ಅರ್ಷದೀಪ್, ಆವೇಶ್ ಖಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ; ಭಾರತಕ್ಕೆ 117 ರನ್ ಗುರಿ
Photo: X/BCCI
ಜೋಹಾನ್ಸ್ಬರ್ಗ್: ಇಲ್ಲಿನ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡವು ಭಾರತದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 116 ರನ್ ಗೆ ಆಲೌಟ್ ಆಗಿದೆ.
ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 27.3 ಓವರ್ ಗಳಲ್ಲಿ ಕೇವಲ 116 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಹರಿಣಗಳಿಗೆ ಭಾರತದ ವೇಗಿಗಳು ಆಘಾತ ನೀಡಿದರು. ರೀಜಾ ಹೆನ್ರಿಕ್ಸ್ ಹಾಗೂ ವ್ಯಾನ್ ಡೆರ್ ಡುಸ್ಸೆನ್ ಶೂನ್ಯಕ್ಕೆ ಅರ್ಷದೀಪ್ ಬೌಲಿಂಗ್ ನಲ್ಲಿ ಔಟ್ ಆಗಿ ಪೆವಿಲಿಯನ್ ಸೇರಿದರು. ಬಳಿಕ ಕೊಂಚ ರಕ್ಷಣಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿದ ಟೋನಿ ಡೆ 28 ರನ್ ಪೇರಿಸಿ ಅರ್ಷದೀಪ್ ಬೌಲಿಂಗ್ ನಲ್ಲಿ ಕೆಎಲ್ ರಾಹುಲ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಫೆಲುಕ್ವಾಯೋ ಗಳಿಸಿ 33 ರನ್ ಹೊರತು ಪಡಿಸಿ ಬಳಿಕ ಬಂದ ಯಾವೊಬ್ಬ ಬ್ಯಾಟರ್ ಕೂಡ ಭಾರತದ ಆಕ್ರಮಣಕಾರಿ ಬೌಲಿಂಗ್ ಎದುರು ಹೆಚ್ಚು ಹೊತ್ತು ನಿಲ್ಲಲಿಲ್ಲ. ನಾಯಕ ಐಡೆಮ್ ಮಾರ್ಕ್ರಮ್ 12, ಹೆನ್ರಿ ಕ್ಲಾಸನ್ 6, ಡೇವಿಡ್ ಮಿಲ್ಲರ್ 2, ವಿಯಾನ್ ಮುಲ್ಡರ್ 0, ನಂದ್ರೆ ಬರ್ಗರ್ 7, ಕೇಶವ್ ಮಹಾರಾಜ್ 4 ರನ್ ಹಾಗೂ ಶಂಶಿ 11 ರನ್ ಗಳಿಸಿದರು.
ಅರ್ಷದೀಪ್ ಸಿಂಗ್ ಚೊಚ್ಚಲ 5 ವಿಕೆಟ್ ಗೊಂಚಲು ಪಡೆದರು. ಆವೇಶ್ ಖಾನ್ 4 ವಿಕೆಟ್ ಪಡೆದರೆ ಕುಲದೀಪ್ ಯಾದವ್ 1 ವಿಕೆಟ್ ಪಡೆದರು.
ಮೂವರು ಬ್ಯಾಟರ್ ಗಳಾದ ರಸಿ ವ್ಯಾನ್ ಡೆರ್ ಡುಸ್ಸೆನ್, ವಿಯಾನ್ ಮುಲ್ಡರ್ ಹಾಗೂ ರೀಜಾ ಹೆನ್ರಿಕ್ಸ್ ಶೂನ್ಯಕ್ಕೆ ಔಟಾದರು.