಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್, ಬಿಜೆಪಿ ಮೈತ್ರಿಯ ಪೈಪೋಟಿಯನ್ನು ಕಾಂಗ್ರೆಸ್ ಖಂಡಿತ ಎದುರಿಸಬಲ್ಲದು ಎಂಬ ಅಭಿಪ್ರಾಯವೂ ಅಲ್ಲಿ ಕೇಳಿ ಬರುತ್ತಿದೆ.
ಒಕ್ಕಲಿಗ ಮತಗಳನ್ನು ಅದು ಹೇಗೆ ತನ್ನತ್ತ ಸೆಳೆಯಲಿದೆ ಎಂಬುದೇ ಮುಖ್ಯವಾಗಲಿದೆ. ಅಂತೂ ಈಗ ಕಾಣಿಸುತ್ತಿರುವ ಸನ್ನಿವೇಶದ ಪ್ರಕಾರ, ಪ್ರತಾಪ್ ಸಿಂಹ ಅವರನ್ನು ಬದಿಗೆ ಸರಿಸುವ ಸಾಧ್ಯತೆಗಳೇ ಹೆಚ್ಚು. ಈ ನಡುವೆ, ಸದಾನಂದ ಗೌಡ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿರುವುದರಿಂದ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ಉತ್ತರದಲ್ಲಿ ಪ್ರತಾಪ್ ಸಿಂಹ ಅವರನ್ನು ಬಿಜೆಪಿ ಕಣಕ್ಕಿಳಿಸಬಹುದು ಎಂಬ ಮಾತುಗಳೂ ಇವೆ.
ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರವೂ ಆಗಿರುವುದರಿಂದ ಅವರಿಗೆ ಈ ಕ್ಷೇತ್ರ ಗೆಲ್ಲೋದು ಪ್ರತಿಷ್ಠೆಯ ವಿಷಯವಾಗಿದೆ.
ಮತ್ತು ಸದ್ಯದ ಸನ್ನಿವೇಶದಲ್ಲಿ ಮೈಸೂರು ರಾಜಕೀಯದಲ್ಲಿ ಸಿದ್ದರಾಮಯ್ಯ ವಿರುದ್ಧವಾಗಿ ಹೋಗುವವರು ಕಡಿಮೆ ಎನ್ನಲಾಗುತ್ತಿದ್ದು, ಎಲ್ಲವೂ ಅವರ ಪರವಾಗಿರಲಿದೆ ಎನ್ನಲಾಗುತ್ತಿದೆ. ಬಹುಶಃ ಈ ರಾಜಕೀಯ ವಾಸ್ತವ ಗೋಚರವಾಗುತ್ತಿರುವುದರಿಂದಲೇ ಕುಮಾರಸ್ವಾಮಿ ಮತ್ತು ಪ್ರತಾಪ್ ಸಿಂಹ ಇನ್ನಷ್ಟು ಹತಾಶೆಯಿಂದ ಮಾತನಾಡುತ್ತಿದ್ದಾರೆಯೆ?.