ಒಲಿಂಪಿಕ್ಸ್ ನಲ್ಲಿ 2 ಪದಕ: ಭಾರತೀಯ ಅತ್ಲೀಟ್ ಗಳ ಎಲೈಟ್ ಕ್ಲಬ್ ಗೆ ಮನು ಭಾಕರ್ ಸೇರ್ಪಡೆ
ಮನು ಭಾಕರ್ | PC : PTI
ಹೊಸದಿಲ್ಲಿ: ಭಾರತವು ಒಲಿಂಪಿಕ್ಸ್ ನಲ್ಲಿ ಶ್ರೀಮಂತ ಇತಿಹಾಸ ಹೊಂದಿದ್ದು, ಹಲವು ಕ್ರೀಡಾಪಟುಗಳು ಹಲವಾರು ಪದಕಗಳನ್ನು ಜಯಿಸಿ ಮಹತ್ವದ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್ ನಲ್ಲಿ ಎರಡನೇ ಪದಕವನ್ನು ಜಯಿಸಿರುವ ಮನು ಭಾಕರ್ ಭಾರತ ಹಾಗೂ ವಿಶ್ವದ ಅಗ್ರ ಶೂಟರ್ ಸ್ಥಾನಮಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಈ ಸಾಧನೆಯ ಮೂಲಕ ಒಲಿಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಜಯಿಸಿದ ಭಾರತೀಯ ಅತ್ಲೀಟ್ ಗಳ ಎಲೈಟ್ ಕ್ಲಬ್ ಗೆ ಸೇರಿದ್ದಾರೆ.
(ಸುಶೀಲ್ ಕುಮಾರ್ | PTI)
► ಸುಶೀಲ್ ಕುಮಾರ್: ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ವೈಯಕ್ತಿಕ ಸ್ಪರ್ಧೆಯಲ್ಲಿ ದೇಶದ ಪರ ಮೊದಲೆರಡು ಒಲಿಂಪಿಕ್ಸ್ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದರು. 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದ ಸುಶೀಲ್ ಭಾರತೀಯ ಕುಸ್ತಿಗೆ ತಿರುವು ನೀಡಿದ್ದರು. ಹೊಸ ಕುಸ್ತಿಪಟುಗಳಿಗೆ ಪ್ರೇರಣೆಯಾಗಿದ್ದರು. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿ ಈ ಸಾಧನೆ ಮಾಡಿದ ಭಾರತದ ಮೊದಲ ಕುಸ್ತಿಪಟು ಎನಿಸಿಕೊಂಡಿದ್ದರು. ಜೂನಿಯರ್ ಕುಸ್ತಿಪಟುವಿನ ಕೊಲೆಯಲ್ಲಿ ಭಾಗಿಯಾದ ಆರೋಪಕ್ಕೆ ಸಿಲುಕಿರುವ ಸುಶೀಲ್ ಸದ್ಯ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ.
(ಪಿ.ವಿ. ಸಿಂಧು | PTI)
► ಪಿ.ವಿ. ಸಿಂಧು: ಭಾರತದ ಶ್ರೇಷ್ಠ ಕ್ರೀಡಾಪಟುಗಳ ಪೈಕಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಪಿ.ವಿ. ಸಿಂಧು ಪ್ರಮುಖ ಪಂದ್ಯಾವಳಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಸಿಂಧು ಈ ಸಾಧನೆ ಮಾಡಿದ ಭಾರತದ ಮೊದಲ ಶಟ್ಲರ್ ಎನಿಸಿಕೊಂಡಿದ್ದರು.
2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದ ಸಿಂಧು ಅವರು ಸುಶೀಲ್ ಕುಮಾರ್ ನಂತರ ವೈಯಕ್ತಿಕ ವಿಭಾಗದಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ಜಯಿಸಿದ ಭಾರತದ 2ನೇ ಅತ್ಲೀಟ್ ಎನಿಸಿಕೊಂಡಿದ್ದರು.
ಸಿಂಧು ಈಗ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮೂರನೇ ಬಾರಿ ವೈಯಕ್ತಿಕ ಒಲಿಂಪಿಕ್ಸ್ ಪದಕ ಜಯಿಸಿದ ಭಾರತದ ಮೊದಲ ಅತ್ಲೀಟ್ ಎನಿಸಿಕೊಂಡು ಇತಿಹಾಸ ನಿರ್ಮಿಸುವ ಗುರಿ ಇಟ್ಟುಕೊಂಡಿದ್ದಾರೆ.
(ಮನು ಭಾಕರ್ | PTI)
►ಮನು ಭಾಕರ್: 21ರ ವಯಸ್ಸಿನಲ್ಲೇ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಈಗಾಗಲೇ ತನ್ನ ಸ್ಥಾನ ಗಟ್ಟಿಪಡಿಸಿಕೊಂಡಿರುವ ಮನು ಭಾಕರ್ ಪ್ಯಾರಿಸ್ ಗೇಮ್ಸ್ ನಲ್ಲಿ ಎರಡು ವೈಯಕ್ತಿಕ ಒಲಿಂಪಿಕ್ಸ್ ಪದಕಗಳನ್ನು ಜಯಿಸಿದ ಭಾರತದ ಮೂರನೇ ಕ್ರೀಡಾಪಟು ಎನಿಸಿಕೊಂಡು ಸುಶೀಲ್ ಕುಮಾರ್ ಹಾಗೂ ಪಿ.ವಿ. ಸಿಂಧು ಸಾಲಿಗೆ ಸೇರಿಕೊಂಡರು. ಒಂದೇ ಆವೃತ್ತಿಯ ಒಲಿಂಪಿಕ್ಸ್ ನಲ್ಲಿ ಈ ಸಾಧನೆ ಮಾಡಿದ ಮನು ಈ ಇಬ್ಬರಿಗಿಂತ ಭಿನ್ನರಾಗಿದ್ದಾರೆ.
ಟೋಕಿಯೊದಲ್ಲಿ ತನ್ನ ಚೊಚ್ಚಲ ಒಲಿಂಪಿಕ್ಸ್ ನಲ್ಲಿ ಸವಾಲನ್ನು ಎದುರಿಸಿದ್ದ ಭಾಕರ್ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.