ಮಳೆಬಾಧಿತ ಪಂದ್ಯದಲ್ಲಿ ಮುಂಬೈ ಗೆಲುವಿಗೆ 158 ರನ್ ಗುರಿ ನೀಡಿದ ಕೆಕೆಆರ್
PC : X/IPL
ಮುಂಬೈ: ಮಳೆಬಾಧಿತ 60ನೇ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡದ
ಗೆಲುವಿಗೆ 158 ರನ್ ಗುರಿ ನೀಡಿದೆ.
ಶನಿವಾರ ಸುರಿದ ಮಳೆಯಿಂದಾಗಿ ಒಂದೂವರೆ ಗಂಟೆಗೂ ಹೆಚ್ಚು ವಿಳಂಬವಾಗಿ ಆರಂಭಗೊಂಡಿರುವ ಪಂದ್ಯವನ್ನು 16 ಓವರ್ಗಳಿಗೆ ಕಡಿತಗೊಳಿಸಲಾಯಿತು. ಪ್ರತಿಷ್ಠಿತ ಈಡನ್ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿದ ಮುಂಬೈ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಬ್ಯಾಟಿಂಗ್ಗೆ ಇಳಿದ ಕೆಕೆಆರ್ ತಂಡ 16 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 157 ರನ್ ಗಳಿಸಿತು.
ಕೆಕೆಆರ್ ಪರ ವೆಂಕಟೇಶ್ ಅಯ್ಯರ್ ಸರ್ವಾಧಿಕ ಸ್ಕೋರ್(42 ರನ್, 21 ಎಸೆತ, 6 ಬೌಂಡರಿ, 2 ಸಿಕ್ಸರ್) ಗಳಿಸಿದರು. ಆರಂಭಿಕ ಬ್ಯಾಟರ್ಗಳಾದ ಸುನೀಲ್ ನರೇನ್(0)ಹಾಗೂ ಫಿಲ್ ಸಾಲ್ಟ್(6 ರನ್)2ನೇ ಓವರ್ನಲ್ಲಿ ಪೆವಿಲಿಯನ್ಗೆ ವಾಪಸಾದರು.
ನಾಯಕ ಶ್ರೇಯಸ್ ಅಯ್ಯರ್ ಕೇವಲ 7 ರನ್ ಗಳಿಸಿ ಅನ್ಶುಲ್ ಕಾಂಬೊಜ್ಗೆ ಕ್ಲೀನ್ಬೌಲ್ಡಾದರು. ನಿತಿಶ್ ರಾಣಾ(33 ರನ್,23 ಎಸೆತ) ,ಆಂಡ್ರೆ ರಸೆಲ್(24 ರನ್, 14 ಎಸೆತ) ,ರಿಂಕು ಸಿಂಗ್(20 ರನ್, 12 ಎಸೆತ) ಹಾಗೂ ರಮಣ್ದೀಪ್ ಸಿಂಗ್(ಔಟಾಗದೆ 17, 8 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಪಿಯೂಷ್ ಚಾವ್ಲಾ (2-28)ಹಾಗೂ ಜಸ್ಟ್ರೀತ್ ಬುಮ್ರಾ (2-39) ತಲಾ ಎರಡು ವಿಕೆಟ್ಗಳನ್ನು ಪಡೆದರು. ಅನ್ಶುಲ್ ಕಾಂಬೊಜ್(1-24) ಹಾಗೂ ನುವಾನ್ ತುಷಾರ(1-31) ತತಲಾ ಒಂದು ವಿಕೆಟ್ಗಳನ್ನು ಕಬಳಿಸಿದರು.
ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡ ಟೂರ್ನಮೆಂಟ್ನಲ್ಲಿ 12 ಪಂದ್ಯಗಳಲ್ಲಿ 8ರಲ್ಲಿ ಸೋಲನುಭವಿಸಿ ಈಗಾಗಲೇ ಪ್ಲೇ ಆಫ್ ಸ್ಪರ್ಧೆಯಿಂದ ನಿರ್ಗಮಿಸಿದೆ. ಮುಂಬೈ ತಂಡ ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಮತ್ತೊಂದೆಡೆ ಕೋಲ್ಕತಾ ಮೂಲದ ಫ್ರಾಂಚೈಸಿ ಕೆಕೆಆರ್ 11 ಪಂದ್ಯಗಳಲ್ಲಿ 8ರಲ್ಲಿ ಜಯ ದಾಖಲಿಸಿ ಒಟ್ಟು 16 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 1.453 ನೆಟ್ರನ್ರೇಟ್ ಹೊಂದಿದೆ. ಪ್ಲೇ ಆಫ್ನಲ್ಲಿ ಸ್ಥಾನ ಗಿಟ್ಟಿಸಲು ಕೆಕೆಆರ್ಗೆ ಇನ್ನು ಕೇವಲ 2 ಅಂಕದ ಅಗತ್ಯವಿದೆ.
ಸಂಕ್ಷಿಪ್ತ ಸ್ಕೋರ್
ಕೋಲ್ಕತಾ ನೈಟ್ ರೈಡರ್ಸ್: 16 ಓವರ್ಗಳಲ್ಲಿ 157/7
(ವೆಂಕಟೇಶ್ ಅಯ್ಯರ್ 42, ನಿತಿಶ್ ರಾಣಾ 33, ಆಂಡ್ರೆ ರಸೆಲ್ 24, ರಿಂಕು ಸಿಂಗ್ 20, ರಮಣ್ದೀಪ್ ಸಿಂಗ್ ಔಟಾಗದೆ 17, ಪಿಯೂಷ್ ಚಾವ್ಲಾ 2-28, ಜಸ್ಪ್ರೀತ್ ಬುಮ್ರಾ 2-39)