ಡೆಲ್ಲಿಗೆ ಸೋಲುಣಿಸಿದ ಆರ್ ಸಿ ಬಿ 5 ನೇ ಸ್ಥಾನಕ್ಕೆ | ರಜತ್ ಪಾಟಿದಾರ್ ಅರ್ಧಶತಕ, ದಯಾಳ್ಗೆ 3 ವಿಕೆಟ್
PC : BCCI
ಬೆಂಗಳೂರು : ರಜತ್ ಪಾಟಿದಾರ್(52 ರನ್, 32 ಎಸೆತ) ಅರ್ಧಶತಕ, ಯಶ್ ದಯಾಳ್(3-20) ನೇತೃತ್ವದ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್ ಅಂತರದಿಂದ ಮಣಿಸಿದೆ.
ತಾನಾಡಿದ 13ನೇ ಪಂದ್ಯದಲ್ಲಿ 6ನೇ ಗೆಲುವು ದಾಖಲಿಸಿದ ಆರ್ ಸಿ ಬಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದು ಪ್ಲೇ ಆಫ್ ಸುತ್ತಿಗೇರುವ ಆಸೆಯನ್ನು ಜೀವಂತವಾಗಿಸಿಕೊಂಡಿದೆ. ಡೆಲ್ಲಿ 13ನೇ ಪಂದ್ಯದಲ್ಲಿ 7ನೇ ಸೋಲು ಕಂಡಿದೆ.
ರವಿವಾರ ನಡೆದ ಐಪಿಎಲ್ನ 62ನೇ ಪಂದ್ಯದಲ್ಲಿ ಗೆಲುವಿಗೆ 188 ರನ್ ಗುರಿ ಪಡೆದ ಡೆಲ್ಲಿ ತಂಡದ ಪರ ಹಂಗಾಮಿ ನಾಯಕ ಅಕ್ಷರ್ ಪಟೇಲ್(57 ರನ್, 39 ಎಸೆತ, 5 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟದ ಹೊರತಾಗಿಯೂ 19.1 ಓವರ್ಗಳಲ್ಲಿ 140 ರನ್ ಗಳಿಸಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿದೆ. ಶಾಯ್ ಹೋಪ್(29 ರನ್) ಹಾಗೂ ಜೇಕ್ ಫ್ರೆಸರ್(21 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಆರ್ ಸಿ ಬಿ ಪರ ದಯಾಳ್(3-20) ಹಾಗೂ ಫರ್ಗ್ಯುಸನ್(2-23) ಐದು ವಿಕೆಟ್ ಹಂಚಿಕೊಂಡರು. ಸ್ವಪ್ನಿಲ್ (1-9), ಗ್ರೀನ್ (1-19) ಹಾಗೂ ಸಿರಾಜ್ (1-33) ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ತಂಡ ರಜತ್ ಪಾಟಿದಾರ್(52 ರನ್, 32 ಎಸೆತ), ವಿಲ್ ಜಾಕ್ಸ್(41 ರನ್, 29 ಎಸೆತ) ಹಾಗೂ ಕ್ಯಾಮರೂನ್ ಗ್ರೀನ್(ಔಟಾಗದೆ 32, 24 ಎಸೆತ)ಸಂಘಟಿತ ಪ್ರದರ್ಶನದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 187 ರನ್ ಗಳಿಸಿತು.
ನಾಯಕ ಎಫ್ಡು ಪ್ಲೆಸಿಸ್(6 ರನ್)ತನ್ನ ಕಳಪೆ ಪ್ರದರ್ಶನ ಮುಂದುವರಿಸಿದರು. ವಿರಾಟ್ ಕೊಹ್ಲಿ(27 ರನ್, 13 ಎಸೆತ)ಹೆಚ್ಚು ಹೊತ್ತು ನಿಲ್ಲಲಿಲ್ಲ. 3ನೇ ವಿಕೆಟ್ಗೆ 53 ಎಸೆತಗಳಲ್ಲಿ 88 ರನ್ ಸೇರಿಸಿದ ರಜತ್ ಪಾಟಿದಾರ್ ಹಾಗೂ ವಿಲ್ ಜಾಕ್ಸ್ ತಂಡವನ್ನು ಆಧರಿಸಿದರು. ಆ ನಂತರ ಮಹಿಪಾಲ್ ಲಾಮ್ರೊರ್(13 ರನ್) ಹಾಗೂ ಗ್ರೀನ್ 5ನೇವಿಕೆಟ್ಗೆ 37 ರನ್ ಕಲೆ ಹಾಕಿದ್ದು ಬಿಟ್ಟರೆ ಉತ್ತಮ ಜೊತೆಯಾಟ ಮೂಡಿ ಬರಲಿಲ್ಲ.
ಒಂದು ಹಂತದಲ್ಲಿ 200ಕ್ಕೂ ಅಧಿಕ ರನ್ ಗಳಿಸುವ ವಿಶ್ವಾಸದಲ್ಲಿದ್ದ ಆರ್ ಸಿ ಬಿ ತಂಡವನ್ನು ತಲಾ 2 ವಿಕೆಟ್ಗಳನ್ನು ಪಡೆದಿರುವ ರಸಿಕ್ ಸಲಾಮ್(2-23) ಹಾಗೂ ಖಲೀಲ್ ಅಹ್ಮದ್(2-31) ನೇತೃತ್ವದಲ್ಲಿ ಡೆಲ್ಲಿ ಬೌಲರ್ಗಳು 187 ರನ್ಗೆ ನಿಯಂತ್ರಿಸಿದರು. ಕೊನೆಯ 5 ಓವರ್ಗಳಲ್ಲಿ ಕೇವಲ 49 ರನ್ ಹರಿದು ಬಂತು. ಮುಕೇಶ್ ಕುಮಾರ್(1-23), ಇಶಾಂತ್ ಶರ್ಮಾ(1-31) ಹಾಗೂ ಕುಲದೀಪ್ ಯಾದವ್(1-52) ತಲಾ ಒಂದು ವಿಕೆಟ್ ಪಡೆದರು.
ಆರ್ ಸಿ ಬಿ ಪರ ರಜತ್ ಪಾಟಿದಾರ್(52 ರನ್, 32 ಎಸೆತ, 3 ಬೌಂಡರಿ, 3 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್ಗಳಲ್ಲಿ 187/9
(ರಜತ್ ಪಾಟಿದಾರ್ 52, ವಿಲ್ ಜಾಕ್ಸ್ 41, ಕ್ಯಾಮರೂನ್ ಗ್ರೀನ್ ಔಟಾಗದೆ 32, ರಸಿಕ್ ಸಲಾಮ್ 2-23, ಖಲೀಲ್ ಅಹ್ಮದ್ 2-31)
ಡೆಲ್ಲಿ ಕ್ಯಾಪಿಟಲ್ಸ್: 19.1 ಓವರ್ಗಳಲ್ಲಿ 140/10
(ಅಕ್ಷರ್ ಪಟೇಲ್ 57, ಶಾಯ್ ಹೋಪ್ 29, ಜೇಕ್ ಫ್ರೆಸರ್ 21, ಯಶ್ ದಯಾಳ್ 3-20, ಫರ್ಗ್ಯುಸನ್ 2-23, ಸ್ವಪ್ನಿಲ್ 1-9, ಗ್ರೀನ್ 1-19, ಸಿರಾಜ್ 1-33)