ಒಲಿಂಪಿಕ್ಸ್ ಅರ್ಹತಾ ಪಂದ್ಯಾವಳಿಗೆ 12 ಸದಸ್ಯರ ಶಾಟ್ ಗನ್ ತಂಡ ಪ್ರಕಟ
ಅನುಭವಿ ಮೈರಾಜ್ ಅಹ್ಮದ್ ಖಾನ್ , ಶ್ರೇಯಸಿ ಸಿಂಗ್ | Photo: X
ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಗಳಿಸಲು ನಡೆಸಲಾಗುವ ಕೊನೆಯ ಶಾಟ್ ಗನ್ ಅರ್ಹತಾ ಪಂದ್ಯಾವಳಿಗೆ ಭಾರತವು ಮಂಗಳವಾರ 12 ಸದಸ್ಯರ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಕಾಮನ್ವೆಲ್ತ್ ಗೇಮ್ಸ್ ನ ಚಿನ್ನದ ಪದಕ ವಿಜೇತೆ ಶ್ರೇಯಸಿ ಸಿಂಗ್, ಅನುಭವಿ ಮೈರಾಜ್ ಅಹ್ಮದ್ ಖಾನ್ ಮತ್ತು ವಿಶ್ವಕಪ್ ವಿಜೇತ ಗನೆಮತ್ ಸೆಖೋಂ ಸ್ಥಾನ ಪಡೆದಿದ್ದಾರೆ.
ಅರ್ಹತಾ ಪಂದ್ಯಾವಳಿಯು ಎಪ್ರಿಲ್ 19ರಿಂದ 29ರವರೆಗೆ ದೋಹಾದಲ್ಲಿ ನಡೆಯಲಿದೆ.
ಒಲಿಂಪಿಕ್ಸ್ ಗೆ ಮುನ್ನ ನಡೆಯಲಿರುವ ಹಲವು ಮಹತ್ವದ ಅಂತರ್ರಾಷ್ಟ್ರೀಯ ಸ್ಪರ್ಧೆಗಳಿಗೆ ಭಾರತೀಯ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್ (NRAI) ತಂಡಗಳನ್ನು ಪ್ರಕಟಿಸಿದೆ. ಒಲಿಂಪಿಕ್ಸ್ ಈ ವರ್ಷದ ಜುಲೈ-ಆಗಸ್ಟ್ ನಲ್ಲಿ ನಡೆಯಲಿದೆ.
ದೋಹಾದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ನಾಲ್ಕು ಒಲಿಂಪಿಕ್ ಸ್ಥಾನಗಳು (ಪುರುಷರ ಮತ್ತು ಮಹಿಳೆಯರ ಟ್ರ್ಯಾಪ್ ಮತ್ತು ಸ್ಕೀಟ್ ಸ್ಪರ್ಧೆಗಳಲ್ಲಿ ತಲಾ ಒಂದು ಸ್ಥಾನ) ಲಭ್ಯವಿವೆ. ಈಗಾಗಲೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅರ್ಹತೆ ಗಳಿಸಿದವರನ್ನು ಈ ಕೂಟದಿಂದ ಹೊರಗಿಡಲಾಗಿದೆ.
ಘೋಷಿಸಲಾಗಿರುವ ಮೂರೂ ತಂಡಗಳಲ್ಲಿ ಪೃಥ್ವಿರಾಜ್ ತೊಂಡೈಮನ್ ಮತ್ತು ವಿವಾನ್ ಕಪೂರ್ (ಪುರುಷರ ಟ್ರ್ಯಾಪ್), ಶ್ರೇಯಸಿ ಮತ್ತು ಮನೀಶಾ ಕೀರ್ (ಮಹಿಳೆಯರ ಟ್ರ್ಯಾಪ್), ಮೈರಾಜ್ ಮತ್ತು ಶೀರಝ್ ಶೇಖ್ (ಪುರುಷರ ಸ್ಕೀಟ್) ಹಾಗೂ ಗನೆಮತ್ ಮತ್ತು ಮಹೇಶ್ವರಿ ಚೌಹಾಣ್ (ಮಹಿಳೆಯರ ಸ್ಕೀಟ್) ಸ್ಥಾನಗಳನ್ನು ಪಡೆದಿದ್ದಾರೆ.
ದೋಹಾದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ, ಪುರುಷರ ಟ್ರ್ಯಾಪ್ ನಲ್ಲಿ ರೊರಾವರ್ ಸಂಧು, ಮಹಿಳೆಯರ ಟ್ರ್ಯಾಪ್ ನಲ್ಲಿ ನೀರು, ಪುರುಷರ ಸ್ಕೀಟ್ನಲ್ಲಿ ಅಂಗದ್ ಬಾಜ್ವ ಮತ್ತು ಮಹಿಳೆಯರ ಸ್ಕೀಟ್ನಲ್ಲಿ ಅರೀಬಾ ಖಾನ್ ಸ್ಪರ್ಧಿಸಲಿದ್ದಾರೆ.
ಭಾರತವು ಈವರೆಗೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು 19 ಸ್ಥಾನಗಳನ್ನು ಪಡೆದುಕೊಂಡಿದೆ. ಈ ಪೈಕಿ ಗರಿಷ್ಠ ನಾಲ್ಕು ಸ್ಥಾನಗಳು ಶಾಟ್ ಗನ್ನಲ್ಲಿ ಸಿಕ್ಕಿದೆ.