ಪಾಕಿಸ್ತಾನದ ಪೇಷಾವರದಲ್ಲಿ ಎಂಪಾಕ್ಸ್ 5ನೇ ಪ್ರಕರಣ ಪತ್ತೆ
ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್ : ಎಂಪಾಕ್ಸ್ ಸೋಂಕಿನ ಹೊಸ ತಳಿಯ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆಯೇ ಪಾಕಿಸ್ತಾನದಲ್ಲಿ ಎಂಪಾಕ್ಸ್ ಸೋಂಕಿನ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿರುವ ಪೇಷಾವರದಲ್ಲಿ 5ನೇ ಪ್ರಕರಣ ಪತ್ತೆಯಾಗಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.
ಗಲ್ಫ್ ವಲಯದಿಂದ ಹಿಂದಿರುಗಿದ್ದ 47 ವರ್ಷದ ವ್ಯಕ್ತಿಯಲ್ಲಿ ಆಗಸ್ಟ್ 29ರಂದು ಸೋಂಕಿನ ಲಕ್ಷಣ ದೃಢಪಟ್ಟ ಬಳಿಕ ಆತನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಮಧ್ಯಪ್ರಾಚ್ಯದಿಂದ ಆಗಮಿಸುವ ಪ್ರವಾಸಿಗರಲ್ಲಿ ವೈರಸ್ ಹರಡುತ್ತಿರುವ ಆತಂಕಕ್ಕೂ ಈ ಪ್ರಕರಣ ಕಾರಣವಾಗಿದೆ.
`ದೇಶದಲ್ಲಿ ಈ ವರ್ಷ ದಾಖಲಾಗಿರುವ 5ನೇ ಎಂಪಾಕ್ಸ್ ಪ್ರಕರಣ ಇದಾಗಿದ್ದು ಪೇಷಾವರದಲ್ಲಿ ವೈರಸ್ನ ಪುನರಾವರ್ತನೆಯು ಅದರ ಪ್ರಸರಣದ ಬಗ್ಗೆ ಗಂಭೀರ ಕಳವಳಕ್ಕೆ ಕಾರಣವಾಗಿದೆ ಮತ್ತು ತಕ್ಷಣದ ಕ್ರಮವನ್ನು ಕೋರುತ್ತದೆ. ಪೇಷಾವರವು ಎಂಪಾಕ್ಸ್ ಪ್ರಕರಣಗಳ ಕೇಂದ್ರಬಿಂದುವಾಗಿರುವ ಸೂಚನೆ ಕಾಣುತ್ತಿದೆ ' ಎಂದು ಆರೋಗ್ಯ ಇಲಾಖೆಯ ಪ್ರಧಾನ ನಿರ್ದೇಶಕಿ ಡಾ. ಶಬಾನಾ ಸಲೀಮ್ ಹೇಳಿದ್ದಾರೆ.
ವೈರಸ್ ನಿಯಂತ್ರಣಕ್ಕೆ ಕಠಿಣ ಕ್ರಮವನ್ನು ಅಧಿಕಾರಿಗಳು ಜಾರಿಗೊಳಿಸಿದ್ದು ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಸ್ಕ್ರೀನಿಂಗ್ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಜನರ ಆರೋಗ್ಯ ರಕ್ಷಣೆಗೆ ಸರಕಾರ ಬದ್ಧವಾಗಿದೆ. ಎಲ್ಲಾ ಅಗತ್ಯ ಕ್ರಮಗಳನ್ನೂ ತ್ವರಿತವಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದವರು ಹೇಳಿದ್ದಾರೆ.