5ನೇ ಟಿ20 : ಝಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ
4-1ರಿಂದ ಸರಣಿ ಗೆದ್ದ ಗಿಲ್ ಪಡೆ ► ಸಂಜು ಸ್ಯಾಮ್ಸನ್ ಅರ್ಧಶತಕ, ಮುಕೇಶ್ ಕುಮಾರ್ ಮಾರಕ ಬೌಲಿಂಗ್
PC : BCCI
ಹರಾರೆ : ಸಂಜು ಸ್ಯಾಮ್ಸನ್ ಅರ್ಧಶತಕ(58 ರನ್, 45 ಎಸೆತ)ಹಾಗೂ ಮುಕೇಶ್ ಕುಮಾರ್(4-22) ನೇತೃತ್ವದ ಬೌಲರ್ಗಳ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಝಿಂಬಾಬ್ವೆ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ 42 ರನ್ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ.
ಯುವ ಆಟಗಾರರನ್ನು ಒಳಗೊಂಡಿದ್ದ ಭಾರತ ತಂಡ ಸರಣಿಯ ಮೊದಲ ಪಂದ್ಯವನ್ನು ಸೋತ ನಂತರ ಸತತ 4 ಪಂದ್ಯಗಳಲ್ಲಿ ಜಯ ಸಾಧಿಸಿ ಆತಿಥೇಯ ಝಿಂಬಾಬ್ವೆಗೆ ಮರ್ಮಾಘಾತ ನೀಡಿದೆ.
ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಝಿಂಬಾಬ್ವೆ ತಂಡ ಭಾರತವನ್ನು ಬ್ಯಾಟಿಂಗ್ಗೆ ಇಳಿಸಿತು. ಶುಭಮನ್ ಗಿಲ್ ನೇತೃತ್ವದ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.
ಗೆಲ್ಲಲು 168 ರನ್ ಗುರಿ ಬೆನ್ನಟ್ಟಿದ ಝಿಂಬಾಬ್ವೆ ತಂಡ 18.3 ಓವರ್ಗಳಲ್ಲಿ ಕೇವಲ 125 ರನ್ ಗಳಿಸಿ ಆಲೌಟಾಯಿತು.
ಆಡುವ 11ರ ಬಳಗಕ್ಕೆ ವಾಪಸಾದ ವೇಗದ ಬೌಲರ್ ಮುಕೇಶ್ ಕುಮಾರ್(4-22) ಟಿ20 ಕ್ರಿಕೆಟ್ನಲ್ಲಿ ಜೀವನಶ್ರೇಷ್ಠ ಬೌಲಿಂಗ್ ಮಾಡಿದರು. ಆಲ್ರೌಂಡರ್ ಶಿವಂ ದುಬೆ(2-25), ವಾಶಿಂಗ್ಟನ್ ಸುಂದರ್(1-7), ಅಭಿಷೇಕ್ ಶರ್ಮಾ(1-20)ಹಾಗೂ ತುಷಾರ್ ದೇಶಪಾಂಡೆ(1-25)ಮುಕೇಶ್ಗೆ ಸಾಥ್ ನೀಡಿದರು. ಝಿಂಬಾಬ್ವೆಯನ್ನು 125 ರನ್ಗೆ ನಿಯಂತ್ರಿಸಲು ನೆರವಾದರು.
ಝಿಂಬಾಬ್ವೆ ಬ್ಯಾಟಿಂಗ್ ಸರದಿಯಲ್ಲಿ ಡಿಯೊನ್ ಮೈಯರ್ಸ್(34 ರನ್, 32 ಎಸೆತ, 4 ಬೌಂಡರಿ,1 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಆರಂಭಿಕ ಆಟಗಾರ ಮರುಮನಿ(27 ರನ್, 24 ಎಸೆತ) ಹಾಗೂ ಫಕಾಝ್ ಅಕ್ರಂ(27 ರನ್, 13 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
*ಭಾರತ 167/6: ವಿಕೆಟ್ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್(58 ರನ್, 45 ಎಸೆತ, 1 ಬೌಂಡರಿ, 4 ಸಿಕ್ಸರ್) ಅವರು ರಿಯಾನ್ ಪರಾಗ್(22 ರನ್, 24 ಎಸೆತ, 1 ಸಿಕ್ಸರ್) ಅವರೊಂದಿಗೆ 3ನೇ ವಿಕೆಟ್ಗೆ 65 ರನ್ ಜೊತೆಯಾಟ ನಡೆಸಿ ಭಾರತವು ಸ್ಪರ್ಧಾತ್ಮಕ 6 ವಿಕೆಟ್ಗೆ 167 ರನ್ ಗಳಿಸಲು ನೆರವಾದರು.
ಭಾರತವು ಮೊದಲ ಐದು ಪವರ್ ಪ್ಲೇ ಓವರ್ಗಳಲ್ಲಿ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್(12 ರನ್), ಅಭಿಷೇಕ್ ಶರ್ಮಾ(14 ರನ್) ಹಾಗೂ ನಾಯಕ ಶುಭಮನ್ ಗಿಲ್(13 ರನ್)ವಿಕೆಟ್ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತ್ತು. ಆಗ ಭಾರತದ ಸ್ಕೋರ್ 3ಕ್ಕೆ 40.
ಸ್ಯಾಮ್ಸನ್ ಹಾಗೂ ಪರಾಗ್ ಅರ್ಧಶತಕದ ಜೊತೆಯಾಟದ ಮೂಲಕ ಇನಿಂಗ್ಸ್ ಆಧರಿಸಿದರು. ಉತ್ತಮ ಮೊತ್ತಕ್ಕೆ ಬುನಾದಿ ಹಾಕಿಕೊಟ್ಟರು. ಶಿವಂ ದುಬೆ(26 ರನ್, 12 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ರಿಂಕು ಸಿಂಗ್(ಔಟಾಗದೆ 11, 9 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಝಿಂಬಾಬ್ವೆ ಪರ ಬ್ಲೆಸ್ಸಿಂಗ್ ಮುಝರ್ಬಾನಿ(2-19)ಯಶಸ್ವಿ ಪ್ರದರ್ಶನ ನೀಡಿದರು.
ಆಲ್ರೌಂಡ್ ಪ್ರದರ್ಶನ ನೀಡಿದ ಶಿವಂ ದುಬೆ (26 ರನ್, 2-25) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಒಟ್ಟು 28 ರನ್ ಹಾಗೂ 8 ವಿಕೆಟ್ಗಳನ್ನು ಪಡೆದಿರುವ ವಾಶಿಂಗ್ಟನ್ ಸುಂದರ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ: 20 ಓವರ್ಗಳಲ್ಲಿ 167/6
(ಸಂಜು ಸ್ಯಾಮ್ಸನ್ 58, ಶಿವಂ ದುಬೆ 26, ರಿಯಾನ್ ಪರಾಗ್ 22, ಬ್ಲೆಸ್ಸಿಂಗ್ ಮುಝರ್ಬಾನಿ 2-19)
ಝಿಂಬಾಬ್ವೆ: 18.3 ಓವರ್ಗಳಲ್ಲಿ 125 ರನ್ಗೆ ಆಲೌಟ್
(ಡಿಯೊನ್ ಮೈಯರ್ಸ್ 34, ಮರುಮನಿ 27, ಫರಾಝ್ ಅಕ್ರಂ 27, ಮುಕೇಶ್ ಕುಮಾರ್ 4-22, ಶಿವಂ ದುಬೆ 2-25, ಸುಂದರ್ 1-7, ಅಭಿಷೇಕ್ ಶರ್ಮಾ 1-20, ತುಷಾರ್ ದೇಶಪಾಂಡೆ 1-25)
ಪಂದ್ಯಶ್ರೇಷ್ಠ: ಶಿವಂ ದುಬೆ
ಸರಣಿಶ್ರೇಷ್ಠ : ವಾಶಿಂಗ್ಟನ್ ಸುಂದರ್