Asian Games | ಮೊದಲ ದಿನ ಭಾರತಕ್ಕೆ 3 ಬೆಳ್ಳಿ, 2 ಕಂಚು
ಕೀರ್ತಿ ತಂದ ರೋವರ್ಗಳು, ಶೂಟರ್ಗಳು
Credits: Twitter
ಹಾಂಗ್ಝೌ: ಚೀನಾದ ಹಾಂಗ್ಝೂನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ನ ಮೊದಲ ದಿನವಾದ ರವಿವಾರ ಭಾರತ ಮೂರು ಬೆಳ್ಳಿ ಮತ್ತು ಎರಡುಕಂಚಿನ ಪದಕಗಳನ್ನು ಗೆದ್ದಿದೆ. ರೋವರ್ ಗಳು ಎರಡು ಬೆಳ್ಳಿ ಮತ್ತು ಒಂದು ಕಂಚು ಗೆದ್ದರೆ, ಶೂಟರ್ಗಳು ಒಂದು ಬೆಳ್ಳಿ ಮತ್ತು ಒಂದು ಕಂಚು ಗೆದ್ದಿದ್ದಾರೆ.
ಫುಯಾಂಗ್ ವಾಟರ್ ಸ್ಪೋರ್ಟ್ಸ್ ಸೆಂಟರ್ನಲ್ಲಿ ಭಾರತದ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ ಸಿಂಗ್ ದೇಶದ ಪದಕಗಳ ಖಾತೆಯನ್ನು ತೆರೆದರು. ಅವರು ಪುರುಷರ ಲೈಟ್ವೇಟ್ಡಬಲ್ಸ್ ಸ್ಕಲ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು.
ಭಾರತೀಯ ಜೋಡಿಯು 6 ನಿಮಿಷ 28.18 ಸೆಕೆಂಡ್ನಲ್ಲಿ ಗುರಿ ತಲುಪಿತು. ಚೀನಾದ ಜುಂಜೀ ಫಾನ್ ಮತ್ತು ಮಾನ್ ಸುನ್ 6 ನಿಮಿಷ 23.16 ಸೆಕೆಂಡ್ನಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಉಝ್ಬೆಕಿಸ್ತಾನದ ಶಖ್ಝೋಡ್ ನುರ್ಮಟೊವ್ ಮತ್ತು ಸೊಬಿರ್ಜೊನ್ ಸಫರೊಲಿಯೆವ್ 6 ನಿಮಿಷ 33.42 ಸೆಕೆಂಡ್ನಲ್ಲಿ ಗುರಿ ತಲುಪಿ ಕಂಚು ಪಡೆದರು.
ಪುರುಷರ ರೋವಿಂಣ್ ಕಾಕ್ಸ್ಲೆಸ್ ಜೋಡಿ ಸ್ಪರ್ಧೆಯಲ್ಲಿ ಭಾರತದ ಬಾಬು ಲಾಲ್ ಯಾದವ್ ಮತ್ತು ಲೇಖ್ರಾಮ್ 6 ನಿಮಿಷ 50.41 ಸೆಕೆಂಡ್ನಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು. ಹಾಂಕಾಂಗ್ಚೀನಾವು 6 ನಿಮಿಷ 44.20 ಸೆಕೆಂಡ್ನಲ್ಲಿ ಸ್ಪರ್ಧೆಯನ್ನು ಮುಗಿಸಿ ಚಿನ್ನಗೆದ್ದರೆ, ಉಝ್ಬೆಕಿಸ್ತಾನವು 6 ನಿಮಿಷ 48.11 ಸೆಕೆಂಡ್ನಲ್ಲಿ ಗುರಿ ತಲುಪಿ ಬೆಳ್ಳಿ ಪಡೆಯಿತು.
ಪುರುಷರ ಕಾಕ್ಸ್ಡ್ ಏಟ್ ಸ್ಪರ್ಧೆಯಲ್ಲಿ, ಭಾರತವು ಅಸಾಧಾರಣ ಸಾಮರ್ಥ್ಯವನ್ನು ಪ್ರದರ್ಶಿಸಿ ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ನೀರಜ್, ನರೇಶ್ಕಲ್ವಾನಿಯ, ನೀತಿಶ್ಕುಮಾರ್, ಚರಂಜೀತ್ ಸಿಂಗ್, ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನೀತ್ಕುಮಾರ್ ಮತ್ತು ಆಶಿಶ್ರನ್ನೊಳಗೊಂಡ ತಂಡವು 5 ನಿಮಿಷ 43.01 ಸೆಕೆಂಡ್ನಲ್ಲಿ ಗುರಿ ತಲುಪಿತು.
ಚೀನಾವು ಭಾರತಕ್ಕಿಂತ ಕೇವಲ 2,8 ಸೆಕೆಂಡ್ ಮೊದಲು ಗುರಿ ಲುಪಿ ಚಿನ್ನ ಗೆದ್ದಿತು. ಭಾರತವು ಮೊದಲಾರ್ಧದಲ್ಲಿ ಮೂರನೇ ಸ್ಥಾನದಲ್ಲಿದ್ದರೂ, ದ್ವಿತೀಯಾರ್ಧದಲ್ಲಿ ಅಮೋಘ ನಿರ್ವಹಣೆ ಪ್ರದರ್ಶಿಸಿ ಎರಡನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸುವಲ್ಲಿ ಯಶಸ್ವಿಯಾಯಿತು. ಇಂಡೋನೇಶ್ಯತಂಡವು 5 ನಿಮಿಷ 45.51 ಸೆಕೆಂಡ್ನಲ್ಲಿ ಸ್ಪರ್ಧೆ ಮುಗಿಸಿ ಕಂಚಿನ ಪದಕ ಪಡೆಯಿತು.
