ಮೊದಲ ಟಿ20: ಕಿವೀಸ್ ವಿರುದ್ಧ ಕೊನೆಯ ಎಸೆತದಲ್ಲಿ ಕಾಂಗರೂ ಪಡೆಗೆ ಜಯ
ಮೂರನೇ ಗರಿಷ್ಠ ರನ್ ಚೇಸ್ ಮಾಡಿದ ಆಸ್ಟ್ರೇಲಿಯ
Photo : PTI
ವೆಲ್ಲಿಂಗ್ಟನ್: ಆಸ್ಟ್ರೇಲಿಯ ಕ್ರಿಕೆಟ್ ತಂಡ ವೆಲ್ಲಿಂಗ್ಟನ್ ನ ಸ್ಕೈ ಸ್ಟೇಡಿಯಮ್ನಲ್ಲಿ ಬುಧವಾರ ನಡೆದ ಮೊದಲ ಟಿ20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ರೋಚಕವಾಗಿ ಮಣಿಸಿದೆ.
ಆಸ್ಟ್ರೇಲಿಯವು 20 ಓವರ್ಗಳಲ್ಲಿ 4 ವಿಕೆಟ್ ಗಳನ್ನು ಕಳೆದುಕೊಂಡು 216 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿದೆ. ಚುಟುಕು ಮಾದರಿ ಕ್ರಿಕೆಟ್ ನಲ್ಲಿ ಮೂರನೇ ಬಾರಿ ಗರಿಷ್ಠ ಮೊತ್ತವನ್ನು ಚೇಸ್ ಮಾಡುವಲ್ಲಿ ಯಶಸ್ವಿಯಾಗಿದೆ.
2018ರಲ್ಲಿ ಆಕ್ಲೆಂಡ್ ನಲ್ಲಿ ಕಿವೀಸ್ ವಿರುದ್ಧವೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯವು ಗರಿಷ್ಠ ಸ್ಕೋರನ್ನು ಚೇಸ್ ಮಾಡಿತ್ತು. ಆಗ ಡೇವಿಡ್ ವಾರ್ನರ್ ನೇತೃತ್ವದ ಆಸ್ಟ್ರೇಲಿಯ ತಂಡ 7 ಎಸೆತಗಳು ಬಾಕಿ ಇರುವಾಗ 244 ರನ್ ಗುರಿಯನ್ನು ಬೆನ್ನಟ್ಟಿತ್ತು. ಕಳೆದ ವರ್ಷ ಭಾರತದ ವಿರುದ್ಧ ಗುವಾಹಟಿಯಲ್ಲಿ ಕಾಂಗರೂ ಪಡೆ 223 ರನ್ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿತ್ತು. ಇದು ಆಸ್ಟ್ರೇಲಿಯದ 2ನೇ ಗರಿಷ್ಠ ರನ್ ಚೇಸ್ ಆಗಿತ್ತು.
ಬುಧವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಗೆಲ್ಲಲು ಅಂತಿಮ ಓವರ್ ನಲ್ಲಿ 16 ರನ್ ಅಗತ್ಯವಿತ್ತು. ಟಿಮ್ ಡೇವಿಡ್(ಔಟಾಗದೆ 31, 10 ಎಸೆತ, 2 ಬೌಂಡರಿ, 3 ಸಿಕ್ಸರ್)ಹಿರಿಯ ವೇಗಿ ಟಿಮ್ ಸೌಥಿ ಎಸೆದ 20ನೇ ಓವರ್ನ ಕೊನೆಯ 3 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 1 ಬೌಂಡರಿ ಸಹಿತ ಒಟ್ಟು 12 ರನ್ ಗಳಿಸಿ ಆಸ್ಟ್ರೇಲಿಯಕ್ಕೆ ರೋಚಕ ಜಯ ತಂದುಕೊಟ್ಟರು.
ಡೇವಿಡ್ಗೆ ನಾಯಕ ಮಿಚೆಲ್ ಮಾರ್ಷ್(ಔಟಾಗದೆ 72, 44 ಎಸೆತ, 2 ಬೌಂಡರಿ, 7 ಸಿಕ್ಸರ್)ಸಾಥ್ ನೀಡಿದರು. 17ನೇ ಓವರ್ನಲ್ಲಿ ವಿಕೆಟ್ಕೀಪರ್-ಬ್ಯಾಟರ್ ಜೋಶ್ ಇಂಗ್ಲಿಸ್(20 ರನ್, 20 ಎಸೆತ) ವಿಕೆಟ್ ಒಪ್ಪಿಸಿದಾಗ ಈ ಇಬ್ಬರು ಕೇವಲ 19 ಎಸೆತಗಳಲ್ಲಿ 44 ರನ್ ಜೊತೆಯಾಟ ನಡೆಸಿದರು.
