ಮೊದಲ ಟಿ-20 ಪಂದ್ಯ: ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
PC: x.com/DharmendraArga9
ಗ್ವಾಲಿಯರ್: ಪ್ರವಾಸಿ ಬಾಂಗ್ಲಾದೇಶ ತಂಡದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾನುವಾರ ಭಾರತ ತಂಡ ಏಳು ವಿಕೆಟ್ ಗಳ ಸುಲಭ ಜಯ ಸಾಧಿಸಿದೆ.
ಮಾಧವರಾವ್ ಸಿಂಧ್ಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶವನ್ನು ಕೇವಲ 127 ರನ್ ಗಳಿಗೆ ಆಲೌಟ್ ಮಾಡಿತು. ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ಇನ್ನೂ 49 ಎಸೆತಗಳಿರುವಂತೆಯೇ ಗೆಲುವಿನ ಗುರಿ ತಲುಪಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಬಾಂಗ್ಲಾ ತಂಡ, ಎಡಗೈ ವೇಗಿ ಅರ್ಷದೀಪ್ ಸಿಂಗ್ (3/14) ಅವರ ಮಾರಕ ದಾಳಿಯಿಂದ 14 ರನ್ಗಳಾಗುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತು. ಆರಂಭಿಕ ಆಟಗಾರರಾದ ಲಿಟ್ಟನ್ ದಾಸ್ ಹಾಗೂ ಪರ್ವೇಜ್ ಹುಸೇನ್ ಎಮೊನ್ ಅಗ್ಗದ ಮೊತ್ತಕ್ಕೆ ವಾಪಸ್ಸಾದರು. ನಾಯಕ ನಜ್ಮುಲ್ ಹಸನ್ ಸಂತೋ 25 ಎಸೆತಗಳಲ್ಲಿ 27 ರನ್ ಗಳಿಸಿದರು ಮತ್ತು ಮೆಹಿದಿ ಹಸನ್ ಮಿರ್ಜಾ 32 ಎಸೆತಗಳಲ್ಲಿ 35 ರನ್ ಗಳ ಕೊಡುಗೆ ನೀಡಿದರು.
ಭಾರತದ ಪರವಾಗಿ ವರುಣ್ ಚರ್ಕವರ್ತಿ (3/31), ಮಯಾಂಕ್ ಯಾದವ್ (1/21) ಮತ್ತು ವಾಷಿಂಗ್ಟನ್ ಸುಂದರ್ (1/13) ನಿಯತವಾಗಿ ವಿಕೆಟ್ ಕೀಳುವ ಮೂಲಕ ಬಾಂಗ್ಲಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೂಡಾ ವಿಕೆಟ್ ಕಿತ್ತರು.
ಬ್ಯಾಟಿಂಗ್ನಲ್ಲೂ ಮಿಂಚಿದ ಪಾಂಡ್ಯ 16 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರೆ, ತಲಾ 29 ರನ್ಗಳನ್ನು ಗಳಿಸಿದ ಸಂಜು ಸ್ಯಾಮ್ಸನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಔಟ್ ಆದರು. 11.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದ ಭಾರತ ಸುಲಭ ಗೆಲುವು ಸಾಧಿಸಿತು.