2ನೇ ಅನಧಿಕೃತ ಟೆಸ್ಟ್ ಪಂದ್ಯ: ಭಾರತ ಎ ವಿರುದ್ಧ ಆಸ್ಟ್ರೇಲಿಯ ಎ ತಂಡಕ್ಕೆ ಆರು ವಿಕೆಟ್ ಜಯ
ಧ್ರುವ್ ಜುರೆಲ್ ಹೋರಾಟ ವ್ಯರ್ಥ
ಧ್ರುವ್ ಜುರೆಲ್ | PC :X/@dhruvjurel21
ಮೆಲ್ಬರ್ನ್, ನ.9: ವಿಕೆಟ್ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಆಸ್ಟ್ರೇಲಿಯ ಎ ತಂಡದ ವಿರುದ್ಧದ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಸತತ ಎರಡನೇ ಅರ್ಧಶತಕವನ್ನು ಗಳಿಸುವ ಮೂಲಕ ಉತ್ತಮ ಪ್ರದರ್ಶನ ಮುಂದುವರಿಸಿದರು. ಆದರೆ, ಜುರೆಲ್ ಪ್ರಯತ್ನವು ಭಾರತ ಎ ತಂಡ 6 ವಿಕೆಟ್ ಅಂತರದಿಂದ ಸೋಲುವುದನ್ನು ತಡೆಯಲು ಸಾಕಾಗಲಿಲ್ಲ.
ಈ ಸೋಲಿನೊಂದಿಗೆ ಭಾರತ ಎ ತಂಡವು 2 ಪಂದ್ಯಗಳ ಸರಣಿಯನ್ನು 0-2 ಅಂತರದಿಂದ ಕಳೆದುಕೊಂಡಿದೆ. ಈ ಮೊದಲು ಮೊದಲ ಅನಧಿಕೃತ ಟೆಸ್ಟ್ ಪಂದ್ಯವನ್ನು 7 ವಿಕೆಟ್ಗಳ ಅಂತರದಿಂದ ಸೋತಿತ್ತು.
5 ವಿಕೆಟ್ಗಳ ನಷ್ಟಕ್ಕೆ 73 ರನ್ನಿಂದ ಶನಿವಾರ 3ನೇ ದಿನದಾಟವನ್ನು ಮುಂದುವರಿಸಿದ ಭಾರತ ಎ ತಂಡಕ್ಕೆ ಜುರೆಲ್ ಮತ್ತೊಮ್ಮೆ ಆಸರೆಯಾದರು. ಮೊದಲ ಇನಿಂಗ್ಸ್ನಲ್ಲಿ 80 ರನ್ ಗಳಿಸಿದ್ದ ಜುರೆಲ್ 122 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 68 ರನ್ ಗಳಿಸಿ ತಂಡದ ಪರ ಟಾಪ್ ಸ್ಕೋರರ್ ಎನಿಸಿಕೊಂಡರು.
ನಿತಿಶ್ ಕುಮಾರ್ ರೆಡ್ಡಿ ಜೊತೆ ಕೈಜೋಡಿಸಿದ ಜುರೆಲ್ 7ನೇ ವಿಕೆಟ್ಗೆ ನಿರ್ಣಾಯಕ 94 ರನ್ ಜೊತೆಯಾಟ ನಡೆಸಿದರು. ರೆಡ್ಡಿ 38 ರನ್ ಅಮೂಲ್ಯ ಕೊಡುಗೆ ನೀಡಿದರು.
ಪ್ರಸಿದ್ಧ ಕೃಷ್ಣ(29 ರನ್)ಹಾಗೂ ತನುಷ್ ಕೋಟ್ಯಾನ್(44 ರನ್)ಬ್ಯಾಟ್ನಲ್ಲಿ ಉಪಯುಕ್ತ ಕೊಡುಗೆ ನೀಡಿದರು. ಭಾರತ ಎ ತಂಡವು ತನ್ನ 2ನೇ ಇನಿಂಗ್ಸ್ನಲ್ಲಿ ಒಟ್ಟು 229 ರನ್ ಗಳಿಸಲು ನೆರವಾದರು. ಇದರೊಂದಿಗೆ ಆಸ್ಟ್ರೇಲಿಯ ಎ ತಂಡ ಪಂದ್ಯ ಗೆಲ್ಲಲು 168 ರನ್ ಗುರಿ ಪಡೆಯಿತು.
ಆಫ್ ಸ್ಪಿನ್ನರ್ ಕೋರೆ ರೊಚಿಸಿಯೊಲಿ(4-74)ಭಾರತದ 2ನೇ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯದ ಯಶಸ್ವಿ ಬೌಲರ್ ಎನಿಸಿಕೊಂಡರು. ಕೋರೆಗೆ ಆಲ್ರೌಂಡರ್ ಬ್ಯೂ ವೆಬ್ಸ್ಟರ್(3-49)ಹಾಗೂ ಬಲಗೈ ವೇಗದ ಬೌಲರ್ ನಾಥನ್ ಮೆಕ್ಆ್ಯಂಡ್ರೂ(2-53)ಸಾಥ್ ನೀಡಿದರು.
ಆಸ್ಟ್ರೇಲಿಯ ಎ ತಂಡ ಎರಡು ವಿಕೆಟ್ಗಳನ್ನು ಬೇಗನೆ ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ವೇಗಿ ಪ್ರಸಿದ್ದ ಕೃಷ್ಣ ಅವರು ತನ್ನ ಬೌನ್ಸ್ ಹಾಗೂ ನಿಖರತೆ ಮೂಲಕ ಆಸೀಸ್ ಬ್ಯಾಟರ್ಗಳನ್ನು ಕಾಡಿದರು. ಮೊದಲ ಓವರ್ನಲ್ಲಿ ಮಾರ್ಕಸ್ ಹ್ಯಾರಿಸ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ವಿಕೆಟ್ಗಳನ್ನು ಪಡೆದರು.
ಕನ್ನಡಿಗ ಕೃಷ್ಣ ಈ ಪಂದ್ಯದಲ್ಲಿ ಒಟ್ಟು 6 ವಿಕೆಟ್ಗಳನ್ನು ಪಡೆದಿದ್ದು, ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಜಸ್ಪ್ರಿತ್ ಬುಮ್ರಾ ಹಾಗೂ ಮುಹಮ್ಮದ್ ಸಿರಾಜ್ ಜೊತೆಗೆ ಮೂರನೇ ವೇಗಿಯಾಗಿ ಭಾರತದ ಟೆಸ್ಟ್ ತಂಡವನ್ನು ಸೇರುವ ಸಾಧ್ಯತೆ ಇದೆ.
ಮುಕೇಶ್ ಕುಮಾರ್ ಆಸ್ಟ್ರೇಲಿಯ ಎ ತಂಡದ ನಾಯಕ ನಾಥನ್ ಮೆಕ್ಸ್ವೀನಿ (25 ರನ್)ವಿಕೆಟ್ ಕಬಳಿಸಿದರು. ಆಗ ಆಸ್ಟ್ರೇಲಿಯ 48 ರನ್ಗೆ 3ನೇ ವಿಕೆಟ್ ಕಳೆದುಕೊಂಡಿತು. ಭಾರತ ಎ ತಂಡಕ್ಕೆ ಮರಳಿ ಹೋರಾಡುವ ಅವಕಾಶ ಲಭಿಸಿತ್ತು.
ಆದರೆ ಸ್ಯಾಮ್ ಕೊಂಟಾಸ್ 128 ಎಸೆತಗಳಲ್ಲಿ ಔಟಾಗದೆ 73 ರನ್ ಗಳಿಸಿ ಆಸ್ಟ್ರೇಲಿಯ ಎ ತಂಡದ ಇನಿಂಗ್ಸ್ ಆಧರಿಸಿದರು. ಒಲಿವೆರ್ ಡೇವಿಸ್ 22 ಎಸೆತಗಳಲ್ಲಿ ಕ್ಷಿಪ್ರವಾಗಿ 21 ರನ್ ಗಳಿಸಿ ರಂಜಿಸಿದರು. ಕೊಂಟಾಸ್ ಹಾಗೂ ವಬ್ಸ್ಟರ್ 5ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 96 ರನ್ ಸೇರಿಸಿ ಆಸ್ಟ್ರೇಲಿಯ ಎ ತಂಡಕ್ಕೆ 47.5 ಓವರ್ಗಳಲ್ಲಿ ಗೆಲುವು ತಂದುಕೊಟ್ಟರು. ವೆಬ್ಸ್ಟರ್ 66 ಎಸೆತಗಳಲ್ಲಿ ಔಟಾಗದೆ 46 ರನ್ ಗಳಿಸಿದರು.