ಟಿ20 ಕ್ರಿಕೆಟ್ ನಲ್ಲಿ ಇದೇ ಮೊದಲ ಬಾರಿ ಇನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್(24 ರನ್, 15 ಎಸೆತ) ಹಾಗೂ ಡೇವಿಡ್ ವಾರ್ನರ್ (32 ರನ್, 20 ಎಸೆತ)ಆಸ್ಟ್ರೇಲಿಯಕ್ಕೆ ಬಿರುಸಿನ ಆರಂಭ ಒದಗಿಸಿದರು. 7ನೇ ಓವರ್ ಅಂತ್ಯಕ್ಕೆ ಹೆಡ್ ಹಾಗೂ ವಾರ್ನರ್ ಪೆವಿಲಿಯನ್ಗೆ ವಾಪಸಾಗಿದ್ದರೂ ಆಸ್ಟ್ರೇಲಿಯ ಅದಾಗಲೇ 69 ರನ್ ಗಳಿಸಿತ್ತು.
ಗ್ಲೆನ್ ಮ್ಯಾಕ್ಸ್ವೆಲ್ ವೇಗದ ಬೌಲರ್ ಲಾಕಿ ಫರ್ಗ್ಯುಸನ್ಗೆ ವಿಕೆಟ್ ಒಪ್ಪಿಸುವ ಮೊದಲು 11 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 25 ರನ್ ಗಳಿಸಿದರು. 104ನೇ ಟಿ20 ಪಂದ್ಯವನ್ನು ಆಡಿದ ಮ್ಯಾಕ್ಸ್ವೆಲ್ ಆಸೀಸ್ ಪರ ಗರಿಷ್ಠ ಪಂದ್ಯವನ್ನಾಡಿದ್ದ ಮಾಜಿ ನಾಯಕ ಆ್ಯರೊನ್ ಫಿಂಚ್ ದಾಖಲೆ ಮುರಿದರು.
ನ್ಯೂಝಿಲ್ಯಾಂಡ್ ಪರ ವೇಗದ ಬೌಲರ್ ಟಿಮ್ ಸೌಥಿ ಗರಿಷ್ಠ ಟಿ20 ಪಂದ್ಯಗಳನ್ನು(123) ಆಡಿ ಆರಂಭಿಕ ಬ್ಯಾಟರ್ ಗಪ್ಟಿಲ್ ದಾಖಲೆಯನ್ನು ಪುಡಿಗಟ್ಟಿದರು.
ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ್ದ ಕಿವೀಸ್ ಪರ ಆರಂಭಿಕ ಜೋಡಿ ಫಿನ್ ಅಲೆನ್(32 ರನ್, 17 ಎಸೆತ) ಹಾಗೂ ಡೆವೊನ್ ಕಾನ್ವೇ(63 ರನ್, 46 ಎಸೆತ) ಮೊದಲ ವಿಕೆಟ್ ನಲ್ಲಿ 5.2 ಓವರ್ಗಳಲ್ಲಿ 61 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ರಚಿನ್ ರವೀಂದ್ರ 29 ಎಸೆತಗಳಲ್ಲಿ ಟಿ20ಯಲ್ಲಿ ಮೊದಲ ಬಾರಿ ಅರ್ಧಶತಕ ಗಳಿಸಿದರು.
68 ರನ್(35 ಎಸೆತ, 2 ಬೌಂಡರಿ, 6 ಸಿಕ್ಸರ್)ಗಳಿಸಿದ ರವೀಂದ್ರ ವೇಗಿ ಕಮಿನ್ಸ್ ಬೌಲಿಂಗ್ ನಲ್ಲಿ ಸ್ಟಾರ್ಕ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಗ್ಲೆನ್ ಫಿಲಿಪ್ಸ್ (ಔಟಾಗದೆ 19, 10 ಎಸೆತ) ಹಾಗೂ ಮಾರ್ಕ್ ಚಾಪ್ಮನ್(ಔಟಾಗದೆ 18, 13 ಎಸೆತ) ಕೊನೆಯ 2 ಓವರ್ಗಳಲ್ಲಿ 31 ರನ್ ಕಲೆ ಹಾಕಿ ನ್ಯೂಝಿಲ್ಯಾಂಡ್ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 215 ರನ್ ಗಳಿಸುವಲ್ಲಿ ನೆರವಾದರು.
ಆಸೀಸ್ ಪರ ಮಿಚೆಲ್ ಮಾರ್ಷ್(1-21), ಮಿಚೆಲ್ ಸ್ಟಾರ್ಕ್(1-39) ಹಾಗೂ ಪ್ಯಾಟ್ ಕಮಿನ್ಸ್(1-43) ತಲಾ ಒಂದು ವಿಕೆಟ್ ಗಳನ್ನು ಪಡೆದರು.