ಮೋದಿ ಸರಕಾರದ ಮಹಾದ್ರೋಹಕ್ಕೆ ಪಾಠ ಕಲಿಸುವುದೇ ಕರ್ನಾಟಕ?
ಸೆಸ್ ಗಳು ಮತ್ತು ಸರ್ಚಾರ್ಜ್ ಗಳು ವಿಶೇಷ ಉಪ ಹಾಗೂ ಮೇಲ್ ತೆರಿಗೆಗಳಾಗಿದ್ದು ಅದನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಿಲ್ಲ. ಇದು ಕಾಂಗ್ರೆಸ್ ಕಾಲದಲ್ಲೂ ಇದ್ದರೂ ಮೋದಿ ಸರಕಾರದ ಕಾಲದಲ್ಲಿ ಬಹಳಷ್ಟು ತೆರಿಗೆಗಳನ್ನು ಸೆಸ್ ಮತ್ತು ಸರ್ಚಾರ್ಜ್ ಗಳ ರೂಪದಲ್ಲಿ ಸಂಗ್ರಹಿಸುವ ಮತ್ತು ಅದರ ವ್ಯಾಪ್ತಿ ಮತ್ತು ಅವಧಿಗಳನ್ನು ಹೆಚ್ಚಿಸುವ ಫೆಡರಲ್ ವಿರೋಧಿ ಕ್ರಮಗಳನ್ನು ಜಾರಿ ಮಾಡಿದೆ. ಇದರಿಂದ ರಾಜ್ಯಗಳ ತೆರಿಗೆ ಪಾಲು ತೀವ್ರವಾಗಿ ಕಡಿಮೆಯಾಗುತ್ತಿದೆ. ಅದರಲ್ಲೂ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ದ್ರೋಹವನ್ನು ಮೋದಿ ಸರಕಾರ ಮಾಡುತ್ತಿದೆ.
ತಮ್ಮ ಸರಕಾರ ಸಹಕಾರಿ ಒಕ್ಕೂಟ ತತ್ವದ (co-operative federalism) ಆಧಾರದಲ್ಲಿ ಸರಕಾರ ನಡೆಸುವುದಾಗಿ ಕೊಚ್ಚಿಕೊಂಡಿದ್ದ ಮೋದಿ ಸರಕಾರ ಭಾರತ ಕಂಡ ಅತ್ಯಂತ ಸರ್ವಾಧಿಕಾರಿ ಮತ್ತು ಏಕಾಧಿಪತ್ಯದ ಧೋರಣೆಯ ಸರಕಾರ ಎಂಬುದು ಬಹಳ ಬೇಗನೇ ಸಾಬೀತಾಗಿದೆ. ಅದರಲ್ಲೂ 2019 ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜ್ಯಗಳ ಮೇಲೆ ಸವಾರಿ ನಡೆಸುತ್ತಿದೆ. ರಾಜ್ಯಗಳಿಗೆ ಸಂವಿಧಾನಬದ್ಧವಾಗಿ ವರ್ಗಾಯಿಸಬೇಕಾದ ಸಂಪನ್ಮೂಲಗಳನ್ನು ವರ್ಗಾಯಿಸದೆ ಹಗಲು ದರೋಡೆ ಮಾಡುತ್ತಿದೆ.
ಇದರಲ್ಲಿ ಅತಿ ಹೆಚ್ಚು ವಂಚನೆ ಮತ್ತು ದರೋಡೆಗಳಿಗೆ ಗುರಿಯಾಗಿರುವುದು ಕರ್ನಾಟಕ.
ಬರಪರಿಹಾರ - ಸುಪ್ರೀಂ ಮುಂದೆಯೂ ಸುಳ್ಳು ಹೇಳಿದ ಮೋದಿ ಸರಕಾರ
ಎಲ್ಲಿಯತನಕ ಅಂದರೆ ತೀವ್ರ ಬರಗಾಲಕ್ಕೆ ಸಿಲುಕಿರುವ ಕರ್ನಾಟಕಕ್ಕೆ ಸಂವಿಧಾನ ಬದ್ಧವಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ನಿಂದ ಸಿಗಬೇಕಾದ ಅರೆಕಾಸಿನ ಪರಿಹಾರವನ್ನು ಕೊಡದೆ ಸತಾಯಿಸುತ್ತಿರುವ ಕೇಂದ್ರದ ವಿರುದ್ಧ ಕರ್ನಾಟಕದ ಕಾಂಗ್ರೆಸ್ ಸರಕಾರ ಇತಿಹಾಸದಲ್ಲೇ ಮೊದಲ ಬಾರಿ ಸುಪ್ರೀಂ ಕೋರ್ಟಿನ ಮೊರೆ ಹೋಗಬೇಕಾಗಿ ಬಂತು.
ಕರ್ನಾಟಕಕ್ಕೆ ಮುಂಚೆ ತಮಿಳುನಾಡಿನ ಡಿಎಂಕೆ ಸರಕಾರ ಕೂಡ ನೈಸರ್ಗಿಕ ಪ್ರಕೋಪ ಪರಿಹಾರವನ್ನು ಮೋದಿ ಸರಕಾರ ಬಿಡುಗಡೆ ಮಾಡಿಲ್ಲವೆಂದು ಸುಪ್ರೀಂ ಮೆಟ್ಟಿಲೇರಿತ್ತು. ಹಾಗೆಯೇ ಕೇರಳ ಸರಕಾರ ಕೂಡಾ ಸಂವಿಧಾನ ಕೊಟ್ಟಿರುವ ಅಧಿಕಾರವನ್ನು ಬಳಸಿ ರಾಜ್ಯದ ಪರಿಮಿತಿಯೊಳಗೆ ಸಾಲ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಮೋದಿ ಸರಕಾರ ಅಡ್ಡಿ ಮಾಡುತ್ತಿರುವ ಬಗ್ಗೆ ಸುಪ್ರೀಂಗೆ ಅಹವಾಲು ಮಾಡಿದೆ. ಕೇರಳದ ವಿಚಾರಣೆಯ ವೇಳೆ ಮೋದಿ ಸರಕಾರ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಮಾಡುತ್ತಿರುವ ತಾರತಮ್ಯ ಹಾಗೂ ದಮನ ಧೋರಣೆ ಸಾಬೀತಾಗಿದ್ದು ಮೋದಿ ಸರಕಾರ ಕೂಡಲೇ ಕ್ರಮ ತೆಗೆದುಕೊಳ್ಳಲು ಒಪ್ಪಿಕೊಳ್ಳಬೇಕಾಯಿತು.
ಕರ್ನಾಟಕದ ಪ್ರಕರಣ ಇತ್ತೀಚೆಗೆ ವಿಚಾರಣೆಗೆ ಬಂದಿದ್ದು ಎರಡು ವಾರಗಳಲ್ಲಿ ಕೇಂದ್ರವು ಅದಕ್ಕೆ ಉತ್ತರಿಸುವುದಾಗಿ ಸಮಯ ಪಡೆದುಕೊಂಡಿದೆ. ಆದರೆ ಸುಪ್ರೀಂನಿಂದ ಸಮಯ ಕೇಳುವಾಗಲೂ ಮೋದಿ ಸರಕಾರ ಬರಪರಿಹಾರದ ವಿಷಯದಲ್ಲಿ ತಾನು ಮಾಡುತ್ತಿರುವ ಅನ್ಯಾಯವನ್ನು ಮುಚ್ಚಿಡುವ ಸುಳ್ಳು ಹೇಳಿದೆ.
ಕರ್ನಾಟಕ ಸರಕಾರ ಸುಪ್ರೀಂಗೆ ಮೊರೆ ಬರುವುದರ ಬದಲು ಕೇಂದ್ರ ಸರಕಾರವನ್ನೇ ಸಂಪರ್ಕಿಸಿದ್ದರೆ ಪರಿಹಾರ ಸಿಗುತ್ತಿತ್ತು ಎಂದು ಕೇಂದ್ರದ ಅಡ್ವೋಕೇಟ್ ಜನರಲ್ ಸುಪ್ರೀಂ ಮುಂದೆ ಮತ್ತೊಮ್ಮೆ ಸುಳ್ಳು ಹೇಳಿದೆ.
ಆದರೆ ವಾಸ್ತವವೇನು?
ಮೊನ್ನೆ ಕರ್ನಾಟಕಕ್ಕೆ ಕೇಂದ್ರದಿಂದ ಆಗುತ್ತಿರುವ ತೆರಿಗೆ ಅನ್ಯಾಯದ ಕುರಿತು ‘ಜಾಗೃತ ಕರ್ನಾಟಕ’ ಏರ್ಪಡಿಸಿದ್ದ ಚರ್ಚೆಯಲ್ಲಿ ಯುವಮಂತ್ರಿಗಳಾದ ಕೃಷ್ಣ ಭೈರೇಗೌಡರು ಜನರೆದುರು ಬಿಚ್ಚಿಟ್ಟಂತೆ, 2009ರ ರಾಷ್ಟ್ರೀಯ ವಿಪತ್ತು ನಿರ್ವಹಣೆ ಮತ್ತು ಬರಪರಿಹಾರದ ನಿಯಮಗಳು ಆಯಾ ಸಾಲಿನ ಅಕ್ಟೋಬರ್ 31 ರೊಳಗೆ ರಾಜ್ಯ ಸರಕಾರಗಳು ತಮ್ಮ ತಮ್ಮ ರಾಜ್ಯಗಳ ಬರಘೋಷಣೆ ಮಾಡಬೇಕು ಮತ್ತು ಅದಾದ 15 ದಿನಗಳೊಳಗೆ ಕೇಂದ್ರಕ್ಕೆ ಪರಿಹಾರದ ಅಹವಾಲನ್ನು ಮಾಡಬೇಕು.
ಆದರೆ ಕರ್ನಾಟಕ ಸರಕಾರ ನಿಯಮಕ್ಕೆ ಒಂದು ತಿಂಗಳ ಮುಂಚಿತ ವಾಗಿಯೇ-೨೦೨೩ರ ಸೆಪ್ಟಂಬರ್ನಲ್ಲೇ-ಬರವನ್ನು ಘೋಷಿಸಿ, ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿದೆ. ಕೇಂದ್ರದಿಂದ ಸಕ್ಷಮ ಅಧಿಕಾರಿಗಳ ತಂಡವೂ ಬಂದು ಅಧ್ಯಯನ ಮಾಡಿ ತಮ್ಮ ಶಿಫಾರಸನ್ನು ನವೆಂಬರ್ನಲ್ಲೇ ನೀಡಿಯಾಗಿದೆ. ೨೦೨೩ರ ನವೆಂಬರ್-ಡಿಸೆಂಬರ್ಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪ್ರಧಾನಿ-ಗೃಹಮಂತ್ರಿಗಳನ್ನು ಭೇಟಿ ಮಾಡಿ ತ್ವರಿತವಾಗಿ ಪರಿಹಾರ ಒದಗಿಸಲು ಮನವಿಯನ್ನು ಮಾಡಿಯಾಗಿತ್ತು.
2023ರ ಡಿಸೆಂಬರ್ನಿಂದ ಮಾರ್ಚ್ವರೆಗೆ ತಮ್ಮ ಟೇಬಲ್ ಮೇಲಿದ್ದ ಫೈಲನ್ನು ಕಣ್ಣೆತ್ತಿಯೂ ನೋಡದ ಕೇಂದ್ರದ ಗೃಹಮಂತ್ರಿ ಅಮಿತ್ ಶಾ ಮತ್ತು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಬಂದು ರಾಜ್ಯ ಸರಕಾರ ತಡವಾಗಿ ವರದಿ ಕಳಿಸಿತು, ವಿಳಂಬಕ್ಕೆ ಚುನಾವಣೆ ಘೋಷಣೆಯಾಗಿದ್ದು ಕಾರಣ ಎಂದೆಲ್ಲಾ ಸುಳ್ಳು ಹೇಳುತ್ತಿದ್ದಾರೆ. ಮೊನ್ನೆ ಮೋದಿ ಸರಕಾರದ ವಕೀಲರೂ ಕೂಡಾ ಈ ಬಗ್ಗೆ ಕರ್ನಾಟಕ ಸರಕಾರ ಕೇಂದ್ರಕ್ಕೆ ಮೊರೆ ಬರದೆ ಚುನಾವಣೆಗೆ ಮುಂಚೆ ಸುಪ್ರೀಂ ಮೆಟ್ಟಿಲೇರಿರುವುದು ರಾಜಕೀಯ ಮಾಡಲು ಎಂಬಂತೆ ಸುಳ್ಳು ಆರೋಪ ಮಾಡಿದ್ದಾರೆ. ಆದ್ದರಿಂದಲೇ ಸುಪ್ರೀಂ ಕೇಂದ್ರಕ್ಕೆ ಈ ಬಗ್ಗೆ ಅಧಿಕೃತ ನೋಟಿಸ್ ಕೊಡಬಾರದೆಂದು ಆಗ್ರಹಿಸಿದೆ. ಈ ಒತ್ತಡಕ್ಕೆ ಮಣಿದ ಸುಪ್ರೀಂ ಕೋರ್ಟ್ ಎರಡು ವಾರಗಳ ನಂತರ ಕೇಂದ್ರವು ಉತ್ತರಿಸಬೇಕೆಂದು ಆದೇಶಿಸಿದೆ.
ಇದು ವಿರೋಧ ಪಕ್ಷಗಳ ಸರಕಾರವಿರುವ ರಾಜ್ಯಗಳ ಮೇಲೆ ಕೇಂದ್ರವು ದ್ವೇಷದಿಂದ ಮಾಡುತ್ತಿರುವ ತಾರತಮ್ಯ ಹಾಗೂ ಸರ್ವಾಧಿಕಾರವೇ ಹೊರತು ಮತ್ತೇನಲ್ಲ.
ಇದಲ್ಲದೆ, ಮೋದಿ ಸರಕಾರ ಕರ್ನಾಟಕದ ತೆರಿಗೆ ಪಾಲನ್ನು ಹಂಚುವಲ್ಲಿಯೂ ಇನ್ನಿಲ್ಲದ ತಾರತಮ್ಯ ಮತ್ತು ವಂಚನೆ ಮಾಡುತ್ತಿದೆ.
ಇದರ ಮೂಲಗಳು ಕಾಂಗ್ರೆಸ್ ಸರಕಾರದ ಅವಧಿಯ ನೀತಿಗಳಲ್ಲೇ ಬೇರುಬಿಟ್ಟುಕೊಂಡಿದ್ದರೂ ಅದು ಅತಿರೇಕಕ್ಕೆ ಹೋಗಿರುವುದು ಮೋದಿ ಕಾಲದಲ್ಲಿ..
ಅದು ಜಿಎಸ್ಟಿ ವಂಚನೆ, ಸೆಸ್ ದ್ರೋಹಗಳೆಂಬ ಎರಡು ರೀತಿಗಳಲ್ಲಿ ಪ್ರಧಾನವಾಗಿ ನಡೆಯುತ್ತಿದೆ.
ಜಿಎಸ್ಟಿ ವಂಚನೆ:
ಸ್ವಾತಂತ್ರ್ಯಾನಂತರದಲ್ಲಿ ಭಾರತ ಜಾರಿ ಮಾಡಿದ ಅತ್ಯಂತ ಜನವಿರೋಧಿ ಹಾಗೂ ಪ್ರತಿಗಾಮಿ ತೆರಿಗೆ ವ್ಯವಸ್ಥೆ -ಈ ಸರಕು ಮತ್ತು ಸೇವಾ ತೆರಿಗೆ-ಜಿಎಸ್ಟಿ-ವ್ಯವಸ್ಥೆ.
ಇದು ಬಡವ ಮತ್ತು ಶ್ರೀಸಾಮಾನ್ಯರಿಂದ ಅತ್ಯಧಿಕವಾದ ತೆರಿಗೆಯನ್ನು ವಸೂಲಿ ಮಾಡುತ್ತದೆ. ಇತ್ತೀಚಿನ ಅಧ್ಯಯನಗಳು ಹೇಳುವಂತೆ ಭಾರತದ ಒಟ್ಟಾರೆ ತೆರಿಗೆ ಆದಾಯಗಳಲ್ಲಿ ಶೇ. 63ರಷ್ಟು ಈ ಜಿಎಸ್ಟಿ ಮೂಲದ್ದು. ಇದರಲ್ಲಿ ಭಾರತದ ಶೇ. 10ರಷ್ಟಿರುವ ಮೇಲ್ವರ್ಗದವರು ಕಟ್ಟುವುದು ಶೇ. 3 ರಷ್ಟು ಮಾತ್ರ. ಉಳಿದ ಶೇ. 97ರಷ್ಟು ಜಿಎಸ್ಟಿ ಕಟ್ಟುವುದು 130 ಕೋಟಿ ಬಡ ಭಾರತೀಯರು! ಹೀಗಾಗಿ ಈ ಜಿಎಸ್ಟಿ ವ್ಯವಸ್ಥೆಯೇ ಜನವಿರೋಧಿ.
ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅದರಲ್ಲಿ ರಾಜ್ಯಗಳ ಪಾಲು ಕಡಿತವಾಗುತ್ತಾ ಬಂದಿದೆ. ಹಾಗೆ ನೋಡಿದರೆ ದೇಶದಲ್ಲಿ ಕಾರ್ಪೊರೇಟ್ ಉದ್ಯಮಪತಿಗಳ ಪರವಾದ ಉದಾರೀಕರಣ-ಜಾಗತೀಕರಣ ನೀತಿಗಳನ್ನು ಜಾರಿಗೆ ತಂದ ಕಾಂಗ್ರೆಸ್ ಪಕ್ಷವೇ 2006ರಲ್ಲಿ ಈ ಜಿಎಸ್ಟಿವ್ಯವಸ್ಥೆಯನ್ನು ಜಾರಿ ಮಾಡುವ ಪ್ರಸ್ತಾಪ ಮಾಡಿತ್ತು. ಆದರೆ ಅದರ ಬಳಿ ಬೇಕಿದ್ದ ಶಾಸನಬಲವಿರದಿದ್ದರಿಂದ ಆಗ ಜಿಎಸ್ಟಿ ಜಾರಿಯಾಗಲಿಲ್ಲ.
2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ವಿರೋಧ ಪಕ್ಷಗಳಿದ್ದ ರಾಜ್ಯಗಳನ್ನು ಒಪ್ಪಿಸಿ ಸಂವಿಧಾನ ತಿದ್ದುಪಡಿ ತಂದು ಜಿಎಸ್ಟಿ ಜಾರಿ ಮಾಡುವಲ್ಲಿ ಯಶಸ್ವಿಯಾಯಿತು. ಆದರೆ ಮೋದಿ ಸರಕಾರ ಇದರಲ್ಲಿ ಎರಡು ರೀತಿಯ ವಂಚನೆ ಮಾಡುತ್ತಿದೆ. ರಾಜ್ಯಗಳಿಗೆ ಜಿಎಸ್ಟಿ ಪೂರ್ವದ ತೆರಿಗೆ ವ್ಯವಸ್ಥೆಯಲ್ಲಿ ಎಷ್ಟು ತೆರಿಗೆ ಸಂಗ್ರಹವಾಗುತ್ತಿತ್ತೋ ಅಷ್ಟು ತೆರಿಗೆಯನ್ನು ಖಾತರಿ ಮಾಡುವುದಾಗಿ ಮೋದಿ ಸರಕಾರ ಭರವಸೆ ಕೊಟ್ಟಿತ್ತು. ಅಷ್ಟು ಸಂಗ್ರಹವಾಗದಿದ್ದರೆ ಅದನ್ನು ಪರಿಹಾರ ರೂಪದಲ್ಲಿ ತುಂಬಿಕೊಡುವುದಾಗಿ ಶಾಸನಬದ್ಧ ಭರವಸೆ ನೀಡುತ್ತಿತ್ತು. ಅದಕ್ಕಾಗಿ ಜನರಿಂದಲೇ ಸುಲಿಯುವ ಜಿಎಸ್ಟಿ ಪರಿಹಾರ ಸೆಸ್ ಅನ್ನು ಹಾಕತೊಡಗಿತು.
ಆದರೆ ಮೋದಿ ಸರಕಾರ ಯಾವ ವರ್ಷವೂ ಕರ್ನಾಟಕಕ್ಕೆ ಪೂರ್ತಿ ಪರಿಹಾರವನ್ನು ಕೊಟ್ಟೇ ಇಲ್ಲ. ಎರಡನೆಯದಾಗಿ ಈ ಪರಿಹಾರ ಈ ವರ್ಷದಿಂದ ಸಂಪೂರ್ಣವಾಗಿ ಬಂದ್ ಆಗಲಿದೆ. ಇದರಿಂದ ಏನಿಲ್ಲವೆಂದರೂ ಕರ್ನಾಟಕಕ್ಕೆ ವಾರ್ಷಿಕ 10-12 ಸಾವಿರ ಕೋಟಿ ರೂ. ನಷ್ಟ ಉಂಟಾಗಲಿದೆ.
ಸೆಸ್ ಸುಲಿಗೆ:
ಸೆಸ್ ಮತ್ತು ಸರ್ಚಾರ್ಜ್ ಗಳು ರಾಜ್ಯಗಳನ್ನು ವಂಚಿಸಲು ಕೇಂದ್ರವು ಕಂಡುಕೊಂಡಿರುವ ಕಳ್ಳ ದಾರಿ. ಕೇಂದ್ರದ ತೆರಿಗೆ ಸಂಪನ್ಮೂಲಗಳಲ್ಲಿ ಹಣಕಾಸು ಆಯೋಗ ವಿಧಿಸುವಷ್ಟು ಪ್ರಮಾಣವನ್ನು ಕೇಂದ್ರ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು.
ಆದರೆ ಸೆಸ್ಗಳು ಮತ್ತು ಸರ್ಚಾರ್ಜ್ಗಳು ವಿಶೇಷ ಉಪ ಹಾಗೂ ಮೇಲ್ ತೆರಿಗೆಗಳಾಗಿದ್ದು ಅದನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಿಲ್ಲ. ಇದು ಕಾಂಗ್ರೆಸ್ ಕಾಲದಲ್ಲೂ ಇದ್ದರೂ ಮೋದಿ ಸರಕಾರದ ಕಾಲದಲ್ಲಿ ಬಹಳಷ್ಟು ತೆರಿಗೆಗಳನ್ನು ಸೆಸ್ ಮತ್ತು ಸರ್ಚಾರ್ಜ್ಗಳ ರೂಪದಲ್ಲಿ ಸಂಗ್ರಹಿಸುವ ಮತ್ತು ಅದರ ವ್ಯಾಪ್ತಿ ಮತ್ತು ಅವಧಿಗಳನ್ನು ಹೆಚ್ಚಿಸುವ ಫೆಡರಲ್ ವಿರೋಧಿ ಕ್ರಮಗಳನ್ನು ಜಾರಿ ಮಾಡಿದೆ. ಇದರಿಂದ ರಾಜ್ಯಗಳ ತೆರಿಗೆ ಪಾಲು ತೀವ್ರವಾಗಿ ಕಡಿಮೆಯಾಗುತ್ತಿದೆ. ಅದರಲ್ಲೂ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ದ್ರೋಹವನ್ನು ಮೋದಿ ಸರಕಾರ ಮಾಡುತ್ತಿದೆ.
ಉದಾಹರಣೆಗೆ:
15ನೇ ಆಯೋಗದ ಪ್ರಕಾರ ಕೇಂದ್ರ ಸರಕಾರದ ಒಟ್ಟಾರೆ ತೆರಿಗೆ ಸಂಗ್ರಹ 2021-26ರ ಐದು ವರ್ಷದ ಅವಧಿಯಲ್ಲಿ ರೂ. 135.2 ಲಕ್ಷ ಕೋಟಿಯಷ್ಟಾಗಲಿದೆಯೆಂದು ಅಂದಾಜಿಸಲಾಗಿದೆ. ಆಯೋಗವು ರಾಜ್ಯಗಳ ಪಾಲನ್ನು ಶೇ.41 ಎಂದು ನಿಗದಿಗೊಳಿಸಿದೆ. ಆದ್ದರಿಂದ ರಾಜ್ಯಗಳ ಪಾಲು ರೂ. 135.2 ಕೋಟಿಯ ಶೇ.41 ಎಂದರೆ ರೂ. 55 ಲಕ್ಷ ಕೋಟಿಗಳಾಗಬೇಕು. ಅಲ್ಲವೇ?
ಆದರೆ ಹಣಕಾಸು ಆಯೋಗವು ಇದರಲ್ಲಿ ಕೇವಲ 103 ಲಕ್ಷ ಕೋಟಿ ರೂ.ಗಳನ್ನು ಮಾತ್ರ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕೆಂದು ತಿಳಿಸಿದೆ. ಏಕೆಂದರೆ ಇನ್ನುಳಿದ 32 ಲಕ್ಷ ಕೋಟಿ ರೂ.ಗಳನ್ನು ಅಂದರೆ ಶೇ. 23ರಷ್ಟು ಸೆಸ್ ಮತ್ತು ಸರ್ಚಾರ್ಜ್ಗಳಿಂದ ಸಂಗ್ರಹಿಸಲಾಗುವುದೆಂದು ಅಂದಾಜಿಸಿದೆ.
2000ರಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರ ಮಾಡಿದ ಕಾನೂನಿನ ಪ್ರಕಾರ ಸೆಸ್ ಸಂಗ್ರಹದಲ್ಲಿ ರಾಜ್ಯಗಳಿಗೆ ಪಾಲಿಲ್ಲ. ಹೀಗಾಗಿ 2021-26ರ ಅವಧಿಯಲ್ಲಿ ರಾಜ್ಯಗಳ ಪಾಲು ರೂ. 135 ಲಕ್ಷ ಕೋಟಿಯ ಶೇ. 41ರಷ್ಟಾಗದೆ, ಕೇವಲ 103 ಲಕ್ಷ ಕೋಟಿ ರೂ.ಗಳ ಶೇ. 41ರಷ್ಟು ಅಂದರೆ 42.2 ಲಕ್ಷ ಕೋಟಿ ರೂ.ಗಳಿಗೆ ಇಳಿಯಲಿದೆ.
ಅಂದರೆ ರಾಜ್ಯಗಳಿಗೆ ಸಲ್ಲಬೇಕಿರುವ 12.8 (55-42.2 = 12.8) ಲಕ್ಷ ಕೋಟಿ ರೂ.ಗಳಷ್ಟು ಸಂಪನ್ಮೂಲವನ್ನು ಮೋದಿ ಸರಕಾರ ಹಗಲು ದರೋಡೆ ಮಾಡಲಿದೆ.
ಆದರೆ ಮೋದಿ ಸರಕಾರವೇ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿರುವಂತೆ ಕೇಂದ್ರ ತೆರಿಗೆಯಲ್ಲಿ ಸೆಸ್ನ ಪಾಲು ಶೇ. 23 ಅಲ್ಲ. ಶೇ. 28ಕ್ಕೆ ಏರಿದೆ. ಅಂದರೆ ರಾಜ್ಯಗಳ ಜೊತೆ ಈಗ ಕೇಂದ್ರ ಹಂಚಿಕೊಳ್ಳಲಿರುವುದು ರೂ. 103 ಲಕ್ಷ ಕೋಟಿಯಲ್ಲಿ ಶೇ. 41 ಅಲ್ಲ. ಬದಲಿಗೆ ಕೇವಲ ರೂ. 97 ಲಕ್ಷ ಕೋಟಿಯ ಶೇ. 41. ಅಂದರೆ 39 ಲಕ್ಷ ಕೋಟಿ ರೂ. ಮಾತ್ರ.
ಆದರೆ ವಾಸ್ತವದಲ್ಲಿ ಮೋದಿ ಸರಕಾರ ರಾಜ್ಯಗಳ ಜೊತೆಗೆ ಶೇ. 35ಕ್ಕಿಂತ ಜಾಸ್ತಿ ಹಂಚಿಕೊಂಡಿಲ್ಲ. ಹೀಗಾಗಿ ರಾಜ್ಯಗಳಿಗೆ ರೂ. 39 ಲಕ್ಷ ಕೋಟಿಯೂ ಸಿಕ್ಕಿಲ್ಲ.
ಆದರೆ ಕರ್ನಾಟಕಕ್ಕೆ ಮೋದಿ ಸರಕಾರ ಮಾಡುತ್ತಿರುವ ಅನ್ಯಾಯ ಇಷ್ಟೇ ಅಲ್ಲ.
15ನೇ ಆಯೋಗವು ರಾಜ್ಯಗಳ ನಡುವಿನ ತೆರಿಗೆಪಾಲು ಹಂಚಿಕೆಗೆ ಕೆಳಗಿನ ಮಾನದಂಡಗಳನ್ನು ನಿಗದಿಗೊಳಿಸಿದೆ:
ಆದಾಯವಿರುವ ರಾಜ್ಯಗಳಿಗೆ ಹೋಲಿಸಿದಲ್ಲಿ ಆಯಾ ರಾಜ್ಯಗಳ ಆದಾಯ ದೂರ (ಇನ್ಕಮ್ ಡಿಸ್ಟನ್ಸ್- 45 ಅಂಕ), ಜನಸಂಖ್ಯಾ ಪ್ರಮಾಣ(15), ಜನಸಂಖ್ಯಾ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳು (12.5), ತೆರಿಗೆ ಸಂಗ್ರಹದ ಕ್ರಮಗಳು (2.5), ಪರಿಸರ ಕ್ರಮಗಳು ಇತ್ಯಾದಿಗಳು ಹಾಗೂ ಜನಸಂಖ್ಯಾ ಪ್ರಮಾಣಕ್ಕೆ ಮೊತ್ತಮೊದಲ ಬಾರಿಗೆ 1971ರ ಜನಗಣತಿಗೆ ಬದಲಾಗಿ 2011ರ ಜನಗಣತಿಯನ್ನು ಮಾನದಂಡವನ್ನಾಗಿಸಿಕೊಂಡಿದೆ.
ಈ ಎಲ್ಲಾ ಕಾರಣಗಳಿಂದ ಕೇಂದ್ರದ ತೆರಿಗೆಯ ಡಿವಿಸಿಬಲ್ ಪೂಲ್ನಲ್ಲಿ ಕರ್ನಾಟಕದ ಪಾಲನ್ನು ಮೋದಿ ಸರಕಾರ ನೇಮಿಸಿದ 15ನೇ ಹಣಕಾಸು ಆಯೋಗ ಶೇ. 4.71ರಿಂದ 3.64ಕ್ಕೆ ಇಳಿಸಿದೆ.
ಅಂದರೆ, ಕೇಂದ್ರದ ತೆರಿಗೆಯ ಪಾಲಿನಲ್ಲಿ ಕರ್ನಾಟಕದ ಪಾಲು ಶೇ. 1.07ರಷ್ಟು ಕಡಿಮೆಯಾಗಿದೆ.