2023 ಅತ್ಯಧಿಕ ತಾಪಮಾನದ ವರ್ಷ ; ವಿಶ್ವ ಹವಾಮಾನ ಸಂಸ್ಥೆ ವರದಿ
Photo: unfccc.int
ಜಿನೀವಾ: 2023ನೇ ಇಸವಿಯು, ಇದುವರೆಗೆ ದಾಖಲಾದ ಅತ್ಯಧಿಕ ತಾಪಮಾನದ ವರ್ಷವಾಗಿದೆ ಎಂದು ವಿಶ್ವಸಂಸ್ಥೆ ಗುರುವಾರ ಘೋಷಿಸಿದ್ದು, ಜಾಗತಿಕ ತಾಪಮಾನಕ್ಕೆ ಕಡಿವಾಣ ಹಾಕಲು ತ್ವರಿತ ಕ್ರಮವನ್ನು ಕೈಗೊಳ್ಳಬೇಕೆಂದು ಸದಸ್ಯ ರಾಷ್ಟ್ರಗಳನ್ನು ಆಗ್ರಹಿಸಿದೆ. 2023ನೇ ಇಸವಿಯು ಎಲ್ಲಾ ಹವಾಮಾನ ದಾಖಲೆಗಳನ್ನು ಮುರಿದಿದೆ. ಅತಿರೇಕದ ಹವಾಮಾನ ವೈಪರೀತ್ಯವು ವಿನಾಶ ಹಾಗೂ ಹತಾಶೆಯ ಸರಣಿಯನ್ನೇ ಸೃಷ್ಟಿಸಿದೆ’’ ಎಂದು ವಿಶ್ವ ಹವಾಮಾನ ಸಂಸ್ಥೆಯ ವರಿಷ್ಠ ಪ್ಯಾಟೆರಿ ಟ್ಯಾಲಾಸ್ ತಿಳಿಸಿದ್ದಾರೆ.
‘‘ಹಸಿರುಮನೆ ಅನಿಲಗಳು, ಜಾಗತಿಕ ತಾಪಮಾನಗಳು ದಾಖಲೆಯ ಏರಿಕೆಯನ್ನು ಕಂಡಿವೆ. ಸಮುದ್ರಮಟ್ಟದಲ್ಲಿಯೂ ದಾಖಲೆಯ ಏರಿಕೆಯಾಗಿದೆ. ಅಂಟಾರ್ಕ್ಟಿಕ್ ಸಮುದ್ರದಲ್ಲಿ ಹಿಮದ ಪ್ರಮಾಣವು ದಾಖಲೆ ಮಟ್ಟದಲ್ಲಿ ಇಳಿದಿದೆ’’ ಎಂದು 2023ನೇ ಸಾಲಿನ ತಾತ್ಕಾಲಿಕ ಜಾಗತಿಕ ಹವಾಮಾನ ಕುರಿತ ಸ್ಥಿತಿಗತಿ ವರದಿ ಹೇಳಿದೆ. ಗುರುವಾರ ದುಬೈಯಲ್ಲಿ ಆರಂಭಗೊಂಡ ‘ಸಿಓಪಿ 28’ ಹವಾಮಾನ ಸಮಾವೇಶದಲ್ಲಿ ವಿಶ್ವಹವಾಮಾನ ಸಂಸ್ಥೆಯು ಈ ವರದಿಯನ್ನು ಮಂಡಿಸಿದೆ. 2015ರಲ್ಲಿ ಪ್ಯಾರಿಸ್ನಲ್ಲಿ ನಡೆದ ಜಾಗತಿಕ ಹವಾಮಾನ ಒಡಂಬಡಿಕೆಯು, ಜಾಗತಿಕ ತಾಪಮಾನದ ಮಿತಿಯನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಸಿಯಸ್ನಷ್ಟು ಕೆಳಗೆ, ಅಂದರೆ ಸಾಧ್ಯವಿದ್ದಲ್ಲಿ 1.5 ಸೆಂಟಿಗ್ರೇಡ್ವರೆಗೆ ಇಳಿಸಬೇಕೆಂದು ಪ್ರತಿಪಾದಿಸಿತ್ತು. ಆದರೆ ಈ ವರ್ಷ ಜಾಗತಿಕ ತಾಪಮಾನವು 1.4 ಡಿಗ್ರಿ ಸೆಂಟಿಗ್ರೇಡ್ಗೆ ತಲುಪಿದ್ದು, ಇದು ಕೈಗಾರಿಕಾ ಕ್ರಾಂತಿಯ ಪೂರ್ವ ಅವಧಿಯಲ್ಲಿದ್ದ ಬೇಸ್ಲೈನ್ಗಿಂತ ಅಧಿಕವಾಗಿದೆ ಎಂದು ವರದಿ ತಿಳಿಸಿದೆ.
ಜಾಗತಿಕ ತಾಪಮಾನ ಕುರಿತಾದ ಆಧುನಿಕ ದಾಖಲೆಗಳು ಆರಂಭಗೊಂಡಾಗಿನಿಂದ ಕಳೆದ 9 ವರ್ಷಗಳು ಅತ್ಯಧಿಕ ತಾಪಮಾನದ ವರ್ಷಗಳಾಗಿದ್ದವು ಎಂಬುದನ್ನು ಕೂಡಾ ವರದಿಯು ತೋರಿಸಿಕೊಟ್ಟಿದೆ.
ನಮಗೆ 20ನೇ ಶತಮಾನದ ಹವಾಮಾನವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ಅಧಿಕಗೊಳ್ಳುತ್ತಿರುವ ಪ್ರತಿಕೂಲ ಹವಾಮಾನದಿಂದ ಉಂಟಾಗುವ ಅಪಾಯಗಳನ್ನು ಮುಂಬರುವ ಶತಮಾನಗಳಲ್ಲಿ ಮಿತಿಗೊಳಿಸಲು ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ವರದಿ ವಿಶ್ವಸಮುದಾಯಕ್ಕೆ ಕರೆ ನೀಡಿದೆ.