ಇಂಗ್ಲೆಂಡ್ ಆತಿಥ್ಯದಲ್ಲಿ 2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್

Photo : @ICC
ಮುಂಬೈ: 2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಇಂಗ್ಲೆಂಡ್ನಲ್ಲಿ ಜೂನ್ ನಲ್ಲಿ ನಡೆಯಲಿದೆ. ಇಂಗ್ಲೆಂಡ್ ಸತತ ನಾಲ್ಕನೇ ಬಾರಿ ಡಬ್ಲ್ಯುಟಿಸಿ ಫೈನಲ್ ಪಂದ್ಯದ ಆತಿಥ್ಯವಹಿಸಲಿದೆ.
ಇಂಗ್ಲೆಂಡ್ 2021ರಲ್ಲಿ ಸೌತಾಂಪ್ಟನ್ ನಲ್ಲಿ, 2023ರಲ್ಲಿ ದಿ ಓವಲ್ ನಲ್ಲಿ ಡಬ್ಲ್ಯುಟಿಸಿ ಫೈನಲ್ ಆತಿಥ್ಯವನ್ನು ವಹಿಸಿದೆ. 2025ರಲ್ಲಿ ಲಾರ್ಡ್ಸ್ ನಲ್ಲಿ ಫೈನಲ್ ಆತಿಥ್ಯವನ್ನು ವಹಿಸಿಕೊಳ್ಳಲಿದೆ.
ಭಾರತವು ಸತತ ಎರಡನೇ ಬಾರಿ ಡಬ್ಲ್ಯುಟಿಸಿ ಫೈನಲ್ ನಲ್ಲಿ ಸೋತಿತ್ತು. ಆಗ ಪ್ರತಿಕ್ರಿಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ, ಮುಂಬರುವ ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಇಂಗ್ಲೆಂಡ್ನಿಂದ ಹೊರಗೆ ಆಡಬೇಕು. ಜೂನ್ ನಲ್ಲಿ ಪಂದ್ಯವನ್ನು ಆಯೋಜಿಸಬಾರದು ಎಂದು ಆಗ್ರಹಿಸಿದ್ದರು.
ಐಪಿಎಲ್ ಫೈನಲ್ ನಂತರ ಡಬ್ಲ್ಯುಟಿಸಿ ಫೈನಲ್ ಪಂದ್ಯ ಆಯೋಜಿಸುವುದೇಕೆ? ಮಾರ್ಚ್ನಲ್ಲಿ ಯಾಕೆ ಆಯೋಜಿಸಬಾರದು? ಜೂನ್ ನಲ್ಲಿ ಮಾತ್ರ ಫೈನಲ್ ಪಂದ್ಯ ಆಡಬೇಕೇ? ಇಂಗ್ಲೆಂಡ್ ಮಾತ್ರವಲ್ಲ ವರ್ಷದ ಯಾವುದೇ ಸಮಯದಲ್ಲಿ ವಿಶ್ವದ ಯಾವುದೇ ಭಾಗದಲ್ಲಿ ಇದನ್ನು ಆಡಬಹುದು ಎಂದು ರೋಹಿತ್ ಹೇಳಿದ್ದಾರೆ.