ಭಾರತವು ಹಾಂಗ್ಝೂ ಏಶ್ಯನ್ ಗೇಮ್ಸ್ಗೆ 33 ರೋವರ್ಗಳನ್ನು ಕಳುಹಿಸಿದೆ.
ಶೂಟಿಂಗ್ನಲ್ಲಿ 1 ಬೆಳ್ಳಿ, 1 ಕಂಚು
ಹಾಂಗ್ಝೂನಲ್ಲಿ ನಡೆಯುತ್ತಿರುವಏಶ್ಯನ್ಗೇಮ್ಸ್ನಲ್ಲಿ ಭಾರತೀಯ ಮಹಿಳೆಯರು ಶೂಟಿಂಗ್ನಲ್ಲಿ ಒಂದು ಬೆಳ್ಳಿ ಮತ್ತು ಒಂದುಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಮಹಿಳೆಯರ 10 ಮೀಟರ್ ಏರ್ರೈಫಲ್ ತಂಡ ಸ್ಪರ್ಧೆಯಲ್ಲಿ ಮೆಹುಲಿ ಘೋಷ್, ರಮಿತಾ ಜಿಂದಾಲ್ ಮತ್ತು ಆಶಿ ಚೋಕ್ಸಿ ಅವರನ್ನೊಳಗೊಂಡ ತಂಡವು ರವಿವಾರ ಬೆಳ್ಳಿ ಪದಕವನ್ನುಗೆದ್ದಿದೆ.
ಭಾರತೀಯತಂಡದ ಮೂವರು ಸದಸ್ಯರು ಒಟ್ಟು 1,886 ಅಂಕಗಳನ್ನು ಗಳಿಸಿ ಬೆಳ್ಳಿ ಗೆದ್ದರು. 1896.6 ಅಂಕಗಳನ್ನು ಗಳಿಸಿದ ಚೀನಾ ಚಿನ್ನದ ಪದಕ ಗೆದ್ದಿದೆ. ಇದರೊಂದಿಗೆ ಅದು ಹೊಸ ಏಶ್ಯನ್ ದಾಖಲೆಯನ್ನೂ ನಿರ್ಮಿಸಿದೆ.
ಅರ್ಹತಾ ಸುತ್ತಿನಲ್ಲಿ ರಮಿತಾ 631.9 ಅಂಕಗಳೊಂದಿಗೆ 2ನೇ ಸ್ಥಾನ ಗಳಿಸಿದರೆ, ಮೆಹುಲಿ 630.8 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಆದರೆ ಅಶಿ ಕೊಂಚ ಹಿನ್ನಡೆ ಅನುಭವಿಸಿದರು. ಅವರು 623.3 ಅಂಕಗಳೊಂದಿಗೆ 28ನೇ ಸ್ಥಾನ ಗಳಿಸಿದರು.
ಆದರೆ, ಈ ಮೂವರ ಒಟ್ಟು ಅಂಕಗಳು ಬೆಳ್ಳಿ ಪದಕವನ್ನು ಗೆದ್ದವು. ಅರ್ಹತಾ ಸುತ್ತಿನಲ್ಲಿ ಶೂಟರ್ಗಳು ಗಳಿಸಿದ ಒಟ್ಟು ಅಂಕಗಳ ಆಧಾರದಲ್ಲಿ ಶೂಟಿಂಗ್ನಲ್ಲಿ ತಂಡ ಸ್ಪರ್ಧೆಯ ಪದಕಗಳನ್ನು ನಿರ್ಣಯಿಸಲಾಗುತ್ತದೆ.
ಮಂಗೋಲಿಯ ತಂಡವು 1880 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿತು.
ಬಳಿಕ ನಡೆದ 10 ಮೀಟರ್ ಏರ್ ರೈಫಲ್ ವೈಯಕ್ತಿಕ ಸ್ಪರ್ಧೆಯಲ್ಲಿ, ಜೂನಿಯರ್ ವಿಶ್ವ ಚಾಂಪಿಯನ್ ರಮಿತಾ ಕಂಚಿನ ಪದಕ ಪಡೆದರು. ಅವರು ಫೈನಲ್ನಲ್ಲಿ 230.1 ಅಂಕಗಳನ್ನು ಗಳಿಸಿದರು.
ಈ ಸ್ಪರ್ಧೆಯ ಚಿನ್ನ ಮತ್ತು ಬೆಳ್ಳಿ ಎರಡೂ ಪದಕಗಳನ್ನು ಚೀನಾ ಗೆದ್ದಿತು. ಹುವಾಂಗ್ಯುಟಿಂಗ್ 252.7 ಅಂಕಗಳೊಂದಿಗೆ ಕೂಟ ದಾಖಲೆಯನ್ನು ಮುರಿದು ಚಿನ್ನಗೆದ್ದರೆ, ಹಾನ್ಜಿಯಾಯು 251.3 ಅಂಕಗಳೊಂದಿಗೆ ಬೆಳ್ಳಿಗೆ ತೃಪ್ತರಾದರು.
ಫೈನಲ್ಗೆ ತೇರ್ಗಡೆಯಾಗಿದ್ದ ಭಾರತದ ಇನ್ನೋರ್ವ ಶೂಟರ್ ಮೆಹುಲಿ 208.43 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು.