ವಿನೇಶ್ ಫೋಗಟ್ ಗೆ 16 ಕೋಟಿ ರೂ. ಬಹುಮಾನ ನೀಡಲಾಗಿದೆ ಎಂಬ ಸುದ್ದಿ ಶುದ್ದ ಸುಳ್ಳು: ಸೋಮ್ವೀರ್
ವಿನೇಶ್ ಫೋಗಟ್ | PTI
ಹೊಸದಿಲ್ಲಿ, ಆ.19: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಫೈನಲ್ಗೆ ಅನರ್ಹಗೊಂಡ ನಂತರ ಭಾರತಕ್ಕೆ ವಾಪಸಾದ ಬಳಿಕ ಕುಸ್ತಿಪಟು ವಿನೇಶ್ ಫೋಗಟ್ ಗೆ ವಿವಿಧ ಸಂಸ್ಥೆಗಳಿಂದ 16 ಕೋಟಿ ರೂ.ಗೂ ಅಧಿಕ ನಗದು ಬಹುಮಾನ ನೀಡಲಾಗಿದೆ ಎಂದು ವರದಿಯಾಗಿತ್ತು. ಆದರೆ ವಿನೇಶ್ ಅವರ ಪತಿ ಸೋಮ್ವೀರ್ ರಾಠಿ ಇದನ್ನು ನಿರಾಕರಿಸಿದ್ದು, ಇದು ಸುಳ್ಳು ಸುದ್ದಿ ಎಂದಿದ್ದಾರೆ.
ವಿನೇಶ್ ಫೋಗಟ್ ಅವರು ಈ ಕೆಳಗಿನ ಸಂಸ್ಥೆಗಳು, ಉದ್ಯಮಿಗಳು, ಕಂಪೆನಿಗಳು ಹಾಗೂ ಪಕ್ಷಗಳಿಂದ ಯಾವುದೇ ಹಣ ಸ್ವೀಕರಿಸಿಲ್ಲ. ನೀವೆಲ್ಲರೂ ನಮ್ಮ ಹಿತೈಷಿಗಳು. ದಯವಿಟ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ಇದು ಕೇವಲ ನಮಗೆ ಮಾತ್ರವಲ್ಲ, ಸಾಮಾಜಿಕ ಮೌಲ್ಯಗಳನ್ನು ಹಾಳುಗೆಡೆಹುತ್ತದೆ. ಇದು ಅಗ್ಗದ ಜನಪ್ರಿಯತೆ ಗಳಿಸುವ ಸಾಧನವಾಗಿದೆ ಎಂದು ಎಕ್ಸ್ ನಲ್ಲಿ ಈ ಕುರಿತು ಹಂಚಿಕೊಂಡಿರುವ ಪೋಸ್ಟ್ ನಲ್ಲಿ ರಾಠಿ ಬರೆದಿದ್ದಾರೆ.
ಎಲ್ಲೆಡೆ ಪ್ರಸಾರವಾಗುತ್ತಿರುವ ತಪ್ಪು ಮಾಹಿತಿಗೆ ಸ್ಪಷ್ಟನೆ ನೀಡಲು ಮುಂದಾಗಿರುವ ಸೋಮ್ವೀರ್ ರಾಠಿ, ಈ ಆಧಾರರಹಿತ ಮಾಹಿತಿಗಳು ಸಾರ್ವಜನಿಕರನ್ನು ದಾರಿ ತಪ್ಪಿಸುವುದು ಮಾತ್ರವಲ್ಲ, ಪರಿಸ್ಥಿತಿಯ ಸಮಗ್ರತೆಯನ್ನು ಹಾಳು ಮಾಡುತ್ತದೆ ಎಂದು ಒತ್ತಿ ಹೇಳಿದ್ದಾರೆ.