2032ರ ಬ್ರಿಸ್ಬೇನ್ ಒಲಿಂಪಿಕ್ಸ್ | ಕ್ರಿಕೆಟ್ ಸೇರ್ಪಡೆಗೆ ಆಯೋಜನಾ ಸಮಿತಿಯನ್ನು ಭೇಟಿಯಾದ ಐಸಿಸಿ ಅಧ್ಯಕ್ಷ ಜಯ್ ಶಾ
ಜಯ್ ಶಾ | PC : PTI
ಬ್ರಿಸ್ಬೇನ್ : ಬೇಸಿಗೆ ಗೇಮ್ಸ್ನಲ್ಲಿ ಕ್ರಿಕೆಟ್ ಕ್ರೀಡೆಯನ್ನು ಸೇರ್ಪಡೆಗೊಳಿಸುವ ಕುರಿತಂತೆ ಚರ್ಚಿಸಲು ನೂತನ ಐಸಿಸಿ ಅಧ್ಯಕ್ಷ ಜಯ್ ಶಾ ಅವರು 2032ರ ಬ್ರಿಸ್ಬೇನ್ ಒಲಿಂಪಿಕ್ಸ್ನ ಆಯೋಜನಾ ಸಮಿತಿಯ ಉನ್ನತ ಅಧಿಕಾರಿಗಳನ್ನು ಗುರುವಾರ ಭೇಟಿಯಾಗಿದ್ದಾರೆ.
ಕ್ರಿಕೆಟ್ ಕ್ರೀಡೆಯು 128 ವರ್ಷಗಳ ನಂತರ 2028ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ ಗೇಮ್ಸ್ಗೆ ವಾಪಸಾಗಲಿದೆ. ಆದರೆ ಬ್ರಿಸ್ಬೇನ್ನಲ್ಲಿ 2032ರಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಸೇರ್ಪಡೆಗೊಳಿಸುವುದು ಇನ್ನೂ ಖಚಿತವಾಗಿಲ್ಲ. ಲಾಸ್ ಏಂಜಲೀಸ್ನಲ್ಲಿ 2028ರಲ್ಲಿ ನಡೆಯಲಿರುವ ಗೇಮ್ಸ್ನಲ್ಲಿ ಒಲಿಂಪಿಕ್ಸ್ ಕಾರ್ಯಕ್ರಮದಲ್ಲಿ ಕ್ರಿಕೆಟ್ ಸೇರ್ಪಡೆಗೆ ಶಾ ಪ್ರಮುಖ ಪಾತ್ರವಹಿಸಿದ್ದರು.
2028ರ ಲಾಸ್ ಏಂಜಲೀಸ್ ಗೇಮ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆಯನ್ನು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ದೃಢಪಡಿಸಿದ ಸಮಯದಲ್ಲಿ ಶಾ ಅವರು ಬಿಸಿಸಿಐ ಕಾರ್ಯದರ್ಶಿಯಾಗಿದ್ದರು.
ಒಲಿಂಪಿಕ್ಸ್ ಆಂದೋಲನದಲ್ಲಿ ಕ್ರಿಕೆಟ್ ಒಳಗೊಳ್ಳುವಿಕೆಯ ತುಂಬಾ ರೋಮಾಂಚನಕಾರಿ ಸಮಯದಲ್ಲಿ ಆಸ್ಟ್ರೇಲಿಯದ ಬ್ರಿಸ್ಬೇನ್ನಲ್ಲಿ 2032ರ ಒಲಿಂಪಿಕ್ಸ್ ಆಯೋಜನಾ ಸಮಿತಿಯ ಸದಸ್ಯರನ್ನು ಇಂದು ಭೇಟಿಯಾಗಿರುವೆ ಎಂದು ಎಕ್ಸ್ನಲ್ಲಿ ಶಾ ಪೋಸ್ಟ್ ಮಾಡಿದ್ದಾರೆ.
ಸಭೆಯಲ್ಲಿ ಬ್ರಿಸ್ಬೇನ್ 2032ರ ಸಂಘಟನಾ ಸಮಿತಿಯ ಮುಖ್ಯಸ್ಥ ಸಿಂಡಿ ಹೂಕ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ ನಿಕ್ ಹಾಕ್ಲೆ ಭಾಗವಹಿಸಿದ್ದರು.
ಬಿಸಿಸಿಐನ ಮಾಜಿ ಕಾರ್ಯದರ್ಶಿ ಜಯ್ ಶಾ ಭಾರತ ಹಾಗೂ ಆಸ್ಟ್ರೇಲಿಯದ ನಡುವೆ ಶನಿವಾರದಿಂದ ಗಾಬಾದಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸುವ ಸಾಧ್ಯತೆಯಿದೆ.
ಫೆಬ್ರವರಿ-ಮಾರ್ಚ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ಕುರಿತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಶಾ ಅವರ ತಕ್ಷಣದ ಆದ್ಯತೆಯಾಗಿದೆ. ಹೈಬ್ರಿಡ್ ಮಾದರಿಯನ್ನು ಎಲ್ಲರೂ ಒಪ್ಪಿಕೊಂಡಿದ್ದು, ಈ ಕುರಿತು ಯಾವುದೇ ಘೋಷಣೆಯಾಗದ ಹಿನ್ನೆಲೆಯಲ್ಲಿ ಈ ಪಂದ್ಯಾವಳಿಯ ಭವಿಷ್ಯದ ಕುರಿತು ಊಹಾಪೋಹಗಳು ಹರಡುತ್ತಿವೆ.