ಸಿಪಿಎಂ ಗೆ ಸಿಂಗೂರ್ ಆದಂತೆ ಮಮತಾಗೆ ಸಂದೇಶ್ ಖಾಲಿ ಆಗಲಿದೆಯೇ ? | Sandeshkhali
ಬಿಜೆಪಿಯ ಹಿಂದೂ - ಮುಸ್ಲಿಂ ಅಪಪ್ರಚಾರ ಫಲ ನೀಡಲಿದೆಯೇ ? ► ಮಮತಾರ ಮಹಿಳಾ ಓಟ್ ಬ್ಯಾಂಕ್ ಗೆ ಕನ್ನ ಹಾಕಲಿದೆಯೇ ಬಿಜೆಪಿ ?
Mamata Banerjee | Photo: PTI
ಬಂಗಾಳದಲ್ಲಿ ಮತ್ತೊಮ್ಮೆ ಬದಲಾವಣೆಯ ಪರ್ವಕ್ಕೆ ಮುನ್ಸೂಚನೆಯಾಗಿ ಸಂದೇಶ್ ಖಾಲಿ ಪ್ರಕರಣ ಬೆಳೆದುಕೊಳ್ಳುತ್ತಿದೆಯೆ?. ಸಂದೇಶ್ ಖಾಲಿಯಲ್ಲಿ ನಡೆದ ಘಟನೆಯಿಂದ ಪಶ್ಚಿಮ ಬಂಗಾಳದಲ್ಲಿ ದೀದಿ ಏಕಸ್ವಾಮ್ಯಕ್ಕೆ ಭಾರೀ ಧಕ್ಕೆಯಾಗಿದೆಯೇ ?. ಅವರ ಸುಭದ್ರ ರಾಜಕೀಯ ಕೋಟೆಗೆ ಸಂದೇಶ್ ಖಾಲಿ ಮೂಲಕ ಎದುರಾಳಿ ಶಕ್ತಿಗಳು ಕನ್ನ ಕೊರೆದಿವೆಯೆ?. ಒಂದು ವಾರದ ಹಿಂದಿನವರೆಗೂ ಸಂದೇಶ್ಖಾಲಿ ಎಂಬ ಹೆಸರೇ ಯಾರಿಗೂ ಗೊತ್ತಿರಲಿಲ್ಲ.
ಟಿಎಂಸಿ ನಾಯಕ ಷಹಜಹಾನ್ ಶೇಖ್ ಮತ್ತು ಬೆಂಬಲಿಗರ ವಿರುದ್ಧ ಭೂಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಈಗ ಪರಿಸ್ಥಿತಿ ಬಿಗಡಾಯಿಸಿದೆ. ಇಡೀ ಪ್ರಕರಣ ಈಗ ರಾಜಕೀಯ ಪಕ್ಷಗಳ ನಡುವಿನ ಸಮರವನ್ನು ರೂಪಿಸತೊಡಗಿದೆ. ಮತ್ತಿದು ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ನಡೆಯುತ್ತಿದೆ.
ಪಶ್ಚಿಮ ಬಂಗಾಳದಲ್ಲಿ 42 ಲೋಕಸಭಾ ಕ್ಷೇತ್ರಗಳಿವೆ. ಕನಿಷ್ಠ 35 ಸೀಟುಗಳನ್ನಾದರೂ ಗೆಲ್ಲಲೇಬೇಕೆಂದು ಯತ್ನಿಸುತ್ತಿರುವ ಬಿಜೆಪಿ ಈಗ ಸಂದೇಶ್ಖಾಲಿ ಪ್ರಕರಣವನ್ನು ಟಿಎಂಸಿ ವಿರುದ್ಧ ಅಸ್ತ್ರವಾಗಿಸುತ್ತಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಈಗಿನ ಬೆಳವಣಿಗೆ ರಾಜಕೀಯವಾಗಿ ಎಷ್ಟು ಮಹತ್ವ ಪಡೆಯುತ್ತಿದೆ ಎಂಬುದನ್ನು ಯಾರಾದರೂ ಊಹಿಸಬಹುದಾಗಿದೆ.
