3ನೇ ಟ್ವೆಂಟಿ-20: ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್; ವಿಂಡೀಸ್ ವಿರುದ್ಧ ಭಾರತ ಜಯಭೇರಿ
Photo: twitter \ @icc
ಗಯಾನ: ಸೂರ್ಯಕುಮಾರ್ ಯಾದವ್(83 ರನ್, 44 ಎಸೆತ, 10 ಬೌಂಡರಿ, 4 ಸಿಕ್ಸರ್) ಹಾಗೂ ತಿಲಕ್ ವರ್ಮಾ (ಔಟಾಗದೆ 49 ರನ್, 37 ಎಸೆತ) ಉತ್ತಮ ಕೊಡುಗೆಯ ನೆರವಿನಿಂದ ವೆಸ್ಟ್ಇಂಡೀಸ್ ವಿರುದ್ಧದ ಮೂರನೇ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.
ಗೆಲ್ಲಲು 160 ರನ್ ಬೆನ್ನಟ್ಟಿದ ಭಾರತ ತಂಡ 17.5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ನಾಯಕ ಹಾರ್ದಿಕ್ ಪಾಂಡ್ಯ ಔಟಾಗದೆ 20 ರನ್(16 ಎಸೆತ)ಗಳಿಸಿದರು. ತಿಲಕ್ ಹಾಗೂ ಪಾಂಡ್ಯ 4ನೇ ವಿಕೆಟ್ಗೆ 43 ರನ್ ಸೇರಿಸಿ ಇನ್ನೂ 13 ಎಸೆತ ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಯಶಸ್ವಿ ಜೈಸ್ವಾಲ್(1) ಹಾಗೂ ಗಿಲ್(6) ವಿಕೆಟನ್ನು ಬೇಗನೆ ಕಳೆದುಕೊಂಡಿತು. 3ನೇ ವಿಕೆಟ್ಗೆ 87 ರನ್ ಜೊತೆಯಾಟ ನಡೆಸಿದ ಯಾದವ್ ಹಾಗೂ ತಿಲಕ್ ವರ್ಮಾ ತಂಡವನ್ನು ಆಧರಿಸಿದರು. ಯಾದವ್ 23 ಎಸೆತಗಳಲ್ಲಿ 14ನೇ ಅರ್ಧಶತಕ ಸಿಡಿಸಿದರು.
ವಿಂಡೀಸ್ ಪರ ಅಲ್ಝಾರಿ ಜೋಸೆಫ್(2-25) ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ವಿಂಡೀಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು.