ಭಾರತಕ್ಕೆ ಇನಿಂಗ್ಸ್, 32 ರನ್ ಅಂತರದ ಸೋಲು
ದಕ್ಷಿಣ ಆಫ್ರಿಕದ ವೇಗಿಗಳ ದಾಳಿಗೆ ತರಗೆಲೆಗಳಂತೆ ಉದುರಿದ ಭಾರತೀಯ ಬ್ಯಾಟರ್ ಗಳು
Photo: twitter.com/hamxashahbax21
ಸೆಂಚೂರಿಯನ್ : ಪ್ರವಾಸಿ ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕವು ಮೂರೇ ದಿನಗಳಲ್ಲಿ ಗುರುವಾರ ಇನಿಂಗ್ಸ್ ಮತ್ತು 32 ರನ್ಗಳ ಬೃಹತ್ ಅಂತರದಿಂದ ಗೆದ್ದಿದೆ. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕ 1-0ಯಿಂದ ಮುಂದಿದೆ.
ದಕ್ಷಿಣ ಆಫ್ರಿಕದ ವೇಗಿಗಳ ಮಾರಕ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ಭಾರತದ ಬ್ಯಾಟಿಂಗ್ ಪಡೆ ಸಂಪೂರ್ಣ ವಿಫಲವಾಯಿತು. ವೇಗಿಗಳಾದ ಕಗಿಸೊ ರಬಡ, ನಾಂಡ್ರಿ ಬರ್ಗರ್ ಮತ್ತು ಮಾರ್ಕೊ ಜಾನ್ಸನ್ ಭಾರತೀಯ ಬ್ಯಾಟರ್ ಗಳನ್ನು ಮಗ್ಗುಲ ಮುಳ್ಳಿನಂತೆ ಕಾಡಿದರು.
ಅದೇ ವೇಳೆ, ದಕ್ಷಿಣ ಆಫ್ರಿಕದ ಮೊದಲ ಇನ್ನಿಂಗ್ಸ್ ನಲ್ಲಿ ಡೀನ್ ಎಲ್ಗರ್ ಬಾರಿಸಿದ ಅಮೋಘ 185 ರನ್ಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಭಾರತದ ಮೊದಲ ಇನಿಂಗ್ಸ್ ಮೊತ್ತವಾದ 245 ರನ್ಗಳಿಗೆ ಪ್ರತಿಯಾಗಿ, ದಕ್ಷಿಣ ಆಫ್ರಿಕವು ತನ್ನ ಮೊದಲ ಇನಿಂಗ್ಸನ್ನು 408 ರನ್ಗಳವರೆಗೆ ಬೆಳೆಸಲು ಶಕ್ತವಾಯಿತು. ಆ ಮೂಲಕ 163 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು.
ಆದರೆ, ಭಾರತದ ದ್ವಿತೀಯ ಇನಿಂಗ್ಸ್ ಕೇವಲ 131 ರನ್ಗಳಿಗೆ ಮುಕ್ತಾಯಗೊಂಡಿತು. ಆ ಮೂಲಕ ಇನಿಂಗ್ಸ್ ಮತ್ತು 32 ರನ್ಗಳ ಸೋಲಿಗೆ ಶರಣಾಯಿತು.
ಭಾರತದ ದ್ವಿತೀಯ ಇನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಮಾತ್ರ ಎದುರಾಳಿ ಬೌಲರ್ ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದರು. ಅವರು 82 ಎಸೆತಗಳಲ್ಲಿ 76 ರನ್ಗಳನ್ನು ಗಳಿಸಿದರು. ಶುಬ್ಮನ್ ಗಿಲ್ 26 ರನ್ಗಳ ದೇಣಿಗೆ ನೀಡಿದರು.
ಉಳಿದ ಯಾವುದೇ ಆಟಗಾರರಿಗೆ ಎರಡಂಕಿಯ ಮೊತ್ತ ತಲುಪಲು ಸಾಧ್ಯವಾಗಲಿಲ್ಲ. ನಾಯಕ ರೋಹಿತ್ ಶರ್ಮ ಸೇರಿದಂತೆ ಮೂವರು ಬ್ಯಾಟರ್ ಗಳು ಶೂನ್ಯಕ್ಕೆ ಮರಳಿದರು.
ಇದಕ್ಕೂ ಮೊದಲು, ದಕ್ಷಿಣ ಆಫ್ರಿಕ ತನ್ನ ಮೊದಲ ಇನಿಂಗ್ಸನ್ನು 5 ವಿಕೆಟ್ಗಳ ನಷ್ಟಕ್ಕೆ 256 ರನ್ ಇದ್ದಲ್ಲಿಂದ ಮುಂದುವರಿಸಿತು.
ಮುನ್ನಾ ದಿನ 140 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಡೀನ್ ಎಲ್ಗರ್ ಗುರುವಾರ ತನ್ನ ಇನಿಂಗ್ಸನ್ನು ಲೀಲಾಜಾಲವಾಗಿ ಮುಂದುವರಿಸಿದರು. ಅವರು 287 ಎಸೆತಗಳಲ್ಲಿ 185 ರನ್ ಗಳಿಸಿದರು.
ಅವರಿಗೆ ಮಾರ್ಕೊ ಜಾನ್ಸನ್ ಸಮರ್ಥ ಜೊತೆ ನೀಡಿದರು. ಜಾನ್ಸನ್ 147 ಎಸೆತಗಳಲ್ಲಿ 84 ರನ್ಗಳನ್ನು ಗಳಿಸಿ ಅಜೇಯವಾಗಿ ಉಳಿದರು. ಅವರು ಆರನೇ ವಿಕೆಟ್ಗೆ 111 ರನ್ಗಳ ಜೊತೆಯಾಟವಾಡಿದರು. ಈ ಭಾಗೀದಾರಿಕೆಯು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.
ಪಂದ್ಯದ ಮೊದಲ ದಿನ ಗಾಯಗೊಂಡು ಪೆವಿಲಿಯನ್ಗೆ ಮರಳಿದ್ದ ನಾಯಕ ಟೆಂಬ ಬವುಮ ಬ್ಯಾಟಿಂಗ್ ಮಾಡಲಿಲ್ಲ.
ದಕ್ಷಿಣ ಆಫ್ರಿಕವು ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಾಗ 408 ರನ್ಗಳನ್ನು ಗಳಿಸಿತ್ತು. ಈ ಮೊತ್ತವು ಅದರ ಗೆಲುವಿಗೆ ಸಾಕಾಯಿತು.