ಇದು ಬಂಗಾಳದಲ್ಲಿ ದೀದಿ ಯುಗ ರಾಜಕೀಯವಾಗಿ ಕೊನೆಯಾಗುತ್ತಿರುವುದರ ಆರಂಭ ಎಂದೇ ಬಹಳಷ್ಟು ಮಂದಿ ಊಹಿಸುತ್ತಿದ್ದಾರೆ. ಹಾಗೆ ಹೇಳುತ್ತಿರುವವರು 17 ವರ್ಷಗಳ ಹಿಂದಿನ ಕರಾಳ ಘಟನೆಯನ್ನು ನೆನಪು ಮಾಡಿಕೊಳ್ಳುತ್ತಾರೆ. 2007ರ ಮಾರ್ಚ್ 15ರಂದು ನಂದಿಗ್ರಾಮ ಪೊಲೀಸ್ ಫೈರಿಂಗ್ನಲ್ಲಿ 14 ಮಂದಿ ಸಾವನ್ನಪ್ಪಿದ್ದರು. ಅನಂತರ ಉದ್ವಿಗ್ನ ಸ್ಥಿತಿ ಸಿಂಗೂರ್, ಲಾಲ್ಘಡ್, ಕಡೆಗೆ ಇಡೀ ಬಂಗಾಳವನ್ನೇ ವ್ಯಾಪಿಸಿತ್ತು.
ಆ ಉದ್ವಿಗ್ನತೆಯ ತಾಪಕ್ಕೆ 2011ರಲ್ಲಿ ಎಡರಂಗ ಸರ್ಕಾರ ಉರುಳಿಬಿದ್ದಿತ್ತು. ದಶಕಗಳ ಸಂಘರ್ಷದ ಬಳಿಕ ಮಮತಾ ಬ್ಯಾನರ್ಜಿ ಎಡರಂಗ ಸರ್ಕಾರವನ್ನು ಹಾಗೆ ಆಹುತಿ ತೆಗೆದುಕೊಂಡಿದ್ದರು. ಅವತ್ತು ಎಡರಂಗ ಸರ್ಕಾರದಲ್ಲಿ ಏನು ಕಂಡಿತ್ತೋ ಅದೇ ಅನಂತರ ದೀದಿ ಸರ್ಕಾರದಲ್ಲೂ ಕಾಣಿಸಿಕೊಂಡಿದೆ. ಚುನಾವಣಾ ಚಿಹ್ನೆ ಬದಲಾಗಿತ್ತು. ಎಡಪಕ್ಷವೇ ಇಲ್ಲವಾಗಿತ್ತು. ಜನರ ಮೇಲೆ ದೌರ್ಜನ್ಯ, ಉದ್ಯಮಿಗಳಿಂದ ಹಣ ವಸೂಲಿ, ಜನರಿಗೆ ಅವಕಾಶಗಳೇ ಇಲ್ಲದ ಸ್ಥಿತಿ, ಅಕಸ್ಮಾತ್ ಯಾರಾದರೂ ದನಿಯೆತ್ತುವ ಧೈರ್ಯ ತೋರಿಸಿದರೆ ಅವರ ವಿರುದ್ದ ಪೊಲೀಸ್ ಬಲದ ಬಳಕೆ ಇದೆಲ್ಲವೂ ಇತ್ತು.
ದೇಶದಲ್ಲಿ ಅತಿ ಹೆಚ್ಚು ರಾಜಕೀಯ ಹಿಂಸಾಚಾರ ಕಾಣಿಸುವುದೇ ಪಶ್ಚಿಮ ಬಂಗಾಳದಲ್ಲಿ. ಅದಕ್ಕೆ ಸುದೀರ್ಘ ಇತಿಹಾಸವೇ ಇದೆ. ಮೊದಲು ಕಾಂಗ್ರೆಸ್, ನಂತರ ಎಡರಂಗ ಮತ್ತೀಗ ಟಿಎಂಸಿ. ಈಗ ಟಿಎಂಸಿ ಮತ್ತು ಬಿಜೆಪಿ ನಡುವೆ ಸಂಘರ್ಷದಲ್ಲಿಯೂ ರಾಜಕೀಯ ಹಿಂಸಾಚಾರ ಅವ್ಯಾಹತವಾಗಿಯೇ ಇದೆ.
