ಕ್ರಿಕೆಟಿಗ ರಿಷಭ್ ಪಂತ್ ಗೆ 27 ಕೋಟಿ ರೂ. ಐಪಿಎಲ್ ವೇತನದಲ್ಲಿ ತೆರಿಗೆಯ ಬಳಿಕ ಎಷ್ಟು ಸಿಗಲಿದೆ?
ರಿಷಭ್ ಪಂತ್ | PC : X
ಹೊಸದಿಲ್ಲಿ: ಜಿದ್ದಾದಲ್ಲಿ ನಡೆದ ಐಪಿಎಲ್ 2025 ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗಳಿಗೆ ಮಾರಾಟವಾಗುವ ಮೂಲಕ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ಹಿಂದಿನ ದಾಖಲೆಗಳನ್ನು ನುಚ್ಚುನೂರಾಗಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್(ಎಲ್ಎಸ್ಜಿ) ಅವರನ್ನು ಈ ಭಾರೀ ಮೊತ್ತಕ್ಕೆ ಖರೀದಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ 20.75 ಕೋಟಿ ರೂ.ಗಳಿಗೆ ʼರೈಟ್ ಟು ಮ್ಯಾಚ್ ಕಾರ್ಡ್ʼ ಬಳಸಿ ಪಂತ್ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ಎಲ್ಎಸ್ಜಿ ಬಿಡ್ ಮೊತ್ತವನ್ನು 27 ಕೋಟಿ ರೂ.ಹೆಚ್ಚಿಸಿದ ಬಳಿಕ ಡೆಲ್ಲಿ ಕ್ಯಾಪಿಟಲ್ ಅನಿವಾರ್ಯವಾಗಿ ಹಿಂದಕ್ಕೆ ಸರಿದಿತ್ತು.
2022ರಲ್ಲಿ ಮಾರಣಾಂತಿಕ ಕಾರು ಅಪಘಾತದ ಬಳಿಕ ಪಂತ್ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಹೊಸ ಭರವಸೆಯೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದು, ಮುಂಬರುವ ಐಪಿಎಲ್ ಸೀಸನ್ 2025ರಲ್ಲಿ ಎಲ್ಎಸ್ಜಿಯ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ. ಐಪಿಎಲ್ ಮಾ.14ರಿಂದ ಆರಂಭಗೊಳ್ಳಲಿದೆ.
ಪಂತ್ 27 ಕೋಟಿ ರೂ.ಗಳಿಗೆ ಮಾರಾಟಗೊಂಡು ಇತಿಹಾಸವನ್ನು ಸೃಷ್ಟಿಸಿದ್ದರೂ ತೆರಿಗೆಗಳ ಬಳಿಕ ಅವರಿಗೆ ಸಿಗುವ ಮೊತ್ತದ ಬಗ್ಗೆ ಕುತೂಹಲ ಗರಿಗೆದರಿದೆ. ಅವರ ಒಟ್ಟು ಗುತ್ತಿಗೆ ಮೌಲ್ಯದಲ್ಲಿ 8.1 ಕೋಟಿ ರೂ.ಗಳನ್ನು ತೆರಿಗೆ ರೂಪದಲ್ಲಿ ಭಾರತ ಸರಕಾರವು ಪಡೆದುಕೊಳ್ಳಲಿದೆ. ಹೀಗಾಗಿ ಪಂತ್ ಕೈಗೆ ಅಂತಿಮವಾಗಿ ಸೇರುವ ಮೊತ್ತ 18.9 ಕೋಟಿ ರೂ.ಗಳಾಗಿರುತ್ತವೆ.