ಪ್ಯಾರಿಸ್ ಒಲಿಂಪಿಕ್ಸ್ ಗೆ ಮುನ್ನ 90 ಮೀ. ಗಡಿ ದಾಟುವೆ: ನೀರಜ್ ಚೋಪ್ರಾ
ನೀರಜ್ ಚೋಪ್ರಾ | PC : PTI
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ಗೆ ಮುನ್ನ 90 ಮೀಟರ್ ಗಡಿಯನ್ನು ದಾಟಿ ಈಟಿ ಎಸೆಯುವಲ್ಲಿ ಯಶಸ್ವಿಯಾಗುತ್ತೇನೆ ಎಂದು ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಗುರುವಾರ ಹೇಳಿದ್ದಾರೆ. ಅದು ಶೀಘ್ರವೇ ಸಂಭವಿಸಲು ಸಾಧ್ಯವಾಗುವಂತೆ ನನ್ನ ಅಭ್ಯಾಸ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26ರಿಂದ ಆಗಸ್ಟ್ 11ರವರೆಗೆ ಪ್ಯಾರಿಸ್ನಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಚೋಪ್ರಾರ ಶ್ರೇಷ್ಠ ಎಸೆತ ದಾಖಲಾಗಿರುವುದು 2022ರಲ್ಲಿ ನಡೆದ ಸ್ಟಾಕ್ಹೋಮ್ ಡೈಮಂಡ್ ಲೀಗ್ನಲ್ಲಿ. ಅಲ್ಲಿ ಅವರು ಈಟಿಯನ್ನು 89.94 ಮೀಟರ್ ದೂರ ಎಸೆದಿದ್ದಾರೆ. ತರಬೇತಿಯ ವೇಳೆ ಅವರು 90 ಮೀಟರ್ ಗಡಿಯನ್ನು ದಾಟುವಲ್ಲಿ ಅವರು ಯಶಸ್ವಿಯಾದರೂ, ಸ್ಪರ್ಧೆಯಲ್ಲಿ ಆ ಸಾಧನೆಯನ್ನು ಪುನರಾವರ್ತಿಸಲು ಅವರಿಗೆ ಸಾಧ್ಯವಾಗಿಲ್ಲ.
26 ವರ್ಷದ ಚೋಪ್ರಾ ನಾಲ್ಕು ವರ್ಷಗಳ ಹಿಂದೆ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಪ್ಯಾರಿಸ್ನಲ್ಲೂ ಅದೇ ಸಾಧನೆಯನ್ನು ಪುನರಾವರ್ತಿಸಲು ಎದುರು ನೋಡುತ್ತಿದ್ದಾರೆ. “ಪ್ಯಾರಿಸ್ ಒಲಿಂಪಿಕ್ಸ್ಗೆ ಮುನ್ನ 90 ಮೀಟರ್ ಗಡಿಯನ್ನು ದಾಟಲು ನಾನು ಪ್ರಯತ್ನಿಸುತ್ತೇನೆ. ಅದು ಒಲಿಂಪಿಕ್ಸ್ ಗೆ ಮುನ್ನವೇ ಸಂಭವಿಸುತ್ತದೆ ಎನ್ನುವ ಭರವಸೆಯಿದೆ. ಎಲ್ಲವೂ ಸಲೀಸಾಗಿ ಸಾಗುತ್ತಿದೆ. ಹಾಗಾಗಿ, ಅದನ್ನು ನೋಡಲು ಜನರು ಒಲಿಂಪಿಕ್ಸ್ ವರೆಗೆ ಕಾಯಬೇಕಾಗಬಹುದು, ಅದಕ್ಕಿಂತ ಮೊದಲೂ ಅದು ಸಂಭವಿಸಬಹುದು. ಸಿದ್ಧತೆಗಳು ಚೆನ್ನಾಗಿ ನಡೆಯುತ್ತಿದೆ’’ ಎಂದು ಚೋಪ್ರಾ ಹೇಳಿದರು.
ಅವರ ಆತ್ಮವಿಶ್ವಾಸಕ್ಕೆ ಕಾರಣವೂ ಇದೆ. ಅವರು ಉತ್ತಮ ಸ್ಪರ್ಧಾರಹಿತ ಸಮಯವನ್ನು ಕಳೆದಿದ್ದಾರೆ. ಈ ಅವಧಿಯಲ್ಲಿ ಅವರು ದೈಹಿಕ ಕ್ಷಮತೆ ಮತ್ತು ಬಲಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.
“ಸ್ಪರ್ಧಾ ಋತುವಿನ ಆರಂಭದಲ್ಲಿ, ನಾನು ಹೆಚ್ಚಿನ ಗಮನವನ್ನು ದೈಹಿಕ ಕ್ಷಮತೆ ಮತ್ತು ದೈಹಿಕ ಬಲಕ್ಕೆ ನೀಡಿದ್ದೇನೆ. ಈ ಅವಧಿಯಲ್ಲಿ ಕಡಿಮೆ ಜಾವೆಲಿನ್ ಎಸೆತದಲ್ಲಿ ತೊಡಗಿಸಿದ್ದೇನೆ. ಅದರಿಂದಾಗಿ, ನನ್ನ ತಂತ್ರಗಾರಿಕೆಯಲ್ಲಿ ಭಾರೀ ಸುಧಾರಣೆಯಾಗಿದೆ ಎಂದು ನನಗನಿಸುತ್ತದೆ. ಅದೂ ಅಲ್ಲದೆ, ದಕ್ಷಿಣ ಆಫ್ರಿಕ ಮತ್ತು ಟರ್ಕಿಯಲ್ಲಿ ನಡೆದ ಬಲ ಮತ್ತು ಸ್ಥಿರತೆ ತರಬೇತಿಯೂ ಉತ್ತಮ ಫಲಿತಾಂಶ ನೀಡಿದೆ’’ ಎಂದು ಟರ್ಕಿಯಿಂದ ಆನ್ಲೈನ್ ಸಂವಾದದಲ್ಲಿ ಮಾತನಾಡಿದ ಚೋಪ್ರಾ ಹೇಳಿದರು.
“ಟೋಕಿಯೊ ಒಲಿಂಪಿಕ್ಸ್ ಬಳಿಕ, ಆತ್ಮವಿಶ್ವಾಸವು ಖಂಡಿತವಾಗಿಯೂ ಹೆಚ್ಚಾಗಿದೆ. ಅದೂ ಅಲ್ಲದೆ, ನಾನು ಕೆಲವೂ ಪಂದ್ಯಾವಳಿಗಳಲ್ಲೂ ಸ್ಪರ್ಧಿಸಿದ್ದೇನೆ. ಎರಡು ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಭಾಗವಹಿಸಿ ಒಂದು ಬೆಳ್ಳಿ ಮತ್ತು ಒಂದು ಚಿನ್ನವನ್ನು ಗೆದ್ದಿದ್ದೇನೆ. ಬಳಿಕ, ಡೈಮಂಡ್ ಲೀಗ್ ಟ್ರೋಫಿ ಜಯಿಸಿದ್ದೇನೆ. ಅಲ್ಲಿ ಕೆಲವು ಉತ್ತಮ ಎಸೆತಗಳನ್ನು ದಾಖಲಿಸಿದ್ದೇನೆ. ಬಳಿಕ, ಚೀನಾದ ಹಾಂಗ್ಝೂನಲ್ಲಿ ಏಶ್ಯನ್ ಗೇಮ್ಸ್ ಚಿನ್ನವನ್ನು ಉಳಿಸಿಕೊಂಡಿದ್ದೇನೆ’’ ಎಂದರು.