ಕಳೆದೊಂದು ದಶಕದಲ್ಲಿ ಮಮತಾ ಬ್ಯಾನರ್ಜಿ ಇದನ್ನು ತಡೆಯಬಹುದಿತ್ತು. ಆದರೆ ಅದು ಹೆಚ್ಚುತ್ತಲೇ ಇದೆ. ಯಾಕೆ ಬಂಗಾಲದಲ್ಲಿ ಇಷ್ಟೊಂದು ರಕ್ತಪಾತ?. ಸಂದೇಶ್ಖಾಲಿ ಘಟನೆ ಮಮತಾ ಬ್ಯಾನರ್ಜಿ ಪಾಲಿಗೆ ರಾಜಕೀಯ ಅವನತಿಯನ್ನು ತರಲಿದೆಯೆ?
ಇದು ಹಿಂದೂ ಮುಸ್ಲಿಂ ಸಂಘರ್ಷದ ಸ್ವರೂಪ ಪಡೆಯುತ್ತಿದೆಯೆ?. ಹಿಂದೂ ಮಹಿಳೆಯರು ಟಾರ್ಗೆಟ್ ಆಗಿದ್ದರೆ? ಮತ್ತು, ಇದೆಲ್ಲದರ ಹಿಂದಿನ ರಾಜಕೀಯ ಎನು? ಉಳಿದ ಬಹಳಷ್ಟು ರಾಜ್ಯಗಳಲ್ಲಿಯಂತೆ ಪಶ್ಚಿಮ ಬಂಗಾಳದಲ್ಲಿಯೂ ಸಿಬಿಐ ಮತ್ತು ಈಡಿ ಬಹು ಕಾಲದಿಂದ ಕ್ರಿಯಾಶೀಲವಾಗಿವೆ. ಶಿಕ್ಷಣ ಕ್ಷೇತ್ರದಲ್ಲಿನ ಹಗರಣ, ನೇಮಕಾತಿ ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡಿರುವವರು ಟಿಎಂಸಿಯ ಪಾರ್ಥೋ ಚಟರ್ಜಿ.
ದನಗಳ ಕಳ್ಳಸಾಗಾಣಿಕೆ ಹಗರಣದಲ್ಲಿ ಮಮತಾ ಆಪ್ತ ಅನುಭ್ರತ್ ಮಂಡಲ್ ಹೆಸರು ಸೇರಿಕೊಂಡಿದೆ. ಕಲ್ಲಿದ್ದಲು ಮತ್ತು ಮರಳು ಮಾಫಿಯಾದಲ್ಲಿ ಮಮತಾ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಆರೋಪಿಯಾಗಿದ್ದಾರೆ.
ಇನ್ನೂ ಹಲವು ಪ್ರಕರಣಗಳಿವೆ. ‘ಆದರೆ ವಿಚಾರ ಇಷ್ಟೆ, ಎಲ್ಲ ಪ್ರಕರಣಗಳು ಟಿಎಂಸಿಯನ್ನು, ಅದರಲ್ಲು ಮಮತಾ ಅವರನ್ನು ಎಲ್ಲ ದಿಕ್ಕುಗಳಿಂದಲೂ ಸುತ್ತುವರಿಯುತ್ತಿವೆ ಎಂಬುದು.
ಇಲ್ಲಿ ಒಂದು ವಿಚಾರ ಗಮನಿಸಬೇಕು. ಸಂದೇಶ್ಖಾಲಿ ವಿಚಾರ ಬಹಿರಂಗವಾಗಿರುವುದು ತನಿಖೆಯಿಂದಾಗಿಯಲ್ಲ. ಆದರೆ ಪಡಿತರ ಹಗರಣದ ತನಿಖೆಯ ಹೊತ್ತಿನಲ್ಲಿ ಇದು ಬಯಲಾಗಿದೆ. ರೇಷನ್ ಹಗರಣದಲ್ಲಿರುವವರು ರಾಜಕೀಯದಲ್ಲಿ ಮಮತಾ ಬ್ಯಾನರ್ಜಿಗೆ ಬಹುಕಾಲದಿಂದ ಹತ್ತಿರವಿರುವ ಜ್ಯೋತಿಪ್ರಿಯ ಮಲಿಕ್. ಒಂದು ಕಿಲೋ ಗೋಧಿಯಲ್ಲಿ 200 ಗ್ರಾಂ ಕದಿಯುವುದು ಈ ಹಗರಣ. ಫಲಾನುಭವಿಗೆ ಸಿಗುವುದು 800 ಗ್ರಾಮ್ ಮಾತ್ರ.
ಒಂದೊಂದು ಕೆಜಿಯಿಂದ ಕದಿಯಲಾದ ಆ ತಲಾ 200 ಗ್ರಾಮ್ ಕಳೆದ 10 ವರ್ಷಗಳಲ್ಲಿ 20,000 ಕೋಟಿ ಹಗರಣಕ್ಕೆ ಕಾರಣವಾಗಿದೆ.
ಹಗರಣದಲ್ಲಿ ಷಹಜಹಾನ್ ಶೇಖ್ ಹೆಸರು ಕೂಡ ಕೇಳಿಬಂದಿದೆ. ಷಹಜಹಾನ್ ಶೇಖ್ ನ ವಿಚಾರಣೆಗೆಂದು ಕೇಂದ್ರ ತನಿಖಾ ದಳ ಸಂದೇಶ್ಖಾಲಿಗೆ ಹೋದಾಗ ಸಾವಿರಾರು ಜನರು ತನಿಖಾ ದಳದ ಮೇಲೆ ಮುಗಿಬೀಳುತ್ತಾರೆ. ಅಲ್ಲಿಂದ ಅವರು ಹೊರಹೋಗುವಂತೆ ಮಾಡಲಾಗುತ್ತದೆ ಮತ್ತು ಇಡೀ ವಿದ್ಯಮಾನವನ್ನು ಪೊಲಿಸರು ಮೂಕಪ್ರೇಕ್ಷಕರಂತೆ ನೋಡುತ್ತಾರೆ.
ಇದನ್ನು ಕಡೆಗೆ ಮಮತಾ ಬ್ಯಾನರ್ಜಿ ಅವರು ಷಹಜಹಾನ್ ಶೇಖ್ ನ ಜನಪ್ರಿಯತೆ ಅದೆಂದು ಬಣ್ಣಿಸುತ್ತಾರೆ. ಅದು ಜನರ ಆಸೆಯಾಗಿರುವುದರಿಂದ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ ಎಂದುಬಿಡುತ್ತಾರೆ. ಜನ ಹೀಗೆ ತಮ್ಮನ್ನು ಪಣಕ್ಕಿಡುವ ಮಟ್ಟಿಗೆ ಷಹಜಹಾನ್ ಶೇಖ್ ಜನಪ್ರಿಯತೆ ಪಡೆದದ್ದು ಹೇಗೆ?
ಅವರು ಭೂಮಿ ಕಸಿದುಕೊಳ್ಳುವಷ್ಟು ಬಲಿಷ್ಠರಾಗಿದ್ದರು. ಹಣ ವಸೂಲಿ ಮಾಡುತ್ತಿದ್ದರು. ವ್ಯವಹಾರ ಅನುಮಾನಾಸ್ಪದವಾಗಿತ್ತು
ಸರಿಯಾದ ಸಮಯದಲ್ಲಿಯೇ ಷಹಜಹಾನ್ ಟಿಎಂಸಿ ಸೇರಿ ರಾಜಕಾರಣಿಯಾದರು.
ಬಡವರ ಪಾಲಿನ ನಾಯಕನಾಗಿ ಕಾಣಿಸಿಕೊಳ್ಳತೊಡಗಿದ್ದರು. ಒಂದೆಡೆ ಭೂಮಿ ವಶ ಮಾಡಿಕೊಳ್ಳುತ್ತಲೇ ಇನ್ನೊಂದೆಡೆ ಮಕ್ಕಳಿಗೆ ಯೂಟ್ಯೂಬ್ ಚಾನೆಲ್ನಲ್ಲಿ ಮಿಠಾಯಿ ಹಂಚುತ್ತಿದ್ದರು.
