3000 ಮೀ. ಸ್ಟೀಪಲ್ಚೇಸ್ ಫೈನಲ್ : ಅವಿನಾಶ್ ಸಾಬ್ಳೆಗೆ 11ನೇ ಸ್ಥಾನ
ಅವಿನಾಶ್ ಸಾಬ್ಳೆ | PC : PTI
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬುಧವಾರ ನಡೆದ ಪುರುಷರ 3,000 ಮೀ. ಸ್ಟೀಪಲ್ಚೇಸ್ ಫೈನಲ್ ನಲ್ಲಿ ಭಾರತದ ಅವಿನಾಶ್ ಸಾಬ್ಳೆ 11ನೇ ಸ್ಥಾನ ಪಡೆದರು.
29ರ ಹರೆಯದ ಸಾಬ್ಳೆ ಅವರು 8 ನಿಮಿಷ, 14.18 ಸೆಕೆಂಡ್ ನಲ್ಲಿ ಗುರಿ ತಲುಪಿದರು.
ರೋಚಕ ಸ್ಪರ್ಧೆಯಲ್ಲಿ ಸ್ಪಲ್ಪ ಹೊತ್ತು ಮುನ್ನಡೆ ಪಡೆದಿದ್ದ ಸಾಬ್ಳೆ ಅವರು ಪ್ಯಾರಿಸ್ ಡೈಮಂಡ್ ಲೀಗ್ ನಲ್ಲಿ ಇತ್ತೀಚೆಗೆ ನೀಡಿರುವ ಪ್ರದರ್ಶನ ಉತ್ತಮಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಸಾಬ್ಳೆ 8:09.91 ಸೆಕೆಂಡ್ ನಲ್ಲಿ ಗುರಿ ತಲುಪಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.
ಸಾಬ್ಳೆ ಅವರು ಪ್ಯಾರಿಸ್ ಒಲಿಂಪಿಕ್ಸ್ ಗೆ ಉತ್ತಮ ತಯಾರಿ ನಡೆಸಲು ಹೊರ ದೇಶಗಳಲ್ಲಿ ತರಬೇತಿ ನಡೆಸಲು ತನ್ನ ಸಮಯ ವ್ಯಯಿಸಿದ್ದರು. ಸರಕಾರದ ಬೆಂಬಲದಿಂದಾಗಿ ಅವರ ತರಬೇತಿ ಸಾಧ್ಯವಾಗಿದೆ.
ಮೊರೊಕ್ಕೊದ ಸೌಫಿಯಾನ್ ಅಲ್ ಬಕ್ಕಾಲಿ(8:06.05 ಸೆ.)ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಅಮೆರಿಕದ ಕೆನ್ನತ್ ರೂಕ್ಸ್(8:06.41 ಸೆ.)ಬೆಳ್ಳಿ ಪದಕ ಗೆದ್ದರೆ, ಕೀನ್ಯದ ಅಬ್ರಹಾಂ ಕಿಬಿವೊಟ್(8:06.47)ಕಂಚಿನ ಪದಕ ಜಯಿಸಿದರು.
ವಿಶ್ವ ದಾಖಲೆ ವೀರ ಇಥಿಯೋಪಿಯದ ಲಾಮೆಚಾ ಗಿರ್ಮಾ ರೇಸ್ ಮುಗಿಸಲು ವಿಫಲರಾದರು.
ಇದೇ ವೇಳೆ ಟ್ರಿಪಲ್ ಜಂಪರ್ಗಳಾದ ಪ್ರವೀಣ್ ಚಿತ್ರವೇಲ್ ಹಾಗೂ ಅಬ್ದುಲ್ಲಾ ಅಬೂಬಕರ್ ಕ್ರಮವಾಗಿ 16.25 ಮೀ. ಹಾಗೂ 16.49 ಮೀ.ದೂರಕ್ಕೆ ಜಿಗಿದು ಫೈನಲ್ಗೆ ಪ್ರವೇಶ ಪಡೆಯಲು ವಿಫಲರಾದರು. 32 ಸ್ಪರ್ಧಾಳುಗಳ ಪೈಕಿ ಪ್ರವೀಣ್ 27ನೇ ಸ್ಥಾನ ಹಾಗೂ ಅಬೂಬಕರ್ 21ನೇ ಸ್ಥಾನ ಪಡೆದಿದ್ದಾರೆ.
ಫೈನಲ್ಗೆ ತಲುಪಲು ಅತ್ಲೀಟ್ ಗಳು 17.10 ಮೀ.ಎತ್ತರಕ್ಕೆ ಜಿಗಿಯಬೇಕು ಅಥವಾ ಅಗ್ರ-12ರಲ್ಲಿ ಸ್ಥಾನ ಪಡೆಯಬೇಕು.