ತನಿಖಾ ದಳ ಬಂದಾಗ ನಾಪತ್ತೆಯಾಗಿದ್ದ ಆತನಿಗಾಗಿ ವಕೀಲರು ನಿರೀಕ್ಷಣಾ ಜಾಮೀನಿಗಾಗಿ ಯತ್ನಿಸುತ್ತಿದ್ದರು. ಇಷ್ಟೆ ಆಗಿದ್ದರೆ ಇವತ್ತು ಈ ಮಟ್ಟದ ಸುದ್ದಿಯಾಗುತ್ತಿರಲಿಲ್ಲ. ಆದರೆ ಪಕ್ಷದ ನಾಯಕರು ತಮ್ಮನ್ನು ಶೋಷಿಸುತ್ತಿರುವುದಾಗಿ ಸಂದೇಶ್ಖಾಲಿ ಮಹಿಳೆಯರು ಆರೋಪಿಸತೊಡಗಿದಾಗ ಬೆಂಕಿ ಹೊತ್ತಿಕೊಳ್ಳುವುದಕ್ಕೆ ಶುರುವಾಗಿತ್ತು. ಬಂದೂಕು ಗುರಿಯಿಟ್ಟು ಶೋಷಿಸುತ್ತಿರುವುದಾಗಿ, ಷಹಜಹಾನ್ ಶೇಕ್ ಕಡೆಯವರಾದ ಶಿಬು ಆಜ್ರಾ ಮತ್ತು ಉತ್ತಮ್ ಸರ್ದಾರ ವಿರುದ್ಧ ಮಹಿಳೆಯರು ಆರೋಪಿಸಿದ್ದರು. ಅವರಿಬ್ಬರೂ ಷಹಜಹಾನ್ ನ ರೈಟ್ ಹ್ಯಾಂಡ್ ಆಗಿದ್ದರು.
ಒಂದು ಕಾಲದಲ್ಲಿ ಸಿಪಿಎಂನಲ್ಲಿದ್ದ ಅವರಿಬ್ಬರೂ ಷಹಜಹಾನ್ ಜೊತೆ ಟಿಎಂಸಿ ಸೇರಿದ್ದರು. ಸರ್ಕಾರದ ನಿಧಿಯನ್ನು ಕದಿಯುವುದು, ಮೀನುಗಾರಿಕೆಗಾಗಿ ಜಮೀನು ಕೊಡುವಂತೆ ರೈತರನ್ನು ಬೆದರಿಸುವುದು ಇತ್ಯಾದಿ ಆರೋಪಗಳು ಅವರ ಮೇಲಿದ್ದವು. ಆದರೆ, ಪಕ್ಷದ ಕಚೇರಿಗೆ ರಾತ್ರಿ ವೇಳೆಯಲ್ಲಿ ಮಹಿಳೆಯರನ್ನು ಕರೆಯಲಾಗುತ್ತದೆ ಎಂದು ಮೂವರು ಮಹಿಳೆಯರು ಆರೋಪಿಸಿದಾಗ ಗದ್ದಲ ಶುರುವಾಯಿತು. ಪೊಲೀಸರು ಅವರ ಜೊತೆ ಷಾಮೀಲಾಗಿದ್ದುರಿಂದ ಅವರನ್ನು ತಡೆಯುವವರೇ ಇಲ್ಲ. ಅವರ ಜೊತೆ ಹೋಗದಿದ್ದರೆ ಗಂಡಂದಿರನ್ನು ಥಳಿಸುತ್ತಿದ್ದರು ಎಂಬುದು ಮಹಿಳೆಯರ ಆರೋಪ.
ಮಹಿಳೆಯರೆಲ್ಲ ಒಗ್ಗಟ್ಟಾಗುತ್ತಿದ್ಧಾರೆ ಮತ್ತು ಅವರ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಲೇರುತ್ತಿದ್ದಾರೆ. ಶಿಬು ಹಜ್ರಾ ಮತ್ತು ಉತ್ತಮ್ ಸರ್ದಾರ ಇಬ್ಬರನ್ನೂ ಸಂದೇಶ್ಖಾಲಿಯಿಂದ ಹೊರಗಟ್ಟಲಾಯಿತು. ಆದರೆ ಪೊಲೀಸ್ ರಕ್ಷಣೆಯಲ್ಲೇ ಇದ್ದಾನೆನ್ನಲಾಗುವ ಷಹಜಹಾನ್ ಶೇಖ್ ಯಾರ ಕಣ್ಣಿಗೂ ಬೀಳುತ್ತಿಲ್ಲ. ಇಷ್ಟು ಆಗುತ್ತಿದ್ದಂತೆ ಈ ವಿಚಾರದಲ್ಲಿ ಬಿಜೆಪಿ ಎಂಟ್ರಿ ಕೊಡುತ್ತದೆ.
ನಂದಿಗ್ರಾಮ ಘಟನೆಯನ್ನು ಮಮತಾ ಮರೆತಿರಬಹುದು, ಅದರೆ ಬದಲಾವಣೆಯ ಕಿಡಿ ಎಲ್ಲಿಂದಲೂ ಬರಬಹುದು ಎಂಬುದು ಬಿಜೆಪಿಗೆ ಗೊತ್ತಿದೆ. ಮಹಿಳೆಯರ ಶೋಷಣೆ ಆರೋಪ ಹೊತ್ತಿರುವ ಷಹಜಹಾನ್ ಶೇಖ್ಗೆ ಮಮತಾ ಬ್ಯಾನರ್ಜಿ ರಕ್ಷಣೆ ನೀಡುತ್ತಿರುವುದನ್ನು ಬಿಜೆಪಿ ದೊಡ್ಡ ಇಶ್ಯೂ ಮಾಡುತ್ತಿದೆ.
ಬಿಜೆಪಿ ಇದಕ್ಕೆ ಕೋಮುಸ್ವರೂಪ ಕೊಡುತ್ತಿದೆ. ಇದೊಂದು ಕೋಮುವಾದಿ ಸಂಚು ಎನ್ನುತ್ತಿದೆ. ಹಿಂದೂ ಮಹಿಳೆಯರು ಆತನ ಟಾರ್ಗೆಟ್ ಎನ್ನುವುದು ಬಿಜೆಪಿ ಆರೋಪವಾಗಿದೆ. ಆದರೆ ಇದರಲ್ಲಿ ಮುಖ್ಯ ಆರೋಪಿಯೆ ಹಿಂದೂ ಆಗಿರುವಾಗ ಹೇಗೆ ಇದು ಕೋಮುವಾದಿಯಾಗುತ್ತದೆ?ಮಮತಾ ಬ್ಯಾನರ್ಜಿಗೆ ಇರುವ ಮಹಿಳಾ ಮತದಾರರ ಬೆಂಬಲ ದೊಡ್ಡದು. 35 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲೇಬೇಕಾದರೆ ಮಹಿಳೆಯರ ಮತ ಒಡೆಯಲೇಬೇಕು. ರಾಜ್ಯದಲ್ಲಿ ಮಹಿಳೆಯರ ಮೇಲೆ ಶೋಷಣೆಯಾಗುತ್ತಿರುವುದು ಒಬ್ಬ ಮಹಿಳಾ ಸಿಎಂಗೆ ಗೊತ್ತಿಲ್ಲವೆ, ಗೊತ್ತಿದ್ದರೂ ಷಹಜಹಾನ್ ರಕ್ಷಣೆಗೆ ಅವರು ನಿಂತಿದ್ದಾರೆಯೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ.
ಬಿಜೆಪಿಗೆ ಖಂಡಿತವಾಗಿಯೂ ಇದರ ಲಾಭ ಸಿಕ್ಕೇ ಸಿಗುತ್ತದೆ. ಇದಕ್ಕಾಗಿಯೇ ಮಾರ್ಚ್ 7ರಂದು ಮೋದಿ ಅಲ್ಲಿ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದರಿಂದ ಮಮತಾ ಬ್ಯಾನರ್ಜಿ ಸಂಕಷ್ಟದ ಸ್ಥಿತಿ ಎದುರಿಸಬೇಕಾಗಬಹುದೆ? ಇನ್ನೂ ಒಂದು ಕುತೂಹಲದ ಸಂಗತಿಯೆಂದರೆ, ರಾಷ್ಟ್ರಮಟ್ಟದಲ್ಲಿ ಮೋದಿ ಎದುರಿಸುತ್ತಿರುವುದನ್ನೇ ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಎದುರಿಸುತ್ತಿದ್ದಾರೆ. ಅಲ್ಲಿ ಜನರು ಷಹಜಹಾನ್ ಶೇಖ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುತ್ತಾರೆ.
ಬೀದಿಗಿಳಿದು ಪ್ರತಿಭಟಿಸುತ್ತಿರುವ ಮಹಿಳೆಯರು ಕೂಡ ಟಿಎಂಸಿಗೇ ಮತ ಹಾಕುವುದಾಗಿ ಹೇಳುತ್ತಾರೆ. ದೀದಿಗೆ ಇದರ ಬಗ್ಗೆಲ್ಲ ಗೊತ್ತಿಲ್ಲ. ಗೊತ್ತಿದ್ದರೆ ಹೀಗಾಗುವುದಕ್ಕೆ ಬಿಡುತ್ತಿರಲಿಲ್ಲ ಎಂದೇ ಅವರ ನಂಬಿಕೆ. ಆದರೆ ಬಂಗಾಳದಲ್ಲಿ ಸಿಪಿಎಂ ಕಾಲದ ವ್ಯವಸ್ಥೆಯೇ ಕಾಣಿಸುತ್ತಿದೆ. ಒಬ್ಭ ಸಣ್ಣ ಪುಢಾರಿ ಕೂಡ ತನ್ನ ಏರಿಯಾದಲ್ಲಿ ಏನು ಬೇಕಾದರೂ ಮಾಡಬಲ್ಲ. ಅವನಿಂದ ಜನರನ್ನು ರಕ್ಷಿಸುವವರೇ ಇರುವುದಿಲ್ಲ.
ಬಂಗಾಳವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಯತ್ನವನ್ನು ಜಾರಿಯಲ್ಲಿಟ್ಟಿರುವ ಬಿಜೆಪಿ ಎಲ್ಲವನ್ನೂ ನಾಜೂಕಾಗಿಯೆ ಸಾಧಿಸಲು ನೋಡುತ್ತಿದೆ.
ಈ ಹಂತದಲ್ಲಿ ಮಮತಾ ಬ್ಯಾನರ್ಜಿಯ ಎದುರು ಸ್ಪಷ್ಟ ಉತ್ತರವೇನೂ ಕಾಣಿಸುತ್ತಿಲ್ಲ. ಮೊದಲು ಮಮತಾ ಸರಕಾರ ಸಂದೇಶ್ಖಾಲಿಗೆ ಮಂತ್ರಿ ಪಾರ್ಥ ಭೌಮಿಕ್ ಅವರನ್ನು ಕಳಿಸಿತು. ಅಲ್ಲಿ ಯಾವುದೇ ದೌರ್ಜನ್ಯ ಆಗಿಲ್ಲ ಎಂದು ಅವರು ಹೇಳಿದ್ರು. ಮಹಿಳಾ ಆಯೋಗ ಕೂಡ ಮಮತಾ ಬ್ಯಾನರ್ಜಿಗೆ ಕ್ಲೀನ್ ಚಿಟ್ ಕೊಟ್ಟಿದೆ.
ಪ್ರತಿಭಟನೆಯಲ್ಲಿ ತೊಡಗಿರುವ ಮಹಿಳೆಯರೆಲ್ಲ ಬುಡಕಟ್ಟಿನವರು. ಆದರೆ ಯಾರು ಟಿವಿಯಲ್ಲಿ ಮಾತನಾಡುತ್ತಿದ್ದಾರೆಯೊ ಅವರು ಬುಡಕಟ್ಟಿನವರಲ್ಲ. ಇದರಲ್ಲೇನೋ ಯಡವಟ್ಟಿದೆ ಎಂಬುದು ಟಿಎಂಸಿ ನಾಯಕ ನಾರಾಯಣ ಗೋಸ್ವಾಮಿ ಮಾತು. ವಿಷಯವನ್ನು ಹೇಗೆ ಹೇಳಬೇಕೆಂಬ ಸೂಕ್ಷ್ಮತೆಯೂ ಟಿಎಂಸಿಗೆ ಇಲ್ಲವೆ?. ಸಂದೇಶ್ಖಾಲಿಯನ್ನು ಒಳಗೊಂಡಿರುವ ಲೋಕಸಭಾ ಕ್ಷೇತ್ರದ ಸದಸ್ಯೆ ನುಸ್ರತ್ ಜಹಾನ್ ಏನು ಮಾಡುತ್ತಿದ್ಧಾರೆ?
ಹೇಗೆ ಬಿಕ್ಕಟ್ಟನ್ನು ನಿಭಾಯಿಸಬೇಕೆಂಬುದೇ ಟಿಎಂಸಿಗೆ ಗೊತ್ತಿಲ್ಲವಾಗಿದೆ. ಮತ್ತು ಈ ಸನ್ನಿವೇಶದ ಲಾಭವನ್ನು ಬಿಜೆಪಿ ಪಡೆಯಲು ಹವಣಿಸುತ್ತಿದೆ.
ದೌರ್ಜನ್ಯ, ಅತ್ಯಾಚಾರ ಆರೋಪಗಳೆಲ್ಲ ಸುಳ್ಳು ಸುದ್ದಿ ಎಂದು ಸ್ವತಃ ಮಮತಾ ಬ್ಯಾನರ್ಜಿ ಹೇಳುತ್ತಿದ್ದಾರೆ. ಹೊರಗಿನಿಂದ ಬಂದವರು ಇಂಥ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬುದು ಅವರ ಆರೋಪ.
ಇದರ ಮಧ್ಯೆಯೇ ಉತ್ತಮ್ ಸರ್ದಾರ್ ಮತ್ತು ಶಿಬು ಹಝ್ರಾ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪ ಹೊರಿಸಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಅವರ ಬಗ್ಗೆ ಮಾಹಿತಿಯೇ ಇಲ್ಲವೆಂದವರು ಒಂದೇ ಗಂಟೆಯಲ್ಲಿ ಬಂಧಿಸಲು ಹೇಗೆ ಸಾಧ್ಯವಾಯಿತು? ಆರ್ ಎಸ್ ಎಸ್ ಇಲ್ಲಿ ಅಲ್ಪಸಂಖ್ಯಾತರನ್ನು ಪ್ರಚೋದಿಸಲು ಯತ್ನಿಸುತ್ತಿದೆ ಎಂಬುದು ಮಮತಾ ಆರೋಪ.
ಮಹಿಳೆಯರ ಮತಗಳು ಮತ್ತು ಅಲ್ಪಸಂಖ್ಯಾತರ ಮತಗಳು ಮಮತಾ ಬ್ಯಾನರ್ಜಿಯವರಿಗೆ ಮುಖ್ಯ. ಸಂದೇಶ್ಖಾಲಿಯಲ್ಲಿ ಅವರ ವಿರುದ್ದ ಅಲೆಯೆದ್ದರೆ ಚುನಾವಣೆಯಲ್ಲಿ ಕಷ್ಟವಾದೀತು ಎನ್ನಲಾಗುತ್ತದೆ. ಆದರೆ ಟಿಎಂಸಿಗೆ ಷಹಜಹಾನ್ ಶೇಖ್ ಥರದವರೇ ಪಕ್ಷವನ್ನು ಗಟ್ಟಿಯಾಗಿರಿಸಲು ಬೇಕಾಗಿರುವುದು ಕೂಡ ಒಂದು ಸಮಸ್ಯೆಯೇ ಆಗಿದೆ.
ಭ್ರಷ್ಟಾಚಾರದಂಥ ವಿಚಾರಗಳು ಬಂಗಾಳದಲ್ಲಿ ದೊಡ್ಡ ವಿಚಾರವೇ ಅಲ್ಲ. ಮತ್ತದನ್ನು ಸರ್ಕಾರ ಸುಲಭವಾಗಿ ನಿಭಾಯಿಸಬಲ್ಲದು. ಆದರೆ ಮಹಿಳೆಯರು ಕಿರುಕುಳಕ್ಕೊಳಗಾಗಿದ್ದಾರೆ, ಶೋಷಣೆಗೆ ಒಳಗಾಗಿದ್ದಾರೆ ಎಂಬದಕ್ಕೆ ರಾಜ್ಯ ಪ್ರತಿಕ್ರಿಯಿಸುವ ರೀತಿ ಭಿನ್ನವಾಗಿರಲಿದೆ. ಸಿಂಗೂರ್ನಲ್ಲಿ ತಪಸ್ವಿ ಮಲಿಕ್ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆಗ ಸಿಪಿಎಂ ಬುಡವನ್ನೇ ಅಲ್ಲಾಡಿಸಿತ್ತು.
ಸಿಪಿಎಂ ಬಗ್ಗೆ ಸಾರ್ವಜನಿಕರಲ್ಲಿದ್ದ ಕಲ್ಪನೆಯೇ ಅದರಿಂದ ಇಡಿಯಾಗಿ ಬದಲಾಗಿಬಿಟ್ಟಿತ್ತು. ಆದರೆ ಮಮತಾ ಬ್ಯಾನರ್ಜಿ ಅದರಿಂದ ಪಾಠ ಕಲಿತಂತಿಲ್ಲ. ಸಿಂಗೂರ್ ಘಟನೆಯ ಲಾಭ ಪಡೆದು ಮಮತಾ ಅಂದಿನ ಸಿಪಿಎಂ ಸರಕಾರವನ್ನು ಸೋಲಿಸಿದ್ದರು. ಈಗ ಸಂದೇಶ್ ಖಾಲಿ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ ಮಮತಾ ರನ್ನು ಸೋಲಿಸುವುದೇ ? ಕಾದು ನೋಡೋಣ.